Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಲೋಹಿಯಾ ರೂಪಿಸಿದ ವಿರೋಧ ಪಕ್ಷದ ಐಡಿಯಾ

ಲೋಹಿಯಾ ರೂಪಿಸಿದ ವಿರೋಧ ಪಕ್ಷದ ಐಡಿಯಾ

ಇಂದು ರಾಮ ಮನೋಹರ ಲೋಹಿಯಾ ಜನ್ಮದಿನ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್23 March 2024 10:26 AM IST
share
ಲೋಹಿಯಾ ರೂಪಿಸಿದ ವಿರೋಧ ಪಕ್ಷದ ಐಡಿಯಾ
ಲೋಹಿಯಾ ಕಾಲದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಉಳಿದ ಪಕ್ಷಗಳನ್ನು ‘ವಿರೋಧ ಪಕ್ಷ’ ಎಂದು ಕರೆಯುವುದನ್ನು, ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಉಪಗ್ರಹ ಎಂಬಂತೆ ಕಾಣುವ ಬಗೆಯನ್ನು ಲೋಹಿಯಾ ಟೀಕಿಸಿದರು. ‘ವಿರೋಧ ಪಕ್ಷ’ ಎಂದು ಕರೆಯಲಾಗುವ ಅನೇಕ ಪಕ್ಷಗಳು ಆಡಳಿತ ಪಕ್ಷದ ಕೈಗೊಂಬೆಯಾಗಿರುವುದನ್ನು ಗುರುತಿಸಿದರು. ಈ ಕಾಲದ ಪಾರ್ಲಿಮೆಂಟಿನಲ್ಲಿ ನವೀನ್ ಪಟ್ನಾಯಕ್‌ರ ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್‌ಗಳನ್ನು ನೋಡಿದರೆ ಲೋಹಿಯಾ ಮಾತು ನಿಮಗೆ ಸರಿಯಾಗಿ ಅರ್ಥವಾಗಬಹುದು!

ಇಂಡಿಯಾದ ವಿರೋಧ ಪಕ್ಷಗಳು ಕಳೆದೊಂದು ವರ್ಷದಿಂದ ಒಗ್ಗೂಡಿ ರೂಪಿಸಿ ಕೊಂಡಿರುವ ‘ಇಂಡಿಯಾ’ ಒಕ್ಕೂಟ ಈಗ ಲೋಕಸಭಾ ಚುನಾವಣೆಗಿಳಿದಿದೆ; ಆದರೆ ಈ ಒಕ್ಕೂಟಕ್ಕೆ ಅಗತ್ಯವಾಗಿದ್ದ ತಾತ್ವಿಕ ಚೌಕಟ್ಟು ಕೊನೆಗೂ ರೂಪುಗೊಂಡಂತಿಲ್ಲ. ಆಡಳಿತ ವಿರೋಧಿ ಅಲೆ ಹಾಗೂ ಜನತೆಯ ಸಿಟ್ಟು ಸ್ಫೋಟಗೊಂಡರೆ ಯಾವ ತಾತ್ವಿಕ ಚೌಕಟ್ಟಿಗೂ ದಕ್ಕದ ಫಲಿತಾಂಶ ಹೊಮ್ಮಬಲ್ಲದು ಎಂದು ಈ ಪಕ್ಷಗಳು ಕಾಯುತ್ತಿರಬಹುದು. ಆದರೂ, ವಿರೋಧ ಪಕ್ಷಗಳ ಪ್ರಬಲ ಒಕ್ಕೂಟದ ಪ್ರಥಮ ತಳಹದಿಯನ್ನು ರೂಪಿಸಿದ ಲೋಹಿಯಾ ಮಾರ್ಗವನ್ನು ಈ ಪಕ್ಷಗಳು ಮರೆತಂತಿವೆ. ಆಗಾಗ್ಗೆಯಾದರೂ ರಾಮಮನೋಹರ ಲೋಹಿಯಾರ ಹೆಸರು ಹೇಳುತ್ತಿದ್ದ ನಿತೀಶ್‌ಕುಮಾರ್ ಬಿಜೆಪಿ ಏಜೆಂಟ್ ಥರ ಕೆಲ ಕಾಲ ‘ಇಂಡಿಯಾ’ ಒಕ್ಕೂಟದಲ್ಲಿದ್ದು ಕೈಕೊಟ್ಟು ಹೋಗಿದ್ದಾರೆ. ಹೀಗೆ ಕೈ ಕೊಡುವವರ ನಡುವೆಯೂ ಹಿಂದೊಮ್ಮೆ ವಿರೋಧ ಪಕ್ಷಗಳನ್ನು ಒಗ್ಗೂಡಿಸಿದ್ದ ಸಮಾಜವಾದಿ ಚಿಂತಕ-ನಾಯಕ ಲೋಹಿಯಾರ ಹುಟ್ಟುಹಬ್ಬದ (ಮಾರ್ಚ್ ೨೩) ನೆವದಲ್ಲಾದರೂ ಇವತ್ತಿನ ವಿರೋಧ ಪಕ್ಷಗಳು ವಿರೋಧ ಪಕ್ಷ ಹಾಗೂ ವಿರೋಧಿ ಒಕ್ಕೂಟದ ಐಡಿಯಾಗಳನ್ನು ಲೋಹಿಯಾರಿಂದ ಕಲಿಯಬೇಕು.

