ಪರಿಶಿಷ್ಟರ ಹಣ ಬಳಕೆ ಪರಿಶಿಷ್ಟರಿಗೇ ಹೊರತು, ಯಾರ ಮನೆಗೂ ಅಲ್ಲ!

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ SCSP/TSP ಅನುದಾನದ ಬಳಕೆಗೆ ಸಂಬಂಧಿಸಿದಂತೆ ಚರ್ಚೆಗಳು ಆರಂಭವಾಗಿವೆ. ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಗರು SCSP/TSP ಅನುದಾನವು ದುರ್ಬಳಕೆ ಆಗುತ್ತಿದ್ದು ಈ ಬಗ್ಗೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಹೋರಾಟ ಮತ್ತು ಚರ್ಚೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಭಾಗವಾಗಿದ್ದರೂ ಕೂಡಾ ನಮ್ಮ ಹೋರಾಟಗಳು ಎಷ್ಟು ಜನಪರವಾಗಿವೆ ಮತ್ತು ನಮ್ಮ ಮಾತಿನ ಉದ್ದೇಶ ಯಾವ ದಿಕ್ಕಿನೆಡೆ ಇದೆ ಎಂಬುದು ಕೂಡಾ ಜನ ಸಾಮಾನ್ಯರ ಬದುಕಿನ ಹಿತದ ದೃಷ್ಟಿಯಿಂದ ಅತ್ಯಂತ ಮಹತ್ವದ ಸಂಗತಿ ಎನಿಸುತ್ತದೆ.
ನಾನು ಗಮನಿಸಿದಂತೆ ಪರಿಶಿಷ್ಟರ ಅನುದಾನದ ಬಳಕೆಯ ವಿಷಯದಲ್ಲಿ ಅಪೂರ್ಣ ಮಾಹಿತಿ ಮತ್ತು ರಾಜಕೀಯ ಪ್ರೇರಿತವಾದಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಚರ್ಚೆಯನ್ನು ನಡೆಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕಾಗಲೀ, ಇಲ್ಲವೇ ಅದರ ಭಾಗವಾಗಿರುವ ಜನ ಸಾಮಾನ್ಯರಿಗಾಗಲೀ ಯಾವುದೇ ಪ್ರಯೋಜನ ಇಲ್ಲ. SCSP/TSP ಅನುದಾನವನ್ನು ಕಾಯ್ದೆಯ ನಿಯಮಗಳನ್ನು ಅಕ್ಷರಶಃ ಗಾಳಿಗೆ ತೂರಿ, ಸುಮಾರು ರೂ. 10 ಸಾವಿರ ಕೋಟಿಗೂ ಹೆಚ್ಚಿನ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ದಲಿತ ವಿರೋಧಿ ಬಿಜೆಪಿಗರಿಗೆ ಉತ್ತರ ನೀಡುವ ಅಗತ್ಯ ಇಲ್ಲವಾದರೂ ಕೂಡಾ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ನಡೆಸುವ ನಮ್ಮ ದಲಿತ ಸಂಘಟನೆಗಳ ಬಂಧುಗಳು ಮುಂದಿಟ್ಟಿರುವ ಚರ್ಚೆಗೆ ಪ್ರತಿಕ್ರಿಯಿಸುವ ಜವಾಬ್ದಾರಿ ನನ್ನದಾಗಿದೆ.
