Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಯಂತಿಗಳೆಂಬ ಪ್ರಸಕ್ತ ರಾಜಕಾರಣದ...

ಜಯಂತಿಗಳೆಂಬ ಪ್ರಸಕ್ತ ರಾಜಕಾರಣದ ಅಪಸವ್ಯಗಳು

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ7 April 2026 11:42 AM IST
share
ಜಯಂತಿಗಳೆಂಬ ಪ್ರಸಕ್ತ ರಾಜಕಾರಣದ ಅಪಸವ್ಯಗಳು

ತೋರಿಕೆಗೆ ಜರೂರಿ ಸಂಗತಿಗಳೆಂಬಂತೆ ಕಾಣುತ್ತಿರುವ ಜಯಂತಿಗಳು, ನಮ್ಮ ಮಹಾನ್‌ಸಂಸ್ಕೃತಿಯ ಹೆಮ್ಮೆಗಳೆಂಬಂತೆ ಕಾಣಿಸಿಕೊಳ್ಳುತ್ತಿರುವ ಜಾತ್ರೆಗಳು, ಉತ್ಸವಗಳು, ಊರ ಹಬ್ಬಗಳು ಅಸಲಿಗೆ ಯಾರಿಗೆ ಲಾಭ ತರುತ್ತಿವೆ? ಯಾರ ಬೊಕ್ಕಸಕ್ಕೆ ಲಗ್ಗೆಯಿಕ್ಕುತ್ತಿವೆ? ಯಾರ ಮನೆ ಮುರಿಯುತ್ತಿವೆ? ಎಂಬ ಅಂಶಗಳು ಗಮನಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ತರಹೇವಾರಿ ಜಯಂತಿಗಳು ನಿಜವಾಗಿಯೂ ಆಯಾ ಮಹಾಪುರುಷರ ಬಗೆಗಿನ ನಮ್ಮ ಪರಿಜ್ಞಾನ, ಪರಿಧಿಯನ್ನು ವಿಸ್ತರಿಸುತ್ತಿವೆಯೆ? ಜಯಂತಿಯ ಹೆಸರಿನಲ್ಲಿ ಕೂಗು ಹಾಕುತ್ತಿರುವ ರಾಜಕೀಯ ಪಕ್ಷಗಳ ಕೃಪಾಪೋಷಿತ ನಾಟಕ ಮಂಡಳಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಒಂದೆರಡು ವರ್ಷಗಳ ಹಿಂದೆ ಇರಬಹುದೆಂದು ತೋರುತ್ತದೆ. ಜಿಲ್ಲಾಡಳಿತದ ವತಿಯಿಂದ ‘ವಚನ ಪಿತಾಮಹ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಫ.ಗು. ಹಳಕಟ್ಟಿಯವರ ಜಯಂತಿ ಆಚರಿಸಲಾಗುತ್ತಿತ್ತು. ಹಳಕಟ್ಟಿಯವರ ಕುರಿತು ಮಾತಾಡಲು ಆಹ್ವಾನಿತಳಾಗಿದ್ದೆ. ಹಳಕಟ್ಟಿಯವರಂತಹ ಅಪರೂಪದ ವ್ಯಕ್ತಿಯನ್ನು ಕುರಿತು ಮಾತಾಡುವುದೆಂದರೆ ಯಾರಿಗಾದರೂ ಹೆಮ್ಮೆಯೇ. ನನಗೂ ಅತ್ಯಂತ ಹರುಷ ಮತ್ತು ಅಭಿಮಾನದ ಸಂಗತಿಯಾಗಿತ್ತು. ನಾನಾದರೋ ನನ್ನಲ್ಲಿದ್ದ ಪುಸ್ತಕ-ಪೋತಿಗಳನ್ನು ಜಾಲಾಡಿ ತಕ್ಕಮಟ್ಟಿನ ವಿಷಯ ಸಂಗ್ರಹ ಮಾಡಿಕೊಂಡು ಫಕಿರಪ್ಪ ಗುಂಡಪ್ಪ ಹಳಕಟ್ಟಿಯವರ ಕುರಿತು ಮಾತಾಡಲು ಉತ್ಸಾಹದಿಂದಲೇ ಸಭೆಗೆ ಹೋದೆ. ಕಾರ್ಯಕ್ರಮದ ಸಮಯವಾಯಿತಾದರೂ ಹೇಳಿಕೊಳ್ಳುವಷ್ಟು ಜನರೇನೂ ನೆರೆದಿರಲಿಲ್ಲ. ಸರಕಾರಿ ಕಾರ್ಯಕ್ರಮ ತಾನೆ. ಔಪಚಾರಿಕ ವಿಧಿ ವಿಧಾನಗಳಂತೆ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ರಾಜಕಾರಣಿಗಳ ಹೆಸರು, ಅಧ್ಯಕ್ಷತೆ ವಹಿಸಲು ಅಷ್ಟೇನೂ ಪರಿಚಿತರಲ್ಲದ (ಹಳಕಟ್ಟಿಯವರ ಜಾತಿಯವರು ಎಂಬ ಕಾರಣಕ್ಕಾಗಿ) ಹಿರಿಯರೊಬ್ಬರ ಹೆಸರು ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಒಂದೆರಡು ಸರಕಾರಿ ಶಾಲಾ ಮಕ್ಕಳನ್ನು ಹಿಡಿದು ತಂದರು. ಅಂತೂ ಕಾರ್ಯಕ್ರಮವೇನೋ ಪ್ರಾರಂಭವಾಯಿತು. ಕುಳಿತ ಸಭಿಕರನ್ನು ಗಮನಿಸಿದೆ. ಎಲ್ಲ ಹೊಸ ಮುಖಗಳು. ಎಂದೂ ಈ ಬಗೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ತೀರ ಅಸಹಜ ಶ್ರೋತೃಗಳು. ಸಂಘಟಕರಿಗೆ ಕೇಳಿದೆ. ಇವರೆಲ್ಲ ಯಾರು? ಅದ್ಹೇಗೆ ಇವರಿಗೆ ಫ.ಗು. ಹಳಕಟ್ಟಿಯವರ ಬಗೆಗೆ ಅಭಿಮಾನ ಉಕ್ಕಿ ಬಂದಿದೆ? ಅದಕ್ಕೆ ಅಧಿಕಾರಿಗಳು ‘‘ಅರೇ ನಿಮಗ ಗೊತ್ತಿಲ್ಲೇನ್ರಿ ಮೇಡಂ, ಇವರೆಲ್ಲ ಹಳಕಟ್ಟಿ ಜಾತಿ ಮಂದಿ. ಅವ್ರ ಜಾತಿ ಮುಖಂಡರು ಅವರನ್ನು ಕರಕೊಂಡ ಬಂದಾರ್ರಿ. ಅದೇ ಜಾತಿ ಮಂದಿ ಬಂದಾರ ಅಂತ ಸಭಾ ಸ್ವಲ್ಪರೆ ತುಂಬದಂಗ್‌ಆಗ್ಯಾದ್ರಿ. ಇಲ್ಲಕಂದ್ರ ಭಾಳ ಸಪ್ಪಗ್ ಅನಸ್ತಿತ್ತರೀ’’ ಅಂತ ಸಮಜಾಯಿಸಿ ನೀಡಿದರು. ನಾನು ದಂಗಾದೆ. ಇಲ್ಲಿಯವರೆಗೆ ಹಳಕಟ್ಟಿಯವರು ಅಂದರೆ ಅಖಂಡ ಬಸವಾಭಿಮಾನಿಗಳ ಗೌರವ ಮತ್ತು ಹೆಮ್ಮೆ ಎಂದು ಪರಿಗಣಿಸಿಕೊಂಡು ಬರಲಾಗಿತ್ತಷ್ಟೆ. ಯಾರಿಗೂ ಹಳಕಟ್ಟಿಯವರ ಉಪಜಾತಿ ಗೊತ್ತೇ ಇರಲಿಲ್ಲ. ಅವರು ಲಿಂಗಾಯಿತರಲ್ಲೇ ನೇಕಾರ ಸಮುದಾಯಕ್ಕೆ ಸೇರಿದವರೆಂಬ ಜಾತಿಯ ಕಣ್ಣೋಟದಿಂದ ನೋಡಬೇಕೆಂಬ ದರ್ದು ಯಾರಲ್ಲಿಯೂ ಉದ್ಭವ ಆಗಿರಲಿಲ್ಲ. ಹಳಕಟ್ಟಿಯಂಥ ಮಹಾನ್‌ತ್ಯಾಗಿಯೊಬ್ಬ ಕನ್ನಡ ನಾಡಿನಲ್ಲಿ ಹುಟ್ಟಿ ಬರದಿದ್ದರೆ ಇಂದು ನಾವು ಕಾಣುತ್ತಿರುವ ವಚನ ಭಂಡಾರವನ್ನು ಈ ಪರಿಯಲ್ಲಿ ನೋಡಲು ಸಿಗುತ್ತಿರಲಿಲ್ಲ. ವಚನ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗಾಗಿ ಅವರು ಮಾಡಿದ ತ್ಯಾಗ, ಹಾಕಿದ ಶ್ರಮ, ಪಟ್ಟ ಪಡಿಪಾಟಲು ಇವೆಲ್ಲ ಪದಗಳಲ್ಲಿ ಹಿಡಿದಿಡುವುದು ತುಂಬಾ ಔಪಚಾರಿಕತೆಯಾದೀತು. ಇಂಥ ಮಹಾತ್ಮನನ್ನು ಕುರಿತು