Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಕಸಿತ ಭಾರತದ ಕನಸು ಮತ್ತು ಹಸಿವಿನ ಕಹಿ...

ವಿಕಸಿತ ಭಾರತದ ಕನಸು ಮತ್ತು ಹಸಿವಿನ ಕಹಿ ವಾಸ್ತವ

ಭಾರತದ ಅಭಿವೃದ್ಧಿಯ ಎರಡು ಮುಖಗಳನ್ನು ತೆರೆದಿಟ್ಟ 2026ರ ಜಾಗತಿಕ ಹಸಿವು ಸೂಚ್ಯಂಕ

ಡಾ. ಸಿದ್ದರಾಜು ವಿ.ಜಿ., ಮೈಸೂರುಡಾ. ಸಿದ್ದರಾಜು ವಿ.ಜಿ., ಮೈಸೂರು28 Oct 2026 12:14 PM IST
share
ವಿಕಸಿತ ಭಾರತದ ಕನಸು ಮತ್ತು ಹಸಿವಿನ ಕಹಿ ವಾಸ್ತವ

ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಕೈಗಾರಿಕೆ, ತಂತ್ರಜ್ಞಾನ, ಡಿಜಿಟಲ್ ಸೇವೆಗಳು, ಮೂಲಸೌಕರ್ಯ ಮತ್ತು ರಾಷ್ಟ್ರೀಯ ಆದಾಯದ ಬೆಳವಣಿಗೆಯಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆದರೆ, ಈ ಆರ್ಥಿಕ ಪ್ರಗತಿಯ ನಡುವೆ ಪ್ರತಿಯೊಬ್ಬ ನಾಗರಿಕನಿಗೂ ಪೌಷ್ಟಿಕ ಆಹಾರ ದೊರೆಯುತ್ತಿದೆಯೇ ಎಂಬ ಪ್ರಶ್ನೆ ದೇಶದ ಅಭಿವೃದ್ಧಿಯ ಮಾದರಿಯನ್ನೇ ವಿಮರ್ಶಾತ್ಮಕವಾಗಿ ಪರಿಶೀಲಿಸುವಂತೆ ಮಾಡುತ್ತಿದೆ. ಒಂದು ಕಡೆ ಆಹಾರ ಧಾನ್ಯಗಳ ಉತ್ಪಾದನೆ, ಆರ್ಥಿಕ ಸಾಮರ್ಥ್ಯ ಮತ್ತು ಸಮಾಜ ಕಲ್ಯಾಣ ಯೋಜನೆಗಳ ವಿಸ್ತರಣೆ ಕಂಡುಬರುತ್ತಿದ್ದರೆ, ಮತ್ತೊಂದೆಡೆ ಮಕ್ಕಳ ಅಪೌಷ್ಟಿಕತೆ ಮತ್ತು ಆಹಾರ ಅಭದ್ರತೆಯ ಸಮಸ್ಯೆಗಳು ಮುಂದುವರಿದಿರುವುದು ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ 2026ರ ಜಾಗತಿಕ ಹಸಿವು ಸೂಚ್ಯಂಕದ ವರದಿ ಭಾರತಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ.

