ಮೂಲಸೌಕರ್ಯ ವಂಚಿತ ಅಲೆಮಾರಿ ಸಮುದಾಯಕ್ಕೆ ಬೇಕಿದೆ ಸರಕಾರದ ನೆರವು

ಬೀದರ್ : ನಗರದ ನೌಬಾದ್ ಹತ್ತಿರವಿರುವ ಚೌಳಿ ಕಮಾನ್ ಒಳಗಡೆಯ ಅಲಿಯಾಬಾದ್ ರಸ್ತೆಯ ಪಕ್ಕದಲ್ಲಿ ನೂರಾರು ಗುಡಿಸಲುಗಳಲ್ಲಿ ಅಲೆಮಾರಿ ಜನರು ಮೂಲ ಸೌಕರ್ಯವಿಲ್ಲದೆ ಬದುಕುತ್ತಿದ್ದಾರೆ. ಇತ್ತೀಚಿಗೆ ಸಂಸದ ಸಾಗರ್ ಖಂಡ್ರೆ ಅವರು ಬೀದರ್ ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡುವುದೇ ನಮ್ಮ ಗುರಿ ಎಂದು ಹೇಳಿರುವುದರಲ್ಲಿ ಈ ಗುಡಿಸಲುಗಳೂ ಕೂಡ ಸೇರಿದ್ದರೆ ಅದಕ್ಕಿಂತ ಒಳ್ಳೇದು ಬೇರೊಂದಿಲ್ಲ.
ಸುಮಾರು 25 ರಿಂದ 30 ವರ್ಷದಿಂದ ಈ ಅಲೆಮಾರಿ ಜನಾಂಗ ಈ ಸ್ಥಳದಲ್ಲಿ ಬಿಡು ಬಿಟ್ಟು ಜೀವನ ನಡೆಸುತ್ತಿದ್ದಾರೆ. ಅವರಿಗೆ ಕುಡಿಯುವ ನೀರು, ಮಕ್ಕಳ ಶಿಕ್ಷಣ, ಒಳ್ಳೆ ಬಟ್ಟೆ, ಒಂದು ಸೂರು, ರಸ್ತೆ, ವಿದ್ಯುತ್, ಶೌಚಾಲಯ ಹೀಗೆ ಇನ್ನು ಹಲವಾರು ಮೂಲ ಸೌಕರ್ಯಗಳಿಂದ ಅವರು ಕಾಲ ಕಾಲಾಂತರದಿಂದ ವಂಚಿತರಾಗಿದ್ದಾರೆ.
ಕೆಲವು ಕಡೆಯ ಖಾಸಗಿ ಸ್ಥಳದಲ್ಲಿ ವಾಸವಿದ್ದ ಇವರನ್ನು ಒಕ್ಕಲೆಬ್ಬಿಸಿ ಕಳುಹಿಸಲಾಗಿದೆ. ನಂತರ ಇವರು ಒಂದು ಸರ್ಕಾರಿ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡಾಗ ಆ ಸ್ಥಳದಲ್ಲಿ ಶ್ರೀಮಂತರಿಗೋಸ್ಕರ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಮತ್ತೆ ಇವರು ತಮ್ಮ ಜೋಪಡಿಗಳ ಸಹಿತ ಪಾರ್ಕ್ ಹತ್ತಿರದಲ್ಲಿರುವ ಬೇರೆ ಜಾಗಕ್ಕೆ ಬಂದು ನೆಲೆಸಿದ್ದಾರೆ.
ರಸ್ತೆ ಪಕ್ಕದಲ್ಲಿಯೇ ಮಲಗುವ ಇವರ ಜೀವ ಅದ್ಯಾವ ವಾಹನದಲ್ಲಿ ಸಿಲುಕುತ್ತೋ ಗೊತ್ತಿಲ್ಲ. ಹಾವು ಕಡಿದು 2-3 ಜೀವಗಳು ಹೋಗಿದ್ದಾವೆ. ಮೊನ್ನೆಯಷ್ಟೇ ಒಬ್ಬ ಮಹಿಳೆಗೆ ಹುಚ್ಚು ನಾಯಿ ಕಚ್ಚಿದೆ. ಕೆಲ ದಿನಗಳ ಹಿಂದೆ ಮಳೆಯ ನೀರಲ್ಲೇ ಒಬ್ಬ ಮಹಿಳೆಯ ಬಾಣಂತನವಾಗಿದೆ. ರೋಗ ರುಜಿನುಗಳಿಂದ ಬೇಸತ್ತು ಹೋಗಿದ್ದೀವಿ ಎಂದು ಆ ಜನ ತಮ್ಮ ಅಲಳನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಜನರಿಗೆ ಶೌಚಾಲಯದ ವ್ಯವಸ್ಥೆವಿಲ್ಲ. ಅಕ್ಕಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಕೂಡ ಇಲ್ಲ. ರಸ್ತೆ ಪಕ್ಕದ ಬಯಲೇ ಇವರ ಶೌಚಾಲಯ. ಸ್ನಾನ ಮಾಡುವುದಕ್ಕೂ ಕೂಡ ಅಡ್ಡಗೋಡೆ ಇರದ ಈ ಜನರ ಪರಿಸ್ಥಿತಿ ದುಸ್ಥಿರವಾಗಿದೆ. ಇದರಿಂದಾಗಿ ಆ ಅಲೆಮಾರಿ ಹೆಣ್ಣುಮಕ್ಕಳ ಗತಿ ಹೇಳತೀರದಾಗಿದೆ. ರಸ್ತೆ ಪಕ್ಕದಲ್ಲಿ ಶೌಚಾಲಯ ಮಾಡುತ್ತಿರುವುದರಿಂದ ಪಾರ್ಕ್ ಗೆ ಬರುವ ಜನರಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಈ ಅಲೆಮಾರಿ ಜನರನ್ನು ಅಲ್ಲಿಂದಲೂ ಕೂಡ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ.
