ಬುದ್ಧ-ಅಶೋಕ ನಡೆದಾಡಿದ ‘ಗಯಾ’ದ ರಾಜಕೀಯದ ರಕ್ತ ಚರಿತೆ

PC: PTI
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಹಂತದ ಚುನಾವಣೆ ಎದುರಿಸುತ್ತಿರುವ ಗಯಾ ಜಿಲ್ಲೆ ‘ಬೋಧ್ ಗಯಾ’ ಕಾರಣಕ್ಕಾಗಿ ವಿಶ್ವವಿಖ್ಯಾತಿಯನ್ನು ಪಡೆದಿದೆ. ಫಾಲ್ಗು ನದಿಯ ದಡದಲ್ಲಿರುವ ಬೋಧ್ ಗಯಾ, ಪ್ರಪಂಚದಾದ್ಯಂತದ ಬೌದ್ಧರಿಗೆ ಅತ್ಯಂತ ಪವಿತ್ರವಾದ ನಾಲ್ಕು ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಲುಂಬಿನಿಯ ರಾಜಕುಮಾರ ಸಿದ್ಧಾರ್ಥ ಗೌತಮನು 29ನೇ ವಯಸ್ಸಿನಲ್ಲಿ ತನ್ನ ಕುಟುಂಬವನ್ನು ತ್ಯಜಿಸಿದ ನಂತರ, ಕ್ರಿ.ಪೂ. 534ರಲ್ಲಿ ಮಹಾಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದದ್ದು ಇಲ್ಲಿಯೇ. ಈ ಪರಿವರ್ತನಾತ್ಮಕ ಘಟನೆಯ ನಂತರ, ಸಿದ್ಧಾರ್ಥನು ‘ಗೌತಮ ಬುದ್ಧ’ ಎಂದು ಪ್ರಸಿದ್ಧನಾದನು. ಬೋಧ್ ಗಯಾ ‘ಬೌದ್ಧಧರ್ಮದ ಜನ್ಮಸ್ಥಳ’ವಾಯಿತು. ಈ ಧರ್ಮವನ್ನು ಜಾಗತಿಕವಾಗಿ ಲಕ್ಷಾಂತರ ಜನರು ಅನುಸರಿಸುತ್ತಾರೆ.
ಬೋಧ್ ಗಯಾದಲ್ಲಿ ವಿಶ್ವದ ಎಲ್ಲಾ ದೇಶಗಳ ಬುದ್ಧನ ಅನುಯಾಯಿಗಳು, ಸಂತರುಗಳು ಕಾಣಸಿಗುತ್ತಾರೆ. ದೇಶ ವಿದೇಶದ ಸಂತರುಗಳು ಶುಭ್ರವಸ್ತ್ರಧಾರಿಗಳಾಗಿ ರಾತ್ರಿ ಹಗಲುಗಳ ಪರಿವೆಯಿಲ್ಲದೆ, ಜಾತಿ, ಲಿಂಗ ಭೇದಭಾವವಿಲ್ಲದೇ ಅಲ್ಲಲ್ಲಿ ಧ್ಯಾನಕ್ಕೆ ಕುಳಿತಿರುತ್ತಾರೆ. ಇಡೀ ಬೋಧ್ ಗಯಾ ವಿಧಾನಸಭಾ ಕ್ಷೇತ್ರವೇ ಧ್ಯಾನಮಂದಿರ ಎಂಬಂತೆ ಭಾಸವಾಗುತ್ತದೆ. ಆದರೆ ವಾಸ್ತವ ಹಾಗಿಲ್ಲ. ಬುದ್ಧನಿಗೆ ಜ್ಞಾನೋದಯವಾದ ಸ್ಥಳದಲ್ಲಿ ಹಿಂಸಾಕೋರರಿಗೆ ಜ್ಞಾನೋದಯವಾಗಿಲ್ಲ.
