ಗುಲಾಮರಾಗಿಯೇ ಬದುಕಿದ ‘ಅಡಿಯರು’

ಅಡಿಯರು ಗಿರಿಜನರು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಇದ್ದಾರೆ. ಉಡುಪಿ ಮತ್ತು ಕೊಡಗಿನ ಭಾಗಮಂಡಲ ತಾಲೂಕಿನಲ್ಲೂ ಇದ್ದಾರೆ. ಅಡಿಯರ ಕುಲದ ಹೆಸರೇ ವಿಚಿತ್ರವಾಗಿದೆ. ‘ಅಡಿ’ ಎನ್ನುವ ಅಳತೆ, ‘ಆರು’ ಅಂದರೆ ಅಂಕಿ, ಅಂದರೆ ಸವರ್ಣೀಯರಿಂದ ‘ಆರು ಅಡಿ’ ಅಂತರವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕಾದವರು ಎಂದರ್ಥ!
‘‘ನಮ್ಮವರು ತೆಂಕಣಮಲೆಯಲ್ಲಿ ಆನೆಯಂತೆ, ಬಡಗದಿಕ್ಕಿನ ಬೆಟ್ಟದಲ್ಲಿ ಹುಲಿಯಂತೆ ಕಾದಾಡಿದರು.
ಆನೆಯಂತೆ ದಾಪುಗಾಲಿಟ್ಟು ಹುಲಿಯಂತೆ ಗರ್ಜಿಸಿ, ಗೂಳಿಯಂತೆ ಗುದ್ದಾಡಿದರು.
ನೀರಿನಲ್ಲಿ ಗರಿಬಿಚ್ಚಿದ ಮೀನು ಚಲಿಸುವಂತೆಯೂ, ದಡದಲ್ಲಿ ಹೆಡೆಬಿಚ್ಚಿದ ಸರ್ಪದಂತೆಯೂ ಪೂತ್ಕರಿಸಿ ಕಾದಾಡಿದರು. ಅಂಥವರನ್ನು ಜಮೀನ್ದಾರರು ಬಲೆಗಳನ್ನು ಹಾಕಿ ಹಿಡಿದು ಸುಟ್ಟುಹಾಕಿದರು.’’
ಅಡಿಯ ಸಮುದಾಯದ ಕುಲಕಥನದ ಸಾಲುಗಳಿವು. ಇಷ್ಟು ವೀರರಾಗಿದ್ದವರನ್ನು ಜಮೀನ್ದಾರರು ಹಿಡಿದು ಸುಟ್ಟುಹಾಕಿದ ಕತೆಯಲ್ಲೇ ಅವರ ದಾರುಣ ಬದುಕು ಮತ್ತು ಅಸಹಾಯಕತೆಯ ಅನಾವರಣವಿದೆ. ನನ್ನ ಕಿರಿಯ ಗೆಳೆಯ ಪಿ. ಆರಡಿ ಮಲ್ಲಯ್ಯ ಕಟ್ಟೇರ ಅವರು ಅಡಿಯರ ಕುರಿತು ಸಂಶೋಧನೆ ಮಾಡಿ ಬರೆದಿದ್ದಾರೆ (ಈ ಸಂಶೋಧನೆಗೆ ನಾನೇ ಅಧಿಕೃತ ಮಾರ್ಗದರ್ಶಕ). ಅಡಿಯರನ್ನು ಎರವರೊಂದಿಗೇ ಎಲ್ಲ ಸಂಶೋಧಕರು ನೋಡುವುದರಿಂದ ಅಡಿಯರ ಕುರಿತು ಹೆಚ್ಚು ಕುಲಶಾಸ್ತ್ರೀಯ ಅಧ್ಯಯನ ಆಗಿಲ್ಲ, ತಮ್ಮದೇ ಆದ ಅಸ್ಮಿತೆ ಮತ್ತು ಅಡಿಯರ ಕುರಿತು ಮಾಹಿತಿಯೇ ಇಲ್ಲದ ಈ ಸಮುದಾಯದ ಬಗ್ಗೆ ಬಹಳ ಶ್ರಮವಹಿಸಿ ಅವರ ಬದುಕನ್ನು ಆರಡಿ ಮಲ್ಲಯ್ಯ ಕಟ್ಟೇರ ಕಟ್ಟಿಕೊಟ್ಟಿದ್ದಾರೆ.
