ಭಾರತದ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರ ಒಪ್ಪಂದ

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಜಾಗತಿಕ ವ್ಯಾಪಾರ ಮತ್ತು ಸುಂಕ ಯುದ್ಧದ ಮಧ್ಯೆ ಸಹಿ ಮಾಡಲಾದ ಈ ಒಪ್ಪಂದವನ್ನು ಎಲ್ಲ ಒಪ್ಪಂದಗಳ ತಾಯಿ ಎಂದು ಕರೆಯಲಾಗಿದೆ. ಇದು ಟ್ರಂಪ್ ಸುಂಕಗಳಿಂದ ತೊಂದರೆಗೊಳಗಾದ ಭಾರತೀಯ ರಫ್ತುದಾರರಿಗೆ ಹೊಸ ಚೈತನ್ಯ ತರಬಹುದು ಎನ್ನಲಾಗುತ್ತಿದೆ. ಆದರೆ ಈ ಒಪ್ಪಂದ ಟ್ರಂಪ್ ಅವರ ಒತ್ತಡ ಮತ್ತು ವ್ಯಾಪಾರ ಯುದ್ಧದಿಂದಾಗಿ ಮಾಡಿದ್ದಲ್ಲ. ಎರಡು ದಶಕಗಳಿಂದ ಇದರ ತಯಾರಿ ನಡೆದಿತ್ತು. ಭಾರತ 2007ರಲ್ಲಿ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಿತು. ನಂತರ ಮಾತುಕತೆ ಸ್ಥಗಿತಗೊಳಿಸಲಾಯಿತು. 2022ರಲ್ಲಿ ಮಾತುಕತೆ ಪುನರಾರಂಭಿಸಲಾಯಿತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಒಕ್ಕೂಟದ ಉರ್ಸುಲಾ ವಾನ್‌ಡೆರ್ ಲೇಯೆನ್ ಈ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ.
ಈ ವ್ಯಾಪಾರ ವಲಯ ವಿಶ್ವದ ಜಿಡಿಪಿಯ ಶೇ.25 ಅನ್ನು ಒಳಗೊಂಡಿರುತ್ತದೆ. ಈ ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ಯುರೋಪಿಯನ್ ರಾಷ್ಟ್ರಗಳು ಭಾರತದಂತಹ ಬೃಹತ್ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತವೆ. ಶೇ. 96 ಕ್ಕಿಂತ ಹೆಚ್ಚು ಯುರೋಪಿನ ಸರಕುಗಳು ಸುಂಕವಿಲ್ಲದೆ ಅಥವಾ ಕಡಿಮೆ ಸುಂಕದೊಂದಿಗೆ ಭಾರತದ ಮಾರುಕಟ್ಟೆಗೆ ಬರಲಿವೆ. ಇಲ್ಲಿಯವರೆಗೆ ಭಾರತ ಯಾವುದೇ ವ್ಯಾಪಾರ ಪಾಲುದಾರರಿಗೆ ಯುರೋಪಿಗೆ ನೀಡುತ್ತಿರುವಷ್ಟು ರಿಯಾಯಿತಿಗಳನ್ನು ನೀಡಿಲ್ಲ.