ನಮ್ಮ ಕಾರು ಬೋಧ್ ಗಯಾ ಬೌದ್ಧ ಮಂದಿರಗಳನ್ನು ವೀಕ್ಷಿಸಿ ಗಯಾ ಜಿಲ್ಲೆಯ ಇನ್ನಿತರ ಹಳ್ಳಿಗಳತ್ತ ಹೊರಟಿತು. ನಮ್ಮ ಕಾರಿಗೆ ಕನಿಷ್ಠವೆಂದರೆ ಹತ್ತು ಬಾರಿ ಬೇರೆ ವಾಹನಗಳು ಹಿಂದಿನಿಂದಲೋ, ಎಡ-ಬಲದಿಂದಲೂ ಢಿಕ್ಕಿ ಹೊಡೆಯಿತು. ನಮ್ಮ ಕಾರೂ ಕೂಡಾ ಹಲವರಿಗೆ ಸವರಿಕೊಂಡು ಹೋಯಿತು. ಆದರೆ ಎರಡೂ ಕಡೆಯ ಡ್ರೈವರ್ಗಳು ಏನೂ ಆಗಿಲ್ಲವೇನೋ ಎಂಬಂತೆ ವಾಹನ ಚಲಾಯಿಸುತ್ತಿದ್ದರು. ‘‘ನಮ್ಮ ಗಾಡಿಗೆ ಇಷ್ಟೊಂದು ವಾಹನಗಳು ಗುದ್ದಿದರೂ ನೀವ್ಯಾಕೆ ಯಾರನ್ನೂ ಪ್ರಶ್ನಿಸಿಲ್ಲ? ನಮ್ಮ ಗಾಡಿ ಗುದ್ದಿದಾಗಲೂ ಅವರ್ಯಾಕೆ ನಿಮ್ಮನ್ನು ಕೇಳಲಿಲ್ಲ?’’ ಎಂದು ನಮ್ಮ ಕಾರಿನ ಡ್ರೈವರನ್ನು ಪ್ರಶ್ನಿಸಿದೆ. ಅದಕ್ಕೆ ಡ್ರೈವರ್ ತಣ್ಣನೆ ನೀಡಿದ ಉತ್ತರ ದಂಗು ಬಡಿಸಿತ್ತು. ‘‘ಇಲ್ಲಿ ಟ್ರಾಫಿಕ್ ಸಂಬಂಧಿ ಜಗಳಗಳು ಬೇರೆಡೆಯಂತೆ ಬಾಯಿ ಮಾತಿಗೆ, ಪೊಲೀಸ್ ಕೇಸ್ಗೆ ಸೀಮಿತ ಆಗಿರುವುದಿಲ್ಲ. ಮಾತು ಶುರುವಾಗುವುದೇ ಗನ್ ಅಥವಾ ತಲವಾರಿನಿಂದ. ಹಾಗಾಗಿ ಯಾರೂ ಬೇಕೂಂತ ಢಿಕ್ಕಿ ಹೊಡೆಯಲ್ವಲ್ಲಾ ಎಂದುಕೊಂಡು ಎರಡೂ ಕಡೆ ಸುಮ್ಮನಾಗುತ್ತೇವೆ. ಯಾರಿಗೆ ಗೊತ್ತು ಯಾರ ಬಳಿ ಯಾವ ಆಯುಧ ಇದೆಯೆಂದು?’’ ಎಂದು ಡ್ರೈವರ್ ಉತ್ತರಿಸಿದರು.
ಗಯಾ ಜಿಲ್ಲೆಯಲ್ಲಿ ಹತ್ತು ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. 30.39ರಷ್ಟು ಪರಿಶಿಷ್ಟ ಜಾತಿಯವರು. ಪರಿಶಿಷ್ಟ ಪಂಗಡಗಳು (ಎಸ್ಟಿ) ಶೇ. 0.07ರಷ್ಟಿದೆ. ಕೃಷಿ ಕಾರ್ಮಿಕರೆಲ್ಲರೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಈ ಪ್ರದೇಶದ ನಾಲ್ಕು ಪ್ರಮುಖ ಮೇಲ್ಜಾತಿಗಳು ಬ್ರಾಹ್ಮಣರು, ಭೂಮಿಹಾರ್ಗಳು, ರಜಪೂತರು ಮತ್ತು ಕಾಯಸ್ಥರು. ನೂರಕ್ಕೂ ಹೆಚ್ಚು ಹಿಂದುಳಿದ ಜಾತಿಗಳಿವೆ. ಅವುಗಳಲ್ಲಿ ಪ್ರಮುಖವಾದವು ಯಾದವರು ಮತ್ತು ಕುರ್ಮಿಗಳು. ಭೂ ಮಾಲಕತ್ವ ಎನ್ನುವುದು ಮೇಲ್ಜಾತಿಗಳಾದ ಬ್ರಾಹ್ಮಣರು, ಭೂಮಿಹಾರ್ಗಳು, ರಜಪೂತರು ಮತ್ತು ಕಾಯಸ್ಥರ ಬಳಿ ಇದೆ. ಭೂ ಮಾಲಕರೇ ರಾಜಕಾರಣಿಗಳಾಗಿದ್ದಾರೆ ಅಥವಾ ರಾಜಕಾರಣಿಗಳೇ ಭೂ ಮಾಲಕರಾಗಿದ್ದಾರೆ. ಹಿಂದುಳಿದ ಜಾತಿಗಳಾಗಿ ಒಂದು ಕಾಲದಲ್ಲಿ ದೌರ್ಜನ್ಯ ಅನುಭವಿಸಿದ್ದ ಯಾದವರು, ಜಯಪ್ರಕಾಶ್ ನಾರಾಯಣ್, ಲಾಲು ಪ್ರಸಾದ್ ಯಾದವ್ ಅವರ ರಾಜಕೀಯ ನಾಯಕತ್ವದ ಬಳಿಕ ರಾಜಕೀಯ ಪ್ರಾಬಲ್ಯವನ್ನು ಹೊಂದಲಾರಂಬಿಸಿದರು. ಆದರೆ ಈ ಪ್ರಾಬಲ್ಯವು ಮೇಲ್ವರ್ಗಗಳ ದೌರ್ಜನ್ಯದ ವಿರುದ್ಧದ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಇರದೇ ಇದ್ದುದರಿಂದ ಯಾದವರ ರಾಜಕಾರಣವೂ ಹಿಂಸಾಪ್ರವೃತ್ತಿಯಿಂದಲೇ ಕೂಡಿದೆ. ಮೇಲ್ವರ್ಗಗಳಿಂದ ದೌರ್ಜನ್ಯ ಅನುಭವಿಸಿದ್ದ ಯಾದವರು ತಾವು ಬಲಿಷ್ಠರಾಗುತ್ತಿದ್ದಂತೆ ತನಗಿಂತ ಕೆಳಗಿನ ಜಾತಿಗಳ ಮೇಲೆ ದೌರ್ಜನ್ಯ ಶುರುವಿಟ್ಟುಕೊಂಡರು.
2016ರ ಮೇ ತಿಂಗಳಲ್ಲಿ ಗಯಾ ಜಿಲ್ಲೆಯ ಹೆದ್ದಾರಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಆದಿತ್ಯ ಸಚ್ದೇವ ಕಾರನ್ನು ಚಲಾಯಿಸುತ್ತಿದ್ದ. ಈತನ ಕಾರಿನ ಮುಂದೆ ಬಿಹಾರದ ಆಡಳಿತಾರೂಢ ಜೆಡಿಯು ಶಾಸಕಿ ಮನೋರಮಾ ದೇವಿಯ ಪುತ್ರ ರಾಕಿ ಯಾದವ್ ತನ್ನ ತಂದೆ ಬಿಂದಿ ಯಾದವ್ ಮತ್ತು ಗನ್ಮ್ಯಾನ್ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ರಾಕಿ ಯಾದವ್ನ ಕಾರನ್ನು ಆದಿತ್ಯ ಸಚ್ದೇವ ಎಂಬ ಹತ್ತನೆಯ ತರಗತಿಯ ಬಾಲಕನ ಕಾರು ಓವರ್ ಟೇಕ್ ಮಾಡಿತ್ತು ಎಂಬ ಒಂದೇ ಕಾರಣಕ್ಕಾಗಿ ರಾಕಿ ಯಾದವ್ ತನ್ನ ಗನ್ ತೆಗೆದು ಶೂಟ್ ಮಾಡಿ ಬಾಲಕನನ್ನು ಕೊಂದಿದ್ದ. ಇದೊಂದು ರಾಜಕಾರಣಿಗಳ ಮತ್ತು ಭೂಮಾಲಕರ ಅಟ್ಟಹಾಸಕ್ಕೆ ಸಣ್ಣ ಉದಾಹರಣೆಯಷ್ಟೆ. ಇಂತಹ ರಕ್ತಪಾತಗಳನ್ನು ಗಯಾ ಜಿಲ್ಲೆ ಸಾಕಷ್ಟು ಕಂಡಿದೆ.
ಇಡೀ ದೇಶದ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಬಿಹಾರದ ಪಾತ್ರ ದೊಡ್ಡದು. ಜಯಪ್ರಕಾಶ ನಾರಾಯಣರು ಇಡೀ ದೇಶಕ್ಕೆ ಸುಧಾರಣಾವಾದಿ ರಾಜಕಾರಣಿಗಳ ಕೊಡುಗೆಯನ್ನು ನೀಡಿದರು. ‘ಜನಿವಾರ ಕಿತ್ತೊಗೆಯಿರಿ’ ಎಂಬ ಜೆಪಿಯವರ ಕರೆಗೆ ಹಿಂದುಳಿದ ವರ್ಗ ಆಕರ್ಷಣೆಗೊಂಡಿತ್ತು. ಬುದ್ಧ ಇಡೀ ಜಗತ್ತಿಗೆ ಶಾಂತಿಯನ್ನು ಬೋಧಿಸಿದ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಗಯಾ, ಬೋಧ್ ಗಯಾದ ಹಳ್ಳಿಗಳನ್ನು ತುರ್ತುಪರಿಸ್ಥಿತಿ, ಹಿಂಸಾಚಾರದಿಂದ ಹೊರತರಲಾಗಲಿಲ್ಲ.
