ಕಿವಿಯಲ್ಲಿ ಗೂಗೆ ತೆಗೆಯುವ ‘ಘ್ಯಾರೆ’ ಸಮುದಾಯ

ಘ್ಯಾರೆ ಸಮುದಾಯದ ಜನಸಂಖ್ಯೆ ಕೇವಲ ಸಾವಿರದಿಂದ ಸಾವಿರದೈನೂರರ ಒಳಗೆ ಇರಬಹುದು. ಇವರನ್ನು ಮುಸ್ಲಿಮ್ ಮತದವರು ಎಂದು ಗುರುತಿಸುವುದರಿಂದ ಇವರ ಜಾತಿಯ ಅಸ್ಮಿತೆ ಮರೆಯಾಗಿದೆ. ಈ ಕಾರಣಕ್ಕೆ ಇವರಿಗೆ ಸರಕಾರದ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಶಿಕ್ಷಣವಂತೂ ಇಲ್ಲವೇ ಇಲ್ಲ, ಇನ್ನು ಜಾತಿ ಸರ್ಟಿಫಿಕೇಟ್ ಅಂತೂ ಸಿಗಲು ಸಾಧ್ಯವೇ ಇಲ್ಲ. ಜಾತಿ ಸರ್ಟಿಫಿಕೇಟ್ ನೀಡುವ ಅಧಿಕಾರಿಗಳಿಗೆ ಈ ಸಮುದಾಯದ ಅಸ್ತಿತ್ವದ ಅರಿವೇ ಇಲ್ಲ!
ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಚಿಕ್ಕ ಪೆಟ್ಟಿಗೆಯನ್ನು ಹೆಗಲಿಗೆ ನೇತಾಕಿಕೊಂಡು ಸಂತೆ, ಜಾತ್ರೆಗಳನ್ನು ಸುತ್ತುತ್ತಾ ಅಲ್ಲಲ್ಲಿ ಜನರನ್ನು ‘‘ಯಜಮಾನರೆ ನಿಮ್ಮ ಕಿವಿಯಲ್ಲಿ ಗೂಗೆ ತೆಗೆದು ಸ್ವಚ್ಛ ಮಾಡುತ್ತೇನೆ ಬನ್ನಿ, ನಾಲ್ಕಾಣೆ ಕೊಡಿ ಸಾಕು’’ ಎಂದು ಕರೆಯುತ್ತ ರಸ್ತೆ ಬದಿ ಕುಳಿತು ಕಿವಿಗಳಲ್ಲಿ ಗೂಗೆ ತೆಗೆಯುತ್ತಾ ತಮ್ಮ ಅಂಗೈಗೆ ಗೂಗೆ ಇಡುತ್ತಿದ್ದ ವರನ್ನು ನೋಡಿರುತ್ತೀರಿ. ಹಿಂದೆ ಬೆಂಗಳೂರಿನ ಕೆಂಪೇಗೌಡ ಬಸ್ ಸ್ಟ್ಯಾಂಡ್ ಬಳಿ ಕೂಡ ಈ ಗೂಗೆ ತೆಗೆಯುವ ಜನ ಇರುತ್ತಿದ್ದರು, ಇವರು ಹೋಗಿ ಬರುವವರ ಹಿಂದೆ ಹೋಗುತ್ತಾ ಗೂಗೆ ತೆಗೆಯುತ್ತೇವೆಂದು ಪೀಡಿಸುತ್ತಿದ್ದರು.
ಗೂಗೆ ತೆಗೆಯುವುದು ಒಂದು ಕುಲವೃತ್ತಿ, ಈ ಕಾಯಕದ ಜನರನ್ನು ‘ಘ್ಯಾರೆ’ ಸಮುದಾಯದವರು ಎನ್ನುತ್ತಾರೆ ಎಂಬುದು ಗೊತ್ತಿರಲಿಲ್ಲ.
