ಭಾರತದಲ್ಲಿ ತೀವ್ರವಾದಿ ಬಲಪಂಥ ರಂಗಭೂಮಿಯ ಉದಯ

‘ವಿಭಜನ್ ವಿಭೀಷಿಕಾ ತಮಸ್’
ಈಗ ಸೃಷ್ಟಿಯಾಗಿರುವ ಭಾರತದಲ್ಲಿನ ತೀವ್ರ ಬಲಪಂಥೀಯ ರಂಗಭೂಮಿಯು ಪ್ರಗತಿಪರ ಪರಂಪರೆಯ ಮೇಲೆ ಕೇವಲ ದಾಳಿ ಮಾಡುವುದು ಮಾತ್ರವಲ್ಲ, ಜೊತೆಗೆ ಅದರ ರಚನೆಗಳನ್ನು ಒಳಗಿನಿಂದಲೇ ಖಾಲಿಗೊಳಿಸಿ ತಲೆಕೆಳಗಾಗಿಸುತ್ತದೆ. ಒಂದೆಡೆ ವೇದ-ಬ್ರಾಹ್ಮಣ ಸಂಸ್ಕೃತಿಯನ್ನು ವೈಭವೀಕರಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಪ್ರತಿಕ್ರಾಂತಿಕಾರಿ ಸಿದ್ಧಾಂತವನ್ನು ಬಿತ್ತುತ್ತದೆ, ಮತ್ತೊಂದೆಡೆ ಇದು ‘ಪ್ರತಿ ರಂಗಭೂಮಿ ಕಲಾ ಮೀಮಾಂಸೆ’ಯನ್ನೂ ನಿರ್ಮಿಸುತ್ತದೆ.
ಹಿಂದುತ್ವದ ತೀವ್ರ ಬಲಪಂಥೀಯ ರಂಗಭೂಮಿಯ ಹೊಸ ಪ್ರಕಾರವು ನಿಧಾನವಾಗಿ ಭಾರತದ ಬೀದಿಗಳನ್ನು, ರಂಗವೇದಿಕೆಗಳನ್ನೂ ಆಕ್ರಮಿಸುತ್ತಿದೆ. 2007ರಲ್ಲಿ ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬ್ರಿಟಿಷ್ ವಿಮರ್ಶಕ ಜೇ ರೇನರ್ ‘ಬಲಪಂಥೀಯ ರಂಗಭೂಮಿ ಎಲ್ಲಿದೆ?’ ಎಂದು ಪ್ರಶ್ನಿಸಿದ್ದರು. ಅನೇಕ ವಿಮರ್ಶಕರಿಗೆ ಬಲಪಂಥೀಯ ರಂಗಭೂಮಿ ಎಂಬ ಕಲ್ಪನೆಯನ್ನು ಊಹಿಸಲು ಅಸಾಧ್ಯವಾಗಿತ್ತು. ಇಲ್ಲಿಯವರೆಗಿನ ರಂಗಭೂಮಿಯಲ್ಲಿ ಕಲಾ ಮೀಮಾಂಸೆ ಮತ್ತು ಎಡಪಂಥೀಯ ಚಿಂತನೆ ಪ್ರಭಾವ ಇರುವ ಕಾರಣಕ್ಕೆ ರಂಗಭೂಮಿ ಮತ್ತು ತೀವ್ರ ಬಲಪಂಥ ಎಂಬುದು ಪರಸ್ಪರ ವಿರೋಧಾಭಾಸದಂತೆ ಕಾಣುತ್ತಿತ್ತು. ಬಲಪಂಥೀಯ ನಾಟಕ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಲು ಶುರು ಮಾಡಿದರೆ ನಮ್ಮ ‘ಕಲ್ಪನಾಶಕ್ತಿಯೇ ಕೈ ಕೊಡುತ್ತದೆ’ ಎಂದು ರೇನರ್ ಅಭಿಪ್ರಾಯಪಟ್ಟಿದ್ದರು. ಆನಂತರ ಯಕೆಯ ರಾಷ್ಟ್ರೀಯ ರಂಗಭೂಮಿಯ ನಿರ್ದೇಶಕರಾಗಿದ್ದ ನಿಕೊಲಸ್ ಹೈಟ್ನರ್ ಅವರು 2006ರಲ್ಲಿ ‘ಕೀಟಲೆಯ ಗುಣವುಳ್ಳ ಬಲಪಂಥೀಯ ನಾಟಕವೊಂದರ ಅಗತ್ಯವಿದೆ’ ಎಂದು ಕರೆ ನೀಡಿದರು. ಸಂಪ್ರದಾಯವಾದಿ ನಿಲುವುಗಳಿಗೆ ಬೆಂಬಲ ನೀಡುವ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ನಾಟಕಕಾರ ಜೂಲಿಯನ್ ಫೆಲೋಸ್ ಕೂಡ ‘‘ರಂಗಭೂಮಿಯಲ್ಲಿ ಎಡಪಂಥೀಯ ಚಿಂತನೆಯ ಸ್ಥಾಪಿತ ಪ್ರಭುತ್ವಕ್ಕೆ ಹೊಸ ಅವಾಂತ-ಗಾರ್ಡೆ (avant-garde) ಜಾನರ್ ಸವಾಲು ಹಾಕಬೇಕು’’ ಎಂದು ಹೇಳಿದರು. ಅವಾಂತ-ಗಾರ್ಡೆಯನ್ನು ಎಡ ಅಥವಾ ಬಲಪಂಥದೊಂದಿಗೆ ನೇರವಾಗಿ ಜೋಡಿಸಲು ಸಾಧ್ಯವಿಲ್ಲದಿದ್ದರೂ ಸಹ ಈ ಹೇಳಿಕೆಗಳಲ್ಲಿ ತೀವ್ರ ಬಲಪಂಥೀಯ ಧೋರಣೆಯ ಸುಳಿವು ಸ್ಪಷ್ಟವಾಗಿ ಕಾಣುತ್ತದೆ. (ಅವಾಂತ-ಗಾರ್ಡೆ: ಸಂಪ್ರದಾಯಸ್ಥ ಮತ್ತು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ವಿಧಾನಗಳನ್ನು ಧಿಕ್ಕರಿಸಿ ಹೊಸತನ (innovation) ಮತ್ತು ತೀವ್ರವಾದ ಬದಲಾವಣೆಗಳಿಗೆ (radical change) ಆದ್ಯತೆ ನೀಡುವ ಜಾನರ್. ಈ ಪ್ರಕಾರವು ಸಾಂಪ್ರದಾಯಿಕವಲ್ಲದ (unorthodox) ಮತ್ತು ದಿಟ್ಟತನದ (daring) ನೋಟಗಳನ್ನು ಹೊಂದಿರುತ್ತದೆ: ಅನುವಾದಕ)
ತೀವ್ರ ಬಲಪಂಥೀಯ ರಾಜಕೀಯ ವಾತಾವರಣ ಹೆಚ್ಚಾಗುತ್ತಿದ್ದರೂ ಅದಕ್ಕೆ ತಕ್ಕುದಾದ ಬಲಪಂಥೀಯ ರಂಗಭೂಮಿ ಇಲ್ಲದಿರುವುದು ಒಂದು ರೀತಿಯ ವ್ಯಂಗ್ಯವೇ ಆಗಿದೆ. ಆದರೆ ತೀವ್ರ ಬಲಪಂಥವು ತನ್ನ ನಾಟಕೀಯತೆ ಮತ್ತು ಸಾಂಸ್ಕೃತಿಕ ಉತ್ಪಾದನೆಗಳ ಮೂಲಕ ಬೀದಿಗಳನ್ನು, ಸಂಸತ್ತುಗಳನ್ನು ಆವರಿಸಿಕೊಳ್ಳುವ ಈ ದಿನಗಳಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ತೀವ್ರ ಬಲಪಂಥ ರಂಗಭೂಮಿಯನ್ನು ನಿರೀಕ್ಷಿಸಬಹುದು. ಮಾತ್ರವಲ್ಲ ನಿಜವಾದ ಅರ್ಥದಲ್ಲಿ ‘ತೀವ್ರ ಬಲಪಂಥೀಯ ರಂಗಭೂಮಿ’ ಎಂಬ ಪ್ರತ್ಯೇಕ ಪ್ರಕಾರವೂ ರೂಪುಗೊಳ್ಳುತ್ತದೆ. ಭಾಷಣ ಶೈಲಿ, ದೃಶ್ಯವೈಭವ ಮತ್ತು ಜನಪ್ರಿಯ ಸಂಸ್ಕೃತಿಯ ರೂಪದಲ್ಲಿ ತೀವ್ರ ಬಲಪಂಥೀಯತೆ ಎಲ್ಲೆಡೆ ವ್ಯಾಪಿಸಿಕೊಂಡಿರುವಾಗ ಈ ಸಿದ್ಧಾಂತದ ರಂಗಭೂಮಿಯು ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಒಂದು ವಿಶಿಷ್ಟ ಪ್ರಕಾರವಾಗಿ ಹೊರಹೊಮ್ಮಲಿದೆ.
