ಸತ್ಯ ಹಾಗೂ ವ್ಯಂಗ್ಯ ರಾಜಕಾರಣದ ನಡುವೆ ‘ಗೋವು’

ಗೋವು ವರ್ತಮಾನದಲ್ಲಿ ಹೆಚ್ಚು ಬಿಂಬಿತವಾಗುತ್ತಿರುವ ಪ್ರಾಣಿ. ಗೋಮಾತೆ, ಗೋರಕ್ಷಣೆ ಹಾಗೂ ಗೋಶಾಲೆ ಹೆಚ್ಚು ಮುನ್ನೆಲೆಗೆ ಬಂದಿದೆ. ಬಹುತ್ವದ ಭಾರತದೊಳಗೆ ಏಕತ್ವದ ಪರಿಕಲ್ಪನೆಗಳು ಕುಣಿಯುತ್ತಿರುವ ಹೊತ್ತಿನಲ್ಲಿ ಗೋವು, ಪರಂಪರೆ ಹಾಗೂ ಅದರ ಹಿನ್ನೆಲೆಯನ್ನು ಅರಿತುಕೊಳ್ಳುವುದು ಸೂಕ್ತ. ಇತ್ತೀಚೆಗೆ ಮುಸ್ಲಿಮ್ ಸಂಘಟನೆಗಳು ಬಕ್ರೀದ್ ಸಂದರ್ಭದಲ್ಲಿ ಮಾಂಸಕ್ಕಾಗಿ ಗೋವು ಖರೀದಿಸುವುದನ್ನು ನಿಲ್ಲಿಸುವುದಾಗಿ ಹಾಗೂ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಒತ್ತಾಯಿಸಿದವು. ಜಾನುವಾರುಗಳನ್ನು ಮಾರಾಟಮಾಡಲು ಮಾರುಕಟ್ಟೆಗೆ ಬಂದಿದ್ದ ಹಾಸನ ಜಿಲ್ಲೆಯ ಹಿಂದೂ ರೈತರೆಲ್ಲರೂ ವಯಸ್ಸಾದ ಜಾನುವಾರುಗಳನ್ನೆಲ್ಲ ಇಟ್ಟುಕೊಂಡು ನಾವು ಸಾಕುವುದು ಹೇಗೆ? ಅವುಗಳಿಗೆ ಮೇವು ಕೊಡುವವರು ಯಾರು? ಆರೋಗ್ಯ ಕೆಟ್ಟ, ಕೈಕಾಲು ಮುರಿದುಹೋದ ಗೋವನ್ನು ಏನು ಮಾಡುವುದು? ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಪ್ರತಿಭಟಿಸಿದರು. 2025ರಲ್ಲಿ ಭಾರತದ ಅತಿದೊಡ್ಡ ಗೋಮಾಂಸ ರಫ್ತು ಕೇಂದ್ರವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘‘ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಅದು ತಾಯಿಗೆ ಸಮಾನ’’ ಎಂದಿದ್ದಾರೆ. ಬೀದಿಯಲ್ಲಿ ಹಸುಗಳು ಸತ್ತು ನಾರುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗೋಶಾಲೆಗಳಲ್ಲಿ ಮೇವಿಲ್ಲದೆ ಸಾಯುತ್ತಿವೆ. ಇದರ ನಡುವೆಯೂ ವೃದ್ಧಾಶ್ರಮಗಳ ಸಂಖ್ಯೆ ಅಧಿಕವಾಗುತ್ತಿರುವ ಹೊತ್ತಿನಲ್ಲಿ ಗೋವು ಕುರಿತ ಇವರ ಮಾತು ನಗೆಪಾಟಲೆನಿಸುವುದಿಲ್ಲವೇ?