ಅಡಿಯಾ, ಆದಿಯಾ, ಅಡಿಯನ್, ಪಂಜಿಯರವ ಎಂದೂ ಕರೆಯಲಾಗುವ ಈ ಸಮುದಾಯ 2011ರ ಸೆನ್ಸಸ್ ಪ್ರಕಾರ ಕೇವಲ 864 ಜನಸಂಖ್ಯೆ ಇದೆ. ಅಡಿಯ ಎಂದರೆ ಸೇವಕ, ಗುಲಾಮ, ದಾಸ, ಸಮಾಜದಲ್ಲಿನ ಕೆಳಸ್ತರದವನು ಎಂಬ ಅರ್ಥವಿದೆಯೆಂದು ಎಡ್ಗರ್ ಥರ್ಸ್ಟನ್, ಕೆ.ಎಸ್. ಸಿಂಗ್ ತರದವರು ದಾಖಲಿಸಿದ್ದಾರೆ. ಅಡಿಯರನ್ನೂ ಕೂಡ ಕೊಡಗಿನಲ್ಲಿ ಗುಲಾಮರಂತೆ ಮಾರಾಟಮಾಡುತ್ತಿದ್ದರು ಎಂದು ಡಾ. ವಿಜಯ್ ಪೂಣಚ್ಚ ತಂಬಂಡ ಅವರು ತಮ್ಮ ಸಂಶೋಧನಾ ಕೃತಿ ‘ಅಮರಸುಳ್ಯ ಸಂಗ್ರಾಮ 1837’ ದಾಖಲಿಸಿದ್ದಾರೆ.
ಅಡಿಯರು ಗಿರಿಜನರು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಇದ್ದಾರೆ. ಉಡುಪಿ ಮತ್ತು ಕೊಡಗಿನ ಭಾಗಮಂಡಲ ತಾಲೂಕಿನಲ್ಲೂ ಇದ್ದಾರೆ. ಅಡಿಯರ ಕುಲದ ಹೆಸರೇ ವಿಚಿತ್ರವಾಗಿದೆ. ‘ಅಡಿ’ ಎನ್ನುವ ಅಳತೆ, ‘ಆರು’ ಅಂದರೆ ಅಂಕಿ, ಅಂದರೆ ಸವರ್ಣೀಯರಿಂದ ‘ಆರು ಅಡಿ’ ಅಂತರವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕಾದವರು ಎಂದರ್ಥ! ಅಡಿಯರ್ ಎಂಬುದು ಬರುಬರುತ್ತ ಅಡಿಯರು ಎಂದಾಗಿದೆ. ಹೆಸರಿನಲ್ಲೇ ಮೈಲಿಗೆಯ ಅಂತರವನ್ನು ಹೊತ್ತು ಜಮೀನ್ದಾರರ ಕ್ರೌರ್ಯವನ್ನು ಸಹಿಸಿಕೊಳ್ಳುತ್ತಲೇ ಗುಲಾಮರಾಗಿ ಬದುಕಿದವರು ಅಡಿಯರು.ಕೆಲವೊಂದು ಪ್ರದೇಶಗಳಲ್ಲಿ ಅಡಿಯರನ್ನು ಹೆರವರು ಅಂತಲೂ ಕರೆಯುತ್ತಾರೆ. ಹೆರವರು ಎಂಬ ಹೆಸರಿನ ಅರ್ಥವೇ ಜಮೀನಿನೊಂದಿಗೆ ಮಾರಾಟವಾಗುವವರು ಎಂಬುದನ್ನು ಲೂಯಿಸ್ ಎಂಬ ಮಾನವಶಾಸ್ತ್ರಜ್ಞ ದಾಖಲಿಸಿದ್ದಾರೆ. ಕೇರಳದಲ್ಲಿ ನಂಬೂದರಿ ಬ್ರಾಹ್ಮಣರನ್ನು ಕೆಳಜಾತಿಗಳವರು ಎಷ್ಟು ದೂರದಿಂದ ಮಲಿನಗೊಳಿಸಬಹುದು ಎಂಬುದು ಇಲ್ಲಿ ಗಮನಾರ್ಹ. ಇದನ್ನು ಅರಿತರೆ ಅಡಿಯರನ್ನು ಎಷ್ಟು ದೂರದಲ್ಲಿ ಇಟ್ಟಿದ್ದರು ಎಂಬುದು ಅರ್ಥವಾಗುತ್ತದೆ.
