ಆರ್ಥಿಕತೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವು

ಇತ್ತೀಚೆಗೆ ಐಎಂಎಫ್(ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ) ಪ್ರಕಟಿಸಿದ ದತ್ತಾಂಶಗಳನ್ನು ಆಧರಿಸಿ ಭಾರತದ ನೀತಿ ಆಯೋಗ ಮತ್ತು ಮೋದಿ ನೇತೃತ್ವ ಸರಕಾರದ ಸಚಿವರು ಭಾರತ ಜಾಗತಿಕ ಆರ್ಥಿಕತೆಯಲ್ಲಿ ನಾಲ್ಕನೇ ಅತಿ ದೊಡ್ಡ ದೇಶವಾಗಿದೆ, 4 ಟ್ರಿಲಿಯನ್ ಜಿಡಿಪಿ ಸಾಧಿಸಿದ್ದೇವೆ, ಜಪಾನ್ ದೇಶವನ್ನು ಹಿಂದಿಕ್ಕಿದ್ದೇವೆ ಎಂದು ಹೇಳಿದ್ದಾರೆ. ಮಡಿಲ ಮಾಧ್ಯಮಗಳು ಸಹ ಇದನ್ನು ವೈಭವೀಕರಿಸಿ ಮೋದಿ ಸರಕಾರದ ಸಾಧನೆ ಎಂದು ಕೊಂಡಾಡುತ್ತಿವೆ. ಎಲ್ಲಾ ಕಡೆಗೂ ಪ್ರಚಾರ ಮಾಡುತ್ತಿವೆ. ಅವರ ದತ್ತಾಂಶದ ಪ್ರಕಾರ 2024ರಲ್ಲಿ ಭಾರತದ ಜಿಡಿಪಿ(ಆಂತರಿಕ ಉತ್ಪನ್ನ ಸೂಚ್ಯಂಕ) ಅಂದಾಜು ರೂ.360 ಲಕ್ಷ ಕೋಟಿ(4,187.02 ಬಿಲಿಯನ್ ಡಾಲರ್), ಜಪಾನ್‌ನ ಜಿಡಿಪಿ(ಅಂತರಿಕ ಉತ್ಪನ್ನ ಸೂಚ್ಯಂಕ) ಅಂದಾಜು ರೂ.359 ಲಕ್ಷ ಕೋಟಿ(4,186.43 ಬಿಲಿಯನ್ ಡಾಲರ್). 146 ಕೋಟಿ ಜನಸಂಖ್ಯೆಯುಳ್ಳ ಭಾರತದ ತಲಾ ವಾರ್ಷಿಕ ಆದಾಯ ರೂ. 2.88 ಲಕ್ಷ ಎಂದು ಅಧಿಕೃತ ವರದಿ ಹೇಳುತ್ತದೆ. 12.3 ಕೋಟಿ ಜನಸಂಖ್ಯೆಯ ಜಪಾನ್‌ನ ತಲಾ ವಾರ್ಷಿಕ ಆದಾಯ ರೂ. 33.90 ಲಕ್ಷ ಎಂದು ವರದಿಯಾಗಿದೆ. ಅಂದರೆ ಭಾರತಕ್ಕಿಂತ ಜಪಾನ್‌ನ ತಲಾ ವಾರ್ಷಿಕ ಆದಾಯ 31 ಲಕ್ಷದಷ್ಟು ಹೆಚ್ಚಿದೆ.