ಗಯಾದಲ್ಲಿರುವ ಒಬ್ಬೊಬ್ಬ ಭೂ ಮಾಲಕನೂ ಎಕರೆಗಟ್ಟಲೆ ಭೂಮಿ ಹೊಂದಿದ್ದಾನೆ. ಆದರೆ ದಲಿತರು, ಆದಿವಾಸಿಗಳು, ಮುಸ್ಲೀಮರು ಭೂಮಿಯನ್ನೇ ಹೊಂದಿಲ್ಲ. ಈ ಅಸಮಾನತೆಯನ್ನು ಸರಿಪಡಿಸಲು ಹಿಂದುಳಿದ ವರ್ಗದಿಂದ ಬಂದ ಆರ್ಜೆಡಿ, ಜೆಡಿಯು ರಾಜಕಾರಣಿಗಳಿಂದಲೂ ಸಾಧ್ಯವಾಗಿಲ್ಲ. ಹಾಗಾಗಿಯೇ ಇಲ್ಲಿ ದಲಿತರು, ಮುಸ್ಲೀಮರು, ಆದಿವಾಸಿಗಳು ತಮ್ಮ ರಕ್ಷಣೆಗಾಗಿ ನಕ್ಸಲರನ್ನು ಆಶ್ರಯಿಸಬೇಕಾಯಿತು. ಮತ್ತೊಂದೆಡೆ, ನಕ್ಸಲ್ ಚಳವಳಿಯನ್ನು ಒಪ್ಪದ ಎಡಪಂಥೀಯರಾದ ಸಿಪಿಐ, ಸಿಪಿಐಎಂ ಕೂಡಾ ಜನರ ಪರವಾಗಿ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಅಂತಿಮವಾಗಿ ನಕ್ಸಲ್ ಚಳವಳಿಯಿಂದ ಹೊರ ಬಂದು ಪ್ರಜಾಸತ್ತಾತ್ಮಕ ಚಳವಳಿಯನ್ನು ಕಟ್ಟಿದವರು ಸಿಪಿಐಎಂಎಲ್ ಭಾಗವಾಗಿ ಚುನಾವಣೆ ಸ್ಪರ್ಧಿಸಿದರು.
ಕಮ್ಯುನಿಷ್ಟ್ ಪಕ್ಷಗಳು ಭೂಮಾಲಕರ ಶೋಷಣೆ ವಿರುದ್ಧ, ದಲಿತ, ಆದಿವಾಸಿಗಳ ಪರ ನಿಲುವನ್ನು ತೆಗೆದುಕೊಂಡು ಶಾಂತಿಯುತ ಪ್ರತಿಭಟನೆಗಳ ಮೂಲಕ, ಭೂಸುಧಾರಣೆಗಳನ್ನು ಜಾರಿಗೆ ತರುವಂತೆ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿವೆ. ಮತ್ತೊಂದೆಡೆ ನಕ್ಸಲ್ ಗುಂಪುಗಳು ಭೂ ಮಾಲಕರು, ರಾಜಕಾರಣಿಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಹಾಗಾಗಿ 1960ರ ದಶಕದ ಅಂತ್ಯದಿಂದ ಮೇಲ್ಜಾತಿಗಳಿಗೆ ಸೇರಿದ ಭೂಮಿ ಮತ್ತು ಪ್ರತಿಷ್ಠೆಯನ್ನು ರಕ್ಷಿಸುವ ಗುರಿಯೊಂದಿಗೆ ಬಿಹಾರದಲ್ಲಿ ವಿವಿಧ ಮೇಲ್ಜಾತಿಯ ಸೇನಾಗಳು ಪ್ರಾರಂಭಗೊಂಡವು. 1969 ರಲ್ಲಿ ಮೇಲ್ಜಾತಿಯ ರಜಪೂತರು ‘ಕುಯರ್ ಸೇನಾ’ ಎಂಬ ಹೆಸರಿನ ಮಿಲಿಟೆಂಟ್ ಗ್ರೂಪ್ ಅನ್ನು ರಚಿಸಿದರು. 