ಯುರೋಪಿಯನ್ ಒಕ್ಕೂಟಕ್ಕೆ ಉಳಿತಾಯ ವಾರ್ಷಿಕವಾಗಿ 4 ಬಿಲಿಯನ್ ಯುರೋಗಳಿಗಿಂತ ಹೆಚ್ಚಾಗಿರುತ್ತದೆ ಮತ್ತು ಭಾರತಕ್ಕೆ ಯುರೋಪಿನ ರಫ್ತುಗಳು ಮುಂದಿನ ಆರೇಳು ವರ್ಷಗಳಲ್ಲಿ ಡಬಲ್ ಆಗುವ ನಿರೀಕ್ಷೆಯಿದೆ. ಭಾರತ ಯುರೋಪಿಯನ್ ಮಾರುಕಟ್ಟೆಗಳಿಗೆ ನೇರ ಪ್ರವೇಶ ಪಡೆಯುತ್ತದೆ. ಭಾರತೀಯ ರಫ್ತುಗಳಲ್ಲಿ ಶೇ. 99 ರಷ್ಟು ಈಗ ಆದ್ಯತೆಯ ಪ್ರವೇಶ ಪಡೆಯುತ್ತವೆ. ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ತೀವ್ರ ವಲಯಗಳಿಗೆ ಭಾರೀ ಉತ್ತೇಜನ ನೀಡುತ್ತದೆ. 27 ಯುರೋಪಿಯನ್ ರಾಷ್ಟ್ರಗಳ ಗುಂಪಾದ ಯುರೋಪಿಯನ್ ಒಕ್ಕೂಟ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುವ ಒಟ್ಟು ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿದೆ. ಆದ್ದರಿಂದ ಪ್ರಮಾಣ ಮತ್ತು ಮಹತ್ವದ ದೃಷ್ಟಿಯಿಂದ ಇದು ಎಲ್ಲಾ ಒಪ್ಪಂದಗಳ ತಾಯಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿರುವ ರೀತಿ ನಾಳೆಯಿಂದಲೇ ಎಲ್ಲವೂ ಶುರು ಎಂಬ ರೀತಿಯಲ್ಲಿದೆ. ಆದರೆ ಈ ಘೋಷಣೆ ಕೇವಲ ಆರಂಭ. ಇದು ಕೇವಲ ಒಂದು ಒಪ್ಪಂದ. ದೀರ್ಘವಾದ ಕಾನೂನು ಪ್ರಕ್ರಿಯೆ ಪ್ರಾರಂಭವಾಗಬೇಕಿದೆ. ಅದರ ನಂತರ ಇದನ್ನು ಯುರೋಪಿಯನ್ ಯೂನಿಯನ್ ಸಂಸತ್ತು ಮತ್ತು ಭಾರತೀಯ ಸಂಸತ್ತಿನಲ್ಲಿ ಅಂಗೀ ಕರಿಸಬೇಕು. ಈ ಒಪ್ಪಂದ 2027 ರೊಳಗೆ ಜಾರಿಯಾಗುವ ಸಾಧ್ಯತೆ ಇಲ್ಲ. ಜಾರಿ ಆದ ನಂತರವೇ ಯಾರಿಗೆ ಪ್ರಯೋಜನ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ಒಪ್ಪಂದದ ಪ್ರಮುಖ ಅಂಶವೆಂದರೆ, ಇದರ ಹಿನ್ನೆಲೆಯಲ್ಲಿರುವ ಭೌಗೋಳಿಕ
ರಾಜಕೀಯ. ಯುರೋಪಿಯನ್ ಯೂನಿಯನ್ ಮತ್ತು ಭಾರತ ಎರಡೂ ಅಮೆರಿಕದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಾಗಿವೆ. ಆದರೆ ಟ್ರಂಪ್ ಎರಡನ್ನೂ ಬಿಡಲಿಲ್ಲ ಮತ್ತು ಭಾರೀ ಸುಂಕಗಳನ್ನು ವಿಧಿಸಿದರು. ಯುಇ ಟ್ರಂಪ್ ಅವರನ್ನು ಮನವೊಲಿಸುವಲ್ಲಿ ಮತ್ತು ಕೆಲವು ವಾರಗಳಲ್ಲಿ ಇತ್ಯರ್ಥಕ್ಕೆ ಬರುವಲ್ಲಿ ಯಶಸ್ವಿಯಾಯಿತು. ಆದರೆ ಭಾರತ ಮಾತ್ರ ಶೇ. 50 ಸುಂಕದ ಹೊರೆ ಎದುರಿಸುತ್ತಿದೆ. ಟ್ರಂಪ್ ವಿಶ್ವಾಸಾರ್ಹ ವ್ಯಕ್ತಿಯಲ್ಲ ಎಂದು ಯುಇ ಗೆ ತಿಳಿದಿದೆ. ಅದಕ್ಕಾಗಿಯೇ ಅದು ಈಗ ಭಾರತದಂತಹ ದೇಶದೊಂದಿಗೆ ವ್ಯವಹರಿಸುವುದು ಉತ್ತಮ ಎಂದು ಭಾವಿಸಿದೆ. ಈ ಒಪ್ಪಂದದೊಂದಿಗೆ ಭಾರತ ತನ್ನ ಆಟೋ ವಲಯವನ್ನು ಕ್ರಮೇಣ ತೆರೆಯಲು ಪ್ರಾರಂಭಿಸಿದೆ.