ತಿಳಿದುಕೊಳ್ಳಬೇಕಾದುದು ಪ್ರತಿಯೊಬ್ಬ ಕನ್ನಡಿಗರ ಸಾಂಸ್ಕೃತಿಕ ಹೊಣೆಗಾರಿಕೆ. ಇಂಥ ಅಸಂಖ್ಯ ಘನವೆತ್ತ ವ್ಯಕ್ತಿತ್ವಗಳ ಕುರಿತು ಯಾವುದೋ ಒಂದು ದಿವಸ ಕಾಟಾಚಾರಕ್ಕೆ ಸ್ಮರಣೆ ಮಾಡುವುದರಿಂದ ಏನೂ ಆಗುವುದಿಲ್ಲ. ಅದಕ್ಕಿಂತ ದುರಂತದ ಅಂಶವೆಂದರೆ ಜಾತಿ ಚಹರೆಗಳಿಲ್ಲದೆ ಗುರುತಿಸಿಕೊಳ್ಳುತ್ತಿದ್ದ ಮಹಾನ್ ದಾರ್ಶನಿಕರನ್ನು, ಅಪರೂಪದ ಸಾಧಕರನ್ನು, ಸಮರಧೀರ ಹೋರಾಟಗಾರರನ್ನು ಪ್ರಸಕ್ತ ರಾಜಕಾರಣವು ತನ್ನ ತುಷ್ಟೀಕರಣದ ಗೀಳಿಗೆ ಬಿದ್ದು ಮೈಲಿಗೆಗೊಳಿಸಿಬಿಟ್ಟಿದೆ. ಜಾತಿಗೊಬ್ಬ ಸಾಧಕರನ್ನು ಹೆಕ್ಕಿ ಆಯಾ ಜಾತಿಗಳ ಜನರಲ್ಲಿ ಅಂಧಾಭಿಮಾನ ತುಂಬಿಸುವಲ್ಲಿಯೇ ಸರಕಾರಿ ಜಯಂತಿಗಳು ತೋಪೆದ್ದು ಹೋಗಿವೆ.

ಚಿಕ್ಕವರಿದ್ದಾಗ ಅಕ್ಟೋಬರ್ 2 ಬಂತು ಅಂದರೆ ಖುಷಿಯೋ ಖುಷಿ. ಅದರೊಟ್ಟಿಗೆ ಎಪ್ರಿಲ್, ಮೇ ತಿಂಗಳು ಬಂದೊಡನೆ ಜಗಜ್ಯೋತಿ ಬಸವೇಶ್ವರ ಮತ್ತು ಬಾಬಾಸಾಹೇಬರ ಜಯಂತಿಗಳ ಭರಭರಾಟೆ. ಕಲ್ಯಾಣ ಕರ್ನಾಟಕ ಭಾಗದ ಮಂದಿ 43-44 ಡಿಗ್ರಿ ಬಿಸಿಲನ್ನು ಲೆಕ್ಕಿಸದೆ ಬಿರು ಬಿಸಿಲಿನಲ್ಲಿ ಜಯಘೋಷಗಳನ್ನು ಹಾಕುತ್ತ, ಇನ್ನೊಂದೆಡೆ ಲೇಜಿಮ್ ಕುಣಿತ, ಡೊಳ್ಳು ಕುಣಿತ, ಭಜನೆ, ವಚನ ಗಾಯನ ಮುಂತಾಗಿ ಭರ್ತಿ ಜೋಷ್‌ನೊಂದಿಗೆ ಮೆರವಣಿಗೆಗಳು ಹೊರಟರೆ ಕ್ಷಣ ಹೊತ್ತು ನಿಂತು ನೋಡುವ ಉಮೇದು ಬರುತ್ತಿತ್ತು. ಹಾಗೆ ನೋಡಿದರೆ ಎಲ್ಲ ಜಯಂತಿಗಳಲ್ಲಿ ಎಲ್ಲ ಸಮುದಾಯಗಳು ಬೆರೆತು ಆಚರಿಸುತ್ತಿದ್ದರಂತೇನೂ ಇರಲಿಲ್ಲ. ಆದರೂ ಬಸವಣ್ಣನವರ ಜಯಂತಿಯಲ್ಲಿ ಲಿಂಗಾಯತರಾದಿ ಎಲ್ಲ ಶೂದ್ರ ಸಮುದಾಯಗಳು ಒಟ್ಟಿಗೆ ಸೇರುವುದಿತ್ತು. ಇನ್ನೊಂದೆಡೆ ಭಾರತರತ್ನ ಬಾಬಾಸಾಹೇಬರ ಜಯಂತಿಗೆ ಎಲ್ಲ ಶೋಷಿತ ಸಮುದಾಯಗಳು ಒಟ್ಟಿಗೆ ಸೇರಿ ಸ್ವಾಭಿಮಾನದ ಹೆಜ್ಜೆ ಹಾಕುವುದಿತ್ತು. ‘ಜಯಂತಿ’ ಎಂಬ ವಿದ್ಯಮಾನಕ್ಕೆ ಸಾಂಸ್ಕೃತಿಕ ಮಹತ್ವವೂ ಆಚರಣಾ ಖದರೂ ಇತ್ತು. ಆದರೆ ಈಗ ಲೆಕ್ಕವಿಲ್ಲದಷ್ಟು ಜಯಂತಿಗಳು ಆಯಾ ಜಾತಿ, ಉಪಜಾತಿಗಳಲ್ಲಿನ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಆಚರಿಸಲಾಗುತ್ತಿವೆ. ಇದು ಜಯಂತಿಗಳ ದುಷ್ಪರ್ವ ಕಾಲ.