2025ರಲ್ಲಿ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಭೀಷ್ಮ ಸಾಹನಿಯವರ ಪ್ರಸಿದ್ಧ ‘ತಮಸ್’ ಕಾದಂಬರಿಯನ್ನು ಆಧರಿಸಿ ಪ್ರದರ್ಶಿಸಿದ ‘ವಿಭಜನ್ ವಿಭೀಷಿಕಾ ತಮಸ್’ ನಾಟಕವು ಪ್ರೇಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿತು. ವಿಮರ್ಶಕರ ಪ್ರಕಾರ ವಿಭಜನೆಯ ದುರಂತವನ್ನು ಮಾನವೀಯತೆ ಹಾಗೂ ಸೂಕ್ಷ್ಮವಾಗಿ ಚಿತ್ರಿಸಿದ್ದ ಸಾಹನಿಯವರ ಕಾದಂಬರಿಯನ್ನು ಬಲಪಂಥೀಯ ಸಿದ್ಧಾಂತ ಸೇರ್ಪಡೆಗಳ ಮೂಲಕ ಸಂಪೂರ್ಣವಾಗಿ ವಿಕೃತಗೊಳಿಸಲಾಗಿತ್ತು. ಪ್ರೇಮ್ ವಾತ್ಸ್ (2025) ಅವರ ಅಭಿಪ್ರಾಯದಲ್ಲಿ ಈ ಪ್ರದರ್ಶನವು ಅದರ ಅಭಿಮಾನಿಗಳಿಗೆ ‘ವೇದನೆದಾಯಕ ಮತ್ತು ಅನ್ಯಾಯದ’ ಅನುಭವ ನೀಡಿದೆ. ಪ್ರತಿಯೊಂದು ಪಾತ್ರವನ್ನು ಅತಿಯಾದ ಭಾವೋದ್ರೇಕ ಮಾದರಿಯಲ್ಲಿ ಮರುರೂಪುಗೊಳಿಸಿ ಮಾನವೀಯತೆ ಮತ್ತು ಸರಳತೆಯಿಂದ ಕೂಡಿದ ದೃಶ್ಯಗಳನ್ನು ಖಾಲಿ ಮತ್ತು ಅರ್ಥಹೀನ ಸಂಕೇತಗಳಾಗಿ ಬದಲಾಯಿಸಲಾಯಿತು.