ನವ ಉದಾರೀಕರಣದ ಮೂವತ್ತು ವರ್ಷಗಳಲ್ಲಿ ದೇಶದ ಶೇ.1ರಷ್ಟು ಅತಿ ಶ್ರೀಮಂತರ ಬಳಿ ಶೇ.41ರಷ್ಟು, ಶೇ.10ರಷ್ಟು ಅತಿ ಶ್ರೀಮಂತರು, ಶ್ರೀಮಂತರ ಬಳಿ ಶೇ.57ರಷ್ಟು ಸಂಪತ್ತಿದೆ. ವ್ಯವಸ್ಥೆಯ ಕೆಳಸ್ತರದಲ್ಲಿರುವ ಶೇ.50ರಷ್ಟು ಜನಸಂಖ್ಯೆಯ ಬಳಿ ಕೇವಲ ಶೇ.3ರಷ್ಟು ಸಂಪತ್ತಿದೆ. ಇಂತಹ ಅಸಮಾನ ಸಂಪತ್ತಿನ ಹಂಚಿಕೆಯುಳ್ಳ ಭಾರತವು ಆರ್ಥಿಕವಾಗಿ ಬಲಿಷ್ಠ ದೇಶ ಎಂದು ಕರೆದುಕೊಳ್ಳುವುದು ಆತ್ಮವಂಚನೆಯಾಗುತ್ತದೆ ಅಲ್ಲವೇ?
ಈ ತಲಾ ಆದಾಯದಲ್ಲಿ ಅತಿ ಶ್ರೀಮಂತರು, ಶ್ರೀಮಂತರ ಪಾಲು ಗರಿಷ್ಠ ಮಟ್ಟದಲ್ಲಿದೆ. ಅಂಬಾನಿ-ಅದಾನಿ ಜೋಡಿಯ ಸಂಪತ್ತು ಅಂದಾಜು ರೂ. 16 ಲಕ್ಷ ಕೋಟಿಯಷ್ಟಿದೆ. ತಲಾ ವಾರ್ಷಿಕ ಆದಾಯದಲ್ಲಿ ಇವರಿಬ್ಬರನ್ನು ಹೊರತುಪಡಿಸಿದರೆ ಅದರ ಮೊತ್ತ ರೂ. 1.65-2.25 ಲಕ್ಷವಾಗುತ್ತದೆ. ದೇಶದ ಹತ್ತು ಅತಿ ಶ್ರೀಮಂತರ ಸಂಪತ್ತು ಅಂದಾಜು ರೂ. 35 ಲಕ್ಷ ಕೋಟಿಯಷ್ಟಿದೆ. ಇವರನ್ನು ಹೊರತುಪಡಿಸಿದರೆ ತಲಾ ವಾರ್ಷಿಕ ಆದಾಯ ರೂ. 1.5-2.10 ಲಕ್ಷಕ್ಕೆ ಇಳಿಯುತ್ತದೆ. ದೇಶದ 200 ಶ್ರೀಮಂತರ ಬಳಿ 84 ಲಕ್ಷ ಕೋಟಿ ರೂ. ಸಂಪತ್ತಿದೆ. ಇವರನ್ನು ಹೊರತುಪಡಿಸಿದರೆ ತಲಾ ವಾರ್ಷಿಕ ಆದಾಯ ರೂ. 1.2-1.8 ಲಕ್ಷಕ್ಕೆ ಇಳಿಯುತ್ತದೆ. ಶೇ.1ರಷ್ಟು ಅತಿ ಶ್ರೀಮಂತರ ಬಳಿ 134 ಲಕ್ಷ ಕೋಟಿ ಸಂಪತ್ತಿದೆ. ಇವರನ್ನು ಹೊರತುಪಡಿಸಿದರೆ ತಲಾ ವಾರ್ಷಿಕ ಆದಾಯ ರೂ. 80,000-1.45 ಲಕ್ಷಕ್ಕೆ ಇಳಿಯುತ್ತದೆ. ದೇಶದ ಶೇ.5ರಷ್ಟು ಶ್ರೀಮಂತ್ರರ ಬಳಿ 200 ಲಕ್ಷ ಕೋಟಿ ಸಂಪತ್ತಿದೆ. ಇವರನ್ನು ಹೊರತುಪಡಿಸಿದರೆ ದೇಶದ ತಲಾ ವಾರ್ಷಿಕ ಆದಾಯವು ರೂ.40,000-94,000ರಷ್ಟಿದೆ.