ಕಾಲಕಾಲಕ್ಕೂ ಆಳ್ವಿಕೆ ನಡೆಸಿಕೊಂಡು ಬರುತ್ತಿರುವ ಸರಕಾರಗಳು ಯಾವತ್ತೂ ಜನರ ಯೋಗಕ್ಷೇಮವನ್ನು ತನ್ನ ಆದ್ಯತೆಯಾಗಿ ಪರಿಗಣಿಸಿಯೇ ಇಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಮಣ್ಣು ಮುಕ್ಕಿಸಿದ ಚುನಾವಣಾ ಪ್ರಕ್ರಿಯೆಯೂ ಜನರ ಪ್ರಜ್ಞೆಯನ್ನು ರಾಜಕೀಯವಾಗಿ ಎತ್ತರಿಸುವ ಬದಲು ಅವರನ್ನು ಖರೀದಿಸಿಗೊಳಿಸಬಹುದಾದ ಅಥವಾ ಮರುಳು ಮಾಡಬಹುದಾದ ಮತಗಳೆಂದೇ ಪರಿಗಣಿಸಿಕೊಂಡು ಬರುತ್ತಿದೆ. ಜನರನ್ನು ಮತಬ್ಯಾಂಕುಗಳಾಗಿ ನಿರ್ವಹಿಸಿಕೊಂಡು ಬರುತ್ತಿರುವ ರಾಜಕೀಯ ಪಕ್ಷಗಳು ಜನರಲ್ಲಿ ಅಂಧಾಭಿಮಾನ ತುಂಬುವ ಮೂಲಕವೇ ತಮ್ಮ ಬೇಳೆ ಬೇಯಿಸಿಕೊಳ್ಳಬಹುದೆಂದು ಭಾವಿಸುತ್ತವೆ ಮತ್ತು ಆ ದಿಸೆಯಲ್ಲಿ ಕ್ರಿಯಾಶೀಲವಾಗುತ್ತವೆ. ಇದಕ್ಕೆ ಜ್ವಲಂತ ಉದಾಹರಣೆಯೇ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಘೋಷಣೆಯಾದ ಪುಂಖಾನುಪುಂಖ ಜಯಂತಿ ಆಚರಣೆಗಳು. ಸರಾಸರಿ ವರ್ಷಕ್ಕೆ 30ಕ್ಕೂ ಹೆಚ್ಚು ಜಯಂತಿಗಳು ಆಚರಿಸಿಕೊಂಡು ಬರಲಾಗುತ್ತಿದೆ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಯಂತಿ ಆಚರಣಾ ಇಲಾಖೆಯಾಗಿ ಪರಿವರ್ತನೆಗೊಂಡಂತಿದೆ. ಕನ್ನಡ ಭಾಷೆ, ಕನ್ನಡಿಗರ ಸಂಸ್ಕೃತಿ ಕನ್ನಡಿಗರ ಅಭ್ಯುದಯವು ಆದ್ಯತೆಯಾಗಿ ಉಳಿದಿಲ್ಲ. ಇಲಾಖೆಯ ಸಿಬ್ಬಂದಿಯು ಆಫ್‌ದಿ ರೆಕಾರ್ಡ್ ಹೇಳುವಂತೆ ಜಯಂತಿಗಳ ಆಚರಣಾ ಪ್ರಕ್ರಿಯೆಯಲ್ಲಿ ಜಾತಿ-ಧರ್ಮಗಳ ಮುಖಂಡರನ್ನು ಓಲೈಸುವುದು ಬಿಟ್ಟರೆ ಬೇರೆ ಕೆಲಸವಿಲ್ಲ.

ಪ್ರತೀ ಜಯಂತಿಗೂ ಆಯಾ ಸಮುದಾಯದವನ್ನು ಅಣಿ ನೆರೆಸಿ ಮಿಟೀಂಗ್‌ಮಾಡುವುದು. ನಂತರ ಅವರು ಮನಬಂದಂತೆ ಕೊಡುವ ಸೂಚನೆಗಳನ್ನು ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ಆಲಿಸುವುದು, ಅವರು ಹೇಳಿದ ಅತಿಥಿಗಳನ್ನೇ ಆಹ್ವಾನಿಸುವುದು. ನಂತರ ಮೆರವಣಿಗೆ. ಇದಕ್ಕಾಗಿಯಂತೂ ಸರಕಾರಿ ಶಾಲೆಯ ಬಡಮಕ್ಕಳನ್ನು ಪಾಠ, ಆಟೋಟಗಳಿಂದ ವಂಚಿಸಿ ಸಭೆಯಲ್ಲಿ ತಂದು ಕೂಡಿಸುವುದು. ಪ್ರೇಕ್ಷಕರ ಕೊರತೆಯನ್ನು ಭರಿಸಲು ಬಡಮಕ್ಕಳು ವಿದ್ಯೆಯಿಂದ ವಂಚಿತರಾಗಬೇಕು. ಇಂಥ ಅಪಸವ್ಯಗಳು ಪ್ರಜ್ಞಾವಂತ ಶಿಕ್ಷಕರಿಗೆ ಇರಿಸು ಮುರಿಸು ಉಂಟು ಮಾಡಿದರೆ, ಮೈಗಳ್ಳ ಮೇಷ್ಟ್ರುಗಳಿಗೆ ರಸದೌತಣವೂ ಆಗಬಲ್ಲವು. ಸಭೆಯಲ್ಲಿ ಕಾಟಾಚಾರದ ಪೂಜೆ. ಮಾಲಾರ್ಪಣೆ, ಒಂದು ಭೀಕರ ಭಾಷಣ. ಮರುದಿನ ಪತ್ರಿಕೆಯಲ್ಲಿ ಒಂದಷ್ಟು ಸುದ್ದಿ, ಫೋಟೊ ಇತ್ಯಾದಿ. ಇಷ್ಟು ಬಿಟ್ಟರೆ ಇಲ್ಲಿ ಸಾಧಿತವಾದುದು ಶೂನ್ಯ. ಅಸಲಿಗೆ ಈ ಜಯಂತಿಗಳು ಜನರಲ್ಲಿ ಅಸ್ಮಿತೆ ತುಂಬುವ ಬದಲು ಅಂಧಾಭಿಮಾನಕ್ಕೆ ದಾರಿ ಮಾಡಿಕೊಡುತ್ತಿವೆ. ದಿನ ಬೆಳಗಾದರೆ ಒಂದಿಲ್ಲೊಂದು ಜಯಂತಿಗಳು ಇದಿರಾಗುತ್ತವೆ. ಒತ್ತಡದ ಕಾರ್ಯಬಾಹುಳ್ಯದ ನಡುವೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಅಥವಾ ಆಯಾ ಕ್ಷೇತ್ರದ ಶಾಸಕರು ಕಾರ್ಯಕ್ರಮಕ್ಕೆ ಗೈರು ಹಾಜರಾದರೆ ಮುಗಿಯಿತು. ಸಮುದಾಯದ ಮರಿ ಕಿರಿ ನಿರುದ್ಯೋಗಿ ಪುಢಾರಿಗಳ ಹಾರಾಟ, ಚೀರಾಟ ಸುರುವಿಟ್ಟುಕೊಳ್ಳುತ್ತವೆ. ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಮಹಾಪುರುಷರಿಗೆ ಅಪಮಾನ ಮಾಡಲಾಗಿದೆ ಅಥವಾ ಅವರು ಚಪ್ಪಲಿ ಹಾಕಿಕೊಂಡು ಮಾಲಾರ್ಪಣೆ ಮಾಡುವುದರ ಮೂಲಕ ಮಹಾಪುರುಷರಿಗೆ ಅಗೌರವ ತೋರಿದ್ದಾರೆ ಮುಂತಾಗಿ ಅನುಪಯೋಗಿ ಅರ್ಥಹೀನ ಆರೋಪಗಳ ಸುರಿಮಳೆಯಾಗುತ್ತದೆ. ನಮ್ಮ ನಾಯಕರಿಗೂ ಇಂಥ ಜನಮರುಳುಗೊಳ್ಳುವ ಜಾತ್ರೆಗಳೇ ಆಗಬೇಕು.

ಈಗೀಗಲಂತೂ ಸರಕಾರಿ ಸಂಸ್ಥೆ, ಶಾಲಾ, ಕಾಲೇಜುಗಳಲ್ಲಿ ಎಲ್ಲ ಜಯಂತಿಗಳನ್ನು ಕಡ್ಡಾಯವಾಗಿ ಆಚರಿಸಬೇಕೆಂಬ ಆದೇಶವನ್ನು ಹೊರಡಿಸಲಾಗಿರುವುದರಿಂದ ದೊಡ್ಡ ಪೀಕಲಾಟಕ್ಕೆ ಇಟ್ಟುಕೊಂಡಿದೆ. ಮಜಕೂರವೆಂದರೆ ಸರಕಾರದ ಈ ಆದೇಶಗಳು ಸರಕಾರಿ, ಅರೆಸರಕಾರಿ ಶಾಲಾ, ಕಾಲೇಜು, ಹಾಸ್ಟೆಲ್‌ಗಳಿಗೆ ಮಾತ್ರ ಅನ್ವಯಿಸುತ್ತವೆ. ಕಾರ್ಪೊರೇಟ್‌ಸಂಸ್ಥೆಗಳು, ಭಾರೀ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಈ ಆದೇಶಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ.

ದುಬಾರಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಶ್ರೀಮಂತರ ಮಕ್ಕಳು ವೃಥಾ ಕಾಲಹರಣ ಮಾಡದೆ ಸಮಕಾಲೀನ ತಂತ್ರಜ್ಞಾನದ ಮೂಲ-ಚೂಲಗಳನ್ನು ಅರೆದು ಕುಡಿದು ಅದರಲ್ಲಿ ಪರಿಣತಿ ಸಾಧಿಸಿ ದೊಡ್ಡ ದೊಡ್ಡ ಕಾರ್ಪೊರೇಟ್‌ಕಂಪೆನಿಗಳಲ್ಲಿ ಅಥವಾ ಸರಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ಪಡೆದು ಐಷಾರಾಮಿ ಜೀವನ ಕಳೆಯುತ್ತಿದ್ದರೆ ಬಡವರ ಮಕ್ಕಳು ಮಾತ್ರ ಇಂಥ ಅಪ್ರಾಸಂಗಿಕ ಕಾರ್ಯಕ್ರಮಗಳಲ್ಲಿ ಕಳೆದು ಹೋಗಬೇಕು. ಅದೂ ಸರಕಾರಿ ಅಧಿಕಾರಿಗಳ ಕರ್ತವ್ಯ ಯಜ್ಞಕ್ಕೆ ಹವಿಸ್ಸಾಗಿ ಬಳಕೆಯಾಗಬೇಕಷ್ಟೇ.

ಎಲ್ಲ ಜನತೆ ತಮ್ಮ ಪರಂಪರೆಯಲ್ಲಿನ ಮಹಾನ್ ನಡೆ-ನುಡಿಗಳನ್ನು ಆದರ್ಶವಾಗಿ ಪಾಲಿಸಿಕೊಂಡು ಬರುವಂತೆ ಮಾಡಬೇಕಾದುದು ಪ್ರಜ್ಞಾವಂತ ಸರಕಾರದ ಹೊಣೆಗಾರಿಕೆ. ಜನಹಿತಕ್ಕಾಗಿ ದುಡಿದ ವ್ಯಕ್ತಿ-ಶಕ್ತಿಗಳನ್ನು ದೇಶದ ಅಭಿಮಾನವಾಗಿ ಮಾಡದೆ ಜಾತಿಗಳ ಐಕಾನ್‌ಗಳಾಗಿ ಮಾಡಿದ್ದು ಈ ದಶಮಾನದ ಬಹು ದೊಡ್ಡ ದುರಂತಗಳಲ್ಲೊಂದಾಗಿದೆ. ಪರಸ್ಪರ ಎಲ್ಲರೂ ಸೇರಿ ಮಹಾಪುರುಷರನ್ನು ಸಂದರ್ಭೋಚಿತವಾಗಿ ಅನುಸಂಧಾನಿಸಬೇಕಾದ ಸಾಂಸ್ಕೃತಿಕ ಆಯಾಮಗಳನ್ನು ಬೇಕೆಂದೇ ಜಾತಿ ಸಂಕೇತಗಳನ್ನಾಗಿ ಪರಿವರ್ತಿಸಲಾಗಿದೆ. ಜನತೆಯು ಎಂದೆಂದೂ ಒಂದಾಗದಂತೆ ತಮ್ಮ ತಮ್ಮಲ್ಲಿಯೇ ಹೊಡೆದಾಡುವಂತೆ ನೋಡಿಕೊಳ್ಳಲೆಂದೇ ಈ ಬಗೆಯ ಅಂಧಾಭಿಮಾನವನ್ನು ಹುಟ್ಟು ಹಾಕಲಾಗುತ್ತಿದೆ. ಇಂದು ನಾವು ಕಾಣುತ್ತಿರುವ ಸಾಂಸ್ಕೃತಿಕ ಅಪಸವ್ಯಗಳು ತಮ್ಮಷ್ಟಕ್ಕೆ ತಾವು ಸುಖಾಸುಮ್ಮನೆ ಸೃಷ್ಟಿಯಾದವುಗಳಲ್ಲ. ಅವುಗಳ ಹಿಂದೆ ಬೃಹತ್‌ಬಂಡವಾಳಶಾಹಿಗಳ ಲಾಭಕೋರ ಹುನ್ನಾರಗಳು ಅಡಗಿಕೊಂಡಿವೆ.