ಲಕ್ಷ್ಯ ಚೌಧರಿ (2025) ಅವರ ಪ್ರಕಾರ ಈ ಪ್ರದರ್ಶನವು ‘ರಂಗಭೂಮಿ ಸಂಸ್ಥೆಗಳನ್ನು ಒಳಗಿನಿಂದಲೇ ಟೊಳ್ಳುಗೊಳಿಸು ವುದರ’ ಉದಾಹರಣೆಯಾಗಿದೆ. ಈ ನಿರ್ಮಾಣವು ಆಡಳಿತದಲ್ಲಿರುವ ಪ್ರಭುತ್ವವನ್ನು ಓಲೈಸಲು ಸೃಷ್ಟಿಯಾದ ಉನ್ಮಾದ ರಾಷ್ಟ್ರೀಯವಾದ ಮತ್ತು ಮುಸ್ಲಿಮ್ ವಿರೋಧಿ ಭಾವನೆಗಳನ್ನು ಪ್ರಚೋದಿಸುವ ಗುಂಪಿನ ಭಾಗವಾಗಿದೆ. ಈ ಮೂಲಕ ತೀವ್ರ ಬಲಪಂಥವು ಕಲೆಗಳನ್ನು ಕೇವಲ ಸೆನ್ಸರ್ ಮಾಡುವುದರ ಆಚೆಗೆ ಅವುಗಳನ್ನು ತನ್ನ ಉದ್ದೇಶಗಳಿಗೆ ತಕ್ಕಂತೆ ಸ್ವಾಧೀನಪಡಿಸಿಕೊಳ್ಳುವ ಹಂತಕ್ಕೆ ತಲುಪಿರುವುದೂ ಸ್ಪಷ್ಟವಾಗುತ್ತದೆ. ಈ ನಾಟಕವು ಒಂದು ಅಪವಾದವಲ್ಲ. ಅದು ಹೊಸ ಮಾದರಿಯ ರಂಗಭೂಮಿಗೆ ಉದಾಹರಣೆಯಾಗಿದೆ. ಹಿಂದುತ್ವ ಆಡಳಿತದ ಅಡಿಯಲ್ಲಿ ರಾಜ್ಯದ ಸಾಂಸ್ಕೃತಿಕ ಸಂಸ್ಥೆಗಳನ್ನೂ, ಮುಖ್ಯವಾಹಿನಿ ರಂಗಭೂಮಿಯನ್ನೂ ಕ್ರಮೇಣ ಆಕ್ರಮಿಸಿಕೊಂಡಿರುವ ಮಾದರಿಯಾಗಿದೆ.
ಹಿಂದೆ ಭಾರತದಲ್ಲಿನ ತೀವ್ರ ಬಲಪಂಥೀಯ ಕಾರ್ಯಕರ್ತರು ಕಲೆಗಳನ್ನು ಹೊರಗಿನಿಂದ ಸೆನ್ಸರ್ ಮಾಡುವುದು ಅಥವಾ ಧ್ವಂಸಗೊಳಿಸುವುದಕ್ಕಾಗಿ ಹೆಚ್ಚು ಪರಿಚಿತರಾಗಿದ್ದರು. ಅವರು ಈಗಲೂ ಅದನ್ನು ಮುಂದುವರಿಸುತ್ತಿದ್ದಾರೆ. ಆದರೆ ಈಗ ‘ಒಳಗಿನಿಂದಲೇ’ ನಡೆಸುವ ಈ ಧ್ವಂಸಕಾರಿ ಹಸ್ತಕ್ಷೇಪವು ಹೊಸ ಬಗೆಯದಾಗಿದೆ.
