ಆಟ ನಿಲ್ಲಿಸಿದ ತೊಗಲು ಗೊಂಬೆಗಳು...!
► ಅವಸಾನದೆಡೆಗೆ ಮುಖ ಮಾಡಿದ ಪರಂಪರೆಯ ಕಲೆ ► ನೆರವಿಗೆ ಹಸ್ತ ಚಾಚಿದ ಕಲಾವಿದರು

ಬೆಂಗಳೂರು, ಜು.15: ‘ಗೊಂಬೆಯಾಟ ಇಲ್ಲದೆ ಬೆಂಗಳೂರು ಮತ್ತಿತರೆಡೆಗಳಲ್ಲಿ ಬೇರೆ ವೃತ್ತಿಗಳನ್ನು ನಿರ್ವಹಿಸಿ ಜೀವನ ನಡೆಸುತ್ತಿದ್ದೇವೆ; ಹಲವರು ಹೊಟ್ಟೆಪಾಡಿಗಾಗಿ ಹಳ್ಳಿಗಳಲ್ಲಿ ಕೂಲಿ, ವ್ಯವಸಾಯ, ಮೇಕೆ ಕಾಯುವುದು ಇತ್ಯಾದಿ ಮಾಡುತ್ತಿದ್ದೇವೆ. ಗೊಂಬೆಗಳೆಲ್ಲಾ ಈಗ ಬಣ್ಣ ಅಳಿದು ಮೂಲೆಯಲ್ಲಿ ಧೂಳಿಡಿದಿವೆ, ಕೆಲವು ನದಿ ಸೇರಿವೆ ಎಂಬುದು ಅನೇಕ ಜಾನಪದ ಕಲೆಗಳಿಗೆ ತಾಯಿ ಬೇರಂತಿರುವ ‘ತೊಗಲು ಗೊಂಬೆಯಾಟ’ ಕಲಾವಿದರ ಅಳಲು ಇದು.
‘ಆಧುನಿಕ ವಿಜ್ಞಾನದ ತುಳಿತಕ್ಕೆ ಸಿಲುಕಿ ಕಾಲಕ್ರಮೇಣ ವಿನಾಶಕ್ಕೆ ಅಡಿಯಿಟ್ಟಿರುವ ತೊಗಲು ಗೊಂಬೆಯಾಟಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಈ ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರಿಗೆ ಸರಕಾರದಿಂದ ಪಿಂಚಣಿ, ಆರ್ಥಿಕ ನೆರವು ನೀಡಬೇಕು, ಸರಕಾರ, ಸಂಘ-ಸಂಸ್ಥೆಗಳು, ದಾನಿಗಳು ತೊಗಲುಗೊಂಬೆ ಪ್ರದರ್ಶನಕ್ಕೆ ನೆರವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ, ಯಕ್ಷಗಾನ ಅಕಾಡಮಿಯಿಂದ ಕಲಾವಿದರನ್ನು ಗುರುತಿಸಬೇಕು’ ಎಂಬುದು ಅವರ ಒತ್ತಾಯ.
ಇಂದಿನ ದೂರದರ್ಶನ, ಸಿನೆಮಾ ಮಾಧ್ಯಮಗಳ ಪರಿಕಲ್ಪನೆಗೆ ಜಾನಪದ ಕಲೆ ಅಡಿಪಾಯ ಹಾಕಿತು ಎಂದರೆ ತಪ್ಪಿಲ್ಲ. ಅಂತಹ ಹೆಗ್ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿ ತೊಗಲು ಗೊಂಬೆಯಾಟ ನಿಲ್ಲುತ್ತದೆ. ಇಂದಿನ ಪೀಳಿಗೆಗೆ ತೊಗಲು ಗೊಂಬೆಯಾಟದ ಬಗ್ಗೆ ಗೊತ್ತಿಲ್ಲ. ಅಪರೂಪದ ಜಾನಪದ ಕಲೆಯಾಗಿರುವ ತೊಗಲು ಗೊಂಬೆ ಆಟ ಇಂದು ಮೂಲೆಗುಂಪಾಗುವತ್ತ ಸಾಗಿದೆ. ಈ ಕಲಾವಿದರು ಮೂಲತಃ ಅಲೆಮಾರಿಗಳು. ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಾ ತಮ್ಮ ಕಲೆಯನ್ನು ಪ್ರದರ್ಶಿಸುವವರು. ಇತ್ತೀಚೆಗೆ ಈ ಕಲೆಯನ್ನೇ ನಂಬಿ ಬದುಕುವುದು ಕಷ್ಟವಾಗಿ ಒಂದೆಡೆ ನೆಲೆ ಕಂಡುಕೊಳ್ಳುವಂತಾಗಿದೆ.