ಲಭ್ಯವಿರುವ ಚಾರಿತ್ರಿಕ ಆಧಾರಗಳಿಂದ ತಿಳಿದು ಬರುವುದು ಏನೆಂದರೆ ಅಡಿಯರು ಮೂಲತಃ ಕೇರಳದ ಭೂಮಾಲಕರ ಗುಲಾಮರಾಗಿದ್ದವರು. ಅವರು ತಂಗಿದ್ದ ನೆಲೆಗಳಿಗೆ ಭೂಮಾಲಕರಿಗೆ ಕಾಣಿಕೆ ಸಲ್ಲಿಸಬೇಕಿತ್ತು. ಇದನ್ನು ‘ಅಡಿಯಪಣಂ’ ಎಂದು ಕರೆಯಲಾಗುತಿತ್ತು. ಒಡೆಯರ ಗದ್ದೆಗಳಲ್ಲಿ ಅವರು ಗೇಯಬೇಕಿತ್ತು. ವರ್ಷಕೊಮ್ಮೆ ಒಡೆಯರ ಹೆಸರು ಹೇಳುತ್ತಾ ‘ಅಯ್ಯಾಂಡಡಿಯ ನಾಂಗಳೋ’ ಎಂದು ತಮ್ಮ ದಾಸತ್ವವನ್ನು ಒಪ್ಪಿಕೊಂಡಿದ್ದರ ಸೂಚನೆಯಾಗಿ, ಎದೆಯ ಮೇಲೆ ಎರಡೂ ಕರಗಳನ್ನು ಜೋಡಿಸಿ, ತಲೆಯನ್ನು ಸೊಂಟದವರೆಗೂ ಬಾಗಿಸಿ ಭಯಭಕ್ತಿಗಳಿಂದ ಒಡೆಯರಿಗೆ ವಂದಿಸಬೇಕಿತ್ತು! ಒಡೆಯರು ಭೂಮಿಯನ್ನು ಮಾರಿದರೆ ಅಥವಾ ಅಡವಿಟ್ಟರೆ ಆ ಭೂಮಿಯಲ್ಲಿ ಗೇಯತ್ತಿದ್ದ ಅಡಿಯರೂ ಆ ಭೂಮಿಯೊಂದಿಗೆ ಮಾರಾಟವಾಗುತ್ತಿದ್ದರು! ವೈನಾಡಿನಲ್ಲಿ ಕಾಫಿ ಮತ್ತು ಟೀ ಪ್ಲಾಂಟೇಶನ್ ಗಳು ಹೆಚ್ಚಾದಂತೆ ಅಡಿಯರು ಆಯಾ ಪ್ಲಾಂಟೇಶನ್‌ಗಳ ಕಾರ್ಮಿಕರಾಗಿರುತ್ತಿದ್ದರು.
