ಕಾಲದ ಬಿಕ್ಕಟ್ಟು ಬಿರುಕುಗಳ ನಡುವೆ ರೈತರ ಹೋರಾಟದ ಬೆಳಕು

ಚನ್ನರಾಯಪಟ್ಟಣದ ರೈತರು ಕರ್ನಾಟಕದ ರಾಜಕಾರಣಿಗಳ ಬೆಂಗಳೂರಿನ ವ್ಯಸನವನ್ನೂ, ಲೋಲುಪತೆಯನ್ನೂ ಬೆತ್ತಲೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿರೋಧ ಬಂದಾಗ ಪ್ರಭುತ್ವ ಛೂ ಬಿಡಬಹುದಾದ ಅಪಮಾರ್ಗಗಳಿಗೂ ಸಾಕ್ಷಿಗಳಾಗಿದ್ದಾರೆ. ನಿರಂಕುಶ ಪ್ರಭುತ್ವಗಳಂತೆಯೇ ಪ್ರಜಾಸತ್ತೆಯಲ್ಲೂ ಸಾಂವಿಧಾನಿಕ ದಿಕ್ಸೂಚಿಗೆ ಮರೆ ಮೋಸ ಮಾಡಿ ಅಪವಿತ್ರ ಮೈತ್ರಿಗಳನ್ನು ಕುದುರಿಸಿ ಸಂಪನ್ಮೂಲಗಳ ಲೂಟಿಗೆ ಕೈ ಜೋಡಿಸುವ ಕೇಡಿಗತನ ನಮ್ಮಲ್ಲೂ ಬೇರೂರಿದೆ ಎಂಬುದನ್ನು ಈ ಹೋರಾಟ ಮತ್ತೆ ತೋರಿಸಿಕೊಟ್ಟಿದೆ.
ಚನ್ನರಾಯಪಟ್ಟಣದ ಭೂಸ್ವಾಧೀನದ ವಿರುದ್ಧ ರೈತರು ನಡೆಸಿದ ಹೋರಾಟ ಈ ದೇಶದ ಇತಿಹಾಸದ ಮೈಲುಗಲ್ಲುಗಳಲ್ಲೊಂದು. ಇದರೊಂದಿಗೇ ಈ ಹೋರಾಟಕ್ಕೆ ಪ್ರಭುತ್ವದ ಪ್ರತಿಕ್ರಿಯೆ, ಪ್ರಜಾಸತ್ತೆಯ ಮುಖವಾಡದೊಳಗೆ ಅವಿತಿರುವ ಪ್ರಭುತ್ವದ ಕೇಡಿಗತನವನ್ನೂ ಅನಾವರಣಗೊಳಿಸಿದೆ.
ನಮಗೊಂದು ಸಂವಿಧಾನವಿದೆ. ಆ ಸಂವಿಧಾನ ನಮಗೆ ನಾವೇ ಕೊಟ್ಟುಕೊಂಡಿದ್ದೇವೆ. ಈ ಮೂಲಕ ನಾವು ಇತಿಹಾಸದುದ್ದಕ್ಕೂ ಮುಂದುವರಿದುಕೊಂಡು ಬಂದಿದ್ದ ನಿರಂಕುಶ ಪ್ರಭುತ್ವಗಳ ಮಾದರಿಗೆ ವಿದಾಯ ಹೇಳಿದ್ದೇವೆ ಎಂಬ ನಂಬಿಕೆ, ಭರವಸೆಯ ದಾಖಲೆ ಅದು. ಎಲ್ಲಾ ನಿರ್ಧಾರಗಳಲ್ಲೂ ನಾವು ಪಾಲ್ಗೊಳ್ಳುತ್ತೇವೆ ಮತ್ತು ಎಲ್ಲ ನಿರ್ಧಾರಗಳೂ ನಮ್ಮ ಸಾಮುದಾಯಿಕ ಒಳಿತಿಗಾಗಿ ಎಂಬ ನಂಬಿಕೆಯಿಂದಲೇ ಸಂವಿಧಾನ ಹುಟ್ಟಿರುವುದು.
