ಅರಮನೆ ಸ್ವಚ್ಛಗೊಳಿಸುವ ‘ಪಾಲೆ’ ಸಮುದಾಯ

ಪ್ರಾತಿನಿಧಿಕ ಚಿತ್ರ
ಇವರು ಮೂಲತಃ ಅರಮನೆಯಲ್ಲಿ ಸೇವೆ ಮಾಡುವವರು. ಅರಮನೆಯಲ್ಲಿ ಕುದುರೆ ಲಾಯವನ್ನು ಸ್ವಚ್ಛಗೊಳಿಸುವುದು, ಕುದುರೆಗಳಿಗೆ ಸ್ನಾನ ಮಾಡಿಸಿ ಚೊಕ್ಕ ಮಾಡುವುದು ಇವರ ಕುಲವೃತ್ತಿ, ಮಿಕ್ಕ ಸಮಯದಲ್ಲಿ ಅರಮನೆಯನ್ನು ಸ್ವಚ್ಛ ಮಾಡಲೂ ಸಹ ಇವರನ್ನು ಬಳಸಲಾಗುತ್ತಿತ್ತು. ಹಿಂದೆ ಮೈಸೂರು ಅರಸರ ಅರಮನೆ, ಜಾಗೀರುದಾರರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅರಮನೆ ಪಾಲೆ ಎಂಬ ಈ ಹೆಸರು ಇವರಿಗೆ ಬಂದಿದೆ.
ಕೊಡಗಿನ ಗುಲಾಮ ಸಮುದಾಯಗಳನ್ನು ಕೇವಲ ಇನ್ನೂರು ವರ್ಷಗಳ ಹಿಂದೆ ಮಾರಾಟ ಮಾಡುತ್ತಿದ್ದ ಕುರಿತು ಮಾಹಿತಿ ನೀಡಿರುವ ಪ್ರೊ. ವಿಜಯ ಪೂಣಚ್ಚ ತಂಬಂಡ ಎಂಬ ಇತಿಹಾಸಕಾರರು ತಮ್ಮ ‘ಅಮರಸುಳ್ಯ ಸಂಗ್ರಾಮ 1837’ ಗ್ರಂಥದಲ್ಲಿ ಇಲ್ಲಿನ ಸುಮಾರು ಇಪ್ಪತ್ತೆರಡು ಭಾಷಿಕ ಗುಲಾಮ ಸಮುದಾಯಗಳಲ್ಲಿ ಒಬ್ಬರಾಗಿದ್ದ ‘ಪಾಲೆ’ ಸಮುದಾಯದ ಗಂಡಸರು ಮತ್ತು ಹೆಂಗಸರನ್ನು ಕೇವಲ 12 ರೂಪಾಯಿಗೆ ಮಾರುತ್ತಿದ್ದ ಬಗ್ಗೆ ದಾಖಲಿಸಿದ್ದಾರೆ! ಈ ರೀತಿಯ ಅನೇಕ ಸನ್ನಿವೇಶಗಳಲ್ಲಿ ‘ಪಾಲೆ’ ಎಂಬ ಸಮುದಾಯದ ಪ್ರಸ್ತಾಪ ಈ ಗ್ರಂಥದಲ್ಲಿ ಆಗಾಗ ಬರುತ್ತಲೇ ಇರುತ್ತದೆ.