ರಾಷ್ಟೀಯ ಪ್ರಾಣಿ ಘೋಷಣೆಯ ಇತಿಹಾಸವನ್ನು ತಿಳಿಯಬೇಕು. ಇಂದು ನಾವು ಹುಲಿಯನ್ನು (ಬಂಗಾಳದ ಹುಲಿ) ನಮ್ಮ ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಿಕೊಂಡಿದ್ದೇವೆ. ಭಾರತದ ಮೊದಲ 1948ರಿಂದ 1972ರ ವರೆಗೆ ಏಶ್ಯಟಿಕ್ ಸಿಂಹವನ್ನು ರಾಷ್ಟ್ರೀಯ ಪ್ರಾಣಿ ಎಂದು ಸ್ವೀಕರಿಸಲಾಯಿತು. ಸಿಂಹದ ರಾಜಗಾಂಭಿರ್ಯ, ಶಕ್ತಿ ಮತ್ತು ಅಶೋಕ ಸ್ತಂಭದಲ್ಲಿರುವ ಅದರ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಭಾರತೀಯ ವನ್ಯಜೀವಿ ಮಂಡಳಿ ಸಿಂಹದ ಬದಲಿಗೆ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಲು ಶಿಫಾರಸು ಮಾಡಿತು. 1972 ಎಪ್ರಿಲ್‌ನಲ್ಲಿ ರಾಯಲ್ ಬೆಂಗಾಲ್ ಟೈಗರ್‌ಅನ್ನು ಭಾರತದ ಅಧಿಕೃತ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಯಿತು. ಸಿಂಹದ ಬದಲಿಗೆ ಹುಲಿಯನ್ನು ಆಯ್ಕೆ ಮಾಡಲು ಮುಖ್ಯವಾಗಿ ಎರಡು ಪ್ರಮುಖ ಕಾರಣಗಳಿದ್ದವು. ಮೊದಲನೆಯದು; ಏಶ್ಯಟಿಕ್ ಸಿಂಹಗಳು ಕೇವಲ ಗುಜರಾತ್‌ನ ಗಿರ್ ಅರಣ್ಯಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಹುಲಿಗಳು ದೇಶದ ಸರಿಸುಮಾರು 16 ರಾಜ್ಯಗಳ ಕಾಡುಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದವು. ಹಾಗಾಗಿ ಇಡೀ ದೇಶವನ್ನು ಪ್ರತಿನಿಧಿಸಲು ಹುಲಿ ಹೆಚ್ಚು ಸೂಕ್ತ ಎಂದು ಭಾವಿಸಲಾಯಿತು. ಎರಡನೆಯದು; 1970ರ ದಶಕದ ವೇಳೆಗೆ ಅಕ್ರಮ ಬೇಟೆಯಿಂದಾಗಿ ದೇಶದಲ್ಲಿ ಹುಲಿಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಕುಸಿದಿತ್ತು. ಹುಲಿಗೆ ರಾಷ್ಟ್ರೀಯ ಪ್ರಾಣಿ ಎಂಬ ಗೌರವ ನೀಡುವುದರಿಂದ ಅದರ ಸಂರಕ್ಷಣೆಗೆ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಒತ್ತು ಸಿಗುತ್ತದೆ ಎಂದು ಯೋಚಿಸಿದ್ದು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಗೋವು ವನ್ಯಜೀವಿ ವ್ಯಾಪ್ತಿಗೆ ಬರುವುದಿಲ್ಲ. ಬದಲಾಗಿ ಮಾನವನ ಆಶ್ರಯದಲ್ಲಿ ಬೆಳೆಯುವ ಸಾಕುಪ್ರಾಣಿ ಹಾಗೂ ಕೃಷಿ ಜಾನುವಾರು ಮಾತ್ರ ಆಗಿದೆ.
ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ. ಮಾಂಸ ರಫ್ತು ಮಾಡುವ ಪ್ರಮುಖ ಮತ್ತು ಅಗ್ರಗಣ್ಯ ಕಂಪೆನಿಗಳೆಂದರೆ; ಅಲನಾಸನ್ಸ್ ಪ್ರೈ ಲಿಮಿಟೆಡ್, ಅಲ್ ಕಬೀರ್ ಎಕ್ಸ್‌ಪೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಿಂದ್ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್, ಅಲ್ ಹಮ್ದ್ ಆಗ್ರೋ ಫುಡ್ ಪ್ರಾಡಕ್ಟ್ಸ್ ಎಂಬ ಬ್ರಾಹ್ಮಣರ ಒಡೆತನದಲ್ಲಿರುವ ಕಂಪೆನಿಗಳು ವಿಯೆಟ್ನಾಂ, ಮಲೇಶ್ಯ, ಈಜಿಪ್ಟ್, ಸೌದಿ ಅರೇಬಿಯ ಮತ್ತು ಯುಎಇ ಇರಾಕ್ ದೇಶಗಳಿಗೆ ರಫ್ತು ಮಾಡುತ್ತಿವೆ. ರಫ್ತು ಮಾಡುವ ಪ್ರತಿಯೊಂದು ಕಂಪೆನಿಯು ಕೂಡ ಸರಕಾರದ ಪಶುವೈದ್ಯಕೀಯ ಮತ್ತು ನೈರ್ಮಲ್ಯ ತಪಾಸಣೆಗೆ ಒಳಪಡಬೇಕಾಗಿದೆ. ಕೋಣ ಹಾಗೂ ಎಮ್ಮೆ ಮಾಂಸವನ್ನು ಮಾತ್ರ ಮಾರಾಟಮಾಡಲು ಅವಕಾಶ ಕಲ್ಪಿಸಲಾಗಿದೆಯೇ ಹೊರತು, ಗೋಮಾಂಸಕ್ಕೆ ನಿಷೇಧ ಇದೆ. ಈ ಹಿಂದೆ ಗೋ-ವಿಷಯಕ್ಕೆ ಸಂಬಧಿಸಿದಂತೆ ಸುಪ್ರೀಂ ಕೋರ್ಟ್‌ನ ಪ್ರಮುಖ ತೀರ್ಪುಗಳನ್ನು ಗಮನಿಸಬೇಕು. 1958ರಲ್ಲಿ ಮುಹಮ್ಮದ್ ಹನೀಫ್ ಖುರೇಷಿ ವರ್ಸಸ್ ಬಿಹಾರ್ ರಾಜ್ಯ ಕೇಸ್‌ನಲ್ಲಿ ಹಾಲು ಕೊಡುವ ಮತ್ತು ಕೃಷಿಗೆ ಬಳಕೆಯಾಗುವ ಹಸು/ಜಾನುವಾರುಗಳ ಸಂಪೂರ್ಣ ಹತ್ಯೆ ನಿಷೇಧವನ್ನು ಎತ್ತಿ ಹಿಡಿಯಿತು. ಆದರೆ, ವಯಸ್ಸಾದ ಮತ್ತು ಸಂಪೂರ್ಣವಾಗಿ ಉಪಯುಕ್ತವಲ್ಲದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವುದು ವಿಧಿ 48ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ಇವತ್ತಿಗೂ ಭಾರತದ ಆರ್ಥಿಕ ವಲಯಕ್ಕೆ ಸುಮಾರು 3.2 ರಿಂದ 4 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ವಿನಿಮಯವನ್ನು ಗೋಮಾಂಸ ತಂದುಕೊಡುತ್ತಿದೆ.
ಭಾರತದಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಯಾವುದೇ ಏಕರೂಪ ಕಾನೂನಿಲ್ಲ. ಸಂವಿಧಾನದ ಪ್ರಕಾರ ಇದು ರಾಜ್ಯ ಪಟ್ಟಿಗೆ ಸೇರಿರುವುದರಿಂದ ಬೇರೆ-ಬೇರೆ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಹೊಂದಿವೆ. ಉತ್ತರ ಪ್ರದೇಶ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಹಾಗೂ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನುಗಳಿವೆ. ಆದರೆ. ಕೇರಳ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರಾಗಳಲ್ಲಿ ಗೋಹತ್ಯೆಯ ಮೇಲೆ ಯಾವುದೇ ಕಟ್ಟುನಿಟ್ಟಾದ ನಿಷೇಧವಿಲ್ಲ ಏಕೆ? ಏಕೆಂದರೆ; ಹಸುವನ್ನು