ಪಿಎಸ್‌ಎಲ್‌ವಿ ವೈಫಲ್ಯದ ನಡುವೆಯೂ ಉಳಿದ ಏಕೈಕ ಉಪಗ್ರಹ!

ಪಿಎಸ್‌ಎಲ್‌ವಿ-ಸಿ62 ಯೋಜನೆ ವಿಫಲವಾಗಿದ್ದು, ಅದು ಹೊತ್ತೊಯ್ದಿದ್ದ ಉಪಗ್ರಹಗಳು ಹೊತ್ತಿ ಉರಿದಿವೆ. ಆದರೆ, ಕಿಡ್ ಉಪಗ್ರಹ ಮಾತ್ರ ಈ ಕೋಲಾಹಲದ ನಡುವೆಯೂ ಉಳಿದು, ಮ್ಯಾಕ್ 20 (ಪ್ರತೀ ಗಂಟೆಗೆ 24,500) ವೇಗದ ಮರು ಪ್ರವೇಶದಲ್ಲೂ ಪಾರಾಗಿ, ವೈಫಲ್ಯಗಳ ನಡುವೆಯೂ ನಿಶ್ಚಯಗಳು, ನವೀನತೆಗಳು ಮತ್ತು ಪಾಠಗಳು ಮೂಡುತ್ತವೆ ಎನ್ನುವುದನ್ನು ಪ್ರದರ್ಶಿಸಿದೆ.
ಹಲವಾರು ವರ್ಷಗಳ ಕಾಲ ಏನನ್ನೋ ನಿರ್ಮಿಸಲು ಕಠಿಣ ಪರಿಶ್ರಮ ವಹಿಸಿ, ಕೊನೆಗೆ ಅದು ಕೆಲವೇ ನಿಮಿಷಗಳಲ್ಲಿ ಉರಿದು ಹೋಗುವುದನ್ನು ಕಣ್ಣಾರೆ ಕಾಣುವುದನ್ನು ಊಹಿಸಿಕೊಳ್ಳಿ. ಜನವರಿ 12, 2026ರಂದು ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಯೋಜನೆ ವಿಫಲವಾದಾಗ ಇಂತಹದ್ದೇ ವಿದ್ಯಮಾನ ಜರುಗಿತ್ತು. ಇಷ್ಟಾದರೂ, ಈ ವೈಫಲ್ಯದ ನಡುವೆಯೂ ಒಂದು ಪವಾಡಸದೃಶ ಉಳಿಯುವಿಕೆಯೂ ನಡೆದಿದೆ! ಸೋಲೊಪ್ಪಿಕೊಂಡು ನಾಶವಾಗಲು ಸಿದ್ಧವಿಲ್ಲದ ಒಂದು ಸಣ್ಣ ಬಾಹ್ಯಾಕಾಶ ಕ್ಯಾಪ್ಸುಲ್ ಈ ವೈಫಲ್ಯದಲ್ಲೂ ಪಾರಾಗಿದೆ!
ಸೋಮವಾರ ಬೆಳಗ್ಗೆ 10:17ಕ್ಕೆ ಇಸ್ರೋ ತನ್ನ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಿತು. ಈ ರಾಕೆಟ್ ಭೂಮಿಯಿಂದ 512 ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಯಲ್ಲಿ 16 ಉಪಗ್ರಹಗಳನ್ನು ಅಳವಡಿಸಬೇಕಾಗಿತ್ತು. ಈ ಉಪಗ್ರಹಗಳ ಪೈಕಿ ‘ಅನ್ವೇಷ’ ಎಂಬ ಹೆಸರೂ ಹೊಂದಿದ್ದ ಇಒಎಸ್-ಎನ್1 ಉಪಗ್ರಹ ಅತ್ಯಂತ ಪ್ರಮುಖವಾಗಿತ್ತು. ಇದು ಅತ್ಯುನ್ನತ ಗುಣಮಟ್ಟದ ಕಣ್ಗಾವಲು ಉಪಗ್ರಹವಾಗಿದ್ದು, ಇದನ್ನು ಭಾರತದ ರಕ್ಷಣಾ ಅವಶ್ಯಕತೆಗಳಿಗೆ ತಕ್ಕಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿತ್ತು. ಇದರೊಡನೆ, ಭಾರತ, ನೇಪಾಳ, ಯುಕೆ, ಬ್ರೆಝಿಲ್, ಥಾಯ್ಲೆಂಡ್, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಿಗೆ ಸೇರಿದ ಇತರ 15 ಉಪಗ್ರಹಗಳಿದ್ದವು.