ಲೋಹಿಯಾ ಕಾಲದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಉಳಿದ ಪಕ್ಷಗಳನ್ನು ‘ವಿರೋಧ ಪಕ್ಷ’ ಎಂದು ಕರೆಯುವುದನ್ನು, ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಉಪಗ್ರಹ ಎಂಬಂತೆ ಕಾಣುವ ಬಗೆಯನ್ನು ಲೋಹಿಯಾ ಟೀಕಿಸಿದರು. ‘ವಿರೋಧ ಪಕ್ಷ’ ಎಂದು ಕರೆಯಲಾಗುವ ಅನೇಕ ಪಕ್ಷಗಳು ಆಡಳಿತ ಪಕ್ಷದ ಕೈಗೊಂಬೆಯಾಗಿರುವುದನ್ನು ಗುರುತಿಸಿದರು. ಈ ಕಾಲದ ಪಾರ್ಲಿಮೆಂಟಿನಲ್ಲಿ ನವೀನ್ ಪಟ್ನಾಯಕ್‌ರ ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್‌ಗಳನ್ನು ನೋಡಿದರೆ ಲೋಹಿಯಾ ಮಾತು ನಿಮಗೆ ಸರಿಯಾಗಿ ಅರ್ಥವಾಗಬಹುದು!

