ಮಣಿಪುರದಲ್ಲಿ ಎಸ್ಐಆರ್-ಹೊರಗಿಡುವಿಕೆಯ ದಾರಿ

Photo Credit: AI
ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆಯ ಮೂರನೆಯ ಹಂತದಲ್ಲಿ ಮಣಿಪುರ ರಾಜ್ಯವನ್ನೂ ಒಳಗೊಳ್ಳಲಾಗಿದೆ. ಈಗಾಗಲೇ ಎಸ್ಐಆರ್ ಪ್ರಕ್ರಿಯೆ ನಾಗರಿಕ ಸಮಾಜದ ಸಂಘಟನೆಗಳಿಂದ, ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳ ಚುನಾವಣೆಗಳ ನಂತರ, ಈ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಅವಸರದಲ್ಲಿ ಕೈಗೊಂಡ ಎಸ್ಐಆರ್ ಪ್ರಕ್ರಿಯೆ ತೀವ್ರ ಟೀಕೆಗೊಳಗಾಗಿದೆ. ಮತದಾರರ ಪಟ್ಟಿಯಿಂದ ಮತದಾರರ ಅಸಮಾನ ಹಾಗೂ ಒಟ್ಟಾರೆ ಹೊರಗಿಡುವಿಕೆಯ ಪರಿಣಾಮವಾಗಿ ರಾಜಕೀಯವಾಗಿ ಅನಪೇಕ್ಷಿತ ಎನಿಸುವ ಸಮುದಾಯಗಳು ಹಾಗೂ ಮತದಾರರ ಮತದಾನದ ಹಕ್ಕು ನಿರಾಕರಣೆಗೊಳಗಾಗಿರುವುದು ನಾಗರಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜಾಗೃತ ನಾಗರಿಕರು ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ್ದು, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಭುತ್ವ ಮತ್ತು ಆಡಳಿತಾರೂಢ ಪಕ್ಷಗಳ ಪಕ್ಷಪಾತದ ನಿಲುವನ್ನು ಖಂಡಿಸಿದ್ದಾರೆ. 2029ರ ಚುನಾವಣೆಗಳ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ಷೇತ್ರ ಮರುವಿಂಗಡಣೆ (De limitation) ಪ್ರಕ್ರಿಯೆ ಮತ್ತು ಜನಗಣತಿಯ ಬಗ್ಗೆಯೂ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಾಳಜಿಗಳು ಮಣಿಪುರಕ್ಕೂ ಅನ್ವಯಿಸುತ್ತವೆ. ಮೇಲಾಗಿ ಮಣಿಪುರದಲ್ಲಿರುವ ಸನ್ನಿವೇಶದ ಕೆಲವು ವಿಶಿಷ್ಟ ಲಕ್ಷಣಗಳು ಹೊರ ಜಗತ್ತಿನ, ಕೆಲವೊಮ್ಮೆ ರಾಜ್ಯದಲ್ಲಿ ಆಂತರಿಕವಾಗಿಯೂ ಸಹ, ಅರಿವಿಗೆ ಬಾರದಿರುವ ಸಾಧ್ಯತೆಗಳಿರುವುದರಿಂದ, ಮಣಿಪುರದಲ್ಲಿ ಎಸ್ಐಆರ್ ಜಾರಿಗೊಳಿಸುವುದು ಇನ್ನೂ ಹೆಚ್ಚು ಅತಿರೇಕದ ನಡೆ ಎನಿಸುತ್ತದೆ.
