ಐಡೆಂಟಿಟಿ ಪಾಲಿಟಿಕ್ಸ್‌ನ ಯುಗದಲ್ಲಿ ದಲಿತ ರಾಜಕಾರಣದ ಪಾತ್ರ

ಭಾರತೀಯ ಪ್ರಜಾಪ್ರಭುತ್ವದ ಪಯಣವನ್ನು ಗಮನಿಸಿದರೆ, ರಾಜಕೀಯ ಎಂದಿಗೂ ಕೇವಲ ಅಧಿಕಾರದ ಸ್ಪರ್ಧೆಯಾಗಿರಲಿಲ್ಲ. ಅದು ಸಮಾಜದ ವಿವಿಧ ವರ್ಗಗಳು ತಮ್ಮ ಅಸ್ತಿತ್ವ, ಹಕ್ಕುಗಳು ಮತ್ತು ಆಶಯಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿಯೂ ಕಾರ್ಯನಿರ್ವಹಿಸಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ ರಾಷ್ಟ್ರೀಯತೆಯ ರಾಜಕೀಯವನ್ನು ಪ್ರತಿನಿಧಿಸಿದರೆ, ನಂತರದ ಅವಧಿಯಲ್ಲಿ ವಿವಿಧ ಪಕ್ಷಗಳು ಧರ್ಮ, ಜಾತಿ, ಭಾಷೆ, ಪ್ರದೇಶ, ವರ್ಗ ಮತ್ತು ಸಾಮಾಜಿಕ ಅಸ್ಮಿತೆಗಳನ್ನು ಆಧಾರವಾಗಿಸಿಕೊಂಡು ತಮ್ಮ ರಾಜಕೀಯ ನೆಲೆಗಳನ್ನು ನಿರ್ಮಿಸಿಕೊಂಡವು. ಇಂತಹ ಸಂದರ್ಭದಲ್ಲಿ ಗುರುತಿನ ರಾಜಕೀಯ ಅಥವಾ ಐಡೆಂಟಿಟಿ ಪಾಲಿಟಿಕ್ಸ್ ಭಾರತೀಯ ರಾಜಕೀಯದ ಒಂದು ಪ್ರಮುಖ ವಾಸ್ತವವಾಗಿದೆ.
ಇಂದು ಭಾರತೀಯ ರಾಜಕೀಯದಲ್ಲಿ ಹಿಂದುತ್ವ, ಪ್ರಾದೇಶಿಕ ಅಸ್ಮಿತೆ, ಕಲ್ಯಾಣ ರಾಜಕಾರಣ, ಯುವಜನರ ಆಕಾಂಕ್ಷೆಗಳು ಹಾಗೂ ಹೊಸ ಸಾಮಾಜಿಕ ಮಾಧ್ಯಮಗಳ ಪ್ರಭಾವದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ದಲಿತ ರಾಜಕೀಯದ ಪಾತ್ರವೇನು ಎಂಬ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತಿದೆ. ಕೆಲವರು ದಲಿತ ರಾಜಕೀಯದ ಪ್ರಭಾವ ಕುಗ್ಗುತ್ತಿದೆ ಎಂದು ವಾದಿಸಿದರೆ, ಇನ್ನೂ ಕೆಲವರು ಅದು ಹೊಸ ರೂಪಗಳಲ್ಲಿ ವ್ಯಕ್ತವಾಗುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ.
ವಾಸ್ತವವಾಗಿ ದಲಿತ ರಾಜಕೀಯವು ಕೇವಲ ಒಂದು ಸಮುದಾಯದ ರಾಜಕೀಯವಲ್ಲ. ಅದು ಭಾರತೀಯ ಸಮಾಜದಲ್ಲಿನ ಅಸಮಾನತೆ, ಜಾತಿ ಆಧಾರಿತ ಶೋಷಣೆ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧದ ಹೋರಾಟದ ರಾಜಕೀಯವಾಗಿದೆ. ಅದರ ಮೂಲವನ್ನು ಅರ್ಥಮಾಡಿಕೊಳ್ಳ ಬೇಕಾದರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳತ್ತ ಮರಳಬೇಕು. ಅಂಬೇಡ್ಕರ್ ಅವರು ‘‘ಶಿಕ್ಷಣ ಪಡೆಯಿರಿ, ಹೋರಾಡಿರಿ, ಸಂಘಟಿತರಾಗಿರಿ’’ ಎಂಬ ಘೋಷಣೆಯ ಮೂಲಕ ಸಾಮಾಜಿಕ ಬದಲಾವಣೆಯ ದಿಕ್ಕನ್ನು ತೋರಿಸಿದರು. ಅವರ ದೃಷ್ಟಿಯಲ್ಲಿ ರಾಜಕೀಯ ಅಧಿಕಾರ ಅಂತಿಮ ಗುರಿಯಲ್ಲ; ಅದು ಸಾಮಾಜಿಕ ನ್ಯಾಯವನ್ನು ಸಾಧಿಸುವ ಸಾಧನವಾಗಿತ್ತು.