ಭಾರತ ದೇಶವು ಸ್ವತಂತ್ರಗೊಂಡ ನಂತರದಲ್ಲಿ ಅಸ್ತಿತ್ವಕ್ಕೆ ಬಂದಂತಹ ಸರಕಾರಗಳು ಪಂಚ ವಾರ್ಷಿಕ ಯೋಜನೆಗಳ ಮೂಲಕ ನಮ್ಮ ಜನರ ಆಹಾರ, ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಬದುಕಿನ ಏಳಿಗೆಗಾಗಿ ಪ್ರಯತ್ನಿಸಿತು. ಪಂಚವಾರ್ಷಿಕ ಯೋಜನೆಗಳಲ್ಲಿ ಜಾರಿಗೊಳಿಸಿದ್ದ ಸಾಮಾನ್ಯ ಯೋಜನೆಗಳು ಎಲ್ಲ ಜನರಿಗೂ ಸಮಾನವಾದ ಅನುಕೂಲವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದರೂ ಪರಿಶಿಷ್ಟ ಸಮುದಾಯಗಳ ಏಳಿಗೆಯ ಪ್ರಮಾಣವನ್ನು ನಿರ್ದಿಷ್ಟವಾಗಿ ಗಮನಿಸಿದಾಗ ಅಂದಿನ ಸಾಮಾಜಿಕ, ರಾಜಕೀಯ ಕಾರಣಗಳಿಗಾಗಿ ಈ ಯೋಜನೆಗಳು ಅವರಿಗೆ ಪರಿಣಾಮಕಾರಿಯಾಗಿ ತಲುಪಲಿಲ್ಲ. ಯೋಜನೆಗಳೇ ತಲುಪದಿದ್ದ ಮೇಲೆ ಅವರ ಏಳಿಗೆಯ ಪ್ರಮಾಣವೂ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
ಕ್ರಮೇಣ, ಈ ಸಂಗತಿಯನ್ನು ಗಮನಿಸಿದ ನೀತಿ ಆಯೋಗವು ಇದರ ಗಂಭೀರತೆಯನ್ನು ಅರಿತುಕೊಂಡು 5ನೇ ಪಂಚವಾರ್ಷಿಕ ಯೋಜನೆಯ ಹೊತ್ತಿಗೆ ಪರಿಶಿಷ್ಟರ ಉಪ ಯೋಜನೆಯನ್ನು ಜಾರಿಗೊಳಿಸುವ ಕೆಲಸ ಮಾಡಿತು. ಹೀಗೆ ಜಾರಿ ಮಾಡಿದ್ದರ ಉದ್ದೇಶವು ಸರಕಾರದ ಸಾಮಾನ್ಯ ಯೋಜನೆಯ ಅನುಕೂಲಗಳೂ ಪರಿಶಿಷ್ಟ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎನ್ನುವುದಾಗಿತ್ತು.
ಅಂದಿನ ಯೋಜನಾ ಆಯೋಗದ ಮಟ್ಟದಲ್ಲಿ ಈ ರೀತಿಯ ಆಲೋಚನೆ ಬಂದಿದ್ದರೂ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದ ರಾಜ್ಯಗಳು ತಮ್ಮ ರಾಜ್ಯದೊಳಗೆ ವಾಸ ಮಾಡುವ ಪರಿಶಿಷ್ಟ ಸಮುದಾಯಗಳ ಜನರಿಗೆ ಯೋಜನೆಗಳನ್ನು ನಿರ್ದಿಷ್ಟವಾಗಿ ತಲುಪಿಸುವಂತಹ ನಕ್ಷೆಯನ್ನು ಹಾಕಿಕೊಟ್ಟಿರಲಿಲ್ಲ. ಹೀಗಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಸಮುದಾಯಗಳಿಗೆ ನಿರ್ದಿಷ್ಟವಾಗಿ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು 2013-18ರ ಅವಧಿಯಲ್ಲಿ SCSP/TSP ಕಾಯ್ದೆಯನ್ನು ಜಾರಿಗೊಳಿಸಿ ಸರಕಾರದ ಯೋಜನೆಗಳಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಜನಸಂಖ್ಯಾವಾರು ಸೌಲಭ್ಯವನ್ನು ನೀಡಬೇಕೆಂಬ ಮಹತ್ವದ ನಿರ್ಧಾರವನ್ನು ಕೈಗೊಂಡಿತು.
ಹೀಗಾಗಿ SCSP/TSP ಕಾಯ್ದೆಯ ಈ ಮೂಲ ಉದ್ದೇಶಗಳು ಕೂಡಾ ನಮ್ಮ ಚರ್ಚೆಯ ಭಾಗವಾಗುವುದು ಉತ್ತಮ ಎನಿಸುತ್ತದೆ. ಕಾರಣ SCSP/TSP ಕಾಯ್ದೆಯ ಪರಿಮಿತಿಯಲ್ಲೇ ಸರಕಾರದ ಯೋಜನೆಯ ಅನುಕೂಲಗಳನ್ನು ಪರಿಶಿಷ್ಟ ಸಮುದಾಯದ ಜನರಿಗೆ ಕಲ್ಪಿಸಲಾಗುತ್ತಿದ್ದು ಎಲ್ಲಿಯೂ ಜನರ ಹಣ ದುರುಪಯೋಗ ಆಗಿಲ್ಲ ಎಂಬ ಸಂಗತಿಯನ್ನು ಎಲ್ಲರೂ ಅರಿಯಬೇಕು.
