ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್

ಪ್ರತೀ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್.ಐ.ವಿ. ಎಂಬ ವೈರಸ್‌ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು,
ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್ ರೋಗ ಮನುಕುಲದ ಬಹುದೊಡ್ಡ ಶತ್ರು. 2024ರ ಅಂಕಿಅಂಶಗಳ ಪ್ರಕಾರ ಸುಮಾರು 40 ಮಿಲಿಯನ್ ಮಂದಿ (1981-2024ರ ವರೆಗೆ) ಸಾವನ್ನಪ್ಪಿದ್ದಾರೆ ಮತ್ತು 2024ರಲ್ಲಿ ಸುಮಾರು 40.8 ಮಿಲಿಯನ್ ಮಂದಿ ಎಚ್.ಐ.ವಿ. ರೋಗಾಣುವಿನಿಂದ ರೋಗಗ್ರಸ್ಥರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 39.8 ಮಿಲಿಯನ್ ವಯಸ್ಕರು ಮತ್ತು 1.1 ಮಿಲಿಯನ್ ಮಕ್ಕಳು ಸೇರಿದ್ದಾರೆ.ಹೀಗಾಗಿ ಏಡ್ಸ್ ವಿಶ್ವದ ಬಹುದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅತಿಶಯೋಕ್ತಿಯಲ್ಲ. ರೋಗದ ತೀವ್ರತೆಯನ್ನು ಕಡಿಮೆ ಮಾಡುವ ಚಿಕಿತ್ಸೆಯ ಹೊರತಾಗಿಯೂ, ಪ್ರತಿವರ್ಷ 2 ಮಿಲಿಯನ್ ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಬಹುದೊಡ್ಡ ದುರಂತವೇ ಸರಿ. ಈ ನಿಟ್ಟಿನಲ್ಲಿ ಏಡ್ಸ್ ರೋಗದ ಜಾಗೃತಿ ಮೂಡಿಸಿ, ಏಡ್ಸ್ ರೋಗದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಾಗಿಯೇ ಪ್ರತೀ ವರ್ಷ ಡಿಸೆಂಬರ್ ಒಂದರಂದು ಜಾಗೃತಿ ಜಾಥಾಗಳು, ಬೀದಿ ನಾಟಕಗಳು, ಸರಕಾರಿ ಪ್ರಾಯೋಜಿತ ಏಡ್ಸ್ ತಿಳುವಳಿಕಾ ಕಾರ್ಯಕ್ರಮಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳಿಂದ ಏಡ್ಸ್ ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಏನಿದು ಏಡ್ಸ್ ಮತ್ತು ಎಚ್.ಐ.ವಿ. ?
ಎಚ್.ಐ.ವಿ. ಎಂದರೆ ಹ್ಯೂಮನ್ ಇಮ್ಯೂನ್ ಡೆಫಿಷಿಯನ್ಸ್ ವೈರಸ್ ಎಂಬ ರೋಗಾಣು. ಇದು ಮನುಷ್ಯನ ದೇಹಕ್ಕೆ ಸೇರಿಕೊಂಡಾಗ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡಿ ಮಾನವನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಹತ್ತು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
ಏಡ್ಸ್ ಎಂದರೆ ಅಕ್ವಾಯರ್ಡ್ ಇಮ್ಯೂನ್ ಡೆಫಿಷಿಯನ್ಸಿ ಸಿಂಡ್ರೋಮ್. ಎಚ್.ಐ.ವಿ. ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ಮನುಷ್ಯನ ರೋಗ ನಿರೋಧಕ ಶಕ್ತಿ ಹಾಳಾಗಿ ಮನುಷ್ಯನ ದೇಹ ರೋಗಗಳ ಹಂದರವಾದಾಗ, ಮನುಷ್ಯನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದ ರೋಗಗಳ ಸಮೂಹಕ್ಕೆ ಏಡ್ಸ್ ಎನ್ನಲಾಗುತ್ತದೆ. ಏಡ್ಸ್ ರೋಗ ಇರುವವರೆಲ್ಲರೂ ಎಚ್.ಐ.ವಿ. ಸೋಂಕಿತರಾಗಿರುತ್ತಾರೆ. ಆದರೆ ಎಚ್.ಐ.ವಿ. ಸೋಂಕು ತಗಲಿದವರೆಲ್ಲರೂ ಏಡ್ಸ್ ರೋಗದಿಂದ ಬಳಲೇಬೇಕು ಎಂಬ ನಿಯಮವಿಲ್ಲ. ವ್ಯಕ್ತಿಯ ರೋಗನಿರೋಧನ ಶಕ್ತಿ ತೀರಾ ದುರ್ಬಲವಾದಾಗ ರೋಗಿ ಏಡ್ಸ್ ರೋಗಕ್ಕೆ ತುತ್ತಾಗಿ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲಗೊಂಡು ರೋಗಿ ಸಾವನ್ನಪ್ಪುತ್ತಾನೆ.
