ಸುಪ್ರೀಂ ಕೋರ್ಟ್ನ ‘ಟ್ರಿಪಲ್ ಟೆಸ್ಟ್’ ಆದೇಶ ಉಲ್ಲಂಘಿಸಿ ಮೀಸಲಾತಿ ಪ್ರಕಟಿಸಿರುವ ಸರಕಾರ

ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನ್ಯಾ. ಭಕ್ತವತ್ಸಲ ಸಮಿತಿ ವರದಿ ಸಲ್ಲಿಸುತ್ತಿರುವುದು
ಸರಕಾರ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ?
ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ.
ಕಳೆದ ನಾಲ್ಕೈದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿರುವ ಸರಕಾರ ಈಗ ಏಕಾಏಕಿ ಜಿಬಿಎ ವಾರ್ಡ್ಗಳಿಗೆ ಮೀಸಲಾತಿ ಪ್ರಕಟಿಸಿದೆ. ಪ್ರಕಟಣೆಗೂ ಮುನ್ನ ಸರಕಾರ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದಿರುವುದು, ಗೌರವಿಸದಿರುವುದು ಸರಕಾರದ ಉದ್ಧಟತನಕ್ಕೆ ಸಾಕ್ಷಿ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳಿರುತ್ತವೆ. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಪ್ರಜೆಗಳು ತಮ್ಮ ಅಭಿಮತದಂತೆ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕಿರುತ್ತದೆ. ಮತದಾನ ಜನಪ್ರತಿನಿಧಿಗಳನ್ನು ಜವಾಬ್ದಾರರನ್ನಾಗಿ ಮಾಡಲು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಮಹತ್ವದ ಸಾಧನವಾಗಿದೆ. ಇದು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು ಜನರ ಆಶಯಗಳನ್ನು ಪ್ರತಿಬಿಂಬಿಸುವ ಮತ್ತು ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಸರಕಾರವು ಕೂಡ ನೀತಿ-ನಿಯಮ, ಆದೇಶಗಳನ್ನು ಪಾಲಿಸಬೇಕಾಗುತ್ತದೆ.
ಆದರೆ, ಸರಕಾರ ಜಿಬಿಎ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸುವಲ್ಲಿ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ವಿಧಿಸಿರುವ ಆದೇಶವನ್ನು ಪಾಲಿಸಿಲ್ಲ. ಅದುವೇ ‘ಟ್ರಿಪಲ್ ಟೆಸ್ಟ್’ (ತ್ರಿಸ್ತರ). ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಮೂರು ದಶಕಗಳ ಇತಿಹಾಸವೇ ಇದೆ. 1993ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಲಾಗಾಯ್ತಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿರುವುದು ಸರಿಯಷ್ಟೇ. ಸರಕಾರವು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯಾವುದೇ ಋಜು ಮಾರ್ಗ ಅನುಸರಿಸದೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಿರಿಸಿದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನೇ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಗೂ ಒಳಪಡಿಸಿರುವುದು ಮತ್ತು ಮೀಸಲಾತಿ ಕೋಟಾವನ್ನು ಶೇ. 50ಕ್ಕಿಂತ ಹೆಚ್ಚಿಸಿರುವುದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು. ಅದರಲ್ಲೂ ಪ್ರಶ್ನಿತರ ಮುಖ್ಯ ವಾದವೆಂದರೆ ಮೀಸಲಾತಿ ಶೇ. 50ಕ್ಕಿಂತ ಮೀರಿ ಹೋಗಿದೆ ಎಂಬುದೇ ಆಗಿತ್ತು.
ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ (ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳುವಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಆದೇಶವನ್ನು ವಿಧಿಸಿತು (ಕೆ. ಕೃಷ್ಣಮೂರ್ತಿ vs ಭಾರತ ಒಕ್ಕೂಟ). 2010ರಲ್ಲಿ ಇದ್ದ ಅಂದಿನ ಭಾಜಪ ಸರಕಾರ ಮೀಸಲಾತಿಯ ಮಿತಿಯನ್ನು ಶೇ. 50ರಷ್ಟಕ್ಕೆ ಇಳಿಸಿತೇ ವಿನಾ ಟ್ರಿಪಲ್ ಟೆಸ್ಟ್ ನ ಗೋಜಿಗೆ ಹೋಗದೆ ಹಿಂದುಳಿದ ವರ್ಗಗಳ ಬಗ್ಗೆ ಕ್ರೌರ್ಯ ಮೆರೆಯಿತು.