ಹಿಂದೆ ಅವರು ಸಮಾಜವಿರೋಧಿ ಅಥವಾ ಅಂಚಿ ನಲ್ಲಿರುವ(ಸ್ಟ್ರಿಂಜ್) ಪುಂಡು ಪೋಕರಿ ಗುಂಪುಗಳೆಂದು ಪರಿಗಣಿಸ ಲ್ಪಡುತ್ತಿದ್ದರು. ಇಂದು ಅವರು ಸಂಸ್ಕೃತಿ ಸಚಿವಾಲಯದಿಂದ ಹಿಡಿದು ನಾಟಕ ತರಬೇತಿ ಸಂಸ್ಥೆಗಳವರೆಗೆ ಸಾಂಸ್ಕೃತಿಕ ವ್ಯವಹಾರಗಳ ಮುಂಚೂಣಿಯಲ್ಲಿದ್ದಾರೆ. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವರು ಅಂಚಿನಿಂದ ಕೇಂದ್ರ ಸ್ಥಾನಕ್ಕೆ ಬಂದಿದ್ದಾರೆ. ಪರಿಣಾಮವಾಗಿ ರಾಜ್ಯದ ಕಲಾ ಸಂಸ್ಥೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿದೆ. ನವ ಉದಾರವಾದಿ ಆಡಳಿತದಲ್ಲಿ ಸಾರ್ವಜನಿಕ ಸ್ಥಳಗಳೇ ನಾಟಕೀಯ ಸ್ವರೂಪ ಪಡೆಯುತ್ತಿರುವಾಗ ತೀವ್ರ ಬಲಪಂಥದ ರಂಗಭೂಮಿಯನ್ನು ನಾವು ಹೇಗೆ ಅರ್ಥೈಸಬೇಕು ಎಂಬ ಪ್ರಶ್ನೆಯೂ ಮಹತ್ವದ್ದಾಗಿದೆ. ಅಂದರೆ ತನ್ನ ಸಿದ್ಧಾಂತಕ್ಕೆ ಮಾನ್ಯತೆ ತಂದುಕೊಡುವ ಉದ್ದೇಶದಿಂದ ಸಂಸ್ಕೃತಿಯನ್ನು ನಾಟಕೀಯಗೊಳಿಸುವ ಸಮಗ್ರ ಪ್ರಕ್ರಿಯೆ ಎಂದು ಹೇಳಬಹುದು. ಈ ಸೌಂದರ್ಯಶಾಸ್ತ್ರೀಯ ಯೋಜನೆ ಮತ್ತು ಅದರ ಪರಿಣಾಮಗಳನ್ನು ನಾನು ನನ್ನ ಪ್ರಕಟಣೆಗೆ ಸಿದ್ಧವಾಗಿರುವ ‘ಸ್ಪೆಕ್ಟಕಲ್ ಸ್ಟೇಟ್ (2026)’ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ಈ ಲೇಖನದಲ್ಲಿ ಅದರ ರಂಗಭೂಮಿ ಕ್ಷೇತ್ರದಲ್ಲಿನ ಅಭಿವ್ಯಕ್ತಿಗಳ ಮೇಲಷ್ಟೇ ಗಮನಹರಿಸುತ್ತಿದ್ದೇನೆ.
ಬಲಪಂಥೀಯ ಸಂಸ್ಕೃತಿ ಮತ್ತು ಸಿದ್ಧಾಂತವನ್ನು ಉತ್ತೇಜಿಸುವ ಹಿಂದುತ್ವ ಪ್ರೊಪಗ್ಯಾಂಡ ಚಲನಚಿತ್ರಗಳು ಅಥವಾ ಎಚ್-ಪಾಪ್ ಸಂಗೀತದಂತೆಯೇ ತೀವ್ರ ಬಲಪಂಥೀಯ ರಂಗಭೂಮಿಯು ಒಂದು ಸೈದ್ಧಾಂತಿಕ ರಂಗಭೂಮಿ ರೂಪವಾಗಿದೆ. ಈ ರಂಗಭೂಮಿಯ ಲಕ್ಷಣಗಳು ಮತ್ತು ಅದರ ಕಲಾ ಮೀಮಾಂಸೆ ತತ್ವ ಯಾವುವು ಎಂಬ ಪ್ರಶ್ನೆಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.