ಈ ಒಳಿತಿನ ನಿರ್ಧಾರಗಳಿಗೆಂದೇ ನಾವೊಂದು ಪ್ರತಿನಿಧಿ ಸಭೆಯನ್ನು ಸೃಷ್ಟಿಸಿದ್ದೇವೆ. ನಾವೇ ಮತ ಹಾಕಿ ನಮ್ಮ ಪರವಾಗಿ ನಮ್ಮ ಬಾಳು ಹಸನುಗೊಳಿಸುವ ನಿರ್ಧಾರ, ನೀತಿ ಮತ್ತು ಕಾರ್ಯಕ್ರಮ ಅನುಷ್ಠಾನಗಳನ್ನು ಈ ಮಂದಿ ನಡೆಸಿಕೊಂಡು ಹೋಗುತ್ತಾರೆ ಎಂಬ ಪರಸ್ಪರ ನಂಬಿಕೆಯ ಒಪ್ಪಂದ ಅದು.
ಸುದೀರ್ಘ ಹೋರಾಟದ ಅವಧಿಯಲ್ಲಿ ರಾಜಕೀಯ ನೇತಾರರ ವರ್ತನೆಯೂ ಒಂದು ಪಾಠ.
ವಿರೋಧ ಪಕ್ಷದಲ್ಲಿದ್ದಾಗ ಸಂಪೂರ್ಣ ಬೆಂಬಲ ಪ್ರಕಟಿಸಿದ ಪಕ್ಷ, ನಾಯಕರು ಅಧಿಕಾರಕ್ಕೆ ಬಂದಾಗ ತಾವೇ ವಿರೋಧಿಸಿದ್ದ ಹಿಂದಿನ ಸರಕಾರದ ನಿರ್ಧಾರಗಳನ್ನು ಮುಂದುವರಿಸಿದ್ದು ಅಚ್ಚರಿ ಮೂಡಿಸಬಾರದು.
ಸರಕಾರ ಎಂಬುದು ಸಾತತ್ಯದ ಸಂಕೇತ ಎಂದು ಸಂವಿಧಾನ ಹೇಳಿದೆ. ಆದರೆ ಅದು ಸದಾಶಯದ ನಂಬಿಕೆಯಲ್ಲಿ ಹುಟ್ಟಿದ್ದು. ಜನವಿರೋಧಿ ನಿರ್ಣಯಗಳ ಸಾತತ್ಯ ಎಂಬುದು ಅರ್ಥವಾಗಲು ಇಂತಹ ನಡವಳಿಕೆ ಬೇಕಾಯಿತು. ಸಂವಿಧಾನದ ಆಸರೆಯಲ್ಲಿ ಜನಶಕ್ತಿ ದೃಢವಾಗುವುದನ್ನು ನಿಷ್ಫಲಗೊಳಿಸಲು ಏನು ಮಾಡಬಹುದೆಂದು ಪ್ರಭುತ್ವ ಸದಾ ಯೋಚಿಸುತ್ತಿರುತ್ತದೆ. ಯಾವ ಯಾವ ಬಗೆಯಲ್ಲಿ ಇದು ಪ್ರಕಟವಾಗುತ್ತದೋ ಅದನ್ನು ನಿಷ್ಫಲಗೊಳಿಸುವ ತಂತ್ರಗಾರಿಕೆಯನ್ನು ಮೊದಲು ಕಲಿಯುತ್ತದೆ. ಇದೇ ಮೇಧಾವಿತನವನ್ನು ಜನಪೋಷಕ ಚಿಂತನೆಗಳಿಗೆ ವ್ಯಯ ಮಾಡಿದ್ದರೆ ಈ ದೇಶ ಹೀಗಿರುತ್ತರಲಿಲ್ಲ!