ಸರಕಾರದ ಉತ್ತಮ ಆಡಳಿತಾತ್ಮಕ ಆಲೋಚನೆಗಳ ಫಲವಾಗಿ ಪರಿಶಿಷ್ಟರಿಗೆ ಸಾಮಾನ್ಯ ಯೋಜನೆಗಳಲ್ಲಿ ಅನುಕೂಲ ನೀಡುವುದರ ಜೊತೆಗೆ SCSP/TSP ಕಾಯ್ದೆಯಡಿ ಅವರಿಗೆಂದೇ ನಿರ್ದಿಷ್ಟವಾಗಿ ರೂಪಿಸಲಾಗಿದ್ದ ಗಂಗಾ ಕಲ್ಯಾಣ, ನೇರ ಸಾಲ, ಉದ್ಯಮಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಐರಾವತ, ಪ್ರಬುದ್ಧ, ಔದ್ಯೋಗಿಕ ತರಬೇತಿ ಮತ್ತು ಇನ್ನಿತರ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಕಲ್ಪಿಸಲಾಯಿತು.
ಇದಿಷ್ಟೇ ಅಲ್ಲದೆ ಎಲ್ಲಾ ಅರ್ಹ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ, ಎಲ್ಲಾ ಅರ್ಹ ಪರಿಶಿಷ್ಟ ಸಮುದಾಯದ ವಸತಿ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ, ಹೋಬಳಿಗೆ ಒಂದು ವಸತಿ ಶಾಲೆ, ಸ್ವಾವಲಂಬಿ ಸಾರಥಿ ಯೋಜನೆ, ಪ್ರಬುದ್ಧ ಯೋಜನೆಯಡಿ ಆದಾಯ ಮಿತಿಯಲ್ಲಿ ಹೆಚ್ಚಳ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ ಹೆಚ್ಚಳ ಮಾಡುವಂತಹ ಮಹತ್ವದ ಕೆಲಸವನ್ನು SಅSP/ಖಿSP ಕಾಯ್ದೆಯ ಮೂಲಕ ಸರಕಾರ ಮಾಡಿದೆ. ಹೀಗಾಗಿ ಸರಕಾರ ಪರಿಶಿಷ್ಟರಿಗೆ ಮೋಸ ಮಾಡಿದೆ ಎಂಬ ಮಾತು ಸರಿಯಾದದ್ದಲ್ಲ.
ಬಿಜೆಪಿಗರಿಗೆ ಒಂದು ಪ್ರತಿಕ್ರಿಯೆ
SCSP/TSP ಯೋಜನೆಯ ಹಣ ದುರ್ಬಳಕೆ ಆಗುತ್ತಿದೆ ಎಂದು ಹೋರಾಟ ಆರಂಭಿಸಿರುವ ಬಿಜೆಪಿಗರು ಈ ಕೆಳಕಾಣಿಸಿದ ಅಂಕಿ ಅಂಶಗಳನ್ನು ಗಮನಹರಿಸಿ ನೋಡಬೇಕು
2019ರಿಂದ 2023ರ ತನಕ ಅಂದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ SCSP/TSP ಯೋಜನೆಯಡಿ ಹಂಚಿಕೆಯಾಗಿರುವ ಅನುದಾನದ ಪ್ರಮಾಣವು ಸರಾಸರಿ ರೂ. 27,612.03 ಕೋಟಿಗಳಾದರೆ 2023ರಿಂದ 2025ರ ಅವಧಿಯ ನಡುವೆ ಹಂಚಿಕೆಯಾದ ಸರಾಸರಿ ಅನುದಾನದ ಪ್ರಮಾಣವು ರೂ. 37,648.72 ಕೋಟಿಗಳಾಗಿದೆ.
ಇನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರಗಳ ಸಂದರ್ಭದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಪರಿಶಿಷ್ಟ ಸಮುದಾಯಗಳಿಗೆ 7,235 ಎಕರೆಗಳಷ್ಟು ಭೂಮಿಯನ್ನು ‘ಭೂ ಒಡೆತನ ಯೋಜನೆಯಡಿ’ನೀಡಲಾಗಿದ್ದು, ಭೂಮಿಯ ಲಭ್ಯತೆಯನ್ನು ನೋಡಿಕೊಂಡು ಹೆಚ್ಚು ಮಂದಿ ಪರಿಶಿಷ್ಟರಿಗೆ ಭೂ ಒಡೆತನ ಕಲ್ಪಿಸುವ ಇರಾದೆ ಸರಕಾರಕ್ಕೆ ಇದೆ.
