‘ಬಡವರ ಮಕ್ಕಳು ಬೆಳೆಯಬೇಕು’: ಸಮಾನ ಅವಕಾಶಗಳ ಪ್ರಶ್ನೆ ಮತ್ತು ಸಾಮಾಜಿಕ ನ್ಯಾಯದ ಅವಶ್ಯಕತೆ

‘‘ಬಡವರ ಮಕ್ಕಳು ಬೆಳೆಯಬೇಕು’’ ಎನ್ನುವ ಮಾತು ಕೇಳಿದ ಕೂಡಲೇ ಕೆಲವರಲ್ಲಿ ಅಸಹಜ ಪ್ರತಿಕ್ರಿಯೆ ಕಾಣಿಸುತ್ತದೆ. ‘‘ಟ್ಯಾಲೆಂಟ್ ಇದ್ದವರು ಯಾರೇ ಇದ್ದರೂ ಬೆಳೆಯಬೇಕು, ಅದರಲ್ಲಿ ಬಡವ-ಶ್ರೀಮಂತ ಎನ್ನುವ ಭೇದ ಇರಬಾರದು’’ ಎನ್ನುವ ವಾದವನ್ನು ಬಹುತೇಕರು ಮುಂದಿಡುತ್ತಾರೆ. ಉದಾಹರಣೆಗೆ ಇತ್ತೀಚೆಗೆ ‘‘ಬಡವರ ಮಕ್ಕಳು ಬೆಳೆಯಬೇಕು’’ ಎನ್ನುವ ಅಭಿಪ್ರಾಯವನ್ನು ನಟ ಧನಂಜಯ್ ಅವರು ವ್ಯಕ್ತಪಡಿಸಿದ್ದರೆ, ‘‘ಬಡವರ ಮಕ್ಕಳು ಬೆಳೆಯಬೇಕು ಎನ್ನುವ ಮಾತನ್ನು ನಾನು ಒಪ್ಪೋದಿಲ್ಲ, ಟ್ಯಾಲೆಂಟ್ ಇದ್ದವರು ಮಾತ್ರ ಬೆಳೆಯಬೇಕು’’ ಅಂತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ. ಇದು ಬಹಳ ಚರ್ಚೆಗೂ ಗ್ರಾಸವಾಗಿತ್ತು.
ಟ್ಯಾಲೆಂಟ್ ಇದ್ದವರು ಬೆಳೆಯಬೇಕು ಎನ್ನುವುದು ಮೇಲ್ನೋಟಕ್ಕೆ ಬಹಳ ನ್ಯಾಯಸಮ್ಮತ, ಪ್ರಗತಿಪರ ಮತ್ತು ಸಮಾನತೆಯ ಮಾತಿನಂತೆ ತೋರುತ್ತದಾದರೂ, ಈ ವಾದದ ಒಳಗಿರುವ ಸಾಮಾಜಿಕ ಅರ್ಥ, ವೈಚಾರಿಕ ಹಿನ್ನೆಲೆ ಮತ್ತು ವಾಸ್ತವಿಕ ಪರಿಣಾಮಗಳನ್ನು ಪರಿಶೀಲಿಸಿದಾಗ, ಇದು ನಿಜಕ್ಕೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಒಂದು ಮೇಲ್ವರ್ಗೀಯ ಮನಸ್ಥಿತಿಯ ಪ್ರತಿಬಿಂಬ ಎನ್ನುವುದು ಸ್ಪಷ್ಟವಾಗುತ್ತದೆ.
