ಜಾಲತಾಣದ ಜಾತಿವಾದಿಗಳನ್ನು ನಿಯಂತ್ರಿಸಬೇಕಾಗಿದೆ

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ರೂಪುಗೊಂಡಿರುವ ಸಾಮಾಜಿಕ ಜಾಲತಾಣಗಳಿಂದ ಜಗತ್ತಿನ ವಿದ್ಯಮಾನಗಳು ಜನರ ಬೆರಳತುದಿಯಲ್ಲೇ ದೊರಕುವಂತೆ ಆವಿಷ್ಕಾರಗೊಂಡಿರುವುದು ದೇಶದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆ ಎಂದು ಪರಿಭಾವಿಸುವುದು ಸತ್ಯವಷ್ಟೆ. ಆದರೆ, ಈ ಜಾಲತಾಣಗಳು ಸಾಮಾಜಿಕ ಸೌಹಾರ್ದ ಹಾಗೂ ಸಾಮರಸ್ಯದ ಬದುಕನ್ನು ಬೆಸೆಯಲು ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂದು ಅವಲೋಕಿಸುವುದು ಈ ಹೊತ್ತಿನ ತುರ್ತಾಗಿದೆ. ಕಾರಣವೇನೆಂದರೆ, ಈ ಜಾಲತಾಣಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಮನರಂಜನೆಯ ಹಾದಿಯಿಂದ ಹೊರಳಿ ವೈಯಕ್ತಿಕ ನಿಂದನೆ, ಕುಚೋದ್ಯತನ ಹಾಗೂ ಸಾಮಾಜಿಕ ಸಂಘರ್ಷಗಳಿಗೆ ಮುನ್ನುಡಿ ಬರೆಯುವಂತಹ ವೇದಿಕೆಯನ್ನಾಗಿ ರೂಪಾಂತರಗೊಳಿಸುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ.
ಜಾತಿ ವೈಷಮ್ಯ ಹಾಗೂ ಮೇಲರಿಮೆ ಕೀಳರಿಮೆಯ ಜಂಜಾಟದಲ್ಲಿ ಮೈ ಮರೆತಿರುವ ಈ ಸಾಮಾಜಿಕ ವ್ಯವಸ್ಥೆಯೊಳಗೆ ನಿರುದ್ಯೋಗ, ಬಡತನ ಮತ್ತು ಆರ್ಥಿಕ ಸಂಕಷ್ಟಗಳಿಂದ ಕಂಗಾಲಾಗಿರುವ ಯುವಜನತೆಯನ್ನು ಹಾದಿ ತಪ್ಪಿಸಿ ದೇವರು, ಧರ್ಮದ ಅಮಲೇರಿಸಿ ಪರಸ್ಪರ ಕಚ್ಚಾಡುವಂತಹ ಪ್ರಕ್ರಿಯೆಗಳಲ್ಲಿ ಕೆಲವು ಶಕ್ತಿಗಳು ತೆರೆಮರೆಯಲ್ಲಿ ಸಕ್ರಿಯರಾಗಿರುವುದು ಗುಟ್ಟಾಗುಳಿದಿಲ್ಲ. ಆ ಶಕ್ತಿಗಳ ಕುಮ್ಮಕ್ಕಿನಿಂದ ಮತ್ತಷ್ಟು ಪ್ರಚೋದನೆಗೊಳಗಾಗಿ ಇದೀಗ ಸಂವಿಧಾನ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೀಸಲಾತಿ ವ್ಯವಸ್ಥೆಯ ಬಗ್ಗೆ ತೀವ್ರ ಅಸಹನೆ ಮತ್ತು ಆಕ್ರೋಶವನ್ನುಂಟು ಮಾಡಲು ಪೀಠಿಕೆಯಾಗುತ್ತಿರುವುದು ಭವಿಷ್ಯದ ಭಾರತಕ್ಕೆ ಕಳಂಕವಾಗುವುದರಲ್ಲಿ ಸಂಶಯವಿಲ್ಲ. ಅಸ್ಪಶ್ಯತೆ ಮತ್ತು ಜಾತಿಯ ಅಪಮಾನದಿಂದ ಸಾಮಾಜಿಕ ಶೋಷಣೆಗೆ ಒಳಗಾದವರಿಗೆ ಆರ್ಥಿಕ ಚೈತನ್ಯ ದೊರಕುವಂತೆ ಮಾಡಿ ಮುಖ್ಯವಾಹಿನಿಗೆ ತಂದು ಸಾಮಾಜಿಕ ಸಮಾನತೆಯನ್ನು ಮೂಡಿಸಬೇಕೆಂಬ ಸದುದ್ದೇಶದಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಇತ್ಯಾದಿಗಳಲ್ಲಿ ಮೀಸಲಾತಿ ಸವಲತ್ತನ್ನು ದೊರಕಿಸಿಕೊಡಲು