‘ಕಟುಕ’, ‘ಖಾಟಿಕ್’ ಜನಾಂಗದ ದಯನೀಯ ಬದುಕು

ಖಾಟಿಕ್ ಸಮುದಾಯ ಒಂದು ಕಾಲದಲ್ಲಿ ಸೈನಿಕರಾಗಿದ್ದು ರಾಜಸತ್ತೆಯ ಕಾಲ ಹೋದ ನಂತರ ಜೀವನಕ್ಕಾಗಿ ಮಾಂಸ ಮಾರಾಟ ಆರಂಭಿಸಿದರು. ಯುದ್ಧಕಾಲ ಮುಗಿದಮೇಲೆ ಜೀವನಕ್ಕಾಗಿ ಕಾಡುಮೇಡು ಅಲೆದು ಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಾವು ತಿಂದು ಮಿಕ್ಕಿದ್ದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಕ್ರಮೇಣ ಇದನ್ನೇ ಕುಲವೃತ್ತಿಯಾಗಿಸಿಕೊಂಡರು ಎಂದು ಸಂಶೋಧನಾಕಾರರು ಅಭಿಪ್ರಾಯ ಪಡುತ್ತಾರೆ.
ಎಂಭತ್ತರ ದಶಕದ ಆರಂಭ, ನಾನು ವಕೀಲಿ ವೃತ್ತಿಯನ್ನು ಆರಂಭಿಸಿದ ದಿನಗಳು. ನನ್ನೊಂದಿಗೆ ವಕೀಲಿ ಮಾಡುತ್ತಿದ್ದ ನನಗಿಂತಲೂ ಹಿರಿಯರಾದ ವಕೀಲರೊಬ್ಬರಿದ್ದರು, ಅವರ ಹೆಸರು ಶಿವಾಜಿರಾವ್, ಅತ್ಯಂತ ಸೌಮ್ಯ ಸ್ವಭಾವದ ಸಜ್ಜನರಾದ ಅವರದು ಕಟುಕ ಅಥವಾ ಖಾಟಿಕ್ ಸಮುದಾಯ. ಬಹುಶಃ ಆ ಜನಾಂಗದಿಂದ ಬಂದ ಮೊದಲ ವಕೀಲರಿವರು! ಅವರ ತಂದೆ ಮತ್ತು ತಮ್ಮಂದಿರು ಇನ್ನೂ ಕಟುಕ ಕುಲವೃತ್ತಿಯನ್ನೇ ಮುಂದುವರಿಸಿದ್ದರು. ಅವರ ಕುಲವೃತ್ತಿಯೇ ಕುರಿ, ಮೇಕೆ ಕಡಿಯುವುದು! ಅದನ್ನು ಶುದ್ಧ ಮಾಡಿ, ಕುರಿಮೇಕೆಯ ದೇಹದ ಭಾಗಗಳನ್ನು ವಿಂಗಡಿಸಿ ಮಾರುವುದು. ಕಟುಕ, ಖಾಟಿಕ್, ಕಲಾಲ್, ಶರೇಗಾರ, ಅರೆ, ಕಸಾಯಿ, ಅರೆಕಸಾಯಿ, ಹಿಂದೂ ಕಲಾಲ್, ಕಸಾಬ್, ಮರಟ್ಟಿ ಎಂದು ನಾಡಿನ ಇತರ ಭಾಗಗಳಲ್ಲಿ ನಾನಾ ಹೆಸರುಗಳಲ್ಲಿ ಕರೆಯಲಾಗುವ ಈ ಸಮುದಾಯದ ಪರಿಚಯವಾದದ್ದು ಶಿವಾಜಿರಾವ್ ಮತ್ತು ಇವರನ್ನು ನೋಡಲು ನಮ್ಮ ಕಚೇರಿಗೆ ಬರುತ್ತಿದ್ದ ಆಗಿನ ಕಟುಕ ಜನಾಂಗದ ನಾಯಕಿ ನಾಗರತ್ನಮ್ಮನವರಿಂದ.
