ಕೃಷಿಯಲ್ಲಿ ಖುಷಿ ಕಂಡ ಯುವ ರೈತ ಮಹಮ್ಮದ್ ಶಫಿ ಕುಟುಂಬ
►ಸಮಗ್ರ ಕೃಷಿ ಪದ್ಧತಿಯಿಂದ ವಾರ್ಷಿಕ 21 ಲಕ್ಷ ರೂ. ಆದಾಯ ►ವೈವಿಧ್ಯಮಯ ಬೆಳೆ, ಪಶುಸಂಗೋಪನೆ, ಮೀನುಗಾರಿಕೆ

ರಾಯಚೂರು: ಕೃಷಿ ಎಂದರೆ ನಷ್ಟ, ಸಾಲದ ಹೊರೆ; ಮಳೆ ಬಂದರೆ ಮಾತ್ರ ಲಾಭ ಎಂಬ ಅಭಿಪ್ರಾಯ ಅನೇಕ ರೈತರಲ್ಲಿದೆ. ಆದರೆ ಒಂದೇ ಬೆಳೆಯನ್ನು ಅವಲಂಬಿಸದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಬರಗಾಲದ ನಡುವೆಯೂ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಯುವ ರೈತರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದ 36 ವರ್ಷದ ಬಿ.ಕಾಂ ಪದವೀಧರ ಮಹಮ್ಮದ್ ಶಫಿ ಅವರು ತಮ್ಮ ಕುಟುಂಬದ ಸಹಕಾರದೊಂದಿಗೆ 13 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಯಶಸ್ಸು ಕಂಡಿದ್ದಾರೆ. ಎರಡು ಎಕರೆಯಲ್ಲಿ ಮೆಣಸಿನಕಾಯಿ, ಮೂರು ಎಕರೆಯಲ್ಲಿ ಹತ್ತಿ ಬೆಳೆದರೆ, ಉಳಿದ ಜಮೀನಿನಲ್ಲಿ ಭತ್ತ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ಜತೆಗೆ ಕರಿಬೇವು, ಸೀತಾಫಲ, ತೆಂಗು, ನಿಂಬೆ, ಮಾವಿನಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಸುವುದರೊಂದಿಗೆ ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಊರಲ್ಲಿ ಜಮೀನು ಮತ್ತು ಮನೆಯಿದ್ದರೂ ಉದ್ಯೋಗ ಅರಸಿ ಮಹಾನಗರಗಳತ್ತ ಮುಖಮಾಡುವ ಯುವಕರ ನಡುವೆ, ಶಫಿ ಅವರು ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಇವರ ಕುಟುಂಬವು ತಾತನ ಕಾಲದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತಂದೆ ಬಂದೇನವಾಝ್ಅವರ ಮಾರ್ಗದರ್ಶನದಲ್ಲಿ ಶಫಿ ಕೃಷಿಯನ್ನು ಮುಂದುವರಿಸಿದ್ದಾರೆ.
ಅನೇಕ ರೈತರು ಒಂದು ಅಥವಾ ಎರಡು ಬೆಳೆಗಳನ್ನು ಅವಲಂಬಿಸಿ ಕೃಷಿ ಮಾಡುತ್ತಾರೆ. ಮಳೆ ಕೈಕೊಟ್ಟರೆ ಅಥವಾ ಮಾರುಕಟ್ಟೆಯಲ್ಲಿ ಬೆಲೆ ಕುಸಿದರೆ ನಷ್ಟ ಅನುಭವಿಸುವುದರ ಜತೆಗೆ ಸಾಲದ ಸುಳಿಗೂ ಸಿಲುಕುತ್ತಾರೆ. ಆದರೆ ಬೆಳೆಗಳ ವೈವಿಧ್ಯತೆ, ತೋಟಗಾರಿಕೆ ಹಾಗೂ ಪಶುಸಂಗೋಪನೆಯನ್ನು ಒಗ್ಗೂಡಿಸುವ ಮೂಲಕ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಬಹುದು ಎಂಬುದನ್ನು ಅರಿತ ಶಫಿ, ಸಮಗ್ರ ಕೃಷಿ ಪದ್ಧತಿಯ ಮೂಲಕ ಯಶಸ್ಸು ಸಾಧಿಸಿದ್ದಾರೆ. ಈ ಪದ್ಧತಿಯಿಂದ ವಾರ್ಷಿಕ 20ರಿಂದ 21 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ.