ಭಗ್ನ ಸಾಮಾಜಿಕ ಸಂರಚನೆ
ಮೊದಲನೆಯದಾಗಿ ಮಣಿಪುರ ತೀವ್ರವಾದ ಜನಾಂಗೀಯ ಸಂಘರ್ಷವನ್ನು ಎದುರಿಸುತ್ತಿದೆ. ಬಹುಸಂಖ್ಯಾತ ಮೈತೈ ಸಮುದಾಯ ಜನಸಂಖ್ಯೆಯ ಶೇ. 54ರಷ್ಟಿದ್ದು ಇಂಫಾಲದ ದಟ್ಟ ಕಣಿವೆಯಲ್ಲಿ ನೆಲೆಸಿದೆ, ಕುಕಿ-ರೆ ಸಮುದಾಯ ಶೇ. 15ರಷ್ಟಿದ್ದು ಬೆಟ್ಟಗುಡ್ಡಗಳ ಪ್ರದೇಶದ ಸುತ್ತ ನೆಲೆಸಿದ್ದಾರೆ ಮತ್ತು ಇತ್ತೀಚೆಗೆ ಹೆಚ್ಚಾಗುತ್ತಿರುವ ನಾಗಾ ಸಮುದಾಯ ಶೇ. 26ರಷ್ಟಿದ್ದು ಪ್ರಧಾನವಾಗಿ ಮಣಿಪುರದ ಉತ್ತರ ಭಾಗದಲ್ಲಿ ನೆಲೆಸಿದ್ದಾರೆ. ಈ ಮೂರೂ ಸಮುದಾಯಗಳು ಪ್ರಧಾನವಾಗಿ ಮಣಿಪುರದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಈ ಜನಾಂಗಗಳ ನಡುವಿನ ಸಂಘರ್ಷದಲ್ಲಿ ಸಂಭವಿಸಿರುವ ದಾಳಿಗಳಲ್ಲಿ ಮತ್ತು ವ್ಯವಸ್ಥಿತ ಹತ್ಯಾಕಾಂಡಗಳಲ್ಲಿ, ಪ್ರತೀಕಾರದ ದಾಳಿಗಳಲ್ಲಿ ಈವರೆಗೂ 260 ಜನರು ಮೃತಪಟ್ಟಿದ್ದು 60 ಸಾವಿರ ಜನರು ಮಣಿಪುರದ ಒಳಗೆ ಮತ್ತು ಹೊರಗೆ ಸ್ಥಳಾಂತರಗೊಂಡಿದ್ದಾರೆ.
ಈ ದಾಳಿಗಳಲ್ಲಿ ನೂರಾರು ಹಳ್ಳಿಗಳು, ಪೂಜಾ ಸ್ಥಳಗಳು ಸುಟ್ಟು ಭಸ್ಮವಾಗಿವೆ. ಊಹಿಸಲಾಗದಂತಹ ದೌರ್ಜನ್ಯಗಳು ಸಂಭವಿಸಿವೆ. ಶಿರಚ್ಛೇದನ, ಅಂಗವಿಚ್ಛೇದನ, ಅತ್ಯಾಚಾರ ಮೊದಲಾದ ದೌರ್ಜನ್ಯಗಳು ಸಾಮೂಹಿಕ ಶಿಕ್ಷೆಯ ರೂಪದಲ್ಲಿ ಸಂಭವಿಸಿವೆ. ಇದಕ್ಕೆ ಬಲಿಯಾದವರಲ್ಲಿ ಕುಕಿ-ರೆ ಸಮುದಾಯದ ಜನರೇ ಹೆಚ್ಚಾಗಿದ್ದಾರೆ. ತತ್ಪರಿಣಾಮವಾಗಿ ಕುಕಿ-ರೆ ಸಮುದಾಯಗಳು ತಮ್ಮದೇ ಆದ ಪ್ರತ್ಯೇಕ ಆಡಳಿತಕ್ಕಾಗಿ ಆಗ್ರಹಿಸಿದ್ದು ಇದಕ್ಕೆ ಮೈತೈ ಸಮುದಾಯಗಳು ತೀವ್ರ ವಿರೋಧವನ್ನೂ ವ್ಯಕ್ತಪಡಿಸಿವೆ. ನಾಗಾ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್-ಐಸಾಕ್ ಮುವಯ್ಯ (ಓSಅಓ-Iಒ) ಸಂಘಟನೆ ತನ್ನ ದಶಕಗಳ ಬೇಡಿಕೆಗೆ ಇನ್ನೂ ಬದ್ಧವಾಗಿದ್ದು ನಾಗಾ ಜನವಸತಿ ಪ್ರದೇಶಗಳನ್ನು ಸಮಗ್ರವಾಗಿ ಒಂದುಗೂಡಿಸಿ ನಾಗಾಲಿಮ್ ಸಾರ್ವಭೌಮ ಪ್ರಾಂತವಾಗಿ ಘೋಷಿಸಲು ಆಗ್ರಹಿಸುತ್ತಿದೆ. ಈ ವಿವಿಧ ನಿಲುವುಗಳಿಗೆ ಬೆಂಬಲಿಸುವಂತಹ ಹಲವಾರು ರಾಜಕೀಯ, ಉಗ್ರವಾದಿ, ನಿಷೇಧಿತ ದಂಗೆಕೋರ ಗುಂಪುಗಳಿವೆ.