ಭಾರತದಲ್ಲಿ ರಾಜಕೀಯ ರಂಗಭೂಮಿಗೆ(Political theatre) ದೀರ್ಘ ಇತಿಹಾಸ ಮತ್ತು ಸಮೃದ್ಧ ಪರಂಪರೆ ಇದೆ. ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್(ಇಪ್ಟಾ) ವಸಾಹತುವಿರೋಧಿ ಹೋರಾಟದಲ್ಲಿ, ಸ್ವಾತಂತ್ರ್ಯೋತ್ತರ ರಂಗಭೂಮಿ ಸಂಸ್ಕೃತಿಯ ರೂಪುಗೊಳಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತದ ವಿವಿಧ ಭಾಗಗಳಲ್ಲಿ ಸಾಮಾಜಿಕ ಚಳವಳಿಗಳಿಂದ ಹುಟ್ಟಿಕೊಂಡ ಸ್ತ್ರೀವಾದಿ ರಂಗಭೂಮಿ ಮತ್ತು ಜಾತಿವಿರೋಧಿ ರಂಗಭೂಮಿಯ ಕೊಡುಗೆಗಳನ್ನೂ ಇಲ್ಲಿ ಉಲ್ಲೇಖಿಸಬಹುದು. ಈ ಹಿನ್ನಲೆಯಿಂದಾಗಿ ಭಾರತದಲ್ಲಿ ರಾಜಕೀಯ ರಂಗಭೂಮಿಯ ಚರ್ಚೆಗಳು ಮುಖ್ಯವಾಗಿ ಎಡಪಂಥೀಯ ಮತ್ತು ಪ್ರಗತಿಪರ ಚಿಂತನೆಗಳಿಂದ ರೂಪುಗೊಂಡಿವೆ. ರಾಷ್ಟ್ರೀಯವಾದಿ ಹಾಗೂ ಬಲಪಂಥೀಯ ಭಾವನೆಗಳನ್ನು ಒಳಗೊಂಡ ನಾಟಕಗಳು ಬಂದಿದ್ದರೂ ಸಹ ತೀವ್ರ ಬಲಪಂಥೀಯ ರಂಗಭೂಮಿಯು ವಸಾಹತುಶಾಹಿ ಇತಿಹಾಸ ಮತ್ತು ಕಲಾ ಮೀಮಾಂಸೆ ದೃಷ್ಟಿಯಿಂದ ಹೊಸ ಬೆಳವಣಿಗೆಯಾಗಿದೆ ಎಂದು ನಾನು ವಾದಿಸುತ್ತೇನೆ. ಕೆಲವು ಸಾಮ್ಯತೆಗಳು ಮತ್ತು ನಿರಂತರತೆಗಳಿದ್ದರೂ ಅವು ವಿಭಿನ್ನವಾಗಿವೆ.
ಜನಪ್ರಿಯ ರಂಗಭೂಮಿಯಲ್ಲಿ ಹಿಂದೂ ಪುರಾಣ ಮತ್ತು ಧಾರ್ಮಿಕ ವಿಷಯಗಳು ಸಾಮಾನ್ಯವಾಗಿದ್ದರೂ ಅವುಗಳ ತೀವ್ರ ಬಲಪಂಥೀಯ ಸಂಬಂಧಗಳು ಸ್ಪಷ್ಟವಾಗಿರಲಿಲ್ಲ. ಆದರೂ ‘ಮೀ ನಾಥೂರಾಮ್ ಗೋಡ್ಸೆ ಬೋಲ್ತೋಯ್’ (ನಾನು ನಾಥೂರಾಮ್ ಮಾತನಾಡುತ್ತಿದ್ದೇನೆ) ಮೊದಲಾದ ಕೆಲವು ನಾಟಕಗಳನ್ನು ತೀವ್ರ ಬಲಪಂಥೀಯ ರಂಗಭೂಮಿಯ ಪೂರ್ವಗಾಮಿಗಳೆಂದು ಓದಬಹುದು. ಆದರೆ ಅವುಗಳ ಶೈಲಿ ಮತ್ತು ರೂಪಗಳು ಇನ್ನೂ ಸಾಂಪ್ರದಾಯಿಕವಾಗಿದ್ದವು. ಈಗ ಸೃಷ್ಟಿಯಾಗಿರುವ ಭಾರತದಲ್ಲಿನ ತೀವ್ರ ಬಲಪಂಥೀಯ ರಂಗಭೂಮಿ ಯು ಪ್ರಗತಿಪರ ಪರಂಪರೆಯ ಮೇಲೆ ಕೇವಲ ದಾಳಿ ಮಾಡುವುದು ಮಾತ್ರವಲ್ಲ, ಜೊತೆಗೆ ಅದರ ರಚನೆಗಳನ್ನು ಒಳಗಿನಿಂದಲೇ ಖಾಲಿಗೊಳಿಸಿ ತಲೆಕೆಳಗಾಗಿಸುತ್ತದೆ. ಒಂದೆಡೆ ವೇದ-ಬ್ರಾಹ್ಮಣ ಸಂಸ್ಕೃತಿಯನ್ನು ವೈಭವೀಕರಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಪ್ರತಿಕ್ರಾಂತಿಕಾರಿ ಸಿದ್ಧಾಂತವನ್ನು ಬಿತ್ತುತ್ತದೆ, ಮತ್ತೊಂದೆಡೆ ಇದು ‘ಪ್ರತಿ ರಂಗಭೂಮಿ ಕಲಾ ಮೀಮಾಂಸೆ’ಯನ್ನೂ ನಿರ್ಮಿಸುತ್ತದೆ.