ಪಶುಸಂಗೋಪನೆಯಿಂದಲೂ ಆದಾಯ: ತಂದೆ ಬಂದೇನವಾಝ್ ಅವರ ಸಹಕಾರ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಆಧುನಿಕ ಯಂತ್ರೋಪಕರಣಗಳು ಮತ್ತು ಕೃಷಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಶಫಿ, ಪಶುಸಂಗೋಪನೆಗೂ ಆದ್ಯತೆ ನೀಡಿದ್ದಾರೆ. ಎರಡು ಎತ್ತುಗಳು, ಹಸು ಮತ್ತು ಕರು, ಮೂರು ಕುರಿಗಳು, ಎರಡು ಆಡುಗಳು ಹಾಗೂ 20 ಕೋಳಿಗಳನ್ನು ಸಾಕುತ್ತಿದ್ದಾರೆ. ಇದರಿಂದಲೂ ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ.
ಕೃಷಿ ಮತ್ತು ಪಶುಸಂಗೋಪನೆಯನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡಿರುವುದು ಇವರ ಯಶಸ್ಸಿನ ಪ್ರಮುಖ ಅಂಶವಾಗಿದೆ. ಪಶುಗಳಿಂದ ದೊರೆಯುವ ಸಗಣಿಯನ್ನು ಸಾವಯವ ಗೊಬ್ಬರವಾಗಿ ಬಳಸುವುದು, ಕೃಷಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಜಮೀನಿನ ಸಂಪನ್ಮೂಲಗಳನ್ನು ಮರುಬಳಕೆ ಮಾಡಿಕೊಳ್ಳುವ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.
ಅರ್ಧ ಎಕರೆ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಮೀನುಗಾರಿಕೆಯನ್ನೂ ಕೈಗೊಂಡಿದ್ದಾರೆ. ರಾಯಚೂರು ಜಿಲ್ಲೆಯಂತಹ ಬಿಸಿಲು ಹೆಚ್ಚಾಗಿರುವ ಪ್ರದೇಶದಲ್ಲಿ ನೀರಿನ ಲಭ್ಯತೆ ಕೃಷಿಗೆ ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಮಳೆನೀರಿನ ಸಂಗ್ರಹ, ಕೃಷಿ ಹೊಂಡದ ಬಳಕೆ ಹಾಗೂ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವ ಮೂಲಕ ಮಳೆಯ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಂಡಿದ್ದಾರೆ.
ಮಾವಿನ ಬೆಳೆಯಿಂದ ಕೈತುಂಬ ಆದಾಯ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯ ಕೊರತೆ ಹಾಗೂ ಬರದ ಪರಿಸ್ಥಿತಿಯಿಂದ ಅನೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಬಂದೇನವಾಝ್ಕುಟುಂಬವು ಸಾಂಪ್ರದಾಯಿಕ ಬೆಳೆಗಳ ಜತೆಗೆ ಮಾವಿನ ತೋಟದಿಂದ ಗಮನಾರ್ಹ ಆದಾಯ ಗಳಿಸಿದೆ.
ಸುಮಾರು 400 ಮಾವಿನ ಗಿಡಗಳನ್ನು ಬೆಳೆಸಿದ್ದು, ಈ ಬೇಸಿಗೆಯ ಹಂಗಾಮಿನಲ್ಲಿ ಮಾವಿನ ಬೆಳೆಯಿಂದ ಸುಮಾರು 10 ಲಕ್ಷ ರೂ. ಲಾಭ ಗಳಿಸಿದ್ದಾರೆ. ಇದಕ್ಕಾಗಿ ತಗುಲಿದ ವೆಚ್ಚ ಕೇವಲ 1.50 ಲಕ್ಷ ರೂ. ಎಂದು ಮಹಮ್ಮದ್ ಶಫಿ ತಿಳಿಸಿದ್ದಾರೆ.
ಕೇಸರ್, ಬೆನಿಶನ್ (ಬನಗನಪಲ್ಲಿ), ಮಲ್ಲಿಕಾ ಹಾಗೂ ಲಾಲ್ ಬಹಾರ್ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ಈ ಪೈಕಿ ಕೇಸರ್ ತಳಿಗೆ ಹೆಚ್ಚಿನ ಬೇಡಿಕೆ ಇತ್ತು. ಒಂದು ಕೆ.ಜಿ. ಮಾವಿನ ಹಣ್ಣನ್ನು 150ರಿಂದ 200 ರೂ.ರವರೆಗೆ ಮಾರಾಟ ಮಾಡಿದ್ದಾರೆ.
ರಾಯಚೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಜತೆಗೆ, ಅನೇಕ ಗ್ರಾಹಕರು ನೇರವಾಗಿ ಜಮೀನಿಗೆ ಬಂದು ಮಾವಿನ ಹಣ್ಣುಗಳನ್ನು ಖರೀದಿಸಿದ್ದಾರೆ. ಇದರಿಂದ ಸಾರಿಗೆ ವೆಚ್ಚ ಸೇರಿದಂತೆ ಇತರ ಖರ್ಚುಗಳನ್ನು ಉಳಿಸಲು ಸಾಧ್ಯವಾಗಿದೆ. ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡುವುದರ ಜತೆಗೆ, ಕ್ಯಾನ್ ಮೂಲಕ ಖರೀದಿಸುವವರಿಗೆ ಕಡಿಮೆ ದರದಲ್ಲಿ ಹಣ್ಣುಗಳನ್ನು ನೀಡಿದ್ದಾರೆ. 20 ಕೆ.ಜಿ. ತೂಕದ ಒಂದು ಕ್ಯಾನ್ ಮಾವಿನ ಹಣ್ಣನ್ನು ರೂ. 1,000ಕ್ಕೆ ಮಾರಾಟ ಮಾಡಿದ್ದಾರೆ.
ವೈವಿಧ್ಯಮಯ ಬೆಳೆಗಳ ಆಯ್ಕೆ, ನೀರಿನ ಮಿತಬಳಕೆ, ಪಶುಸಂಗೋಪನೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳ ಮಾರಾಟ; ಈ ಎಲ್ಲ ಅಂಶಗಳನ್ನು ಸಮನ್ವಯಗೊಳಿಸಿರುವ ಶಫಿ ಕುಟುಂಬವು ಸಮಗ್ರ ಕೃಷಿ ಪದ್ಧತಿಯ ಮೂಲಕ ಇತರ ರೈತರಿಗೆ ಮಾದರಿಯಾಗಿದೆ.
ಯರಗೇರಾ ಗ್ರಾಮದ ಬಂದೇನವಾಝ್ ಕುಟುಂಬದ ಯುವ ರೈತ ಮಹಮ್ಮದ್ ಶಫಿ ಅವರು ಆಧುನಿಕ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಾರ್ಷಿಕ ರೂ.21 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಕೃಷಿಯನ್ನು ಒಂದೇ ಬೆಳೆಗೆ ಸೀಮಿತಗೊಳಿಸದೆ, ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಒಗ್ಗೂಡಿಸಿದ್ದಾರೆ. ಇದರಿಂದ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಲು ಸಾಧ್ಯ ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
-ತಿಮ್ಮಣ್ಣ ನಾಯಕ, ವಿಸ್ತರಣಾ ನಿರ್ದೇಶಕ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ರಾಯಚೂರು.
ಸ್ವಂತ ಜಮೀನು ಇದ್ದರೂ ಅನೇಕರು ಅದನ್ನು ಲೀಸ್ ಗೆ ನೀಡಿ ಉದ್ಯೋಗಕ್ಕೆ ಹೋಗುತ್ತಾರೆ. ಆದರೆ ಬೇರೆಯವರ ಬಳಿ ಕೆಲಸ ಮಾಡುವ ಬದಲು ನಾವೇ ಕೃಷಿ ಮಾಡೋಣ ಎಂದು ನಿರ್ಧರಿಸಿ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡೆವು. ಸಾಂಪ್ರದಾಯಿಕ ಕೃಷಿಯಲ್ಲಿ ನಷ್ಟವಾಗುವ ಸಾಧ್ಯತೆಗಳಿದ್ದರೂ ಸಮಗ್ರ ಕೃಷಿ ಪದ್ಧತಿಯಿಂದ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಬಹುದು. ನಮ್ಮ ಕುಟುಂಬವು ಮೂರು ಎಕರೆ ಜಮೀನಿನಿಂದ ಕೃಷಿ ಆರಂಭಿಸಿತು. ಕೃಷಿ ಲಾಭದಾಯಕವಾಗುತ್ತಿದ್ದಂತೆ ಜಮೀನಿನ ವಿಸ್ತೀರ್ಣವನ್ನೂ ಹೆಚ್ಚಿಸಿಕೊಂಡೆವು.
-ಮಹಮ್ಮದ್ ಶಫಿ, ಯುವ ರೈತ, ಯರಗೇರಾ.






