ಹಿಜಾಬ್ ನಿಷೇಧ ರದ್ದಾಗಿದೆ, ಆದರೆ ಕಿರುಕುಳ ನಿಂತಿಲ್ಲ!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಎಸ್‌ಸಿ ನರ್ಸಿಂಗ್ ಮುಗಿಸಿದ ನೈಮಾ ಖಾನ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಕೆಲಸ ಹುಡುಕುವುದು ಸುಲಭವಾಗಿರಲಿಲ್ಲ.
ಅವರ ಮುಸ್ಲಿಮೇತರ ಸಹಪಾಠಿಗಳಿಗೆಲ್ಲಾ ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಸಿಕ್ಕರೆ, ನೈಮಾರಿಗೆ ಅವರ ಅಸ್ಮಿತೆಯೇ ಎಲ್ಲೆಡೆ ಅಡ್ಡಿಯಾಯಿತು. ಅರ್ಹತೆ ಇದ್ದರೂ ತಲೆಗೆ ಸ್ಕಾರ್ಫ್ ಧರಿಸಲು ಅವಕಾಶವಿಲ್ಲ ಎಂದು ಅವರನ್ನು ನಿರಾಕರಿಸಲಾಯಿತು. ತಮ್ಮ ಧಾರ್ಮಿಕ ಉಡುಪಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಒಪ್ಪದ ಅವರು, ಕೊನೆಗೆ ಸಮುದಾಯದ ಒಡೆತನದ ಆಸ್ಪತ್ರೆಯೊಂದರಲ್ಲಿ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಬೇಕಾಯಿತು.
ತರಗತಿ ಕೊಠಡಿಗಳಿಂದ ಕೆಲಸದ ಸ್ಥಳಗಳವರೆಗೆ ಮುಂದುವರಿದ ಬಹಿಷ್ಕಾರ
ನೈಮಾ ಅವರದ್ದು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಹಿಜಾಬ್ ಧರಿಸುವ ಕಾರಣಕ್ಕಾಗಿ ಕರ್ನಾಟಕದಾದ್ಯಂತ ಮುಸ್ಲಿಮ್ ಮಹಿಳೆಯರು ಇಂದಿಗೂ ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಅಡೆತಡೆಗಳನ್ನು, ಕಿರುಕುಳಗಳನ್ನು ಎದುರಿಸುತ್ತಿದ್ದಾರೆ. ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕರು ಉತ್ತಮ ಅವಕಾಶಗಳು, ವೃತ್ತಿಪರ ಬೆಳವಣಿಗೆ ಮತ್ತು ಘನತೆಯನ್ನು ಕಳೆದುಕೊಳ್ಳಬೇಕಾಗಿದೆ.
ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಸರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಲು ನಿರ್ಧರಿಸಿದ್ದು ರಾಜ್ಯದ ಮಹಿಳೆಯರ ಸಾಮಾಜಿಕ ಬದುಕಿನ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರಿತು. ಸಾವಿರಾರು ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕುಗಳು, ಧಾರ್ಮಿಕ ಗುರುತು ಮತ್ತು ಶಿಕ್ಷಣದ ನಡುವಿನ ಸಂಘರ್ಷದಲ್ಲಿ ಸಿಲುಕಿಕೊಂಡರು.
ಶಿಕ್ಷಕರು ವಿದ್ಯಾರ್ಥಿನಿಯರ ಹಿಜಾಬ್ ತೆಗೆಸುವ ಮತ್ತು ತರಗತಿಯ ಹೊರಗೆ ನಿಲ್ಲಿಸುವ ದೃಶ್ಯಗಳು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ವರದಿಯಾಗತೊಡಗಿದವು. ಇದು ಸಾವಿರಾರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಅವಮಾನ ಮತ್ತು ಮಾನಸಿಕ ಯಾತನೆಯನ್ನು ನೀಡಿತಲ್ಲದೆ, ತಮ್ಮ ಧಾರ್ಮಿಕ ಗುರುತನ್ನು ಬಿಟ್ಟುಕೊಡಬೇಕೇ ಅಥವಾ ಶಿಕ್ಷಣವನ್ನೇ ತ್ಯಾಗ ಮಾಡಬೇಕೇ ಎಂಬ ಇಕ್ಕಟ್ಟಿಗೆ ಸಿಲುಕಿಸಿತು.
