ಎಮ್ಮೆಕೆರೆ ಅಂತರ್‌ರಾಷ್ಟ್ರೀಯ ಈಜುಕೊಳದ ಮುಗಿಯದ ವಿವಾದ

ಮಂಗಳೂರು, ನ.23: ನಗರದ ಎಮ್ಮೆಕೆರೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ವಿವಾದದಿಂದ ಇನ್ನೂ ಮುಕ್ತವಾಗಿಲ್ಲ. ಒಂದಲ್ಲೊಂದು ವಿವಾದ ಈಜುಕೊಳದ ಸುತ್ತ ಗಿರಕಿ ಹೊಡೆಯುತ್ತಾ ಇದೆ. ಚಾಂಪಿಯನ್ ಈಜುಗಾರರಿಗೆ ಸ್ವಂತ ಕೋಚ್ ಮೂಲಕ ತರಬೇತಿಗೆ ಅವಕಾಶ ಇಲ್ಲದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರ ಗಮನ ಸೆಳೆದಾಗ ಸಚಿವರು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
ಜಿಲ್ಲಾಧಿಕಾರಿ ವಿವಾದ ಬಗೆಹರಿಸಲು ಸಭೆ ಕರೆಯುತ್ತಾರೆಂದು ದ.ಕ. ಜಿಲ್ಲಾ ಈಜುಗಾರರ ಸಂಘದ ಪದಾಧಿಕಾರಿಗಳು ಕಾಯುತ್ತಿದ್ದಾರೆ. ಈಜುಕೊಳ ಉದ್ಘಾಟನೆಗೊಂಡಾಗ ಈಜುಗಾರರಿಗೆ ತಮ್ಮ ಸ್ವಂತ ತರಬೇತಿದಾರರನ್ನು ಕರೆ ತರಲು ಅವಕಾಶ ಇತ್ತು. ಬಳಿಕ ಇದರ ನಿರ್ವಹಣೆಯನ್ನು ಬೆಂಗಳೂರಿನ ವಿಒನ್ ಅಕ್ವಾ ಕ್ಲಬ್ ವಹಿಸಿಕೊಂಡ ಬಳಿಕ ಈ ಸಮಸ್ಯೆ ಆರಂಭಗೊಂಡಿತು ಎನ್ನಲಾಗಿದೆ.
ಸ್ಮಾರ್ಟ್ ಸಿಟಿ ನೆರವಿನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಗೊಂಡಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನು ಈಜುಪಟುಗಳಿಗೆ ತಮ್ಮ ಸ್ವಂತ ಕೋಚ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯಲು ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ಬಸವನಗುಡಿಯ ಅಕ್ವಾಟಿಕ್ ಸೆಂಟರ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ವಿಒನ್ ಅಕ್ವಾ ಸೆಂಟರ್‌ನ ತರಬೇತುದಾರರಿಗೆ ಮಾತ್ರ ಎಮ್ಮೆಕೆರೆ ಸಂಕೀರ್ಣದೊಳಗೆ ತರಬೇತಿ ನೀಡಲು ಅನುಮತಿ ಇದೆ. ಅವರು ಐವರು ಕೋಚ್‌ಗಳನ್ನು ನೇಮಕ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈಜುಪಟುಗಳು ತರಬೇತಿ ಪಡೆಯಬೇಕಾಗಿದೆ.
ಇತರ ಸ್ಥಳೀಯ ಕ್ಲಬ್‌ಗಳ ತರಬೇತುದಾರರು ಮತ್ತು ಈಜುಗಾರರು ಸ್ಪರ್ಧಾತ್ಮಕ ತರಬೇತಿಗಾಗಿ ಸೌಲಭ್ಯವನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳುತ್ತಾರೆ.
ಎಮ್ಮೆಕೆರೆಯಲ್ಲಿ ಈಜುಪಟುಗಳಿಗೆ ತಮ್ಮ ವೈಯಕ್ತಿಕ ಕೋಚ್‌ಗಳಿಗೆ ಪ್ರವೇಶ ಇಲ್ಲದ ಕಾರಣ ದಿಂದಾಗಿ ಅವರು ಅಭ್ಯಾಸಕ್ಕೆ ಮಂಗಳಾ ಪೂಲ್ ಅಥವಾ ಲಭ್ಯವಿರುವ ಇತರ ಈಜುಕೊಳಗಳನ್ನು ಅವಲಂಭಿಸುವಂತಾಗಿದೆ.
ಹಿಂದೆ ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿಯಾಗಿದ್ದಾಗ ಈಜುಕೊಳದ ಗುತ್ತಿಗೆಯನ್ನು ವಿಒನ್ ಅಕ್ವಾ ಸೆಂಟರ್‌ಗೆ ನೀಡಲಾಗಿತ್ತು. ಸ್ಥಳೀಯ ಈಜುಪಟುಗಳಿಗೆ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಗಮನಸೆಳೆಯಲಾಗಿತ್ತು. ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಬಳಿಕ ಅವರು ವರ್ಗಾವಣೆಗೊಂಡರು ಎಂದು ಈಜುಗಾರರು ಹೇಳುತ್ತಾರೆ.