ಮೊದಲು, ‘‘ಬಡವರ ಮಕ್ಕಳು ಬೆಳೆಯಬೇಕು’’ ಎನ್ನುವ ಆಶಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಇದು ಬಡವರ ಮಕ್ಕಳಿಗೆ ಮಾತ್ರ ಅವಕಾಶ ಕೊಡಿ, ಉಳಿದವರನ್ನು ತಳ್ಳಿ ಹಾಕಿ ಎನ್ನುವ ಮಾತಲ್ಲ. ಬದಲಾಗಿ, ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರ ಮಕ್ಕಳಿಗೂ ಸಮಾನ ಅವಕಾಶಗಳು ದೊರಕಬೇಕು ಮತ್ತು ಅವರೂ ಕೂಡ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಸಾಮಾಜಿಕ ನ್ಯಾಯದ ಆಶಯ ಇದರಲ್ಲಿ ಅಡಗಿದೆ. ಇದು ಕೇವಲ ಅನುಕಂಪ ತೋರುವ ಮಾತಲ್ಲ. ಬದಲಾಗಿ ಇದು ಸಾಮಾಜಿಕ ನ್ಯಾಯದ ಬೇಡಿಕೆಯಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಂಬ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯ. ಸಮಾನತೆ ಎಂದರೆ ಎಲ್ಲರಿಗೂ ಒಂದೇ ನಿಯಮ, ಒಂದೇ ಪರೀಕ್ಷೆ, ಒಂದೇ ಅವಕಾಶ. ಆದರೆ ಸಾಮಾಜಿಕ ನ್ಯಾಯ ಎಂದರೆ, ಈಗಾಗಲೇ ಅಸಮಾನ ಪರಿಸ್ಥಿತಿಯಲ್ಲಿ ಬದುಕುತ್ತಿರುವವರಿಗೆ ಹೆಚ್ಚುವರಿ ಬೆಂಬಲ ನೀಡಿ ಅವರನ್ನು ಸಮಾನ ಮಟ್ಟಕ್ಕೆ ತರುವ ಪ್ರಕ್ರಿಯೆ. ಎಲ್ಲರೂ ಒಂದೇ ಸ್ಥಳದಿಂದ ಓಟ ಆರಂಭಿಸುತ್ತಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯದ ಅಗತ್ಯತೆ ಅರ್ಥವಾಗುತ್ತದೆ.
ಒಬ್ಬ ಶ್ರೀಮಂತನ ಮನೆಯ ಮಗುವಿಗೆ ಹುಟ್ಟಿನಿಂದಲೇ ಅನೇಕ ಸೌಲಭ್ಯಗಳು ಲಭ್ಯವಾಗುತ್ತವೆ, ಉತ್ತಮ ಶಾಲೆ, ಖಾಸಗಿ ಟ್ಯೂಷನ್, ಪುಸ್ತಕಗಳು, ಡಿಜಿಟಲ್ ಸಾಧನಗಳು, ಪೌಷ್ಟಿಕ ಆಹಾರ, ಸುರಕ್ಷಿತ ವಾತಾವರಣ ಮತ್ತು ಮಾರ್ಗದರ್ಶನ. ಆದರೆ ಬಡವರ ಮಕ್ಕಳ ಬದುಕೇ ಬೇರೆ. ಅನೇಕ ಬಾರಿ ಅವರ ಬಾಲ್ಯವೇ ಅವರಿಗೆ ಶಾಪವಾಗಿರುತ್ತದೆ ಮತ್ತು ಅವರ ಬಾಲ್ಯವೇ ದುಡಿಮೆಯೊಂದಿಗೆ ಆರಂಭವಾಗುತ್ತದೆ. ಶಾಲೆಗೆ ಹೋಗುವುದೇ ಒಂದು ಹೋರಾಟವಾಗಿರುತ್ತದೆ. ಕುಟುಂಬದ ಆರ್ಥಿಕ ಒತ್ತಡ, ಸಾಮಾಜಿಕ ಅವಮಾನ, ಆತ್ಮವಿಶ್ವಾಸದ ಕೊರತೆ ಇವೆಲ್ಲದರ ನಡುವೆಯೇ ಅವರು ಕಲಿಯಬೇಕಾಗುತ್ತದೆ. ಇಂತಹ ಅಸಮಾನ ಪರಿಸ್ಥಿತಿಯಲ್ಲಿ ‘‘ಎಲ್ಲರಿಗೂ ಒಂದೇ ಅವಕಾಶ ಇದೆ’’ ಎಂದು ಹೇಳುವುದು ವಾಸ್ತವವನ್ನು ನಿರಾಕರಿಸಿದಂತಾಗುತ್ತದೆ.
‘‘ಟ್ಯಾಲೆಂಟ್ ಇದ್ದವರು ಬೆಳೆಯಬೇಕು’’ ಎನ್ನುವ ವಾದವು ಬಹಳ ಅಪಾಯಕಾರಿ, ಏಕೆಂದರೆ ಅದು ಟ್ಯಾಲೆಂಟ್ ಹುಟ್ಟುವ ಪರಿಸ್ಥಿತಿ ಮತ್ತು ವಾತಾವರಣವನ್ನು ಗಮನಿಸುವುದಿಲ್ಲ. ಪ್ರತಿಭೆ ಎನ್ನುವುದು ಸಹಜವಾಗಿ ಹೊರಹೊಮ್ಮುವಂತಹದ್ದಲ್ಲ. ಅದು ಸರಿಯಾದ ಪರಿಸರ, ಅವಕಾಶ ಮತ್ತು ಬೆಂಬಲ ಇದ್ದಾಗ ಮಾತ್ರ ಅರಳುತ್ತದೆ. ಅವಕಾಶವನ್ನೇ ನಿರಾಕರಿಸಿದ ಮೇಲೆ, ಪ್ರತಿಭೆಯ ಕೊರತೆಯ ಬಗ್ಗೆ ಮಾತನಾಡುವುದು ಅನ್ಯಾಯವಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಈ ವಾದವನ್ನು ಸಾಮಾನ್ಯವಾಗಿ ಮುಂದಿಡುವವರು ಹೆಚ್ಚಿನದಾಗಿ upper class ಅಥವಾ privileged ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಅವರಿಗೆ ವ್ಯವಸ್ಥೆಯೇ ಅನುಕೂಲಕರವಾಗಿರುತ್ತದೆ. ಅವರ ಮಕ್ಕಳು ಈಗಾಗಲೇ ಉತ್ತಮ ಶಾಲೆಗಳಲ್ಲಿ ಓದುತ್ತಿರುತ್ತಾರೆ, ಉತ್ತಮ ನೆಟ್ವರ್ಕ್‌ಗಳನ್ನು ಹೊಂದಿರುತ್ತಾರೆ. ಆದ್ದರಿಂದ ಅವರಿಗೆ ‘‘ವಿಶೇಷ ಅವಕಾಶ’’ ಎಂಬುದು ಅನಗತ್ಯವೆಂದು ತೋರುತ್ತದೆ.
ಬಡವರ ಮಕ್ಕಳಿಗೆ ಅವಕಾಶ ಕಲ್ಪಿಸುವುದನ್ನು ಕೆಲವರು ‘ಫೇವರಿಟಿಸಂ’ ಅಥವಾ ‘ಅನ್ಯಾಯ’ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಇತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಕ್ರಮ. ಶಿಕ್ಷಣದಲ್ಲಿ ಮೀಸಲಾತಿ, ವಿದ್ಯಾರ್ಥಿವೇತನ, ಉಚಿತ ವಸತಿನಿಲಯಗಳು, ಮಧ್ಯಾಹ್ನದ ಊಟದ ಯೋಜನೆ, ಉಚಿತ ಪಠ್ಯಪುಸ್ತಕಗಳು ಇವೆಲ್ಲವೂ ಅನುಕಂಪದಿಂದ ಕೊಡುವ ಕಾರ್ಯಕ್ರಮಗಳಲ್ಲ. ಅವು ಸಂವಿಧಾನದಲ್ಲಿ ಅಡಗಿರುವ ಸಾಮಾಜಿಕ ನ್ಯಾಯದ ಆಶಯ.
ಭಾರತದ ಸಂವಿಧಾನವೇ ‘ಸಮಾನ ಅವಕಾಶ’ ಎನ್ನುವುದನ್ನು ಕೇವಲ ಘೋಷಣೆಯ ಮಟ್ಟದಲ್ಲಿ ಬಿಡದೆ, ಅದನ್ನು ಸಾಧಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತದೆ. ಕಾರಣ, ನಮ್ಮ ಸಮಾಜದಲ್ಲಿ ಅಸಮಾನತೆ ಒಂದು ವೈಯಕ್ತಿಕ ಸಮಸ್ಯೆಯಲ್ಲ, ಅದು ವ್ಯವಸ್ಥಾತ್ಮಕ ಸಮಸ್ಯೆ. ಜಾತಿ, ವರ್ಗ, ಆರ್ಥಿಕ ಸ್ಥಿತಿ, ಇವುಗಳು ವ್ಯಕ್ತಿಯ ಜೀವನಾವಕಾಶಗಳನ್ನು ನಿರ್ಧರಿಸುತ್ತವೆ.
ಇತಿಹಾಸವನ್ನು ಗಮನಿಸಿದರೆ, ಅವಕಾಶ ದೊರೆತಾಗ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಎಂತಹ ಸಾಧನೆಗಳನ್ನು ಮಾಡಿದ್ದಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ವಿಜ್ಞಾನ, ಕ್ರೀಡೆ, ಸಾಹಿತ್ಯ, ಆಡಳಿತ, ಸಿನೆಮಾ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇದರಿಂದ ಒಂದು ಸತ್ಯ ಸ್ಪಷ್ಟವಾಗುತ್ತದೆ, ಸಮಸ್ಯೆ ಪ್ರತಿಭೆಯಲ್ಲ, ಅವಕಾಶದ ಕೊರತೆ ಎಂದು.
ಸಾಮಾಜಿಕವಾಗಿ ಬಲಿಷ್ಠ ಸಮಾಜ ನಿರ್ಮಾಣವಾಗಬೇಕಾದರೆ, ಕೆಲವೇ ಕೆಲವರ ಅತಿಯಾದ ಬೆಳವಣಿಗೆಯಾಗುವುದಷ್ಟೇ ಅಲ್ಲ, ಬಹುಜನರ ಸಬಲೀಕರಣವಾಗುವ ಅಗತ್ಯವಿದೆ. ಬಡವರ ಮಕ್ಕಳು ಬೆಳೆದಾಗ ಮಾತ್ರ ಸಮಾಜದ ಮೌನ ಪ್ರತಿಭೆಗಳು ಹೊರಬರುತ್ತವೆ. ಅದು ಆರ್ಥಿಕ ಬೆಳವಣಿಗೆಗೂ, ಸಾಮಾಜಿಕ ಸ್ಥಿರತೆಗೂ ಸಹಕಾರಿಯಾಗುತ್ತದೆ.
ಅಂತಿಮವಾಗಿ ಹೇಳಬೇಕೆಂದರೆ, ‘‘ಬಡವರ ಮಕ್ಕಳು ಬೆಳೆಯಬೇಕು’’ ಎನ್ನುವ ಮಾತು ಯಾರ ವಿರುದ್ಧವೂ ಅಲ್ಲ. ಅದು ಸಮಾನತೆಗಾಗಿ ನಡೆಯುವ ಹೋರಾಟದ ಒಂದು ಘೋಷಣೆ. ‘ಬಡವ-ಶ್ರೀಮಂತ ಎನ್ನುವ ಭೇದ ಇರಬಾರದು’ ಎನ್ನುವ ಆಶಯವನ್ನು ನಿಜವಾಗಿಸಬೇಕಾದರೆ, ಮೊದಲು ಆ ಭೇದಗಳು ವಾಸ್ತವದಲ್ಲಿ ನಮ್ಮ ಸಮಾಜದಲ್ಲಿ ಬೇರೂರಿವೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕು.
ಕೇವಲ ಅವುಗಳನ್ನು ನಿರಾಕರಿಸುವುದರಿಂದ ಅಲ್ಲ, ಸರಿಪಡಿಸುವುದರಿಂದ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ಸಾಧ್ಯವಾಗುತ್ತದೆ.
ಬಡವರ ಮಕ್ಕಳ ಬೆಳವಣಿಗೆ ಸಮಾಜದ ದೌರ್ಬಲ್ಯವಲ್ಲ, ಅದು ಸಮಾಜದ ಶಕ್ತಿಯ ಪ್ರತೀಕ. ಅದನ್ನು ಅರ್ಥಮಾಡಿಕೊಳ್ಳುವ ವೈಚಾರಿಕತೆ ಬೆಳೆಸಿಕೊಳ್ಳುವುದೇ ಇಂದಿನ ಅಗತ್ಯ.