ರಾಕೆಟ್ ಉಡಾವಣೆ ಅತ್ಯಂತ ಸುಗಮವಾಗಿ ನೆರವೇರಿತು. ಮೊದಲ ಹಂತವೂ ಸರಿಯಾಗಿ ಉರಿಯಿತು. ಎರಡನೇ ಹಂತ ನಿರೀಕ್ಷಿಸಿದ ರೀತಿಯಲ್ಲೇ ಕಾರ್ಯಾಚರಿಸಿತು. ಎಲ್ಲವೂ ಸಹಜವಾಗಿ ನಡೆಯುತ್ತಿದೆ ಎನ್ನುವ ಭಾವನೆ ಮೂಡಿತ್ತು. ಆದರೆ, ಇದ್ದಕ್ಕಿದ್ದಂತೆ ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು.
ಉಡಾವಣೆಗೊಂಡ ಆರರಿಂದ ಎಂಟು ನಿಮಿಷಗಳ ಬಳಿಕ, ಮೂರನೇ ಹಂತದ ಉರಿಯುವಿಕೆಯ ಸಂದರ್ಭದಲ್ಲಿ, ರಾಕೆಟ್ ಅನಿಯಂತ್ರಿತವಾಗಿ ಉರುಳಲಾರಂಭಿಸಿತು. ಇಂಜಿನಿಯರ್‌ಗಳ ಪರಿಭಾಷೆಯಲ್ಲಿ, ರಾಕೆಟ್ ‘ಆ್ಯಟಿಟ್ಯೂಡ್ ಕಂಟ್ರೋಲ್’ ಕಳೆದುಕೊಂಡಿತು. ಅಂದರೆ, ಅದು ತನ್ನ ಉದ್ದೇಶಿತ ಪಥ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಲು ವಿಫಲವಾಗತೊಡಗಿತ್ತು. ವೇಗವಾಗಿ ಚಲಿಸುತ್ತಿರುವ ಒಂದು ಕಾರಿನ ಸ್ಟಿಯರಿಂಗ್ ಇದ್ದಕ್ಕಿದ್ದಂತೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುವುದನ್ನು ಊಹಿಸಿಕೊಳ್ಳಿ. ಇದೂ ಅಂತಹ ಒಂದು ಘಟನೆಯಾಗಿತ್ತು. ನಂತರ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ರಾಕೆಟ್ ನಿಯಂತ್ರಣ ಕಳೆದುಕೊಂಡದ್ದನ್ನು ಖಚಿತಪಡಿಸಿದರು.
ಈ ಘಟನೆಯನ್ನು ಇನ್ನಷ್ಟು ನೋವಿನ ಘಟನೆಯಾಗಿಸಿದ್ದೆಂದರೆ, ಕೇವಲ ಎಂಟು ತಿಂಗಳ ಹಿಂದೆ, ಪಿಎಸ್‌ಎಲ್‌ವಿ-ಸಿ61 ಉಡಾವಣೆಯ ವೇಳೆಯೂ ಇಂತಹದ್ದೇ ಅವಘಡ ಸಂಭವಿಸಿತ್ತು. ಈ ಬಾರಿಯೂ ರಾಕೆಟ್ ಮತ್ತೆ ಬಾಹ್ಯಾಕಾಶದಲ್ಲಿ ಮುಗ್ಗರಿಸಿತ್ತು. ರಾಕೆಟ್‌ನಲ್ಲಿದ್ದ ಎಲ್ಲ 16 ಉಪಗ್ರಹಗಳೂ ಈಗ ಮರಳಿ ಭೂಮಿಗೆ ಉರುಳುವುದು ಖಚಿತವಾಗಿತ್ತು. ಬಹುತೇಕ ಎಲ್ಲರೂ ಇಲ್ಲಿಗೆ ಈ ಯೋಜನೆ ಮುಕ್ತಾಯ ಕಂಡಿತು ಎಂದುಕೊಂಡಿದ್ದರು.