ಮುಖ್ಯ ಸಮಸ್ಯೆ ಇರುವುದು, ಜಾಗತಿಕ ಆರ್ಥಿಕ ನೀತಿಯ ಪ್ರಭಾವಕ್ಕೊಳಗಾದ ನಮ್ಮ ಸರಕಾರ/ಪಕ್ಷಗಳು ಅದರ ಬೇಡಿಕೆಗಳನ್ನು ಈಡೇರಿಸಲು ಟೊಂಕಕಟ್ಟಿ ನಿಲ್ಲುವ ಚರ್ಯೆಯಲ್ಲಿ. ಈ ಬಹುತೇಕ ಡಿಮಾಂಡುಗಳಿಗೆ ಸಂವಿಧಾನದ ಆಶಯಗಳೇ ಬಲು ದೊಡ್ಡ ತಡೆಗೋಡೆ. ಜನ ಪ್ರತಿರೋಧ ಈ ನೆಲೆಯಿಂದ ಹುಟ್ಟಿದೆ. ಆದರೆ ಒಂದೊಂದೇ ಇಟ್ಟಿಗೆ ಸಡಿಲಿಸುತ್ತಾ ಇಷ್ಟಿಷ್ಟೇ ಹಿರಿದು ಕಾರ್ಪೊರೇಟ್ ಬಾಯಿಗೆ ಹಾಕುವ ಕಂತು ಕಂತು ತಂತ್ರಗಾರಿಕೆಯಲ್ಲಿ (ಕೇಸ್ ಬೈ ಕೇಸ್) ಎಲ್ಲಾ ಪ್ರತಿರೋಧಗಳೂ ಸ್ಥಳೀಯವಾಗಿಯೇ ಹುಟ್ಟಿ ಸಾಯುವ ಸ್ಥಿತಿ ಇದೆ. ಇದನ್ನು ನೀತಿಯ ವಿರುದ್ಧದ ಸೂಚಿಯಾಗಿ ಬೃಹತ್ ಆಂದೋಲನವನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಿಲ್ಲ. ಈ ಸಾಲಿಡಾರಿಟಿಯ ಅಳ್ಳಕತನ ಪ್ರಭುತ್ವದ ಖದೀಮತನಕ್ಕೆ ಧೈರ್ಯ ನೀಡಿದೆ.
ಜಾಗತೀಕರಣದ ಬಳಿಕ ನವಮಾಧ್ಯಮಗಳ ವಿಶ್ವವ್ಯಾಪಿತನದ ಕಾರಣದಿಂದ ಇಶ್ಯೂಗಳು ಹರಡುವುದೂ ಸುಲಭ. ಅವುಗಳ ಆಯುಸ್ಸೂ ಕಡಿಮೆಯಾಗಿರುವುದು ಆಕಸ್ಮಿಕವಲ್ಲ. ಜಾಗತೀಕರಣದ ಕಾರ್ಪೊರೇಟ್ ದೃಢೀಕರಣದ ಪಾಲುದಾರನಾಗಿ ಪ್ರಭುತ್ವ, ಬಹುತೇಕ ಮುಖ್ಯ ವಾಹಿನಿ ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ಒಡತನದ ಮಾಧ್ಯಮಗಳಿವೆ.
ಕುಮಾರವ್ಯಾಸನಲ್ಲಿ ವ್ಯಂಗ್ಯದ ಒಂದು ವಿವರ ಬರುತ್ತದೆ. ಮಹಾಭಾರತದ ಯುದ್ಧದ ಬಳಿಕ ಯುಧಿಷ್ಠಿರ ದುರ್ಯೋಧನನ ಅರಮನೆಯನ್ನೂ, ಭೀಮ, ದುಶ್ಯಾಸನನ ಅರಮನೆಯನ್ನೂ ಹೊಕ್ಕರು ಎಂಬ ವಿವರ. ಅರ್ಥಾತ್ ಅದೇ ಬಗೆಯ ಅಧಿಕಾರ ಗ್ರಹಣ ಮಾಡಿದರು ಅಂತ.
ಹಾಗೆಯೇ ಯಕ್ಷರು ದುರ್ಯೋಧನನ್ನು ಬಂಧಿಸಿ ಒಯ್ದಾಗ ಕಾಡಲ್ಲಿದ್ದ ಧರ್ಮರಾಯ ಅವನನ್ನು ಬಿಡಿಸಲು ಸಹೋದರರಲ್ಲಿ ಹೇಳುತ್ತಾನೆ. ‘‘ದುರ್ಯೋಧನ ನಮಗೆ ಅನ್ಯಾಯ ಮಾಡಿದವನು. ಸಾಯಲಿ’’ ಎಂದು ಭೀಮ ಹೇಳುತ್ತಾನೆ. ಆಗ ಧರ್ಮರಾಯ, ‘‘ನಮ್ಮೊಳಗೆ ಅವರು ನೂರು, ಅವರ ವಿರುದ್ಧ ನಾವು ಐವರು. ಮೂರನೆಯವನಿಗೆ ನಾವು ನೂರೈದು ಮಂದಿ’’ ಎನ್ನುತ್ತಾನೆ.
ನಮ್ಮ ವಿಧಾನ ಸಭೆಗೆ ಇದನ್ನು ಹೋಲಿಸುತ್ತಾ ಲಕ್ಷ್ಮೀಶ ತೋಳ್ಪಾಡಿಯವರು ಈ ಕತೆಯನ್ನು ಉಲ್ಟಾ ಮಾಡಿ ‘‘ವಿಧಾನ ಸಭೆಯೊಳಗೆ ಅವರು-ಇವರು ಹಣಾಹಣಿಯ ಎದುರಾಳಿಗಳು. ಜನತೆಯ ಸುಲಿಗೆಯ ಪ್ರಶ್ನೆ ಬಂದಾಗ ಅವರು 224 ಮಂದಿಯೂ ಒಂದಾಗುತ್ತಾರೆ’’ ಎಂದು ಹೇಳಿದ್ದರು.
ಚನ್ನರಾಯಪಟ್ಟಣದ ಹೋರಾಟದಲ್ಲಿ ಪ್ರಜಾಸತ್ತೆಯ ವಿರೋಧ ಪಕ್ಷಗಳ ಪ್ರತಿನಿಧಿಗಳೂ ಜೊತೆಗೆ ನಿಲ್ಲಲಿಲ್ಲ. ಯಾಕೆಂದರೆ ಅವರೂ ಈ ಕಾರ್ಪೊರೇಟ್ ದೃಢೀಕರಣದ ಪಾಲುದಾರರು.
ಈ ಚಳವಳಿಯನ್ನು ಇಷ್ಟು ದಿನ ಉಳಿಸಿ ಅದು ವ್ಯಾಪಕವಾಗುತ್ತಿದ್ದಂತೆ ಸರಕಾರ ಈ ಸ್ವಾಧೀನವನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದಾಗಲೂ ತನ್ನ ಒಳ ಹುನ್ನಾರವನ್ನು ಬಿಟ್ಟುಕೊಡಲಿಲ್ಲ ಎಂಬುದು ಇತ್ತೀಚಿನ ಸರಕಾರದ ನಡಾವಳಿಗಳಲ್ಲಿ ಗೊತ್ತಾಗುತ್ತದೆ. ಏನಿದರ ಅರ್ಥ?
ಕಾರ್ಪೊರೇಟೀಕರಣದ ಎಂಟ್ರಿ ಪಾಯಿಂಟೇ ವಿದೇಶೀ ಹೂಡಿಕೆ, ಅದಕ್ಕೆ ಬೇಕಾದ ಭೂಸ್ವಾಧೀನ, ಉಚಿತ ನೀರು, ತೆರಿಗೆ ವಿನಾಯಿತಿ.. ಹೀಗೆ ಈ ಕೆಂಪು ಹಾಸು ಮುಂದುವರಿಯುತ್ತದೆ. ಭಾರತದ ಬಹುತೇಕ ‘ವಿದೇಶೀ ಹೂಡಿಕೆಗಳೂ’ ನಮ್ಮದೇ ನೆಲದ ಖದೀಮರು ವಿದೇಶಗಳಲ್ಲಿ ಸ್ಥಾಪಿಸಿದ ಕಂಪೆನಿಗಳೇ! ಹೀಗೆ ಹಿಂಬಾಗಿಲಿನಿಂದ ಹೋಗಿ ಹೆಬ್ಬಾಗಿಲಲ್ಲಿ ಬರುವ ಹೂಡಿಕೆಗಳೇ ಜಾಸ್ತಿ. ಮೊನ್ನೆ ಮೊನ್ನೆ ಕರ್ನಾಟಕದ ಸಚಿವರು ದೆವೋಸ್ ಶೃಂಗ ಸಭೆಗೆ ಹೋಗಿ ಟಾಟಾದವರ ಜೊತೆ ಒಪ್ಪಂದ ಮಾಡಿಕೊಂಡರೆ ಮಹಾರಾಷ್ಟ್ರದ ಮುಖ್ಯಮಂತ್ರಿ ತನ್ನ ಸಚಿವ ಸಹೋದ್ಯೋಗಿಯ ಕಂಪೆನಿ ಜೊತೆ ದೆವೋಸ್‌ನಲ್ಲಿ ಒಪ್ಪಂದ ಮಾಡಿಕೊಂಡಿರುವ ಪ್ರಹಸನ ನಡೆದಿದೆ.