‘‘ಅಧಿಕಾರ ಪಡೆಯದ ರಾಜಕೀಯ ಪಕ್ಷಗಳು ಮುದುಡಿ ಹೋಗುತ್ತವೆ. ಆದ್ದರಿಂದಲೇ ರಾಜಕಾರಣಕ್ಕೆ ‘ವಿಲ್ ಟು ಪವರ್’, ಅಂದರೆ ಅಧಿಕಾರ ಪಡೆಯುವ ಇಚ್ಛಾಶಕ್ತಿ, ಅತ್ಯಗತ್ಯ; ಅದರಲ್ಲೂ ಶಿಸ್ತುಬದ್ಧ ಯೋಜನೆಯುಳ್ಳ ಇಚ್ಛಾಶಕ್ತಿ ಅತ್ಯಗತ್ಯ. ಏಳು ವರ್ಷಗಳಲ್ಲಿ ಅಧಿಕಾರ; ನೂರು ವರ್ಷಗಳ ಹೋರಾಟ... ಇದು ಸಮಾಜವಾದಿ ಪಾರ್ಟಿಯ ಗುರಿ ಆಗಬೇಕು’’ ಎಂದು ಲೋಹಿಯಾ ಹೇಳುತ್ತಿದ್ದರು. ಚುನಾವಣೆಯ ಸೋಲು, ಗೆಲುವುಗಳನ್ನು ಲೋಹಿಯಾ ನೋಡುತ್ತಿದ್ದ ರೀತಿಯೂ ಭಿನ್ನವಾಗಿತ್ತು. ಬಹುತೇಕ ನಾಯಕರಂತೆ ಚುನಾವಣೆ ಸೋತ ಮುಂದಿನ ಐದು ವರ್ಷ ಅವರು ಕಣ್ಮರೆಯಾಗುತ್ತಿರಲಿಲ್ಲ. ಎಲ್ಲರಂತೆ ಲೋಹಿಯಾ ಕೂಡ ಸೋಲಿನಿಂದ ಕುಗ್ಗಿದರೂ, ಸೋಲನ್ನು ಸ್ವೀಕರಿಸಿ, ಮುಂದಿನ ರಾಜಕಾರಣದ ಹೆಜ್ಜೆಗಳನ್ನು ವಿವರಿಸಿಕೊಳ್ಳುತ್ತಿದ್ದರು.

ವಿರೋಧ ಪಕ್ಷವೊಂದು ಪಾರ್ಲಿಮೆಂಟ್ ಅಥವಾ ವಿಧಾನಸಭೆಯೊಳಗೆ ಮಾತ್ರವೇ ಕೆಲಸ ಮಾಡಬೇಕೆಂದಿಲ್ಲ; ಈ ಸಂಸ್ಥೆಗಳ ಹೊರಗೇ ತಮ್ಮ ಕೆಲಸ ಹೆಚ್ಚು ಇದೆ ಎಂದು ತಿಳಿದು ಲೋಹಿಯಾ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದರು. ನೆಹರೂ ವಿರುದ್ಧ ಚುನಾವಣೆಗೆ ನಿಂತು ಸೋತರೂ, ನೆಹರೂ ಆಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿದ ನೆಮ್ಮದಿಯಲ್ಲಿದ್ದವರು ಲೋಹಿಯಾ! ನೆಹರೂ ಪಡೆದ ೧,೧೮,೯೩೧ ಮತಗಳ ಎದುರು ಲೋಹಿಯಾ ಪಡೆದ ೫೪,೩೬೦ ವೋಟುಗಳು ನೆಹರೂ ಸರಕಾರದ ನೀತಿಗಳ ಬಗ್ಗೆ ಸ್ಪಷ್ಟ ಭಿನ್ನಮತವುಳ್ಳ ಜನರ ವೋಟುಗಳಾಗಿದ್ದವು; ತಮ್ಮ ಪಕ್ಷ ಅಂಥ ಭಿನ್ನಮತವನ್ನು ರೂಪಿಸುವ ಸಮರ್ಥ ಸಾಧನವಾಗಿದ್ದು ಹಾಗೂ ಜನ ತಮ್ಮ ಸಮಾಜವಾದಿ ಚಿಂತನೆಯನ್ನು ಒಪ್ಪಿ ಕೂಡ ಮತ ಹಾಕಿದ್ದು ಲೋಹಿಯಾರ ಮುಂದಿನ ರಾಜಕೀಯ ಹಾದಿಯ ದಿಕ್ಕುಗಳನ್ನು ತೋರಿಸುತ್ತಿತ್ತು.