ಪರದೆಯ ಹಿಂದೆ ಕುಳಿತು ತಾಳ-ಮೇಳಗಳೊಂದಿಗೆ ತೊಗಲಿನ ಬೊಂಬೆಗಳನ್ನು ಕೈಬೆರಳಿನಿಂದಲೇ ಕುಣಿಸುತ್ತಾ ಒಂದು ಕಥೆಯನ್ನು ಅಥವಾ ಪ್ರಸಂಗವನ್ನು ಮನಮುಟ್ಟುವಂತೆ ಹೇಳುವ ಕಲೆಯೇ ಈ ತೊಗಲುಗೊಂಬೆ ಆಟ. ಮನರಂಜನೆಯ ಮಾಧ್ಯಮಗಳಿಲ್ಲದ ಸಂದರ್ಭದಲ್ಲಿ ಜಿಂಕೆ, ಆಡು, ಕತ್ತೆ, ಎಮ್ಮೆಯ ಚರ್ಮಗಳಿಂದ ತಯಾರಿಸಿದ ಗೊಂಬೆಗಳ ಮೂಲಕ ಜನರಿಗೆ ಮನರಂಜನೆಯ ಜೊತೆಗೆ ಪೌರಾಣಿಕ, ಐತಿಹಾಸಿಕ ಹಾಗೂ ನೀತಿ ಕಥೆಗಳನ್ನು ಮನಮುಟ್ಟುವಂತೆ ತಲುಪಿಸುವ ಕಲಾ ವೇದಿಕೆ ಇದು. ಒಂದು ವಿಧದಲ್ಲಿ ಹೇಳಬೇಕಾದರೆ ಆಧುನಿಕ ಅನಿಮೇಷನ್ ಲೋಕದ ಪುರಾತನ ಕೊಂಡಿ ಈ ತೊಗಲುಗೊಂಬೆಯಾಟ.
ಐತಿಹ್ಯ ಹಿನ್ನೆಲೆ: ಈ ಕಲೆಯನ್ನು ಕರ್ನಾಟಕದಲ್ಲಿ ‘ತೊಗಲು ಗೊಂಬೆಯಾಟ’, ಆಂಧ್ರಪ್ರದೇಶದಲ್ಲಿ ‘ತೋಲುಬೊಮ್ಮಲಾಟ’, ತಮಿಳುನಾಡಿನಲ್ಲಿ ‘ತೋಲ ಪಾವೈಕೊತ್ತು’, ಕೇರಳದಲ್ಲಿ ‘ತೋಲು ಪಾವಕೋಟ್ಟು’, ಒರಿಸ್ಸಾದಲ್ಲಿ ‘ರಾವಣಛಾಯಾ’ ಎಂಬ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಈ ಕಲೆಯು ಕೇವಲ ಭಾರತದಲ್ಲಷ್ಟೇ ಅಲ್ಲ, ಆಗ್ನೇಯ ಏಷ್ಯಾ, ಚೀನಾ, ಟರ್ಕಿ, ಗ್ರೀಸ್‌ಗಳಿಗೂ ಹಬ್ಬಿ ಹೊಸ ರೂಪ ಪಡೆದುಕೊಂಡಿದೆ. ಈ ಕಲೆ ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲಲ್ಲದೆ ವಿಜಯನಗರ, ತಂಜಾವೂರು ರಾಜರ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದುಕೊಂಡಿತ್ತು ಎಂಬುದನ್ನು ಹಲವು ಸಂಶೋಧನೆಗಳು ಹೇಳುತ್ತವೆ.
ನಂಬಿಕೆಗಳ ಮೇಲೆ ಗೊಂಬೆಯಾಟ: ‘ಒಂದು ಕಾಲದಲ್ಲಿ ತೊಗಲುಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ; ದನಕರುಗಳಿಗೆ ಬರುವ ರೋಗ ನಿವಾರಣೆಯಾಗುತ್ತದೆ. ಊರಿಗೆ ಕೇಡು ಬರುವುದಿಲ್ಲ ಎಂಬ ನಂಬಿಕೆಗಳಿದ್ದವು. ಕೆಲವರು ಪುತ್ರ ಸಂತಾನಾಪೇಕ್ಷೆಯಿಂದ, ಒಳ್ಳೆಯ ಬೆಳೆ ಪ್ರಾಪ್ತಿಗಾಗಿ ತೊಗಲುಗೊಂಬೆಯಾಟ ಆಡಿಸಿದರೆ ಇನ್ನು ಕೆಲವರು ಮದುವೆ ಮತ್ತಿತರ ಧಾರ್ಮಿಕ ಸಂದರ್ಭಗಳಲ್ಲಿ, ಶ್ರಾವಣ ಮಾಸ, ಶಿವರಾತ್ರಿ, ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ, ಸುಗ್ಗಿ ಮುಗಿದ ಮೇಲೆ ಮನರಂಜನೆಗಾಗಿ ಗೊಂಬೆಯಾಟ ಏರ್ಪಡಿಸುತ್ತಿದ್ದರು. ಅಷ್ಟೇ ಅಲ್ಲ, ಯಾರಾದರೂ ಮರಣ ಹೊಂದಿದರೆ ಅವರ ಉತ್ತರ ಕ್ರಿಯೆಯ ಭಾಗವಾಗಿ ಗೊಂಬೆಯಾಟ ನಡೆಯುತ್ತಿತ್ತು. ಈಗ ಆಹ್ವಾನಗಳೂ ಬರುವುದಿಲ್ಲ; ವ್ಯವಸಾಯ ಮಾಡಲು ಜಮೀನೂ ಇಲ್ಲ’ ಎಂಬುದು ಕಲಾವಿದೆ ತುಮಕೂರಿನ ಜಯಂತಮ್ಮ ಅವರ ಮಾತು.
ಪರಂಪರೆ ಅಂತ್ಯವಾಗುವ ಆತಂಕ: ಬದಲಾಗಿರುವ ಸಮಾಜದಲ್ಲಿ ಜೀವನಕ್ಕೆ ಅನ್ಯಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ಪಾರಂಪರಗತವಾಗಿ ಬಂದ ಈ ಕಲೆಯು ನಮ್ಮ ಕಾಲಕ್ಕೇ ಅಂತ್ಯವಾಗುವ ಆತಂಕವೂ ಇದೆ. ಬದುಕು ನಡೆಸಲಾಗದ ಕಲೆಯನ್ನು ತಮ್ಮ ಮಕ್ಕಳಿಗೆ ಕಲಿಸಿ ಪ್ರಯೋಜನವೇನು? ಎಂದು ತಿಳಿದು ಮಕ್ಕಳನ್ನು ಇತ್ತ ಸುಳಿಯಲೂ ಬಿಟ್ಟಿಲ್ಲ.
2000ನೇ ಇಸವಿಯಿಂದೀಚೆಗೆ ಗೊಂಬೆಯಾಟಕ್ಕೆ ಒಂದು ರಾತ್ರಿಗೆ 1,000 ರೂ.ನಿಂದ 2,000 ರೂ.ವರೆಗೆ ಸಿಗುತ್ತಿತ್ತು. ತಬಲಾ, ಹಾರ್ಮೋನಿಯಮ್ ಜೊತೆಗೆ ಹೋದರೆ, ಐದರಿಂದ ಏಳು ಸಾವಿರ ರೂ.ವರೆಗೂ ಸಿಗುತ್ತಿತ್ತು. ಆದರೆ 2015ರಲ್ಲೇ ನಮ್ಮದು ಕೊನೆಯ ಪ್ರದರ್ಶನವಾಯಿತು, ಈಗ ನಮ್ಮನ್ನು ಕೇಳುವವರಿಲ್ಲ. 80, 90ರ ದಶಕದಲ್ಲಿ ಪ್ರದರ್ಶನಕ್ಕಾಗಿ ಹಣದ ಬದಲು ರಾಗಿ, ಜೋಳ ಸಹಿತ ವಿವಿಧ ದವಸ-ಧಾನ್ಯಗಳನ್ನು ಕೊಡುತ್ತಿದ್ದರು ಎಂದು ತಮ್ಮ ಬದುಕಿನ ಅನುಭವ ಬಿಚ್ಚಿಡುತ್ತಾರೆ ಹಿರಿಯ ಕಲಾವಿದ ಕೊಪ್ಪಳದ ಚಿಕ್ಕಹನುಮಯ್ಯ.
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಸಾಂಪ್ರದಾಯಿಕ ಕಲೆಯಾದ ತೊಗಲು ಗೊಂಬೆಯಾಟವನ್ನು ಉಳಿಸಬೇಕಿದೆ. ಇಂದಿನ ಪೀಳಿಗೆಗೆ ಈ ಕಲೆಯ ಕಲಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗಳಿಗೂ ಕೊಂಡೊಯ್ಯಬೇಕಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ ಎಂಬುದು ಹಲವು ಕಲಾವಿದರ ಅಂಬೋಣ.