ಇನ್ನೊಂದೆಡೆ ರಾಜೀವ ಚಂದ್ರಶೇಖರ್ ಅವರಿಂದ ಹಿಡಿದು ಇನ್ಫೋಸಿಸ್ ವರೆಗೆ ಬಿಟ್ಟಿ ಸಿಕ್ಕಿದ ಈ ಕೈಗಾರಿಕಾ ವಲಯದ ಭೂಮಿಯನ್ನು ಯಾವ ಹೂಡಿಕೆಯೂ ಮಾಡದೆ ಮಾರಿದ ಪ್ರಕರಣಗಳೂ ಬಯಲಾಗಿವೆ. ನಿರ್ದಿಷ್ಟ ಉದ್ದೇಶಕ್ಕೆಂದು ಸ್ವಾಧೀನವಾದ ಜಮೀನಿನಲ್ಲಿ ಸಂಬಂಧವೇ ಇಲ್ಲದ ವಿಷಯದ ಕಂಪೆನಿಗಳಿಗೆ ಜಮೀನು ಮಂಜೂರು ಮಾಡಿರುವ ಪ್ರಕರಣಗಳೂ ನಮಗೆ ಗೊತ್ತು. ಅರ್ಥಾತ್ ಈ ಭೂಸ್ವಾಧೀನ ಎನ್ನುವುದು ಸ್ಥಳೀಯ ರಾಜಕೀಯ ದಿಂಡಾಳುಗಳು ಹಂಚಿ ಹೊಡೆಯಲು ಇರುವ ಹಾದಿಯಾಗಿದೆ.
ಆದ್ದರಿಂದಲೇ ಚನ್ನರಾಯಪಟ್ಟಣದ ರೈತ ಹೋರಾಟ ಈ ಒಂದು ಹಗರಣವನ್ನು ಅನಾವರಣಗೊಳಿಸಿದೆ. ರಾಜ್ಯದ ಒಟ್ಟಾರೆ ಭೂಸ್ವಾಧೀನದ ಬಗ್ಗೆ ಒಂದು ಲೆಕ್ಕ ಪರಿಶೋಧನೆ ನಡೆಸಿದರೆ ಸತತವಾಗಿ ಆಡಳಿತ ನಡೆಸಿದ ಎಲ್ಲಾ ಸರಕಾರಗಳು ಈ ಏIಂಆಃಯ ಮುಖಾಂತರ ನಕಲಿ ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಜಮೀನು ಕೊಳ್ಳೆ ಹೊಡೆದದ್ದು ಬಯಲಾದೀತು.
ಮೊನ್ನೆ ಮೊನ್ನೆ ಸರಕಾರ ನಡೆಸಿರುವ ಹುನ್ನಾರ ಗಮನಿಸಿ! ಸರಕಾರವೊಂದು ತನ್ನ ಮುಷ್ಟಿಯೊಳಗಿರುವುದನ್ನು ಸುತಾರಾಂ ಬಿಟ್ಟುಕೊಡದ ಮನೋ ಧರ್ಮವನ್ನು ಅನಾವರಣಗೊಳಿಸಿದೆ. ಇಡೀ ಸರಕಾರಿ ಘೋಷಣೆ ಅಪ್ಪಟ ಬ್ಲ್ಯಾಕ್‌ಮೇಲ್ ಮಟ್ಟಕ್ಕಿಳಿದಿದೆ. ವಿಕೇಂದ್ರೀಕೃತ ಪ್ರದೇಶಾಭಿವೃದ್ಧಿ ಎಂಬುದು ಒಂದು ಘೋಷಣೆಗಷ್ಟೇ ಸೀಮಿತವಾದ ನೀತಿ. ಪಕ್ಕದ ತಮಿಳುನಾಡಲ್ಲಿ ಏನಿಲ್ಲವೆಂದರೂ 10-15 ಕೈಗಾರಿಕಾ ಹಬ್‌ಗಳಿವೆ. ಇವೆಲ್ಲವೂ ಅಪಾರ ಸಂಖ್ಯೆಯ ಕಾರ್ಮಿಕರನ್ನು ಪೋಷಿಸಿದೆ. ಅಷ್ಟೇಕೆ ತಮಿಳುನಾಡಿನಲ್ಲಿರುವ ಸಣ್ಣ ಕೈಗಾರಿಕೆಗಳ ಒಟ್ಟು ಸಂಖ್ಯೆ ಉತ್ತರದ ಐದಾರು ರಾಜ್ಯಗಳ ಒಟ್ಟು ಘಟಕಗಳಿಗಿಂತ ಜಾಸ್ತಿ. ಅಲ್ಲಿನ ವಿಕೇಂದ್ರೀಕರಣದ ಮಾದರಿಯನ್ನು ಇಲ್ಲಿ ಮಾಡಲು ನಮ್ಮ ಸರಕಾರಗಳು ಏದುಸಿರು ಬಿಡುತ್ತಿವೆ. ಬೆಂಗಳೂರು