ಗದ್ದಲದ ಜಗತ್ತಿನಲ್ಲೊಂದು ಕೌಡಹಳ್ಳಿಯ ಮೌನ ಲೋಕ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ವಿಭಿನ್ನ ಲೋಕವಿದೆ. ಅಲ್ಲಿ ಗದ್ದಲವಿಲ್ಲ, ಮೌನವೇ ಭಾಷೆ. ಶಬ್ದಗಳು ಮಕ್ಕಳ ಕಿವಿಗೆ ತಲುಪುವುದಿಲ್ಲ. ಆದರೆ ಅವರ ಕಣ್ಣುಗಳಲ್ಲಿ ಮಿನುಗುವ ಕನಸುಗಳು ನಮ್ಮ ಅಂತರಾತ್ಮದ ಬಾಗಿಲು ತಟ್ಟುತ್ತವೆ. ಇದು ಕಿವುಡ, ಮೂಕ ಎಂಬ ಹೀಗಳಿಕೆಯನ್ನು ಹಿರಿಮೆಯನ್ನಾಗಿಸಿಕೊಂಡ ಮಾನವೀಯತೆಯ ಮೌನ ಲೋಕ.
ಇಲ್ಲಿ ಕಣ್ಣುಗಳು ಮಾತನಾಡುತ್ತವೆ. ಸಂಜ್ಞೆಗಳು ಕಾವ್ಯವಾಗುತ್ತವೆ. ನಗುವೊಂದು ಭಾಷೆಯಾಗಿ ಹೃದಯಕ್ಕೆ ನೇರವಾಗಿ ತಲುಪುತ್ತದೆ. ಒಂದೊಂದು ಮುಖವೂ ಬೆಳಗಿನ ಸೂರ್ಯ. ಒಂದೊಂದು ನಗು ಹುಣ್ಣಿಮೆ ಚಂದ್ರ. ಕನಸುಗಳು, ಭರವಸೆಗಳು ಇಲ್ಲಿಯ ಮಕ್ಕಳ ಕಣ್ಣಲ್ಲಿ ಮಿನುಗುತ್ತವೆ.
ವಿಕಲತೆ ಶಾಪವಲ್ಲ: ಉಪೇಕ್ಷೆಯೇ ಶಾಪ. ಆ ಶಾಪವನ್ನು ಮುರಿದು ಸಮಾನತೆಯ ಸೇತುವೆ ಕಟ್ಟುವುದು ಈ ಜಗತ್ತಿನ ಬಹುದೊಡ್ಡ ಸೇವೆ.
ಶಿಕ್ಷಣವೇ ಶಕ್ತಿ: ಮಾತಾಡಲು ಆಗದ, ಕಿವಿ ಕೇಳಿಸದ ಮಗು ಓದಲು ಮುಂದಾದಾಗ ಕಣ್ಣುಗಳಲ್ಲಿ ಕನಸಿನ ಬೆಳಕು ಹೊತ್ತಿಕೊಳ್ಳುತ್ತದೆ. ಆ ಬೆಳಕು ಒಂದು ಕುಟುಂಬಕ್ಕೆ ಆಸರೆಯಾಗುತ್ತದೆ. ಒಂದು ಮನೆ ಬೆಳಗಿದರೆ, ಸಮಾಜ ಬಲಿಷ್ಠವಾಗುತ್ತದೆ.
ಇಲ್ಲಿನ ಶಿಕ್ಷಕರು ಕೇವಲ ಬೋಧಕರು ಅಲ್ಲ ಅವರು ದೀಪಗಳು. ಮೌನದೊಳಗಿನ ದಾರಿಗಳಿಗೆ ಬೆಳಕು ಹಚ್ಚುವವರು. ಇಲ್ಲಿ ಮಕ್ಕಳಿಗೆ ಕೇವಲ ಪಾಠವಲ್ಲ, ಬದುಕು ಕಲಿಸಲಾಗುತ್ತದೆ. ಭಯವಲ್ಲ, ಆತ್ಮಸ್ಥೈರ್ಯ ಮೂಡಿಸಲಾಗುತ್ತದೆ. ಅಸಹಾಯಕತೆ ಅಲ್ಲ, ಸಮರ್ಥತೆ, ಕೌಶಲ್ಯ ನೀಡಲಾಗುತ್ತದೆ.
ಸೌಲಭ್ಯಗಳು: ಉಚಿತ ಊಟ ಉಚಿತ ವಸತಿ ಪುಸ್ತಕ ಮತ್ತು ಬಟ್ಟೆ, ಮಾತಿನ ಅಭ್ಯಾಸ, ಕಂಪ್ಯೂಟರ್ ಮತ್ತು ಚಿತ್ರಕಲೆ ತರಬೇತಿ. ಬಿಸಿನೀರಿನ ಸ್ನಾನ ಈ ಎಲ್ಲವೂ ದಾನಿಗಳ ನೆರವಿನಿಂದ ನಡೆಯುತ್ತಿದೆ. ಅಲ್ಪ ಅನುದಾನ, ಅಪಾರ ನಂಬಿಕೆ ಈ ಸಂಸ್ಥೆಯ ಬಲ.
ಸಮಾಜದ ಪಾತ್ರ: ಇವರನ್ನು ನೋಡಿ ಕೇವಲ ಕನಿಕರ ತೋರಿಸಬೇಡಿ. ದೂರ ನಿಂತು ನೋಡುವುದು ಸಹಾಯವಲ್ಲ. ಇವರಿಗೆ ಬೇಕಿರುವುದು ದಯೆಯ ನೋಟವಲ್ಲ ಜೊತೆಗೆ ನಿಲ್ಲುವ ಕೈ. ಅವಕಾಶ ನೀಡುವ ಮನಸ್ಸು. ಬದುಕಿನ ಪಥದಲ್ಲಿ ಹೆಜ್ಜೆಗೂ ಹೆಜ್ಜೆಗೂ ಜೊತೆಯಾಗುವ ಮಾನವೀಯ ಸಹಕಾರ.
ರಾಜ್ಯ ಮಟ್ಟದ ಪ್ರಶಸ್ತಿಗಳು ಈ ಸಂಸ್ಥೆಗೆ ಲಭಿಸಿವೆ. ಆದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಈ ಮಕ್ಕಳ ನಗುವಿನಲ್ಲಿ ಇದೆ. ಸ್ವಾವಲಂಬನೆಯ ಕನಸಿನಲ್ಲಿ ಇದೆ. ಮುಖ್ಯವಾಹಿನಿಗೆ ಹೆಜ್ಜೆ ಇಡುವ ಅವರ ಧೈರ್ಯದಲ್ಲಿದೆ.
ಅಪಾರ ಕನಸುಗಳೊಂದಿಗೆ ಆರಂಭವಾದ ಪಯಣ ಇಂದು ನೂರಾರು ಮಕ್ಕಳ ಬದುಕಿಗೆ ದಾರಿ ತೋರಿಸಿದೆ. ಈ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ಬೇಕು. ಒಂದು ನೆರವು, ಒಂದು ಮಗುವಿನ ನಾಳೆಯ ಭವಿಷ್ಯವಾಗಬಹುದು.
-ರವಿ ಕುಮಾರ್, ಕಾರ್ಯದರ್ಶಿ ಎನ್.ಕೆ. ಗಣಪಯ್ಯ ರೋಟರಿ ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಸಕಲೇಶಪುರ







