ಕರಾವಳಿ ಜೈನ ಬಂಗರಸರ ಇತಿಹಾಸ ಮತ್ತು ದಲಿತ-ಬಿಲ್ಲವ ಜನಪದದ ವಿಕೃತ ಪ್ರಸ್ತುತಿ ಕಾಂತಾರ-1

ಯಾವಾಗೆಲ್ಲ ಮನುಷ್ಯ ಅಧರ್ಮದ ಕಡೆಗೆ ಸಾಗುತ್ತಾನೋ, ಆಗ ಧರ್ಮ ಕಾಪಾಡಲು ಈಶ್ವರ ದೇವರು ಗಣಗಳನ್ನು ಭೂಮಿಗೆ ಕಳುಹಿಸುತ್ತಾರೆ. ಆ ಎಲ್ಲಾ ಗಣಗಳು ಬಂದು ದೈವಗಳಾಗಿ ನೆಲೆಸಿದ್ದು ಈ ಪುಣ್ಯ ಮಣ್ಣಿನಲ್ಲಿ ಎಂಬ ತಪ್ಪು ನಿರೂಪಣೆಯೊಂದಿಗೆ ಕಾಂತಾರ -1 ಸಿನೆಮಾ ಆರಂಭವಾಗುತ್ತದೆ. ಆ ಬಳಿಕ ಬಂಗ ಅರಸರು, ದೇಯಿ ಎಂಬ ಸಾಕುತಾಯಿ, ಬೆರ್ಮೆ ಎಂಬ ಸಾಕು ಮಗ, ಗುಳಿಗ, ಪಂಜುರ್ಲಿ, ಪಿಲಿಚಂಡಿಯ ಕತೆಗಳ ಮೂಲಕ ಇತಿಹಾಸ ಮತ್ತು ಜನಪದವನ್ನು ವಿಕೃತಗೊಳಿಸಿ ಜೋಡಣೆ ಮಾಡಿ ಕಾಂತಾರ -1 ನಿರ್ಮಿಸಲಾಗಿದೆ.
ಕರಾವಳಿಯ ಜನಪದ ಪಾಡ್ದನದ ಪ್ರಕಾರ: ದೇಯಿ ಬೈದ್ಯೆತಿ ಎಂಬ ಬಿಲ್ಲವರ ಕ್ರಾಂತಿಕಾರಿ ಮಹಿಳೆ ಹಲವು ಜನಪದ ನಾಯಕರ ಸಾಕುತಾಯಿ. ವೀರ ಪುರುಷರಾದ ಕೋಟಿ ಚೆನ್ನಯರ ತಾಯಿಯಾದ ದೇಯಿ ಬೈದ್ಯೆತಿ ಕರಾವಳಿಯ ‘ಬಂಡಾಯದ ಮಹಿಳೆ’ಯ ಸಂಕೇತ. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಕೊರಗ ಸಮುದಾಯದ ಕೊರಗ ತನಿಯ (ಕೊರಗಜ್ಜ)ರ ಸಾಕು ತಾಯಿಯೂ ದೇಯಿ ಬೈದ್ಯೆತಿ. ಮನ್ಸ ಸಮುದಾಯದ ಕಾನದ ಕಟದರ ತಾಯಿ ಬೊಲ್ಲೆಯ ಸಾಕು ತಾಯಿ ಕೂಡಾ ದೇಯಿ ಬೈದ್ಯೆತಿ. ಬೊಲ್ಲೆಯೊಂದಿಗೆ ಕಾನದ ಕಟದರೂ ಕೂಡಾ ದೇಯಿ ಜೊತೆಯೇ ಬೆಳೆಯುತ್ತಾರೆ. ಮುಂದೆ ಕಾನದ-ಕಟದರು ಅರಸರೊಂದಿಗೆ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಿ, ಭೂಮಿ ಪಡೆದುಕೊಂಡು ಕಾಡು ಜಾಗವನ್ನು ಸಮತಟ್ಟುಗೊಳಿಸಿ ವ್ಯವಸಾಯ ಮಾಡುತ್ತಾರೆ. ಅಸ್ಪಶ್ಯ ದಲಿತ ಸಮುದಾಯವೊಂದು ಭೂಮಿ ಪಡೆದುಕೊಳ್ಳುವ ರೋಚಕ ಕತೆ ಕಾನದ ಕಟದರದ್ದು. ಕರಾವಳಿಯ ಸತ್ಯದ ಬೆಳೆ ಎಂದು ಕರೆಯಲ್ಪಡುವ ಕುಚ್ಚಲಕ್ಕಿಯ ಒಂದು ತಳಿಯಾಗಿರುವ ‘ಅತಿಕಾರೆ ಭತ್ತ’ವನ್ನು ನಾಡಿಗೆ ಪರಿಚಯಿಸಿದ್ದೇ ಕಾನದ ಕಟದರು ಎಂಬ ಅವಳಿ ವೀರರು ಎಂದು ಜನಪದ ಕತೆ ಹೇಳುತ್ತದೆ. ಜಾರಂದಾಯನ ಕತೆಯಲ್ಲಿ ಅಪ್ಪುಬೈದ್ಯೆತಿ-ಜತ್ತಿ ಬೈದ್ಯರಿಗೆ ಕಾರ್ಣಿಕದ ಕಲ್ಲು ನದಿಯಲ್ಲಿ ಸಿಗುತ್ತದೆ. ಜತ್ತಿ ಬೈದ್ಯರೂ ಕೊನೆಗೆ ಜಾರಂದಾಯ ದೈವದ ಹೆಸರಿನಲ್ಲಿ ಜಮೀನ್ದಾರಿ ಪದ್ಧತಿ ವಿರುದ್ಧ ಹೋರಾಡಿ ಮಾಯವಾಗುತ್ತಾರೆ. ಇದೆಲ್ಲವೂ ಕರಾವಳಿ ದೈವಾರಾಧನೆಯ ಪಾಡ್ದನದಲ್ಲಿದೆ.
‘ಬೈದ್ಯೆತಿ’ ಎಂಬ ಬಿಲ್ಲವ ಮಹಿಳೆ ಸಾಕಿದ ಕೋಟಿ ಚೆನ್ನಯ, ಕೊರಗ ತನಿಯ, ಕಾನದ ಕಟದ, ಅಪ್ಪುಬೈದ್ಯೆತಿ, ಜತ್ತಿ ಬೈದ್ಯ ಇವರೆಲ್ಲರೂ ತುಳುನಾಡಿನ ಅಸ್ಪೃಶ್ಯತೆ, ಅಸಮಾನತೆ, ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಿ ‘ಮಾಯ’ವಾಗಿ ದೈವಗಳಾದವರು. ಇಂತಹ ‘ಬೈದ್ಯೆತಿ’ ಪಾತ್ರವನ್ನು ಕಾಂತಾರ -1 ನಲ್ಲಿ ಬೆರ್ಮೆ ಎಂಬ ಯುವಕನ ತಾಯಿಯನ್ನಾಗಿಸಲಾಗಿದೆ. ಕಾಂತಾರದಲ್ಲಿ ಕಾಣುವ ‘ಬೈದ್ಯೆತಿ’ ಪಾತ್ರವು ಬಿಲ್ಲವ ಜನಪದದ ಕ್ರಾಂತಿಕಾರಿ ಮಹಿಳೆ ದೇಯಿ ಬೈದ್ಯೆತಿಯ ನೇರ ರೂಪಾಂತರ. ಬೆರ್ಮೆ ಎಂಬ ಮಗು ಕಾಡಿನಲ್ಲಿ ಸಿಕ್ಕಿ (ಕೊರಗ ತನಿಯ, ಬೊಲ್ಲೆ ಕಾಡಿನಲ್ಲಿ ದೇಯಿಗೆ ಸಿಕ್ಕಂತೆ) ದೇಯಿಯ ಜೊತೆ ಬೆಳೆದು ಕೃಷಿ, ಕಾಡುತ್ಪತ್ತಿ ಸಂಗ್ರಹ ಮಾಡುತ್ತಾನೆ. ಸಿನೆಮಾದಲ್ಲಿ ಬೈದ್ಯೆತಿಗೆ ನದಿಯಲ್ಲಿ ದೈವದ ಕಾರ್ಣಿಕದ ಕಲ್ಲು ಸಿಗುವುದು, ಬೈದ್ಯೆತಿಯ ಸಾಕು ಮಗ ಕೃಷಿ ಚಟುವಟಿಕೆ ಆರಂಭಿಸುವುದು ಎಲ್ಲವನ್ನೂ ಒಂದಕ್ಕೊಂದು ಸಂಬಂಧವಿಲ್ಲದಂತೆ, ಮೂಲ ಆಶಯಕ್ಕೆ ಧಕ್ಕೆ ತಂದು ಕಾಂತಾರ -1 ನಲ್ಲಿ ತೋರಿಸಲಾಗಿದೆ.