1979 ರಲ್ಲಿ ರಜಪೂತರ ‘ಕುನ್ವರ್ ಸೇನಾ’ ರಚನೆಯಾಯಿತು. ಆ ಬಳಿಕ ರಜಪೂತರಿಂದ ಪ್ರಾಬಲ್ಯ ಹೊಂದಿದ್ದ ಇನ್ನೊಂದು ‘ಸೂರ್ಯಲೈಟ್ ಸೇನಾ’ 1988ರಲ್ಲಿ ಅಸ್ತಿತ್ವಕ್ಕೆ ಬಂದಿತು. ಭೂಮಿಹಾರ್ ಪ್ರಾಬಲ್ಯದ ಸವರ್ಣ ಲಿಬರೇಷನ್ ಫ್ರಂಟ್ 1990ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎಲ್ಲಾ ಭೂಮಾಲಕರು ಇರುವ ರಣವೀರ ಸೇನೆಯನ್ನು 1994 ರಲ್ಲಿ ಪ್ರಾರಂಭಿಸಲಾಯಿತು.ಈ ಮಧ್ಯೆ ಮೇಲ್ಜಾತಿ ಗಳಂತೆ, ಹಿಂದುಳಿದ ಜಾತಿಯ ಭೂಮಾಲಕರು ದಲಿತರ ಮೇಲೆ ದೌರ್ಜನ್ಯ ನಡೆಸಲೆಂದೇ ಮಿಲಿಟೆಂಟ್ ಗುಂಪುಗಳನ್ನು ರಚಿಸಿಕೊಂಡರು. ಹಿಂದುಳಿದ ಜಾತಿಯ ಕುರ್ಮಿಗಳು ‘ಭೂಮಿ ಸೇನೆ’ಯನ್ನು ರಚಿಸಿದರೆ, ಯಾದವರು ಕೂಡಾ ಒಂದು ಮಿಲಿಟೆಂಟ್ ಗ್ರೂಪ್ ಅನ್ನು ಹೊಂದಿದ್ದರು. ಇವರೆಲ್ಲರ ಗುರಿ, ಜೀತ ನಿರಾಕರಿಸುವ, ವೇತನ ಕೇಳುವ, ಭೂಮಿ ಹಕ್ಕು ಕೇಳುವ, ಅತ್ಯಾಚಾರಗಳನ್ನು ವಿರೋಧಿಸುವ ದಲಿತರನ್ನೂ, ದಲಿತರ ಪರ ಹೋರಾಟಗಾರರನ್ನು ಕೊಲ್ಲುವುದು.
ಮೇಲ್ಜಾತಿಯ ಈ ಸೇನೆಗಳ ಮುಖ್ಯ ಗುರಿ ನಕ್ಸಲರಾದರೂ ಅವರ ಕೈಗೆ ಸಿಗುತ್ತಿದ್ದದ್ದು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತಿದ್ದ ಸಿಪಿಐಎಂಎಲ್ಎಲ್, ಸಿಪಿಐ ಮತ್ತು ಸಿಪಿಐಎಂ ಪಕ್ಷದ ಕಾರ್ಯಕರ್ತರು ಮಾತ್ರ. ದಲಿತರ ಭೂಮಿ ಹಕ್ಕು, ವೇತನಕ್ಕಾಗಿ ಹೋರಾಡುವ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಭೂಮಾಲಕರ ರಣವೀರ ಸೇನೆ ಕೊಂದು ಹಾಕಿದೆ. ಭೂಮಾಲಕರ ರಣವೀರ ಸೇನೆಗೆ ಕಮ್ಯುನಿಸ್ಟ್ ಹೊರತುಪಡಿಸಿದ ಎಲ್ಲಾ ಪಕ್ಷಗಳ ಬೆಂಬಲ ಇತ್ತು. ಸ್ಥಳೀಯ ಹಿರಿಯ ನಾಗರಿಕರ ಪ್ರಕಾರ ರಣವೀರ ಸೇನೆಗೆ ಪೊಲೀಸರು ಮತ್ತು ಮಿಲಿಟರಿಯಿಂದ ಗನ್ ಮತ್ತು