ಪ್ರತೀ ತಿಂಗಳ ತಲಾ ಆದಾಯವು ರೂ.3,333-7,833ರಷ್ಟಿರುವ ದೇಶವು ಜಾಗತಿಕವಾಗಿ ಅದು ಹೇಗೆ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗುತ್ತದೆ? 2020ರಲ್ಲಿ ಜಾಗತಿಕವಾಗಿ ಭಾರತದ ವಾರ್ಷಿಕ ತಲಾ ಆದಾಯವು 197 ದೇಶಗಳ ಪೈಕಿ 142ನೆ ಸ್ಥಾನದಲ್ಲಿದೆ. ಸರಕಾರದ ದತ್ತಾಂಶದ ಪ್ರಕಾರವೇ ದೇಶದಲ್ಲಿ 25 ಕೋಟಿ ಜನರು ಬಡತನ, ಹಸಿವಿನಿಂದ ಬಳಲುತ್ತಿದ್ದಾರೆ. 80 ಕೋಟಿ ಬಿಪಿಎಲ್ ಕಾರ್ಡುದಾರರಿದ್ದಾರೆ. ಹಾಗಿದ್ದರೆ ಯಾಕೆ ಜನತೆಗೆ ಆರ್ಥಿಕವಾಗಿ ಐದನೇ ದೊಡ್ಡ ದೇಶವೆಂದು ದ್ರೋಹ ಬಗೆಯುತ್ತಿದ್ದಾರೆ? ಈ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ?
ಕಳೆದ 3 ದಶಕಗಳಿಂದ ಜಿಡಿಪಿ ಕುರಿತು ಅದಕ್ಕೆ ಸಂಬಂಧಿತವಾಗಿ ಅಭಿವೃದ್ಧಿ ಬಗ್ಗೆ, ತಲಾ ವಾರ್ಷಿಕ ಆದಾಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮೂಲಭೂತವಾಗಿ ಜಿಡಿಪಿಯ ಮೌಲ್ಯಮಾಪನವೇ ದೋಷಪೂರಿತವಾಗಿದೆ. ನವ ಉದಾರೀಕರಣದ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಮದ ಕಾರ್ಯ ಸಾಧನೆ ಮತ್ತು ಕೃಷಿಯ ಕೊಡುಗೆ ಜಿಡಿಪಿಯ ಬೆಳವಣಿಗೆಯನ್ನು ನಿರ್ಧರಿಸುವುದಿಲ್ಲ. ಇಲ್ಲಿನ ಅತಿ ಶ್ರೀಮಂತರು, ಶ್ರೀಮಂತರು, ಕ್ರೂನಿ ಬಂಡವಾಳಶಾಹಿಗಳ ವ್ಯಾಪಾರ, ಅವರ ಆಸ್ತಿಯ ಮಿಗುತಾಯ ಮೌಲ್ಯ, ಸಂಪತ್ತಿನ ಕ್ರೋಡೀಕರಣ, ಪುನರ್ ಉತ್ಪಾದನೆಯನ್ನು ಆಧರಿಸಿ ದೇಶದ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಇದರ ಸಮರ್ಥಕರು ಈ ಮುಕ್ತ ಮಾರುಕಟ್ಟೆ ನೀತಿಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಆ ಮೂಲಕ ಜನತೆಯ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ, ಇದು ಜಿಡಿಪಿಯ ಏರಿಕೆಗೆ ಸಹಕಾರಿಯಲ್ಲವೇ ಎಂದು ಪ್ರಶ್ನಿಸುತ್ತಾರೆ.