ರಾಜಕಾರಣದ ವಸ್ತುಮಾಡಿಕೊಂಡು ಹಿಂದೂ ಮತ್ತು ಮುಸ್ಲಿಮರ ನಡುವೆ ಒಡೆದು ಆಳುವ ಕ್ರೌರ್ಯ ನಡೆಯುತ್ತಿದೆ. ಗೋಮಾಂಸ ನಿಷೇಧವಿಲ್ಲದ ಕೇರಳ ಹಾಗೂ ಇನ್ನಿತರ ರಾಜ್ಯಗಳಲ್ಲಿ ಹಿಂದೂಗಳೇ ಗೋಮಾಂಸ ಸೇವಿಸುವವರಾಗಿದ್ದಾರೆ. ಗೋವು ಮುಸ್ಲಿಮ್ ವಿರೋಧಿ ರಾಜಕಾರಣವಲ್ಲದೇ ಮತ್ತೇನು? ಗೋವು ಎಲ್ಲಾ ಕ್ಷೇತ್ರದಲ್ಲಿಯೂ ಭಾರತದ ಆರ್ಥಿಕ ಲಾಭದಾಯಕ ಪ್ರಾಣಿಯಾಗಿ ಗುರುತಿಸಿಕೊಂಡಿದೆ. ಮನುಷ್ಯರು ಉಪಯೋಗಿಸುವ ಔಷಧಗಳು, ದಿನಬಳಕೆಯ ವಸ್ತುಗಳು, ಲೆದರ್ ವಸ್ತುಗಳಾದ ಶೂ, ಜಾಕೆಟ್, ಬೆಲ್ಟ್, ಪರ್ಸ್, ಬ್ಯಾಗ್, ಸೋಫಾ, ಹೀಗೆ ಮುಂತಾದವುಗಳ ಉತ್ಪನ್ನಗಳನ್ನು ಕಾಣಬಹುದು.
ಭಾರತದ ಸಂವಿಧಾನದಲ್ಲಿ ಗೋವಿನ (ಹಸು) ರಕ್ಷಣೆ ಮತ್ತು ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಹಾಗೂ ಆಸಕ್ತಿದಾಯಕ ಇತಿಹಾಸವಿದೆ. ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ. ಅಂತಿಮವಾಗಿ ಇದನ್ನು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಸೇರಿಸಲಾಯಿತು. ಭಾಗ 4ರಲ್ಲಿ ಬರುವ ವಿಧಿ 48, ಗೋವು ಸಂರಕ್ಷಣೆಯ ಬಗ್ಗೆ ಮಾತನಾಡುತ್ತದೆ. ಇದು ಕೃಷಿ ಮತ್ತು ಪಶುಸಂಗೋಪಣೆಯ ಸಂಘಟನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುತ್ತದೆ. ವಿಶೇಷವಾಗಿ ಹಸುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಭಾರ ಹೊರುವ ಜಾನುವಾರುಗಳ ತಳಿಯನ್ನು ಸಂರಕ್ಷಿಸಲು, ಸುಧಾರಿಸಲು ಮತ್ತು ಅವುಗಳ ಹತ್ಯೆಯನ್ನು ನಿಷೇಧಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕುಗಳಲ್ಲಿ ಸೇರಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆಗಳಾಗಿವೆ. ಸೇಠ್ ಗೋವಿಂದ ದಾಸ್ ಮತ್ತು ಪಂಡಿತ್ ಠಾಕೂರ್ ದಾಸ್ ಭಾರ್ಗವ ಅವರಂತಹ ನಾಯಕರು ಹಸುವಿಗೆ ಭಾರತೀಯ ಸಂಸ್ಕೃತಿಯಲ್ಲಿರುವ ಧಾರ್ಮಿಕ ಪ್ರಾಮುಖ್ಯ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಹಾಲು, ಗೊಬ್ಬರ, ಕೃಷಿ ಕೆಲಸ ಹಾಗೂ ಅದರ ಮಹತ್ವವನ್ನು ಒತ್ತಿ ಹೇಳಿದರು. ಆದರೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಗೋವನ್ನು ಧಾರ್ಮಿಕ ವಿಷಯವಾಗಿ ನೋಡುವ ಬದಲಿಗೆ ಆರ್ಥಿಕ ಮತ್ತು ಕೃಷಿ ಪ್ರಗತಿಯ ದೃಷ್ಟಿಕೋನದಿಂದ ನೋಡುವ ಮಹತ್ವವನ್ನು ಅರ್ಥಮಾಡಿಸಿದರು. ಆನಂತರ ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಸೇರಿಸಲು ಸಂವಿಧಾನ ಸಭೆ ನಿರ್ಧರಿಸಿತು.
