ದಾಸರಿಗೇ ದಾಸರು ‘ದೊಂಬದಾಸ’ ‘ಚೆನ್ನದಾಸರು’

ದೊಂಬಿದಾಸ/ಚೆನ್ನದಾಸ ಸಮುದಾಯದವರು ಬಡವರು, ಅಸಹಾಯಕರು, ಅತ್ಯಂತ ಸೌಮ್ಯ ಸ್ವಭಾವದವರು, ಭಯಸ್ತರು, ಯಾರ ಗೋಜಿಗೂ ಹೋಗದೆ ತಮ್ಮ ಪಾಡಿಗೆ ತಾವು ಇರುವವರು. ಈ ಕಾರಣಕ್ಕಾಗಿಯೇ ಇವರು ಧ್ವನಿಯೆತ್ತಿ ಸರಕಾರಗಳಲ್ಲಿ ತಮ್ಮ ಹಕ್ಕುಗಳನ್ನು ಕೇಳಲಾರರು. ಅಸಂಘಟಿತವಾದ ಈ ಸಮುದಾಯ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವಾಗಿದೆ. ಇವರ ಮೌನವನ್ನೇ ದೌರ್ಬಲ್ಯ ಎಂದು ಅರಿತ ಸರಕಾರಗಳು ಇವರ ಯಾವ ಬೇಡಿಕೆಯನ್ನೂ ಈಡೇರಿಸುವ ಮನಸ್ಸು ಮಾಡದಿರುವುದು ದುರಂತ.
‘‘ಕನಕ ದಾಸರ ಮನೆಯ
ಕಸ ಗುಡಿಸೋ ಬಡದಾಸ,
ಪುರಂದರ ದಾಸರಿಗೆ
ಮಡಿ ಮಾಡೋ ದಾಸ,
ದಾಸನಿಗೇ ದಾಸ ನಾನಯ್ಯ..’’
ಎಂಬ ಕೈವಾರ ತಾತಯ್ಯನವರ ತತ್ವಪದವೊಂದನ್ನು ನೆನೆದಾಗಲೆಲ್ಲ ನಮ್ಮ ದೊಂಬಿದಾಸ, ಚೆನ್ನದಾಸರು ನೆನಪಾಗುತ್ತಾರೆ. ಯಾಕೆಂದರೆ ಇವರು ಕೇವಲ ದಾಸಶ್ರೇಷ್ಠರಿಗಷ್ಟೇ ದಾಸರಲ್ಲ ಇಡೀ ಮನುಕುಲಕ್ಕೇ ದಾಸರು. ಅತ್ಯಂತ ಸುಶ್ರಾವ್ಯವಾಗಿ ದಾಸರ ಪದಗಳನ್ನು ಹಾಡುತ್ತಾ ಮನೆಮನೆಯ ಮುಂದೆ ನಿಂತು ಭಿಕ್ಷೆ ಬೇಡುವ ಈ ಸಮುದಾಯಕ್ಕೆ ನೂರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸವಿದೆ. ರಾಮಾಯಣ, ಮಹಾಭಾರತಗಳನ್ನು ತಮ್ಮ ಹಾಡಿನ ಮೂಲಕ ಅನಕ್ಷರಸ್ಥ ಜನಪದರಿಗೆ ಮೊತ್ತಮೊದಲಿಗೆ ದಾಟಿಸಿದವರೇ ಈ ದೊಂಬಿದಾಸರು ಮತ್ತು ಚೆನ್ನದಾಸರು. ತೆಲುಗಿನವರು ಎನ್.ಟಿ.ಆರ್. ಮೂಲಕ ಮತ್ತು ರಮಾನಂದ ಸಾಗರ್ ಟಿ.ವಿ. ಮೂಲಕ ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುವ ಮುಂಚೆ ಶತಶತಮಾನಗಳ ಹಿಂದಿನಿಂದಲೂ ಈ ಮಹಾಕಾವ್ಯಗಳನ್ನು ಜನಪದರಲ್ಲಿ ಪಸರಿಸುತ್ತಾ ಜೀವಂತವಾಗಿ ಇಟ್ಟವರು ಈ ನಮ್ಮ ದಾಸರು. ದುರಂತವೆಂದರೆ ಸಿನೆಮಾ, ಟಿ.ವಿ.ಗಳಲ್ಲಿ ರಾಮಾಯಣ ಮಹಾಭಾರತಗಳನ್ನು ತೋರಿಸಿದವರು ಸಾಕಷ್ಟು ಹಣ ಮಾಡಿ ಕೋಟ್ಯಧೀಶರಾದರು, ಆದರೆ ತಮ್ಮ ತಲೆತಲಾಂತರಗಳಿಂದ ರಾಮಾಯಣ, ಮಹಾಭಾರತಗಳನ್ನು ಹಾಡುತ್ತಲೇ ಈ ಮಹಾಕಾವ್ಯಗಳನ್ನು ಜೀವಂತವಾಗಿ ಇಟ್ಟಿರುವ ನಮ್ಮ ದಾಸರು ಮಾತ್ರ ಭಿಕ್ಷುಕರಾಗಿಯೇ ಉಳಿದುಬಿಟ್ಟರು!
