ಇಂಗ್ಲಿಷ್ ಮಾಧ್ಯಮದ ಆಕರ್ಷಣೆ ಮತ್ತು ಸರಕಾರಿ ಶಾಲೆಗಳ ವಾಸ್ತವ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ 6ರಿಂದ 7 ವರ್ಷಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಿ ವರದಿ ಪ್ರಕಟಿಸಿದೆ. ಇದು ಜಿಲ್ಲೆಯೊಂದಕ್ಕೆ ಸೀಮಿತವಾದರೂ, ಇದೇ ಪರಿಸ್ಥಿತಿ ಇತರ ಜಿಲ್ಲೆಗಳಲ್ಲೂ ಇರಬಹುದು ಎಂದು ಸುಲಭವಾಗಿ ಊಹಿಸಬಹುದು. ಈ ವರದಿಯು ಪ್ರಜ್ಞಾವಂತ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ಅಧ್ಯಯನದ ಗಂಭೀರತೆಯನ್ನು ಗೌಣವಾಗಿಸುವ ಹಾಗೂ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಲೇಖನಗಳೂ ಪ್ರಕಟವಾಗಿವೆ.
ಈ ಭಿನ್ನ ಅಭಿಪ್ರಾಯಗಳ ಮಂಡನೆಯ ನಡುವೆ, ನಮ್ಮ ಶಾಲೆಗಳ ನೆಲಮಟ್ಟದಲ್ಲಿರುವ ಮೂರು ಕಟು ವಾಸ್ತವಗಳನ್ನು ನಾವಿಂದು ಮುಖಾಮುಖಿಯಾಗಬೇಕಿದೆ. ಅವುಗಳೆಂದರೆ: ದ್ವಿಭಾಷಾ ಕಲಿಕೆಯ ಪ್ರಾಯೋಗಿಕ ಸವಾಲುಗಳು, ಶಿಕ್ಷಕರ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಸನ್ನದ್ಧತೆ ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸದ ನೈಜ ಸ್ಥಿತಿ.
1. ದ್ವಿಭಾಷಾ ಕಲಿಕೆ: ಸಿದ್ಧಾಂತ ಮತ್ತು ಆಚರಣೆಯ ನಡುವಿನ ಕಂದಕ
ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಇಲಾಖೆಯು ‘ದ್ವಿಭಾಷಾ ಕಲಿಕೆ’ (Bilingual) ಎಂಬ ಹೊಸ ಉಪಕ್ರಮವನ್ನು ಮುಂದಿಟ್ಟಿದೆ. ಮಗು ತನ್ನ ಪರಿಸರದಲ್ಲಿ ಮಾತೃಭಾಷೆಯನ್ನು ಸಹಜವಾಗಿ ಕಲಿಯುವಂತೆಯೇ, ಮತ್ತೊಂದು ಭಾಷೆಯನ್ನೂ ಕಲಿಯಬಲ್ಲದು ಎಂಬುದು ಇದರ ಹಿಂದಿರುವ ತತ್ವ. ಆದರೆ, ಈ ತತ್ವವನ್ನು ತರಗತಿಯೊಳಗೆ ಹೇಗೆ ಅಳವಡಿಸಬೇಕು, ಅದೂ ಪರಿಸರದ್ದಲ್ಲದ ಇಂಗ್ಲಿಷ್ ಭಾಷೆಯನ್ನು ? ಈ ಬಗ್ಗೆ ಸ್ಪಷ್ಟ ಮತ್ತು ಯಶಸ್ವಿ ಮಾದರಿ ಎಲ್ಲಿದೆ? ಇಲಾಖೆಯ ಬಳಿ ಇಲ್ಲ. ಕೇವಲ ಅಂದಾಜಿನ ಮೇಲೆ ಈ ಪ್ರಯೋಗಕ್ಕೆ ಕೈಹಾಕಲಾಗಿದೆ.