ಖಾಟಿಕ್ ಜನಾಂಗ ವಾಸಿಸುವ ಅನೇಕ ಪ್ರದೇಶಗಳಿಗೆ ನನ್ನನ್ನು ಕರೆದೊಯ್ದು ಅವರ ಬದುಕನ್ನು ಪರಿಚಯಿಸಿದ್ದು ನಾಗರತ್ನಮ್ಮ. ಆ ಸಂದರ್ಭದಲ್ಲಿ ಇನ್ನೂ ತಲೆ, ಕೈಕಾಲು, ಬೋಟಿ, ಖಲೀಜಾಗಳನ್ನು ಮಕ್ಕರಿಯಲ್ಲಿ ಹಾಕಿಕೊಂಡು ತಲೆಯ ಮೇಲೆ ಹೊತ್ತು ಬೀದಿಬೀದಿ ಸುತ್ತಿ ಮಾರುತ್ತಿದ್ದ ದೃಶ್ಯಗಳು ಕಾಣ ಸಿಗುತ್ತಿದ್ದವು. ಮಾಗಡಿ ರಸ್ತೆಯ ಗಲ್ಲಿಯೊಂದರಲ್ಲಿ ಹೆಂಗಸೊಬ್ಬರು ನೂರಾರು ಕುರಿ, ಮೇಕೆಗಳ ತಲೆಗಳನ್ನು ಗುಡ್ಡೆ ಹಾಕಿಕೊಂಡು ಕುಲುಮೆಯಲ್ಲಿ ಸುಡುತ್ತಿದ್ದ ದೃಶ್ಯಗಳು ಇನ್ನೂ ನನ್ನ ಕಣ್ಣಲ್ಲಿವೆ. ಈ ಹೆಂಗಸು ಕಪ್ಪನೆಯ ಬೂದಿಯ ಧೂಳಿನಲ್ಲಿ ಕರಗಿಹೋಗಿದ್ದಳು! ಈ ಜನಾಂಗದ ಹೆಣ್ಣುಮಗಳೊಬ್ಬರು ಮಾಗಡಿ ರಸ್ತೆಯಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡು ದಿನಕ್ಕೆ ಹತ್ತಾರು ಕುರಿ, ಮೇಕೆಗಳನ್ನು ತಾನೇ ಕಡಿದು, ಶುದ್ಧಮಾಡಿ, ವಿಂಗಡಿಸಿ ಮಾಂಸ ಮಾರುತ್ತಿದ್ದುದನ್ನು ಕಂಡು ಆಶ್ಚರ್ಯವಾಗಿತ್ತು. ಇವರ ಬದುಕನ್ನು ಕಂಡು ‘‘ಕಟುಕ ಜನಾಂಗದ ಕಣ್ಣೀರ ಬದುಕು’’ ಎಂಬ ತಲೆಬರಹದಡಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪೂರ್ಣಪುಟದ ಒಂದು ಚಿತ್ರಲೇಖನ ಬರೆದಿದ್ದೆ.
ಖಾಟಿಕ್ ಜನಾಂಗದವರು ಹಿಂದೆ ಅವರೇ ಕುರಿ, ಮೇಕೆ ಕುಯ್ದು, ಶುದ್ಧ ಮಾಡಿ ಮಾರುತ್ತಿದ್ದರು. ಕ್ರಮೇಣ ಈ ವೃತ್ತಿಯನ್ನು ಮುಸ್ಲಿಮ್ ಸಮುದಾಯ ಮಾಡಲು ಆರಂಭಿಸಿದ ನಂತರ ಖಾಟಿಕರು ಮುಸ್ಲಿಮರ ಅಂಗಡಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡತೊಡಗಿದರು. ಇವರು ಮುಸ್ಲಿಮರೊಂದಿಗೆ ಅದೆಷ್ಟು ಬೆರೆತುಹೋದರೆಂದರೆ, ಮುಸ್ಲಿಮರು ನಮಾಝ್ ಮಾಡಲು ಹೋದಂತೆ ಇವರು ಕೂಡ ಅನೇಕ ಕಡೆ ನಮಾಝ್ ಮಾಡಲು ಹೋಗುತ್ತಿದ್ದರು. ಇವರು ಮಾತಾಡುತ್ತಿದ್ದದ್ದೂ ಉರ್ದು ಮಿಶ್ರಿತ ಹಿಂದಿ. ಮುಸ್ಲಿಮ್ ಸಮುದಾಯದಲ್ಲೂ ಖಾಟಿಕ್‌ರು ಇದ್ದಿದ್ದರಿಂದ ಹಿಂದೂ ಖಾಟಿಕ್‌ರಿಗೂ ಮುಸ್ಲಿಮ್ ಖಾಟಿಕ್‌ರಿಗೂ ವ್ಯತ್ಯಾಸ ಇಲ್ಲದಷ್ಟು ಇವರು ಬೆರೆತುಹೋಗಿದ್ದರು. ಈ ಕಾರಣಕ್ಕೇ ಖಾಟಿಕ್‌ರನ್ನು ಅವರ ಧಾರ್ಮಿಕ ಅಸ್ಮಿತೆಯಿಂದ ಗುರುತಿಸಲು ಇವರ ಜಾತಿಯ ಹೆಸರಿನೊಂದಿಗೇ ‘ಹಿಂದೂ ಖಾಟಿಕ್’ ಎಂದು ಕರೆಯಬೇಕಾಯಿತು.
