Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೆಟ್ಟು ನಿಂತ ಕಮಲದ ‘ರಥ’

ಕೆಟ್ಟು ನಿಂತ ಕಮಲದ ‘ರಥ’

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ16 July 2026 11:04 AM IST
share
ಕೆಟ್ಟು ನಿಂತ ಕಮಲದ ‘ರಥ’

ಬಿಜೆಪಿ ಸ್ಥಿತಿ ‘ಮನೆಯೊಂದು ನಾಲ್ಕಾರು ಬಾಗಿಲು’ ಎಂಬಂತಾಗಿದೆ. ಒಂದು ಕಡೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಇವರಿಬ್ಬರ ನಡುವೆ ಮತ್ತೊಂದು ತಟಸ್ಥ ಬಣ. ಬಹುತೇಕರ ಸಿಟ್ಟಿರುವುದು ವಿಜಯೇಂದ್ರ ಅವರ ಮೇಲೆ. ಕೆಲವು ಹಿರಿಯರಂತೂ ಒಳಗೊಳಗೇ ಕುದಿಯುತ್ತಿದ್ದಾರೆ. ಸಾಲದೆಂಬಂತೆ, ಪಕ್ಷದಿಂದ ಅಮಾನತಾದ ಬಸನಗೌಡ ಪಾಟೀಲ್ ಯತ್ನಾಳ್ ಮುಗಿಬಿದ್ದಿದ್ದಾರೆ. ಒಳ-ಹೊರಗಿನ ಒತ್ತಡಗಳಿಗೆ ಸಿಲುಕಿ ವಿಜಯೇಂದ್ರ ‘ಸ್ಯಾಂಡ್‌ವಿಚ್’ ಆಗಿದ್ದಾರೆ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೀಗ (ಬಿಜೆಪಿ) ‘ಗಂಡಾಂತರ’ ಕಾಲ. ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವೇಗವಾಗಿ ಓಡಿದ ಕಮಲದ ‘ರಥ’, ಕರ್ನಾಟಕದಲ್ಲಿ ಕೆಟ್ಟು ನಿಂತಿದೆ. ಗುಂಪುಗಾರಿಕೆ ಪಕ್ಷ ಮೇಲೇಳದಂತೆ ತಡೆದಿದ್ದು, ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ಸೋತಿದೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಜನರ ಬಳಿ ಕೊಂಡೊಯ್ಯಲಾಗದೆ ತೊಳಲಾಡುತ್ತಿದೆ.

ಬಿಜೆಪಿ ಸ್ಥಿತಿ ‘ಮನೆಯೊಂದು ನಾಲ್ಕಾರು ಬಾಗಿಲು’ ಎಂಬಂತಾಗಿದೆ. ಒಂದು ಕಡೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಇವರಿಬ್ಬರ ನಡುವೆ ಮತ್ತೊಂದು ತಟಸ್ಥ ಬಣ. ಬಹುತೇಕರ ಸಿಟ್ಟಿರುವುದು ವಿಜಯೇಂದ್ರ ಅವರ ಮೇಲೆ. ಕೆಲವು ಹಿರಿಯರಂತೂ ಒಳಗೊಳಗೇ ಕುದಿಯುತ್ತಿದ್ದಾರೆ. ಸಾಲದೆಂಬಂತೆ, ಪಕ್ಷದಿಂದ ಅಮಾನತಾದ ಬಸವಗೌಡ ಪಾಟೀಲ್ ಯತ್ನಾಳ್ ಮುಗಿಬಿದ್ದಿದ್ದಾರೆ. ಒಳ-ಹೊರಗಿನ ಒತ್ತಡಗಳಿಗೆ ಸಿಲುಕಿ ವಿಜಯೇಂದ್ರ ‘ಸ್ಯಾಂಡ್‌ವಿಚ್’ ಆಗಿದ್ದಾರೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮಗನ ಪರ ಗುಟುರು ಹಾಕುವ ಸ್ಥಿತಿಯಲ್ಲಿಲ್ಲ. ವಯಸ್ಸಿನ ಕಾರಣಕ್ಕೆ ಮೆತ್ತಗಾಗಿದ್ದಾರೆ. ಆದರೂ ಸುಮ್ಮನಿರಲಾಗದೆ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿ ವರಿಷ್ಠರು ರಾಜ್ಯದ ಬೆಳವಣಿಗೆಗಳ ಬಗ್ಗೆ ಮೌನವಾಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕೆಲ ಶಾಸಕರು ಅಡ್ಡ ಮತದಾನ ಮಾಡಿದ ಬಳಿಕ ಅಸಮಾಧಾನ ಸ್ಫೋಟಗೊಂಡಿದೆ. ‘ಅಧ್ಯಕ್ಷರಿಗೆ ಪಕ್ಷದ ಮೇಲೆ ಹಿಡಿತವಿಲ್ಲ’ ಎಂಬುದಕ್ಕೆ ಇದೊಂದೇ ಪ್ರಕರಣ ಸಾಕು. ಇದು ವರಿಷ್ಠರಿಗೂ ಮುಜುಗರ ತಂದಿದೆ.