ಇಂಗ್ಲಿಷ್ ಭಾಷೆಯ ಮೂಲಕ ವಿಜ್ಞಾನ, ಸಮಾಜ ವಿಜ್ಞಾನ, ಗಣಿತದಂತಹ ವಿಷಯಗಳನ್ನು ಕಲಿಯುವ ಸ್ಥಿತಿ ಇನ್ನೂ ವಿಪರ್ಯಾಸದಿಂದ ಕೂಡಿದೆ. ಇಂದಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯು ಮೊದಲು ಪಠ್ಯವನ್ನು ಇಂಗ್ಲಿಷ್ನಲ್ಲಿ ಓದಬೇಕು, ಅದನ್ನು ಅರ್ಥಮಾಡಿಕೊಳ್ಳಲು ಕನ್ನಡದ ಮೊರೆ ಹೋಗಬೇಕು ಮತ್ತು ಪರೀಕ್ಷೆಯಲ್ಲಿ ಉತ್ತರಿಸಲು ಮತ್ತೆ ಇಂಗ್ಲಿಷ್ನಲ್ಲಿ ಕಂಠಪಾಠ ಮಾಡಬೇಕು. ಇದು ಕಲಿಕೆಯಲ್ಲ; ಬದಲಾಗಿ ಮಕ್ಕಳ ಮೇಲೆ ಹೇರುತ್ತಿರುವ ನಿಷ್ಫಲ ಬೌದ್ಧಿಕ ಹೊರೆ. ಇದರ ಅನುಭವ 2019ರಿಂದ ಬಳಕೆಯಲ್ಲಿರುವ ದ್ವಿಭಾಷಾ ವಿಷಯ ಪಠ್ಯ ಮತ್ತು ಅದರ ಬಳಕೆಯನ್ನು ಪರಾಮರ್ಶಿಸಿದರೂ ಗೋಚರವಾಗುತ್ತದೆ. ಆದರೆ ಇಲಾಖೆಯೊಳಗೆ ತನ್ನ ಪ್ರಯೋಗಗಳ ಪ್ರಾಮಾಣಿಕ ಮೌಲ್ಯಮಾಪನ ಪ್ರಕ್ರಿಯೆಗಳು ಇಲ್ಲದಿದ್ದರೆ ಇದೆಲ್ಲ ಗಮನಕ್ಕೆ ಬಾರದು.
2. ಶಿಕ್ಷಕರ ಸನ್ನದ್ಧತೆ ಮತ್ತು ವ್ಯವಸ್ಥೆಯ ದೌರ್ಬಲ್ಯ
ಭಾಷಾ ಬೋಧನೆಯ ಈ ಪ್ರಯೋಗವು ತಳಮಟ್ಟದಲ್ಲಿ ಎಡವುತ್ತಿರುವುದಕ್ಕೆ ಮುಖ್ಯ ಕಾರಣ ನಮ್ಮ ಶಿಕ್ಷಕರ ಭಾಷಾ ಸನ್ನದ್ಧತೆಯ ಕೊರತೆ. ನಮ್ಮ ಬಹುತೇಕ ಶಿಕ್ಷಕರಿಗೆ ಇಂಗ್ಲಿಷ್ನಲ್ಲಿ ಸರಾಗವಾಗಿ ಸಂವಹನ ನಡೆಸಲು ಬರುವುದಿಲ್ಲ. ಇದರಲ್ಲಿ ಅವರ ತಪ್ಪೇನಿಲ್ಲ; ಏಕೆಂದರೆ ಅವರಿಗೆ ಅಂತಹ ಭಾಷಾ ಪರಿಸರ ಸಿಕ್ಕಿಲ್ಲ. ಯಾವುದೇ ಒಂದು ಹೊಸ ಭಾಷೆಯನ್ನು ಮಗು ಕಲಿಯಬೇಕಾದರೆ, ಆ ಭಾಷೆ ನಿರಂತರವಾಗಿ ಕಿವಿಯ ಮೇಲೆ ಬೀಳಬೇಕು ಮತ್ತು ಅದರ ಸಂದರ್ಭ ಅರ್ಥವಾಗಬೇಕು. ಆನಂತರ ತನ್ನ ಕಲಿಕೆಯ ಅನುಭವವನ್ನು ಅಭಿವ್ಯಕ್ತಿಸುವುದಕ್ಕೆ ಮುಂದಾಗಬೇಕು. ನಮ್ಮ ಗ್ರಾಮೀಣ ಮತ್ತು ಸರಕಾರಿ ಶಾಲೆಯ ಮಕ್ಕಳಿಗೆ ಶಾಲೆಯ ಹೊರಗೆ ಇರಲಿ, ತರಗತಿಯ ಒಳಗೂ ಸಮರ್ಪಕವಾದ ಇಂಗ್ಲಿಷ್ ಕಿವಿ ಮೇಲೆ ಬೀಳುವುದಿಲ್ಲ. ಶಿಕ್ಷಕರೇ ಇಂಗ್ಲಿಷ್ ಪಾಠವನ್ನು ಕನ್ನಡದಲ್ಲಿ ಅನುವಾದಿಸಿ ಬೋಧಿಸುವಾಗ, ಕನ್ನಡದಲ್ಲಿಯೇ ಪದಗಳ ಅರ್ಥವನ್ನು ಬರೆಸುವಾಗ, ಮಕ್ಕಳು ಹೊಸ ಭಾಷೆಯನ್ನು ಸಂದರ್ಭಕ್ಕೆ ಹೊರತಾಗಿ ಕಲಿಯುವುದಾದರೂ ಹೇಗೆ? ತಮಗೆ ಅರ್ಥವೇ ಆಗದ ಭಾಷೆಯಲ್ಲಿ ವಿಷಯ ಜ್ಞಾನವನ್ನು ಪಡೆಯುವುದು ಮತ್ತು ಆ ಭಾಷೆಯನ್ನು ಕಲಿಯುವುದು ಮಕ್ಕಳಿಗೆ ಅಸಾಧ್ಯವೇ ಸರಿ. ಇಲ್ಲಿಯೂ ಶಿಕ್ಷಕರ ಸಾಮರ್ಥ್ಯದ ಮೌಲ್ಯಮಾಪನ ಮಾಡಿ ಅವಶ್ಯಕ ಬೆಂಬಲಕೊಡುವುದು ಬೇಕಲ್ಲ?