ಮಣಿಪುರದ ಜನಾಂಗೀಯ ಸಂಘರ್ಷ ಆರಂಭವಾದ ಮೂರು ವರ್ಷಗಳ ನಂತರ ನ್ಯಾಯಾಲಯಗಳಲ್ಲಿ ಒಂದೇ ಒಂದು ಹಿಂಸಾತ್ಮಕ ಪ್ರಕರಣವೂ ದಾಖಲಾಗಿಲ್ಲ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಚಿಸಿರುವ ತನಿಖಾ ಆಯೋಗ ಈವರೆಗೂ ತನ್ನ ವರದಿಯನ್ನು ಸಲ್ಲಿಸಿಲ್ಲ. ಆಂತರಿಕವಾಗಿ ಸ್ಥಳಾಂತರಗೊಂಡಿರುವ ಸಾವಿರಾರು ಜನರು ಅತ್ಯಲ್ಪ ಸಮಾಧಾನಕರ ಪರಿಹಾರಗಳೊಂದಿಗೆ ಶಿಬಿರಗಳಲ್ಲಿ ಕೊಳೆಯುತ್ತಿದ್ದಾರೆ.
ಈ ನಡುವೆ ಜನಾಂಗೀಯ ವಿಭಜನೆಗಳು ಇನ್ನೂ ಹದಗೆಟ್ಟಿದ್ದು ಎಲ್ಲೆಡೆ ವ್ಯಾಪಿಸುತ್ತಿದೆ. ದೀರ್ಘ ಕಾಲದ ನಾಗಾ-ಕುಕಿ ಹಗೆತನವೂ ಸಹ ಮೂರು ವರ್ಷಗಳ ಮೈತೈ-ಕುಕಿ ಸಂಘರ್ಷದೊಂದಿಗೆ ಮುನ್ನೆಲೆಗೆ ಬಂದಿದ್ದು ಹಳ್ಳಿಗಳನ್ನು ಸುಟ್ಟುಹಾಕುವುದು (ಬಹುಪಾಲು ಕುಕಿ ಹಳ್ಳಿಗಳು), ಹೊಂಚು ದಾಳಿಯನ್ನು ನಡೆಸುವುದು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಮೇ ತಿಂಗಳಲ್ಲಿ ಮೂವರು ತಾಡೋ-ಕುಕಿ ಪಾದ್ರಿಗಳನ್ನು ಹತ್ಯೆ ಮಾಡಲಾಗಿದ್ದು ಇದಕ್ಕೆ ಪ್ರತೀಕಾರವಾಗಿ ಕೆಲವರನ್ನು ಒತ್ತೆಯಾಳುಗಳಾಗಿ ಕೊಂಡೊಯ್ಯಲಾಗಿತ್ತು. ಕುಕಿಗಳ ಸೆರೆಯಲ್ಲಿದ್ದ ನಾಗಾ ಸಮುದಾಯದ ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು , ಇದರ ಪರಿಣಾಮ ಕಾಂಗ್ಕೊಪಿ ಜಿಲ್ಲೆಯಲ್ಲಿ ಆರ್ಥಿಕ ದಿಗ್ಬಂಧನವನ್ನು ಹೇರಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಹಾಗೂ ಕೇಂದ್ರ ಭದ್ರತಾ ಪಡೆಗಳು ಬಹುಮಟ್ಟಿಗೆ ನಿಷ್ಕ್ರಿಯವಾಗಿದ್ದು ಕೆಲವೊಮ್ಮೆ ಪಕ್ಷಪಾತಿ ಧೋರಣೆಯನ್ನೂ ತೋರಿವೆ.