ದೇಶಕ್ಕೆ ಸ್ವತಂತ್ರ ಬಂದು ದಶಕಗಳೇ ಕಳೆದರೂ ಕೂಡ ಈ ಅಲೆಮಾರಿಗಳು ನಾಗರೀಕತೆ, ಮೂಲ ಸೌಕರ್ಯಗಳಿಂದ ತುಂಬಾ ದೂರ ಉಳಿದಿದ್ದಾರೆ. ಈ ಗುಡಿಸಲುಗಳ ಕಡೆಗೆ ಯಾರಾದರೂ ಬಂದು ತಮ್ಮನ್ನು ಒಂದು ಸೂರು ಕಟ್ಟಿಕೊಡುತ್ತಾರೆ ಎನ್ನುವ ಭರವಸೆಯ ಆಸೆ ಕಣ್ಣು ಬಿಡುತ್ತಾ ಈ ಜನಾಂಗ ಕಾದು ಕೂಳಿತಿದೆ. ಸಂಸದ ಸಾಗರ್ ಖಂಡ್ರೆ ಅವರ ಗುಡಿಸಲು ಮುಕ್ತ ಜಿಲ್ಲೆ ಮಾಡುವ ಗುರಿಯಲ್ಲಿ ಮೊಟ್ಟ ಮೊದಲಿಗೆ ಈ ಗುಡಿಸಲುಗಳು ಸೇರಿದರೆ ಆ ಗುರಿಗೊಂದು ಅರ್ಥ ಬರುತ್ತದೆ.
ಯಾವುದೇ ಪತ್ರಿಕೆಯವರಿಗೆ ನಾನು ಇಲ್ಲಿವರೆಗೂ ಪ್ರತಿಕ್ರಿಯೆ ನೀಡಲಿಲ್ಲ, ನೀಡುವುದು ಇಲ್ಲ. ನನಗೆ ಪ್ರತಿಕ್ರಿಯೆ ನೀಡುವ ಅಧಿಕಾರ ಇಲ್ಲ. ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಬೇಕೆಂದರೆ ನಾನು ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಾಗುತ್ತದೆ.
- ಸಿಂಧು ಎಚ್. ಎಸ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ.
ಇವರು ಎಸ್ಸಿ, ಎಸ್ಟಿ ಸಮುದಾಯದ ಅಲೆಮಾರಿ ಜನರಿದ್ದಾರೆ. ಇವರು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುತ್ತಾರೆ. 2017 ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಚ್. ಆರ್ ಮಹದೇವ್ ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಕೂಡಿಕೊಂಡು ಇಲ್ಲಿ 84 ಕುಟುಂಬಗಳಿವೆ ಎಂದು ಅಧಿಕೃತವಾಗಿ ಹೇಳಿದ್ದರು. ಆದರೂ ಕೂಡ ಇಲ್ಲಿವರೆಗೆ ಅವರಿಗೆ ನಿವೇಶನ ಮತ್ತು ಮನೆಯ ವ್ಯವಸ್ಥೆ ಮಾಡಲಿಲ್ಲ.
- ಓಂಪ್ರಕಾಶ್ ರೊಟ್ಟೆ, ಅಲೆಮಾರಿ ಸಮುದಾಯದ ಪರ ಹೋರಾಟಗಾರ.
ನಮ್ಮ ಜೋಪಡಿಯಲ್ಲಿ ಕರೆಂಟ್ ಇಲ್ಲ. ಹಾವು ಕಡಿದು ಇಬ್ಬರು ಮೃತಪಟ್ಟಿದ್ದಾರೆ. ಮೊನ್ನೆಯಷ್ಟೇ ನನಗೆ ಹುಚ್ಚು ನಾಯಿ ಕಚ್ಚಿದೆ. ಕೆಲ ದಿನಗಳ ಹಿಂದೆ ಮಳೆ ಬಂದಾಗ ನೀರಲ್ಲಿಯೇ ಒಬ್ಬ ಹೆಣ್ಣುಮಗಳ ಬಾಣಂತನವಾಗಿದೆ. ನಮ್ಮ ಹೆಣ್ಣುಮಕ್ಕಳಿಗೆ ಹೊರಗಡೆ ಶೌಚಾಲಯಗೆ ಹೋಗುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ದೊಡ್ಡ ದೊಡ್ಡ ಜನ ನಮ್ಮ ಗುಡುಸಿ ಕಿತ್ತು ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಇದರಿಂದಾಗಿ ನಮಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಮನೆ ನಿರ್ಮಿಸಿ ಕೊಟ್ಟರೆ ಉಪಕಾರವಾಗುತ್ತದೆ.
- ರಾಮಕ್ಕ, ಅಲೆಮಾರಿ ಮಹಿಳೆ.