ಕಾಡಿನ ಮಕ್ಕಳು ಈ ಬಂಗ ರಾಜನ ಜೊತೆ ಹೋರಾಡುವಾಗ ಪೋರ್ಚುಗೀಸರು ಮತ್ತು ಮುಸ್ಲಿಮರ ಪಾತ್ರ ಬರುತ್ತದೆ. ಬಂಗರಾಜನ ಸೇನೆ ಮತ್ತು ವ್ಯಾಪಾರಗಳಲ್ಲಿ ಮುಸ್ಲಿಮರು ಇದ್ದರು ಎಂಬ ಇತಿಹಾಸದ ಉಲ್ಲೇಖವನ್ನು ಬಳಸಿಕೊಂಡು ಸಿನೆಮಾದಲ್ಲಿ ಅದನ್ನು ತಿರುಚಲಾಗಿದೆ.
ಕರಾವಳಿಯ ಇತಿಹಾಸದಲ್ಲಿ ಹಲವು ಬಂಗರಸರು ಬರುತ್ತಾರೆ. ಕ್ರಿ.ಶ 1541ರಲ್ಲಿ ವಿಜಯನಗರದ ರಾಮರಾಯನ ಆಳ್ವಿಕೆಯಲ್ಲಿ ಪೋರ್ಚುಗೀಸರಿಗೂ ರಾಮರಾಯರಿಗೂ ಆದ ಒಪ್ಪಂದದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರವನ್ನು ಸಂಪೂರ್ಣವಾಗಿ ಪೋರ್ಚುಗೀಸರಿಗೆ ಒಪ್ಪಿಸಲಾಯಿತು. ಕರಾವಳಿಯ ತುಂಡು ಅರಸರು ಪೋರ್ಚುಗೀಸರಿಗೆ ಕಪ್ಪ ಕೊಡಬೇಕು ಎಂದು ಆದೇಶಿಸಲಾಯಿತು. ಆದರೆ ಮಂಗಳೂರು ಬಂಗರಾಜ, ಉಳ್ಳಾಲದ ಚೌಟರ ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಕಪ್ಪವನ್ನು ಕೊಡಲು ನಿರಾಕರಿಸಿದರು. ಇದರಿಂದ ಕೆರಳಿದ ಪೋರ್ಚುಗೀಸರು ಬಾರ್ಕೂರು, ಮಂಗಳೂರು, ಉಳ್ಳಾಲ ಮುಂತಾದ ಬಂದರುಗಳು, ಪೇಟೆಗಳು, ಕೋಟೆಗಳು, ದೇವಸ್ಥಾನ, ಅರಮನೆಗಳನ್ನು ಸುಡುತ್ತಾ, ನಾಶ ಮಾಡುತ್ತಾ ಬಂದರು. ಈ ಸಂದರ್ಭದಲ್ಲಿ ಕರಾವಳಿಯ ಮುಸಲ್ಮಾನರು ಬಂಗ್ರಕೂಳೂರಿನಲ್ಲಿದ್ದ ಬಂಗರಾಜನ ಸೇನೆಯಲ್ಲೂ, ಉಲ್ಲಾಳದ ರಾಣಿ ಅಬ್ಬಕ್ಕನ ಸೈನ್ಯದಲ್ಲೂ ಸೈನಿಕರಾಗಿದ್ದರು. ಮುಸಲ್ಮಾನರ ಸೈನ್ಯದ ಬಲದೊಂದಿಗೆ ಬಂಗರಾಜನು ಪೋರ್ಚುಗೀಸರ ಜೊತೆ ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದನು. ಬಂಗರಾಜನು ಯುದ್ಧ ಗೆದ್ದಿದ್ದು ಮುಸ್ಲಿಮ್ ಸೈನಿಕರ ಬಲದಿಂದ ಎಂಬುದು ಇತಿಹಾಸ ಹೇಳುತ್ತದೆ. ಆದರೆ ಸಿನೆಮಾದಲ್ಲಿ ಬಂಗ ಅರಸರು ಸಾಂಬರ ಪದಾರ್ಥಗಳನ್ನು ಬಂದರಿನ ಮೂಲಕ ವಿದೇಶಗಳಿಗೆ ವಹಿವಾಟು ಮಾಡುವುದನ್ನು ತೋರಿಸುತ್ತಾರೆ. ಬಂದರಿನ ಮೂಲಕ ನಡೆಯುವ ಈ ವ್ಯಾಪಾರದಲ್ಲಿ ಪೋರ್ಚುಗೀಸರು ಮತ್ತು ಮುಸ್ಲಿಮರು ಬರುತ್ತಾರೆ. ಆದರೆ ಸಿನೆಮಾದಲ್ಲಿ ಮುಸ್ಲಿಮರು ಬಂಗರಸರ ಜೊತೆ ನಿಲ್ಲುವುದಿಲ್ಲ.
ಕರಾವಳಿಯ ಇತಿಹಾಸದಲ್ಲಿ ಬಂಗರಸರು ಮತ್ತು ಮುಸ್ಲಿಮರ ಮಧ್ಯೆ ಅನ್ಯೋನ್ಯವಾದ ಸಂಬಂಧವಿದೆ. ಕ್ರಿ.ಶ 1418 ರಲ್ಲಿ ಶಂಕರದೇವಿಯ ಮಗ ಕಾಮರಾಯನು ಪಟ್ಟಕ್ಕೆ ಬಂದನು. ಈ ಅರಸನ ಕಾಲದಲ್ಲಿ ಪೋರ್ಚುಗೀಸರ ಹಾವಳಿಯು ಪ್ರಾರಂಭವಾಯಿತು. ಕ್ರಿ.ಶ. 1526 ರಲ್ಲಿ ಪೋರ್ಚುಗೀಸರ ವೈಸ್‌ರಾಯ್ ಲೋಪೆಜ್ ಡಿ ಸೆಂಪಾಯೋ ಎಂಬವನು ಬಂಗರಾಜನ ಮುಖ್ಯ ಪಟ್ಟಣವಾದ ಮಂಗಳೂರಿಗೆ ದಾಳಿ ಮಾಡಿದನು. ಬಂಗರಾಜನ ಸೈನಿಕರಾಗಿದ್ದ ಮಾಪಿಳ್ಳೆ ಮುಸ್ಲಿಮರು, ಅರಬಿ ಮುಸ್ಲಿಮರು ಸೋತುಹೋದರು. ಕಡೆಗೆ ಬಂಗರಾಜನಿಗೂ ಪೋರ್ಚುಗೀಸರಿಗೂ ಕರಾರಾಗಿ ಬಂಗರಾಜನು ಪೋರ್ಚುಗೀಸರಿಗೆ 2,400 ಮುಡಿ ಅಕ್ಕಿಯನ್ನೂ 1,000 ಬುದ್ದಲಿ ಎಣ್ಣೆಯನ್ನೂ ಸುಂಕದ ರೂಪವಾಗಿ ಕೊಡಲಾರಂಭಿಸಿದನು. ಬಂಗರಾಜನು ಸೋತು ಹೋದರೂ ಮುಸ್ಲಿಮರು ಬಂಗರಾಜನ ಸಹವಾಸ ಬಿಟ್ಟು ಪೋರ್ಚುಗೀಸರ ಸಹವಾಸ ಮಾಡಲಿಲ್ಲ. ಕರಾವಳಿಯ ಪೂರ್ತಿ ವ್ಯವಹಾರ ಪೋರ್ಚುಗೀಸರ ಪಾಲಾದರೂ ಮಂಗಳೂರಿನ ಮುಸ್ಲಿಮರು ಪೋರ್ಚುಗೀಸರ ಜೊತೆ ವ್ಯಾಪಾರ ವಹಿವಾಟು ನಡೆಸಲಿಲ್ಲ. ಹಾಗೊಂದು ವೇಳೆ ಪೋರ್ಚುಗೀಸರ ಜೊತೆ ವ್ಯಾಪಾರ ನಡೆಸಿದ್ದೇ ಆಗಿದ್ದಲ್ಲಿ ಇವತ್ತು ಇಡೀ ಕರಾವಳಿಯು ಮುಸ್ಲಿಮ್ ಜಮೀನ್ದಾರರಿಂದ, ಮುಸ್ಲಿಮ್ ಶ್ರೀಮಂತರಿಂದ ತುಂಬಿರುತ್ತಿತ್ತು. ಮುಸ್ಲಿಮ್ ಸಾಹುಕಾರನೊಬ್ಬ ಸೋತು ಹೋದ ಬಂಗರಸನಿಗೆ ಸಹಾಯ ಮಾಡುತ್ತಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪೋರ್ಚುಗೀಸರು ಮಂಗಳೂರಿಗೆ ದಾಳಿ ಮಾಡಿ ಮುಸ್ಲಿಮರ ವ್ಯಾಪಾರ ಕೇಂದ್ರವನ್ನು ನಾಶ ಮಾಡುತ್ತಾರೆ. ಇಷ್ಟಾದರೂ ಮುಸ್ಲಿಮರು ಬಂಗರಾಜನ ಮೇಲಿನ ನಿಷ್ಠೆಯನ್ನು ಬಿಡುವುದಿಲ್ಲ ಮತ್ತು ಪೋರ್ಚುಗೀಸರ ಸಹವಾಸ ಮಾಡುವುದಿಲ್ಲ. ಸಿನೆಮಾದಲ್ಲಿ ಇದನ್ನು ತಿರುಚಲಾಗಿದೆ.
ಬಂಗರಸರಿಗಾಗಿ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಪ್ರಾಣವನ್ನೇ ಕೊಟ್ಟಿದ್ದಾರೆ. ಅಂದು ಬಂಗರಸರು ಸೋತ ನಂತರ ಪೋರ್ಚುಗೀಸರ ಜೊತೆ ಮುಸ್ಲಿಮ್ ಸಾಹುಕಾರರು ನಿಂತಿದ್ದರೆ ಇಂದು ಮಂಗಳೂರು ಪೂರ್ತಿ ಮುಸ್ಲಿಮ್ ಸಾಹುಕಾರರ ನೆಲೆಯಾಗುತ್ತಿತ್ತು. ಆಶ್ಚರ್ಯವೆಂದರೆ ವ್ಯಾಪಾರಿಗಳಾಗಿದ್ದ ಅರಬಿ ಮುಸ್ಲಿಮರು, ಮಾಪಿಳ್ಳೆ ಬ್ಯಾರಿ ಮುಸ್ಲಿಮರು ಸೋತು ಸುಣ್ಣವಾಗಿದ್ದ ಹಿಂದೂ,ಜೈನ ರಾಜ-ರಾಣಿಯರ ಜೊತೆಯೇ ನಿಂತಿದ್ದರು.