ಆದರೆ ಭಾರತದಲ್ಲಿ ಖಾಸಗೀಕರಣ, ಬಂಡವಾಳಶಾಹಿ ವ್ಯವಸ್ಥೆ ಬಲಗೊಂಡಷ್ಟೂ ಉದ್ಯೋಗದ ಪ್ರಮಾಣ ಕುಂಠಿತಗೊಂಡಿದೆ, ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಕಳೆದ ಮೂವತ್ತು ವರ್ಷಗಳ ಅಧಿಕೃತ ದತ್ತಾಂಶ ಮತ್ತು ಜನರ ಬದುಕು ಇದಕ್ಕೆ ಸಾಕ್ಷಿಯಾಗಿದೆ. ಜಿಡಿಪಿ ಪ್ರಮಾಣ ಹೆಚ್ಚಿದಷ್ಟೂ ರೈತರ ಆತ್ಮಹತ್ಯೆಯೂ ಹೆಚ್ಚಾಗಿದೆ. ಬಡತನ, ಹಸಿವಿನಿಂದ ನರಳುವ ಜನಸಂಖ್ಯೆ ಹೆಚ್ಚಾಗಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದರ ಹೆಚ್ಚಾಗಿದೆ. ಶೇ.1ರಷ್ಟಿರುವ ಅತಿ ಶ್ರೀಮಂತರ ಬಳಿ ಶೇ.42ರಷ್ಟು ಸಂಪತ್ತಿದೆ. ಆದರೆ ಜಿಡಿಪಿಯ ಅಳತೆಯಲ್ಲಿ ಈ ಅಂಶಗಳು ಪರಿಗಣಿಸಲ್ಪಡುವುದಿಲ್ಲ. ಬಡಜನರ ಬದುಕನ್ನು ಆಧರಿಸಿ ಜಿಡಿಪಿ ನಿರ್ಧರಿಸುವುದಿಲ್ಲ. ಬದಲಿಗೆ ಅತಿ ಶ್ರೀಮಂತರ ಸಂಪತ್ತು ವೃದ್ಧಿನ್ನು ಜಿಡಿಪಿ ಹೆಚ್ಚಳ ಎಂದು ಹೇಳಲಾಗುತ್ತದೆ. ಸಮಾಜದಲ್ಲಿರುವ ಬಡತನ, ನಿರುದ್ಯೋಗವನ್ನು ನೇಪಥ್ಯಕ್ಕೆ ತಳ್ಳಿ ಬಂಡವಾಳಶಾಹಿಗಳ, ಅತಿ ಶ್ರೀಮಂತರ ಸಂಪತ್ತು ಹೆಚ್ಚಿದಂತೆಲ್ಲ ಅದನ್ನು ಆಧರಿಸಿ ಜೆಡಿಪಿ ಹೆಚ್ಚಾಗಿದೆ ಎಂದು ಹೇಳುವ ಈ ಮೌಲ್ಯಮಾಪನ ದೋಷ ಪೂರಿತವಾಗಿರುವಂತಹದ್ದು.