ಬಾಬಾಸಾಹೇಬ್ ಅಂಬೇಡ್ಕರ್ ಗೋವಿನ ವಿಚಾರವನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡದೆ, ಅದನ್ನು ಚಾರಿತ್ರಿಕ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಅಸ್ಪಶ್ಯರು ಯಾರು? ಅವರು ಹೇಗೆ ಊರ ಹೊರಗೆ ವಾಸಿಸುವಂತಾಯಿತು? ಭಾರತದಲ್ಲಿ ಅಸ್ಪಶ್ಯತೆ ಹೇಗೆ ಉಗಮವಾಯಿತು ಎಂಬುದನ್ನು ವಿವರಿಸುವಾಗ ಗೋಮಾಂಸ ಭಕ್ಷಣೆಯ ಇತಿಹಾಸವನ್ನು ಸುದೀರ್ಘವಾಗಿ ಚರ್ಚಿಸಿದ್ದಾರೆ. ಭಾರತದ ಚರಿತ್ರೆ ಎಂದರೆ; ಬೌದ್ಧ ದಮ್ಮ ಹಾಗೂ ಬ್ರಾಹ್ಮಣ ಧರ್ಮಗಳ ನಡುವೆ ನಡೆದ ಮಾರಕವಾದ ಕಾಳಗವೇ ಆಗಿದೆ. ಪ್ರಾಚೀನ ಕಾಲದ ಚರಿತ್ರೆಯನ್ನು ಐತಿಹಾಸಿಕ ಗ್ರಂಥಗಳು ಮತ್ತು ವೇದಗಳ ಉಲ್ಲೇಖಗಳನ್ನು ನೀಡುತ್ತಲೇ ಪ್ರಾಚೀನ ಭಾರತದಲ್ಲಿ ಯಜ್ಞ-ಯಾಗಾದಿಗಳ ಸಂದರ್ಭದಲ್ಲಿ ಬ್ರಾಹ್ಮಣರು ಸೇರಿದಂತೆ ಆರ್ಯರು ಗೋಮಾಂಸವನ್ನು ಭಕ್ಷಿಸುತ್ತಿದ್ದರು ಎಂಬುದನ್ನು ಸಾಬೀತುಪಡಿಸಿದರು. ಬುದ್ಧನ ಅಹಿಂಸಾ ತತ್ವ ಮತ್ತು ಬೌದ್ಧ ದಮ್ಮದ ಜನಪ್ರಿಯತೆಯಿಂದಾಗಿ ಸಮಾಜದಲ್ಲಿ ಯಜ್ಞ ಮತ್ತು ಪ್ರಾಣಿ ಹಿಂಸೆಗೆ ಭಾರೀ ವಿರೋಧ ವ್ಯಕ್ತವಾಯಿತು. ಬೌದ್ಧ ಧರ್ಮಕ್ಕೆ ಪ್ರತಿಯಾಗಿ ಸಮಾಜದಲ್ಲಿ ತನ್ನ ಶೇಷ್ಠತೆಯನ್ನು ಉಳಿಸಿಕೊಳ್ಳಲು ವೈದಿಕ ಧರ್ಮವು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ಶಾಖಾಹಾರವನ್ನು ಅಪ್ಪಿಕೊಂಡಿತು ಮತ್ತು ಹಸುವನ್ನು ಪವಿತ್ರ ಎಂದು ಘೋಷಿಸಿತು. ಉಳಿದವರು ಗೋಮಾಂಸ ಭಕ್ಷಣೆಯನ್ನು ತ್ಯಜಿಸಿದ ಮೇಲೂ ನಾಗ ಕುಲದ ಬಿಡಿಜನರು ಗೋಮಾಂಸ ಭಕ್ಷಣೆಯನ್ನು ಮುಂದುವರಿಸಿದುದು ಅಸ್ಪಶ್ಯತೆಗೆ ಕಾರಣ ಮಾಡಲಾಯಿತು. ಈ ಜನತೆಯ ತೀವ್ರ ಬಡತನ ಹಾಗೂ ಸಾಮಾಜಿಕ ಬಹಿಷ್ಕಾರದಿಂದಾಗಿ ಸತ್ತ ದನಗಳ ಮಾಸಂವನ್ನು ತಿನ್ನುವುದನ್ನು ಮುಂದುವರಿಸಬೇಕಾಯಿತು. ಹಸುವನ್ನು ಪವಿತ್ರ ಎಂದು ನಂಬಿದ ವರ್ಗವು, ಸತ್ತ ಹಸುವಿನ ಮಾಂಸ ತಿನ್ನುವವರನ್ನು ಕೀಳಾಗಿ ಕಂಡು ಅವರನ್ನು ಸಮಾಜದಿಂದ ದೂರವಿಟ್ಟಿತು. ಇದು ಅಸ್ಪಶ್ಯತೆ ಬೆಳೆಯಲು ಮುಖ್ಯ ಕಾರಣವಾಯಿತು ಎನ್ನುತ್ತಾರೆ.