ಕಾಂತಾರ-1 ಸಿನೆಮಾ ಪೂರ್ತಿಯಾಗಿ ಕರಾವಳಿಯ ಇತಿಹಾಸಕ್ಕೆ ಎಸಗಿದ ಅಪಚಾರವಾಗಿದೆ. ಕರಾವಳಿಯನ್ನು ಕಟ್ಟುವಿಕೆಯಲ್ಲಿ ಬಂಗ ಅರಸರ ಪರಂಪರೆಯ ಪಾತ್ರ ಅಪಾರವಾದುದು. ಬಂಗರಸರು ಕರಾವಳಿಯ ದೈವ-ದೇವರು ಮತ್ತು ಯಾವುದೇ ಪ್ರಾರ್ಥನಾ ಮಂದಿರಗಳ ಜೊತೆ ಸಂಘರ್ಷ ನಡೆಸುವುದಿಲ್ಲ. ಜೈನರಾದರೂ ದೈವಾರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಸಿನೆಮಾದಲ್ಲಿ ಬಂಗರಾಜರ ಆಡಳಿತವು ದೈವ ವಿರೋಧಿಯೆಂದೂ, ದೈವಗಳ ಜೊತೆ ಯುದ್ಧ ಸಾರಿದರೆಂದೂ ಹೇಳಲಾಗಿದೆ. ಅದಕ್ಕಾಗಿ ಪಿಲಿಚಂಡಿ ದೈವದ ಜೊತೆ ಬಂಗರಾಜ ಯುದ್ಧ ಮಾಡುವ ದೃಶ್ಯವಿದೆ.
‘‘ಹಾವಳಿ ಬಂಗರಾಜನು ಕಾಲವಾದ ನಂತರ ಅವನ ತಮ್ಮ ಲಕ್ಷ್ಮಪ್ಪಅರಸನು ಕ್ರಿ. ಶ. 1400 ರಲ್ಲಿ ಪಟ್ಟಕ್ಕೆ ಬಂದನು. ಲಕ್ಷ್ಮಪ್ಪ ಬಂಗರಸನು ಅರಮನೆಯನ್ನು ಕಟ್ಟಿದ ಮೇಲೆ ಅದರ ದಕ್ಷಿಣದಲ್ಲಿ ಒಂದು ಕೋಟೆ ಕಟ್ಟಿಸಿ, ಕೋಟೆಯಲ್ಲಿ ಶಿಲಾಮಯವಾದ ದೇವಸ್ಥಾನವನ್ನು ಕಟ್ಟಿಸಿ ಅದರಲ್ಲಿ ವೀರಭದ್ರ ದೇವರ ಪ್ರತಿಷ್ಠೆ ಮಾಡಿಸಿದನು. ಪಿಲಿಚಂಡಿ ದೈವಕ್ಕೆ ಒಂದು ಗುಡಿಯನ್ನು ಸಹ ಕಟ್ಟಿಸಿದನು. ಅರಮನೆಯ ಪೂರ್ವದಿಕ್ಕಿನಲ್ಲಿ ಒಂದು ಮುಖ್ಯಪ್ರಾಣ ದೇವಸ್ಥಾನವನ್ನೂ ದಕ್ಷಿಣ ಭಾಗದಲ್ಲಿ ಆದೀಶ್ವರ ಬಸದಿಯನ್ನೂ ಮುಸಲ್ಮಾನರಿಗೆ ಮತ್ತು ಮಾಪಿಳ್ಳೆಯವರಿಗೆ ಒಂದು ಮಸೀದಿಯನ್ನೂ ಕಟ್ಟಿಸಿದನು’’ ಎಂದು ಗಣಪತಿ ಐಗಳರು ಬರೆದ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ಪುಸ್ತಕದ ಪುಟ ಸಂಖ್ಯೆ 273 ಮತ್ತು 274 ರಲ್ಲಿ ಉಲ್ಲೇಖಿಸಲಾಗಿದೆ. ಇತಿಹಾಸದ ಈ ಅಂಶಗಳನ್ನೇ ಬಳಸಿಕೊಂಡು ಬಂಗರಾಜ ಶಿಲಾಮಯ ಈಶ್ವರ ದೇಗುಲ ನಿರ್ಮಿಸುವ ದೃಶ್ಯವನ್ನು ಅದ್ದೂರಿಯಾಗಿ ಕಾಂತಾರದಲ್ಲಿ ತೋರಿಸಲಾಗಿದೆ. ಆದರೆ ಪಿಲಿಚಂಡಿ ದೈವಸ್ಥಾನ, ಮಸೀದಿ ನಿರ್ಮಾಣ, ಬಸದಿ ನಿರ್ಮಾಣವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಲ್ಲದೆ, ಬಂಗರಾಜ ದೈವಗಳ ವಿರೋಧಿ ಎಂದು ಪ್ರಸ್ತುತಪಡಿಸಲಾಗಿದೆ.