ಏಡ್ಸ್ ರೋಗದ ಲಕ್ಷಣಗಳು
ಪದೇ ಪದೇ ಕಾಡುವ ಜ್ವರ ಮತ್ತು ಪದೇ ಪದೇ ಕಾಡುವ ಭೇದಿ ಏಡ್ಸ್‌ನ ಪ್ರಾಥಮಿಕ ಲಕ್ಷಣವಾಗಿರುತ್ತವೆ. ಯಾವುದೇ ರೀತಿಯ ಚಿಕಿತ್ಸೆಗೆ ಇದು ಸ್ಪಂದಿಸುವುದಿಲ್ಲ. ವ್ಯಕ್ತಿ ಕಾರಣವಿಲ್ಲದೆ ದೇಹದ ತೂಕವನ್ನು ಕಳೆದುಕೊಳ್ಳುತ್ತಾನೆ. ಎಚ್.ಐ.ವಿ. ವೈರಾಣು ದೇಹದ ರಕ್ಷಣಾ ವ್ಯವಸ್ಥೆಯ ಸೈನಿಕರಾದ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಬಿದ್ದು, ವ್ಯಕ್ತಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಇತರ ವೈರಾಣುಗಳ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾನೆ. ಎಚ್.ಐ.ವಿ. ಸೋಂಕಿತ ವ್ಯಕ್ತಿ ಏಡ್ಸ್ ರೋಗಕ್ಕೆ ತುತ್ತಾಗಲು 5ರಿಂದ 10ವರ್ಷ ತಗಲಬಹುದು. ಕೆಲವೊಮ್ಮೆ 10ರಿಂದ 15ವರ್ಷ ತಗಲಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಸಕಾಲದಲ್ಲಿ ಗುರುತಿಸಿ ವೈರಸ್ ವಿರುದ್ಧ ಚಿಕಿತ್ಸೆ ಪಡೆದಲ್ಲಿ ರೋಗದ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಬಹುದು.
ಜ್ವರ, ಭೇದಿಯ ಜೊತೆಗೆ ವಿಪರೀತ ಸುಸ್ತು, ಅಪೌಷ್ಟಿಕತೆ, ಬಾಯಿಯಲ್ಲಿ ಹುಣ್ಣು, ಗಂಟಲು ಉರಿ, ಗಂಟಲು ನೋವು, ಕೆಮ್ಮು ಮತ್ತು ಕುತ್ತಿಗೆಯ ಸುತ್ತ ಗಡ್ಡೆಗಳ ಅನುಭವ ಉಂಟಾಗಬಹುದು. ಆಹಾರ ನುಂಗುವಾಗ ನೋವು, ತಲೆನೋವು ಮತ್ತು ಮರೆಗುಳಿತನ ಇರುತ್ತದೆ. ಅದೇ ರೀತಿ ಏಡ್ಸ್ ರೋಗಿ ಅರ್ಬುದ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡಾ ಹೆಚ್ಚಾಗಿರುತ್ತದೆ.
ಏಡ್ಸ್ ರೋಗದ ತೀವ್ರತೆಯನ್ನು ಸಿ.ಡಿ.-4 ಎಂಬ ಬಿಳಿರಕ್ತ ಕಣಗಳ ಸಂಖ್ಯೆಯ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ ಎಚ್.ಐ.ವಿ ಪೀಡಿತರಲ್ಲಿ ಈ ಸಂಖ್ಯೆ 500ಕ್ಕಿಂತ ಜಾಸ್ತಿ ಇರುತ್ತದೆ. ಏಡ್ಸ್ ರೋಗಿಗಳಲ್ಲಿ ಈ ಸಂಖ್ಯೆ 200ಕ್ಕಿಂತಲೂ ಕಡಿಮೆ ಇರುತ್ತದೆ. ಅದೇ ರೀತಿ ಚಿಕಿತ್ಸೆಯ ಪರಿಣಾಮ ಮತ್ತು ಯಶಸ್ಸನ್ನು ಸಿ.ಡಿ.-4 ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಚಿಕಿತ್ಸೆ ಪರಿಣಾಮಕಾರಿಯಾಗಿದ್ದಲ್ಲಿ ಸಿ.ಡಿ.-4 ಎಂಬ ಬಿಳಿ ರಕ್ತಕಣಗಳ ಸಂಖ್ಯೆ ವೃದ್ಧಿಸುತ್ತದೆ. ಸಿ.ಡಿ.-4 ರಕ್ತಕಣಗಳ ಸಂಖ್ಯೆ ವೃದ್ಧಿಸಿದಲ್ಲಿ ರೋಗಿಯ ರೋಗ ನಿರೋಧಕಶಕ್ತಿ ಕೂಡ ಹೆಚ್ಚಾಗುತ್ತದೆ.