ಒಮ್ಮೆ ಗುಲಬರ್ಗಾಕ್ಕೆ ಹೋಗಿದ್ದಾಗ ಅಲ್ಲಿನ ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಸ್ತಾನ್ ಬೀರಾದಾರ್ ಎನ್ನುವ ಗೆಳೆಯರು ‘‘ಸಾರ್, ಇಲ್ಲಿ ಗೂಗೆ ತೆಗೆಯುವ ಘ್ಯಾರೆ ಜನಾಂಗದವರು ಇದ್ದಾರೆ, ಹೋಗಿ ಬರೋಣವೇ..?’’ ಎಂದರು. ನನಗೆ ಕುತೂಹಲ ತಡೆಯಲಾಗಲಿಲ್ಲ, ‘‘ನಡೀರಿ ಈಗಲೇ ಹೋಗೋಣ..’’ ಎಂದು ಆತುರಾತುರವಾಗಿ ಹೊರಟೆವು. ಗುಲಬರ್ಗಾದ ಅಂಚಿನಲ್ಲಿದ್ದ ಸೋನಿಯಾ ಗಾಂಧಿಯವರ ಹೆಸರಿನ ಸ್ಲಮ್ ಅದು. ಇಡೀ ಕಾಲನಿಯಲ್ಲಿ ಬಹುತೇಕ ಅಲೆಮಾರಿಗಳೇ ಇದ್ದರು. ಅಲ್ಲಲ್ಲಿ ಗಿಣಿಶಾಸ್ತ್ರ ಹೇಳುವ ‘ಜೋಷಿ’ಗಳು ಒಂದು ಪುಟ್ಟ ಗಿಣಿಪಂಜರವನ್ನು ಹೆಗಲಿಗೆ ತಗಲಿಸಿಕೊಂಡು ಓಡಾಡುತ್ತಿದ್ದರು. ಆ ಪಂಜರದೊಳಗಿನ ಗಿಣಿಗಳು ಏನನ್ನೋ ಹೇಳುವಂತೆ ಚಿಲಿಪಿಲಿಗುಟ್ಟುತ್ತಿದ್ದವು, ಮತ್ತೆ ಕೆಲ ಹೆಂಗಸರು ರಸ್ತೆ ಬದಿಯಲ್ಲಿ ಚಮಕಿ ಹಗ್ಗಗಳನ್ನು ನೇಯುತ್ತಾ ಕುಳಿತಿದ್ದರು. ಸಂಜೆಯಾಗಿದ್ದರಿಂದ ಊರಬೀದಿಗಳಲ್ಲಿ ಅಲೆದಾಡುತ್ತಾ ಗೂಗೆ ತೆಗೆಯುವ ಕಾಯಕ ಮಾಡಿಕೊಂಡ ಘ್ಯಾರೆ ಸಮುದಾಯದ ಗಂಡಸರು ಅದಾಗ ತಾನೇ ಗುಡಿಸಲಿಗೆ ಬಂದಿದ್ದರು.
ನಮ್ಮ ಮಸ್ತಾನ್ ಬೀರಾದಾರ್‌ಗೆ ಇವರ ಪರಿಚಯ ಇದ್ದದ್ದರಿಂದ ಎಲ್ಲರೂ ಬೀದಿಯಬದಿಯಲ್ಲಿ ನಮಗೆ ಸುತ್ತುವರಿದರು. ಎಲ್ಲೋ ಹುಡುಕಿ ನನಗೊಂದು ಕುರ್ಚಿ ಹಾಕಿದರು. ನಾನು ಅವರ ಬದುಕುಗಳ ಕುರಿತು ವಿಚಾರಿಸತೊಡಗಿದೆ.