ಈ ಸಮುದಾಯದ ಕುರಿತು ಹಿಂದಿನ ಮಾನವಶಾಸ್ತ್ರಜ್ಞರಾದ ಎಂತೋವನ್, ಕೆ.ಎಸ್. ಸಿಂಗ್, ಎಡ್ಗರ್ ಥರ್ಸ್ಟನ್ ಮತ್ತು ಕೆ. ರಂಗಾಚಾರಿ, ಸೈಯದುಲ್ ಹುಸೇನ್, ಸೂರ್ಯನಾಥ ಕಾಮತ್, ತಾರಾಮತಿ ಮುಂತಾದವರು ತಮ್ಮ ಸಂಶೋಧನೆಗಳಲ್ಲಿ ಪ್ರಮುಖವಾಗಿ ಗುರುತಿಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಗುರುಲಿಂಗಯ್ಯನವರು ಖಾಟಿಕ್ ಸಮುದಾಯ ಕುರಿತು ಕುಲಶಾಸ್ತ್ರೀಯ ಅಧ್ಯಯನ ಮಾಡಿದ್ದಾರೆ. ಸದರಿ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಧಾರವಾಡ, ಹಾವೇರಿ, ಕೊಪ್ಪಳ, ಬಿಜಾಪುರ, ಶಿವಮೊಗ್ಗ, ಬಳ್ಳಾರಿಗಳಲ್ಲಿ ಇವರ ಜನಸಂಖ್ಯೆ ಹೇರಳವಾಗಿದೆ. ನಾಡಿನಾದ್ಯಂತ ಸುಮಾರು 12,500 ಕುಟುಂಬಗಳಿದ್ದು ಇವರ ಜನಸಂಖ್ಯೆ ಅಂದಾಜು 81,250 ಇದೆ. ಮಿಕ್ಕಂತೆ ಬೆಂಗಳೂರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು ಮುಂತಾದೆಡೆ ವಿರಳವಾಗಿ ಖಾಟಿಕ್‌ರ ಜನಸಂಖ್ಯೆ ಇದೆ.
ಖಾಟಿಕ್ ಸಮುದಾಯ ಒಂದು ಕಾಲದಲ್ಲಿ ಸೈನಿಕರಾಗಿದ್ದು ರಾಜಸತ್ತೆಯ ಕಾಲ ಹೋದ ನಂತರ ಜೀವನಕ್ಕಾಗಿ ಮಾಂಸ ಮಾರಾಟ ಆರಂಭಿಸಿದರು. ಯುದ್ಧಕಾಲ ಮುಗಿದಮೇಲೆ ಜೀವನಕ್ಕಾಗಿ ಕಾಡುಮೇಡು ಅಲೆದು ಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಾವು ತಿಂದು ಮಿಕ್ಕಿದ್ದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಕ್ರಮೇಣ ಇದನ್ನೇ ಕುಲವೃತ್ತಿಯಾಗಿಸಿಕೊಂಡರು ಎಂದು ಸಂಶೋಧನಾಕಾರರು ಅಭಿಪ್ರಾಯ ಪಡುತ್ತಾರೆ. ಇವರಲ್ಲಿ ಕೆಲವರು ಮದ್ಯವನ್ನೂ ಮಾರುತ್ತಾರೆ. ಅಂತೆಯೇ ಮದ್ಯದ ಅಂಗಡಿಗಳ ಮುಂದೆ, ರಸ್ತೆಯ ಬದಿಯಲ್ಲಿ, ಕುರಿ,ಮೇಕೆಗಳ ‘ಸ್ಪೇರ್ ಪಾರ್ಟ್’ಗಳನ್ನು ಪ್ರೈ ಮಾಡಿ ಮಾರುವ ‘ಚಾಕಣಾ ಅಂಗಡಿ’ಗಳನ್ನೂ ಇಟ್ಟುಕೊಂಡು ಜೀವನ ಮಾಡುತ್ತಾರೆ.