ಇತರ ಆಯುಧಗಳ ತರಬೇತಿ ನೀಡಲಾಗುತ್ತಿತ್ತಂತೆ. ಬಡವರು, ಕೃಷಿ ಕಾರ್ಮಿಕರ ಪರವಾಗಿದ್ದ ಕಮ್ಯುನಿಸ್ಟರನ್ನು ನಿಗ್ರಹಿಸಲು ಭೂ ಮಾಲಕರು, ರಾಜಕಾರಣಿಗಳು ಮತ್ತು ಪೊಲೀಸ್ ವ್ಯವಸ್ಥೆ ಜಂಟಿಯಾಗಿ ರಣವೀರ ಸೇನೆಯನ್ನು ಸಾಕುತ್ತಿತ್ತು. ಹಾಗಾಗಿ ರಣವೀರ ಸೇನೆಯನ್ನು ಕಮ್ಯುನಿಸ್ಟರು, ಅದರಲ್ಲೂ ಮುಖ್ಯವಾಗಿ ಸಿಪಿಐಎಂಎಲ್ಎಲ್ ಕಾರ್ಯಕರ್ತರು ಸವಾಲಾಗಿ ತೆಗೆದುಕೊಂಡು ಎದುರಿಸಿದರು. ಒಂದೆಡೆ ಎಲ್ಲಾ ಭೂಮಾಲಕರು ರಣವೀರ ಸೇನೆಯ ಮೂಲಕ ದಲಿತರ ಮೇಲೆ ದಾಳಿ ನಡೆಸಿದರೆ, ಇನ್ನೊಂದೆಡೆ ಭೂಮಿಹಾರ್ ಜಾತಿಯ ಭೂಮಾಲಕರು ‘ಸವರ್ಣ ಲಿಬರೇಷನ್ ಫ್ರಂಟ್’ ಎಂಬ ಸಶಸ್ತ್ರ ಗುಂಪು ರಚಿಸಿ ವೇತನ ಕೇಳುವ, ಜೀತ ಒಪ್ಪದ ದಲಿತರ ಮೇಲೆ ದಾಳಿ ನಡೆಸಿದರು. 1997 ಡಿಸೆಂಬರ್ 1ರಂದು ಲಕ್ಷ್ಮಣಪುರ-ಬಾಥೆಯಲ್ಲಿ ಅರುವತ್ತೊಂದು ದಲಿತರನ್ನು ರಣವೀರ ಸೇನೆ ಕೊಂದು ಹಾಕಿತ್ತು. 1997 ಅಕ್ಟೋಬರ್ನಲ್ಲಿ ಸವರ್ಣ ಲಿಬರೇಶನ್ ಫ್ರಂಟ್ ಎಂಬ ಮೇಲ್ಜಾತಿಯ ಭೂಮಿಹಾರ್ ಮಿಲಿಟೆಂಟ್ ಸಂಘಟನೆಯಿಂದ ಹತ್ತು ಜನ ಕಮ್ಯುನಿಸ್ಟ್ ಹೋರಾಟಗಾರರನ್ನು ಕೊಲೆ ಮಾಡಲಾಗಿತ್ತು. 1995ರಲ್ಲಿ ನಕ್ಸಲ್ ಮತ್ತು ರಣವೀರ್ ಸೇನೆ, ಸವರ್ಣ ಲಿಬರೇಷನ್ ಫ್ರಂಟ್ ಮಧ್ಯೆ ನಡೆದ ಯುದ್ಧದಲ್ಲಿ 295 ಜನರು, 1996ರಲ್ಲಿ 436 ಜನರು ಮತ್ತು 1997ರಲ್ಲಿ 424 ಜನರು ಸಾವನ್ನಪ್ಪಿದರು ಎಂದು ಅಂಕಿಅಂಶಗಳು ಹೇಳುತ್ತವೆ. ಇದ್ಯಾವುದು ಕೂಡಾ ಪೊಲೀಸ್ ಮತ್ತು ನಕ್ಸಲ್ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲ. ಬದಲಾಗಿ ಭೂಮಾಲಕರ ಸಂಘಟನೆಗಳು ಮತ್ತು ಭೂರಹಿತ ದಲಿತ ಪರವಾಗಿವೆ. ಕಮ್ಯುನಿಸ್ಟ್ ಸಂಘಟನೆಗಳ ನಡುವೆ ನಡೆದ ಹಿಂಸಾಚಾರಗಳಾಗಿವೆ !