ಪಾರ್ಲಿಮೆಂಟಿನಲ್ಲಿ ನಿತ್ಯ ವಿರೋಧಪಕ್ಷವಾಗಿ ಸೆಣಸುತ್ತಿದ್ದ ಲೋಹಿಯಾ ಆಳವಾದ ಅಧ್ಯಯನ, ಪಕ್ಕಾ ದಾಖಲೆಗಳ ಆಧಾರದಿಂದ ಮಾತಾಡುತ್ತಿದ್ದರು. ಒಂದು ಕಾಲಕ್ಕೆ ತಮ್ಮ ಗುರುವೂ ಆಗಿದ್ದ ನೆಹರೂ ಅವರನ್ನೇ ನೈತಿಕ ಪ್ರಶ್ನೆಗಳ ಮೂಲಕ ಅಲ್ಲಾಡಿಸುತ್ತಿದ್ದರು. ‘ಪಾರ್ಲಿಮೆಂಟ್ ದೇಶದ ಒಡೆಯ; ಪ್ರಧಾನಮಂತ್ರಿ ದೇಶದ ಸೇವಕರು. ಸೇವಕರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು...’ ಎಂದರು. ‘ಪಾರ್ಲಿಮೆಂಟಿನಲ್ಲಿ ಲೋಹಿಯಾ ಸಂತೆಯ ಭಾಷೆ ಬಳಸುತ್ತಿದ್ದಾರೆ’ ಎಂದು ನೆಹರೂ ದೂರಿದಾಗ, ಲೋಹಿಯಾ ಕೊಟ್ಟ ಉತ್ತರ: ‘‘ಪ್ರಧಾನಮಂತ್ರಿಯವರು ‘ಗೋ ಟು ಹೆಲ್’ ಎಂಬ ಭಾಷೆ ಬಳಸಬಹುದಾದರೆ, ನಾನು ಮಹಿಳಾ ಎನ್ನುವ ಬದಲು ‘ಔರತ್’ ಎಂದರೆ ಹೇಗೆ ತಪ್ಪಾಗುತ್ತದೆ?’’

ಮುಂದೊಮ್ಮೆ ಪ್ರಧಾನಮಂತ್ರಿ ನೆಹರೂ ಅವರಿಗೆ ಹುಷಾರಿಲ್ಲದಿದ್ದಾಗ, ‘ನೆಹರೂ ನಂತರ ಯಾರು?’ ಎಂಬ ಪ್ರಶ್ನೆ ಬಂತು. ರಾಜಕೀಯ ಪಕ್ಷಗಳ ವರಸೆ ಬಲ್ಲವರಾಗಿದ್ದ ಲೋಹಿಯಾ, ‘ಇನ್ಯಾರು? ನೆಹರೂ ಮಗಳು ಇಂದಿರಾ ಪ್ರಿಯದರ್ಶಿನಿ. ಕೊನೇಪಕ್ಷ ಬೆಳಗ್ಗೆ ಎದ್ದಾಗ ಪತ್ರಿಕೆಗಳಲ್ಲಿ ಒಂದು ಸುಂದರ ಮುಖವಾದರೂ ಕಾಣುತ್ತದೆ!’ ಎಂದರು. ನೆಹರೂ ನಂತರವಲ್ಲದಿದ್ದರೂ, ಆಮೇಲೆ ಇಂದಿರಾಗಾಂಧಿ ಪ್ರಧಾನಿಯಾದರು. ಆಗಲೂ ಲೋಕಸಭೆಯಲ್ಲಿ ಲೋಹಿಯಾ ಖಡಕ್ ಪ್ರಶ್ನೆಗಳನ್ನು ಎತ್ತುತ್ತಿದ್ದರು; ಒಮ್ಮೆ ಯಾರೋ ಬಂದು ಇಂದಿರಾಗಾಂಧಿಯವರ ಮಗನ ಬಗ್ಗೆ ಲೋಹಿಯಾಗೆ ದೂರು ಹೇಳಿದ. ಆಗ ಲೋಹಿಯಾ ‘ವಿರೋಧ ಪಕ್ಷವಿರುವುದು ಇಂಥ ಚಿಲ್ಲರೆ ಪ್ರಶ್ನೆಗಳನ್ನು ಎತ್ತುವುದಕ್ಕಲ್ಲ’ ಎಂದು ಅವನನ್ನು ಬೈದು ಕಳುಹಿಸಿದರು.