ಮೂಲತಃ ಅಪ್ಪಟ ಅಲೆಮಾರಿಗಳಾದ ದೊಂಬಿದಾಸ, ಚೆನ್ನದಾಸರು ವೈಷ್ಣವ ಸಂಪ್ರದಾಯದ ದಾಸಪದಗಳನ್ನು ಹಾಡುತ್ತಾ ಇಂದಿಗೂ ಭಿಕ್ಷೆ ಬೇಡುತ್ತಾ ಬೀದಿಬೀದಿ ಅಲೆಯುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವರನ್ನು ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ದೊಂಬಿದಾಸ, ಚೆನ್ನದಾಸ, ಗಂಡುದಾಸ, ದಂಗದಾಸ, ತಿರುಮಲದಾಸ, ಹೊಲೇದಾಸ, ಚಕ್ರವಾದ್ಯದಾಸ, ಮಾಲದಾಸ, ಕಾಶಿದಾಸ, ಬುಟ್ಟಿದಾಸ, ಗರುಡಗಂಬ ದಾಸ, ಆಟದಾಸ, ಚಕ್ರವರ್ತಿದಾಸ, ಚೆಂಚುದಾಸ ಮುಂತಾಗಿ ಗುರುತಿಸಿಕೊಂಡವರನ್ನು ಕೋಲೆಬಸವ, ಗಂಗೆದ್ದಲೊಳ್ಳು, ಗೋಪಾಲಬುಟ್ಟಿದಾಸ ಮತ್ತು ಹೆಣ್ಣುವೇಶದವರು ಎಂದೂ ತೆಲುಗಿನ ಪ್ರದೇಶಗಳಲ್ಲಿ ಕರೆಯತ್ತಾರೆ.
ದಾಸರು ಎಂದರೆ ದೇವರ ಸೇವಕ ಎಂದರ್ಥ. ಈ ಕಾರಣಕ್ಕೆ ಅವರನ್ನು ಶಂಖದಾಸರಿ, ಶನಿವಾರ ದಾಸರಿ, ನಾಮಧಾರಿ ದಾಸರಿ, ಧರ್ಮದಾಸರಿ ಎಂದೂ ಕರೆಯುವುದುಂಟು. ಇವರಲ್ಲಿ ಒಂದು ಉಪಪಂಗಡ ಕುಂಕುಮ ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸುವವರಿದ್ದಾರೆ. ಇವರನ್ನು ಬುಕ್ಕದಾಸರಿ, ಕುಂಕುಮದಾಸರಿ ಎಂದೂ ಕರೆಯುತ್ತಾರೆ. ಇವರಲ್ಲೂ ಒಳಪಂಗಡಗಳಿವೆ. ಅವರ ವೃತ್ತಿಗನುಸಾರವಾಗಿ ಸುನಿವ, ಶಂಖು, ನಾಮಧಾರಿ, ಧರ್ಮ, ಮುಂದಾಳ್ರು, ಪಲ್, ಉಮ್ಮೆತ್ತು ಎಂದು ಕರೆಯುತ್ತಾರೆ. ಇವರಲ್ಲಿ ಅಂಬಿಶೆಟ್ಟೊಳ್ಳು, ಅಕ್ಕೆನವರ್, ಆವಲೊಳ್ಳು, ಭೀಮನ್ನೊಳ್ಳು, ದ್ಯಾವರ ಪಲ್ಲೋಳ್ಳು, ದುಂಪಲೊಳ್ಳು ಮುಂತಾಗಿ 121 ಬೆಡಗುಗಳಿವೆ, ಈ ಬೆಡಗುಗಳ ಪಟ್ಟಿ ನೀಡುತ್ತಾ ಹೋದರೆ ಅದಕ್ಕೆ ಕೊನೆಮೊದಲಿಲ್ಲ. ಸಾಮಾಜಿಕವಾಗಿ ಚೆನ್ನದಾಸರು ಹೊಲೆಯರಿಂದ ಛಿದ್ರಗೊಂಡು ಹೊರಬಂದ ಪಂಗಡವಾಗಿದೆ. ಲಕ್ಷ್ಮೀಪತಿ ಕೋಲಾರ ಬರೆದ ‘ಮಾಸ್ಟೀಕರ ಸಂಸ್ಕೃತಿ’ ಎಂಬ ಕೃತಿಯಲ್ಲಿ ಹೇಳಿರುವಂತೆ ಚಾಂಗಾ ಪೆದ್ದಕ್ಕ ಎಂಬಾಕೆ ಸುತ್ತಲ ಏಳು ಊರುಗಳಿಗೆ ತೋಟಿಯಾಗಿದ್ದರು. ಆಕೆಯ ಮಕ್ಕಳಲ್ಲಿ ಕೊನೆಯವನೇ ಚೆನ್ನದಾಸು. ಇಂತಹ ಅನೇಕ ಕತೆಗಳು ಈ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆಯಲ್ಲಿವೆ.