ಚುನಾವಣಾ ಪ್ರಣಾಳಿಕೆಯಲ್ಲಿ ಈ ನಿರ್ಬಂಧಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮೇಲೆ ಮುಸ್ಲಿಮ್ ಸಮುದಾಯ ಅಪಾರ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಸರಕಾರಿ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ಸರಕಾರಕ್ಕೆ ಸುಮಾರು ಎರಡೂವರೆ ವರ್ಷಗಳು ಬೇಕಾಯಿತು. ಅದೂ ಸಮುದಾಯದ ನಿರಂತರ ಒತ್ತಡ, ಹೋರಾಟದ ಬಳಿಕ.
ಅಷ್ಟರಲ್ಲಿ ಆದ ಹಾನಿ ಸರಕಾರಿ ಆದೇಶದ ಮಿತಿಯನ್ನು ಮೀರಿ ಬೆಳೆದಿತ್ತು. ಮುಸ್ಲಿಮ್ ಮಹಿಳೆಯರ ಮೇಲಿನ ಪೂರ್ವಾಗ್ರಹಕ್ಕೆ ಹಿಜಾಬ್ ನಿಷೇಧ ಕಾನೂನಿನ ಬಲ ನೀಡಿತ್ತು; ಮುಸ್ಲಿಮ್ ಮಹಿಳೆಯರ ಧಾರ್ಮಿಕ ಗುರುತನ್ನು ಅನುಮಾನದಿಂದ ನೋಡುವವರಿಗೆ ಧೈರ್ಯ ತುಂಬಿತ್ತು.
ಇದೀಗ ಆದೇಶವೇನೋ ರದ್ದಾಗಿದೆ, ಆದರೆ ಆ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಆದೇಶ ಹಿಂಪಡೆದಿರುವುದು ಸಮುದಾಯಕ್ಕೆ ಒಂದಿಷ್ಟು ಮಾನಸಿಕ ನೆಮ್ಮದಿ ನೀಡಿರಬಹುದು, ಆದರೆ ವಾಸ್ತವದಲ್ಲಿ ನಡೆಯುತ್ತಿರುವ ತಾರತಮ್ಯವನ್ನು, ಕಿರುಕುಳವನ್ನು ತಡೆಯಲು ಇದರಿಂದ ಹೆಚ್ಚೇನೂ ಸಾಧ್ಯವಾಗಿಲ್ಲ. ನಿರ್ಬಂಧಗಳನ್ನು ಜಾರಿಗೊಳಿಸುವಲ್ಲಿ ಅತಿರೇಕದ ಹೆಜ್ಜೆಗಳನ್ನಿಟ್ಟ ಸಾಂಸ್ಥಿಕ ವ್ಯವಸ್ಥೆ ಇಂದಿಗೂ ಹಾಗೆಯೇ ಇದೆ.
ನಿಷೇಧ ಹೇರಿದ ಅಧಿಕಾರಿಗಳು, ಶಿಕ್ಷಕರು ಮತ್ತು ಆಡಳಿತಗಾರರ ನಡವಳಿಕೆಯನ್ನು ಪರಿಶೀಲಿಸಲು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ತಾರತಮ್ಯ, ಕಿರುಕುಳ ಮುಂದುವರಿಯದಂತೆ ತಡೆಯಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ.
ಆಚರಣೆಯಲ್ಲಿ ಇಂದಿಗೂ ಮುಂದುವರಿದಿರುವ ಅಘೋಷಿತ ನಿಷೇಧ
ಬೆಂಗಳೂರಿನ ಕೆಂಗೇರಿಯ ಚಾಲನಾ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ಆಸಿಯಾ ಅವರ ಅನುಭವವನ್ನೇ ನೋಡಿ.