ಕ್ರಮೇಣ ಸಮಾಜವಾದಿ ಪಕ್ಷ ಕಾಂಗ್ರೆಸಿಗೆ ಪರ್ಯಾಯವಾಗಿ ಮೂಡಿ ಬಂದರೂ ಅಧಿಕಾರ ಹಿಡಿಯುವ ಹಾದಿ ದೂರವಿತ್ತು. ವಿರೋಧ ಪಕ್ಷಗಳ ಮತಗಳು ಹಂಚಿ ಹೋಗುವುದನ್ನು ತಡೆಯದಿದ್ದರೆ ಈ ಗುರಿ ಸಾಧಿಸುವುದು ಕಷ್ಟ ಎಂಬುದು ಲೋಹಿಯಾಗೆ ಗೊತ್ತಾಯಿತು. ಆಗ ಲೋಹಿಯಾ ಕೆಲವು ವಿರೋಧ ಪಕ್ಷಗಳನ್ನು ಒಗ್ಗೂಡಿಸಿದರು. ಹಿಂದಿನ ಚುನಾವಣೆಗಳ ಮತಗಳ ಆಧಾರದ ಮೇಲೆ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸೂತ್ರ ರೂಪಿಸಿದರು. ಅದರಲ್ಲಿ ಜನಸಂಘವೂ ಸೇರಿತ್ತು. ಅಂಥದೊಂದು ಸಭೆಗೆ ಕರ್ನಾಟಕದಿಂದ ಜೆ.ಎಚ್. ಪಟೇಲರು ದಿಲ್ಲಿಗೆ ಹೋಗಿದ್ದರು. ಕರ್ನಾಟಕದ ಸಮಾಜವಾದಿ ಪಕ್ಷದ ನಾಯಕರಾಗಿದ್ದ ಶಾಂತವೇರಿ ಗೋಪಾಲಗೌಡರು ಅನಾರೋಗ್ಯದ ಕಾರಣದಿಂದ ಆ ಸಭೆಗೆ ಹೋಗಿರಲಿಲ್ಲ. ಮೀಟಿಂಗ್ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದ ಪಟೇಲರು ಸಭೆಯ ವಿವರಗಳನ್ನು ಕೊಟ್ಟಾಗ ಗೋಪಾಲಗೌಡರು ಹೇಳಿದರು: ‘ವಿರೋಧಿ ಒಕ್ಕೂಟಕ್ಕೆ ಜನಸಂಘದವರನ್ನು ಸೇರಿಸಿಕೊಂಡಿದ್ದು ತಪ್ಪು.’ ಲೋಹಿಯಾ ಮುಂದೆ ಚುನಾವಣೆಗೆ ನಿಂತಾಗ ಜನಸಂಘದವರು ಅವರ ವಿರುದ್ಧವೇ ಕೆಲಸ ಮಾಡಿದ್ದು ಲೋಹಿಯಾಗೂ ಗೊತ್ತಾಯಿತು. ಗೋಪಾಲಗೌಡರು ಊಹಿಸಿದ್ದು ಕರಾರುವಾಕ್ಕಾಗಿತ್ತು.