ಅಂಬೇಡ್ಕರ್ ಅವರು ನೀಡಿದ ಮತ್ತೊಂದು ಮಹತ್ವದ ಎಚ್ಚರಿಕೆ ಇಂದಿಗೂ ಪ್ರಸ್ತುತವಾಗಿದೆ. ಸಾಮಾಜಿಕ ಪ್ರಜಾಪ್ರಭುತ್ವದ ಆಧಾರವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಅವರು ಹೇಳಿದ್ದರು. ಭಾರತವು ಮತದಾನದ ಹಕ್ಕು ನೀಡುವ ಮೂಲಕ ರಾಜಕೀಯ ಸಮಾನತೆಯನ್ನು ಸ್ಥಾಪಿಸಿದರೂ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಮುಂದುವರಿದರೆ ಪ್ರಜಾಪ್ರಭುತ್ವ ಅಪೂರ್ಣವಾಗಿಯೇ ಉಳಿಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ದಲಿತ ರಾಜಕೀಯದ ಇತಿಹಾಸವನ್ನು ನೋಡಿದರೆ ಅದು ಕೇವಲ ಚುನಾವಣಾ ರಾಜಕೀಯದಿಂದ ರೂಪುಗೊಂಡಿಲ್ಲ. ಮಹಾಡ್ ಸತ್ಯಾಗ್ರಹ, ಕಾಲಾರಾಮ ದೇವಸ್ಥಾನ ಪ್ರವೇಶ ಚಳವಳಿ, ದಲಿತ ಸಾಹಿತ್ಯ ಚಳವಳಿ, ದಲಿತ ಪ್ಯಾಂಥರ್ಸ್ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳು ಅದರ ಅಡಿಪಾಯವಾಗಿವೆ. ಈ ಚಳವಳಿಗಳು ದಲಿತ ಸಮುದಾಯದೊಳಗೆ ಆತ್ಮಗೌರವ ಮತ್ತು ಹಕ್ಕುಗಳ ಅರಿವನ್ನು ಮೂಡಿಸಿದವು. ಸಾಮಾಜಿಕ ಜಾಗೃತಿಯೇ ನಂತರ ರಾಜಕೀಯ ಪ್ರತಿನಿಧಿತ್ವದ ಬೇಡಿಕೆಗೆ ಕಾರಣವಾಯಿತು.
1980 ಮತ್ತು 1990ರ ದಶಕಗಳಲ್ಲಿ ಕಾನ್ಶೀರಾಮ್ ಮತ್ತು ಬಹುಜನ ಸಮಾಜ ಪಕ್ಷದ ಉದಯವು ದಲಿತ ರಾಜಕೀಯಕ್ಕೆ ಹೊಸ ಆಯಾಮ ನೀಡಿತು. ರಾಜಕೀಯ ಅಧಿಕಾರವೇ ಎಲ್ಲ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಎಂಬ ಕಾನ್ಶೀರಾಮ್ ಅವರ ಮಾತು ದಲಿತ ರಾಜಕೀಯದ ಹೊಸ ದಿಕ್ಕನ್ನು ನಿರ್ಧರಿಸಿತು. ಅಧಿಕಾರದ ಕೇಂದ್ರಗಳಲ್ಲಿ ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳದೆ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬ ಸಂದೇಶವನ್ನು ಅವರು ನೀಡಿದರು. ಉತ್ತರ ಪ್ರದೇಶದಲ್ಲಿ ಬಹುಜನ ರಾಜಕೀಯವು ಒಂದು ಹಂತದಲ್ಲಿ ರಾಷ್ಟ್ರೀಯ ರಾಜಕೀಯದ ಚರ್ಚೆಯನ್ನು ಬದಲಾಯಿಸಿತ್ತು.
