ಮುಂಗಾರಿಗೆ ಮುನ್ನುಡಿ ಬರೆದ ಆಲಮೇಲದ ‘ವಿಶಿಷ್ಟ ಕಾರ ಹುಣ್ಣಿಮೆ’

ಆಲಮೇಲ: ಉತ್ತರ ಕರ್ನಾಟಕದ ಆರಾಧ್ಯ ಹಾಗೂ ರೈತಾಪಿ ವರ್ಗದ ಶ್ರೇಷ್ಠ ಸಾಂಸ್ಕೃತಿಕ ಹಬ್ಬವಾದ ‘ಕಾರ ಹುಣ್ಣಿಮೆ’ಯ ಸಡಗರ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸೋಮವಾರ
ಅತ್ಯಂತ ಸಡಗರ, ಸಂಭ್ರಮದಿಂದ ನಡೆಯಲಿದೆ. ಮುಂಗಾರು ಮಳೆಯ ಆರಂಭದ ಸಂಕೇತವಾಗಿರುವ ಈ ಹಬ್ಬದಲ್ಲಿ, ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಜಾನುವಾರುಗಳಿಗೆ ರೈತರು ಕೃತಜ್ಞತೆ ಸಲ್ಲಿಸಲಿದ್ದಾರೆ.
ಇದು ಮಣ್ಣಿನ ಮಗನ ಸಾಂಸ್ಕೃತಿಕ ಹಿರಿಮೆಯಾಗಿದೆ. ಅದರಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಆಲಮೇಲ ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ‘ಜೋಡಿ ಲಕ್ಷ್ಮೀ ಬಂಡಿಗಳ ಓಟ’ ಹಾಗೂ ‘ಕರಿ ಹರಿಯುವ’ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸ್ತೋಮವೇ ಹರಿದು ಬರಲಿದೆ.
ಎತ್ತುಗಳ ಸಿಂಗಾರ, ಅಂಬಲಿ ಪ್ರಸಾದ :
ಹಬ್ಬದ ಅಂಗವಾಗಿ ಬೆಳಗಿನ ಜಾವವೇ ರೈತರು ತಮ್ಮ ಎತ್ತುಗಳನ್ನು ನದಿ ಮತ್ತು ಹಳ್ಳಕ್ಕೆ ಕರೆದೊಯ್ದು ಮೈ ತೊಳೆದು ಸ್ವಚ್ಛಗೊಳಿಸುವರು. ಎತ್ತುಗಳ ಕೊಂಬುಗಳಿಗೆ ಆಕರ್ಷಕ ಬಣ್ಣ ಬಳಿದು, ಕೊಂಬಣಸು ಕಟ್ಟಿ, ಮೈಮೇಲೆ ಜೂಲು (ಹೊಸ ಬಟ್ಟೆ) ಹಾಗೂ ಗೆಜ್ಜೆಗಳನ್ನು ಹಾಕಿ ಸಿಂಗರಿಸಲಾಗುವುದು. ಮುಂಗಾರಿನ ತಂಪಾದ ವಾತಾವರಣಕ್ಕೆ ಜಾನುವಾರುಗಳ ಆರೋಗ್ಯ ಹದಗೆಡದಂತೆ ಮುನ್ನೆಚ್ಚರಿಕೆಯಾಗಿ ಜೋಳದ ಅಂಬಲಿ, ಗಾಣದೆಣ್ಣೆ ಮತ್ತು ಅರಿಶಿನವನ್ನು ಗಂಟಲಿಗೆ ಸುರಿಯುವ ಸಾಂಪ್ರದಾಯಿಕ ಲಸಿಕೆ ಹಾಕಲಾಗುವುದು.
ಹುಣ್ಣಿಮೆಯ ಹಿಂದಿನ ದಿನವಾದ ‘ಹೊನ್ನ ಹುಗ್ಗಿ’ಯಂದು ಜೋಳವನ್ನು ಕುಟ್ಟಿ ಸಿದ್ಧಪಡಿಸಿದ ಸಿಹಿ ಕಿಚಡಿಯನ್ನು (ಹೊಗ್ಗಿ) ಭೂಮಿತಾಯಿಗೆ ನೈವೇದ್ಯ ಮಾಡಿ ಧನ್ಯತೆ ಮೆರೆವರು.
ದರ್ಗಾ ಮುಂದೆ ಐದು ಸುತ್ತು ರೋಮಾಂಚನಕಾರಿ ಬಂಡಿ ಓಟ: ಆಲಮೇಲ ಪಟ್ಟಣದ ದೇಶಮುಖ ಮತ್ತು ದೇಶಪಾಂಡೆ ಮನೆತನದವರ ನೇತೃತ್ವದಲ್ಲಿ ನಡೆಯುವ ಬಂಡಿ ಓಟ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಸಕಲ ವಾದ್ಯ ವೈಭವಗಳೊಂದಿಗೆ ಬಣ್ಣ ಬಣ್ಣದ ತಳಿರು ತೋರಣಗಳಿಂದ ಅಲಂಕೃತಗೊಂಡ ನೂರಾರು ರೈತರ ‘ಚಿಟ್ಟ ಬಂಡಿಗಳು’ ಪಟ್ಟಣದ ಪ್ರಸಿದ್ಧ ಪೀರ್ ಗಲಿಬ ಸಾಹೇಬ ದರ್ಗಾದ ಎದುರು ಸಾಲಾಗಿ ಬಂದು ನಿಂತಾಗ ಇಡೀ ಆವರಣದಲ್ಲಿ ಹಬ್ಬದ ಕಳೆ ಬರುತ್ತದೆ.