ಆದರೂ, ಅಧಿಕಾರದ ಇಚ್ಛಾಶಕ್ತಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಬಲ್ಲದೆಂದು ಲೋಹಿಯಾ ನಂಬಿದ್ದು ಸರಿಯಾಗಿತ್ತು. ಸಾರ್ವಜನಿಕ ಜೀವನಕ್ಕಿಳಿದವರು ಎಂಥ ಪರಿಸ್ಥಿತಿಯಲ್ಲೂ ಆಶಾವಾದವನ್ನು ಬಿಡದೆ ಕೆಲಸ ಮಾಡುತ್ತಿರಬೇಕೆಂಬುದು ಲೋಹಿಯಾ ನಿಲುವಾಗಿತ್ತು. ರಾಜಕಾರಣ ಎಷ್ಟೇ ಕೆಟ್ಟರೂ ಅದನ್ನು ರಿಪೇರಿ ಮಾಡುವ ಹೊಸ ನಾಯಕರು, ಜನಸಾಮಾನ್ಯರು ತಯಾರಾಗುತ್ತಲೇ ಇರುತ್ತಾರೆ ಎಂಬುದರಲ್ಲಿ ಲೋಹಿಯಾಗೆ ವಿಶ್ವಾಸವಿತ್ತು. ಇಂಥ ನಂಬಿಕೆ, ಬದ್ಧತೆಗಳಿಂದ ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದ ಲೋಹಿಯಾ ಸಮಾಜವಾದಿ ಪಕ್ಷದ ನಿಜವಾದ ಬೆನ್ನೆಲುಬು ಕಾರ್ಯಕರ್ತರು ಎಂದು ನಂಬಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು; ಅವರನ್ನೆಲ್ಲ ತಾತ್ವಿಕ ರಾಜಕಾರಣಕ್ಕೂ, ಚುನಾವಣಾ ರಾಜಕಾರಣಕ್ಕೂ ಅಣಿ ಮಾಡುತ್ತಿದ್ದರು. ಹೊಟ್ಟೆ ತುಂಬಿದ ಜನ ಸಿನಿಕರಾಗಿರಬಹುದು; ಆದರೆ ನಿತ್ಯ ಹೊಟ್ಟೆಬಟ್ಟೆಗೆ ಪರದಾಡುವ ಜನ ಇಲ್ಲಿ ಏನಾದರೂ ಬದಲಾವಣೆ ಆದೀತೆಂದು ಪ್ರತೀ ಚುನಾವಣೆಯಲ್ಲೂ ಕಾಯುತ್ತಿರುತ್ತಾರೆ; ಅಂಥ ಜನರ ರಾಜಕೀಯ ಪ್ರಜ್ಞೆಯನ್ನು ಸರಿಯಾಗಿ ಹರಿತಗೊಳಿಸಿದರೆ ಅವರೇ ರಾಜಕೀಯ ಬದಲಾವಣೆ ತರುತ್ತಾರೆ ಎಂದು ಲೋಹಿಯಾ ನಂಬಿದ್ದರು. ‘ಬದಲಾವಣೆಯ ಗಾಳಿಯನ್ನು ಯಾವುದೂ ತಡೆಯಲಾಗದು’ ಎನ್ನುತ್ತಿದ್ದ ಲೋಹಿಯಾ ನಂಬಿಕೆ ಇವತ್ತು ಕೂಡ ನಮ್ಮನ್ನು ಆಶಾವಾದದ ಹಾದಿಯಲ್ಲಿಡಬಲ್ಲದು.

ಚುನಾವಣಾ ಪ್ರಣಾಳಿಕೆಯೆನ್ನುವುದು ರಾಜಕೀಯ ಪಕ್ಷವೊಂದು ಸಮುದಾಯದ ಕನಸನ್ನು ಸಾಮೂಹಿಕವಾಗಿ ಮಂಡಿಸುವ ದಾಖಲೆಯೆಂಬ ಸ್ಪಷ್ಟತೆ ಲೋಹಿಯಾಗಿತ್ತು. ಸಮಾಜವಾದಿ ಪಕ್ಷದ ಪ್ರಣಾಳಿಕೆಗಳಲ್ಲಿದ್ದ ಭೂ ಹಂಚಿಕೆ, ಭಾಷಾ ನೀತಿ, ಲಿಂಗ ಸಮಾನತೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಜಾತ್ಯತೀತ ರಾಷ್ಟ್ರೀಯತೆ, ಭೂ ಕಂದಾಯ ರದ್ದತಿ, ರೈತ ಪರ ನೀತಿ ಮುಂತಾದ ಅನೇಕ ಅಂಶಗಳು ಮುಂದೆ ವಿವಿಧ ಪಕ್ಷಗಳ ಸರಕಾರಗಳಲ್ಲಿ ಜಾರಿಗೆ ಬಂದಿರುವುದನ್ನು ಮರೆಯಬಾರದು. ಹಿಂದುಳಿದ ವರ್ಗಗಳ ರಾಜಕೀಯ ಕುರಿತು ಸಮಾಜವಾದಿ ಪಕ್ಷ ಮಾಡಿದ ಪ್ರಯೋಗಗಳನ್ನು ಕಳೆದ ದಶಕಗಳ ವಿವಿಧ ರಾಜಕೀಯ ಪಕ್ಷಗಳು ಅನುಕರಿಸಿವೆ.

