ತೊಗಲುಗೊಂಬೆಯಾಟದ ‘ಶಿಳ್ಳೇಕ್ಯಾತ’ ‘ಕಿಳ್ಳೇಕ್ಯಾತ’

ಕಿಳ್ಳೇಕ್ಯಾತ, ಕಟಬು, ಕಟಬರ, ಜಾಲಗಾರ ಸಮುದಾಯಗಳು ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಪಟ್ಟಿಯಲ್ಲಿವೆ. ಇದೇ ಸಮುದಾಯದ ‘ಶಿಳ್ಳೇಕ್ಯಾತ’ ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ. ಸರಕಾರಿ ಅಧಿಕಾರಿಗಳು ತಮ್ಮ ಅಜ್ಞಾನದಿಂದ ಮಾಡಿರುವ ತಪ್ಪಿಗೆ ಈ ನತದೃಷ್ಟ ಸಮುದಾಯ ಶಿಕ್ಷೆ ಅನುಭವಿಸುತ್ತಿದೆ. ಒಂದೇ ಸಮುದಾಯ ತನ್ನ ಬೇರೆ ಬೇರೆ ಪರ್ಯಾಯ ಪದಗಳಲ್ಲಿ ಬೇರೆಬೇರೆ ಪಟ್ಟಿಗಳಲ್ಲಿ ದಾಖಲಾಗಿರುವುದು ಈ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ತೊಡಕಾಗುತ್ತಿದೆ. ಇದನ್ನು ಪರಿಹರಿಸಲು ಸರಕಾರ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ!?
ಶಿಳ್ಳೇಕ್ಯಾತ, ಸಿಲ್ಲೀಕ್ಯಾತ, ಕಿಳ್ಳೇಕ್ಯಾತ, ಕಿಲ್ಲೀಕ್ಯಾತ, ಕಟಬು, ಕಟಬರ, ಬುಂಡೇಬೆಸ್ತ, ಜಾಲಗಾರ ಎಂದು ಹಲವಾರು ಹೆಸರುಗಳಲ್ಲಿ ಕರೆಯಲಾಗುವ ಶಿಳ್ಳೇಕ್ಯಾತರು ತೊಗಲುಗೊಂಬೆಯಾಟ, ಮೀನುಗಾರಿಕೆ, ಕೌದಿ ಹೊಲಿಯುವುದು, ಹಚ್ಚೆ ಹಾಕುವುದನ್ನೇ ಬದುಕಿನ ಕಸುಬನ್ನಾಗಿ ಮಾಡಿಕೊಂಡವರು. ರಾಜ್ಯದಲ್ಲಿ ಸುಮಾರು 480 ಗ್ರಾಮಗಳಲ್ಲಿ ಈ ಸಮುದಾಯ ನೆಲೆಸಿದ್ದು ಇದರ ಅನೇಕ ಪರ್ಯಾಯ ಪದಗಳೊಂದಿಗೆ ಸುಮಾರು ಎಂಭತ್ತು ಸಾವಿರದಷ್ಟು ಜನಸಂಖ್ಯೆ ಇರಬಹುದೆಂದು ಶಿಳ್ಳೇಕ್ಯಾತ ಕುರಿತು ಅಧ್ಯಯನ ಮಾಡಿರುವ ಡಾ. ಎನ್.ಡಿ. ತಿಪ್ಪೇಸ್ವಾಮಿಯವರು ದಾಖಲಿಸಿದ್ದಾರೆ.
ಕಾಡುಪ್ರಾಣಿಗಳ ಚರ್ಮದಿಂದ ಗೊಂಬೆ ತಯಾರಿಸಿ ಅದಕ್ಕೆ ಕಾಡುಸೊಪ್ಪಿನ ಎಲೆಗಳ ರಸದ ಬಣ್ಣ ಲೇಪಿಸಿ, ರಾಮಾಯಣ, ಮಹಾಭಾರತದ ಪಾತ್ರಗಳನ್ನು ಚಿತ್ರಚಿತ್ತಾರವಾಗಿ ರೂಪಿಸಿ ಹಳ್ಳಿಗಾಡುಗಳಲ್ಲಿ ಸಂಚರಿಸುತ್ತಾ ತೊಗಲು ಗೊಂಬೆಯಾಟ ಆಡಿಸುತ್ತಾ ಅಲೆಮಾರಿ ಜೀವನ ನಡೆಸುತ್ತಾರೆ.