ಹದಿನೈದು ಉಪಗ್ರಹಗಳು ಈ ಅಪಘಾತದ ನಂತರ ಉಳಿಯಲಿಲ್ಲ. ಅವುಗಳು ಬಾಹ್ಯಾಕಾಶದ ಶಾಂತ ನಿರ್ವಾತದಲ್ಲಿ ಕಾರ್ಯಾಚರಿಸುವಂತೆ ವಿನ್ಯಾಸಗೊಂಡಿದ್ದವೇ ಹೊರತು, ಭೂಮಿಯ ದಪ್ಪನೆಯ ವಾತಾವರಣದ ವಿರುದ್ಧ ಸೆಣಸಲಿಲ್ಲ. ಅವುಗಳು ಹೈಪರ್‌ಸಾನಿಕ್ ವೇಗದಲ್ಲಿ ಭೂಮಿಯತ್ತ ಮರಳುವಾಗ, ಅವುಗಳ ಸುತ್ತಲಿನ ಗಾಳಿ ಮಿತಿಮೀರಿ ಬಿಸಿಯಾಗತೊಡಗಿತ್ತು. ಆ ಘರ್ಷಣೆ ಎಷ್ಟು ತೀಕ್ಷ್ಣ ಪ್ರಮಾಣದಲ್ಲಿತ್ತು ಎಂದರೆ, ಅದು ತೀವ್ರ ತಾಪಮಾನವನ್ನು ಸೃಷ್ಟಿಸಿ, ಉಪಗ್ರಹಗಳು ಆಗಸದಲ್ಲೇ ಉರಿದುಹೋಗುವಂತೆ ಮಾಡಿತು. ಅವುಗಳು ಆಗಸದಲ್ಲಿ ಸಾಗುವ ಧೂಮಕೇತುಗಳಂತೆ ಕಾಣುತ್ತಾ, ಉರಿಯುತ್ತಾ ಮುಗಿದುಹೋದವು. ಇದರೊಡನೆ ಕೆಲವೇ ನಿಮಿಷಗಳಲ್ಲಿ ಹಲವಾರು ವರ್ಷಗಳ ಪರಿಶ್ರಮವೂ ಬೂದಿಯಾಗಿತ್ತು.
ಆದರೆ, ಒಂದು ಪೇಲೋಡ್ ಮಾತ್ರ ಕಳೆದುಹೋಗಲಿಲ್ಲ!
ಅದರ ಹೆಸರು ಕಿಡ್ (ಏIಆ) - ಕೆಸ್ಟ್ರೆಲ್ ಇನಿಷಿಯಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್.
ಕಿಡ್ ಒಂದು ಸಾಮಾನ್ಯ ಉಪಗ್ರಹ ಆಗಿರಲಿಲ್ಲ. ಅದು ಸಣ್ಣದಾದ, ಫುಟ್‌ಬಾಲ್ ಗಾತ್ರದ ಕ್ಯಾಪ್ಸೂಲ್ ಆಗಿದ್ದು, ಅಂದಾಜು 25 ಕೆಜಿ ತೂಕ ಹೊಂದಿತ್ತು. ಇದನ್ನು 2023ರಲ್ಲಿ ಸ್ಥಾಪನೆಗೊಂಡ, ಮ್ಯಾಡ್ರಿಡ್ ಮೂಲದ ಆರ್ಬಿಟಲ್ ಪ್ಯಾರಾಡೈಮ್ ಎಂಬ ಬಾಹ್ಯಾಕಾಶ ಸಂಸ್ಥೆ ನಿರ್ಮಿಸಿತ್ತು. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಬೆಂಬಲ ಮತ್ತು ರೈಡ್ ಎಂಬ ಫ್ರೆಂಚ್ ಸಹಯೋಗಿ ಸಂಸ್ಥೆಯ ನೆರವಿನಿಂದ ಕಿಡ್ ಅನ್ನು ಭೂಮಿಗೆ ಮರು ಪ್ರವೇಶಿಸುವ ಬಾಹ್ಯಾಕಾಶ ವಾಹನದಂತೆ ವಿನ್ಯಾಸಗೊಳಿಸಲಾಗಿತ್ತು. ಇದರ ಗುರಿಯೇ ಭವಿಷ್ಯದ ಬಾಹ್ಯಾಕಾಶ ನೌಕೆಗಳು ಭೂಮಿಯ ವಾತಾವರಣದ ಮೂಲಕ ಸುರಕ್ಷಿತವಾಗಿ ಮರಳಿ ಬರಬಹುದೇ, ಅವುಗಳನ್ನು ಮರುಬಳಕೆ ಮಾಡಲು ಸಾಧ್ಯವೇ ಎನ್ನುವುದನ್ನು ಪರೀಕ್ಷಿಸುವುದಾಗಿತ್ತು.