ಭಾರತದ ಕುಲಚಿಹ್ನೆಗಳ ಅಧ್ಯಯನಕಾರರ ಪ್ರಕಾರ; ರಾಷ್ಟ್ರೀಯ ಪಕ್ಷಿಯೆಂದು ಘೋಷಿಸಿಕೊಂಡ ನವಿಲು ಕೂಡ ದ್ರಾವಿಡ ಜನಾಂಗದ ಕುಲಮೂಲ ಟೊಟೆಂ, ರಾಷ್ಟ್ರೀಯ ಕುಸುಮವೆಂದು ಪರಿಗಣಿಸಿದ ಕಮಲ ಮೂಲದಲ್ಲಿ ಬೌದ್ಧರ ಮಾನಸಿಕ ಶುದ್ಧತೆ, ಪ್ರಫುಲ್ಲತೆಯ ಹಂತಗಳನ್ನು ಸೂಚಿಸುವ ಸಂಕೇತವಾಗಿತ್ತು. ಚಾರಿತ್ರಿಕ ನಡೆಗಳನ್ನು ಗಮನಿಸಿದಾಗ ಎತ್ತು, ಕೋಣ ಮುಂತಾದ ಬೇಸಾಯ ಸಂಬಂಧ ಪ್ರಾಣಿಗಳಾದ ಕಾರಣ ಆಯಾ ಸಮುದಾಯಗಳಿಗೆ ಕುಲಚಿಹ್ನೆಗಳಾಗಿ; ಇಂದಿಗೂ ಸಮುದಾಯ ನೆಲೆಯಲ್ಲಿ ಅವು ಕುಲಚಿಹ್ನೆಗಳಾಗಿವೆ. ಕುದುರೆ ಆರ್ಯರ ಅಲೆಮಾರಿತನ, ಶಕ್ತಿ, ಸಂಪತ್ತು ಮುಂತಾದವುಗಳ ಸಂಕೇತವಾಗಿ ಅವರ ಕುಲಚಿಹ್ನೆಯಾಗಿತ್ತು. ದ್ರಾವಿಡ ಮತ್ತು ದ್ರಾವಿಡೇತರ ಕುಲಚಿಹ್ನೆ, ಬಳಿ, ಗೋತ್ರಗಳೆಲ್ಲವೂ ಪ್ರಾಣಿ, ಪಕ್ಷಿ, ಮರ, ಗಿಡ, ಇಂಥವುಗಳಿಂದಲೇ ಗುರುತಿಸಲ್ಪಟ್ಟಿವೆ. ಇಷ್ಟೆಲ್ಲದರ ವಿಶೇಷವಿದ್ದರೂ ಆಕಳು ಯಾವ ಕಾಲಘಟ್ಟದಲ್ಲಿಯೂ ಕುಲಚಿಹ್ನೆಯಾಗಿ ಯಾವ ಸಮುದಾಯದಿಂದಲೂ ಗುರುತಿಸಲ್ಪಟ್ಟಿಲ್ಲ. ದಲಿತ ಹಾಗೂ ಶೋಷಿತ ಸಂಘಟನೆಗಳೆಲ್ಲವೂ ನಮ್ಮ ಆಹಾರ ನಮ್ಮ ಹಕ್ಕು ಎನ್ನುತ್ತಲೇ ‘‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ, ನಮ್ಮ ಭೂಮಿ ನಮಗೆ ಕೊಡಿ’’ ಎಂಬ ಆಂದೋಲನವನ್ನು ಮುನ್ನೆಲೆಗೆ ತರಬೇಕಿದೆ.