ಆದರೆ ಇಂದಿನ ಪರಿಸ್ಥಿತಿ ಹಿಂದಿನಂತಿಲ್ಲ. ಭಾರತೀಯ ಸಮಾಜದಲ್ಲಿ ಹೊಸ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳು ಸಂಭವಿಸುತ್ತಿವೆ. ನಗರೀಕರಣ, ಶಿಕ್ಷಣದ ವಿಸ್ತರಣೆ, ಮಧ್ಯಮ ವರ್ಗದ ಬೆಳವಣಿಗೆ, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ರಾಜಕೀಯದ ಸ್ವರೂಪವೇ ಬದಲಾಗುತ್ತಿದೆ. ಯುವ ಮತದಾರರು ಉದ್ಯೋಗ, ಅಭಿವೃದ್ಧಿ, ಜೀವನಮಟ್ಟ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಆದರೂ ಜಾತಿ ಎಂಬ ವಾಸ್ತವಿಕತೆ ಭಾರತದಿಂದ ಮಾಯವಾಗಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಅಂಕಿಅಂಶಗಳು ಹಾಗೂ ವಿವಿಧ ಅಧ್ಯಯನಗಳು ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರಗಳು ಇನ್ನೂ ಮುಂದುವರಿಯುತ್ತಿರುವುದನ್ನು ಸೂಚಿಸುತ್ತವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಮತ್ತು ಗ್ರಾಮೀಣ ಸಾಮಾಜಿಕ ಜೀವನದಲ್ಲಿ ದಲಿತ ಸಮುದಾಯಗಳು ಇನ್ನೂ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಹೀಗಿರುವಾಗ ದಲಿತ ರಾಜಕೀಯದ ಪ್ರಸ್ತುತತೆ ಕೊನೆಗೊಂಡಿದೆ ಎಂದು ಹೇಳುವುದು ವಾಸ್ತವಿಕವಾಗುವುದಿಲ್ಲ.
ಇಂದಿನ ದಲಿತ ರಾಜಕೀಯದ ಮುಂದೆ ಇರುವ ದೊಡ್ಡ ಸವಾಲು ಅದರ ಪುನರ್‌ನಿರ್ಮಾಣವಾಗಿದೆ. ಕೇವಲ ಜಾತಿ ಗುರುತಿನ ಆಧಾರದ ಮೇಲೆ ರಾಜಕೀಯ ನಡೆಸುವುದು ಸಾಕಾಗುವುದಿಲ್ಲ. ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಶಿಕ್ಷಣ, ಉದ್ಯೋಗ, ಭೂಹಕ್ಕು, ಆರೋಗ್ಯ, ಡಿಜಿಟಲ್ ಅವಕಾಶಗಳು ಮತ್ತು ಆರ್ಥಿಕ ಸಮಾನತೆ ಯಂತಹ ವಿಷಯಗಳೊಂದಿಗೆ ಜೋಡಿಸಬೇಕಾಗಿದೆ. ದಲಿತ ರಾಜಕೀಯವು ಹೊಸ ತಲೆಮಾರಿನ ಆಶಯಗಳೊಂದಿಗೆ ಸಂವಾದ ನಡೆಸಬೇಕಾಗಿದೆ.
ಇದೇ ಸಂದರ್ಭದಲ್ಲಿ ಬಹುಜನ ಪರಿಕಲ್ಪನೆಯೂ ಹೊಸ ಅರ್ಥವನ್ನು ಪಡೆಯುತ್ತಿದೆ. ಫುಲೆ, ಅಂಬೇಡ್ಕರ್ ಮತ್ತು ಕಾನ್ಶೀರಾಮ್‌ಪ್ರತಿಪಾದಿಸಿದ ಬಹುಜನ ಚಿಂತನೆ ಕೇವಲ ಸಂಖ್ಯಾಬಲದ ರಾಜಕೀಯವಾಗಿರಲಿಲ್ಲ. ಅದು ಸಮಾಜದ ಅಂಚಿನಲ್ಲಿರುವ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿತ್ತು. ಇಂದಿನ ದಿನಗಳಲ್ಲಿ ಈ ಪರಿಕಲ್ಪನೆಯನ್ನು ಹೊಸ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳಿಗೆ ಹೊಂದುವಂತೆ ಮರುಪರಿಭಾಷಿಸುವ ಅಗತ್ಯವಿದೆ.