2013ರಿಂದ 2018ರ ವರೆಗೆ ಮತ್ತು 2023ರಿಂದ 2025ರ ಅವಧಿಯ ನಡುವೆ ಪರಿಶಿಷ್ಟ ಸಮುದಾಯಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸುಮಾರು 51,401 ಬೋರ್ ವೆಲ್‌ಗಳ ಸೌಲಭ್ಯವನ್ನು ನೀಡಲಾಗಿದ್ದು, ಬಿಜೆಪಿ ಅವಧಿಯಲ್ಲಿ ಇದರ ಸಂಖ್ಯೆ ಕೇವಲ 14,416 ಮಾತ್ರ ಎಂಬುದನ್ನು ನಾವು ಗಮನಿಸಬೇಕು.
ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಿಜೆಪಿಗರಿಗೆ ಪರಿಶಿಷ್ಟ ಸಮುದಾಯಗಳ ಮೇಲೆ ಅಸಹನೆ ಇದ್ದೇ ಇದೆ. ಬಾಬಾ ಸಾಹೇಬರ ವಿಷಯದಲ್ಲಿ ಅಮಿತ್ ಶಾ ಅವರು ಹೇಳಿದ ಮಾತುಗಳೇ ಇದಕ್ಕೆ ಸ್ಪಷ್ಪ ಉದಾಹರಣೆ ಆಗಿದೆ.
ಇದರ ಜೊತೆಗೆ ಕೇಂದ್ರ ಸರಕಾರಕ್ಕೆ ವಾರ್ಷಿಕವಾಗಿ ರೂ. 4.5 ಲಕ್ಷ ಕೋಟಿಯಷ್ಟು ತೆರಿಗೆ ಪಾವತಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಮತ್ತು ಇಲ್ಲಿನ ಪರಿಶಿಷ್ಟ ಸಮುದಾಯಗಳ ಏಳಿಗೆಗಾಗಿ ಬಿಜೆಪಿಗರು ಯಾವ ಕೊಡುಗೆಯನ್ನೂ ನೀಡಿಲ್ಲ. ಬದಲಿಗೆ ಪರಿಶಿಷ್ಟ ಜಾತಿ ಕ್ರಿಯಾ ಯೋಜನೆಯಡಿ ರಾಜ್ಯಕ್ಕೆ ನೀಡುತ್ತಿದ್ದ ಅತಿ ಕಡಿಮೆ ಅನುದಾನದಲ್ಲಿ ರೂ. 210 ಕೋಟಿಗಳನ್ನು ಇನ್ನೂ ಬಾಕಿ ಉಳಿಸಿಕೊಂಡಿದೆ.
ಇದು ನಮ್ಮ ರಾಜ್ಯದ ಕಥೆಯಾದರೆ ದೇಶದ ಪರಿಶಿಷ್ಟ ಸಮುದಾಯಗಳ ಕಥೆ ಇನ್ನೂ ಶೋಚನೀಯವಾಗಿದೆ. ಕಾರಣ ಒಟ್ಟು 50 ಲಕ್ಷ ಕೋಟಿ ರೂ. ಇರುವಂತಹ ಕೇಂದ್ರ ಬಜೆಟ್‌ನಲ್ಲಿ ದೇಶಾದ್ಯಂತ ಶೇ. 25ರಷ್ಟಿರುವ ಪರಿಶಿಷ್ಟ ಸಮುದಾಯಗಳಿಗೆ ನಿಗದಿ ಆಗಿರುವುದು ಶೇ. 5.5 ಅನುದಾನ ಮಾತ್ರ (ರೂ. 2 ಲಕ್ಷ ಕೋಟಿ). ಹೀಗೆ ತಾರತಮ್ಯದ ರೂಪದಲ್ಲಿ ನೀಡಿರುವ ಅನುದಾನವನ್ನೂ ಪರಿಶಿಷ್ಟರ ಏಳಿಗೆಗೆ ಬಳಸದೇ 2 ಲಕ್ಷ ಕೋಟಿಯಲ್ಲಿ ಹಂಚಿಕೆಯಾದ 1.38 ಲಕ್ಷ ಕೋಟಿಗಳ ಪೈಕಿ ಬರೋಬ್ಬರಿ ಶೇ. 94ರಷ್ಟು ಹಣವನ್ನು ಕೇಂದ್ರದ ಸಾಮಾನ್ಯ ಯೋಜನೆಗಳಿಗೆ (Deemed Expenditure) ನೀಡಲಾಗಿದೆ. ಉಳಿದ ಶೇ. 6ರಷ್ಟು ಅನುದಾನದಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಸಾಧ್ಯವೇ? ಈ ಸಂಗತಿಯನ್ನು ರಾಜ್ಯ ಬಿಜೆಪಿ ಸಂಸದರಾಗಲೀ, ಪಕ್ಷದ ಅಧ್ಯಕ್ಷರಾಗಲೀ ಅಥವಾ ವಿಪಕ್ಷೀಯ ನಾಯಕರಾಗಲೀ ಎಂದಾದರೂ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದಾರಾ? ಮತ್ತು ಈ ಅನ್ಯಾಯುತವಾದ ತಾರತಮ್ಯವನ್ನು ಪ್ರಶ್ನೆ ಮಾಡಿದ್ದಾರಾ? ಎಂಬುದರ ಬಗ್ಗೆ ನಿಜವಾದ ದಲಿತ ವಿರೋಧಿಗಳಾದ ಬಿಜೆಪಿಗರು ರಾಜ್ಯದ ಜನರಿಗೆ ಉತ್ತರಿಸಲಿ.