ಫೋಟೊ ತೆಗೆಸಿಕೊಳ್ಳುವಾಗ ಮತ್ತು ಚಾಲನಾ ಪರೀಕ್ಷೆಯ ಸಮಯದಲ್ಲಿ ಮುಸ್ಲಿಮ್ ಮಹಿಳೆಯರು ತಲೆಯ ಸ್ಕಾರ್ಫ್ ಅನ್ನು ಸಂಪೂರ್ಣವಾಗಿ ತೆಗೆಯಬೇಕೆಂದು ಅಲ್ಲಿನ ಅಧಿಕಾರಿಯೊಬ್ಬರು ಒತ್ತಾಯಿಸಿದರು. ಅದೃಷ್ಟವಶಾತ್, ಆ ಅಧಿಕಾರಿ ಊಟಕ್ಕೆ ಹೋದಾಗ ಬದಲಿಗೆ ಬಂದ ಮತ್ತೊಬ್ಬ ಅಧಿಕಾರಿ ಅಂತಹ ಯಾವುದೇ ನಿರ್ಬಂಧ ಹೇರಲಿಲ್ಲ.
ಹಿಜಾಬ್ ಧರಿಸುವ ಮಹಿಳೆಯರ ಬಗ್ಗೆ ಆ ಮೊದಲ ಅಧಿಕಾರಿಗೆ ಆಳವಾದ ಪೂರ್ವಾಗ್ರಹವಿದೆ ಎಂಬುದು ತಮಗೆ ಅರಿವಾಯಿತು ಎಂದ ಆಸಿಯಾ, ಅನೇಕ ಮುಸ್ಲಿಮ್ ಮಹಿಳೆಯರು ಚಾಲನಾ ಪರವಾನಿಗೆಗಾಗಿ ತಮ್ಮ ಹಿಜಾಬ್ ಬಿಟ್ಟುಕೊಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಒಂದು ಸಾಮಾನ್ಯ ಸರಕಾರಿ ಸೇವೆಯು ಧಾರ್ಮಿಕ ಗುರುತಿನ ಕುರಿತಾದ ಅಹಿತಕರ ಮುಖಾಮುಖಿಯಾಗಿ ಬದಲಾಗಿತ್ತು. ಸರಳವಾಗಿ ನಡೆಯಬೇಕಿದ್ದ ಪ್ರಕ್ರಿಯೆಯು, ಮೂಲಭೂತ ಸಾರ್ವಜನಿಕ ಸೇವೆ ಪಡೆಯಲು ಮಹಿಳೆಯೊಬ್ಬಳು ತನ್ನ ಧಾರ್ಮಿಕ ಉಡುಪಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧಳಿದ್ದಾಳೆಯೇ ಎಂಬ ಪರೀಕ್ಷೆಯಾಗಿ ಮಾರ್ಪಟ್ಟಿತ್ತು.
ಇಂತಹ ಘಟನೆಗಳು ಸಾಂಸ್ಥಿಕ ಪೂರ್ವಾಗ್ರಹ ಮತ್ತು ಅಧಿಕಾರದ ಅನಿಯಂತ್ರಿತ ಬಳಕೆಯ ಬಗ್ಗೆ ಗಂಭೀರ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿವೆ.
ಆದೇಶ ಹಿಂಪಡೆದ ಕಾಂಗ್ರೆಸ್, ಆದರೆ ಹಾನಿಯನ್ನು ಸರಿಪಡಿಸುವಲ್ಲಿ ವಿಫಲ
ಇಂದು ಮುಸ್ಲಿಮ್ ಮಹಿಳೆಯರು ಈ ಕಷ್ಟಗಳನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತಿದ್ದಾರೆ. ಮಹಿಳಾ ಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಇತರ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳು ದಾಖಲಾಗುವುದೂ ಅಪರೂಪ, ಸಾರ್ವಜನಿಕವಾಗಿ ಚರ್ಚೆಯಾಗುವುದೂ ಅಪರೂಪ.