ಈ ಪ್ರತಿ ರಂಗಭೂಮಿ ಮೀಮಾಂಸೆಯು ರಂಗಭೂಮಿಯ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಆದರ್ಶಗಳ ರಚನೆ ಒಳಗೆ ಭಾಗವಹಿಸುವುದರ ಮೂಲಕ ದಾಳಿ ನಡೆಸುತ್ತದೆ. ಇದು ರಂಗಭೂಮಿಯನ್ನು ಕೇವಲ ದೃಶ್ಯವೈಭವಕ್ಕೆ, ಪ್ರಭುತ್ವದ ಸೇವಕರ ಮಟ್ಟಕ್ಕೆ ಮಾತ್ರ ಇಳಿಸುವುದಿಲ್ಲ, ಜೊತೆಗೆ ರಂಗಭೂಮಿಯನ್ನು ಒಂದು ಸಾಧನವನ್ನಾಗಿ, ಸಾಧಾರಣ ಮತ್ತು ಗಂಭೀರತೆಯಿಲ್ಲದ ಮಾಧ್ಯಮವನ್ನಾಗಿ ಪರಿವರ್ತಿಸುತ್ತದೆ. ಹೀಗಾಗಿ ತೀವ್ರ ಬಲಪಂಥೀಯ ರಂಗಭೂಮಿಯು ಸಿದ್ಧಾಂತ ಮತ್ತು ಕಲಾ ಮೀಮಾಂಸೆ ಎರಡೂ ಮಟ್ಟಗಳಲ್ಲಿ ಗಂಭೀರ ಸಂಕಷ್ಟವನ್ನು ಉಂಟುಮಾಡುತ್ತದೆ.
ದಿಲ್ಲಿಯ ಬೀದಿ ನಾಟಕಗಳನ್ನು ತೀವ್ರ ಬಲಪಂಥದಲ್ಲಿ ಸೆಳೆದುಕೊಂಡಿರುವುದರ ಕುರಿತು ಬರೆದ ಅಪರ್ಣ ಮಹಿಯಾರಿಯಾ(2021) ಅವರಂತಹ ಕೆಲವೇ ಸಂಶೋಧಕರನ್ನು ಹೊರತುಪಡಿಸಿದರೆ ತೀವ್ರ ಬಲಪಂಥೀಯ ರಂಗಭೂಮಿ ಕುರಿತು ಶೈಕ್ಷಣಿಕ ಅಧ್ಯಯನಗಳು ಏಕೆ ವಿರಳ ವಾಗಿವೆ? ಭಾರತದಲ್ಲಿ ಈ ಪ್ರಕಾರ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಹೇಳಬಹುದು. ಜೊತೆಗೆ ಎಡ-ಉದಾರವಾದಿ ಶೈಕ್ಷಣಿಕ ವಲಯಗಳಲ್ಲಿ ಈ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸುವ ಹಿಂಜರಿಕೆಯೂ ಕಂಡುಬರುತ್ತದೆ. ಇಂತಹ ರಂಗಭೂಮಿಯನ್ನು ಸಾಮಾನ್ಯವಾಗಿ ಸೌಂದರ್ಯ ಮೀಮಾಂಸೆಯಿಲ್ಲದ, ಕಳಪೆ ಅನುಕರಣೆಯ, ವಿಮರ್ಶಾತ್ಮಕ ಅಂತರವಿಲ್ಲದ ಹಾಗೂ ಕೇವಲ ಭಾವನಾತ್ಮಕ ತೃಪ್ತಿಯನ್ನು ನೀಡುವ ಮಾಧ್ಯಮವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪ್ರತಿರೋಧದ ಪರಂಪರೆಯೂ ಇಲ್ಲ, ನಕಾರಾತ್ಮಕ ಮೀಮಾಂಸೆಯೂ ಇಲ್ಲ. ಆದ್ದರಿಂದ ಇದನ್ನು ನೋಡುವುದಕ್ಕೂ ವಿಮರ್ಶಿಸುವುದಕ್ಕೂ ಯೋಗ್ಯವಲ್ಲ ಎಂಬ ಧೋರಣೆ ಇದೆ.
