ಕೋಮು ದ್ವೇಷದ ರಾಜಕಾರಣ ಮತ್ತು ಕಾನೂನಿನ ಮೌನಗಳು

ಭಾರತದಂತಹ ಭವ್ಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಮಾಜದಲ್ಲಿ ಇತರ ಧರ್ಮ, ಸಮುದಾಯಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನಗಳು ಮತ್ತು ನಂತರ ಅವುಗಳನ್ನು ನಿರಾಕರಿಸುವ ರಾಜಕೀಯ ಸಂಸ್ಕೃತಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಹೇಳಿಕೆಗಳು ಮತ್ತು ಅದರ ಸುತ್ತ ಉದ್ಭವಿಸಿರುವ ವಿವಾದವು ಈ ಪ್ರಶ್ನೆಯನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿಸಿದೆ. ಇದು ರಾಜಕೀಯ ವಾಕ್ಸಮರದ ಭಾಗವಾಗಿದ್ದರೂ, ಇದರಾಚೆಗೆ ಗಮನಿಸಬೇಕಾದ ದೊಡ್ಡ ಪ್ರಶ್ನೆಯೆಂದರೆ ಸಾರ್ವಜನಿಕ ಜೀವನದಲ್ಲಿ ರಾಜಕೀಯ ನಾಯಕರ ಭಾಷೆ ಎಷ್ಟು ಜವಾಬ್ದಾರಿಯುತವಾಗಿರಬೇಕು ಎಂಬುದು.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ‘‘ಮುಲ್ಲಾಗೂ ನೀಟ್‌ಗೂ ಏನು ಸಂಬಂಧ?’’ ಎಂಬ ರೀತಿಯ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾದವು. ಶಿಕ್ಷಣ, ಪರೀಕ್ಷಾ ಅಕ್ರಮ ಅಥವಾ ವಿದ್ಯಾರ್ಥಿಗಳ ಸಮಸ್ಯೆಯಂತಹ ರಾಷ್ಟ್ರೀಯ ವಿಷಯಗಳನ್ನು ಧಾರ್ಮಿಕ ಗುರುತಿನೊಂದಿಗೆ ಜೋಡಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಸಂವಾದಕ್ಕೆ ಪೂರಕವಲ್ಲ. ಯಾವುದೇ ವಿಷಯವನ್ನು ಹಿಂದೂ-ಮುಸ್ಲಿಮ್ ಚೌಕಟ್ಟಿನಲ್ಲಿ ನೋಡುವ ಪ್ರವೃತ್ತಿ ಸಮಾಜ ಘಾತುಕವಾದದ್ದು.
ಇತ್ತೀಚಿನ ನೀಟ್ ವಿರೋಧಿ ಪ್ರತಿಭಟನೆಗಳಲ್ಲಿ ಬಂಧಿತರಾದವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು ಎಂಬ ಸಂಗತಿಯನ್ನು ಕೆಲವರು ಪ್ರಸ್ತಾಪಿಸಿದ್ದಾರೆ. ಆದರೆ ಬಂಧನಗಳ ಕಾನೂನುಬದ್ಧತೆ ಮತ್ತು ತನಿಖೆಯ ನ್ಯಾಯಸಮ್ಮತತೆಯನ್ನು ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ನಿರ್ಧರಿಸಬೇಕು. ಯಾವುದೇ ಸಮುದಾಯವನ್ನು ಕೇವಲ ಅದರ ಧಾರ್ಮಿಕ ಗುರುತಿನ ಆಧಾರದ ಮೇಲೆ ಅಪರಾಧಿಯನ್ನಾಗಿ ಚಿತ್ರಿಸುವುದು ಅಥವಾ ಅಂತಹ ಭಾವನೆ ಮೂಡಿಸುವುದು ಸಂವಿಧಾನದ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ.