ಪ್ರಜಾಪ್ರಭುತ್ವದ ಆರೋಗ್ಯವನ್ನು ಕೇವಲ ಸರಕಾರಗಳನ್ನು ಬದಲಿಸುವ ಸಾಮರ್ಥ್ಯದಿಂದ ಅಳೆಯಲಾಗುವುದಿಲ್ಲ. ಸಮಾಜದ ದುರ್ಬಲ ವರ್ಗಗಳಿಗೆ ಎಷ್ಟು ಅವಕಾಶಗಳು ದೊರೆಯುತ್ತವೆ, ಅವರ ಧ್ವನಿ ನಿರ್ಧಾರ ಪ್ರಕ್ರಿಯೆಗಳಲ್ಲಿ ಎಷ್ಟು ಪ್ರತಿಧ್ವನಿಸುತ್ತದೆ ಮತ್ತು ಸಮಾನತೆಯ ಮೌಲ್ಯಗಳು ಎಷ್ಟು ಬಲವಾಗುತ್ತವೆ ಎಂಬುದರ ಆಧಾರದ ಮೇಲೂ ಅದನ್ನು ಅಳೆಯಬೇಕು. ಈ ದೃಷ್ಟಿಯಿಂದ ನೋಡಿದರೆ ದಲಿತ ರಾಜಕೀಯವು ಕೇವಲ ಒಂದು ಸಮುದಾಯದ ರಾಜಕೀಯವಾಗದೆ, ಭಾರತೀಯ ಪ್ರಜಾಪ್ರಭುತ್ವದ ಆತ್ಮವನ್ನು ಬಲಪಡಿಸುವ ಚಳವಳಿಯಾಗಿದೆ.
ಇಂದು ಗುರುತಿನ ರಾಜಕೀಯದ ವಿವಿಧ ರೂಪಗಳು ಭಾರತೀಯ ರಾಜಕೀಯದಲ್ಲಿ ಕಾಣಿಸುತ್ತಿವೆ. ಆದರೆ ಅವುಗಳ ನಡುವೆ ದಲಿತ ರಾಜಕೀಯದ ವಿಶೇಷತೆ ಏನೆಂದರೆ, ಅದು ಅಧಿಕಾರದ ಹಂಚಿಕೆಯನ್ನು ಮಾತ್ರವಲ್ಲದೆ ಸಮಾಜದ ಪುನರ್‌ರಚನೆಯ ಪ್ರಶ್ನೆಯನ್ನು ಮುಂದಿಡುತ್ತದೆ. ಸಮಾನತೆ, ಘನತೆ ಮತ್ತು ನ್ಯಾಯ ಎಂಬ ಮೌಲ್ಯಗಳು ಭಾರತದ ಪ್ರಜಾಪ್ರಭುತ್ವದ ಕೇಂದ್ರದಲ್ಲಿರುವವರೆಗೆ ದಲಿತ ರಾಜಕೀಯದ ಪಾತ್ರವೂ ಪ್ರಸ್ತುತವಾಗಿಯೇ ಉಳಿಯಲಿದೆ.
ಹೀಗಾಗಿ ಪ್ರಶ್ನೆ ದಲಿತ ರಾಜಕೀಯದ ಅಗತ್ಯವಿದೆಯೇ ಎಂಬುದಲ್ಲ; ಬದಲಾಗಿ ಅದು ಇಂದಿನ ಭಾರತದಲ್ಲಿ ಯಾವ ಹೊಸ ರೂಪದಲ್ಲಿ ಸಮಾಜದ ಮುಂದೆ ಬರಬೇಕು ಎಂಬುದಾಗಿದೆ. ಆ ಪ್ರಶ್ನೆಗೆ ಸಿಗುವ ಉತ್ತರವೇ ಮುಂದಿನ ದಶಕಗಳ ಭಾರತೀಯ ರಾಜಕೀಯದ ದಿಕ್ಕನ್ನು ನಿರ್ಧರಿಸಬಹುದು.