ರಾಜ್ಯ ಸರಕಾರದ ವರ್ತನೆಯನ್ನು ಪಕ್ಷಪಾತಿ ಎಂದೇ ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದ್ದು ಕೇಂದ್ರ ಸರಕಾರ ಮತ್ತು ನ್ಯಾಯಾಲಯಗಳ ಧೋರಣೆಯೂ ಸಹ ಆಶಾದಾಯಕವಾಗಿದೆ ಎಂದು ಹೇಳಲಾಗುವುದಿಲ್ಲ. ಈ ಪರಿಸ್ಥಿತಿಗಳಲ್ಲಿ ಮಣಿಪುರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಬಿಂಬಿಸಲು ಎಸ್ಐಆರ್ ಜಾರಿಗೊಳಿಸುವುದನ್ನು ಸಮರ್ಥಿಸಲಾಗುವುದಿಲ್ಲ.
ಮತದಾರರ ಹೊರಗಿಡುವಿಕೆ-ಹೊಸ ನಿರೂಪಣೆಗಳು
ಎರಡನೆಯದಾಗಿ, ದೇಶದ ಉಳಿದ ಭಾಗಗಳಿಗಿಂತಲೂ ಭಿನ್ನವಾಗಿ ಮಣಿಪುರದಲ್ಲಿ ಎಸ್ಐಆರ್ ಜಾರಿಯಾಗುತ್ತಿದೆ. ಇತರ ರಾಜ್ಯಗಳಲ್ಲಿ ಕೇಂದ್ರ ಸರಕಾರವು ಚುನಾವಣಾ ಆಯೋಗದ ಮುಖಾಂತರ ಹಾಗೂ ಆಡಳಿತಾರೂಢ ಪಕ್ಷದ ಬೆಂಬಲದೊಂದಿಗೆ ಎಸ್ಐಆರ್ ಜಾರಿಗೊಳಿಸುತ್ತಿದೆ. ಮಣಿಪುರದಲ್ಲಿ ಕೇಳಿಬರುತ್ತಿರುವ, ರಾಜ್ಯವನ್ನು ಅಕ್ರಮ ವಲಸಿಗರಿಂದ (ಬಹುಪಾಲು ಕುಕಿಗಳು) ಮುಕ್ತಗೊಳಿಸುವ ಅಥವಾ ಸ್ವಚ್ಛಗೊಳಿಸುವ ಬೇಡಿಕೆಯು ರಾಜಕೀಯವಾಗಿ ತೀವ್ರಗಾಮಿಗಳಾಗಿ ಗುರುತಿಸಿಕೊಂಡಿರುವ ಮೈತೈಗಳು ಮತ್ತು ಮಣಿಪುರ ನಾಗಾ ಸಮುದಾಯಗಳ ಆಗ್ರಹಕ್ಕೆ ಪೂರಕವಾಗಿದೆ. ಈ ಎರಡೂ ಸಮುದಾಯಗಳ ಜನಸಂಖ್ಯೆ ಶೇ. 80ರಷ್ಟಿದೆ. ಆದರೆ ಈ ಆರೋಪಗಳಿಗೆ ಒಂದು ಶತಮಾನದ ಜನಗಣತಿಯ ದಾಖಲೆಗಳಲ್ಲೂ ಪುರಾವೆ ದೊರೆಯುವುದಿಲ್ಲ. ಇತ್ತೀಚಿನ ತಿರುಚಿದ ಇತಿಹಾಸ ಮತ್ತು ನಕಲಿ ನಿರೂಪಣೆಗಳು ಹಾಗೂ ವ್ಯಾಪಕ ಪ್ರಚಾರಗಳು ನೇರವಾಗಿ ಎಸ್ಐಆರ್ ಪ್ರಕ್ರಿಯೆಯನ್ನು ಪ್ರಭಾವಿಸುತ್ತಿವೆ. ಇದು ಮೂಲತಃ ಕೆಲವು ಸಮುದಾಯಗಳ ವಿರುದ್ಧ ಪಕ್ಷಪಾತಿಯಾಗಿರುವ, ನ್ಯಾಯಯುತವಾದ ಎಸ್ಐಆರ್ ಪ್ರಕ್ರಿಯೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದು ಕೆಲವು ಮಿಶ್ರಿತ ಪ್ರದೇಶಗಳಲ್ಲಿ ಇದು ಪರಿಣಾಮಕಾರಿಯಾಗಲಿದೆ.
ಮೂರನೆಯದಾಗಿ, ಕುಕಿಗಳಿಗೇ ವಿಶಿಷ್ಟವಾದಂತಹ ಕೆಲವು ಲಕ್ಷಣಗಳಿದ್ದು ಇದು ಸಮುದಾಯವನ್ನು ಎಸ್ಐಆರ್ ಪ್ರಕ್ರಿಯೆಯ ಬಲಿಪಶುಗಳನ್ನಾಗಿ ಮಾಡುತ್ತದೆ.
ಮೊದಲನೆಯ ಕಾರಣ ಎಂದರೆ 50 ಸಾವಿರಕ್ಕೂ ಹೆಚ್ಚು ಕುಕಿಗಳು ಸ್ಥಳಾಂತರ ಗೊಂಡಿದ್ದು ಮಣಿಪುರ ಮತ್ತು ಹೊರ ರಾಜ್ಯಗಳಲ್ಲಿ ಚದುರಿಹೋಗಿದ್ದಾರೆ. ಅವರ ನ್ಯಾಯಯುತ ಎಣಿಕೆಗೆ (fair enumeration) ಯಾವುದೇ ರೀತಿಯ ಅವಕಾಶಗಳು ಇದ್ದಂತಿಲ್ಲ. ಎರಡನೆಯ ಕಾರಣ ಎಂದರೆ ಅವರ ಸ್ಥಳಾಂತರದೊಂದಿಗೇ ಅನೇಕರು ತಮ್ಮ ಗುರುತನ್ನು, ವಸತಿಯನ್ನು, ಚುನಾವಣಾ ದಾಖಲೆಯನ್ನು, ಶೈಕ್ಷಣಿಕ ದಾಖಲೆಯನ್ನು ಮತ್ತಿತರ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಈ ದಾಖಲೆಗಳು ಮತದಾರರಾಗಿ ಅವರ ಅರ್ಹತೆಯನ್ನು ರುಜವಾತು ಮಾಡಲು ನೆರವಾಗುತ್ತಿದ್ದವು. 2023ರ ಮೇ ತಿಂಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ನಂತರ ಇಂಫಾಲದಲ್ಲಿ ಕುಕಿ-ರೆ ಸಮುದಾಯದ ಜನರ ಶೈಕ್ಷಣಿಕ ಪ್ರಮಾಣಪತ್ರಗಳನ್ನು, ಆಧಾರ್ ಕಾರ್ಡ್ಗಳನ್ನು, ಚಾಲಕ ಪರವಾನಿಗೆಗಳನ್ನು ಸುಟ್ಟುಹಾಕಿರುವ ದೃಶ್ಯಗಳು ಸಾಕಷ್ಟು ದಾಖಲಾಗಿವೆ.
ಮೂರನೆಯ ಕಾರಣ ಎಂದರೆ, ಸಾಂಪ್ರದಾಯಿಕ ಹೆಸರುಗಳನ್ನಿಡುವ ಪದ್ಧತಿಗಳು ಸಾಕಷ್ಟು ತಾರ್ಕಿಕ ವ್ಯತ್ಯಾಸಗಳಿಗೆ (Logical Discripancies) ಕಾರಣವಾಗುತ್ತವೆ. ಮಣಿಪುರದಲ್ಲಿ ಹೆಸರುಗಳನ್ನು ಬಹಳ ಸಂಕೀರ್ಣವಾದ ಪೋಷಕರ ಹೆಸರಿನ ಕೊನೆಯ ಅಕ್ಷರದಿಂದ ಆರಂಭಿಸಲಾಗುತ್ತದೆ, ಸಾಮಾನ್ಯವಾಗಿ ಅಡ್ಡ ಹೆಸರುಗಳು ಮೂಲ ಹೆಸರುಗಳ ಸ್ಥಾನದಲ್ಲಿ ಬಳಕೆಯಾಗುತ್ತವೆ, ಬುಡಕಟ್ಟು