ರಾಯಚೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ವಿಷಕಾರಿ ಸೇಂದಿ ದಂಧೆ !
ಬಡವರ ಜೀವದ ಜೊತೆ ಚೆಲ್ಲಾಟ: ಅಕ್ರಮಕ್ಕೆ ಕಡಿವಾಣ ಯಾವಾಗ ?

ರಾಯಚೂರು: ನಗರದ ವಿವಿಧ ಬಡಾವಣೆಗಳಲ್ಲಿ ಕಲಬೆರಕೆ ಸೇಂದಿ ಮಾರಾಟದ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದರಿಂದ ಬಡ ಕೂಲಿ ಕಾರ್ಮಿಕರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಎದುರಾಗಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ನಗರದ ಹರಿಜನವಾಡ, ಮೈಲಾರ ನಗರ, ಜಲಾಲ್ ನಗರ, ಮಡ್ಡಿಪೇಟೆ, ಅಶೋಕನಗರ ಹಾಗೂ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಸೇಂದಿ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾದ ಕೆಲವರ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕವೂ ಮತ್ತೆ ಅಕ್ರಮ ಚಟುವಟಿಕೆ ಮುಂದುವರಿಸಿದ್ದಾರೆ ಎಂಬ ಆರೋಪಗಳಿವೆ.
ಈ ದಂಧೆಯ ಮೂಲಕ ಪ್ರತಿದಿನ ಸುಮಾರು 40 ಸಾವಿರ ರೂ. ವಹಿವಾಟು ನಡೆಯುತ್ತಿದೆ ಎಂಬ ದೂರೂ ಕೇಳಿಬಂದಿದೆ. ಇಷ್ಟೆಲ್ಲ ಆರೋಪಗಳಿದ್ದರೂ ಅಬಕಾರಿ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮ ಸೇಂದಿ ಮಾರಾಟ ನಡೆಯುತ್ತಿದೆ ಎಂಬ ದೂರುಗಳಿದ್ದರೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಏಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ? ಬಡವರ ಆರೋಗ್ಯದ ರಕ್ಷಣೆಯ ಹೊಣೆ ಯಾರದ್ದು? ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವರೇ ಎಂಬ ಪ್ರಶ್ನೆಗಳು ಎದುರಾಗಿವೆ.
ಬಡ ಕುಟುಂಬಗಳನ್ನು ಹೈರಾಣು ಮಾಡುತ್ತಿರುವ, ಕಲಬೆರಕೆ ಹಾಗೂ ವಿಷಕಾರಿ ರಾಸಾಯನಿಕ ಮಿಶ್ರಿತ ಸೇಂದಿ ಮಾರಾಟದಿಂದ ನಗರವನ್ನು ಮುಕ್ತಗೊಳಿಸಬೇಕು ಎಂದು ಸ್ಥಳೀಯ ಮಹಿಳೆಯರು ಮನವಿ ಮಾಡಿದ್ದಾರೆ.
ಅಕ್ರಮ ದಂಧೆಗೆ ಇಲಾಖೆಯ ಶ್ರೀರಕ್ಷೆ?:
ಅಕ್ರಮ ಸೇಂದಿ ಮಾರಾಟಗಾರರಿಂದ ಅಬಕಾರಿ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು? ದಂಧೆಕೋರರ ವಿರುದ್ಧ ನಿರಂತರ ದಾಳಿ ನಡೆಸದಿರುವುದೇಕೆ? ಅಧಿಕಾರಿಗಳ ಗಮನಕ್ಕೆ ಈ ಚಟುವಟಿಕೆಗಳು ಬಂದಿಲ್ಲವೇ ಅಥವಾ ಬಂದಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.