ಆದರೆ ಇದು ದೃಶ್ಯವೈಭವ, ಆಕರ್ಷಣೆ ಮತ್ತು ಪ್ರಭಾವವನ್ನು ಹೊಂದಿದ್ದು ರಂಗಭೂಮಿಗೆ ಹೊಸ ರೀತಿಯ ಸಂಕಷ್ಟವನ್ನು ತಂದೊಡ್ಡುತ್ತಿದೆ. ಈಗ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ ಹಿಂದುತ್ವದ ತೀವ್ರ ಬಲಪಂಥೀಯ ರಂಗಭೂಮಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಕನಿಷ್ಠ ಮಟ್ಟದಲ್ಲಾದರೂ ರಂಗಭೂಮಿ ಮತ್ತು ಕಲಾ ಮೀಮಾಂಸೆಯ ಮೂಲಭೂತ ಪ್ರಶ್ನೆಗಳನ್ನು ಚರ್ಚಿಸಬೇಕಾಗಿದೆ.
ತೀವ್ರ ಬಲಪಂಥೀಯ ರಂಗಭೂಮಿಯ ಲಕ್ಷಣಗಳು ಯಾವುವು? ಅದು ಸಿದ್ಧಾಂತ ಮತ್ತು ಕಲಾ ಮೀಮಾಂಸೆಗೆ ಯಾವ ರೀತಿಯ ಸವಾಲುಗಳನ್ನು ಒಡ್ಡುತ್ತದೆ? ಅದನ್ನು ನಾವು ಹೇಗೆ ಓದಬೇಕು? ‘ಉತ್ತಮ’ ತೀವ್ರ ಬಲಪಂಥೀಯ ನಾಟಕ ಎಂದರೆ ಯಾವುದು? ರಂಗಭೂಮಿಯ ಸಂಪ್ರದಾಯಗಳನ್ನು ಅನುಸರಿಸುವ ಅತ್ಯಾಧುನಿಕ ನಾಟಕವೇ? ಅಥವಾ ಹೆಚ್ಚು ದ್ವೇಷವನ್ನು ಹರಡುವ, ತನ್ನ ಜನಾಂಗೀಯ-ಧಾರ್ಮಿಕ ಸಿದ್ಧಾಂತವನ್ನು ಇನ್ನಷ್ಟು ತೀವ್ರವಾಗಿ ಪ್ರಸಾರ ಮಾಡುವ ನಾಟಕವೇ? ಇವುಗಳೇ ಇಂದು ನಮ್ಮ ಮುಂದಿರುವ ಪ್ರಮುಖ ಪ್ರಶ್ನೆಗಳಾಗಿವೆ.
(ಕರ್ನಾಟಕದಲ್ಲಿ ಅಡ್ಡಂಡ ಕಾರ್ಯಪ್ಪ ಇಂತಹ ತೀವ್ರ ಬಲಪಂಥೀಯ ರಂಗಭೂಮಿಯನ್ನು ಸೃಷ್ಟಿಸಿದ್ದಾರೆ. -ಅನುವಾದಕ)