ಟ್ರಿಪಲ್ ಟೆಸ್ಟ್ ಆದೇಶ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುವುದರಿಂದ ಕರ್ನಾಟಕವು ಅವನ್ನು ಅನುಷ್ಠಾನ ಮಾಡಬೇಕಾಗುತ್ತದೆ. ಅವೆಂದರೆ- 1.ರಾಜ್ಯದೊಳಗೆ ಹಿಂದುಳಿದ ಸಂಸ್ಥೆಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸಮಕಾಲೀನ ಕಟ್ಟುನಿಟ್ಟಿನ ಪ್ರಾಯೋಗಿಕ ವಿಚಾರಣೆ ನಡೆಸಲು ಮೀಸಲಾದ ಆಯೋಗವನ್ನು ಸ್ಥಾಪಿಸುವುದು. 2. ಆಯೋಗದ ಶಿಫಾರಸುಗಳ ಬೆಳಕಿನಲ್ಲಿ ಸ್ಥಳೀಯ ಸಂಸ್ಥೆವಾರು ಒದಗಿಸಬೇಕಾದ ಮೀಸಲಾತಿಯ ಕೋಟಾವನ್ನು ನಿರ್ದಿಷ್ಟಪಡಿಸುವುದರಿಂದ ಮಿತಿಮೀರಿದ ಪ್ರಮಾಣದಲ್ಲಿ ತಪ್ಪಾಗುವುದಿಲ್ಲ. 3. ಯಾವುದೇ ಸಂದರ್ಭದಲ್ಲಿ ಅಂತಹ ಮೀಸಲಾತಿಯು ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು/ಇತರ ಹಿಂದುಳಿದ ವರ್ಗಗಳ ಪರವಾಗಿ ಮೀಸಲಾಗಿರುವ ಸ್ಥಾನಗಳು ಶೇ. 50ರಷ್ಟು ಕೋಟಾವನ್ನು ಮೀರಬಾರದು.
ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿಯೂ ಕೂಡ, 2010ರಲ್ಲಿಯೇ ಪ್ರಶ್ನಿತಗೊಂಡು, ವಿಭಾಗೀಯ ಪೀಠ ಟ್ರಿಪಲ್ ಟೆಸ್ಟ್ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿತು(ರಾಜ್ಯ ಚುನಾವಣಾ ಆಯೋಗ vs ಕರ್ನಾಟಕ ಸರಕಾರ). ಆದೇಶದಲ್ಲಿ ಪ್ರಬಲ ಜಾತಿಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯವಾಗಿ ಆಧಿಪತ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಿ ಈ ರೀತಿಯ ಅಭಿಪ್ರಾಯ ಪಟ್ಟಿದೆ: ‘‘...It would be legetimate for the state government to exclude all the known accepted and aclaimed 'politically advanced' castes from the list of backward classes for the purpose of reservation in the ensuing elections’’. ಅಷ್ಟರಲ್ಲಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ, ಚುನಾವಣೆ ನಡೆಸಲು ಸಹ ಅನುಮತಿ ನೀಡಿತು. ಮತ್ತೆ 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದ ಸರಕಾರ, ಆಗಲೂ ಟ್ರಿಪಲ್ ಟೆಸ್ಟ್ ಮಾಡುವ ಉಸಾಬರಿಗೆ ಹೋಗಲಿಲ್ಲ.
ಮುಂದೊಂದು ದಿನ, ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ, ವಿಕಾಸ್ ರಾವ್ ಗೌಳಿ ಎಂಬವರು ಸಲ್ಲಿಸಿದ ಮನವಿ ಮೇರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸರ್ವೋಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ಟ್ರಿಪಲ್ ಟೆಸ್ಟ್ ನಡೆಸುವಂತೆ ತಾಕೀತು ಮಾಡಿತು. ಹಾಗೆಯೇ ಮಧ್ಯಪ್ರದೇಶದ ಪ್ರಕರಣ ಒಂದರಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಟ್ರಿಪಲ್ ಟೆಸ್ಟ್ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತು(ಸುರೇಶ್ ಮಹಾಜನ್ vs ಮಧ್ಯ ಪ್ರದೇಶ).
ಈ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನೀಡಿದ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರಕಾರವು ಅನ್ಯಮಾರ್ಗವಿಲ್ಲದೆ ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ಹೇರಿತು. ನಿಗದಿತ ಕಾಲಮಿತಿಯಲ್ಲಿ ಆಯೋಗ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ವರದಿ ಸಲ್ಲಿಸಲು ಸಾಧ್ಯವೇ ಎಂಬ ಅಂಶ ಅಂದು ಜನರ ಮಾತಾಯಿತು.