ಮುಖ್ಯವಾಗಿ ಎಲ್‌ಪಿಜಿ ನೀತಿಯಿಂದಾಗಿ ಸಂಪತ್ತಿನ ಅಸಮಾನ ಹಂಚಿಕೆಯಾಗಿದೆ. ಉದಾಹರಣೆಗೆ ಇಪ್ಪತ್ತೈದು ವರ್ಷಗಳ ಹಿಂದೆ 2000ರಲ್ಲಿ ಒಂದು ಕಾರ್ಖಾನೆಯಲ್ಲಿ ಅದರ ವ್ಯವಸ್ಥಾಪಕರ ಸಂಬಳ ರೂ.20,000 ಆಗಿದ್ದರೆ ಯಂತ್ರದ ಮೇಲೆ ಕೆಲಸ ಮಾಡುವ ಕಾರ್ಮಿಕರ(ಖಾಯಂ) ವೇತನ ಅಂದಾಜು ರೂ. 6,000 ಆಗಿರುತ್ತಿತ್ತು. ಅಂದರೆ ಅವರಿಬ್ಬರ ನಡುವಿನ ವ್ಯತ್ಯಾಸ ರೂ. 14,000ರಷ್ಟಿದೆ. 2023-24ರಲ್ಲಿ ಒಂದು ಸಂಸ್ಥೆಯ ಉನ್ನತ ಅಧಿಕಾರಿಯ ಸಂಬಳ ಮಾಸಿಕ 8 ಲಕ್ಷ ರೂ. ಇದ್ದರೆ ಅಲ್ಲಿ ಕೆಲಸ ಮಾಡುತ್ತಿರುವಂತಹ ಕೆಳಹಂತದ ನೌಕರರ(ಖಾಯಂ) ವೇತನ 25,000-30,000ರಷ್ಟಿದೆ. ಇವರಿಬ್ಬರ ನಡುವಿನ ವ್ಯತ್ಯಾಸ ರೂ. 7.7 ಲಕ್ಷದಷ್ಟಿದೆ. ಇಬ್ಬರೂ ದಿನಕ್ಕೆ ಕನಿಷ್ಠ ಎಂಟು ಗಂಟೆ ದುಡಿಯುತ್ತಾರೆ. ಆದರೆ ಇಬ್ಬರ ಮಧ್ಯೆ ವೇತನದ ಅಂತರ 30 ಪಟ್ಟು ಹೆಚ್ಚಾಗಿದೆ. ಇಂತಹ ಅಗಾಧ ಅಸಮಾನತೆ ಇರುವವರೆಗೂ ಈ ದೇಶ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಮೇಲಿನ ಉದಾಹರಣೆ ಖಾಯಂ ಕಾರ್ಮಿಕರನ್ನು ಒಳಗೊಂಡಿದೆ. ಈಗ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ವೇತನವೂ ಖಾಯಂ ಕಾರ್ಮಿಕರಿಗಿಂತ ಅರ್ಧದಷ್ಟು ಕಡಿಮೆ ಇರುವುದರಿಂದ ಈ ಅಸಮಾನತೆಯ ಅಂತರ ಮತ್ತಷ್ಟು ಹೆಚ್ಚಾಗಿರುತ್ತದೆ.
2014ರ 16ನೇ ಲೋಕಸಭಾ ಚುನಾವಣೆಯಲ್ಲಿ ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಮೋದಿ ಸರಕಾರದಿಂದ ಕಳೆದ ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ವಾಸ್ತವದಲ್ಲಿ ಬೇರೆಯದೇ ಚಿತ್ರಣವಿದೆ. ಎನ್‌ಎಸ್‌ಒ(ರಾಷ್ಟ್ರೀಯ ಸಮೀಕ್ಷೆ ಆರ್ಗನೈಸೇಶನ್) ಸಮೀಕ್ಷೆಯ ಪ್ರಕಾರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ 2012ರಲ್ಲಿ 1ಕೋಟಿಯಿದ್ದ (ಶೇ.2.1) ನಿರುದ್ಯೋಗದ ಪ್ರಮಾಣ ಆರು ವರ್ಷಗಳಲ್ಲಿ 2018ರಲ್ಲಿ 3 ಕೋಟಿಯಷ್ಟಾಯಿತು(ಶೇ.6.1) ಮೋದಿ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ ಕಳೆದ 45 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ನಿರುದ್ಯೋಗವಿತ್ತು. ಇಲ್ಲಿ ಆರ್ಥಿಕ ತಜ್ಞರು ಹೇಳುವಂತೆ ಒಂದು ನಿರ್ದಿಷ್ಟ ಅವಧಿ ಅಥವಾ ಐದಾರು ವರ್ಷಕ್ಕೆ ಸುಮಾರು 9-10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿರುತ್ತದೆ. ಆದರೆ ಅದು ಈಡೇರಲಿಲ್ಲ ಎನ್ನುವುದು ದುರಂತ.