ಪರಿಶಿಷ್ಟ ಸಮುದಾಯಗಳ ಪರವಾದ ನಿಲುವನ್ನು ಹೊಂದಿರುವ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು SಅSP/ಖಿSP ಕಾಯ್ದೆ, ಭಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆ ಮೀಸಲಾತಿ ಕಾಯ್ದೆ ಜಾರಿ ಮಾಡಿದ್ದು, ಪಿಟಿಸಿಎಲ್ ಕಾಯ್ದೆಯ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹಿಂದೆ ಪರಿಶಿಷ್ಟರ ಭೂಮಿಯ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕೆಂದರೆ ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಅರ್ಜಿಹಾಕ ಬೇಕಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಪರಿಶಿಷ್ಟರ ಭೂ ಸಮಸ್ಯೆಗಳಿಗೆ ಸಂಬಂಧಿಸಿದ ಹಾಗೆ ಇದ್ದ ಕಾಲ ಮಿತಿಯನ್ನು ತೆಗೆದುಹಾಕಲಾಗಿದೆ. ಇದರ ಜೊತೆಗೆ ಪರಿಶಿಷ್ಟರ ಹಣವನ್ನು ಇತರ ಕಾರಣಕ್ಕೆ ವರ್ಗಾವಣೆ ಮಾಡಲು ಬಳಸಲಾಗುತ್ತಿದ್ದ 7ಡಿ ಕಾಯ್ದೆಯನ್ನೂ ಕಾಂಗ್ರೆಸ್‌ಸರಕಾರ ರದ್ದುಪಡಿಸಿದ್ದು ಇದು ಐತಿಹಾಸಿಕ ನಿಲುವಾಗಿದೆ. ಇನ್ನು ಡಿಸಿಆರ್‌ಇ ಠಾಣೆಗಳನ್ನು ಸ್ಥಾಪನೆ ಮಾಡಿ ಪರಿಶಿಷ್ಟರ ಹಕ್ಕು ಮತ್ತು ಘನತೆಯ ರಕ್ಷಣೆಗೆ ಬದ್ಧವಾಗಿರುವ ಕಾಂಗ್ರೆಸ್‌ಸರಕಾರದ ಪರಿಶಿಷ್ಟರ ಪರವಾದ ನಿಲುವುಗಳು ದ್ರೋಹದ ಸಂಕೇತವೋ ಇಲ್ಲವೇ ಬದ್ಧತೆಯ ಕೆಲಸವೋ ಎಂಬುದನ್ನು ಜನರೇ ನಿರ್ಣಯಿಸಬೇಕು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಬಹುತೇಕ ಭೂರಹಿತರಾಗಿರುವ ಮತ್ತು ಕೊರೋನ ಸಂದರ್ಭಕ್ಕೆ ಸಿಲುಕಿ ಜರ್ಜರಿತರಾದಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕನಿಷ್ಠ ಬದುಕನ್ನು ಕಲ್ಪಿಸುವ ಕೆಲಸ ಮಾಡಿದ್ದು, ಕಾಯ್ದೆಯ ವ್ಯಾಪ್ತಿಯ ಒಳಗೆ ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಬಳಕೆ ಆಗುತ್ತಿದೆಯೇ ಹೊರತು, ಯಾರ ಮನೆಗೂ ಅಲ್ಲ ಎಂಬ ಸಂಗತಿಯನ್ನು ಎಲ್ಲರೂ ಅರಿಯಬೇಕು.