ಜಾಗತಿಕ ಹಸಿವು ಸೂಚ್ಯಂಕವು ಜಗತ್ತಿನ ವಿವಿಧ ದೇಶಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ತೀವ್ರತೆಯನ್ನು ಅಳೆಯುವ ಪ್ರಮುಖ ಸಾಧನವಾಗಿದೆ. ಇದು ನಾಲ್ಕು ಸೂಚಕಗಳನ್ನು ಆಧರಿಸಿದೆ. ಮೊದಲನೆಯದು ಅಪೌಷ್ಟಿಕತೆ ಅಥವಾ ದೇಹಕ್ಕೆ ಅಗತ್ಯವಾದಷ್ಟು ಕ್ಯಾಲೊರಿಗಳನ್ನು ಪಡೆಯದ ಜನಸಂಖ್ಯೆಯ ಪ್ರಮಾಣ. ಎರಡನೆಯದು ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ಅನುಗುಣವಾಗಿ ಎತ್ತರ ಕಡಿಮೆಯಾಗಿರುವುದನ್ನು ಸೂಚಿಸುವ ಕುಂಠಿತ ಬೆಳವಣಿಗೆ. ಇದು ದೀರ್ಘಕಾಲದ ಅಪೌಷ್ಟಿಕತೆಯ ಪ್ರತಿಬಿಂಬವಾಗಿದೆ. ಮೂರನೆಯದು ಮಕ್ಕಳ ಎತ್ತರಕ್ಕೆ ಹೋಲಿಸಿದರೆ ತೂಕ ಕಡಿಮೆಯಾಗಿರುವುದನ್ನು ಸೂಚಿಸುವ ತೀವ್ರ ಅಪೌಷ್ಟಿಕತೆ. ನಾಲ್ಕನೆಯದು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ. ಈ ಸೂಚಕಗಳು ಆಹಾರದ ಕೊರತೆಯಷ್ಟೇ ಅಲ್ಲದೆ, ಪೌಷ್ಟಿಕತೆ, ಆರೋಗ್ಯ ಮತ್ತು ಮಕ್ಕಳ ಬದುಕುಳಿಯುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಪ್ರತಿಬಿಂಬಿಸುತ್ತವೆ. ಈ ಸೂಚ್ಯಂಕದಲ್ಲಿ 9.9ಕ್ಕಿಂತ ಕಡಿಮೆ ಅಂಕವು ಕಡಿಮೆ ಹಸಿವಿನ ಮಟ್ಟವನ್ನು, 10ರಿಂದ 19.9ರವರೆಗಿನ ಅಂಕವು ಮಧ್ಯಮ ಮಟ್ಟವನ್ನು, 20ರಿಂದ 34.9ರವರೆಗಿನ ಅಂಕವು ಗಂಭೀರ ಮಟ್ಟವನ್ನು, 35ರಿಂದ 49.9ರವರೆಗಿನ ಅಂಕವು ಆತಂಕಕಾರಿ ಮಟ್ಟವನ್ನು ಹಾಗೂ 50 ಅಥವಾ ಅದಕ್ಕಿಂತ ಹೆಚ್ಚಿನ ಅಂಕವು ಅತ್ಯಂತ ಆತಂಕಕಾರಿ ಮಟ್ಟವನ್ನು ಸೂಚಿಸುತ್ತದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಿತಿಯನ್ನು ಗಮನಿಸಿದಾಗ, 2019ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 117 ದೇಶಗಳಲ್ಲಿ ಭಾರತವು 30.3 ಅಂಕಗಳೊಂದಿಗೆ 102ನೇ ಸ್ಥಾನದಲ್ಲಿದಿದ್ದು, 2020ರಲ್ಲಿ 107 ದೇಶಗಳಲ್ಲಿ 27.2 ಅಂಕಗಳೊಂದಿಗೆ 94ನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಚೇತರಿಸಿಕೊಂಡಿತ್ತು. ನಂತರ, 2021ರಲ್ಲಿ 115 ದೇಶಗಳಲ್ಲಿ 27.5 ಅಂಕಗಳೊಂದಿಗೆ 101ನೇ ಸ್ಥಾನಕ್ಕೆ ಕುಸಿಯಿತು. 2022ರಲ್ಲಿ 121 ದೇಶಗಳಲ್ಲಿ ಭಾರತವು 29.1 ಅಂಕಗಳೊಂದಿಗೆ 107ನೇ ಸ್ಥಾನ, 2023ರಲ್ಲಿ 125 ದೇಶಗಳಲ್ಲಿ 28.7 ಅಂಕಗಳೊಂದಿಗೆ 111ನೇ ಸ್ಥಾನ ಪಡೆದಿದ್ದು, 2024ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳಲ್ಲಿ ಭಾರತವು 27.3 ಅಂಕಗಳೊಂದಿಗೆ 105ನೇ ಸ್ಥಾನವನ್ನು ಪಡೆದು ಗಂಭೀರ ವರ್ಗಕ್ಕೆ ಸೇರಿತು. ನಂತರ 2025ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 127 ದೇಶಗಳ ಪೈಕಿ 105ನೇ ಸ್ಥಾನದಲ್ಲಿದ್ದು, 25.8 ಅಂಕಗಳನ್ನು ಪಡೆದಿತ್ತು. ಆದರೆ 2026ರ ವರದಿಯಲ್ಲಿ ಭಾರತವು 122 ದೇಶಗಳ ಪೈಕಿ 100ನೇ ಸ್ಥಾನದಲ್ಲಿದ್ದು, 24.1 ಅಂಕಗಳನ್ನು ದಾಖಲಿಸಿಕೊಂಡು, ಪ್ರಸ್ತುತ ವರದಿಯ ವರ್ಗೀಕರಣದ ಪ್ರಕಾರ ಭಾರತವು ಇನ್ನೂ ಕೂಡ ಗಂಭೀರ ಹಸಿವು ವರ್ಗದಲ್ಲಿದೆ.