ಎಮ್ಮೆಕೆರೆಯಲ್ಲಿರುವುದುದ ಅಂತರ್‌ರಾಷ್ಟ್ರೀಯ ಮಟ್ಟದ ಈಜುಕೊಳವಾಗಿದೆ. ಇಲ್ಲಿ ಕೇವಲ ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಈಜಗಾರರ ಅಭ್ಯಾಸಕ್ಕೆ ಮಾತ್ರ ಅವಕಾಶ ಇದೆ. ಕಲಿಯಲು ಅವಕಾಶ ಇದೆ. ಆದರೆ ಈಗ ನಿರ್ವಹಣೆ ಹೊಣೆ ಹೊತ್ತವರು ಅಲ್ಲಿರುವ ಮೂರು ಈಜು ಕೊಳಗಳ ಪೈಕಿ ಒಂದು ಈಜುಕೊಳದ ಆಳವನ್ನು ಕಡಿಮೆ ಮಾಡಿ ಮೂಲ ಸ್ವರೂಪವನ್ನು ಬದಲಾಯಿಸಿ ಈಜು ಕಲಿಯುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನಿರ್ವಹಣೆಗೆ ಸ್ಥಳೀಯ ಸಮಿತಿ ರಚನೆಯಾಗಲಿ: ಈಜು ಕೊಳದ ನಿರ್ವಹಣೆ ಗುತ್ತಿಗೆಯನ್ನು ಹೊರಗಿನವರಿಗೆ ಕೊಟ್ಟದ್ದು ಸರಿಯಲ್ಲ. ನಿರ್ವಹಣೆಗೆ ಸ್ಥಳೀಯ ಸಮಿತಿ ರಚನೆಯಾಗಲಿ. ಮಂಗಳೂರಿನಲ್ಲಿ ತರಬೇತಿ ಪಡೆದ ಈಜುಪಟುಗಳ ಯಶಸ್ಸಿನ ಶ್ರೇಯಸ್ಸು ಮಂಗಳೂರಿಗೆ ಸಲ್ಲಬೇಕು. ಎಮ್ಮೆಕೆರೆಯ ಈಜು ಕೊಳದ ಈಗಿನ ಸಮಸ್ಯೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕರೆಯುವ ಸಭೆಗಾಗಿ ನಾವು ಕಾಯುತ್ತಿದ್ದೇವೆ ಎಂದು ದ.ಕ. ಜಿಲ್ಲಾ ಸ್ವಿಮ್ಮಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ ಯತೀಶ್ ಬೈಕಂಪಾಡಿ ಹೇಳಿದ್ದಾರೆ.
ಈಜುಪಟುಗಳು ಅಭ್ಯಾಸಕ್ಕೆ ಸ್ವಂತ ಕೋಚ್‌ಗಳನ್ನು ಕರೆ ತರುವಂತಿಲ್ಲ: ಜಿಲ್ಲಾಧಿಕಾರಿ
ಸ್ವಂತ ಕೋಚ್‌ಗಳನ್ನು ಈಜುಕೊಳದಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಬೇಕು ಎನ್ನುವುದು ಕೆಲವು ಈಜುಪಟುಗಳ ಬೇಡಿಕೆಯಾಗಿದೆ. ಆದರೆ ಆ ಬೇಡಿಕೆಯನ್ನು ಈಡೇರಿಸುವುದು ಕಷ್ಟಸಾಧ್ಯ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.
ಎಲ್ಲರೂ ಕೋಚ್‌ಗಳನ್ನು ಕರೆದುಕೊಂಡು ಬಂದರೆ ಕೋಚ್‌ಗಳ ನಡುವೆ ಸಮನ್ವಯ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಬರುವುದಕ್ಕಿಂತ ಮೊದಲು ಈಜುಗಾರರಿಗೆ ಸ್ವಂತ ಕೋಚ್‌ಗಳನ್ನು ಕೆರೆದುಕೊಂಡು ಬರಲು ಅವಕಾಶ ನೀಡಿರುವ ಕಾರಣದಿಂದಾಗಿ ಅಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ತಮಗೆ ಮಾಹಿತಿ ಲಭಿಸಿತ್ತು. ಈ ಸಮಸ್ಯೆಯನ್ನು ತಪ್ಪಿಸಲು ಈಗ ಈಜು ಕೊಳದ ನಿರ್ವ ಹಣೆಯ ಗುತ್ತಿಗೆ ವಹಿಸಿಕೊಂಡ ವರು ಐವರು ಕೋಚ್‌ಗಳನ್ನು ನಿಯೋಜನೆ ಮಾಡಿ ದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಬೇಕಾಗಿದೆ ಎಂದು ಡಿಸಿ ದರ್ಶನ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಈಜುಕೊಳದಲ್ಲಿ ಸ್ವಂತ ಕೋಚ್‌ಗಳನ್ನು ಕರೆದುಕೊಂಡು ಹೋಗಿ ತರಬೇತಿ ಪಡೆಯಲು ಅವಕಾಶ ಇದೆ. ಅಲ್ಲಿ ತರಬೇತಿ ಪಡೆದು ಸ್ವಂತ ಕೋಚ್ ಇಲ್ಲದೆ ಎಮ್ಮೆಕೆರೆ ಈಜುಕೊಳದಲ್ಲಿ ಅಭ್ಯಾಸ ನಡೆಸಲಿ. ಈಜುಪಟುಗಳ ಸ್ವಂತ ಕೋಚ್ ಬೇಡಿಕೆಯನ್ನು ಹೊರತುಪಡಿಸಿ ಬಹು
ತೇಕ ಬೇಡಿಕೆ ಗಳನ್ನು ಈಡೇರಿಸಲಾಗಿದೆ. ಈಜುಪಟು ಗಳ ಬೇಡಿಕೆಗಳಿಗೆ ಸಂಬಂಧಿಸಿ ಚರ್ಚಿಸಲು ಸಭೆ ಕರೆ ಯಲು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗುವುದು ಎಂದರು.