ಕುರಿ, ಮೇಕೆಗಳನ್ನು ಕುಯ್ದು ರಕ್ತಮಾಂಸಗಳಿಂದ ಕೂಡಿದ ಇತರ ಗಲೀಜನ್ನು ಬೇರ್ಪಡಿಸುವ ಕಸುಬನ್ನು ಖಾಟಿಕರು ಮಾಡುವುದರಿಂದಲೂ ನಮ್ಮ ‘ಸಭ್ಯ’ ಸಮಾಜ ಇದನ್ನು ‘ಕೊಳಕು ಕೆಲಸ’ ಎಂದು ಪರಿಗಣಿಸಿರುವುದರಿಂದಲೂ ಈ ಸಮುದಾಯಕ್ಕೆ ‘ಸಾಮಾಜಿಕ ಕಳಂಕ’ ಅಂಟಿಕೊಂಡಿದೆ. ಈ ಕಾರಣಕ್ಕೇ ದೇಶದ 12 ರಾಜ್ಯಗಳಲ್ಲಿ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದಾರೆ. ದುರಂತವೆಂದರೆ ಕರ್ನಾಟಕದಲ್ಲಿ ಖಾಟಿಕ್‌ರನ್ನು ಹಿಂದುಳಿದ ವರ್ಗಗಳ ಪ್ರವರ್ಗ ಒಂದರಲ್ಲಿ ಸೇರಿಸಲಾಗಿದೆ! ಈ ಕಾರಣಕ್ಕೆ ಈ ನತದೃಷ್ಟ ಸಮುದಾಯಕ್ಕೆ ಯಾವುದೇ ಮೀಸಲಾತಿ, ಅನುದಾನ, ಸವಲತ್ತು, ಸಾಲಸೋಲ, ಸರಕಾರಿ ನೆರವು ಏನೂ ಸಿಗುತ್ತಿಲ್ಲ.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಖಾಟಿಕ್ ಸಮುದಾಯವನ್ನು ಕರ್ನಾಟಕದಲ್ಲೂ ಎಸ್‌ಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದಿಂದ ಮಾಡಿದ ಕುಲಶಾಸ್ತ್ರೀಯ ಅಧ್ಯಯನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದಕ್ಕೆ ಸ್ಪಷ್ಟ ಕಾರಣಗಳನ್ನೂ ನೀಡಲಾಗಿದೆ. ಅಖಿಲ ಭಾರತೀಯ ಖಾಟಿಕ್ ಸಮಾಜದ ಕರ್ನಾಟಕದ ಅಧ್ಯಕ್ಷ ಅಶೋಕ್ ಕುಮಾರ್ ಕಲ್ಯಾಣಕೇರಿ ಅವರು ಅನೇಕ ಸಲ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ‘‘ಕನಿಷ್ಠ, ಕೇಂದ್ರ ಸರಕಾರಕ್ಕೆ ಕಳಿಸಿ ಸರ್’’ ಎಂದು ಅಂಗಲಾಚುತ್ತಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯನವರಿಗೆ ಈ ದಿಕ್ಕಿಲ್ಲದ ಸಮುದಾಯವನ್ನು ಶಿಫಾರಸು ಮಾಡಿ ಕನಿಷ್ಠ ಕೇಂದ್ರ ಸರಕಾರಕ್ಕೆ ಕಳುಹಿಸಲೂ ಮನಸ್ಸಿಲ್ಲವೆಂದರೆ ಇವರು ಇನ್ಯಾರ ಹಿತಕಾಯಲು ಇದ್ದಾರೆ? ಎಂದು ಯೋಚಿಸಬೇಕಾಗುತ್ತದೆ. ‘‘ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ಖಾಟಿಕ್ ಸಮುದಾಯದ ಸಿದ್ದರಾಮಪ್ಪನವರನ್ನು ಎಂಎಲ್‌ಸಿ ಮಾಡಿದ್ದರು.. ಈ ನಮ್ಮ ಅತಿಸಣ್ಣ ಸಮುದಾಯವನ್ನು ಹುಡುಕಿ ಪ್ರಾತಿನಿಧ್ಯ ನೀಡಿದ್ದರು, ದುರಂತವೆಂದರೆ ಸಿದ್ದರಾಮಯ್ಯನವರು ನಮ್ಮನ್ನು ಎಂಎಲ್‌ಸಿ ಮಾಡುವುದು ಬೇಡ, ಕನಿಷ್ಠ ಪಕ್ಷ ನಮ್ಮ ನತದೃಷ್ಟ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರಿಸಲು ಸಂಪುಟ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಲು ಇವರಿಗೆ ಏನು ಅಡ್ಡಿಯಾಗಿದೆ..? ಇವರು ನಮ್ಮಂತಹ ಸಣ್ಣ ಸಮುದಾಯಗಳನ್ನು ಈ ರೀತಿ ತುಳಿಯುವುದು ನ್ಯಾಯವೇ?’’ ಎಂದು ಅತ್ಯಂತ ನೋವು ಮತ್ತು ಆಕ್ರೋಶದಿಂದ ಈ ಸಮುದಾಯದ ಜನ ಕೇಳುತ್ತಾರೆ. ಇವರಿಗೆ ಏನೆಂದು ಉತ್ತರ ನೀಡಲಿ..?






