ಹೊಂಡಗಳೇ ತುಂಬಿದ ಕೌಠಾ-ವಡಗಾಂವ್ ಮುಖ್ಯರಸ್ತೆ

ಬೀದರ್, ನ.15: ಔರಾದ್ ತಾಲೂಕಿನ ಕೌಠಾ ಗ್ರಾಮದಿಂದ ವಡಗಾಂವ್ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಹೊಂಡಗಳೇ ತುಂಬಿದ್ದು, ಆ ರಸ್ತೆ ಮೇಲೆ ಸಾಗುವ ಪ್ರಯಾಣಿಕರು ಹರಸಾಹಸ ಪಡುವಂತಾಗಿದೆ.
ಕೌಠಾ ಗ್ರಾಮದಿಂದ ವಡಗಾಂವ್ ಗ್ರಾಮಕ್ಕೆ ಸುಮಾರು 12 ಕಿ.ಮೀ.ವರೆಗೆ ರಸ್ತೆ ಇದೆ. ಮಾರ್ಗ ಮಧ್ಯದಲ್ಲಿ ಪಾಷಾಪುರ್, ಗಡಿ ಕುಶನೂರ್, ಆಲೂರ್, ಬೇಲೂರ್ ಹಾಗೂ ಇತರ ಗ್ರಾಮಗಳಿದ್ದು, ಈ ಎಲ್ಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆ ಮೂಲಕ ದಿನಾಲೂ ನೂರಾರು ವಾಹನಗಳು ಓಡಾಡುತ್ತವೆ. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ.
ಹೊಂಡಗಳೇ ಹೆಚ್ಚಿರುವ ಈ ರಸ್ತೆಯಲ್ಲಿ ಮಳೆ ಬಿದ್ದರೆ ಆ ಹೊಂಡಗಳೆಲ್ಲ ನೀರಿನಿಂದ ತುಂಬುತ್ತವೆ. ಎಲ್ಲಿ ರಸ್ತೆ ಇದೆ, ಎಲ್ಲಿ ಹೊಂಡ ಇದೆ ಎನ್ನುವುದೇ ತಿಳಿಯುವುದಿಲ್ಲ. ಮಳೆ ಇಲ್ಲದಿದ್ದಾಗ ಒಂದು ವಾಹನ ಹೋದರೂ ಸಾಕು ರಸ್ತೆ ಧೂಳುಮಯವಾಗುತ್ತದೆ. ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸರಕಾರಿ ಬಸ್‌ಗಳು ಕೂಡ ಇತ್ತಕಡೆಗೆ ಬರುವುದು ಕಡಿಮೆಯಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ತುಂಬಾ ಕಷ್ಟವಾಗುತ್ತಿದೆ.
ಸುಮಾರು ವರ್ಷಗಳಿಂದ ಈ ರಸ್ತೆಯ ಕಾಮಗಾರಿ ನಡೆದಿಲ್ಲ. ರಾಜಕಾರಣಿಗಳು, ಅಧಿಕಾರಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ. ಈ ಗ್ರಾಮಗಳ ಪ್ರಮುಖ ರಸ್ತೆ ಇದಾಗಿದ್ದು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಎರಡು ವರ್ಷಗಳಿಂದ ಮಳೆ ಹೆಚ್ಚಾದ ಕಾರಣ ರಸ್ತೆ ತುಂಬೆಲ್ಲ ಹೊಂಡಗಳು ಬಿದ್ದಿವೆ. ರಾತ್ರಿ ಸಮಯದಲ್ಲಿ ಹೊಂಡ ಯಾವುದು, ರಸ್ತೆ ಯಾವುದು ಎನ್ನುವುದೇ ಗೊತ್ತಾಗುತ್ತಿಲ್ಲ. ತುಂಬಾ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲಗುತ್ತದೆ.
-ಮಹಾಂತೇಶ್, ಸ್ಥಳೀಯ ನಿವಾಸಿ.
ಈ ರಸ್ತೆ ತುಂಬಾ ಹದಗೆಟ್ಟಿದ್ದು, ರೋಗಿಗಳನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಲೂ ಸಾಧುವಿಲ್ಲ. ಶಾಸಕರು ಹಾಗೂ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಮಳೆಗಾಲ ಬರುವಷ್ಟರಲ್ಲಿ ಈ ರಸ್ತೆ ನಿರ್ಮಾಣ ಮಾಡಬೇಕು.
-ಸಂತೋಷ್, ಪಾಷಾಪುರ್ ಗ್ರಾಮಸ್ಥ