ಆಳುವ ಸರಕಾರಗಳು ಕಾರ್ಯೋನ್ಮುಖರಾಗಿರುವುದನ್ನು ಜಾತೀಯ ಪೂರ್ವಾಗ್ರಹದಿಂದ ನೋಡುತ್ತಾ ಮತ್ತೆ ಯಥಾಸ್ಥಿತಿವಾದವನ್ನು ಮುಂದುವರಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾಗೃತರಾಗಿರುವುದರಿಂದ ಮೀಸಲಾತಿಯ ಅರ್ಹ ಫಲಾಪೇಕ್ಷಿಗಳು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದಲ್ಲದೆ ದೇಶವು ಜಾತೀಯತೆಯ ವಿಷವರ್ತುಲದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲವೆಂಬ ಅಪ್ಟಟ ಸತ್ಯವನ್ನು ಜಗತ್ತಿನ ಮುಂದೆ ಜಗಜ್ಜಾಹೀರುಗೊಳಿಸುವಂತಾಗಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ನಿರ್ದೇಶಕರು, ಚಲನಚಿತ್ರ ನಟ ನಟಿಯರು, ಸಾಮಾಜಿಕ ಗೌರವಗಳಿಗೆ ಪಾತ್ರರಾದವರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ತೇಜೋವಧೆ ಮಾಡುತ್ತಿರುವವರು ಮುಂದುವರಿದು ಇದೀಗ ಜಾತಿಯ ಪೂರ್ವಾಗ್ರಹದಿಂದ ದಲಿತ ಸಮುದಾಯದವರ ವಿರುದ್ಧ ದಲಿತರನ್ನೇ ಎತ್ತಿಕಟ್ಟುವ, ದಲಿತರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿ ಅವಾಚ್ಯ ಶಬ್ದಗಳನ್ನು ಬಳಸುತ್ತಾ, ಸಮುದಾಯದ ಬಗ್ಗೆ ಇನ್ನಿತರರಲ್ಲಿ ಆಕ್ರೋಶ, ಅಸಹನೆ ಮೂಡುವಂತಾಗಲು ಪ್ರೇರಣೆ ನೀಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಹದ್ದಬಸ್ತಿನಲ್ಲಿಡದಿದ್ದರೆ ಸಾಮಾಜಿಕ ಸಂಘರ್ಷಕ್ಕೆಡೆ ಮಾಡುವುದಲ್ಲದೆ ಶಾಂತಿ ಸೌಹಾರ್ದ ಪರಂಪರೆಗೆ ಧಕ್ಕೆಯುಂಟಾಗುವುದರಲ್ಲಿ ಸಂಶಯವಿಲ್ಲ. ದಲಿತರ ಹಿತರಕ್ಷಣೆಗಾಗಿ ರಚಿತಗೊಂಡಿರುವ ಪ್ರತ್ಯೇಕ ಪೊಲೀಸ್ ವ್ಯವಸ್ಥೆಯಾಗಲಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆಧುನಿಕ ಜಾತಿವಾದಿಗಳ ಉಪಟಳವನ್ನು ಕಂಡೂ ಕಾಣದಂತೆ ಜಾಣ ಕಿವುಡುತನ ಜಾಣ ಕುರುಡುತನ ತೋರದೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಯಂತ್ರಿಸಬೇಕು. ಯಾವುದೇ ಸಮುದಾಯದವರು ಮತ್ತಾವುದೇ ಸಮುದಾಯದ ವಿರುದ್ಧ ಅಥವಾ ಸಮಾಜದ ಗಣ್ಯರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಅಪಮಾನಗಳ ಹೇಳಿಕೆಗಳನ್ನು ದಾಖಲಿಸಿದರೆ ಅಂತಹವರುಗಳಿಗೆ ಕಾನೂನಿನ ರುಚಿ ತೋರಿಸದಿದ್ದರೆ ಜಾತ್ಯತೀತ ಭಾರತಕ್ಕೆ ಉಳಿಗಾಲವಿಲ್ಲ ಎನಿಸುತ್ತದೆ.