ಈ ಎಲ್ಲಾ ವಿಷಯಗಳನ್ನು ಅಲ್ಲಲ್ಲಿ ಹೆಕ್ಕಿ, ಜನಪದದ ದೈವಗಳು, ದೈವ ಪಾಡ್ದನ, ಐತಿಹ್ಯದ ಹೆಸರು ಮತ್ತು ಕತೆಗಳನ್ನು ಹೆಕ್ಕಿ ದಂತಕತೆಯನ್ನು ನಿರೂಪಿಸಲಾಗಿದೆ. ಈ ರೀತಿ ಕತೆ ನಿರೂಪಿಸುವುದು ಕತೆಗಾರನ ಹಕ್ಕಾಗಿದ್ದರೂ ಅದು ಇತಿಹಾಸ ಮತ್ತು ಐತಿಹ್ಯಕ್ಕೆ ಧಕ್ಕೆ ಆಗುವಂತಿರಬಾರದು. ಕಾಂತಾರ -1 ದಂತಕತೆ ಎಂದು ಘೋಷಿಸಿಕೊಂಡರೂ, ‘ತುಳುನಾಡಿಗೂ, ಅಲ್ಲಿನ ದೈವಾರಾಧನೆಯ ಕತೆಗೂ ಸಂಬಂಧವೇ ಇಲ್ಲ’ ಎಂದು ಕಾಂತಾರ - 1 ನಿರ್ದೇಶಕ, ಕತೆಗಾರರು ಘೋಷಿಸಲು ಸಾಧ್ಯವಾಗಲ್ಲ. ಹಾಗಿರುವಾಗ ಇತಿಹಾಸ ಮತ್ತು ಐತಿಹ್ಯವನ್ನು ವಿರೂಪಗೊಳಿಸುವ ಕೃತ್ಯ ಪ್ರಶ್ನಾರ್ಹವಾಗುತ್ತದೆ.
ಹಾಗಾಗಿ, ಕಾಂತಾರ - 1 ಸಂಪೂರ್ಣ ದಂತಕತೆ(ಕಟ್ಟು ಕತೆ) ಆಗಿದ್ದರೂ ಅಲ್ಲಿ ಬಳಸಿರುವ ಹೆಸರುಗಳು, ಜಾತಿ ಸೂಚಕಗಳು ದೈವಗಳ ಕರಾವಳಿಯ ಇತಿಹಾಸ ಮತ್ತು ಜನಪದವನ್ನು ಪ್ರತಿನಿಧಿಸುತ್ತದೆ. ಭೂತಾರಾಧನೆ ಎಂಬ ಜನಪದ ಆಚರಣೆಗೂ ಮತ್ತು ಕರಾವಳಿಯ ರಾಜ ಪ್ರಭುತ್ವದ ಇತಿಹಾಸಕ್ಕೂ ಸಂಬಂಧವಿರುವಾಗ ಎರಡನ್ನೂ ಮಿಳಿತಗೊಳಿಸಿ ಸಿನೆಮಾ ಮೂಲಕ ವಿಕೃತ ದೃಶ್ಯಕಾವ್ಯವನ್ನು ಪ್ರಸ್ತುತಪಡಿಸುವುದು ಅಪರಾಧವಾಗುತ್ತದೆ.