ತಾವು ಸದಾ ಹೆಗಲಿಗೆ ನೇತಾಕಿಕೊಂಡು ಓಡಾಡುವ ಪೆಟ್ಟಿಗೆಯನ್ನು ನನ್ನ ಮುಂದೆ ಹಿಡಿದರು, ಅದರಲ್ಲಿ ಸಣ್ಣಸಣ್ಣ ಬಾಟಲಿಗಳಲ್ಲಿ ಯಾವುದೋ ರಾಸಾಯನಿಕ ಇತ್ತು. ಮಿಕ್ಕಂತೆ ಗೂಗೆ ತೆಗೆಯುವ ಗೂಗೆಕಟ್ಟಿ, ತೆಳ್ಳಗಿನ ಕಬ್ಬಿಣ ಅಥವಾ ಹಿತ್ತಾಳೆ ಸಲಾಕೆ, ಒಂದು ತುದಿ ಚಮಚದ ಹಾಗೆ, ಇನ್ನೊಂದು ತುದಿ ಚೂಪಾಗಿರುತ್ತೆ. ಅದಕ್ಕೆ ‘ಕಿವಿಗೋಲು’ ಅನ್ನುತ್ತಾರೆ. ಇದರೊಂದಿಗೆ ಸಣ್ಣ ಇಕ್ಕಳದಂತಹ ಸಾಧನ ಇತ್ತು. ಗೂಗೆ ತೆಗೆಯುವ ಮುಂಚೆ ಹತ್ತಿಯಲ್ಲಿ ರಾಸಾಯನಿಕವನ್ನು ಅದ್ದಿ ಕಿವಿ ಸ್ವಚ್ಛ ಮಾಡುತ್ತಾರಂತೆ. ಆ ರಾಸಾಯನಿಕದಿಂದಾಗಿ ಆ ಸಮಯಕ್ಕೆ ಕಿವಿಯಲ್ಲಿ ನೋವಾಗದಂತೆ ಅದು ಒಂದು ರೀತಿಯ ಲೋಕಲ್ ಕ್ಲೋರೋಪಾರಂ ರೀತಿ ಕೆಲಸ ಮಾಡುತ್ತದಂತೆ. ಈ ರಾಸಾಯನಿಕ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುತ್ತದಂತೆ. ಇದರಿಂದಾಗಿ ಕಿವಿಯಲ್ಲಿ ಗೂಗೆ ತೆಗೆಯುವಾಗ ತೆಗೆಸಿಕೊಳ್ಳುವವರಿಗೆ ನೋವಾಗುವುದಿಲ್ಲ. ‘‘ಕಣ್ಣಲ್ಲಿ ಸೂಕ್ಷ್ಮ ಕಲ್ಲನ್ನು ಕೂಡ ನೀವು ತೆಗೆಯುತ್ತೀರಲ್ಲವೆ..?’’ ಎಂದೆ, ಆತ ಸಣ್ಣದಾಗಿ ನಗುತ್ತಾ ‘‘ಹೌದು ಸರ್’’ ಅಂದ. ‘‘ಕಣ್ಣಲ್ಲಿ ಕಲ್ಲು ಹೇಗಿರುತ್ತೆ..?’’ ಎಂದು ಮೂರ್ಖ ಪ್ರಶ್ನೆಯನ್ನು ಕೇಳಿದೆ. ಆತ ನಗುತ್ತಾ ಮಸ್ತಾನ್ ಮುಖ ನೋಡಿದ, ಮಸ್ತಾನ್ ‘‘ಪರವಾಗಿಲ್ಲ ಹೇಳಿ ಅವರೂ ನಮ್ಮವರೆ..’’ ಎಂದರು. ಆತ ಸಣ್ಣ ಡಬ್ಬಿಯೊಂದರಲ್ಲಿ ಇದ್ದ ಅತಿಸಣ್ಣ ಕಲ್ಲುಗಳಲ್ಲಿ ಒಂದನ್ನು ತೆಗೆದು ನನ್ನ ಅಂಗೈಯಲ್ಲಿಟ್ಟ. ‘‘ಕಣ್ಣಲ್ಲಿ ಕಲ್ಲು ಇರಲ್ಲ ಸಾರ್, ಕೆಲವರನ್ನು ಕಣ್ಣು ಕೆಂಪಗಿದೆ ಬನ್ನಿ ಏನೋ ಇದೆ ಕ್ಲೀನ್ ಮಾಡ್ತೀವಿ..ಅಂದಾಗ ಅವರು ಬರುತ್ತಾರೆ. ಕಣ್ಣನ್ನು ರಾಸಾಯನಿಕದಲ್ಲಿ ಕ್ಲೀನ್ ಮಾಡಿ, ಕಲ್ಲನ್ನು ತೆಗೆಯುವಂತೆ ಕೈಚಳಕದಿಂದ ನಮ್ಮ ಬೆರಳ ಮಧ್ಯೆ ಇರುವ ಕಲ್ಲನ್ನು ಅವರ ಕಣ್ಣಿಂದ ತೆಗೆದಂತೆ ಅವರ ಅಂಗೈಗೆ ಇಡುತ್ತೇವೆ.. ಅದಕ್ಕೆ ಒಂದು ರೂಪಾಯಿ ಕೊಡುತ್ತಾರೆ.. ಏನೋ ಹೊಟ್ಟೆಪಾಡಿಗೆ ಇವೆಲ್ಲ ಮಾಡ್ತೀವಿ ಸರ್..’’ ನಮ್ಮನ್ನು ಸುತ್ತುವರಿದಿದ್ದ ಘ್ಯಾರೆ ಸಮುದಾಯದವರ ಕಣ್ಣಲ್ಲಿ ಅವರ ಯಾಮಾರಿಸುವ ಕಲೆಯನ್ನು ಹೇಳಿದ್ದಕ್ಕೆ ಒಂದಷ್ಟು ನಗೆಯಿತ್ತು.