ಇಂತಹ ಗುಲಾಮಗಿರಿಗೆ ಒಳಗಾಗಿದ್ದ ಸಮುದಾಯವನ್ನು ‘ಅರಮನೆ ಪಾಲೆ’ ಅಂತಲೂ ಕರೆಯುತ್ತಾರೆ. ಇವರು ಮೂಲತಃ ಅರಮನೆಯಲ್ಲಿ ಸೇವೆ ಮಾಡುವವರು. ಅರಮನೆಯಲ್ಲಿ ಕುದುರೆ ಲಾಯವನ್ನು ಸ್ವಚ್ಛಗೊಳಿಸುವುದು, ಕುದುರೆಗಳಿಗೆ ಸ್ನಾನ ಮಾಡಿಸಿ ಚೊಕ್ಕ ಮಾಡುವುದು ಇವರ ಕುಲವೃತ್ತಿ, ಮಿಕ್ಕ ಸಮಯದಲ್ಲಿ ಅರಮನೆಯನ್ನು ಸ್ವಚ್ಛ ಮಾಡಲೂ ಸಹ ಇವರನ್ನು ಬಳಸಲಾಗುತ್ತಿತ್ತು. ಹಿಂದೆ ಮೈಸೂರು ಅರಸರ ಅರಮನೆ, ಜಾಗೀರುದಾರರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅರಮನೆ ಪಾಲೆ ಎಂಬ ಈ ಹೆಸರು ಇವರಿಗೆ ಬಂದಿದೆ. ಇವರನ್ನು ಅರಮನೆ ಪಾಳೆಗಾರ, ಅರಮನೆ ಸೇವಕ ಅಂತಲೂ ಕರೆಯುತ್ತಾರೆ. ಅರಸರಿಗೆ ಸೇವೆ ಮಾಡಲೇ ಮೀಸಲಾಗಿರುವ ಈ ಸಮುದಾಯಕ್ಕೆ ಅರಸರು ಕೊಟ್ಟ ‘ಪಾಲೆ ಜಮೀನು’ಗಳು ಹಿಂದೆ ಇದ್ದವು, ನಾನಾ ಕಾರಣಗಳಿಂದ ಈಗ ಈ ಜಮೀನುಗಳು ಇವರ ಕೈ ತಪ್ಪಿಹೋಗಿವೆ. ಸದರಿ ಭೂಮಿಯನ್ನು ಪುನರ್ ವಶಕ್ಕೆ ಪಡೆಯಲು ಈ ಸಮುದಾಯ ಹೋರಾಟ ಮಾಡುತ್ತಲೇ ಇದೆ.
ಮಡಿಕೇರಿ ತಾಲೂಕಿನ ಬಲ್ಲಮಾವಟಿ, ಪೆರೂರು, ಕೋರಂಗಾಲ, ನಾಪೋಕ್ಲು, ಕಕ್ಕಬ್ಬೆ, ಕುಂಜಿಲ, ಕೋಕೇರಿ, ಚೆಯ್ಯಂಡಾಣೆ, ನರಿಯಂದಡ, ಕರಡ, ಚೇಲಾವರ, ಹಾಕತ್ತೂರು, ಬಿಳಿಗೇರಿ, ಮುತ್ತಾಮುನಡಿ, ಪಾಲೆಮಾಡು, ಕಡಗದಾಳು, ಕಗ್ಗೋಡು, ಸೋಮವಾರಪೇಟೆ ತಾಲೂಕಿನ ಮಾದಾಪುರ, ಮುಕ್ಕೋಡ್ಲು, ಇಗ್ಗೋಡ್ಲು, ಹಾಲೇರಿ, ಮಾಲಂಬಿ, ಮಲ್ಹಾರೆ ಮತ್ತು ವಿರಾಜಪೇಟೆ ತಾಲೂಕಿನ ಬಾಳುಗೋಡು, ಕಂಡಿಮಕ್ಕಿ ಮುಂತಾದ ಗ್ರಾಮಗಳಲ್ಲಿ ಪಾಲೆ ಸಮುದಾಯ ನೆಲೆಸಿದೆ. ಕಂಡಿಮಕ್ಕಿಯಲ್ಲಿ ಪಾಲೆಯರದೇ ಆದ ಪ್ರತ್ಯೇಕ ದೇವಸ್ಥಾನವಿದೆ. ಇದರೊಂದಿಗೆ ಕರಿಚಾವುಂಡಿ, ಅಲ್ಲಾರಂಡ ಪೂವಕ್ಕತೆರೆ ಆರಾಧನೆಗಳನ್ನು ಕೂಡ ಮಾಡುತ್ತಾರೆ. ಇವರು ಕೊರಕಳಿ ಮೂಲಕ ಗುರುತಿಸಿಕೊಳ್ಳುತ್ತಾರೆ.