ಯುರೋಪಿನಿಂದ ಬರುವ ಪ್ರೀಮಿಯಂ ಕಾರುಗಳ ಮೇಲಿನ ಸುಂಕವನ್ನು ಈಗ ಹಂತಹಂತವಾಗಿ ಕಡಿತಗೊಳಿಸಲಾಗುವುದು. ಹೆಚ್ಚುವರಿಯಾಗಿ, ಯುರೋಪಿಯನ್ ವೈನ್, ಆಲಿವ್ ಎಣ್ಣೆ, ಬ್ರೆಡ್, ಮಿಠಾಯಿ ಇತ್ಯಾದಿಗಳು ಭಾರೀ ಸುಂಕ ಕಡಿತ ಕಾಣಲಿವೆ. ಭಾರತ ಈಗ ತನ್ನ ನಿಲುವನ್ನು ಮೃದುಗೊಳಿಸಲು ಪ್ರಾರಂಭಿಸಿದೆ.
ಟ್ರಂಪ್ ಇತ್ತೀಚೆಗೆ ಗ್ರೀನ್‌ಲ್ಲಾಂಡ್ ಕಾರಣಕ್ಕೆ ಯುರೋಪಿ ಯನ್ ರಾಷ್ಟ್ರಗಳಿಗೆ ಸುಂಕ ಬೆದರಿಕೆ ಹಾಕಿದರು. ಹಾಗಾಗಿ ಯುರೋಪಿಯನ್ ರಾಷ್ಟ್ರಗಳು ಈಗ ಭಾರತೀಯ ಉತ್ಪನ್ನಗಳಿಗೆ ತಮ್ಮ ಮಾರುಕಟ್ಟೆ ತೆರೆಯಲು ಸಿದ್ಧವಾಗಿವೆ. ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಗತ್ಯವನ್ನು ಎರಡೂ ಮನವರಿಕೆ ಮಾಡಿಕೊಂಡಿವೆ. ಅಲ್ಲದೆ ಚೀನಾ ಎರಡಕ್ಕೂ ವಿಶ್ವಾಸಾರ್ಹ ದೀರ್ಘಕಾಲೀನ ಪಾಲುದಾರನಾಗಿರಲಿಲ್ಲ. ಅದಕ್ಕಾಗಿಯೇ ಯುರೋಪಿಯನ್ ಯೂನಿಯನ್ ಮತ್ತು ಭಾರತ ಒಟ್ಟಿಗೆ ಬರಲು ನಿರ್ಧರಿಸಿದವು ಮತ್ತು ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಕೆಲಸ ಈಗ ಕೆಲವು ತಿಂಗಳುಗಳಲ್ಲಿ ಪೂರ್ಣಗೊಂಡಿತು. ಆದ್ದರಿಂದ, ಈ ಒಪ್ಪಂದದ ಹಿಂದೆ ವ್ಯಾಪಾರವಿದೆ ಮತ್ತು ಟ್ರಂಪ್ ನೆರಳು ಕೂಡ ಇದೆ. ಭಾರತಕ್ಕೆ ಈ ಒಪ್ಪಂದದ ದೊಡ್ಡ ಪ್ರಯೋಜನವೆಂದರೆ ರಫ್ತು ತಾಣ. ಯುರೋಪಿಯನ್ ಯೂನಿಯನ್ ಸಾಂಪ್ರದಾಯಿಕವಾಗಿ ಭಾರತದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿರಲಿಲ್ಲ. ಸರಾಸರಿ, ಸರಕುಗಳ ಮೇಲೆ ಶೇ. 3.8 ಸುಂಕವಿತ್ತು. ಜವಳಿ ಉಡುಪುಗಳಂತಹ ಕಾರ್ಮಿಕ ತೀವ್ರ ವಲಯಗಳಲ್ಲಿ ಸುಂಕಗಳು ಹೆಚ್ಚಿದ್ದವು. 2023 ರ ನಂತರ ಯುರೋಪಿಯನ್ ಯೂನಿಯನ್ ಸುಂಕಗಳು ಹೆಚ್ಚಾಗಲು ಪ್ರಾರಂಭಿಸಿದವು. ಉಡುಪುಗಳು, ಔಷಧಗಳು ಮತ್ತು ಯಂತ್ರೋಪಕರಣಗಳಂತಹ ಕ್ಷೇತ್ರಗಳಲ್ಲಿ ಅದರಿಂದ ನಷ್ಟವಾಯಿತು. ಈ ಹೊಸ ಒಪ್ಪಂದದೊಂದಿಗೆ, ಭಾರತೀಯ ರಫ್ತುದಾರರು ಈಗ ಆ ರಿಯಾಯಿತಿಗಳನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ. ಅಮೆರಿಕದಿಂದ ಉಂಟಾದ ಉದ್ಯೋಗ ನಷ್ಟ ಮತ್ತು ಆರ್ಥಿಕ ನಷ್ಟಗಳಿಂದ ಚೇತರಿಸಿಕೊಳ್ಳಲು ಇದರಿಂದ ಅವಕಾಶವಾಗಲಿದೆ. ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಗಳಲ್ಲಿ ಯುಇ ಸುಂಕವನ್ನು ಶೂನ್ಯಕ್ಕೆ ಇಳಿಸುತ್ತದೆ. ಭಾರತ ಈ ಒಪ್ಪಂದದ ಮೂಲಕ ಯುರೋಪಿಯನ್ ಯೂನಿಯನ್ ನಲ್ಲಿ ಐಟಿ ಸೇವೆಗಳಿಗೆ ಪ್ರವೇಶ ಪಡೆಯಬಹುದು. ಈ ಮೂಲಕ, ಭಾರತೀಯ ಐಟಿ ಕಂಪನಿಗಳು ಯುರೋಪಿಯನ್ ಗ್ರಾಹಕರ ಡೇಟಾ ನಿರ್ವಹಿಸುವುದು ಸುಲಭವಾಗುತ್ತದೆ. ಯುರೋಪಿಯನ್ ಯೂನಿಯನ್ ಅನುಮೋದಿತ ಸಂಸ್ಥೆಯಿಂದ ಪದವಿ ಪಡೆದರೆ, ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶವಿರುತ್ತದೆ. ಎಲ್ಲಾ ಸದಸ್ಯ ರಾಷ್ಟ್ರಗಳು ಅದನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ ಎಂಬುದು ಬೇರೆ ವಿಷಯ. ಈ ಒಪ್ಪಂದದಿಂದ ಯುರೋಪಿಯನ್ ಒಕ್ಕೂಟ ಏನು ಪಡೆಯಲಿದೆ? ಭಾರತ ಯುರೋಪಿನಿಂದ ಬರುವ ಶೇ. 96 ಕ್ಕಿಂತ ಹೆಚ್ಚು ಸರಕುಗಳ ಮೇಲಿನ ಸುಂಕ ಕಡಿತಗೊಳಿಸಿದೆ. ವೈನ್, ಸ್ಪಿರಿಟ್, ತೈಲ, ಆಟೋ ವಲಯಗಳಲ್ಲಿ ಹೆಚ್ಚಿನ ಕಡಿತ ಕಾಣಬಹುದು. ಶೇ. 150 ಸುಂಕ ಹೊಂದಿದ್ದ ವೈನ್ ಮತ್ತು
ಸ್ಪಿರಿಟ್ಗ್ ಳ ಮೇಲೆ ಈಗ ಶೇ.20 ರಿಂದ ಶೇ.40 ವರೆಗೆ ಸುಂಕ ಇಳಿಸುವ ಮಾತನಾಡಲಾಗುತ್ತಿದೆ. ಆಲ್ಕೊಹಾಲ್ ಅಲ್ಲದ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಒಪ್ಪಂದದ ಅಡಿಯಲ್ಲಿ ಯುರೋಪಿನಿಂದ ಬರುವ ವಾಹನಗಳ ಮೇಲಿನ ಆಮದು ಸುಂಕವನ್ನು ಭಾರತ ಶೇ. 110 ರಿಂದ ಶೇ.40 ಕ್ಕೆ ಇಳಿಸುತ್ತದೆ. ಕೆಲವು ವರ್ಷಗಳಲ್ಲಿ ಅದು ಶೇ.10 ಕ್ಕೆ ಇಳಿಯುತ್ತದೆ ಎಂದು ಹೇಳಲಾಗುತ್ತಿದೆ. ರಿಯಾಯಿತಿಗಳು ಕೇವಲ ಹೈ-ಎಂಡ್, ಟಾಪ್- ಆಂಡ್ ಐಷಾರಾಮಿ ಕಾರುಗಳ ಮೇಲೆ ಮಾತ್ರವಲ್ಲ. ಬದಲಾಗಿ 20 ಲಕ್ಷ ರೂ.ಗಳವರೆಗಿನ ಪ್ರೀಮಿಯಂ ವಿಭಾಗದ ವಾಹನಗಳ ಮೇಲೂ ಲಭ್ಯವಿರುತ್ತದೆ.