2022ರಲ್ಲಿ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಂದಿನ ಬಿಜೆಪಿ ಸರಕಾರ, ಟ್ರಿಪಲ್ ಟೆಸ್ಟ್ ಪರಿಶೀಲನಾ ಕಾರ್ಯಕ್ಕೆಂದು, ನ್ಯಾಯಮೂರ್ತಿ ಡಾ. ಭಕ್ತ ವತ್ಸಲ ಸಮಿತಿಯನ್ನು ರಚಿಸಿತು. ಈ ದಿಸೆಯಲ್ಲಿ ಆಯೋಗ ಯಾವ ಕಾರ್ಯವಿಧಾನ ಅನುಸರಿಸಿತು ಎಂಬುದು ಯಾರಿಗೂ ತಿಳಿಯದು. ಆಯೋಗ 90 ದಿನಗಳ ವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿ ಬಿಟ್ಟಿತು! ಮಾಂತ್ರಿಕನೋರ್ವನನ್ನು ಆಯೋಗ ಮೈಮೇಲೆ ಆವಾಹಿಸಿಕೊಂಡು ವರದಿ ಸಿದ್ಧ ಪಡಿಸಿರಬಹುದೇನೋ ಎಂದು ಯಾರಿಗಾದರೂ ಅನ್ನಿಸದಿರದು. ಉಭಯ ನ್ಯಾಯಾಲಯಗಳು ನಿರ್ಣಯಾತ್ಮಕ ಅಭಿಪ್ರಾಯ ನೀಡಿದ್ದರೂ ಆಯೋಗ ಇದಾವುದನ್ನೂ ಗಮನಿಸದಿರುವುದು ವಿಷಾದ ತರುವ ಸಂಗತಿ. ಆಯೋಗ ಯಾರದೋ ಮರ್ಜಿಗೆ ಒಳಗಾಗಿ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅಂಶಗಳನ್ನು ಮನಗಾಣದೆ ವರದಿ ನೀಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಅಂದು ಕೇಳಿ ಬಂದವು. ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಷ್ಟೇ ಸಾರ್ವಜನಿಕರಿಗೆ ತಿಳಿದು ಬಂದ ವಿಷಯ. ಆದರೆ ವರದಿಯಲ್ಲಿ ಏನಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸರಕಾರವು ಅದನ್ನು ಪ್ರಕಟಿಸುವ ತಂಟೆಗೆ ಹೋಗಲೇ ಇಲ್ಲ. ಸರಕಾರ ಜನಸಾಮಾನ್ಯರ ಅವಗಾಹನೆಗೆ ತರದೆ ಅದನ್ನು ಜಾರಿಗೊಳಿಸುವ ತುರ್ತಾದರೂ ಏನು ಎಂಬುದು ಪ್ರಶ್ನೆಯಾಗಿತ್ತು. ಇಷ್ಟಾದರೂ ವರದಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಗ್ರಣಿಗಳಾಗಲಿ ಒತ್ತಡ ತರದಿರುವುದು ಕೂಡ ಸರಕಾರ ಮತ್ತು ರಾಜಕೀಯ ಪಕ್ಷಗಳ ನಡುವೆ ಇರುವ ನೈತಿಕತೆಗೆ ಹೊರತಾದ ಒಡಂಬಡಿಕೆ ಇರಬಹುದು ಎಂಬ ಗುಮಾನಿ ಇದ್ದೇ ಇತ್ತು.
ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೊಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ಪಷ್ಟ ಮಾತಿನಲ್ಲಿ ಹೇಳಿತ್ತು. ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಸರಕಾರ ವರದಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ವರದಿಯನ್ನು ಅಂಗೀಕರಿಸಬೇಕು ಮತ್ತು ಸಂಪುಟದ ಮುಂದಿಟ್ಟು ಅನುಮೋದಿಸಿದ ನಂತರ ಅದನ್ನು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾಹೀರುಪಡಿಸಬೇಕು. ಅನಂತರ ಅವುಗಳನ್ನು ಮೀಸಲಾತಿಗೆ ಒಳಪಡಿಸಬೇಕು. ಆದರೆ ಸರಕಾರ ಮಾತ್ರ ಇದಾವ ಪ್ರಕ್ರಿಯೆಗಳನ್ನೂ ಅನುಸರಿಸದೆ ಜನತೆಯನ್ನು ಕಗ್ಗತ್ತಲಿನಲ್ಲಿಟ್ಟಿತ್ತು. 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಬೊಮ್ಮಾಯಿ ಸರಕಾರ ಪತನಗೊಂಡು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ಏರಿದರು.
ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರಕಾರದ ಸಂಪುಟದಲ್ಲಿ ನ್ಯಾ. ಭಕ್ತವತ್ಸಲ ಆಯೋಗದ ವರದಿಯನ್ನು ಚರ್ಚಿಸಿ ಆಯೋಗದ ಕೆಲವೊಂದು ಸಲಹೆಗಳನ್ನು ಒಪ್ಪಿ, ಕೆಲವೊಂದನ್ನು ತಿರಸ್ಕರಿಸಿದೆ ಎಂಬ ವಿಷಯ ಅಂದಿನ ದಿನಪತ್ರಿಕೆಗಳಿಂದ ತಿಳಿದು ಬಂದಿತಷ್ಟೇ. ಅಲ್ಲಿಗೆ ಈ ವಿಷಯದ ಮೇಲೆ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರಕಾರವಾದರೂ ನ್ಯಾಯಾಲಯದ ಆದೇಶದ ಪ್ರಕಾರ ಆಯೋಗವು ವರದಿ ಸಿದ್ಧಪಡಿಸಿದೆಯೇ ಎಂಬ ಅಂಶದ ಬಗ್ಗೆ ತಲೆನೋವು ಮಾಡಿಕೊಳ್ಳದೆ ಮುಂದುವರಿಯಿತು.
ಸರಕಾರ ಇಷ್ಟೆಲ್ಲಾ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ?
ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ.