ಶಿಳ್ಳೇಕ್ಯಾತ ಸಮುದಾಯದ ಪೂರ್ವಜರು ಆಗಿನ ಸೌರಾಷ್ಟ್ರ ಪ್ರಾಂತದ ಮರಾಠ ದೊರೆಗಳ ಸಂಸ್ಥಾನಗಳಲ್ಲಿ ಸೈನಿಕರಾಗಿ, ಗೂಢಚಾರರಾಗಿ ಸೇವೆ ಸಲ್ಲಿಸಿದವರು. ಈ ಸಂಸ್ಥಾನಗಳು ಪತನವಾದ ನಂತರ ಯುದ್ಧಕೈದಿಗಳಾಗಿ ಕೆಲವರು ಸೆರೆವಾಸ ಅನುಭವಿಸಿದರು. ಮತ್ತೆ ಕೆಲವರು ಜೀವಭಯದಿಂದ ಅರಣ್ಯ ಸೇರಿಕೊಂಡರು. ಹಾಗೆ ಅರಣ್ಯ ಸೇರಿಕೊಂಡವರು ಕೆರೆ, ಹೊಳೆಗಳ ದಡಗಳಲ್ಲಿ, ದೊಡ್ಡ ಮರಗಳ ಕೆಳಗೆ ಸಣ್ಣ ಪುಟ್ಟ ಗುಡಾರ ಹಾಕಿಕೊಂಡು ಜೀವಿಸತೊಡಗಿದರು. ಮೀನು ಬೇಟೆಯ ಮೂಲಕ ಜೀವನ ನಿರ್ವಹಿಸತೊಡಗಿದರು. ಕ್ರಮೇಣ ಭಿಕ್ಷಾಟನೆಗೆ ತೊಡಗಿ, ರಾತ್ರಿವೇಳೆ ತೊಗಲುಗೊಂಬೆ ಆಟ ಆಡಿಸುತ್ತಾ ಜನಪದರನ್ನು ರಂಜಿಸುತ್ತಾ ಊರೂರು ಅಲೆಯುತ್ತಾ ಅಲೆಮಾರಿ ಜೀವನ ಸಾಗಿಸತೊಡಗಿದರು.
ಹೈದರಾಬಾದ್ ಕರ್ನಾಟಕದಲ್ಲಿ ನೆಲೆಸಿರುವವರನ್ನು ಉರ್ದು ಮತ್ತು ತೆಲುಗು ಭಾಷೆಯಲ್ಲಿ ‘ಖೇಲ್ ಕ್ಷೆತ್ರಿ’ ‘ಬೊಮ್ಮಲಾಟವಾಳ್ಳು’ ‘ಕಿಳ್ಳೇಕ್ಯಾತ’ ಮುಂತಾಗಿ ಕರೆಯತೊಡಗಿದರು. ಈ ಸಮುದಾಯದ ಅನೇಕ ಜನ ತಮ್ಮ ಹೆಸರಿನೊಂದಿಗೆ ಶಿಳ್ಳೇಕ್ಯಾತ, ಕಿಳ್ಳೇಕ್ಯಾತ ಎಂದು ತಮ್ಮ ಜಾತಿ ಸೂಚಕ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಈ ಸಮುದಾಯದವರನ್ನು ಸ್ಥಳೀಯರು ಬೇರೆ ಬೇರೆ ಹೆಸರುಗಳಿಂದ ಕರೆದರೂ ಇವರ ಬೆಡಗು, ಭಾಷೆ, ಕಲೆ, ದೈವಾರಾಧನೆ, ಹಬ್ಬಹರಿದಿನಗಳ ಆಚರಣೆ, ವಿವಾಹ ಪದ್ಧತಿ ಕಟ್ಟಳೆಗಳು ಒಂದೇ ರೀತಿ ಇವೆ. ದುರಂತವೆಂದರೆ ಶಿಳ್ಳೇಕ್ಯಾತ ಸಮುದಾಯದಲ್ಲಿ ಇಂದಿಗೂ ಕುಲಪಂಚಾಯಿತಿಗಳು ಸಕ್ರಿಯವಾಗಿದ್ದು ಇಲ್ಲಿನ ಸ್ವಘೋಷಿತ ‘ಕುಲಪಂಚರು’ ಇಲ್ಲಿನ ಬಡವರನ್ನು ಕುಲಸಂಪ್ರದಾಯಗಳ ಹೆಸರಲ್ಲಿ ಹೆದರಿಸುತ್ತಾ ಶೋಷಿಸುತ್ತಲೇ ಇದ್ದಾರೆ!
