ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲ ಬೇಗೆ: ಕಲಬುರಗಿಯಲ್ಲಿ 42.8 ಡಿಗ್ರಿ ಸೆ. ಉಷ್ಣಾಂಶ ದಾಖಲು

ಕಲಬುರಗಿ, ಮಾ.15: ಪ್ರತೀ ವರ್ಷ ಫೆಬ್ರವರಿ ತಿಂಗಳು ಮುಕ್ತಾಯ ಹಂತದಲ್ಲಿರುವಾಗಲೇ ರಾಜ್ಯದಲ್ಲಿ ಬಿಸಿಲು ಶುರುವಾಗಲು ಪ್ರಾರಂಭಿಸುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ, ಬೀದರ್‌ನಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುತ್ತದೆ. ಈ ಪ್ರದೇಶದಲ್ಲಿ ಸರಾಸರಿ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿ ರುತ್ತದೆ ಎನ್ನುವುದು ಗಮನಾರ್ಹ.
ಅದರಂತೆಯೇ ಈ ಬಾರಿ ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿರುವುದು ವರದಿಯಾದರೆ, ವಿಜಯನಗರ, ಬೀದರ್‌ನಲ್ಲಿ 38 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿ ನ ಸರಾಸರಿ ಉಷ್ಣಾಂಶ ಇರುವುದು ಕಂಡುಬರುತ್ತದೆ. ಇದೀಗ ಭಾರತ ಹವಾಮಾನ ಇಲಾಖೆ(ಐಎಂಡಿ) ವರದಿಯ ಪ್ರಕಾರ, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗಿರುವುದು ದಾಖಲೆಯಾಗಿದೆ.
ಕೆಎಸ್‌ಎನ್‌ಡಿಎಂಸಿ ಹವಾಮಾನ ಮೇಲ್ವಿಚಾರಣಾ ಜಾಲದ ಪ್ರಕಾರ, ಮಾ.15ರ ಹಿಂದಿನ 24 ಗಂಟೆಗಳಲ್ಲಿ ಕಲಬುರಗಿ ಜಿಲ್ಲೆಯ 17 ಸ್ಥಳಗಳಲ್ಲಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ 13 ಸ್ಥಳಗಳಲ್ಲಿ, ಯಾದಗಿರಿ ಜಿಲ್ಲೆಯಲ್ಲಿ 8 ಸ್ಥಳಗಳಲ್ಲಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಲಾ 2 ಸ್ಥಳಗಳಲ್ಲಿ 40 ಸೆ. ಮತ್ತು ಹೆಚ್ಚಿನ ತಾಪಮಾನ ದಾಖಲಾಗಿದೆ. ಉಳಿದಂತೆ ವಿಜಯಪುರ ಜಿಲ್ಲೆಯಲ್ಲಿ 10 ಸ್ಥಳಗಳಲ್ಲಿ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ 6 ಸ್ಥಳಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿರುವುದು ತಿಳಿಸಿದೆ.
ಕಲಬುರಗಿ ಜಿಲ್ಲೆಯ ಐನಾಪುರದಲ್ಲಿ ಗರಿಷ್ಠ ಉಷ್ಣಾಂಶ ದಾಖಲು: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಹೋಬಳಿಯಲ್ಲಿ ರಾಜ್ಯದಲ್ಲಿಯೇ ಅತಿ ಗರಿಷ್ಠ ತಾಪಮಾನ ದಾಖಲಾಗಿದೆ. ಇಲ್ಲಿ ಮಾ.15ರ ಹಿಂದಿನ 24 ಗಂಟೆಗಳಲ್ಲಿ 42.8ಸೆ. ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ(ಐಎಂಡಿ) ವರದಿಯಲ್ಲಿ ಬಹಿರಂಗಪಡಿಸಿದೆ. ಅಲ್ಲದೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ತಾಂಡಾದಲ್ಲಿ 42.2ಸೆ., ಮಾದನ ಹಿಪ್ಪರ್ಗಾ 41.6ಸೆ., ಖಜೂರಿ 40.3ಸೆ., ಕಲಬುರಗಿ ತಾಲೂಕಿನ ಪಟ್ಟಣದಲ್ಲಿ 42.0ಸೆ., ಯಡ್ರಾಮಿ ತಾಲೂಕಿನ ಇಜೇರಿಯಲ್ಲಿ 41.4ಸೆ. ತಾಪಮಾನ ದಾಖಲಾಗಿರುವುದು ಸಂಚಲನ ಮೂಡಿಸಿದೆ.
ಕಲಬುರಗಿಯ ಬಿಸಿಲಿಗೆ ಬೆಂಡಾದ ಜನ: ರಾಜ್ಯದಲ್ಲಿಯೇ ಗರಿಷ್ಠ ತಾಪಮಾನ ದಾಖಲಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಸಾರ್ವಜನಿಕರು ಅಕ್ಷರಶಃ ಬಿಸಿಲಿಗೆ ಬೆಂಡಾಗಿದ್ದಾರೆ. ಬಿಸಿಲು ಕಂಡು ಜನರು ಮನೆಯಿಂದ ಹೊರಗಡೆ ಬರುತ್ತಿಲ್ಲ, ಅಲ್ಲಲ್ಲಿ ಕೆಲಸದಲ್ಲಿ ನಿರತರಾಗಿರುವ ಕೂಲಿ ಕಾರ್ಮಿಕರು, ಯುವಕರು ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.
ಬಿಸಿಲಿನ ಝಳಕ್ಕೆ ಸಾರ್ವಜನಿಕರು ತತ್ತರಿಸಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಮುಖ್ಯ ರಸ್ತೆಗಳಲ್ಲಿ ಹೋಗುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಕಲಬುರಗಿ ನಗರದ ಪ್ರಮುಖ ರಸ್ತೆಗಳೆಲ್ಲವೂ ಮಧ್ಯಾಹ್ನದ ವೇಳೆಯಲ್ಲಿ ಭಣ ಭಣ ಎನ್ನುತ್ತಿವೆ.
ಬಿಸಿಲಿನಿಂದ ದೂರವಿರಿ
ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ತೆಳುವಾಗಿರುವ ಬಟ್ಟೆ ತೊಡುವುದು, ಮದ್ಯಪಾನ ಮಾಡದಿರುವುದು, ಹೊರಗಡೆ ಓಡಾಡುವುದನ್ನು ಕಡಿಮೆ ಮಾಡುವುದು. ಹೆಚ್ಚಿನ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ಹೇಳುತ್ತದೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ.