ಹೆಸರುಗಳನ್ನು ಆಂಗ್ಲಭಾಷೆಯ ಅಕ್ಷರ ಸಂಯೋಜನೆಯ (Orthography) ಅನುಸಾರ ಪರಿವರ್ತನೆ ಮಾಡಲಾಗುತ್ತದೆ. ಈ ವ್ಯತ್ಯಯಗಳೇ ಪಶ್ಚಿಮ ಬಂಗಾಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತಾರ್ಕಿಕ ವ್ಯತ್ಯಾಸಗಳಿಗೆ ಅವಕಾಶ ಕಲ್ಪಿಸಿ ಮತದಾರ ಪಟ್ಟಿಯಿಂದ ಹೊರಗುಳಿಯುವಂತೆ ಮಾಡುತ್ತವೆ. ಶೇ. 90ರಷ್ಟು ಕುಕಿ-ರೆ ಸಮುದಾಯದ ಜನರು ತಮ್ಮದೇ ಹೆಸರುಗಳನ್ನು ಒಂದೇ ಶೈಲಿಯ ಕಾಗುಣಿತವನ್ನು ಬಳಸಿ ಉಚ್ಛರಿಸಲು ಸಾಧ್ಯವಾಗದಿರಬಹುದು. ಇದು ಪೀಳಿಗೆಗಳ ಅಂತರದಲ್ಲಿ ಅಸಾಧ್ಯವೆಂದೇ ತೊರುತ್ತದೆ.
ನಾಲ್ಕನೆಯ ಕಾರಣ ಎಂದರೆ, ಕೆಲವು ಚಾರಿತ್ರಿಕ ಅಸಂಗತತೆಯ ಪರಿಣಾಮವಾಗಿ ಮಣಿಪುರದ ಬುಡಕಟ್ಟು ಜನರು, ಕುಕಿ-ರೆ ಮತ್ತು ನಾಗಾಗಳು ಸಂವಿಧಾನದ ಅನುಚ್ಛೇದ 371ಸಿ ಅನ್ವಯ ಅಲ್ಪ ಪ್ರಮಾಣದ ಸ್ವಾಯತ್ತೆ ಹೊಂದಿದ್ದರೂ ಆರನೆಯ ಷೆಡ್ಯೂಲ್ ಸ್ಥಾನಮಾನವನ್ನು ಪಡೆದಿಲ್ಲ. ಹಾಗಾಗಿ ಬಹಳ ದುರ್ಬಲ ಸ್ವಾಯತ್ತ ಸಮಿತಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ 1990ರಲ್ಲಿ ನಡೆದ ಕುಕಿ-ನಾಗಾ ಹಿಂಸಾತ್ಮಕ ಸಂಘರ್ಷದಲ್ಲಿ ಕುಕಿಗಳೇ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಗ್ರಾಮಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಅಧಿಕಾರಿಗಳು ಆ ಸಮಯದಲ್ಲಿ ತಮ್ಮ ವ್ಯಾಪ್ತಿಗೆ ಒಳಪಟ್ಟಂತೆ ಗ್ರಾಮೀಣ ಜನತೆಯ ಗುರುತನ್ನು ಪ್ರಮಾಣೀಕರಿಸಲು ಸಾಧ್ಯವಾಗಿತ್ತು. ಪ್ರಸ್ತುತ ಪ್ರಯೋಗದಲ್ಲಿ, ಈಗಿರುವಂತಹ ವಾತಾವರಣದಲ್ಲಿ, ಇಂತಹ ವ್ಯವಸ್ಥೆಯನ್ನು ನಿರೀಕ್ಷಿಸಲಾಗುವುದಿಲ್ಲ.