ಇದರ ಜೊತೆಗೆ, ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸಬೇಕಾದ ಶೈಕ್ಷಣಿಕ ಬೆಂಬಲ ವ್ಯವಸ್ಥೆಯೂ (ಕ್ಲಸ್ಟರ್ ಮಟ್ಟದಿಂದ ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೆ) ದುರ್ಬಲವಾಗಿದೆ. ಅಲ್ಲಲ್ಲಿ ಕೆಲವು ಉತ್ತಮ ಪ್ರಯತ್ನಗಳಿದ್ದರೂ, ರಾಜ್ಯದ ಬೃಹತ್ ಶಿಕ್ಷಕ ಸಮೂಹಕ್ಕೆ ಸಮರ್ಥ ಸಂಪನ್ಮೂಲ ವ್ಯಕ್ತಿಗಳು ವಿರಳಾತಿ ವಿರಳವೇ ಇರುವುದು. ‘2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ (ಎನ್ಸಿಎಫ್) ಇಂದಿಗೂ ಕೇವಲ ಆಶಯವಾಗಿಯೇ ಉಳಿದಿರುವುದು ಹಾಗೂ ಗುಣಾತ್ಮಕ ಪ್ರಕ್ರಿಯೆಗಳು ಆಚರಣೆಗೆ ಬರದಿರುವುದು ನಮ್ಮ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಲಿ-ಕಲಿಯಂತಹ ಒಂದು ಶೈಕ್ಷಣಿಕ ಕಾರ್ಯಕ್ರಮ ಗೆದ್ದಲು ಹತ್ತುವುದಕ್ಕೆ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಆಶಯಗಳ ಅರ್ಥವಿಲ್ಲದೆ ಒಣ ಅಭ್ಯಾಸದ ಜಾಡಿಗೆ ಬಿದ್ದುದು ಕಾರಣವಷ್ಟೆ?
3. ಆತ್ಮವಿಶ್ವಾಸವೋ ಅಥವಾ ಆತ್ಮವಂಚನೆಯೋ?
ಇಂಗ್ಲಿಷ್ ಮಾಧ್ಯಮದಿಂದ ಸರಕಾರಿ ಶಾಲೆಯ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ; ಕೇವಲ ಅಂಕ ಗಳಿಕೆಯೊಂದನ್ನೇ ಮಾನದಂಡವಾಗಿ ನೋಡಬೇಕಿಲ್ಲ ಎಂಬುದು ಇಂಗ್ಲಿಷ್ ಮಾಧ್ಯಮದ ಸಮರ್ಥಕರ ಪ್ರಬಲ ವಾದವಾಗಿದೆ. ಆದರೆ, ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ಇದು ಕೇವಲ ಪೊಳ್ಳು ಭರವಸೆ ಅಥವಾ ಆತ್ಮವಂಚನೆಯ ಮಾತಷ್ಟೇ ಎನಿಸುತ್ತದೆ. ಇಂಗ್ಲಿಷ್ ಮಾಧ್ಯಮದ ಹೇರಿಕೆಯಿಂದ ಮಕ್ಕಳು ಭಾಷೆ ಮತ್ತು ವಿಷಯದ ಮೂಲಭೂತ ಕಲಿಕೆಯಲ್ಲೇ ಹಿಂದುಳಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿರುವಾಗ, ಅವರಲ್ಲಿ ಆತ್ಮವಿಶ್ವಾಸ ಬೆಳೆದಿದೆ ಎಂದು ವಾದಿಸುವುದು ಎಷ್ಟು ಸರಿ? ವಿಷಯವೇ ಅರ್ಥವಾಗದೆ ತರಗತಿಯಲ್ಲಿ ಮೂಕಪ್ರೇಕ್ಷಕರಾಗುವ ಮಕ್ಕಳಲ್ಲಿ ಆತ್ಮವಿಶ್ವಾಸ ಎಲ್ಲಿಂದ ಬರಲು ಸಾಧ್ಯ?