ಘ್ಯಾರೆ ಸಮುದಾಯದವರು ಮುಸ್ಲಿಮ್ ಮತಕ್ಕೆ ಸೇರಿದ ಅಲೆಮಾರಿಗಳು. ಈಗೀಗ ಗ್ರಾಮಾಂತರ ಜನರಲ್ಲೂ ಒಂದಷ್ಟು ಅರಿವು ಬಂದಿದ್ದು, ಗೂಗೆ ತೆಗೆಯಲು ಕಿವಿಯನ್ನು ಇವರ ಕೈಗೆ ಸುಲಭವಾಗಿ ಕೊಡುವುದಿಲ್ಲ. ಅನೇಕ ಜನರಿಗೆ ಇವರ ಕೈಗೆ ಕಿವಿ ಕೊಟ್ಟರೆ ಕಿವಿಗೆ ಏನಾದರೂ ಅಪಾಯವಾಗುತ್ತದೆ ಎಂಬ ಅರಿವು ಮೂಡಿ, ಗ್ರಾಮಗಳ ಜನ ಕಿವಿಯಲ್ಲಿ ಗೂಗೆ ತೆಗೆಸಿಕೊಳ್ಳಲು ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲೂ ಹೇರಳವಾಗಿರುವ ಇ.ಎನ್.ಟಿ. ವೈದ್ಯರ ಕ್ಲಿನಿಕ್‌ಗಳಿಗೆ ಹೋಗುತ್ತಾರೆ. ಇದರಿಂದಾಗಿ ಘ್ಯಾರೆಗಳ ಬದುಕು ಬಹಳ ದುಸ್ತರವಾಗಿದೆ. ಕೆಲವೊಮ್ಮೆ ಇಡೀ ದಿನ ಸುತ್ತಿದರೂ ಹತ್ತಿಪ್ಪತ್ತು ರೂಪಾಯಿ ಗಳಿಸುವುದು ಕಷ್ಟ. ಈ ಕಾರಣಕ್ಕೆ ಘ್ಯಾರೆ ಹೆಂಗಸರು ಮಾರುಕಟ್ಟೆಯಿಂದ ಹೊಳೆಹೊಳೆಯುವ ಚಮಕಿ ದಾರಗಳನ್ನು ತಂದು ಪಳಪಳಿಸುವ ಹಗ್ಗ ಹೆಣೆದು, ಮಾರಿ ಜೀವನ ಸವೆಸುತ್ತಾರೆ. ದಿನದಿಂದ ದಿನಕ್ಕೆ ಇವರ ಬದುಕು ತೀರಾ ದುಸ್ತರವಾಗುತ್ತಿದೆ.
‘ಕಿವಿ ಗೂಗೆ ಘಾರೆಯವರು’ ಅಥವಾ ‘ಕಿವಿ ಕೆರೆವ ಘಾರೆಯವರು’ ಅಂತಲೂ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ‘ಕಾನ್ ಸಾಫ್ ಕರನೇ ವಾಲೆ’ ಅನ್ನುತ್ತಾರೆ. ಹಳ್ಳಿಗಳಲ್ಲಿ ಇಂದಿಗೂ ಕೆಲ ಮುದುಕರು ‘‘ಏ ಘಾರಪ್ಪ, ಕಿವಿ ಕೆರೆದು ಹೋಗು’’ ಎಂದು ಕರೆಯುತ್ತಾರೆ. ಸಮುದಾಯದ ಈಗಿನ ಯುವಕರು ಈಗ ಇದನ್ನು ಅವಮಾನ ಎಂದು ಭಾವಿಸುತ್ತಾರೆ. ‘‘ನಮಗೆ ಶಿಕ್ಷಣ ಕೊಡಿ, ಸರಕಾರಿ ಕೆಲಸ ಕೊಡಿ, ಕಿವಿ ಕೆರೆಯೋ ಕೆಲಸ ಬೇಡ’’ ಎಂದು ಈಚೆಗೆ ಧ್ವನಿ ಮಾಡುತ್ತಿದ್ದಾರೆ.
ಘ್ಯಾರೆ ಸಮುದಾಯದ ಜನಸಂಖ್ಯೆ ಕೇವಲ ಸಾವಿರದಿಂದ ಸಾವಿರದ ಐನೂರರ ಒಳಗೆ ಇರಬಹುದು. ಇವರನ್ನು ಮುಸ್ಲಿಮ್ ಮತದವರು ಎಂದು ಗುರುತಿಸುವುದರಿಂದ ಇವರ ಜಾತಿಯ ಅಸ್ಮಿತೆ ಮರೆಯಾಗಿದೆ. ಈ ಕಾರಣಕ್ಕೆ ಇವರಿಗೆ ಸರಕಾರದ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಶಿಕ್ಷಣವಂತೂ ಇಲ್ಲವೇ ಇಲ್ಲ, ಇನ್ನು ಜಾತಿ ಸರ್ಟಿಫಿಕೇಟ್ ಅಂತೂ ಸಿಗಲು ಸಾಧ್ಯವೇ ಇಲ್ಲ. ಜಾತಿ ಸರ್ಟಿಫಿಕೇಟ್ ನೀಡುವ ಅಧಿಕಾರಿಗಳಿಗೆ ಈ ಸಮುದಾಯದ ಅಸ್ತಿತ್ವದ ಅರಿವೇ ಇಲ್ಲ!
ನಾವು ಘ್ಯಾರೆ ಕಾಲನಿಗೆ ಹೋಗಿದ್ದದ್ದು ರಮಝಾನ್ ಸಮಯದಲ್ಲಿ. ಯಾರೋ ಸಮಾಜ ಸೇವಕರು ರಮಝಾನ್ ಪ್ರಯುಕ್ತ ಇಲ್ಲಿನ ಘ್ಯಾರೆ ಹೆಣ್ಣುಮಕ್ಕಳಿಗೆ ಒಂದೊಂದು ಸೀರೆ ಮತ್ತು ಒಂದೊಂದು ಬುರ್ಕಾ ಹಂಚಿದ್ದರಂತೆ. ಈ ಹೆಣ್ಣುಮಕ್ಕಳು ಸೀರೆಯನ್ನು ಮಾತ್ರ ತೆಗೆದುಕೊಂಡು ಬುರ್ಕಾ ಅನ್ನು ಅಲ್ಲೇ ಬಿಟ್ಟು ಹೋಗಿದ್ದರಂತೆ! ಈ ಬಗ್ಗೆ ಕೇಳಿದಾಗ ‘‘ನಾವು ಬುರ್ಕಾ ಧರಿಸಿ ಹಗ್ಗ ಹೆಣೆಯುವುದು ಹೇಗೆ? ಬುರ್ಕಾ ಧರಿಸಿ ಈ ಹಗ್ಗಗಳನ್ನು ಸಂತೆಗಳಲ್ಲಿ ಮಾರುವುದಾದರೂ ಹೇಗೆ? ನಮ್ಮ ಕೆಲಸಕ್ಕೆ ಬುರ್ಕಾ ತೊಡಕಾಗುತ್ತದೆ. ಆದ್ದರಿಂದ ಬುರ್ಕಾ ಧರಿಸಲ್ಲ’’ ಎನ್ನುತ್ತಾರೆ. ಮಿಕ್ಕಂತೆ ಮುಸ್ಲಿಮ್ ಸಮುದಾಯದ ಹಬ್ಬಗಳನ್ನು, ಸಂಪ್ರದಾಯಗಳನ್ನು ತಪ್ಪದೇ ಆಚರಿಸುತ್ತಾರೆ.
ಇನ್ನೂ ಇಂತಹದೊಂದು ಸಮುದಾಯವಿದೆ, ಇದನ್ನು ಕಣ್ಣುತೆರೆದು ನೋಡಿ ಎಂದು ಸರಕಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ...?