ಇವರಲ್ಲೂ ಕುಲಪಂಚಾಯಿತಿಗಳಿದ್ದು ಇಲ್ಲಿನ ಸ್ವಘೋಷಿತ ‘ಯಜಮಾನರೂ’ ಇಲ್ಲಿನ ಮುಗ್ಧರ ದೌರ್ಬಲ್ಯಗಳನ್ನು ಸಾಕಷ್ಟು ದುರಪಯೋಗಪಡಿಸಿಕೊಂಡ ದೂರುಗಳಿವೆ.
ಮೂಲತಃ ಆಂಧ್ರಪ್ರದೇಶದಿಂದ ಕೃಷ್ಣದೇವರಾಯನ ಕಾಲದಲ್ಲಿ ಕರ್ನಾಟಕಕ್ಕೆ ವಲಸೆ ಬಂದವರೆಂದು ಹೇಳಲಾದ ಈ ಸಮುದಾಯದ ಮಾತೃಭಾಷೆ ಬಹುತೇಕ ತೆಲುಗು. ಭಿಕ್ಷಾಟನೆಯ ಜತೆಗೆ ಸಂತೆ, ಜಾತ್ರೆ, ಮತ್ತಿತರ ಜನಸಂದಣಿಯ ಪ್ರದೇಶದಲ್ಲಿ ತಮ್ಮ ವಾದ್ಯ ಸಲಕರಣೆಗಳಾದ ಹಾರ್ಮೋನಿಯಂ, ತಬಲ, ತಂಬೂರಿ, ಏಕತಾರಿಗಳನ್ನು ನುಡಿಸುತ್ತಾ ಗಾಯನ ಮತ್ತು ಅಭಿನಯ ಕೂಡ ಮಾಡುತ್ತಾ ತುತ್ತಿನಚೀಲ ತುಂಬಿಕೊಳ್ಳುತ್ತಿದ್ದರು. ಕಾಲಚಕ್ರ ಬದಲಾಗಿ ಆಧುನಿಕ ಉಪಕರಣಗಳಾದ ರೇಡಿಯೋ, ಟಿ.ವಿ., ಮೊಬೈಲ್‌ಗಳು ಬಂದ ಮೇಲೆ ಇವರ ಕುಲಕಸುಬಿಗೆ ಭೀಕರ ಹೊಡೆತ ಬಿತ್ತು. ತಮ್ಮ ಹಾಡನ್ನು ಕೇಳುವ ಕಿವಿಗಳು ದೂರವಾದ ಮೇಲೆ ಹೊಟ್ಟೆಪಾಡಿಗಾಗಿ ಪರ್ಯಾಯ ಮಾರ್ಗಗಳನ್ನು ಅವಲಂಬಿಸತೊಡಗಿದರು. ಗಂಡಸರು ಫೋಟೊ ರಿಪೇರಿ, ಕೂದಲು ಆಯುವುದು, ಚವಲಿ ಹೊಸೆಯುವುದೇ ಮುಂತಾದ ಕಾಯಕಗಳ ಕಡೆ ಹೊರಟರೆ, ಹೆಂಗಸರು ಹಳ್ಳಿ, ಕೇರಿಗಳಲ್ಲಿ, ಬೀದಿಬೀದಿ ಅಲೆಯುತ್ತಾ ಸೂಜಿ, ದಬ್ಬಳ, ಬಳೆಗಳನ್ನು ಮಾರುತ್ತಾ ಜೀವ ಸವೆಸುತ್ತಿದ್ದಾರೆ. ಇನ್ನೂ ಕೆಲವು ಹಳ್ಳಿಗಳಲ್ಲಿ ಪೌರಾಣಿಕ ಕೇಳಿಕೆ, ನಾಟಕದ ಗುರುಗಳಾಗಿ ನಾಟಕಗಳು ನಡೆಯುವಲ್ಲಿ ನಾಟಕ, ಹಾಡು ಕಲಿಸುತ್ತಾ ಹಾರ್ಮೋನಿಯಂ ನುಡಿಸುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಮ್ಮ ಆಯೋಗದಲ್ಲಿ ನಾವು ಈ ಸಮುದಾಯದ ಕುರಿತು ಕುಲಶಾಸ್ತ್ರೀಯ ಅಧ್ಯಯನ ಮಾಡಿದಾಗ ಈ ಸಮುದಾಯದ ಒಂದು ಪರ್ಸೆಂಟ್ ಜನರಿಗೂ ಭೂಮಿ ಇದ್ದ ದಾಖಲೆ ಕಾಣಲಿಲ್ಲ. ಹೀಗೆ ಭೂರಹಿತ, ನೆಲೆರಹಿತ ಸಮುದಾಯ ಭಿಕ್ಷೆಯಲ್ಲೇ ತನ್ನ ತಲೆಮಾರುಗಳನ್ನು ಕಳೆದುಬಿಟ್ಟಿತು.
ದೊಂಬಿದಾಸ ಮತ್ತು ಚೆನ್ನದಾಸ ಸಮುದಾಯ ಒಂದೇ ಆಗಿದ್ದರೂ ದೊಂಬಿದಾಸರನ್ನು ಹಿಂದುಳಿದ ವರ್ಗದ ಪ್ರವರ್ಗ ಒಂದರ ಪಟ್ಟಿಯಲ್ಲಿ ಇರಿಸಿದ್ದು, ಚೆನ್ನದಾಸರನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರಿಸಲಾಗಿದೆ. ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಗರಾಜ್ ದೊಂಬಿದಾಸರಾಗಿದ್ದರೆ ಅವರ ಪತ್ನಿ ಚೆನ್ನದಾಸರ ಪಟ್ಟಿಯಲ್ಲಿದ್ದಾರೆ. ಒಂದೇ ಮನೆಯಲ್ಲಿ ಗಂಡ ಒಬಿಸಿ, ಹೆಂಡತಿ ಮಾತ್ರ ಎಸ್.ಸಿ.! ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬೃಹಸ್ಪತಿಗಳ ‘ಜ್ಞಾನ’ದಿಂದ ಇಂತಹ ಅನಾಹುತಗಳಾಗುತ್ತಿವೆ. ದೊಂಬಿದಾಸರನ್ನೂ ಸಹ ಪರಿಶಿಷ್ಟ ಪಂಗಡದಲ್ಲಿ ಹಾಕಬೇಕೆಂಬ ಹೋರಾಟ ನಡೆಯುತ್ತಲೇ ಇದೆ. ಹಿಂದೆಯೇ ನಮ್ಮ ಆಯೋಗವೂ ಸಲಹೆ ನೀಡಿದೆ. ಆದರೆ ಈ ಹೋರಾಟವನ್ನು ಗ್ರಹಿಸುವ, ಆಯೋಗದ ಸಲಹೆಯನ್ನು ಗಮನಿಸುವ ಇಂದ್ರಿಯ ಶಕ್ತಿ ಸರಕಾರ ನಡೆಸುವವರಿಗೆ ಇಲ್ಲವಾಗಿದೆ.