2026ರ ವರದಿಯ ಪ್ರಕಾರ, ಭಾರತದಲ್ಲಿ ಜನಸಂಖ್ಯೆಯ ಶೇ. 9.8ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯ ಪ್ರಮಾಣ ಶೇ. 29.3ರಷ್ಟಿದ್ದರೆ, ಮಕ್ಕಳ ತೀವ್ರ ಅಪೌಷ್ಟಿಕತೆಯ ಪ್ರಮಾಣ ಶೇ. 19ರಷ್ಟಿದೆ. ಮಕ್ಕಳ ಮರಣ ಪ್ರಮಾಣವು ಶೇ.2.7ರಷ್ಟಿದ್ದು, ಇದರಲ್ಲಿ ಕೆಲವು ಸುಧಾರಣೆಗಳು ಕಂಡುಬಂದಿದ್ದರೂ, ಮಕ್ಕಳ ತೀವ್ರ ಅಪೌಷ್ಟಿಕತೆಯ ಪ್ರಮಾಣ ಆತಂಕಕಾರಿ ಮಟ್ಟದಲ್ಲಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ, ಮಕ್ಕಳ ಕುಂಠಿತ ಬೆಳವಣಿಗೆ ದೀರ್ಘಕಾಲದ ಪೌಷ್ಟಿಕತೆಯ ಕೊರತೆಯನ್ನು ಸೂಚಿಸಿದರೆ, ತೀವ್ರ ಅಪೌಷ್ಟಿಕತೆ ಮಕ್ಕಳ ದೈಹಿಕ ಸ್ಥಿತಿಯಲ್ಲಿನ ಗಂಭೀರ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಇವು ಮಕ್ಕಳ ಆರೋಗ್ಯ, ಕಲಿಕೆಯ ಸಾಮರ್ಥ್ಯ ಮತ್ತು ಭವಿಷ್ಯದ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳ ಅಪೌಷ್ಟಿಕತೆಯನ್ನು ಆರೋಗ್ಯ ಇಲಾಖೆಯೊಂದರ ಸಮಸ್ಯೆಯಾಗಿ ಸೀಮಿತಗೊಳಿಸದೆ, ಮಾನವ ಸಂಪನ್ಮೂಲ ಅಭಿವೃದ್ಧಿಯ ಪ್ರಮುಖ ಸವಾಲಾಗಿ ಪರಿಗಣಿಸಬೇಕು.

ಭಾರತದ ಅಭಿವೃದ್ಧಿ ಚರ್ಚೆಯಲ್ಲಿ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ, ವಿದೇಶಿ ಹೂಡಿಕೆ, ಕೈಗಾರಿಕಾ ಉತ್ಪಾದನೆ ಮತ್ತು ತಲಾ ಆದಾಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಇವು ಆರ್ಥಿಕ ಪ್ರಗತಿಯ ಅಗತ್ಯ ಸೂಚಕಗಳಾದರೂ, ಜನರ ಮೂಲಭೂತ ಅಗತ್ಯಗಳ ಪೂರೈಕೆಯನ್ನು ಅವು ಮಾತ್ರ ಖಚಿತಪಡಿಸುವುದಿಲ್ಲ. ರಾಷ್ಟ್ರೀಯ ಆದಾಯ ಹೆಚ್ಚಿದರೂ, ಆದಾಯದ ಹಂಚಿಕೆ ಅಸಮಾನವಾಗಿದ್ದರೆ ಮತ್ತು ಉದ್ಯೋಗಾವಕಾಶಗಳು ಸ್ಥಿರವಾಗಿರದಿದ್ದರೆ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ಖರೀದಿಸುವುದು ಕಷ್ಟವಾಗಬಹುದು. ಆಹಾರ ಪದಾರ್ಥಗಳ ಬೆಲೆ ಏರಿಕೆ, ಅನಿಶ್ಚಿತ ಉದ್ಯೋಗ, ಕಡಿಮೆ ವೇತನ ಮತ್ತು ಆರೋಗ್ಯ ವೆಚ್ಚಗಳು ಕುಟುಂಬಗಳ ನೈಜ ಖರೀದಿ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಇದರ ಪರಿಣಾಮವಾಗಿ ಆಹಾರ ಧಾನ್ಯಗಳ ಲಭ್ಯತೆ ಇದ್ದರೂ, ಸಮತೋಲಿತ ಆಹಾರ ಸೇವನೆಯ ಅವಕಾಶ ಎಲ್ಲರಿಗೂ ಸಮಾನವಾಗಿ ದೊರೆಯುವುದಿಲ್ಲ.

ಇಲ್ಲಿ ಸರಕಾರದ ಆಹಾರ ಮತ್ತು ಪೌಷ್ಟಿಕತೆ ಸಂಬಂಧಿತ ಯೋಜನೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ, ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿ ಸೇವೆಗಳು ಆಹಾರ ಭದ್ರತೆಯನ್ನು ಬಲಪಡಿಸುವ ಪ್ರಮುಖ ವ್ಯವಸ್ಥೆಗಳಾಗಿವೆ. ಆದರೆ ಯೋಜನೆಗಳಿಗೆ ಮೀಸಲಿಡುವ ಹಣ, ವಿತರಿಸಲಾದ ಆಹಾರದ ಪ್ರಮಾಣ ಅಥವಾ ನೋಂದಾಯಿತ ಫಲಾನುಭವಿಗಳ ಸಂಖ್ಯೆಯೇ ಅವುಗಳ ಯಶಸ್ಸಿನ ಅಂತಿಮ ಮಾನದಂಡವಾಗಬಾರದು. ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ತಲುಪುತ್ತಿದೆಯೇ, ಅದರ ಗುಣಮಟ್ಟ ಮತ್ತು ಪೌಷ್ಟಿಕ ಮೌಲ್ಯ ಸಮರ್ಪಕವಾಗಿದೆಯೇ, ಅತ್ಯಂತ ದುರ್ಬಲ ಕುಟುಂಬಗಳು ಯೋಜನೆಗಳಿಂದ ಹೊರಗುಳಿಯುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮಕ್ಕಳ ಬೆಳವಣಿಗೆಯಲ್ಲಿನ ಸುಧಾರಣೆ, ಅಪೌಷ್ಟಿಕತೆಯ ಇಳಿಕೆ ಮತ್ತು ಆಹಾರದ ವೈವಿಧ್ಯದ ಹೆಚ್ಚಳದಂತಹ ಫಲಿತಾಂಶಗಳನ್ನು ಆಧರಿಸಿ ಯೋಜನೆಗಳ ಮೌಲ್ಯಮಾಪನ ನಡೆಸಬೇಕು.

ಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ತಾಯಂದಿರ ಆರೋಗ್ಯ ಮತ್ತು ಕುಟುಂಬದ ಸಾಮಾಜಿಕ ಪರಿಸ್ಥಿತಿಗಳೂ ನಿರ್ಣಾಯಕವಾಗಿವೆ. ಗರ್ಭಾವಸ್ಥೆಯಲ್ಲಿನ ಪೌಷ್ಟಿಕತೆಯ ಕೊರತೆ, ಕಡಿಮೆ ಜನನ ತೂಕ, ಸಮರ್ಪಕ ಸ್ತನ್ಯಪಾನದ ಅಭಾವ, ಅಸುರಕ್ಷಿತ ಕುಡಿಯುವ ನೀರು ಮತ್ತು ಸೋಂಕುಗಳು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಐದು ವರ್ಷದೊಳಗಿನ ಮಕ್ಕಳಿಗೆ ನಿರಂತರ ಪೌಷ್ಟಿಕ ಬೆಂಬಲ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತೂಕ ಮತ್ತು ಎತ್ತರವನ್ನು ನಿಯಮಿತವಾಗಿ ದಾಖಲಿಸಿ, ಅಪಾಯದಲ್ಲಿರುವ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಬೇಕು. ಪೌಷ್ಟಿಕ ಆಹಾರ ವಿತರಣೆ ಮತ್ತು ವೈದ್ಯಕೀಯ ಆರೈಕೆಯ ನಡುವೆ ಪರಿಣಾಮಕಾರಿ ಸಮನ್ವಯವನ್ನು ರೂಪಿಸಬೇಕು.

ಕೃಷಿ ನೀತಿಯಲ್ಲಿಯೂ ಬದಲಾವಣೆ ಅಗತ್ಯವಾಗಿದೆ. ಆಹಾರ ಭದ್ರತೆಯನ್ನು ಮುಖ್ಯವಾಗಿ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಸಂಗ್ರಹಣೆಯ ದೃಷ್ಟಿಯಿಂದ ಮಾತ್ರ ನೋಡುವ ಬದಲು, ವೈವಿಧ್ಯಮಯ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳ ಲಭ್ಯತೆಯೊಂದಿಗೆ ಸಂಪರ್ಕಿಸಬೇಕು. ಸಿರಿಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು ಮತ್ತು ಇತರ ಪೌಷ್ಟಿಕ ಬೆಳೆಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು, ರೈತರಿಗೆ ಸ್ಥಿರ ಮಾರುಕಟ್ಟೆ ಒದಗಿಸುವುದು ಹಾಗೂ ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆಯಲ್ಲಿನ ನಷ್ಟವನ್ನು ಕಡಿಮೆ ಮಾಡುವುದು ಅಗತ್ಯ. ಹವಾಮಾನ ಬದಲಾವಣೆ, ಬರ ಮತ್ತು ಪ್ರವಾಹಗಳು ಕೃಷಿ ಉತ್ಪಾದನೆಯನ್ನು ಅಸ್ಥಿರಗೊಳಿಸುತ್ತಿರುವ ಸಂದರ್ಭದಲ್ಲಿ ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ನೀರಿನ ಸಮರ್ಥ ಬಳಕೆಗೆ ಆದ್ಯತೆ ನೀಡಬೇಕು. ಆಹಾರ ಉತ್ಪಾದನೆ, ವಿತರಣೆ ಮತ್ತು ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡದಿದ್ದರೆ ಉತ್ಪಾದನೆಯ ಹೆಚ್ಚಳವು ಪೌಷ್ಟಿಕತೆಯ ಸುಧಾರಣೆಯಾಗಿ ಪರಿವರ್ತನೆಯಾಗುವುದಿಲ್ಲ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಎರಡನೇ ಗುರಿಯು 2030ರ ವೇಳೆಗೆ ಹಸಿವನ್ನು ನಿರ್ಮೂಲನ ಮಾಡಿ, ಆಹಾರ ಭದ್ರತೆ ಮತ್ತು ಉತ್ತಮ ಪೌಷ್ಟಿಕತೆಯನ್ನು ಸಾಧಿಸುವುದಾಗಿದೆ. ಈ ಗುರಿಯನ್ನು ತಲುಪಲು ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ರೈತ ಸಂಘಟನೆಗಳು ಮತ್ತು ಸಮುದಾಯಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರಾಜ್ಯ ಮತ್ತು ಜಿಲ್ಲಾಮಟ್ಟದ ದತ್ತಾಂಶಗಳ ಆಧಾರದ ಮೇಲೆ ಹೆಚ್ಚು ಹಿಂದುಳಿದ ಪ್ರದೇಶಗಳು ಮತ್ತು ದುರ್ಬಲ ಸಮುದಾಯಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ಸಂಪನ್ಮೂಲಗಳನ್ನು ಒದಗಿಸಬೇಕು. ಪೌಷ್ಟಿಕತೆಯ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವುದರ ಜೊತೆಗೆ, ಪೌಷ್ಟಿಕ ಆಹಾರ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದಕ್ಕೂ ಆದ್ಯತೆ ನೀಡಬೇಕು.