ಲೋಹಿಯಾರ ನಿತ್ಯದ ರಾಜಕಾರಣ ಹಾಗೂ ಚುನಾವಣಾ ರಾಜಕಾರಣಗಳು ಸ್ವಾತಂತ್ರ್ಯ ಚಳವಳಿಯ ಕಾಲದ ಆದರ್ಶವನ್ನು ವಿಸ್ತರಿಸುತ್ತಿದ್ದವು. ಲೋಹಿಯಾರ ಚುನಾವಣಾ ಭಾಷಣಗಳು ಜನರಿಗೆ ನಿಜವಾದ ರಾಜಕೀಯ ಶಿಕ್ಷಣ ನೀಡುವ ಸಾಧನಗಳಾಗಿದ್ದವು. ಅವರ ಸಭಿಕರು ತಮ್ಮ ನಾಯಕ ಮಾತಾಡುವುದನ್ನು ಕೇಳಿಸಿಕೊಂಡು ನಿಜಕ್ಕೂ ಸ್ಫೂರ್ತಿಗೊಳ್ಳಲು ಕಾತರರಾಗಿದ್ದ ಜನರಾಗಿದ್ದರು. ಅರವತ್ತರ ದಶಕದಲ್ಲಿ ಲೋಹಿಯಾ ಎರಡು ಸಲ ಚುನಾವಣೆ ಗೆದ್ದು ವಿರೋಧ ಪಕ್ಷದಲ್ಲಿ ನಿಂತು ಲೋಕಸಭೆಯಲ್ಲಿ ಮಂಡಿಸಿದ ವಿಚಾರಗಳು ಎಲ್ಲ ಕಾಲದ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ ಅದ್ಭುತ ಕೈಪಿಡಿಗಳಂತಿವೆ. ಕೆಲವೊಮ್ಮೆ ಸಭಾಧ್ಯಕ್ಷರು ಅವರ ಸಮಯವನ್ನು ಕಡಿತಗೊಳಿಸಿದಾಗ ಉಳಿದ ವಿರೋಧ ಪಕ್ಷಗಳ ಸದಸ್ಯರು ‘ನಮಗೆ ನಿಗದಿಯಾಗಿರುವ ವೇಳೆಯನ್ನೂ ಲೋಹಿಯಾಗೇ ಕೊಡಿ’ ಎನ್ನುತ್ತಿದ್ದರು. ವಿರೋಧ ಪಕ್ಷದ ಜವಾಬ್ದಾರಿ ಆಡಳಿತ ಪಕ್ಷಕ್ಕಿಂತ ದೊಡ್ಡದು ಎಂಬ ಅಪೂರ್ವ ಸಂದೇಶ ವಿರೋಧ ಪಕ್ಷಗಳ ರಾಜಕಾರಣವನ್ನು ರೂಪಿಸಿದ ಲೋಹಿಯಾ ರಾಜಕೀಯ ಜೀವನದಿಂದ ಸ್ಪಷ್ಟವಾಗಿ ಹೊರ ಹೊಮ್ಮುತ್ತದೆ.

ಹ್ಯಾಪಿ ಬರ್ತ್‌ಡೇ ಡಾಕ್ಟರ್ ಸಾಹೇಬ್!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X