ಹೇಗೆ ಹರಡುತ್ತದೆ ?
1. ಎಚ್.ಐ.ವಿ. ಸೋಂಕಿತ ರೋಗಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ
2. ಎಚ್.ಐ.ವಿ. ಸೋಂಕಿತ ವ್ಯಕ್ತಿಗಳಿಂದ ರಕ್ತ ಪಡೆಯುವುದರಿಂದ
3. ಮಾಧಕ ದ್ರವ್ಯ ವ್ಯಸನಿಗಳು ಬಳಸಿದ ಎಚ್.ಐ.ವಿ. ಸೋಂಕಿತ ಸೂಜಿ ಅಥವಾ ಸಿರಿಂಜ್‌ಗಳನ್ನು ಬಳಸುವುದರಿಂದ
4. ಎಚ್.ಐ.ವಿ. ಸೋಂಕಿತ ತಾಯಂದಿರಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಎದೆ ಹಾಲುಣಿಸುವ ಮುಖಾಂತರ
5. ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಾದ ಬಾಯಿ ಸೆಕ್ಸ್, ಗುದದ್ವಾರದ ಸೆಕ್ಸ್
6. ದೇಹದ ಮೇಲೆ ಹಾಕುವ ಹಚ್ಚೆಗಳು ಮತ್ತು ದೇಹದ ವಿವಿಧ ಭಾಗಗಳಲ್ಲಿ ಹಾಕಿಕೊಳ್ಳುವ ಆಲಂಕಾರಿಕ ಸಾಮಗ್ರಿಗಳು ಒಂದು ವೇಳೆ
ಎಚ್.ಐ.ವಿ. ಸೋಂಕಿತವಾಗಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇರುತ್ತದೆ.
ಹೇಗೆ ಹರಡುವುದಿಲ್ಲ
1. ಕೈ ಕುಲುಕುವುದು, ಆಲಿಂಗನ, ಸೀನುವುದು, ಕೆಮ್ಮುವುದು ಇತ್ಯಾದಿ
2. ಬೆವರು, ಎಂಜಲು, ಕಣ್ಣೀರು, ಸಿಂಬಳ, ಮಲ-ಮೂತ್ರ ಮುಂತಾದವು ಗಳನ್ನು ಸ್ಪರ್ಶಿಸುವುದರಿಂದ
3. ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ
4. ಸೊಳ್ಳೆಗಳಿಂದ ಹರಡುವುದಿಲ್ಲ.
ಎಚ್.ಐ.ವಿ. ವೈರಸ್ ಬಹಳ ಕಾಲ ಮನುಷ್ಯನ ದೇಹದ ಹೊರಗೆ ಜೀವಿಸಲಾರದು. ಹೊರಗಿನ ಉಷ್ಣತೆಯನ್ನು ಸಹಿಸಿಕೊಳ್ಳುವ ಶಕ್ತಿ ಅದಕ್ಕಿಲ್ಲ. ದೇಹದ ದ್ರವ ಆರಿದಾಗ ವೈರಾಣು ತನ್ನಿಂತಾನೇ ಸಾಯುತ್ತದೆ.
ಚಿಕಿತ್ಸೆ ಹೇಗೆ ?
ಏಡ್ಸ್ ರೋಗಕ್ಕೆ ಮದ್ದು ಇಲ್ಲ. ಚಿಕಿತ್ಸೆಯಿಂದ ರೋಗವನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಂಟಿ ರಿಟ್ರೊವೈರಲ್ ಥೆರಪಿ ಎಂಬ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯ ಮುಖಾಂತರ ಎಚ್.ಐ.ವಿ. ರೋಗಾಣುವಿನ ಆರ್ಭಟವನ್ನು ಕಡಿಮೆ ಮಾಡಬಹುದು. ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಇತರ ವ್ಯಕ್ತಿಗಳಂತೆ ಎಚ್.ಐ.ವಿ. ಸೋಂಕಿತ ವ್ಯಕ್ತಿಗಳು ದೈನಂದಿನ ಜೀವನ ನಡೆಸಬಹುದು.