ಇದೇ ಸಂದರ್ಭದಲ್ಲಿ, ಅಸ್ಲಮ್ ಮತ್ತು ಜುನೈದ್ ಸೇರಿದಂತೆ ದ್ವೇಷದ ವಾತಾವರಣದಲ್ಲಿ ನಷ್ಟ ಮಾಡಿಕೊಂಡವರ ಘಟನೆಗಳು ಮತ್ತೆ ನೆನಪಾಗುತ್ತವೆ. ಇಂತಹ ಘಟನೆಗಳು ಕೇವಲ ವ್ಯಕ್ತಿಗಳ ಜೀವನವನ್ನಷ್ಟೇ ಕಸಿದುಕೊಳ್ಳುವುದಿಲ್ಲ, ಸಮಾಜದ ಪರಸ್ಪರ ವಿಶ್ವಾಸವನ್ನೂ ದುರ್ಬಲಗೊಳಿಸುತ್ತವೆ. ಆದ್ದರಿಂದ ದ್ವೇಷದ ಭಾಷಣಗಳು ಕೊನೆಗೆ ಯಾವ ರೀತಿಯ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ರಾಜಕೀಯ ನಾಯಕರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ‘‘ನಾನು ಆ ಅರ್ಥದಲ್ಲಿ ಹೇಳಿಲ್ಲ, ಇದು ನನ್ನ ವಿರುದ್ಧದ ಷಡ್ಯಂತ್ರ’’ ಅಥವಾ ‘‘ನನ್ನ ಮಾತನ್ನು ತಿರುಚಲಾಗಿದೆ’’ ಎಂಬ ಸಮರ್ಥನೆಗಳು ಹೊಸದೇನಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ಪಷ್ಟೀಕರಣ ನೀಡುವ ಹಕ್ಕಿದೆ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಅಂತಿಮ ನಿರ್ಧಾರವನ್ನು ವೈಯಕ್ತಿಕ ಸಮರ್ಥನೆಗಿಂತ ಲಭ್ಯವಿರುವ ಸಾಕ್ಷ್ಯಗಳು, ಸಂಪೂರ್ಣ ಸಂದರ್ಭ ಮತ್ತು ತನಿಖೆಯ ಆಧಾರದ ಮೇಲೆ ಮಾಡಬೇಕು. ರಾಜಕೀಯ ನಾಯಕರು ತಮ್ಮ ಮಾತಿನ ಪರಿಣಾಮದ ಹೊಣೆಗಾರಿಕೆಯನ್ನು ಸಹ ಹೊರಬೇಕು. ಈ ಸಂದರ್ಭದಲ್ಲಿ ಸರಕಾರಕ್ಕೆ ಕೇಳಲೇ ಬೇಕಿರುವ ಇನ್ನೊಂದು ಪ್ರಮುಖ ಪ್ರಶ್ನೆ ಎಂದರೆ, ಕೋಮು ದ್ವೇಷ ಪ್ರಚೋದಿಸುವ ಹೇಳಿಕೆಗಳ ವಿರುದ್ಧ ಕಾನೂನು ಜಾರಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು. ಭಾರತದಲ್ಲಿ ದ್ವೇಷ ಭಾಷಣ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಪ್ರಯತ್ನ ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಹೇಳಿಕೆಗಳ ಕುರಿತು ಭಾರತೀಯ ನ್ಯಾಯ ಸಂಹಿತೆ ಸೇರಿದಂತೆ ವಿವಿಧ ಕಾನೂನುಗಳಲ್ಲಿ ಕ್ರಮ ಕೈಗೊಳ್ಳುವ ಅವಕಾಶಗಳಿವೆ. ಆದರೆ ಈ ಕಾನೂನುಗಳು ಎಲ್ಲರ ಮೇಲೂ ಸಮಾನವಾಗಿ, ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪ್ರಭಾವವನ್ನು ಲೆಕ್ಕಿಸದೆ ಜಾರಿಯಾಗುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ದ್ವೇಷದ ಭಾಷಣಗಳಿಗೆ ಕಾನೂನು ಕ್ರಮ ವಿಳಂಬವಾದಾಗ ಅಥವಾ ಆಯ್ದ ಪ್ರಕರಣಗಳಲ್ಲಿ ಮಾತ್ರ ಕ್ರಮ ಜರುಗಿದಂತೆ ಕಂಡಾಗ, ಜನರಿಗೆ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ಉಂಟಾಗಬಹುದು. ಆದ್ದರಿಂದ ತನಿಖಾ ಸಂಸ್ಥೆಗಳು ಪಾರದರ್ಶಕತೆ, ನಿಷ್ಪಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