140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತೀ ವರ್ಷ ಅಂದಾಜು 80 ಲಕ್ಷ-1 ಕೋಟಿ ಯುವಜನತೆ ವ್ಯಾಸಂಗ ಮುಗಿಸಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಾರೆ. ಸಿಎಂಐಇ(ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ 2023ರಲ್ಲಿ ಉದ್ಯೋಗದ ಪ್ರಮಾಣ ಶೇ.40ರಷ್ಟಿದೆ. ಅಂದರೆ 56 ಕೋಟಿ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅನೌಪಚಾರಿಕ, ಅಸಂಘಟಿತ ವಲಯದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ(ಶೇ.89). 4.2 ಕೋಟಿ ನಿರುದ್ಯೋಗಿಗಳಿದ್ದಾರೆ. ಅಸಂಘಟಿತ ವಲಯ ಮತ್ತು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿರುವವರು ಅನಿಶ್ಚಿತತೆಯಲ್ಲಿರುತ್ತಾರೆ. ಸಮಾನ ವೇತನ, ಇತರ ಸೌಲಭ್ಯಗಳಿರುವುದಿಲ್ಲ, ನೌಕರಿ ಭದ್ರತೆ ಇರುವುದಿಲ್ಲ. ಇವರನ್ನು ಉದ್ಯೋಗಿಗಳು ಎಂದು ಹೇಳಲು ಸಾಧ್ಯವಿಲ್ಲ.
ಇದೇ ಸಂಸ್ಥೆಯ ವರದಿಯ ಪ್ರಕಾರ ಜೂನ್ 2024ರಲ್ಲಿ ಶೇ.9.6ರಷ್ಟು ನಿರುದ್ಯೋಗವಿದ್ದರೆ ಸೆಪ್ಟಂಬರ್ 2024ರಲ್ಲಿ ಶೇ.7.2ರಷ್ಟು, ನವೆಂಬರ್ 2024ರಲ್ಲಿ ಶೇ.8.1ರಷ್ಟು ನಿರುದ್ಯೋಗವಿದೆ. ಪುರುಷರ ಪೈಕಿ ಶೇ.7.7, ಮಹಿಳೆಯರ ಪೈಕಿ ಶೇ.18.8ರಷ್ಟು ನಿರುದ್ಯೋಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.9.3, ನಗರ ಭಾಗದಲ್ಲಿ ಶೇ.8.6ರಷ್ಟು ನಿರುದ್ಯೋಗಿಗಳಿದ್ದಾರೆ. 20-24ನೇ ವಯಸ್ಸಿನವರಲ್ಲಿ ಶೇ.44.49ರಷ್ಟು ನಿರುದ್ಯೋಗಿಗಳು, 25-29ನೆ ವಯಸ್ಸಿನವರಲ್ಲಿ ಶೇ.14.33ರಷ್ಟು ನಿರುದ್ಯೋಗಿಗಳಿದ್ದಾರೆ. ಈ ದತ್ತಾಂಶದ ಪ್ರಕಾರ ಉದ್ಯೋಗ ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಹೊಸಬರು ಬಂದು ಸೇರಿಕೊಂಡಾಗ ಉದ್ಯೋಗದ ಪ್ರಮಾಣ ಹೆಚ್ಚಾಗುತ್ತದೆ. ಕೆಲ ತಿಂಗಳ ನಂತರ ಕೆಲಸ ತೊರೆದರೆ ಪ್ರಮಾಣ ಕಡಿಮೆ ಆಗುತ್ತದೆ. ಈ ತರಹದ ಅನಿಶ್ಚಿತತೆ ಅಪಾಯಕಾರಿ. ಇಲ್ಲಿ ನಾವು ಶೇಕಡವಾರು ಲೆಕ್ಕದಲ್ಲಿ ಮಾತನಾಡುತ್ತಿದ್ದೇವೆ. ಈ ಪ್ರಮಾಣವು ಚಿಕ್ಕದಾಗಿ ಕಂಡರೂ ಸಂಖ್ಯೆಯಲ್ಲಿ ಅದು ಬೃಹತ್ತಾಗಿರುತ್ತದೆ. ಭಾರತದ ಜನಸಂಖ್ಯೆ 140 ಕೋಟಿ ಅದರಲ್ಲಿ ಒಂಭತ್ತು ಪಸೆರ್ಂಟ್ ನಿರುದ್ಯೋಗ ಅಂದರೆ 12.6 ಕೋಟಿ ಆಗುತ್ತದೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಜನಸಂಖ್ಯೆಯ ನಿರುದ್ಯೋಗ ಆತಂಕಕಾರಿಯಾಗಿದೆ.