ಪುರಾಣಪಾತ್ರಗಳ ವೈಶಿಷ್ಟವನ್ನು, ಪ್ರಾಮುಖ್ಯತೆಯನ್ನು ಗಾದೆಗಳು, ಒಗಟುಗಳ ಮೂಲಕ ಪರಿಚಯಿಸಿ, ಸಂದರ್ಭಕ್ಕನುಗುಣವಾಗಿ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ, ಹಾಡು, ನೃತ್ಯ, ವಾದ್ಯ, ಮಾತು ಮತ್ತು ತೊಗಲುಗೊಂಬೆಗಳು ಇಷ್ಟನ್ನು ಒಂದೇ ಕ್ಷಣದಲ್ಲಿ ನೋಡುವವರಿಗೆ ತಲುಪುವಂತೆ ಮಾಡುವ ಕಲೆ ತೊಗಲುಗೊಂಬೆಯಾಟ. ಕರೆಂಟಿಲ್ಲದ ಕಾಲದಲ್ಲಿ ಹಣತೆಯ ಬೆಳಕಿನಲ್ಲೂ ಪ್ರದರ್ಶನ ನಡೆಯುತ್ತಿತ್ತು. ಪ್ರಸ್ತುತದಲ್ಲಿ ತೊಗಲು ಗೊಂಬೆಯಾಟದ ಸಂಸ್ಕೃತಿ ಅಧಃಪತನದ ಹಾದಿ ಹಿಡಿದಿದೆ. ಆಧುನಿಕತೆ ಎಲ್ಲ ರೀತಿಯ ಬದುಕುಗಳನ್ನು ನುಂಗಿದಂತೆ, ಅದರೊಂದಿಗೆ ಹುಟ್ಟಿದ ಸೃಜನಶೀಲತೆಯನ್ನು ನುಂಗುತ್ತಿದೆ. ತೊಗಲು ಗೊಂಬೆಯಾಟ ಅಂಥವುಗಳಲ್ಲಿ ಒಂದು. ಈ ಕಲೆಯ ಪ್ರೋತ್ಸಾಹಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಸಂಬಂಧಿಸಿದ ಇಲಾಖೆ ಹಾಗೂ ಯಕ್ಷಗಾನ ಅಕಾಡಮಿ ವ್ಯಾಪ್ತಿಯಲ್ಲಿ ಈ ಕುರಿತಂತೆ ಚರ್ಚಿಸುತ್ತೇನೆ.
-ಗೊಲ್ಲಹಳ್ಳಿ ಶಿವಪ್ರಸಾದ್, ಜಾನಪದ ಅಕಾಡಮಿ ಅಧ್ಯಕ್ಷ, ಬೆಂಗಳೂರು
ಸಕ್ರಿಯ ಕಲಾವಿದರು 100ಕ್ಕೂ ಕಡಿಮೆ
ಕರ್ನಾಟಕದಲ್ಲಿ ತೊಗಲು ಗೊಂಬೆಯಾಟ ಕಲೆಯನ್ನು ಬೆಳೆಸಿದವರು ಈಗ ಕಳೆದು ಹೋಗುತ್ತಿದ್ದಾರೆ. ಐದು ದಶಕಗಳ ಹಿಂದೆ ರಾಜ್ಯದಲ್ಲಿ ಈ ಕಲಾವಿದರ ಸಂಖ್ಯೆ 14,921 ಇತ್ತೆಂದು ಜನಗಣತಿ ಹೇಳುತ್ತದೆ. ಆದರೆ, ಎರಡು ದಶಕಗಳ ಹಿಂದೆ ಸಕ್ರಿಯರಾಗಿದ್ದ ತೊಗಲುಗೊಂಬೆ ಕಲಾವಿದರ ಸಂಖ್ಯೆ 180ರ ಆಸುಪಾಸು. ಈಗ ಆ ಸಂಖ್ಯೆ 100ಕ್ಕಿಂತಲೂ ಕಡಿಮೆ. ಅದರಲ್ಲೂ, ಕೋವಿಡ್ ನಂತರ ಎಲ್ಲೂ ಪ್ರದರ್ಶನಗಳನ್ನು ಕಂಡೇ ಇಲ್ಲ ಎನ್ನುವುದು ರಾಮನಗರದ ಹಿರಿಯ ಕಲಾವಿದ ಗಂಗಯ್ಯನವರ ಅಭಿಪ್ರಾಯ.