ಇವರ ಹಿರಿಯರು ಹಿಂದೆ ಸೋರೆಬುಂಡೆ ನೆರವಿನಿಂದ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದರು, ಇವರಂತೆಯೇ ಬೆಸ್ತರೂ ಕೂಡ ಇವರೊಂದಿಗೆ ಮೀನು ಹಿಡಿಯುತ್ತಿದ್ದರು. ಶಿಳ್ಳೇಖ್ಯಾತರನ್ನು ಬೆಸ್ತ ಸಮುದಾಯದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಗುರುತಿಸಲು ಇವರನ್ನು ‘ಬುಂಡೆಬೆಸ್ತ’ ಎಂದು ಕರೆಯಲಾಯಿತು. ಮುಂಬೈ ಕರ್ನಾಟಕದ ಬೆಳಗಾವಿ, ವಿಜಯಪುರ, ಬಿದರ್, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತೊಗಲುಗೊಂಬೆ ಆಟ ಆಡಿಸುವವರನ್ನು ‘ಕಟಬರು’ ಎಂದು ಕರೆಯುತ್ತಾರೆ. ಕಟಬರ ತೊಗಲುಗೊಂಬೆಯಾಟವನ್ನು ‘ಕಟಬರಾಟ’ ಎಂದು ಕರೆಯುತ್ತಾರೆ. ಮರಾಠಿಯಲ್ಲಿ ‘ಕಟ್ಪುತ್ತಳಿ’ ಎಂದು ತೊಗಲುಗೊಂಬೆಯಾಟವನ್ನು ಕರೆಯುತ್ತಾರೆ. ಕಟಬು ಮತ್ತು ಶಿಳ್ಳೇಕ್ಯಾತರು ಒಂದೇ ಎಂಬುದು ಇವರ ಕುಲಶಾಸ್ತ್ರೀಯ ಅಧ್ಯಯನದಿಂದಾಗಿ ತಿಳಿದುಬರುತ್ತದೆ.
ಮುಂಬೈ ಕರ್ನಾಟಕದ ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಈ ಸಮುದಾಯದ ಹೆಣ್ಣುಮಕ್ಕಳು ಒಪ್ಪೊತ್ತಿನ ಊಟಕ್ಕಾಗಿ, ವಯಸ್ಸಾದ ತಂದೆ ತಾಯಿಗಳನ್ನು, ಅಂಗವಿಕಲ ಅಣ್ಣತಮ್ಮ, ಅಕ್ಕತಂಗಿಯರನ್ನು ಸಾಕುವುದಕ್ಕಾಗಿ ಕೆಲವರು ಅನಿವಾರ್ಯವಾಗಿ ವೇಶ್ಯಾವೃತ್ತಿಯನ್ನು ನಡೆಸುತ್ತಾರೆ. ದಿಢೀರ್ ಶ್ರೀಮಂತರಾಗುವ ಉದ್ದೇಶ ಅವರದಲ್ಲ, ಹೊಟ್ಟೆಪಾಡಿಗಾಗಿ ಮುಂಬೈ, ಗೋವಾ, ಪುಣೆ ಸೇರಿ ಮೊದಲಾದ ಕಡೆ ವೇಶ್ಯಾವೃತ್ತಿಗೆ ಹೋಗುತ್ತಿದ್ದು, ಸರಕಾರ ಇಂಥ ಸೂಕ್ಷ್ಮಗಳನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸ್ವಯಂ ಉದ್ಯೋಗದ ಸಾಲ ಸೌಲಭ್ಯ ನೀಡಬೇಕು ಎಂದು ಈ ಸಮುದಾಯದ ಕುರಿತು ಸಂಶೋಧನೆ ಮಾಡಿರುವ ಡಾ. ಎನ್.ಡಿ. ತಿಪ್ಪೇಸ್ವಾಮಿಯವರು ಅತ್ಯಂತ ಕಾಳಜಿಯಿಂದ ದಾಖಲಿಸುತ್ತಾರೆ. ಸುಮಾರು ಒಂದು ದಶಕದ ಹಿಂದೆಯೇ ಕರ್ನಾಟಕ ಸರಕಾರದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ವತಿಯಿಂದಲೇ ಈ ಸಂಶೋಧನೆ ಮಾಡಿಸಿದ್ದರೂ ಇದನ್ನು ಸರಕಾರ ಇಂದಿಗೂ ಗಮನಿಸದಿರುವುದು ಅಕ್ಷಮ್ಯ.