ಇದರ ಯೋಜನೆ ಸರಳವಾಗಿತ್ತು. ಎಲ್ಲ ಉಪಗ್ರಹಗಳನ್ನು ಬಿಡುಗಡೆಗೊಳಿಸಿದ ಬಳಿಕ, ರಾಕೆಟ್ ಕಿಡ್ ಅನ್ನು ನಿಯಂತ್ರಿತ ರೀತಿಯಲ್ಲಿ ಕೆಳಗಿಳಿಸಲಾಗುತ್ತಿತ್ತು. ಆದರೆ, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲೇ ಇಲ್ಲ.
ರಾಕೆಟ್ ನಿಯಂತ್ರಣ ಕಳೆದುಕೊಂಡಾಗ, ಕಿಡ್ ಪತನಗೊಳ್ಳುತ್ತಿದ್ದ ರಾಕೆಟ್‌ನ ನಾಲ್ಕನೇ ಹಂತಕ್ಕೆ ಜೋಡಿಸಿಕೊಂಡಿತ್ತು. ಅವೆರಡೂ ಜೊತೆಯಾಗಿ ಭೂಮಿಯತ್ತ ಜಿಗಿಯುತ್ತಿದ್ದವು. ಯಾವಾಗ ಅವು ಮ್ಯಾಕ್ 20, ಅಂದರೆ ಗಂಟೆಗೆ ಅಂದಾಜು 24,500 ಕಿಲೋಮೀಟರ್ ವೇಗದಲ್ಲಿ ವಾತಾವರಣವನ್ನು ಪ್ರವೇಶಿಸಿದವೋ, ಆಗ ಉಂಟಾದ ವಿಪರೀತ ಉಷ್ಣತೆ ಅವುಗಳನ್ನು ಪ್ರತ್ಯೇಕಿಸುವ ವ್ಯವಸ್ಥೆಯನ್ನು ಚಾಲನೆಗೊಳಿಸಿತು. ಆ ಕ್ಷಣದಲ್ಲಿ, ಕಿಡ್ ವಾತಾವರಣವನ್ನು ಏಕಾಂಗಿಯಾಗಿ ಎದುರಿಸಲು ಹೊರಗೆಸೆಯಲ್ಪಟ್ಟಿತು.
ಆಗ ನಡೆದದ್ದೇ ಅದ್ಭುತ ವಿದ್ಯಮಾನ!
ಕಿಡ್ ಎಚ್ಚರಗೊಂಡಿತು!
ಯಾವುದೇ ಮಾನವ ಹಸ್ತಕ್ಷೇಪ ಇಲ್ಲದೆಯೇ, ಕ್ಯಾಪ್ಸುಲ್ ತನ್ನ ಸಿಸ್ಟಮ್‌ಗಳನ್ನು ಚಾಲನೆಗೊಳಿಸಿ, ಮಾಹಿತಿಗಳನ್ನು ರವಾನಿಸಲು ಆರಂಭಿಸಿತು. ವಾತಾವರಣವನ್ನು ಸೀಳುತ್ತಾ ಕೆಳಗಿಳಿಯುವ ಸಂದರ್ಭದಲ್ಲಿ, 190 ಸೆಕೆಂಡುಗಳ ಕಾಲ ಕಿಡ್ ಮಾಹಿತಿಗಳನ್ನು ರವಾನಿಸುತ್ತಿತ್ತು.