ವಿಷಕಾರಿ ಸೇಂದಿ ಸೇವನೆಯಿಂದ ಬಡವರ ಆರೋಗ್ಯಕ್ಕೆ ಕುತ್ತು!:
ಕಲಬೆರಕೆ ಸೇಂದಿ ತಯಾರಿಕೆಯಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತ್ತದೆ. ಆದರೆ, ಇದರ ನೈಜತೆಯನ್ನು ಪ್ರಯೋಗಾಲಯದ ಪರೀಕ್ಷೆಯಿಂದಲೇ ದೃಢಪಡಿಸಬೇಕಿದೆ. ದಿನವಿಡೀ ದುಡಿದು ಜೀವನ ಸಾಗಿಸುವ ಕೂಲಿ ಕಾರ್ಮಿಕರು ಇಂತಹ ಪಾನೀಯಗಳ ಸೇವನೆಯಿಂದ ಉಂಟಾಗಬಹುದಾದ ಅಪಾಯಗಳ ಅರಿವಿಲ್ಲದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅಕ್ರಮ ದಂಧೆಯಿಂದ ಲಾಭ ಗಳಿಸುವವರಿಗಿಂತ ಅದರ ದುಷ್ಪರಿಣಾಮಗಳನ್ನು ಎದುರಿಸುವವರು ಅಮಾಯಕ ಶ್ರಮಿಕರು ಎಂಬುದು ಆತಂಕಕಾರಿ ಸಂಗತಿಯಾಗಿದೆ. ಬಡ ಕುಟುಂಬಗಳನ್ನು ಹೈರಾಣು ಮಾಡುತ್ತಿರುವ, ಕಲಬೆರಕೆ ಹಾಗೂ ವಿಷಕಾರಿ ರಾಸಾಯನಿಕ ಮಿಶ್ರಿತ ಸೇಂದಿ ಮಾರಾಟದಿಂದ ನಗರವನ್ನು ಮುಕ್ತಗೊಳಿಸಬೇಕು ಎಂದು ಸ್ಥಳೀಯ ಮಹಿಳೆಯರು ಮನವಿ ಮಾಡಿದ್ದಾರೆ.
ಸೇಂದಿ ಮಾರಾಟದ ವೀಡಿಯೊ ವೈರಲ್ :
ರಾಯಚೂರು ನಗರದ ಮೈಲಾರ ನಗರ ಸಮೀಪದ ಎಪಿಎಂಸಿ ಆವರಣದಲ್ಲಿ ರಾಸಾಯನಿಕ ಮಿಶ್ರಿತ ಕಲಬೆರಕೆ ಸೇಂದಿಯನ್ನು ನಿರ್ಭೀತಿಯಿಂದ ಮಾರಾಟ ಮಾಡಲಾಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ವಿಡಿಯೊದಲ್ಲಿ ಅಕ್ರಮ ಸೇಂದಿ ದಂಧೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯೋರ್ವ ಪ್ಯಾಕೆಟ್‌ಗಳಲ್ಲಿ ಸೇಂದಿ ತುಂಬಿ, ಅದರಲ್ಲಿ ಸಿ.ಎಚ್. ಪೌಡರ್ ಮಿಶ್ರಣ ಮಾಡಿ ಮಾರಾಟ ಮಾಡುತ್ತಾ ಹಣ ಪಡೆಯುತ್ತಿರುವುದು ಕಂಡುಬಂದಿದೆ.
ಈ ವ್ಯಕ್ತಿಯ ವಿರುದ್ಧ ಕನಿಷ್ಠ 15 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿಯಾಗಿದ್ದು, ಘೋಷಿತ ಆರೋಪಿಯಾಗಿದ್ದರೂ ರಾಯಚೂರು ನಗರದ ಗಂಜ್ ಆವರಣದಲ್ಲಿ ಪ್ರತಿದಿನ ಸುಮಾರು 30 ಸಾವಿರ ರೂ. ಮೌಲ್ಯದ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದಾನೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಸ್ಥಳೀಯ ಅಬಕಾರಿ ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳದೆ, ಲಂಚ ಪಡೆದು ದಂಧೆಗೆ ಸಹಕರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳೂ ವಕ್ತವಾಗುತ್ತಿದೆ.