ಇಂದು ಭಾರತದ ರಾಜಕೀಯದಲ್ಲಿ ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆ ಏರಿಕೆ ಮತ್ತು ಯುವಜನರ ಭವಿಷ್ಯದಂತಹ ಮೂಲಭೂತ ಪ್ರಶ್ನೆಗಳಿಗಿಂತ ಧಾರ್ಮಿಕ ಧ್ರುವೀಕರಣವೇ ಹೆಚ್ಚು ಚರ್ಚೆಯಾಗುತ್ತಿರುವುದು ಕಳವಳಕಾರಿಯ ಬೆಳವಣಿಗೆಯಾಗಿದೆ. ಚುನಾವಣೆಗಳು ಹತ್ತಿರವಾದಾಗ ಧಾರ್ಮಿಕ ಗುರುತುಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವ ಪ್ರವೃತ್ತಿ ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕುಗ್ಗಿಸುತ್ತದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಘನತೆಯ ಬದುಕಿನ ಹಕ್ಕನ್ನು ನೀಡಿದೆ. ಈ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಕೇವಲ ನ್ಯಾಯಾಲಯಗಳು ಅಥವಾ ಸರಕಾರದ ಮೇಲಷ್ಟೇಯಲ್ಲ ರಾಜಕೀಯ ಪಕ್ಷಗಳು, ನಾಯಕರು, ಮಾಧ್ಯಮಗಳು ಮತ್ತು ನಾಗರಿಕ ಸಮಾಜದ ಮೇಲೂ ಇದೆ.
ರಾಜಕೀಯದಲ್ಲಿ ತೀಕ್ಷ್ಣ ಟೀಕೆಗಳು ಇರಬಹುದು. ಆದರೆ ಆ ಟೀಕೆಗಳು ವ್ಯಕ್ತಿಯ ನೀತಿ, ಆಡಳಿತ ಅಥವಾ ನಿರ್ಧಾರಗಳ ಮೇಲೆ ಇರಬೇಕು. ಧರ್ಮ, ಜಾತಿ ಅಥವಾ ಸಮುದಾಯದ ವಿರುದ್ಧ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿ ಇರಬಾರದು. ಈ ಸತ್ಯವನ್ನು ರವಿಯಂತಹ ಕೋಮುವ್ಯಾದಿ ನಾಯಕರು ಮನಗಂಡರೆ ಉತ್ತಮ. ಏಕೆಂದರೆ ಒಂದು ದ್ವೇಷದ ಮಾತು ಸಾವಿರಾರು ಜನರ ಮನಸ್ಸಿನಲ್ಲಿ ಅನುಮಾನ ಮತ್ತು ಭಯವನ್ನು ಬಿತ್ತಬಹುದು.
ಪ್ರಜಾಪ್ರಭುತ್ವದಲ್ಲಿ ಸಂವಾದ, ಭಿನ್ನಾಭಿಪ್ರಾಯ ಗಳೇ ಇದರ ಶಕ್ತಿ. ಸತ್ಯ, ನ್ಯಾಯ, ನೈತಿಕತೆ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯುವ ರಾಜಕೀಯವೇ ದೇಶವನ್ನು ಬಲಪಡಿಸು ತ್ತದೆ. ಯಾವುದೇ ರಾಜಕೀಯ ನಾಯಕನಾಗಲಿ, ಯಾವುದೇ ಪಕ್ಷವಾಗಲಿ ಅವರ ಮಾತುಗಳು ಸಮಾಜದಲ್ಲಿ ದ್ವೇಷ, ವಿಭಜನೆ ಅಥವಾ ಹಿಂಸೆಗೆ ಕಾರಣವಾಗುವಂತಿದ್ದರೆ ಅದರ ಬಗ್ಗೆ ಕಾನೂನುಬದ್ಧ ಹಾಗೂ ನಿಷ್ಪಕ್ಷ ಪರಿಶೀಲನೆ ನಡೆಯಲೇಬೇಕು. ಅದೇ ಪ್ರಜಾಪ್ರಭುತ್ವದ ಆತ್ಮ, ಅದೇ ಸಂವಿಧಾನದ ಆಶಯ. ಈಗಲಾದರೂ ರವಿ ಚಾಳಿ ಕಡಿಮೆಯಾಗಲಿ, ಆದರೂ ಉಪ್ಪು ತಿಂದಿದ್ದೀರಿ... ನಾಳೆಯಾದರು ನೀರು ಕುಡಿಯಲೇ ಬೇಕು.