ಅಡ್ಡ ಮತದಾನ ವಿಜಯೇಂದ್ರ ಅವರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಅಧ್ಯಕ್ಷರ ವಿರುದ್ಧ ಮಾತಾಡಿದ್ದಾರೆನ್ನಲಾದ ಆಡಿಯೊ ವೈರಲ್ ಆಗಿದೆ. ಇದು ಭಿನ್ನಮತಕ್ಕೆ ಹೊಸ ‘ಟ್ವಿಸ್ಟ್’ ಕೊಟ್ಟಿದೆ. ‘‘ಅಧ್ಯಕ್ಷರ ಮೂರು ವರ್ಷದ ಅವಧಿ ಇನ್ನೇನು ಮುಗಿಯಲಿದೆ. ಅಕ್ಟೋಬರ್ ಬಳಿಕ ಕುರ್ಚಿ ಬಿಡಿಸೋಣ’’ ಎಂಬ ಮಾತು ಅದರಲ್ಲಿದೆ. ಆದರೆ, ಗೌಡರು ಆರೋಪ ನಿರಾಕರಿಸಿದ್ದಾರೆ. ಅವರು ಮಾತಾಡಿದ್ದಾರೋ ಇಲ್ಲವೋ ಬೇರೆ ವಿಷಯ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಅತೃಪ್ತರಿಗೆ ಬಲ ತಂದಿದೆ. ಬದಲಾವಣೆ ದನಿಗೆ ಶಕ್ತಿ ತುಂಬಿದೆ. ಹೊಸ ಅಧ್ಯಕ್ಷ ನೇಮಕವಾಗುವ ವಿಶ್ವಾಸ ಮೂಡಿಸಿದೆ.

‘ವಿಜಯೇಂದ್ರ ಸರ್ವಾಧಿಕಾರಿಯಾಗಿದ್ದಾರೆ. ಹುಡುಗರನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಗುಣವಿಲ್ಲ. ಹಿರಿಯರನ್ನು ನಿರ್ಲಕ್ಷಿಸಿದ್ದಾರೆ. ಯಾವುದೇ ತೀರ್ಮಾನ ಕೈಗೊಳ್ಳುವಾಗ ಸಮಾಲೋಚನೆ ಮಾಡುವುದಿಲ್ಲ. ಹಿಂದೆ ಯಡಿಯೂರಪ್ಪನವರೂ ಹೀಗೇ ವರ್ತಿಸುತ್ತಿದ್ದರು. ಆದರೆ, ಪಕ್ಷ ಕಟ್ಟಿ ಬೆಳೆಸಿದವರೆಂಬ ಕಾರಣಕ್ಕೆ ಎಲ್ಲರೂ ಅವರನ್ನು ಸಹಿಸಿಕೊಳ್ಳುತ್ತಿದ್ದರು. ಯಡಿಯೂರಪ್ಪನವರ ಹಾದಿಯಲ್ಲೇ ವಿಜಯೇಂದ್ರ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಪಕ್ಷಕ್ಕೆ ಅವರ ಕೊಡುಗೆ ಸೊನ್ನೆ’ ಎಂಬುದು ಅತೃಪ್ತರ ಆರೋಪ.