ಸುತ್ತಮುತ್ತವೇ ಕೈಗಾರಿಕೆಗಳಿಗೆ ಬೇಡಿಕೆ, ಹೂಡಿಕೆಗೆ ಬೇಡಿಕೆ ಎಂಬ ವಿದ್ಯಮಾನ ಅಪಾಯಕಾರಿ. ರಾಜ್ಯದ ಮೂಲೆ ಮೂಲೆಯ ಜಿಲ್ಲೆಗಳಲ್ಲೂ ಹೂಡಿಕೆ ಮತ್ತು ಉದ್ಯಮಗಳು ಸ್ಥಾಪಿತವಾಗಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಯಾವ ಸರಕಾರಗಳೂ ತೋರಿಸಿಲ್ಲ. ಚನ್ನರಾಯಪಟ್ಟಣದ ರೈತರು ಕರ್ನಾಟಕದ ರಾಜಕಾರಣಿಗಳ ಬೆಂಗಳೂರಿನ ವ್ಯಸನವನ್ನೂ, ಲೋಲುಪತೆಯನ್ನೂ ಬೆತ್ತಲೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿರೋಧ ಬಂದಾಗ ಪ್ರಭುತ್ವ ಛೂ ಬಿಡಬಹುದಾದ ಅಪಮಾರ್ಗಗಳಿಗೂ ಸಾಕ್ಷಿಗಳಾಗಿದ್ದಾರೆ. ನಿರಂಕುಶ ಪ್ರಭುತ್ವಗಳಂತೆಯೇ ಪ್ರಜಾಸತ್ತೆಯಲ್ಲೂ ಸಾಂವಿಧಾನಿಕ ದಿಕ್ಸೂಚಿಗೆ ಮರೆ ಮೋಸ ಮಾಡಿ ಅಪವಿತ್ರ ಮೈತ್ರಿಗಳನ್ನು ಕುದುರಿಸಿ ಸಂಪನ್ಮೂಲಗಳ ಲೂಟಿಗೆ ಕೈ ಜೋಡಿಸುವ ಕೇಡಿಗತನ ನಮ್ಮಲ್ಲೂ ಬೇರೂರಿದೆ ಎಂಬುದನ್ನು ಈ ಹೋರಾಟ ಮತ್ತೆ ತೋರಿಸಿಕೊಟ್ಟಿದೆ. ಆದರೆ ಇದರ ವಿರುದ್ಧ ಸಾಂವಿಧಾನಿಕ ರೀತಿಯ ಹೋರಾಟಗಳನ್ನು ಸಂಘಟಿಸಲು ಹೊರಟಾಗ ಒದಗುವ ವಿಘ್ನಗಳ ಬಗ್ಗೆಯೂ ನಾವು ಯೋಚಿಸಬೇಕಾಗಿದೆ.
ಮೊದಲನೆಯದಾಗಿ ಈಗಿರುವ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಕಾರ್ಪೊರೇಟೀಕರಣದ ಸಮ್ಮೋಹನಕ್ಕೆ ಒಳಗಾಗಿ ಅವುಗಳ ಏಜೆಂಟರಂತೆ ವರ್ತಿಸುತ್ತಿವೆ. ಸಂಶಯವೇ ಇಲ್ಲ. ಭಾಜಪದ ವಿಚಾರದಲ್ಲಿ ಈ ಪಕ್ಷದ ಸಹಸಂಘಟನೆಗಳೂ ಈ ಪಕ್ಷದ ಹಿತಾಸಕ್ತಿಯನ್ನು ಸಮರ್ಥಿಸಲು, ರಕ್ಷಿಸಲು ಟೊಂಕ ಕಟ್ಟಿವೆ. ಇವುಗಳಲ್ಲಿ ಕಾರ್ಪೊರೇಟ್ ಒಡೆತನದ ಮಾಧ್ಯಮಗಳೂ ಸೇರಿವೆ!
ಸಾಮಾಜಿಕ ಮಾಧ್ಯಮಗಳ ಸಮ್ಮೋಹನದ ಕಾರಣಕ್ಕೆ ಕ್ಷಣಿಕ ಮಾಹಿತಿ ಸ್ಫೋಟ ಆದರೂ, ಅದನ್ನು ಸತತವಾಗಿ ಉಳಿಸಿಕೊಂಡು ವ್ಯಾಪಕ ಆಂದೋಲನವನ್ನಾಗಿ ರೂಪಿಸಲು ಸಾಧ್ಯವಾಗುತ್ತಿಲ್ಲ. ಈ ಚದುರುವಿಕೆ ನಮ್ಮ ಕಾಲದ ಲಕ್ಷಣವಾಗಿದೆ.