ಆದ್ದರಿಂದ ಮುಂಬರುವ ದಿನಗಳಲ್ಲಿ, ಬಿಎಂಡಬ್ಲ್ಯು, ಮರ್ಸಿಡಿಸ್, ಆಡಿಯಂತಹ ಕಾರುಗಳು ಮಾತ್ರವಲ್ಲದೆ ಪ್ರೀಮಿಯಂ ಕಾರು, ಎಸ್ಯುವಿ ವಿಭಾಗ ಎಂದು ಕರೆಯಲ್ಪಡುವ ಫೋಕ್ಸ್ವ್ಯಾಗನ್, ಸ್ಕೋಡಾದಂತಹ ವಾಹನಗಳ ಬೆಲೆ ಕೂಡ ಭಾ ಕಡಿತ ಕಾಣಲಿದೆ. ಈ ವಿನಾಯಿತಿ ಇವಿಗಳ ಮೇಲೆ ಇಲ್ಲ ಎಂಬುದು ನಿಜ. ದೇಶೀಯ ಇವಿ ತಯಾರಕರನ್ನು ರಕ್ಷಿಸುವ ಬಗ್ಗೆ 5 ವರ್ಷಗಳ ಕಾಲ ಚರ್ಚೆ ನಡೆಯುತ್ತಿದೆ. ಕಾರುಗಳ ಹೊರತಾಗಿ, ಯುರೋಪಿಯನ್ ಯುನಿಯನ್‌ನಿಂದ ಬರುವ ಯಂತ್ರೋಪಕರಣಗಳು ಸಹ ಶೂನ್ಯ ಸುಂಕ ಅಥವಾ ಅತ್ಯಲ್ಪ ಸುಂಕದಲ್ಲಿ ಬರಲಿವೆ. ಕೃಷಿ ಮತ್ತು ಡೈರಿಯನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿ
ಡಲಾಗಿದೆ ಎಂಬುದು ಸಮಾಧಾನಕರ ವಿಷಯ. ಹಾಗಾಗಿ ಭಾರತೀಯ ರೈತರು ಈ ಒಪ್ಪಂದದ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗ ಮುಂದಿನ ಹಂತವೆಂದರೆ, ಇಡೀ ಯುರೋಪಿಯನ್ ಸಂಸತ್ತು ಇದನ್ನು ಚರ್ಚಿಸಿ ಅನುಮೋದಿಸಬೇಕಿದೆ. ಕಾನೂನು ಪರಿಶೀಲನೆಗೆ ತಿಂಗಳುಗಳು ಬೇಕಾಗುತ್ತವೆ. ಹಾಗಾಗಿ, ಈ ಒಪ್ಪಂದ 2027 ರ ಮೊದಲು ಜಾರಿಗೆ ಬರುವುದಿಲ್ಲ. ಮುಂಬರುವ ತಿಂಗಳುಗಳಲ್ಲಿ ಎಲ್ಲಾ ತೆರಿಗೆ ಮತ್ತು ಸೆಸ್ಗಗಳನ್ನು ತೆಗೆದುಹಾಕಲು ಸಾಧ್ಯವಾದರೆ, ಬಹುಶಃ ನಾವು ಈ ವ್ಯಾಪಾರ ಒಪ್ಪಂದದ ಸಂಪೂರ್ಣ ಪ್ರಯೋಜನ ಪಡೆಯಬಹುದು. ಇಲ್ಲದಿದ್ದರೆ, ಇದು ಕೇವಲ ರಾಜಕೀಯ ಸಂದೇಶವಾಗಿ ಉಳಿಯುತ್ತದೆ ಮತ್ತು ಯುಇ