ಹಚ್ಚೆ ಹಾಕುವಾಗ, ಮೀನು ಹಿಡಿಯುವಾಗ ಶಿಳ್ಳೇಕ್ಯಾತ ಸಮುದಾಯದ ಹೆಣ್ಣುಮಕ್ಕಳು ಹಾಡುವ ಹಾಡುಗಳು ಅತ್ಯಂತ ಆಪ್ತವಾಗಿ ಮನಮುಟ್ಟುತ್ತವೆ. ಅವರ ಅಸಂಖ್ಯಾತ ಹಾಡುಗಳಲ್ಲಿ ಒಂದು ಹಚ್ಚೆ ಹಾಕುವಾಗಿನ ಹಾಡು ಹೀಗಿದೆ....
ಹಂಚಿ ಬೊಪ್ಪನ ಕೈಯ
ಒತ್ತಿ ಹಿಡಿಯಲು ಬ್ಯಾಡ
ನನರಾಯ ನೆತ್ತರಿಳಿದಾದ ಕಿರಿಬಳ್ಳಿ !!ಹಂಚಿ!!
ಅಂಗಡಗಿ ಗಾರಿಗಿ, ಗಂಡ ಹೆಂಡತಿ ವಾರಿಗಿ
ಸೋಬವ್ವನ ಗಂಡ ಹೊಳೆ ದಂಡೆಗೆ ಹೋದ
ದಂಡಿ ಬಿಟ್ಟ ಮೂರು ಗೆಂಡಿ ತಂದ !!ಕುಚ್ಚುಕುಚ್ಚು!!
ಇನ್ನೊಂದು ಮೀನಿನ ಪದ ಹೀಗಿದೆ:
ಗಂಡು ಹೆಣ್ಣು ಎರಡು ಮೀನುಗಳಿದ್ದವರಿ
ಹೊಳೆಯ ದಂಡೀಲಿ ಎಂತಾ ಜತಿ
ಗಂಡು ಮೀನಿನ ಭಕ್ತಿ ಕೇಳರಿ
ಸದ್ಗುರುವಿನ ಮೇಲೆ ಬಹಳ ಪ್ರೀತಿ
ಹೆಣ್ಣು ಮೀನು ಗಂಡಿಗೆ ಅಂತದ
ಬಿಟ್ಟು ಹೋಗಮ ನಡಿ ಮಡಗಿನಲ್ಲಿ
ಗಂಡು ಮೀನು ಗಂಡಿಗೆ ಅಂತದ
ಕಾಲ ಕಳೆಯದು ಈ ಮಡಗಿನಲ್ಲಿ
ಅಂದಗೇಡಿಯ ಮೂಳಾ ನಾದ ಹಾಡಲು ಬೇಡ
ಗುರುವು ಇದ್ದನು ನಮ್ಮ ಅಂತಕ್ಕೆ
ಗಾಣ ಹಾಕಿ ಪ್ರಾಣ ಕೊಲ್ಲುತನ
ಬಿಟ್ಟು ಹೋಗನ ನಡಿ ಮಡಗಿನಲ್ಲಿ
ಆರುಮಂದಿ ಅಕ್ಕ ತಂಗೇರ ನನಗಿಡಿದು ಏಳು ಮಂದಿ
ಇದ ಉಂಡು ಹೊಳೆಯ ದಾಟಿಸೋ ಅಂಬಿಗರಣ್ಣ
ಶಿಳ್ಳೇಕ್ಯಾತರ ಇಂತಹ ಪದಗಳನ್ನು ಆಲಿಸುವಾಗ ಕೈವಾರ ತಾತನ ಬೆಡಗಿನ ತತ್ವಪದಗಳು ನೆನಪಾಗುತ್ತವೆ.