ತನ್ನ ವಿರೋಧಿ ಮೌಲ್ಯಗಳನ್ನೇ ಜನತೆ ಸುಖಿಸುವಂತೆ ಮಾಡಲು ಬಂಡವಾಳವಾದ ಆಕರ್ಷಕ ನೇಟಿವಿಟಿ ಎಂಬ ವಾದ ಹರಿಬಿಡುತ್ತದೆ. ಇದಕ್ಕೆ ತಾತ್ವಿಕ ಒತ್ತಾಸೆ ನೀಡಲೆಂದೇ ಜಾಗತಿಕ ಮಟ್ಟದಲ್ಲಿ ‘ಆಧುನಿಕೋತ್ತರವಾದ’ವು ಹುರಿಗೊಂಡಿದೆ. ಆಧುನಿಕೋತ್ತರವಾದ ಮೊದಲು ಜನರನ್ನು ಅಸ್ಮಿತೆಯ ಹೆಸರಿನಲ್ಲಿ ತುಂಡು ತುಂಡಾಗಿ ಒಡೆಯುತ್ತದೆ. ಸಮುದಾಯಗಳೊಳಗಿನ ಉಪಸಮುದಾಯಗಳನ್ನು ಸ್ವಾಭಿಮಾನದ ಹೆಸರಿನಲ್ಲಿ ದ್ವೀಪಗಳನ್ನಾಗಿಸುತ್ತದೆ. ಗತದಲ್ಲಿ ಸಂಭವಿಸಿರಬಹುದಾದ ಎಲ್ಲ ಅಂಶಗಳನ್ನು ಮುನ್ನೆಲೆಗೆ ತಂದು ಅವಶ್ಯಕತೆಗಿಂತ ಹೆಚ್ಚಾಗಿ ಅವುಗಳನ್ನು ವೈಭವೀಕರಿಸಲಾಗುತ್ತದೆ. ಅಲ್ಲಿನ ಅಪಸವ್ಯಗಳನ್ನು ಕೂಡ ಸಮರ್ಥಿಸಿಕೊಂಡು ಕಳಚಿಕೊಳ್ಳಬೇಕಾದುದನ್ನು ಉಳಿಸಿಕೊಳ್ಳುವಂತೆ ಮೋಹಕಗೊಳಿಸುತ್ತದೆ. ಜನರು ಚಿಕ್ಕ ಸಮುದಾಯಗಳಲ್ಲಿ ಗುರುತಿಸಿಕೊಳ್ಳುವ ಮೂಲಕವೇ ಅಭಿವೃದ್ಧಿ ಸಾಧಿಸಬಹುದೆಂದು ನಂಬಿಸಲಾಗುತ್ತದೆ. ಪರರ ಚಿಂತೆ ನಿಮಗೇಕೆ? ನಿಮ್ಮ ಚಿಂತೆ ನಿಮಗೆ ಹಾಸಲುಂಟು. ಹೊದೆಯಲುಂಟು ಎಂದು ಹೇಳುತ್ತ ಜನಸಮುದಾಯಗಳು ತಮ್ಮೆಲ್ಲರಿಗೂ ಸಮಾನವಾಗಿರುವ ಅನ್ನ, ಆರೋಗ್ಯ, ಉದ್ಯೋಗ, ಶಿಕ್ಷಣ, ಕೂಲಿ ಇತ್ಯಾದಿ ಸಮಸ್ಯೆಗಳ ಬಗೆಗೆ ಗಮನ ಹರಿಸದಂತೆ ನೋಡಿಕೊಳ್ಳುತ್ತದೆ. ಉದಾಹರಣೆಗೆ ಸರ್ವಜ್ಞ ಕವಿಯ ಜಯಂತಿಯನ್ನೇ ನೋಡಬಹುದು. ಇಲ್ಲಿಯವರೆಗೆ ಸರ್ವಜ್ಞ ಕವಿಯ ಕುರಿತು ಇದಮಿತ್ಥಂ ಎನ್ನುವಂತಹ ಐತಿಹಾಸಿಕ ವಿವರಗಳು ದಕ್ಕಿಯೇ ಇಲ್ಲ. ಸರ್ವಜ್ಞ ಎಂಬುದು ಕೂಡ ಕವಿಯ ಮೂಲ ನಾಮವೆ? ಅಥವಾ ಕವಿಯ ಅಂಕಿತವೆ? ನಿಷ್ಕರ್ಷೆ ಮಾಡಲಾಗಿಲ್ಲ. ಆತನ ಕುರಿತು ಕೆಲವು ದಂತಕಥೆಗಳು, ಊಹೆಗಳು ಬಿಟ್ಟರೆ ಚಾರಿತ್ರಿಕ ಸಂಗತಿಗಳು ಸಿಕ್ಕಿದ್ದು ವಿರಳಾತಿವಿರಳ. ಹೀಗಿರುವಾಗಲೂ ಆತ ಕುಂಬಾರ ಜಾತಿಗೆ ಸೇರಿದವನೆಂದು ಅಂಕಿತಗೊಳಿಸಿ ಕುಂಬಾರರ ತುಷ್ಟೀಕರಣಕ್ಕಾಗಿಯೇ ಸರ್ವಜ್ಞ ಜಯಂತಿ ಆಚರಣೆಗೆ ಶುರುವಿಟ್ಟುಕೊಂಡದ್ದು ನೋಡುತ್ತಿದ್ದೇವೆ. ಇಷ್ಟರಿಂದಲೇ ಸಂಭ್ರಮಿತ, ಸಂಭ್ರಾಂತರಾದ ಕುಂಬಾರ ಸಮುದಾಯವು ತಮ್ಮ ವೃತ್ತಿಗೆ ಬಂದ ಸಂಚಕಾರ, ತಮ್ಮ ದೈನಂದಿನ ಸಮಸ್ಯೆಗಳ ಬಗೆಗೆ ಆಲೋಚಿಸುವುದನ್ನೇ ತೊರೆಯುವಂತೆ ಮಾಡಲಾಯಿತು. ಹೂಗಾರ, ಕಂಬಾರ, ಮಾಲಗಾರ, ಉಪ್ಪಾರ, ನಾವಿಂದ, ತಳವಾರ, ಮಡಿವಾಳ ಮುಂತಾದ ಚಿಕ್ಕದರಲ್ಲಿಯೇ ಚಿಕ್ಕ ವೃತ್ತಿ ಸಮುದಾಯಗಳು ಇಂಥ ಜಾತ್ರೆಗಳಲ್ಲಿ ಕಳೆದು ಹೋಗಿ ತಮ್ಮ ವೃತ್ತಿಗಳು ನೆಲಕಚ್ಚಿದ್ದು ತತ್ಕಾರಣವಾಗಿ ತಮ್ಮ ಆದಾಯದ ಮೂಲಗಳು ಕಳೆದು ಹೋದದ್ದು, ತಾವು ತಯಾರಿಸಿದ ವಸ್ತುಗಳಿಗೆ ಸಿಕ್ಕಾಪಟ್ಟೆ ಬೆಲೆ ಇದ್ದರೂ ತಾವು ವಿನಿಯೋಗಿಸಿದ ಶ್ರಮಕ್ಕೆ ಬೆಲೆ ಸಿಗದಂತೆ ಇರುವುದು. ತಮ್ಮ ವೃತ್ತಿ ಕೌಶಲ್ಯವು ಕ್ಲಾಸಿಕ್ ಕಲೆಯಾಗಿ ದೊಡ್ಡ ಕಂಪೆನಿಗಳು ಅದನ್ನೂ ಲಪಟಾಯಿಸಿದ್ದು ಇತ್ಯಾದಿ ಮೂಲದ ಸಮಸ್ಯೆಗಳನ್ನು ಅರಿಯದಂತೆ ಮಾಡಲಾಗುತ್ತಿದೆ.

ಈ ಎಲ್ಲ ಸಮುದಾಯಗಳ ಹದಿ ಹರೆಯದ ಮಕ್ಕಳು ತಮ್ಮ ಪಾಲಕರ ನೋವು-ನಲಿವಿಗೂ ಸ್ಪಂದಿಸಲು ಆಸ್ಪದವಿಲ್ಲದಂತೆ ತರಹೇವಾರಿ ಜಯಂತಿಗಳಲ್ಲಿ ಕಳೆದು ಹೋಗಿದ್ದಾರೆ. ತಮ್ಮ ಸಮುದಾಯದ ಪುಢಾರಿಗಳ ಬಾಡಿಗೆ ಬಂಟರಾಗಿ, ಕೋಮುವಾದಿ ಹೋಮ-ಹವನಾದಿಗಳಿಗೆ ಆಜ್ಯವಾಗಿ ಉರಿದು ಹೋಗುತ್ತಿದ್ದಾರೆ.

ಒಟ್ಟಾರೆ ತೋರಿಕೆಗೆ ಜರೂರಿ ಸಂಗತಿಗಳೆಂಬಂತೆ ಕಾಣುತ್ತಿರುವ ಜಯಂತಿಗಳು, ನಮ್ಮ ಮಹಾನ್‌ಸಂಸ್ಕೃತಿಯ ಹೆಮ್ಮೆಗಳೆಂಬಂತೆ ಕಾಣಿಸಿಕೊಳ್ಳುತ್ತಿರುವ ಜಾತ್ರೆಗಳು, ಉತ್ಸವಗಳು, ಊರ ಹಬ್ಬಗಳು ಅಸಲಿಗೆ ಯಾರಿಗೆ ಲಾಭ ತರುತ್ತಿವೆ? ಯಾರ ಬೊಕ್ಕಸಕ್ಕೆ ಲಗ್ಗೆಯಿಕ್ಕುತ್ತಿವೆ? ಯಾರ ಮನೆ ಮುರಿಯುತ್ತಿವೆ? ಎಂಬ ಅಂಶಗಳು ಗಮನಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ತರಹೇವಾರಿ ಜಯಂತಿಗಳು ನಿಜವಾಗಿಯೂ ಆಯಾ ಮಹಾಪುರುಷರ ಬಗೆಗಿನ ನಮ್ಮ ಪರಿಜ್ಞಾನ, ಪರಿಧಿಯನ್ನು ವಿಸ್ತರಿಸುತ್ತಿವೆಯೆ? ಜಯಂತಿಯ ಹೆಸರಿನಲ್ಲಿ ಕೂಗು ಹಾಕುತ್ತಿರುವ ರಾಜಕೀಯ ಪಕ್ಷಗಳ ಕೃಪಾಪೋಷಿತ ನಾಟಕ ಮಂಡಳಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

Tags

political
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X