ಮತ್ತೊಂದೆಡೆ ಶೇ.57ರಷ್ಟು ಜನಸಂಖ್ಯೆ ಅವಲಂಬಿತವಾಗಿರುವ ಕೃಷಿ ವಲಯದ ಉತ್ಪನ್ನವು ಜಿಡಿಪಿಯ ಶೇ.17ರಷ್ಟಿದೆ. ಅನೌಪಚಾರಿಕ, ಗುತ್ತಿಗೆ ಉದ್ಯೋಗ ಸೃಷ್ಟಿಸುವ, ಗುಣಮಟ್ಟದ ಉದ್ಯೋಗದ ಪ್ರಮಾಣ ಕಡಿಮೆ ಇರುವ ಸೇವಾ ವಲಯಗಳಾದ ಐಟಿ, ಇ ಕಾಮರ್ಸ, ಗಿಗ್ ಮುಂತಾದ ವಲಯಗಳ ಉತ್ಪನ್ನವು ಜಿಪಿಡಿಯ ಶೇ.50ರಷ್ಟಿದೆ. ಉದ್ಯೋಗ ಸೃಷ್ಟಿಸುವ ಉತ್ಪಾದನಾ ವಲಯದ ಉತ್ಪನ್ನ ಜಿಡಿಪಿಯ ಶೇ.16.4ರಷ್ಟಿದೆ. ಇಂತಹ ಅಸಮಾನತೆಯ ದೇಶ ಅರ್ಥಿಕವಾಗಿ ಸದೃಢವಾಗಿರಲು ಸಾಧ್ಯವೇ?
ಮೇಲಿನ ವಿಶ್ಲೇಷಣೆಯಿಂದ ಜಿಡಿಪಿ ಹೆಚ್ಚಿದಷ್ಟು ನಿರುದ್ಯೋಗ ಕಡಿಮೆ ಆಗುತ್ತದೆ ಎನ್ನುವ ಚಿಂತನೆ ಸುಳ್ಳೆಂದು ಸಾಬೀತಾಗುತ್ತದೆ. ಇಲ್ಲಿ ಎಲ್ಲವೂ ಖಾಸಗಿಕರಣಗೊಳ್ಳುತ್ತಿರುವುದರಿಂದ ಮತ್ತು ಈ ಕಾರಣಕ್ಕೆ ಬಂಡವಾಳಶಾಹಿಗಳ ಸಂಪತ್ತು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ. ಈ ವಿದ್ಯಮಾನವು ಉದ್ಯೋಗರಹಿತ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ಈಗಿನ ಕಾಲಕ್ಕಿಂತಲೂ ಪೂರ್ವದ್ದು ಎನ್ನುವುದನ್ನು ಅರಿತಾಗ ಈಗಿನ ಬಿಕ್ಕಟ್ಟಿನ ಅಂದಾಜು ಗೊತ್ತಾಗುತ್ತದೆ.
ಕನಿಷ್ಠ ತಿಳುವಳಿಕೆ ಇರುವ ಪ್ರಜ್ಞಾವಂತರಿಗೆ ಈ 4 ಟ್ರಿಲಿಯನ್ ಆರ್ಥಿಕತೆಯ ಮರೆಮೋಸ ಗೊತ್ತಾಗುತ್ತದೆ.