ಈ ಹಂತದಲ್ಲಿ, ಗಾಳಿ ಎಷ್ಟರಮಟ್ಟಿಗೆ ಬಿಸಿಯಾಗುತ್ತದೆ ಎಂದರೆ, ಅದು ಪ್ಲಾಸ್ಮಾ ರೂಪಕ್ಕೆ ಬದಲಾಗಿತ್ತು. ಪ್ಲಾಸ್ಮಾ ಎನ್ನುವುದು ಒಂದು ವಿಶೇಷ ಸ್ಥಿತಿಯಾಗಿದ್ದು, ಅಲ್ಲಿ ಗಾಳಿ ವಿಪರೀತ ಶಕ್ತಿ ಹೊಂದಿ, ಇಲೆಕ್ಟ್ರಾನ್‌ಗಳು ಅಣುಗಳಿಂದ ಬಿಡುಗಡೆಯಾಗಿ, ಲೋಹಗಳನ್ನು ಕರಗಿಸಬಲ್ಲ, ಇಲೆಕ್ಟ್ರಾನಿಕ್ಸ್‌ಗಳನ್ನು ನಾಶಪಡಿಸಬಲ್ಲ ಅತ್ಯಂತ ಬಿಸಿಯ ಅನಿಲವನ್ನು ಸೃಷ್ಟಿಸುತ್ತದೆ. ಬಹುತೇಕ ಉಪಗ್ರಹಗಳು ಈ ಹಂತದಲ್ಲಿ ಪಾರಾಗಲು ಸಾಧ್ಯವೇ ಇರುವುದಿಲ್ಲ.
ಆದರೆ, ಕಿಡ್ ಪಾರಾಗಿತ್ತು.
ಈ ಕ್ಯಾಪ್ಸೂಲ್ 28ಜಿ ತನಕದ ಬಲವನ್ನು ಸಹಿಸಿಕೊಂಡಿತ್ತು. ಇದಕ್ಕೆ ಹೋಲಿಸಿ ನೋಡುವುದಾದರೆ, ಒಂದು ರೋಲರ್ ಕೋಸ್ಟರ್ ಅಂದಾಜು 3ರಿಂದ 4ಜಿ ಸೃಷ್ಟಿಸುತ್ತದೆ. ಯುದ್ಧ ವಿಮಾನಗಳು ಕೆಲ ಕಾಲ 9ಜಿಯನ್ನು ಎದುರಿಸುತ್ತವೆ. 28ಜಿಯಲ್ಲಿ ಮಾನವ ದೇಹ ತಕ್ಷಣವೇ ಕುಸಿದುಹೋಗುತ್ತದೆ. ಆದರೆ, ಕಿಡ್ ಇದನ್ನೂ ಎದುರಿಸಿ ಉಳಿದು, ಮಾಹಿತಿ ರವಾನಿಸುತ್ತಲೇ ಇತ್ತು. ಅದರ ಉಷ್ಣತಾ ಕವಚ ಅದಕ್ಕೆ ರಕ್ಷಣೆ ಒದಗಿಸಿತ್ತು. ಅದು ಹೊಂದಿದ್ದ ಸೆನ್ಸರ್‌ಗಳು ತಾಪಮಾನಗಳು, ಒತ್ತಡ ಮತ್ತು ಒತ್ತಡದ ಮಟ್ಟಗಳನ್ನು ದಾಖಲಿಸುತ್ತಾ ಹೋಯಿತು.