ಕೆಲವರಿಗೆ ನೇರವಾಗಿ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಇನ್ನು ಕೆಲವರನ್ನು ಸೂಕ್ಷ್ಮವಾಗಿ ನಿರುತ್ಸಾಹಗೊಳಿಸಲಾಗುತ್ತಿದೆ, ಅವರು ಅಲ್ಲಿ ಇರಬಾರದು ಎಂಬ ಭಾವನೆ ಮೂಡಿಸಲಾಗುತ್ತಿದೆ ಅಥವಾ ವೃತ್ತಿ ಅಥವಾ ಧಾರ್ಮಿಕ ಗುರುತಿನ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.
ಸರಕಾರಿ ಆದೇಶ ಹಿಂಪಡೆದ ನಂತರವೂ ತಾರತಮ್ಯವು ಹೀಗೆಯೇ ಜೀವಂತವಾಗಿದೆ. ಅದು ಅಧಿಕೃತ ಆದೇಶಗಳಿಂದ ಅನೌಪಚಾರಿಕ ಸೂಚನೆಗಳಿಗೆ, ಲಿಖಿತ ನಿರ್ಬಂಧಗಳಿಂದ ವೈಯಕ್ತಿಕ ವಿವೇಚನೆಗೆ ಮತ್ತು ತರಗತಿ ಕೊಠಡಿಗಳಿಂದ ಕೆಲಸದ ಸ್ಥಳಗಳು ಹಾಗೂ ಸರಕಾರಿ ಕಚೇರಿಗಳಿಗೆ ಸ್ಥಳಾಂತರಗೊಂಡಿದೆ.
ಬಿಜೆಪಿ ಮತ್ತು ಸಂಘ ಪರಿವಾರವು ಹಿಜಾಬ್ ಅನ್ನು ಒಂದು ಪ್ರಬಲ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದವು.
ನಿಷೇಧ ಹಿಂಪಡೆದರೆ ಸಾಲದು; ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಮರುನಿರ್ಮಿಸಬೇಕಿದೆ
ಶಿಕ್ಷಣ ಸಂಸ್ಥೆಗಳಲ್ಲಿನ ನಿರ್ಬಂಧ ಎನ್ನುವ ಹೆಸರಿನಲ್ಲಿ ಆರಂಭವಾದ ಈ ನಿಷೇಧ, ಇದೀಗ ಮುಸ್ಲಿಮ್ ಮಹಿಳೆಯರ ಉಡುಗೆತೊಡುಗೆಯು ಸಾರ್ವಜನಿಕ ಪರಿಶೀಲನೆ ಮತ್ತು ಸಾಂಸ್ಥಿಕ ಹಸ್ತಕ್ಷೇಪದ ವಿಷಯವಾಗುವಂತಹ ವಾತಾವರಣವನ್ನು ಸೃಷ್ಟಿಸಿತು.
ಚುನಾವಣಾ ಭರವಸೆಯ ಹೊರತಾಗಿಯೂ ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಲು ಬಹಳ ಸಮಯ ತೆಗೆದುಕೊಂಡಿತು. ಅಂತಿಮವಾಗಿ ಆದೇಶವನ್ನು ಹಿಂಪಡೆದಾಗಲೂ, ಅದನ್ನು ನಿರಂತರ ಹಸ್ತಕ್ಷೇಪದ ಅಗತ್ಯವಿರುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ನೋಡದೆ ಕೇವಲ ಒಂದು ಆಡಳಿತಾತ್ಮಕ ತಿದ್ದುಪಡಿಯಂತೆ ಪರಿಗಣಿಸಿತು. ಬೇರೂರಿರುವ ಪೂರ್ವಾಗ್ರಹವನ್ನು ಹೋಗಲಾಡಿಸಲು, ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಲು ಅಥವಾ ನೊಂದ ಮಹಿಳೆಯರು ಮತ್ತು ಕುಟುಂಬಗಳಲ್ಲಿ ಆತ್ಮವಿಶ್ವಾಸವನ್ನು ಮರುನಿರ್ಮಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ಕಂಡುಬರಲಿಲ್ಲ.