ಶಿಳ್ಳೇಕ್ಯಾತ, ಕಿಳ್ಳೇಕ್ಯಾತ, ಕಟುಬು, ಕಟಬರ, ಬುಂಡೇಬೆಸ್ತ, ಜಾಲಗಾರ ಎಂಬ ಹೆಸರುಗಳಿಂದ ಕರೆಯಲಾಗುವ ಈ ಸಮುದಾಯದಲ್ಲಿ ಕೇವಲ ಶೇ. 10ರಷ್ಟೂ ವಿದ್ಯಾಂತರಿಲ್ಲ. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಲ್ಲ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಎದ್ದು ಕಾಣುತ್ತದೆ. ಈ ಸಮುದಾಯದಲ್ಲಿನ ಅನಕ್ಷರತೆಯಿಂದಾಗಿ ಇಂದಿಗೂ ಬಾಲ್ಯವಿವಾಹಗಳು ನಡೆಯುತ್ತಿವೆ. ನೂರಕ್ಕೆ ನೂರು ಪರ್ಸೆಂಟ್ ಜನಕ್ಕೆ ಭೂಮಿಯಿಲ್ಲ, ವಸತಿಯಿಲ್ಲ. ಇಂದಿಗೂ ಟೆಂಟು, ಗುಡಾರಗಳಲ್ಲಿ ಜೀವಿಸುತ್ತಾ ಅಲೆಮಾರಿ ಜೀವನ ನಡೆಸುತ್ತಾರೆ. ಮಕ್ಕಳು ಅಕ್ಷರದ ಕಡೆ ನಡೆಯಲು ಅಂಗನವಾಡಿಗಳಿಲ್ಲ. ಅತ್ಯಂತ ದಾರಿದ್ರ್ಯತೆಯಿಂದ ಬದುಕುತ್ತಿರುವ ಜನಕ್ಕೆ ಸರಕಾರದ ಯಾವುದೇ ಯೋಜನೆಗಳು ತಲುಪುತ್ತಿಲ್ಲ. ಸರಕಾರದಿಂದ ಬರುವ ಅಷ್ಟಿಷ್ಟು ಸಾಲಸೋಲಗಳು ಸರಕಾರಿ ಅಧಿಕಾರಿಗಳು ಮತ್ತು ಈ ಸಮುದಾಯದಲ್ಲಿ ಈಚೆಗೆ ತಲೆಯೆತ್ತಿರುವ ಬ್ರೋಕರ್‌ಗಳ ಹೊಟ್ಟೆಗೆ ತಲುಪುತ್ತಿವೆ.
ಕಿಳ್ಳೇಕ್ಯಾತ, ಕಟಬು, ಕಟಬರ, ಜಾಲಗಾರ ಸಮುದಾಯಗಳು ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಪಟ್ಟಿಯಲ್ಲಿವೆ. ಇದೇ ಸಮುದಾಯದ ‘ಶಿಳ್ಳೇಕ್ಯಾತ’ ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ. ಸರಕಾರಿ ಅಧಿಕಾರಿಗಳು ತಮ್ಮ ಅಜ್ಞಾನದಿಂದ ಮಾಡಿರುವ ತಪ್ಪಿಗೆ ಈ ನತದೃಷ್ಟ ಸಮುದಾಯ ಶಿಕ್ಷೆ ಅನುಭವಿಸುತ್ತಿದೆ. ಒಂದೇ ಸಮುದಾಯ ತನ್ನ ಬೇರೆ ಬೇರೆ ಪರ್ಯಾಯ ಪದಗಳಲ್ಲಿ ಬೇರೆಬೇರೆ ಪಟ್ಟಿಗಳಲ್ಲಿ ದಾಖಲಾಗಿರುವುದು ಈ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ತೊಡಕಾಗುತ್ತಿದೆ. ಇದನ್ನು ಪರಿಹರಿಸಲು ಸರಕಾರ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ!?