ಸೆಪ್ಟಂಬರ್ 27, 1991ರಂದು, ಮೇಲ್ಜಾತಿಗಳ ರಣವೀರ ಸೇನೆಯು ಜೆಹಾನಾಬಾದ್ ಜಿಲ್ಲೆಯ ಸವನ್ಬಿಘಾ ಗ್ರಾಮದಲ್ಲಿ ಏಳು ದಲಿತ ಮತ್ತು ಬುಡಕಟ್ಟು ಕಾರ್ಮಿಕರ ಶಿರಚ್ಛೇದ ಮಾಡಿತು. ಅದಾದ ಸ್ವಲ್ಪ ಸಮಯದ ನಂತರ, ಗಯಾ ಜಿಲ್ಲೆಯ ಟೀಂಡಿಹಾ ಗ್ರಾಮದ ಭೂಮಾಲಕರು ನೇಮಿಸಿಕೊಂಡ ಬಲಿಷ್ಠರು ಅಲ್ಪ ವೇತನಕ್ಕೆ ಕೃಷಿ ಕೆಲಸ ಮಾಡಲು ನಿರಾಕರಿಸಿದ್ದಕ್ಕಾಗಿ ಒಂಭತ್ತು ದಲಿತ ಕಾರ್ಮಿಕರ ಶಿರಚ್ಛೇದ ಮಾಡಿದರು. ಗಯಾ ಜಿಲ್ಲೆಯ ಜನತೆ ಇದನ್ನು ಇಂದಿಗೂ ಮರೆತಿಲ್ಲ. ಈಗಲೂ ಕಾರ್ಮಿಕ ಮತ್ತು ಭೂಮಾಲಕರು, ಮೇಲ್ವರ್ಗ ಮತ್ತು ದಲಿತರು ಎಂಬ ಅಂತರ ಗಯಾ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಕಾಣತ್ತದೆ.
ಜನವರಿ 22, 2005ರಂದು ಗಯಾ ಜಿಲ್ಲೆಯ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮದರ್ ಗ್ರಾಮದ ಬಳಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದಾಗ ಮಾಜಿ ಸಂಸದ ರಾಜೇಶ್ ಕುಮಾರ್ ಮತ್ತು ಅವರ ಆಪ್ತ ಸಹಾಯಕ ಗುಲಾಮ್ ಸರ್ವರ್ ಮಿರಾನಿ, ಅಂಗರಕ್ಷಕ ಮತ್ತು ಚಾಲಕ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಆಗ ರಾಜೇಶ್ ಕುಮಾರ್ ಅವರು ಗಯಾ ಜಿಲ್ಲೆಯ ಇಮಾಮ್ಗಂಜ್ ಮೀಸಲು ಕ್ಷೇತ್ರದಿಂದ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಸ್ಪೀಕರ್ ಆಗಿದ್ದ ಉದಯನಾರಾಯಣ ಚೌಧರಿ ಅವರು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿದ್ದು, ರಾಜೇಶ್ ಕುಮಾರ್ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದರು. ಕೊಲೆಯಾದ ಮಾಜಿ ಸಂಸದ ರಾಜೇಶ್ ಕುಮಾರ್ ಅವರ ಪುತ್ರ ಸರ್ವಜಿತ್ ಕುಮಾರ್ ಅವರು ಈಗ ಬೋಧ್ ಗಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. 2015 ಮತ್ತು 2020ರಲ್ಲಿ ಬೋಧ್ ಗಯಾದ ಆರ್ಜೆಡಿ ಶಾಸಕರಾಗಿರುವ ಸರ್ವಜಿತ್ ಕುಮಾರ್ ಅವರು ಮೂರನೇ ಬಾರಿ ಮತದಾರರ ಪರೀಕ್ಷೆಗೆ ಇಳಿದಿದ್ದಾರೆ.
‘‘ಹಿಂದೆ ಯಾದವರು ಕೂಡಾ ಮೇಲ್ಜಾತಿಗಳ ಜೊತೆ ಸೇರಿ ದೌರ್ಜನ್ಯ ಮಾಡುತ್ತಿದ್ದರು. ಲಾಲು ಪ್ರಸಾದ್ ಯಾದವ್ ಜಾತ್ಯತೀತರಾಗಿದ್ದರೂ ದಲಿತ ದೌರ್ಜನ್ಯದ ಬಗ್ಗೆ ಯೋಚಿಸಿದ್ದು ಕಡಿಮೆ. ಹಾಗೆ ನೋಡಿದರೆ ಲಾಲು ಪುತ್ರ ತೇಜಸ್ವಿ ಯಾದವ್ಗೆ ದಲಿತ ಸಂಕಷ್ಟಗಳ ಪ್ರಜ್ಞೆ ಇದೆ. ಕೆಲವೇ ತಿಂಗಳ ಹಿಂದೆ ದಲಿತ ಬಾಲಕಿ ಮೇಲೆ ಮೇಲ್ವರ್ಗಗಳು ನಡೆಸಿದ ಪೈಶಾಚಿಕ ಅತ್ಯಾಚಾರದ ವಿರುದ್ಧ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಧ್ವನಿ ಎತ್ತಿದ್ದರು. ಕನಿಷ್ಠ ಈ ರೀತಿಯ ರಾಜಕೀಯ ಬೆಳವಣಿಗೆಗಳು ಆಶಾವಾದ ಮೂಡಿಸುತ್ತದೆ’’ ಎಂದು ಗಯಾದ ದಲಿತ ನಾಯಕ ಮಾಂಝಿ ಹೇಳುತ್ತಾರೆ.