ತಪ್ಪು ಕಲ್ಪನೆಗಳು
ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ
ಸ್ಥೆ ರ್ಯವನ್ನು ಕೆಡಿಸುತ್ತದೆ. ನೆನಪಿರಲಿ, ಎಚ್.ಐ.ವಿ. ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಸೋಂಕಿತರು ತಾನು ಎಚ್.ಐ.ವಿ. ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆೆ. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಚಿಂತೆಯಿಂದಲೇ ಇನ್ನೂ ಹತ್ತಿಪ್ಪತ್ತು ವರ್ಷ ಬಾಳಿ ಬದುಕಬೇಕಾದ ಜೀವ, ಒಂದೆರಡು ವರ್ಷಗಳಲ್ಲಿಯೇ ಕೊರಗಿ ಕೊರಗಿ ಬತ್ತಿ ಹೋಗುತ್ತದೆ. ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ, ಗಾಬರಿ ಮತ್ತು ಸಮಾಜದ ಪ್ರಶ್ನೆಗಳಿಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಎಚ್.ಐ.ವಿ. ಬಾದಿತರನ್ನು ಸಮಾಧಾನ ಮಾಡಿ ಸಾಂತ್ವನ ಹೇಳಿ ಅವರನ್ನು ಇತರರಂತೆ ಉಪಚರಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಪ್ರತೀ ವ್ಯಕ್ತಿಗೂ ಸಮಾಜದಲ್ಲಿ ಸ್ವತಂತ್ರವಾಗಿ ಜೀವಿಸುವ ಹಕ್ಕು ಇದೆ. ಅವರ ‘ಜೀವನ’ ಹಕ್ಕನ್ನು ಕಸಿಯುವ ಕೆಲಸ ಯಾರೂ ಮಾಡದೇ ಅಂತಹವರಿಗೆ ಮಾನಸಿಕ ಸ್ಥೆ ರ್ಯ, ಧೈರ್ಯ ಮತ್ತು ಸಾಂತ್ವನ ಹೇಳಬೇಕಾದ ಅನಿವಾರ್ಯತೆ ಮತ್ತು ತುರ್ತು ಅವಶ್ಯಕತೆ ಇದೆ.
ತಡೆಗಟ್ಟುವುದು ಹೇಗೆ ?
1. ಸುರಕ್ಷಿತವಾದ ಲೈಂಗಿಕ ಕ್ರಿಯೆಗಳು ಮತ್ತು ಕಾಂಡೂಮ್ ಬಳಸುವುದು.
2. ಅಸ್ವಾಭಾವಿಕ ಲೈಂಗಿಕ ಹವ್ಯಾಸಗಳಿಗೆ ಕಡಿವಾಣ ಹಾಕುವುದು.
3. ಮಾಧಕ ದ್ರವ್ಯ ಬಳಸುವವರು, ಹಚ್ಚೆ ಹಾಕಿಸಿಕೊಳ್ಳುವವರು ಒಮ್ಮೆ ಬಳಸಿದ ಸೂಜಿ ಪುನಃ ಬಳಸಬಾರದು..
ಕೊನೆಮಾತು
ಎಚ್.ಐ.ವಿ. ಸೋಂಕು ತಗಲಿದ ತಕ್ಷಣ ‘ಜೀವನ’ದ ಸರ್ವಸ್ವವನ್ನೂ ಕಳೆದುಕೊಂಡಂತೆ ವರ್ತಿಸಬಾರದು. ನಿರಂತರವಾದ ಔಷಧಿ ಮತ್ತು ಸಾಕಷ್ಟು ಮುಂಜಾಗರೂಕತೆ ವಹಿಸಿ, ದೇಹದ ಆರೋಗ್ಯ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ಷೌಷ್ಟಿಕವಾದ ಆಹಾರ ಸೇವಿಸಬೇಕು. ಮನೋಬಲವನ್ನು ಹೆಚ್ಚಿಸುವ, ದೇಹದ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ ಪ್ರಕ್ರಿಯೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇದರ ಜೊತೆಗೆ ಕಾಲಕಾಲಕ್ಕೆ ವೈದ್ಯರನ್ನು ಭೇಟಿಯಾಗಿ, ಆಪ್ತ ಸಮಾಲೋಜನೆ ನಡೆಸಿ ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು. ಅದೇ ರೀತಿ ಸಮಾಜದ ಇತರರೂ ಎಚ್.ಐ.ವಿ. ಸೋಂಕಿತರನ್ನು ಮಾನವೀಯ ಕಳಕಳಿಯಿಂದ ನೋಡಬೇಕು. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹಾಗಾದಲ್ಲಿ ಮಾತ್ರ ವಿಶ್ವ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು ಮತ್ತು ಅರ್ಥಪೂರ್ಣವಾಗಬಹುದು.