ಇದರೊಂದಿಗೇ ಪ್ರಾಣಿ ಪ್ರಪಂಚದ ವರ್ತನಾ ಚರ್ಯೆಯೊಂದು ನಮ್ಮನ್ನು ಆವರಿಸಿಕೊಂಡಂತಿದೆ. ಜಿಂಕೆ ಮಂದೆಯ ಮೇಲೆ ಒಂದು ಹುಲಿ ದಾಳಿ ನಡೆಸಿ ಒಂದು ಜಿಂಕೆಯನ್ನು ಹಿಡಿದರೆ ಇಡೀ ಹಿಂಡು ಕ್ಷಣ ವಿಚಲಿತವಾಗಿ ಚದುರಿ ಮತ್ತೆ ನಿರುಮ್ಮಳವಾಗಿ ಮೇಯುತ್ತವೆ. ಸಂಘಟಿತವಾಗಿ ಎದುರಿಸುವ ವರ್ತನೆ ಅವುಗಳ ಕೋಶದಲ್ಲೇ ಇಲ್ಲ. ಮಾನವ ಸಮುದಾಯ ಹೀಗಿಲ್ಲ. ಅದು ಚಿತ್ರ ವಿಚಿತ್ರ ಮುದ್ರೆಗಳಲ್ಲಿ ಸಂಘಟಿತವಾಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಕಿತ್ತಾಡುವುದು, ಹೋರಾಡುವುದು ಮಾಡುತ್ತಲೇ ಇರುತ್ತದೆ. ಆದರೆ ಇಂದ್ರಿಯಗಳಿಗೆ ಜೋಮು ಹಿಡಿದರೆ, ಸ್ಪರ್ಶಜ್ಞಾನ ಇಲ್ಲವಾದರೆ? ಈ ಸಂಘಟಿತ ಪ್ರತಿಕ್ರಿಯೆ ಇರುವುದೇ ಇಲ್ಲ. ಅಲ್ಲೆನೋ ಆದರೆ ನಮಗೇನು ಎಂಬ ಮನಃಸ್ಥಿತಿ ಆವರಿಸುತ್ತದೋ ಏನೋ.
ಇದರಲ್ಲೂ ಒಂದು ವೈರುಧ್ಯ ನಮ್ಮಲ್ಲಿ ನೋಡುತ್ತಿದ್ದೇವೆ. ಧರ್ಮ, ಸಂಸ್ಕೃತಿಯಂತಹ ಭಾವನಾತ್ಮಕ ವಿಚಾರಗಳಲ್ಲಿ ಸಂಘಟಿತರಾಗುವ ನಮ್ಮ ದೇಶವಾಸಿಗಳು ತಮ್ಮ ಜೀವನೋಪಾಯದ ಗುರುತಿನ ಮೂಲಕ ಸಂಘಟಿತರಾಗುತ್ತಲೂ ಇಲ್ಲ. ಅದರ ಬಲಿಪಶುಗಳ ಬಗ್ಗೆ ಸಾಲಿಡಾರಿಟಿ ತೋರುತ್ತಲೂ ಇಲ್ಲ.
ಈ ಭಾವನಾತ್ಮಕ ವಿಘಟನೆ ಬಲು ಆತಂಕದ ವಿಷಯ. ಈ ವ್ಯವಸ್ಥಿತ ವಿಸ್ಮತಿ ಮುಂದಿನ ದಿನಗಳಲ್ಲಿ ಹೆಚ್ಚಾಗಲೂ ಬಹುದು. ದಶಕಗಳ ಹಿಂದೆ ಉದ್ಯೋಗ, ರೈತಾಪಿ ಬದುಕು, ಕಾರ್ಮಿಕ ಹಿತಾಸಕ್ತಿಯ ವಿಷಯಗಳು ಸೂಜಿಕಲ್ಲಂತೆ ಜನರನ್ನು ಸೆಳೆದು ಸಂಘಟಿತರಾಗುವಂತೆ ಮಾಡಿದ ಪುರಾವೆಗಳಿವೆ. ಆದರೆ ಈಗ ಅವು ಅಂಥಾ ಪ್ರಭಾವ ಬೀರದಿರುವುದಕ್ಕೆ ಇರುವ ಕಾರಣಗಳನ್ನು ನೋಡಬೇಕು.