ಮಲಬಾರ್ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದ್ದ ಗುಲಾಮಗಿರಿಯನ್ನು ಬ್ರಿಟಿಷ್ ಸರಕಾರ 1792ರಲ್ಲೇ ರದ್ದುಗೊಳಿಸಿತ್ತು. ಆದರೂ 1857ರಲ್ಲಿ ವೈನಾಡು ತಾಲೂಕು ಒಂದರಲ್ಲೇ 16,561 ಮಂದಿ ಗುಲಾಮರಿದ್ದರೆಂದು ವಿಲಿಯಂ ಲೋಗನ್ ಎನ್ನುವ ಇತಿಹಾಸಕಾರ ದಾಖಲಿಸಿದ್ದಾರೆ. ವೈನಾಡಿನ ‘ವಳಿಯೂರುಕಾವು’ ಎಂಬ ಸ್ಥಳದಲ್ಲಿ ಜರಗುತ್ತಿದ್ದ ವಾರ್ಷಿಕ ಜಾತ್ರೆಯಲ್ಲಿ ಗುಲಾಮರನ್ನು ಮಾರಲಾಗುತ್ತಿತ್ತು ಎನ್ನಲು ಅನೇಕ ಉಲ್ಲೇಖಗಳಿವೆ. ಇಲ್ಲಿ ಗುಲಾಮರಾಗಿದ್ದವರು ಬಹುತೇಕ ಅಡಿಯರು ಮತ್ತು ಪಣಿಯರೆ! ಈ ಕುರಿತು 19-20ನೇ ಶತಮಾನದ ಆರಂಭಿಕ ವರ್ಷಗಳಲ್ಲಿ ಬಂದಿರುವ ಗೆಜೆಟಿಯರ್‌ಗಳು ಮತ್ತು ಎಡ್ಗರ್ ಥರ್ಸ್ಟನ್ ಅವರ ‘ಕ್ಯಾಸ್ಟ್ ಆಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ ಸಂಪುಟಗಳಲ್ಲಿ ದಾಖಲಾಗಿದೆ. ಅಡಿಯರನ್ನು ಜಮೀನ್ದಾರರು ಮಾರಾಟ ಮಾಡುತ್ತಿದ್ದರು ಮತ್ತು ಅಡವಿಡುತಿದ್ದರು, ಹೀಗೆ ಮಾರಾಟ ಮಾಡುವಾಗ ಅಡಿಯರ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲ, ಕೆಲವೊಮ್ಮೆ ಇಡೀ ಕುಟುಂಬವನ್ನೇ ಮಾರಿಬಿಡುತ್ತಿದ್ದರು ಅಥವಾ ಅಡವಿರಿಸುತ್ತಿದ್ದರು.
ಅಡಿಯರು ಕರ್ನಾಟಕದಲ್ಲಿ ಕೂಡುಕಟ್ಟಿನ ಮೂಲಲಕ್ಷಣಗಳನ್ನು ಉಳ್ಳವರಾಗಿ, ಬುಡಕಟ್ಟಿನವರಾಗಿ, ಅಲೆಮಾರಿಗಳಾಗಿ ಚದುರಿಹೋಗಿ ಛಿದ್ರಛಿದ್ರರಾಗಿ ಬದುಕಿದ್ದಾರೆ. ಇವರು ಅಲೆಮಾರಿಗಳಾದ ನಂತರ ಸೈನ್ಯಕ್ಕೆ ಸೇರಿಸಿಕೊಂಡು ಗೂಢಚಾರ ಕೆಲಸಗಳನ್ನೂ ಇವರಿಂದ ಮಾಡಿಸಿಕೊಂಡಿದ್ದಾರೆ. ಅಡಿಯರು ಜೀವಿಸುವ ಪರಿಸರದಲ್ಲೇ ಪಣಿಯ, ಸೋಲಿಗ, ಬೆಟ್ಟಕುರುಬ, ಜೇನುಕುರುಬ, ಇರುಳಿಗ, ಕಾಡರ್ ಮುಂತಾದವರೂ ಬದುಕಿದ್ದಾರೆ. ಇವರೆಲ್ಲರ ಸಂಪರ್ಕ ಅಡಿಯರನ್ನು ಮೂಲಕ್ಕಿಂತ ಭಿನ್ನವಾದ ಸಾಮಾಜಿಕ ನೆಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಕೊಡಗಿನ ಸಂಸ್ಕೃತಿ ಮತ್ತು ಕೃಷಿಭೂಮಿ ತಮ್ಮದೆಂದು ಹೇಳಿಕೊಳ್ಳುವ ಅಡಿಯರು ಕೊಡಗಿನ ಪೂರ್ವದಲ್ಲಿರುವ ದಟ್ಟ ಕಾಡಿನೊಳಕ್ಕೆ ಬಂದ ಮೊದಲಿಗರಿರಬೇಕು. ಅಡಿಯರ ಆಚರಣೆಗಳು ಮತ್ತು ಕುಲಕಥನಗಳಲ್ಲಿ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ. ಇಲ್ಲಿನ ಕಾಡನ್ನು ತಮ್ಮ ಕುಮ್ರಿ ಬೇಸಾಯಕ್ಕೆ ಬೇಕಷ್ಟನ್ನು ಮಾತ್ರ ಕಡಿದು ಬೇಸಾಯ ಮಾಡಿದವರೂ ಅಡಿಯರೇ. ನಂತರ ಈ ಪ್ರದೇಶಕ್ಕೆ ಬಂದ ಬಲಿಷ್ಠರು ದೊಡ್ಡ ಸಮೂಹವಾಗಿದ್ದು, ಅವರಿಗೆ ಪ್ರಭುತ್ವದ ಸಹಾಯ ಕೂಡ ದೊರಕಿರಬಹುದು, ಇಂತವರು ಅಡಿಯರನ್ನು ದುರ್ಬಲಗೊಳಿಸಿ ಬಗ್ಗುಬಡಿದು ಇವರಿಂದ ಭೂಮಿಯನ್ನು ಕಸಿದುಕೊಂಡು ಅಡಿಯರನ್ನು ಅಡಿಯಾಳುಗಳಾಗಿ ಮಾಡಿಕೊಂಡಿರಬಹುದೆಂದು ಬಹುತೇಕ ಮಾನವಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.
ಹರೀಶ್ ಎಂಬ ಸಂಶೋಧಕರು ಹೇಳುವಂತೆ ಅಡಿಯರು ಕೊಡಗನ್ನು ಪ್ರವೇಶಿಸಿದಾಗ ಸಹಜವಾಗಿಯೇ ಬಲಿಷ್ಠರಾದ ಕೊಡವರ ಅಡಿಯಾಳುಗಳಾದರು. ಆ ಮೂಲಕ ಕೊಡವರಿಗೂ ಗುಲಾಮರಾದರು, ಅಡಿಯರ ಜಮೀನುಗಳನ್ನು ಕೊಡವರು ವಶಪಡಿಸಿಕೊಂಡು ಅವರನ್ನು ನಿರ್ಗತಿಕರನ್ನಾಗಿಸಿದರು ಎಂದೂ ದಾಖಲಿಸುತ್ತಾರೆ.
ಒಟ್ಟಾರೆಯಾಗಿ ನಾವು ಬದುಕಿರುವ ‘ಸಭ್ಯ’ ಸಮಾಜದಲ್ಲಿ ಅಡಿಯರಂತಹ ಗುಲಾಮರೂ ಬದುಕಿದ್ದಾರೆ, ದುರಂತವೆಂದರೆ ನಮ್ಮ ಸಭ್ಯ ಸಮಾಜಕ್ಕೆ ತಮ್ಮೊಂದಿಗೇ ಬದುಕುತ್ತಿರುವ ಅಡಿಯರು ಕಾಣದಿರುವಷ್ಟು ನಮ್ಮ ಕಣ್ಣುಗಳಿಗೆ ಕುರುಡು ಆವರಿಸಿರುವುದು...!!