ಪ್ರಸ್ತುತ, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನ ಪ್ರಕಾರ ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ ಭಾರತವು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಲ್ಲದೆ, ಭಾರತವು ಪ್ರಸ್ತುತ 4.18 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿದೆ, ಶೀಘ್ರದಲ್ಲೇ 5ರಿಂದ 7.3 ಟ್ರಿಲಿಯನ್‌ವರೆಗೆ ಸಾಧಿಸುತ್ತದೆ ಎನ್ನಲಾಗುತ್ತಿದ್ದು, 2026ರ ಜಾಗತಿಕ ಹಸಿವು ಸೂಚ್ಯಂಕದ ವರ್ಗೀಕರಣದ ಪ್ರಕಾರ ಭಾರತವು ಇನ್ನೂ ಕೂಡ ಗಂಭೀರ ಹಸಿವು ವರ್ಗದಲ್ಲಿರುವುದು ಎಚ್ಚರಿಕೆಯ ಸಂದೇಶವಾಗಿದೆ. ಅದ್ದರಿಂದ ಅಭಿವೃದ್ಧಿಯ ನಿಜವಾದ ಅರ್ಥವು ರಾಷ್ಟ್ರೀಯ ಆದಾಯದ ಏರಿಕೆಯಲ್ಲಿ ಮಾತ್ರವಲ್ಲ; ಆ ಬೆಳವಣಿಗೆಯು ಜನರ ಜೀವನದಲ್ಲಿ ಉಂಟುಮಾಡುವ ಸಕಾರಾತ್ಮಕ ಬದಲಾವಣೆಗಳಲ್ಲಿದೆ. ಪ್ರತಿಯೊಂದು ಮಗುವಿಗೂ ಪೌಷ್ಟಿಕ ಆಹಾರ, ಪ್ರತಿಯೊಂದು ಕುಟುಂಬಕ್ಕೂ ಆಹಾರ ಭದ್ರತೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನದ ಅವಕಾಶ ದೊರೆಯಬೇಕು. ಹಸಿವನ್ನು ನಿವಾರಿಸಲು ಘೋಷಣೆಗಳಿಗಿಂತ ಪರಿಣಾಮಕಾರಿ ಅನುಷ್ಠಾನ, ಸಮಾನ ಅವಕಾಶಗಳು, ಸಾರ್ವಜನಿಕ ಹೂಡಿಕೆ ಮತ್ತು ಹೊಣೆಗಾರಿಕೆಯುತ ಆಡಳಿತ ಅಗತ್ಯ. ಆರ್ಥಿಕವಾಗಿ ಬಲಿಷ್ಠ ಭಾರತವನ್ನು ನಿರ್ಮಿಸುವ ಪ್ರಯತ್ನವು ಪೌಷ್ಟಿಕತೆಯಿಂದ ಸಮೃದ್ಧ, ಸಾಮಾಜಿಕವಾಗಿ ನ್ಯಾಯಯುತ ಮತ್ತು ಹಸಿವಿನಿಂದ ಮುಕ್ತ ಭಾರತವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಸಾಗಿದಾಗ ಮಾತ್ರ ಅಭಿವೃದ್ಧಿ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.

Tags

dreamIndiahunger
share
ಡಾ. ಸಿದ್ದರಾಜು ವಿ.ಜಿ., ಮೈಸೂರು
ಡಾ. ಸಿದ್ದರಾಜು ವಿ.ಜಿ., ಮೈಸೂರು
Next Story
X