ಕರ್ನಾಟಕಕ್ಕೆ ಕೇವಲ ರಾಜಕೀಯ ಹೇಳಿಕೆಗಳು ಮತ್ತು ಸರಕಾರಿ ಆದೇಶಗಳ ಹಿಂಪಡೆಯುವಿಕೆಗಿಂತ ಹೆಚ್ಚಿನದರ ಅಗತ್ಯವಿದೆ. ಮುಸ್ಲಿಮ್ ಮಹಿಳೆಯರ ಆತ್ಮವಿಶ್ವಾಸ ಮತ್ತು ಘನತೆಯನ್ನು ಮರುಸ್ಥಾಪಿಸಲು ಪ್ರಜ್ಞಾಪೂರ್ವಕ ಪ್ರಯತ್ನ ಬೇಕಾಗಿದೆ. ಯಾವುದೇ ವಿದ್ಯಾರ್ಥಿನಿಗೆ ಶಿಕ್ಷಣ ನಿರಾಕರಿಸದಂತೆ, ಯಾವುದೇ ಮಹಿಳೆಗೆ ಉದ್ಯೋಗ ತಪ್ಪದಂತೆ ಮತ್ತು ಯಾವುದೇ ನಾಗರಿಕರು ತಮ್ಮ ಧಾರ್ಮಿಕ ಉಡುಪಿನ ಕಾರಣಕ್ಕಾಗಿ ಸಾರ್ವಜನಿಕ ಸೇವೆಗಳಿಂದ ವಂಚಿತರಾಗದಂತೆ ಸರಕಾರ ನೋಡಿಕೊಳ್ಳಬೇಕು.
ಇದಕ್ಕಾಗಿ ಸ್ಪಷ್ಟ ಆಡಳಿತಾತ್ಮಕ ಮಾರ್ಗಸೂಚಿಗಳು, ಹೊಣೆಗಾರಿಕೆ ವ್ಯವಸ್ಥೆಗಳು, ಸರಕಾರಿ ಅಧಿಕಾರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂವೇದನಾಶೀಲತೆಯ ತರಬೇತಿ ಹಾಗೂ ಪರಿಣಾಮಕಾರಿ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳ ಅಗತ್ಯವಿದೆ.
ಜಾತ್ಯತೀತತೆ ಮತ್ತು ಸಮಾನತೆಗೆ ಸರಕಾರದ ಬದ್ಧತೆಯ ನಿಜವಾದ ಪರೀಕ್ಷೆಯು ಸಾರ್ವಜನಿಕ ಒತ್ತಡದ ನಂತರ ವಿವಾದಾತ್ಮಕ ಆದೇಶವನ್ನು ಹಿಂಪಡೆಯುವುದರಲ್ಲಿಲ್ಲ; ಬದಲಾಗಿ ಆ ಆದೇಶದ ಹಿಂದಿದ್ದ ತಾರತಮ್ಯಕ್ಕೆ ಸಮಾಜದಲ್ಲಿ ಇನ್ನು ಮುಂದೆ ಜಾಗವಿಲ್ಲದಂತೆ ನೋಡಿಕೊಳ್ಳುವುದರಲ್ಲಿದೆ.
ಕರ್ನಾಟಕವು ಈ ಆಳವಾದ ಸಮಸ್ಯೆಯನ್ನು ಬಗೆಹರಿಸುವವರೆಗೂ, ಹಿಜಾಬ್ ನಿಷೇಧವು ಬೇರೆ ಬೇರೆ ರೂಪಗಳಲ್ಲಿ ಅಸ್ತಿತ್ವದಲ್ಲಿರುತ್ತದೆ. ಅಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರವು ಅಧಿಕಾರದಲ್ಲಿ ಇಲ್ಲದಿದ್ದರೂ ಸಹ, ಈ ವಿಭಜಕ ಅಭಿಯಾನದ ರಾಜಕೀಯ ಮತ್ತು ಸಾಮಾಜಿಕ ಲಾಭವನ್ನು ಪಡೆಯುವುದನ್ನು ಮುಂದುವರಿಸುತ್ತವೆ.