ಮುಕ್ತಾಯ
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, 2005ರ ಪಠ್ಯಕ್ರಮ ಚೌಕಟ್ಟು ಪರಿಣಾಮಕಾರಿಯಾಗಿ ಜಾರಿಯಾಗದೆ ವಿಫಲವಾಗಿದೆ ಎಂಬುದು ಸ್ಪಷ್ಟ. ಈಗ ಇಂಗ್ಲಿಷ್ ಮಾಧ್ಯಮವೆನ್ನುತ್ತಾ ಮತ್ತೊಂದು ವೈಫಲ್ಯಕ್ಕೆ ನೆಗೆಯುತ್ತಿದ್ದೇವೆ. ‘ಇರುಳು ಕಂಡ ಬಾವಿಗೆ ಹಗಲು ಬೀಳುವುದೆಂದರೆ’ ಇದೇ ಇರಬೇಕು. ಹೀಗಿರುವಾಗ, ಉತ್ಸಾಹದಿಂದ ಬರಮಾಡಿಕೊಳ್ಳುತ್ತಿರುವ 2023ರ ಹೊಸ ಪಠ್ಯಕ್ರಮ ಚೌಕಟ್ಟು ಶೈಕ್ಷಣಿಕವಾಗಿ ಎಷ್ಟೇ ಅತ್ಯುತ್ತಮವಾಗಿದ್ದರೂ, ಅದು ತಳಮಟ್ಟದಲ್ಲಿ ಯಶಸ್ವಿಯಾದೀತೆ ಎಂಬ ಅನುಮಾನ ಕಾಡುತ್ತಿದೆ.
ಒಟ್ಟಾರೆಯಾಗಿ, ಶಿಕ್ಷಣ ಇಲಾಖೆಯ ಈ ನಡೆಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ, ಭಾಷಾ ಕಲಿಕೆಯ ವೈಜ್ಞಾನಿಕ ತಿಳಿವಳಿಕೆಗೆ ಮತ್ತು ಮುಂದುವರಿದ ದೇಶಗಳ ಶಿಶುಸ್ನೇಹೀ ಪ್ರಜಾತಾಂತ್ರಿಕ ಶೈಕ್ಷಣಿಕ ಆಚರಣೆಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ಯಾವ ಜನವರ್ಗದ ಮಕ್ಕಳ ಹಿತವನ್ನು ಮುಂದಿಟ್ಟು ಇದನ್ನು ಮಾಡಲಾಗುತ್ತಿದೆಯೋ, ಆ ಆಶಯಕ್ಕೆ ತದ್ವಿರುದ್ಧ ಪರಿಣಾಮಗಳನ್ನು ಇದು ಉಂಟುಮಾಡುವುದು ನಿಶ್ಚಿತ. ಜನಪ್ರಿಯತೆಯ ಭ್ರಮೆಯಲ್ಲಿ ಕೈಗೊಳ್ಳುವ ಇಂತಹ ಅವೈಜ್ಞಾನಿಕ ನಿರ್ಧಾರಗಳು, ದೀರ್ಘಾವಧಿಯಲ್ಲಿ ನಮ್ಮ ಭವಿಷ್ಯದ ಪೀಳಿಗೆಯನ್ನು ಮತ್ತು ಸಮಾಜವನ್ನು ಬೌದ್ಧಿಕವಾಗಿ ದುರ್ಬಲಗೊಳಿಸಬಹುದು ಎಂಬ ಗಂಭೀರ ಆತಂಕ ಕಾಡುತ್ತಿದೆ.