ಕಿಡ್ ಕ್ಯಾಪ್ಸೂಲ್ ಅನ್ನು ಬಾಹ್ಯಾಕಾಶದ ಶಾಂತತೆಯ ಬದಲು, ವಾತಾವರಣದ ಉಷ್ಣತೆಯನ್ನು ಎದುರಿಸಲು ಸಿದ್ಧಪಡಿಸಿದ್ದರಿಂದಲೇ ಅದು ಪಾರಾಗಲು ಸಾಧ್ಯವಾಯಿತು. ಇತರ ಉಪಗ್ರಹಗಳು ಕೇವಲ ಬಾಹ್ಯಾಕಾಶದಲ್ಲಿ ಸುಗಮ ಕಾರ್ಯಾಚರಣೆಗೆ ನಿರ್ಮಾಣಗೊಂಡಿದ್ದವು. ಆದರೆ, ಕಿಡ್ ಅನ್ನು ವಾತಾವರಣದ ಮರು ಪ್ರವೇಶ ತಡೆಯುವ ಸಲುವಾಗಿಯೇ ವಿನ್ಯಾಸಗೊಳಿಸಲಾಗಿತ್ತು. ಬಲವಾದ ನಿರ್ಮಾಣ, ಉಷ್ಣತಾ ಕವಚ ಮತ್ತು ಸ್ವಾಯತ್ತ ವ್ಯವಸ್ಥೆಗಳು ಈ ವ್ಯತ್ಯಾಸಕ್ಕೆ ಕಾರಣವಾಗಿದ್ದವು.
ಆರ್ಬಿಟಲ್ ಪ್ಯಾರಾಡೈಮ್ ಸಹ ಕಿಡ್ ತೀವ್ರ ತಾಪಮಾನಗಳಲ್ಲಿ ಪಾರಾಗಿ, ಆಂತರಿಕ ತಾಪಮಾನದ ಮಾಹಿತಿಗಳನ್ನು ರವಾನಿಸಿತ್ತು ಎಂದು ಖಾತ್ರಿಪಡಿಸಿದೆ. ಅದು ಅಂತಿಮವಾಗಿ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಇಳಿದಿದೆ.
ಒಂದು ವೇಳೆ ಅದನ್ನು ಪಡೆದುಕೊಳ್ಳಲು ಸಾಧ್ಯವಾದರೆ, ಅದು ಬೆಲೆಕಟ್ಟಲಾಗದ ಸಾಕ್ಷ್ಯವಾಗಲಿದೆ. ಒಂದು ವೇಳೆ ಅದು ಎಂದಿಗೂ ಕಾಣಿಸಿಕೊಳ್ಳದೇ ಹೋದರೂ, ಅದು ಈಗಾಗಲೇ ಅಪಾರ ಮೌಲ್ಯಯುತ ಮಾಹಿತಿಗಳನ್ನು ರವಾನಿಸಿದೆ. ಇದು ಇಂಜಿನಿಯರ್‌ಗಳಿಗೆ ಎಲ್ಲವೂ ಹಾಳಾದಾಗ ಯಾವ ಯಾವ ವಸ್ತುಗಳು ಹೇಗೆ ವರ್ತಿಸುತ್ತವೆ ಎನ್ನುವ ಮಾಹಿತಿ ಒದಗಿಸಿದೆ.
ಇಸ್ರೋಗೆ ಪಿಎಸ್‌ಎಲ್‌ವಿ-ಸಿ62 ಯೋಜನೆ ಬಾಹ್ಯಾಕಾಶ ತಪ್ಪುಗಳನ್ನು ಕ್ಷಮಿಸುವುದಿಲ್ಲ ಎನ್ನುವ ಪಾಠವನ್ನು ಮರಳಿ ಜ್ಞಾಪಿಸಿದೆ. ಆರ್ಬಿಟಲ್ ಪ್ಯಾರಾಡೈಮ್ ಸಂಸ್ಥೆಗೆ ಕಿಡ್ ಉಳಿದದ್ದು ಅದರ ನಿರೀಕ್ಷೆಯನ್ನೂ ಮೀರಿದೆ.
ಇದರಲ್ಲಿನ ದೊಡ್ಡ ಪಾಠ ಸರಳ. ಪ್ರಗತಿ ಯಾವಾಗಲೂ ಯಶಸ್ಸಿನಿಂದಲೇ ಲಭಿಸುವುದಿಲ್ಲ. ಕೆಲವು ಬಾರಿ ವೇಗವಾಗಿ ಸೋಲು ಕಾಣುವುದರಿಂದ, ಆದರೂ ಶರಣಾಗಲು ಒಪ್ಪದಿರುವುದರಿಂದ ಯಶಸ್ಸು ಲಭಿಸುತ್ತದೆ.