‘‘2025 ಜೂನ್ ತಿಂಗಳಲ್ಲಿ ದಲಿತ ಹುಡುಗಿಯ ಮೇಲೆ ಭೂಮಾಲಕರು ಅತ್ಯಾಚಾರ ನಡೆಸಿದಾಗ ಯಾದವ ಸಮುದಾಯಕ್ಕೆ ಸೇರಿದ ಜಿತೇಂದ್ರ ಯಾದವ್ ಎನ್ನುವ ವೈದ್ಯರು ಯುವತಿಯ ಮನೆಗೇ ಬಂದು ಚಿಕಿತ್ಸೆ ನೀಡಿದ್ದರು. ನಮ್ಮಿಂದ ಅತ್ಯಾಚಾರಕ್ಕೊಳಗಾದ ಯುವತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದ ಭೂಮಾಲಕರ ಗುಂಪು ಮತ್ತೆ ಸಂತ್ರಸ್ತೆಯ ಮನೆಗೆ ನುಗ್ಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಹೊರಗೆಳೆದು ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ತೇಜಸ್ವಿ ಯಾದವ್ ಈ ಬಗ್ಗೆ ಧ್ವನಿ ಎತ್ತದಿದ್ದರೆ ಅತ್ಯಾಚಾರ ಮತ್ತು ವೈದ್ಯರ ಮೇಲಿನ ಹಲ್ಲೆ ಆರೋಪಿಗಳು ಪತ್ತೆಯಾಗುತ್ತಿರಲಿಲ್ಲ’’ ಎಂದು ಮತ್ತೋರ್ವ ದಲಿತ ನಾಯಕರು ಹೇಳುತ್ತಾರೆ.
ನೂರಾರು ಎಡ ಕಾರ್ಯಕರ್ತರನ್ನು ಕೊಲೆ ಮಾಡಿದ, ಸಾವಿರಾರು ದಲಿತರನ್ನು ಅತ್ಯಾಚಾರ, ದೌರ್ಜನ್ಯ ಮಾಡಿದ ಭೂ ಮಾಲಕರ ಜಾತಿಯ ವಿವಿಧ ಸೇನೆಗಳಿಗೆ ಒಂದು ಕಾಲದಲ್ಲಿ ಬೆಂಗಾವಲಾಗಿ ನಿಂತಿದ್ದ ಕಾಂಗ್ರೆಸ್, ಆರ್ಜೆಡಿಯನ್ನು ಕೃತ್ಯಗಳನ್ನು ಬುದ್ಧನಂತೆ ಕ್ಷಮಿಸಿರುವ ಸಿಪಿಐಎಂಎಲ್ಎಲ್, ಸಿಪಿಐ, ಸಿಪಿಐಎಂ, ಮಾಜಿ ನಕ್ಸಲರು, ನಕ್ಸಲ್ ಬೆಂಬಲಿತ ಗ್ರಾಮಸ್ಥರು, ದಲಿತ ಸಮುದಾಯದವರು ಅನಿವಾರ್ಯವಾಗಿ ಈ ಬಾರಿ ಮಹಾಘಟಬಂಧನ್ ಬೆಂಬಲಿಸುತ್ತಿದ್ದಾರೆ. ಆರ್ಜೆಡಿ ಮತ್ತು ಕಾಂಗ್ರೆಸ್ ಭವಿಷ್ಯದಲ್ಲಿ ನೆನಪಿಟ್ಟುಕೊಂಡು ದಲಿತ-ಆದಿವಾಸಿ-ಮುಸ್ಲಿಮ್ ಜನಸಮುದಾಯದ ಮಧ್ಯೆ ಸೈದ್ಧಾಂತಿಕ ಬದ್ಧತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎಂಬುದು ಗಯಾ ಜಿಲ್ಲೆಯ ಬಹುಸಂಖ್ಯಾತರಾಗಿರುವ ದಲಿತ-ಮುಸ್ಲಿಮರ ಅಭಿಪ್ರಾಯವಾಗಿದೆ.