ಸಂಜೆ 4 ಗಂಟೆಯ ಸುಮಾರಿಗೆ ದೇಶಮುಖ ಹಾಗೂ ದೇಶಪಾಂಡೆ ಮನೆತನದ ಜೋಡಿ ‘ಲಕ್ಷ್ಮೀ ಬಂಡಿಗಳು’ ದರ್ಗಾದ ಮುಂದೆ ಐದು ಸುತ್ತುಗಳನ್ನು ಹಾಕಿ ರಣರೋಚಕವಾಗಿ ಓಡಲಿವೆ. ದೇಶಮುಖರ ಬಂಡಿಗೆ ‘ಶ್ರೀಮಂತ ಲಾವಟೆ’ ಎಂಬ ಹೆಸರಾಂತ ಎತ್ತನ್ನು ಕಟ್ಟಲಾಗುವುದು, ಬಂಡಿಯ ಸಾರಥ್ಯವನ್ನು ಬಸವರಾಜ ಹೊಸಮನಿ ವಹಿಸುವರು. ಇವರಿಗೆ ಗ್ರಾಮದ ವಾಲೀಕಾರರು ರಕ್ಷಣೆ ನೀಡುವರು. ಇತ್ತ ದೇಶಪಾಂಡೆಯವರ ಬಂಡಿಗೆ ಮಹಿಬೂಬ ಸೌದಾಗರ ಅವರ ಎತ್ತುಗಳನ್ನು ಕಟ್ಟಲಾಗುವುದು. ಬಂಡಿಯ ಮೇಲೆ ಈರಣ್ಣ ಗುರುಕಾರ ನಿಂತು ಹತೋಟಿ ಸಾಧಿಸುವರು. ದರ್ಗಾದ ಮುಂದೆ ಐದು ಸುತ್ತು ಮುಗಿಸಿ ಮನೆಗೆ ಮರಳುವಾಗ, ದೇಶಮುಖರ ಲಕ್ಷ್ಮೀ ಬಂಡಿಯಲ್ಲಿದ್ದವರು ದಕ್ಷಿಣ ದಿಕ್ಕಿನಲ್ಲಿರುವ ದೇವರ ಅಗಸಿಗೆ ‘ಕರಿ’ ಹರಿಸುವ ಮೂಲಕ ಮುಂಗಾರು ಮಳೆ-ಬೆಳೆಯ ಭವಿಷ್ಯವನ್ನು ನುಡಿಯುವರು.
ಗಣ್ಯರ ಭೇಟಿ, ಜನಸಾಗರ :
ಈ ಪ್ರಸಿದ್ಧ ಐತಿಹಾಸಿಕ ಬಂಡಿ ಓಡುವ ಸ್ಪರ್ಧೆಯನ್ನು ವೀಕ್ಷಿಸಲು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕರು ಹಾಗೂ
ಹಿರಿಯರು ಆಗಮಿಸುವರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ ಮನಗೂಳಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ ಕೊಳಾರಿ, ಪಪಂ ಅಧ್ಯಕ್ಷ ಸಾಧೀಕ ಸುಂಬಡ, ಪ್ರಮುಖರಾದ ಸಿದ್ದು ಪಾಟೀಲ, ಯಶವಂತರಾಯಗೌಡ ರೂಗಿ, ಬಿ.ಆರ್.ಯಂಟಮಾನ, ಡಾ.ಸಂದೀಪ ಪಾಟೀಲ, ಮಾಜಿ ಗ್ರಾ.ಪಂ ಅಧ್ಯಕ್ಷ ಆಯುಬ್ ಎನ್. ದೇವರಮನಿ, ಗುಂಡು ಮೇಲಿನಮನಿ, ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಶಿವು ಸರ್ ಗುಂದಗಿ, ಶ್ರೀಶೈಲ ಮಠಪತಿ, ಸೋಮನಾಥ ಮೇಲಿನಮನಿ, ಶಿವಾನಂದ ಜಗತಿ, ವಹಾಬ್ ಸುಂಬಡ, ಪಿಎಸೈ ಅರವಿಂದ ಅಂಗಡಿ, ರಮೇಶ ಭಂಟನೂರ, ಬಸವರಾಜ್ ತೆಲ್ಲೂರ, ಮಲ್ಲು ಅಚಲೇರಿ, ಸುನೀಲ ಉಪ್ಪಿನ, ಗನಿ ಎಂ.ದೇವರಮನಿ, ಸಂತೋಷ ಜರಕರ, ಗಾಲೀಬ ಮೇಲಿನಮನಿ, ಪ್ರಭು ವಾಲೀಕಾರ, ಯಲ್ಲಪ್ಪ ಬುರುಡ, ನಾಗಪ್ಪ ತಳವಾರ, ದಸ್ತಗೀರ ವಡಗೇರಿ ಸೇರಿದಂತೆ ಪಟ್ಟಣದ ಮತ್ತು ಸುತ್ತಲಿನ ಗ್ರಾಮದ ಅನೇಕ ಗಣ್ಯರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ.