ದೊಂಬಿದಾಸ/ಚೆನ್ನದಾಸರು ಸದಾ ಹಣೆಯ ಮೇಲೆ ಮೂರು ನಾಮ ಧರಿಸಿದ ವೈಷ್ಣವ ಸಂಪ್ರದಾಯಸ್ಥರು. ವೆಂಕಟರಮಣ ಸ್ವಾಮಿ, ಗೋವಿಂದರಾಜಸ್ವಾಮಿ, ನರಸಿಂಹಸ್ವಾಮಿ, ಮುಂತಾದ ದೈವಾರಾಧಕರು. ವಿಚಿತ್ರವೆಂದರೆ ಅವೈದಿಕ ಮತ್ತು ಶೈವ ಸಂಪ್ರದಾಯದ ಹೆಣ್ಣು ದೇವತೆಗಳಾದ ಮಧುಗಿರಿ ಮಾರೆಮ್ಮ, ಗೌರಸಂಧ್ರ ಮಾರಮ್ಮ, ಸುಂಕಲಮ್ಮ, ಎಲ್ಲಮ್ಮ, ಕಬ್ಬಾಳಮ್ಮ, ಮುತ್ಯಾಲಮ್ಮ ಮುಂತಾದ ದೇವತೆಗಳ ಆರಾಧಕರೂ ಆಗಿದ್ದಾರೆ. ಈ ತಮ್ಮ ಮಾತೃದೇವತೆಗಳಿಗೆ ಕುರಿ, ಕೋಳಿಗಳ ಬಲಿಯನ್ನೂ ನೀಡುತ್ತಾರೆ. ಮಾಂಸ ಮತ್ತು ಮದ್ಯವನ್ನು ನೈವೇದ್ಯವಾಗಿಯೂ ಅರ್ಪಿಸುತ್ತಾರೆ. ಹುಟ್ಟು, ಸಾವುಗಳ ಸಂದರ್ಭದಲ್ಲೂ ಮಾಂಸ, ಹೆಂಡದ ಸಮಾರಾಧನೆ ಇದ್ದೇ ಇರುತ್ತದೆ. ಆಶ್ಚರ್ಯವೆಂದರೆ ಈ ದೊಂಬಿದಾಸ/ಚೆನ್ನದಾಸರು ವೈಷ್ಣವ ಮತ್ತು ಶೈವ ಪಂಥಗಳ ಸಮನ್ವಯಕಾರರೂ ಆಗಿದ್ದಾರೆ.
ಇತರ ಶೂದ್ರ ಸಮುದಾಯಗಳಲ್ಲೂ ದಾಸರದೇ ಆದ ಒಂದು ಪಂಗಡವಿರುತ್ತದೆ. ಉದಾಹರಣೆಗೆ ದಾಸ ಒಕ್ಕಲಿಗರು, ದಾಸ ಬಲಜಿಗರು, ದಾಸ ಕುರುಬರು, ದಾಸ ಉಪ್ಪಾರರು.. ಆದರೆ ಈ ದಾಸರಿಗೂ ದೊಂಬಿದಾಸರಿಗೂ ಸಂಬಂಧವಿಲ್ಲ. ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕಾದರೆ ದಾಸಯ್ಯನನ್ನು ಕಡ್ಡಾಯವಾಗಿ ಕರೆದೊಯ್ಯಬೇಕಿತ್ತು. ಈ ದಾಸಯ್ಯ ಮುಂದೆ ಗರುಡಗಂಬ ಹೊತ್ತು ಶಂಖ ಊದುತ್ತಾ ನಡೆದರೆ ಅವರ ಹಿಂದೆ ಭಕ್ತಾದಿಗಳು ಹೋಗುತಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಗರುಡಗಂಬದ ದಾಸಯ್ಯ’ ಕತೆ ಬಹಳ ಜನಪ್ರಿಯವಾಗಿದ್ದು ಅದನ್ನು ಪ್ರೌಢ ಶಿಕ್ಷಣದ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿಯೂ ಇಟ್ಟಿದ್ದರು.
ದೊಂಬಿದಾಸ/ಚೆನ್ನದಾಸ ಸಮುದಾಯದವರು ಬಡವರು, ಅಸಹಾಯಕರು, ಅತ್ಯಂತ ಸೌಮ್ಯ ಸ್ವಭಾವದವರು, ಭಯಸ್ತರು, ಯಾರ ಗೋಜಿಗೂ ಹೋಗದೆ ತಮ್ಮ ಪಾಡಿಗೆ ತಾವು ಇರುವವರು. ಈ ಕಾರಣಕ್ಕಾಗಿಯೇ ಇವರು ಧ್ವನಿಯೆತ್ತಿ ಸರಕಾರಗಳಲ್ಲಿ ತಮ್ಮ ಹಕ್ಕುಗಳನ್ನು ಕೇಳಲಾರರು. ಅಸಂಘಟಿತವಾದ ಈ ಸಮುದಾಯ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವಾಗಿದೆ. ಇವರ ಮೌನವನ್ನೇ ದೌರ್ಬಲ್ಯ ಎಂದು ಅರಿತ ಸರಕಾರಗಳು ಇವರ ಯಾವ ಬೇಡಿಕೆಯನ್ನೂ ಈಡೇರಿಸುವ ಮನಸ್ಸು ಮಾಡದಿರುವುದು ದುರಂತ.