ನಮ್ಮ ಮಧ್ಯಮ ವರ್ಗ ಬಿಡಿ, ಹೊಸ ತಲೆಮಾರಿನ ಯುವಕರೂ ನಗರೀಕರಣ ಸೃಷ್ಟಿ ಮಾಡಿರುವ ಅಭದ್ರ; ಆದರೆ ಏಣಿ ಏರುವ ಭ್ರಮೆಯ ಉದ್ಯೋಗಗಳಿಗೆ ಜೋತು ಬಿದ್ದು ಸಮಷ್ಟಿಯಾಗಿ ಸೇರಲು ಬಯಸುತ್ತಲೇ ಇಲ್ಲ, ಸ್ವಿಗ್ಗಿ, ರಾಪಿಡೋ ಸಹಿತ ಹಲವು ಹೊಸ ಜೀವನೋಪಾಯಗಳು ವ್ಯಕ್ತಿಗತ ಓಟದ ತುರುಸಿನ ಮೇಲೆ ನಿಂತಿದೆ. ಇವರನ್ನು ನಿಲ್ಲಿಸಿ ಏನನ್ನಾದರೂ ಹೇಳುವುದೇ ಸಾಧ್ಯವಾಗುತ್ತಿಲ್ಲ.
ಒಂದು ಬಲು ದೊಡ್ಡ ಪಲ್ಲಟಕ್ಕೆ ನಮ್ಮ ನಾಗರಿಕತೆ ಒಡ್ಡಿಕೊಂಡಿದೆ ಅನ್ನಿಸುತ್ತದೆ. ಚನ್ನರಾಯಪಟ್ಟಣದ ಹೋರಾಟ ಈ ಒಂದು ನಾಜೂಕು ಬಿರುಕನ್ನು ನಮ್ಮೆದುರು ಇಟ್ಟಿದೆ. ಜೀವನೋಪಾಯಗಳ obsessioಟಿನಲ್ಲಿ ರಾಜಕೀಯದ ಆಸಕ್ತಿಯಾಗಲೀ, ಸಮುದಾಯದ ಬದುಕು ಬವಣೆಯ ಬಗ್ಗೆ ಚರ್ಚೆಯಾಗಲೀ ಸಾಧ್ಯವೇ ಇಲ್ಲದ ಸ್ಥಿತಿ ಇದು.
ಹೋರಾಟ ಕಟ್ಟುವ ಬಗ್ಗೆ ಯೋಚಿಸುವ ಮೊದಲು, ವಿಚಿತ್ರ ಜೀವನೋಪಾಯಗಳ ಸುಳಿಯಲ್ಲಿ ಸಿಕ್ಕಿ, ಅಲ್ಲೂ ಅಷ್ಟಿಷ್ಟು ಮೈ ಮನಸ್ಸು ಸಡಿಲಿಸುವ ಮಾಧ್ಯಮಗಳ ಹುಸಿ ಸುಖದಲ್ಲಿರುವ ವಿರೋಧಾಭಾಸದ ಬಗ್ಗೆ ಆಳ ಅಧ್ಯಯನ ಬೇಕಿದೆ.
ಪ್ರಭುತ್ವವೇ ಈ ಹುಸಿ ಸಂತೃಪ್ತಿಯನ್ನು ಪ್ರೋತ್ಸಾಹಿಸುತ್ತಿರುವ ಬಗ್ಗೆ ಹೇಳಬೇಕಿದೆ. ಎಚ್ಚೆತ್ತ ಜನಸಮುದಾಯ ಪ್ರಭುತ್ವಕ್ಕೆ ಸದಾ ಕಂಟಕ ಪ್ರಾಯ. ಈ ಅಫೀಮು ತಿಂದಂತಿರುವ ಜನಸ್ತೋಮ ಇದ್ದಷ್ಟೂ ಪ್ರಭುತ್ವ ಸುರಕ್ಷವಾಗಿರುತ್ತದೆ.
‘‘ರೀಲ್ಸ್ ಮಾಡಿ, ಗೇಮ್ಸ್ ಸೃಷ್ಟಿ ಮಾಡಿ’’ ಎಂದು ಮೋದಿ ಸುಮ್ಮನೇ ಹೇಳಲಿಲ್ಲ