ಅಂತಿಮವಾಗಿ, ಕುಕಿ-ರೆ ನಾಯಕತ್ವವು, ಯಾವುದೋ ಕಾರಣಗಳಿಂದ, ಎಸ್ಐಆರ್ ಪ್ರಕ್ರಿಯೆಯ ಲಕ್ಷಣ, ಉದ್ದೇಶ, ಪ್ರೇರಣೆ ಮತ್ತು ಪರಿಣಾಮಗಳನ್ನು ಗ್ರಹಿಸಲು ವಿಫಲವಾಗಿದೆ. ತಮ್ಮ ಜೀವಮಾನವಿಡೀ ಇಲ್ಲಿಯೇ ಭಾರತೀಯ ಪ್ರಜೆಗಳಾಗಿ ಬದುಕಿ ಬಾಳಿರುವುದರಿಂದ, ಚುನಾವಣಾ ಗುರುತಿನ ಚೀಟಿ ಹೊಂದಿರುವುದರಿಂದ ತಾವೇನೂ ಭೀತಿಗೊಳಗಾಗಬೇಕಿಲ್ಲ, ಎಸ್ಐಆರ್ ವಿರೋಧಿಸುವುದರಿಂದ ತಾವು ತಪ್ಪೊಪ್ಪಿಕೊಂಡಂತಾಗುತ್ತದೆ ಎಂದು ಮುಗ್ಧತೆಯಿಂದ ಭಾವಿಸಿದ್ದಾರೆ. ಈಗ ಎಸ್ಐಆರ್ ಪ್ರಕ್ರಿಯೆಯ ಅಪಾಯಗಳು ಅವರಿಗೆ ಗೋಚರಿಸತೊಡಗಿವೆ, ಕುಕಿ-ರೆ ನಾಗರಿಕ ಸಮಾಜದ ಸಂಘಟನೆಗಳು ಎಸ್ಐಆರ್ ಪ್ರಕ್ರಿಯೆಯ ಕೊರತೆಗಳನ್ನು ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೂ ಈ ವಿರೋಧ ರಾಜಕೀಯ ಸ್ವರೂಪ ಪಡೆದುಕೊಂಡಿಲ್ಲ.
ಬುಡಕಟ್ಟು ಸಮುದಾಯಗಳ ಸಮಸ್ಯೆ
ಮಣಿಪುರದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಆರಂಭಿಕ ಎಣಿಕೆಯ ಹಂತದಲ್ಲೇ ಲಭ್ಯವಾಗಿರುವ ಮಾಹಿತಿಗಳ ಅನುಸಾರ ಪರಿಶಿಷ್ಟ ಪಂಗಡಗಳ (ಎಸ್ಟಿ) ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರ ಹೆಸರುಗಳು ಅಳಿಸಿಹೋಗಿವೆ. ಜುಲೈ 5ರಂದು ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ 19 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ಒದಗಿಸಲಾಗಿದ್ದು, ಈ ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕುಕಿ-ರೆ ಮತ್ತು ನಾಗಾ ಸಮುದಾಯಗಳೇ ನೆಲೆಸಿವೆ. ಅಳಿಸಿಹೋಗಿರುವ ಒಟ್ಟು 1.59 ಲಕ್ಷ ಹೆಸರುಗಳ ಪೈಕಿ 20.93 ಲಕ್ಷ ಮತದಾರರು ಅಂದರೆ ಶೇ. 64.9ರಷ್ಟು ಕುಕಿ-ರೆ ಮತ್ತು ನಾಗಾ ಬುಡಕಟ್ಟು ಜನರೇ ಇದ್ದಾರೆ. ಈ ಕ್ಷೇತ್ರಗಳಲ್ಲಿ ಇವರ ಜನಸಂಖ್ಯೆಯ ಪ್ರಮಾಣ ಶೇ. 37.8ರಷ್ಟಿದೆ. ಅಂದರೆ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕಿಂತಲೂ ಹೆಚ್ಚಿನ ಅನುಪಾತದಲ್ಲಿ ಮತದಾರರ ಹೆಸರುಗಳು ಅಳಿಸಿಹೋಗಿವೆ. ಮಣಿಪುರದ ಒಟ್ಟು ಮತದಾರರಲ್ಲಿ ಎಸ್ಟಿ ಸಮುದಾಯಗಳ ಸಂಖ್ಯೆ ಶೇ. 2.1ರಷ್ಟು ಕುಸಿದಿರುವುದನ್ನು ಈ ದತ್ತಾಂಶಗಳು ನಿರೂಪಿಸುತ್ತವೆ.
ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಅಳಿಸುವಿಕೆಯ ಕಾರಣಗಳಲ್ಲಿ ಪ್ರಧಾನವಾಗಿ ಕಾಣುವುದು ‘ಶಾಶ್ವತವಾಗಿ ಸ್ಥಳಾಂತರವಾಗಿರುವುದು’ ಅಥವಾ ‘ಗೈರು ಹಾಜರಿ/ಪತ್ತೆಹಚ್ಚಲಾಗದಿರುವುದು’. ಈ ಕಾರಣಗಳಿಂದಲೇ ಶೇ. 76.1ರಷ್ಟು ಮತದಾರರ ಹೆಸರು ಅಳಿಸಿಹೋಗಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ ಇದು ಶೇ. 53.9ರಷ್ಟಿದೆ. ‘ಮರಣ’ದ ಕಾರಣಕ್ಕಾಗಿ ಅಳಿಸಿಹೋಗಿರುವವರ ಪ್ರಮಾಣ ಶೇ. 18.9ರಷ್ಟಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ ಇದು ಶೇ. 41.9ರಷ್ಟಿದೆ. ಲಿಂಗತ್ವದ ಆಧಾರದಲ್ಲಿ ನೋಡಿದಾಗ, ಅಳಿಸಿಹಾಕಲ್ಪಟ್ಟಿರುವ ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಶೇ. 8ರಷ್ಟಿದೆ (ಪುರುಷರು ಶೇ. 6ರಷ್ಟಿದ್ದಾರೆ). ಅಳಿಸಿಹಾಕಲ್ಪಟ್ಟ ಪ್ರತೀ 1,000 ಪುರುಷರಿಗೆ 1,271 ಮಹಿಳೆಯರನ್ನು ಗುರುತಿಸ ಲಾಗಿದೆ. ಎಸ್ಐಆರ್ ಪ್ರಕ್ರಿಯೆಗೂ ಮುನ್ನ 1,071 ಇದ್ದ ಲಿಂಗಾನುಪಾತ ಕರಡು ಮತದಾರರ ಪಟ್ಟಿಯಲ್ಲಿ 1,057ಕ್ಕೆ ಕುಸಿದಿದೆ. 18 ವಿಧಾನಸಭಾ ಕ್ಷೇತ್ರಗಳಲ್ಲಿ ಅಳಿಸಿಹಾಕಿರುವವರ ಪೈಕಿ ಶೇ. 60ರಿಂದ 69ರಷ್ಟು ಮಹಿಳಾ ಮತದಾರರಿದ್ದಾರೆ.
ಒಳಗೊಳ್ಳುವಿಕೆಯ ರಕ್ಷಣೆ
ಭಾರತದ ಸುಪ್ರೀಂ ಕೋರ್ಟ್ ಎಸ್ಐಆರ್ ಪ್ರಕ್ರಿಯೆಯ ಪರವಾಗಿ ತೀರ್ಪು ನೀಡಿರುವುದರಿಂದ ಇದು ಸರ್ವಮಾನ್ಯವಾಗಿದೆ. ಆದರೂ ಇದನ್ನು ಇನ್ನೂ ನ್ಯಾಯಯುತವೂ, ಸೂಕ್ಷ್ಮ ಸಂವೇದಿಯೂ ಆಗಿ ನಡೆಸುವುದರಿಂದ ಹೊರಗುಳಿಯುವಿಕೆಯ ಅಪಾಯವನ್ನು ತಪ್ಪಿಸಬಹುದಾಗಿದೆ. ಇದರ ಸಂಭಾವ್ಯ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹೋದರೆ, 2029ರ ವೇಳೆಗೆ ಕೇವಲ ಕುಕಿ-ರೆಗಳು ಮಾತ್ರವೇ ಅಲ್ಲದೆ, ಈಶಾನ್ಯ ರಾಜ್ಯಗಳ ಇತರ ಬುಡಕಟ್ಟು ಸಮುದಾಯಗಳು ಯಾವುದೇ ರಾಜ್ಯಕ್ಕೆ ಸೇರದ ಸ್ಥಿತಿಯಿಲ್ಲದಂತಾಗಿಬಿಡುತ್ತವೆ.
(ಮೂಲ ಲೇಖಕರು ಸಿರಿಯಾ, ಆಫ್ಘಾನಿಸ್ತಾನ್ ಮತ್ತು ಮ್ಯಾನ್ಮಾರ್ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಹಾಗೂ ಈಶಾನ್ಯ ರಾಜ್ಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದಾೆ)
ಕೃಪೆ: thehindu