ಹೆಚ್ಚಿನ ಲಾಭ ಪಡೆಯಬಹುದು. ಆತುರದಿಂದ ಸಹಿ ಹಾಕಲಾದ ಈ ಒಪ್ಪಂದ ವ್ಯಾಪಾರ, ಹೂಡಿಕೆ, ಅಭಿವೃದ್ಧಿಯ ಮೇಲೆ ತಕ್ಷಣದ ಗಮನ ಕೊಟ್ಟಿದೆ ಎಂಬುದು ಸ್ಪಷ್ಟ. ಇದೊಂದು ಸಂದೇಶವನ್ನು ಕೂಡ ಮುಟ್ಟಿಸಬಹುದು. ಮಹಾ ಶಕ್ತಿ ರಾಜಕೀಯದಿಂದ ನಾವು ನಾಶವಾಗುವುದಿಲ್ಲ, ನಾವು ಒಬ್ಬಂಟಿಯಾಗಿಲ್ಲ. ನಮಗೆ ಮಿತ್ರರಾಷ್ಟ್ರಗಳಿವೆ ಎಂಬ ಸಂದೇಶ ಅದು. ಯುರೋಪಿಯನ್ ಒಕ್ಕೂಟ ದಕ್ಷಿಣ ಅಮೆರಿಕದ ದೇಶಗಳೊಂದಿಗೆ ವ್ಯವಹರಿಸುತ್ತದೆ ಅಥವಾ ಇಂಡೋನೇಶ್ಯ ಮತ್ತು ಭಾರತದಂತಹ ದೇಶಗಳೊಂದಿಗೆ ಎಫ್ಟಿಎಗೆ ಸಹಿ ಹಾಕುತ್ತದೆ. ಮಹಾ ಶಕ್ತಿಗಳ ಬೆದರಿಕೆ ವಿರುದ್ಧ ಮಧ್ಯಮ ಶಕ್ತಿಗಳು ಒಂದಾಗಲು ಇದು ಒಂದು ಮಾರ್ಗ. ಪಾಲುದಾರಿಕೆಯನ್ನು ತೋರಿಸಬೇಕಾಗಿತ್ತು ಮತ್ತು ಸಂದೇಶವನ್ನು ಅಮೆರಿಕಕ್ಕೆ ನೀಡಬೇಕಾಗಿತ್ತು. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪಾಲುದಾರಿಕೆ ಅಂತರ್‌ರಾಷ್ಟ್ರೀಯ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಬಲಪಡಿಸುತ್ತದೆ. ಇಂದು ವಿಶ್ವದ ಮಧ್ಯಮ ಶಕ್ತಿಗಳು ಒಟ್ಟಿಗೆ ಬರುತ್ತಿವೆ ಎಂಬುದು ಗಮನಾರ್ಹ ಬದಲಾವಣೆ ತರಬಹುದು. ಯುಎಸ್ ಮತ್ತು ಚೀನಾವನ್ನು ಹೊರತುಪಡಿಸಿ ಈ ಎರಡು ಶಕ್ತಿಗಳನ್ನು ಅನುಮಾನದಿಂದ ನೋಡುತ್ತಿರುವ ಮೂರನೇ ಧ್ರುವ ಹೊರಹೊಮ್ಮುತ್ತಿದೆ. ಭಾರತ ತನ್ನ ಕಾರ್ಡ್‌ಗಳನ್ನು ಸರಿಯಾಗಿ ಆಡಿದರೆ, ನಾವು ಈ ಮೂರನೇ ಧ್ರುವದ ಪ್ರಮುಖ ಭಾಗವಾಗಬಹುದು. ಯುರೋಪಿಯನ್ ಯೂನಿಯನ್ ಭಾರತದೊಂದಿಗೆ ವ್ಯಾಪಾರದಲ್ಲಿ ಮಾತ್ರವಲ್ಲದೆ ತಂತ್ರಜ್ಞಾನ, ಸ್ಟಾರ್ಟ್‌ಅಪಗಳು, ರಕ್ಷಣೆ, ಸಂಶೋಧನೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವ ಆಸಕ್ತಿ ತೋರಿಸಿದೆ. ಇಲ್ಲಿನ ಒಂದು ಸತ್ಯವೆಂದರೆ, ಯುರೋಪಿಯನ್ ಯೂನಿಯನ್‌ಗೆ ಹೊಸ ಮಾರುಕಟ್ಟೆಗಳು ಬೇಕಾಗಿವೆ. ಮತ್ತು ಅದು ಭಾರತಕ್ಕೆ ಬಹಳಷ್ಟು ಸರಕುಗಳನ್ನು ಮಾರಾಟ ಮಾಡುತ್ತದೆ. ಪರಮಾಣು ರಿಯಾಕ್ಟರ್‌ಗಳು, ವಿಮಾನಗಳು, ವೈದ್ಯಕೀಯ ಉಪಕರಣಗಳು ಆ ಸರಕುಗಳಲ್ಲಿ ಸೇರಿವೆ. ಈ ಒಪ್ಪಂದದಿಂದ ಭಾರತ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆಯೇ? ಈ ಹೊತ್ತಲ್ಲಿ ನಾವು ಮಟನ್, ಮೊಗಲ್ ಮಂದಿರ, ಮಸೀದಿ ಎನ್ನುತ್ತಲೇ ಕಳೆದುಹೋದರೆ ಯುರೋಪಿಯನ್ ಯೂನಿಯನ್ ಮತ್ತೆ ಹೊಸ ಯುಗದ ಈಸ್ಟ್ ಇಂಡಿಯಾ ಕಂಪೆನಿಯಂತೆ ಆಟ ಆಡಬಹುದು. ಟ್ರಂಪ್ ಬೆದರಿಕೆಯಿಂದಾಗಿ ಇಂಗ್ಲೆಂಡ್, ಯುರೋಪ್ ಮತ್ತು ಕೆನಡಾ ಕೂಡ ಭಾರತದೊಂದಿಗೆ ವ್ಯವಹರಿಸಲು ಬರುತ್ತಿರುವಾಗ, ಹೊಸ ಮೈತ್ರಿಗಳು ರೂಪುಗೊಳ್ಳುತ್ತಿವೆ. ಆದರೆ ನಾಳೆ ಗಾಳಿ ಬದಲಾದರೆ ಪರಿಣಾಮ ಏನು?
ನಾಳೆ ಅಮೆರಿಕ ಮತ್ತೆ ಹಳೆಯ ಮಿತ್ರರಾಷ್ಟ್ರಗಳತ್ತ ಸ್ನೇಹದ ಹಸ್ತ ಚಾಚಿದರೆ ಈ ಒಪ್ಪಂದಗಳು ನಿಲ್ಲುತ್ತವೆಯೇ ಅಥವಾ ಭಿನ್ನಾಭಿಪ್ರಾಯಗಳು ತಲೆದೋರುತ್ತವೆಯೇ? ಯುರೋಪ್ ತನ್ನ ಸ್ವಾರ್ಥಕ್ಕಾಗಿ ಈ ಒಪ್ಪಂದವನ್ನು ಮಾಡುತ್ತಿದೆ ಎಂಬುದು ನಿಜ. 20 ವರ್ಷಗಳಿಂದ ಬಾಕಿ ಉಳಿದಿದ್ದ ಒಪ್ಪಂದ ಇಂದು ಇಷ್ಟು ಬೇಗ ಪೂರ್ಣಗೊಂಡಿದೆ. ಮುಂದಿನ ವರ್ಷದ ವೇಳೆಗೆ ಜಾರಿಗೆ ಬಂದರೆ ನಾವು ಈ ದೊಡ್ಡ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧರಿದ್ದೇವೆಯೇ ಎಂಬ ಪ್ರಶ್ನೆಯೂ ಇದೆ.