ಪಾಲೆಯರ ಜನಸಂಖ್ಯೆ 1.5 ಲಕ್ಷ ಇದೆ ಎಂದು 2011 ಜನಗಣತಿ ಅಂದಾಜು ಮಾಡಿದೆ, ಆದರೆ ಇವರೊಂದಿಗೆ ಬಾಕುಡ, ಮೊಗೇರ ಮುಂತಾದ ಅನೇಕ ಸಮುದಾಯಗಳನ್ನು ಸೇರಿಸಿ ಲೆಕ್ಕ ಹಾಕಿರುವುದರಿಂದ ಇಷ್ಟು ಜನಸಂಖ್ಯೆ ಎಂದು ಹೇಳಲಾಗುತ್ತಿದೆ, ಆದರೆ ಈ ಸಮುದಾಯದ ಏಕೈಕ ಡಬ್ಬಲ್ ಗ್ರಾಜುಯೇಟ್ ಪಿ.ಕೆ. ಮಂದಣ್ಣ ಹೇಳುವ ಪ್ರಕಾರ ಪಾಲೆಯರ ಜನಸಂಖ್ಯೆ ಕೇವಲ ಏಳು ನೂರಷ್ಟೆ! ಅರಮನೆ ಪಾಲೆಯರು ಮೇಲ್ನೋಟಕ್ಕೆ ಕೊಡವರ ಸಂಸ್ಕೃತಿಯನ್ನೇ ಪಾಲಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೂ ಪಾಲೆಯರದೇ ವಿಶೇಷ ಬುಡಕಟ್ಟು ಸಂಸ್ಕೃತಿಯಿದೆ. ಇವರು ಅರಮನೆ ಸ್ವಚ್ಛಗೊಳಿಸುವವರು ಮಾತ್ರವಲ್ಲ ಇವರು ಅರಮನೆಯ ಸೇನೆಯಲ್ಲೂ ಪ್ರಮುಖವಾಗಿ ಇದ್ದರು ಎನ್ನಲಿಕ್ಕೆ ಅರಮನೆ ಪಾಲೆಯರದೇ ಪ್ರತ್ಯೆಕ ಸೇನಾ ತುಕಡಿ ಇತ್ತೆಂದು ‘ಪಲ್ಲಾಳ ಪಳಮೆ’ಯಲ್ಲಿ ದಾಖಲಾಗಿದೆ ಎಂಬುದನ್ನು ಮಂದಣ್ಣ ಸ್ಮರಿಸುತ್ತಾರೆ. ಸಮಾಜಶಾಸ್ತ್ರಜ್ಞ ಜಿ. ರಿಕ್ಟರ್ ಅನ್ನುವವರು 1887ರಲ್ಲಿ ಪಾಲೆಗಳನ್ನು ವಿಂಗಡಿಸುವಾಗ ಪಾಲೆಗಳಲ್ಲದವರನ್ನೂ ಸೇರಿಸಿರುವುದನ್ನು ಪಾಲೆ ಸಮುದಾಯದವರು ಒಪ್ಪುವುದಿಲ್ಲ. ಇಂದು ಕೊಡಗಿನ ಇತಿಹಾಸದಲ್ಲಿ ಪಾಲೆ ಎಂದು ಇರುವ ಎಲ್ಲಾ ಉಲ್ಲೇಖಗಳು ಅರಮನೆ ಪಾಲೆಯರಿಗೆ ಮಾತ್ರ ಸಂಬಂಧಿಸಿದ್ದೇ ಹೊರತು ಇತರರನ್ನಲ್ಲ. ಇತರ ಜಾತಿಯವರನ್ನು ಈ ರೀತಿಯ ತಪ್ಪು ವಿಂಗಡಣೆಯಿಂದ ಸೇರಿಸಿದ್ದು, ಪಾಲೆಯರ ಪಾಲಿಗೆ ದೊಡ್ದ ಪ್ರಮಾದವಾಗಲು ಕಾರಣವಾಗಿದೆ ಎಂದು ಪಾಲೆಯರ ಸಂಘ ಹೇಳುತ್ತದೆ. ಅರಮನೆಪಾಲೆ ಉಳಿದು ಇತರ ರಿಕ್ಟರ್ ವಿಂಗಡಣೆಯ ಎಲ್ಲಾ ಪಾಲೆಗಳು ಪ್ರತ್ಯೇಕ ಜಾತಿ ಮಾನ್ಯತೆಯನ್ನು ಈಗಾಗಲೇ ಪಡೆದುಕೊಂಡಿವೆ. ಇವರಿಗೆ ಈಗಾಗಲೇ ಸಾಂವಿಧಾನಿಕ identity (ಅಸ್ಮಿತೆ) ಕೂಡ ಸಿಕ್ಕಿದೆ. ಆದರೆ Tribes ಪಟ್ಟಿಯಲ್ಲಿ ಬರುವ ಅರಮನೆಪಾಲೆ ಸಮುದಾಯಕ್ಕೆ ಮಾನ್ಯತೆ ಮರೀಚಿಕೆಯಾಗಲು ಕಾರಣ ಸರಿಯಾದ ಗುರುತಿಸುವಿಕೆ ಆಗದಿರುವುದೇ ಆಗಿದೆ. ಅರಮನೆಪಾಲೆಗಳು ಕಳೆದ ಎಪ್ಪತ್ತು ವರ್ಷಗಳಿಂದ ಹೋರಾಡುತ್ತಿದ್ದರೂ ಇವರಿಗೆ ಈವರೆಗೂ ಅಸ್ಮಿತೆ ಸಿಗದಿರುವುದು ದುರಂತ.
ಅರಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಮಾತ್ರ ಅರಮನೆ ಪಾಲೆ ಎನ್ನುತ್ತಿದ್ದರು. ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ‘ಉಪ್ಪಾರ ಪಾಲೆ’ಗಳು ಇದ್ದಾರೆ. ಉಪ್ಪು ತಯಾರಿಕೆ ಇವರ ವೃತ್ತಿ. ಅದೇ ರೀತಿ ‘ಕುರುಬ ಪಾಲೆ’ ಎನ್ನುವುದು ಕುರುಬ ಸಮುದಾಯದ ಉಪಜಾತಿಯಾಗಿದೆ. ಇವರೆಲ್ಲ ಮೈಸೂರು, ಮಂಡ್ಯಗಳಲ್ಲಿ ನೆಲೆಸಿದ್ದಾರೆ, ಆದರೆ ಕೊಡಗಿನ ಮೂಲನಿವಾಸಿಗಳಾದ ಅರಮನೆ ಪಾಲೆಯರಿಗೂ ಇತರ ಉಪ್ಪಾರ ಪಾಲೆ ಮತ್ತು ಕುರುಬ ಪಾಲೆಯರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅರಮನೆ ಪಾಳೆಯರು ಮೈಸೂರು ಸಂಸ್ಥಾನದೊಂದಿಗೆ ನೇರ ಸಂಬಂಧ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯ. ಇವರಿಗೆ ‘ಅರಮನೆ ಸೇವೆಯಿಂದ ಬಂದವರು’ ಎಂಬ ಒಣಹೆಮ್ಮೆ ಇದೆ. ಆದರೆ ಶಿಕ್ಷಣ, ಉದ್ಯೋಗದಲ್ಲಿ ಇವರ ಅಸ್ತಿತ್ವವೇ ಇಲ್ಲ ಎನ್ನುವುದು ಗಮನಾರ್ಹ. ಅನೇಕ ಸಮುದಾಯಗಳ ಹೆಸರಲ್ಲಿ ಪಾಲೆಯರು ಮತ್ತು ಪಾಲೆಯರ ಹೆಸರಲ್ಲಿ ಇತರ ಸಮುದಾಯಗಳು ಜಾತಿ ಪ್ರಮಾಣಪತ್ರ ಪಡೆದುದರ ಪರಿಣಾಮವಾಗಿ ಪಾಲೆಯರ ನಿಜವಾದ ಅಸ್ಮಿತೆಯೇ ಕಳೆದು ಹೋಗಿದೆ.
ಕೊಡವನಾಡಿನ ಅಪ್ಪಟ ಬುಡಕಟ್ಟುಗಳಲ್ಲಿ ಒಂದಾದ ಪಾಲೆ ಸಮುದಾಯ ತಮಗೆ ಪರಿಶಿಷ್ಟ ಪಂಗಡದ ಮಾನ್ಯತೆ ಬೇಕೆಂದು ಹೋರಾಡುತ್ತಲೇ ಇದೆ. ಈ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಗೆ ನೀಡಲಾಗಿದೆ. ಆದರೆ ಈವರೆಗೂ ಕುಲಶಾಸ್ತ್ರೀಯ ಅಧ್ಯಯನ ಮುಗಿದಿಲ್ಲ. ಈ ಕುರಿತು ತಮ್ಮ ಬೇಡಿಕೆಯನ್ನು ‘ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ’ದಿಂದ ತಮ್ಮ ಶಾಸಕರಾದ ಎ.ಎಸ್.ಪೊನ್ನಣ್ಣನವರ ಮೂಲಕ ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರಿಗೆ ಅನೇಕ ಮನವಿಗಳನ್ನು ನೀಡಲಾಗಿದೆ.
ಒಟ್ಟಾರೆ ಅರಮನೆಪಾಲೆ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಅಸ್ಮಿತೆ ಸಿಗಬೇಕಿದೆ. ಇದು ಸಿಕ್ಕರೆ ಮಾತ್ರ ಈ ನತದೃಷ್ಟ ಸಮುದಾಯಕ್ಕೆ ಒಂದಷ್ಟು ಸರಕಾರಿ ಸವಲತ್ತು, ಅನುದಾನ, ಸಾಲಸೋಲ ಸೌಲಭ್ಯ, ಮೀಸಲಾತಿ ಸಿಗಬಹುದಷ್ಟೇ.