ಕೆಲವು ಸಂದರ್ಭಗಳನ್ನು ಅವಲೋಕಿಸಿದಾಗ ವಿಜಯೇಂದ್ರ ವಿರುದ್ಧದ ಆರೋಪಗಳಲ್ಲಿ ನಿಜವಿರುವಂತೆ ಕಾಣುತ್ತದೆ. ಎಸ್‌ಐಆರ್ ಸಂಬಂಧ ಕಾಂಗ್ರೆಸ್ ವಿರುದ್ಧ ದೂರು ನೀಡಲು ಚುನಾವಣಾ ಆಯೋಗದ ಸಿಇಒ ಅವರನ್ನು ಭೇಟಿ ಮಾಡಿದ ಅಧ್ಯಕ್ಷರ ಜತೆ ಅಶೋಕ್, ಮತ್ತಿತರ ಹಿರಿಯ ನಾಯಕರು ಇರಲಿಲ್ಲ. ಸುರೇಶ್ ಕುಮಾರ್ ಮಾತ್ರ ಇದ್ದರು. ಬಿಜೆಪಿಯೊಳಗಿನ ‘ಮುಸುಕಿನ ಗುದ್ದಾಟ’ಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ವಿಜಯೇಂದ್ರ ಮತ್ತು ಅಶೋಕ್ ಮಧ್ಯೆ ತಾಳ-ಮೇಳವಿಲ್ಲ. ಸಮನ್ವಯವಿಲ್ಲ. ಸಹಕಾರ ಇಲ್ಲ. ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬ ಗಾದೆ ಮಾತು ಇವರಿಬ್ಬರಿಗೆ ಅಕ್ಷರಶಃ ಅನ್ವಯಿಸುತ್ತದೆ.

ಬಿಜೆಪಿ ನಾಯಕರು ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಒಂದು ಕಡೆಯಿಂದ ಎಲ್ಲ ರಾಜ್ಯಗಳನ್ನು ಗೆದ್ದುಕೊಂಡು ಬರುತ್ತಿದ್ದಾರೆ. ‘ಬಿಜೆಪಿ ಸರಿಗಟ್ಟುವ ಮತ್ತೊಂದು ಪಕ್ಷವಿಲ್ಲ’ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಅವರ ಗೆಲುವಿನ ಕಿರೀಟಕ್ಕೆ ಪಶ್ವಿಮ ಬಂಗಾಳ ಈಗ ಸೇರಿಕೊಂಡಿದೆ. ಇದು ಅಂತಿಂಥ ಗೆಲುವಲ್ಲ. ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಗೆಲುವು. ‘2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷ ಗೆಲ್ಲುವುದೇ?’ ಎಂದು ಹೇಳುವುದು ಕಷ್ಟ. ಸದ್ಯದ ವಾತಾವರಣ ಗಮನಿಸಿದರೆ ಈ ಅನುಮಾನ ಹುಟ್ಟುತ್ತದೆ. ಏಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದ್ದಾರೆ. ಶಿವಕುಮಾರ್ ‘ಮೃದು ಹಿಂದುತ್ವವಾದಿ’. ಹರಿಪ್ರಸಾದ್, ಸಂಘ ಪರಿವಾರ ಪ್ರತಿಪಾದಿಸುತ್ತಿರುವ ‘ಹಿಂದುತ್ವ’ದ ಖಟ್ಟರ್ ವಿರೋಧಿ. ಇಬ್ಬರೂ ಹೊಸದಾಗಿ ಜವಾಬ್ದಾರಿ ಹೊತ್ತಿರುವುದರಿಂದ ತಕ್ಷಣಕ್ಕೆ ಸಮಸ್ಯೆಯಿಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಪಕ್ಷ ಬಲಪಡಿಸಲು ಬಿಜೆಪಿಗೆ ಸಖತ್ ಅವಕಾಶವಿತ್ತು. ಏಕೆಂದರೆ, ಅವರು ಬಿಜೆಪಿಯನ್ನು ಬಲವಾಗಿ ವಿರೋಧಿಸುತ್ತಿದ್ದರು, ಖಂಡಿಸುತ್ತಿದ್ದರು. ಅವರ ತೀರ್ಮಾನ, ನಡವಳಿಕೆಗಳಲ್ಲಿ ಇದು ಇಣುಕುತ್ತಿತ್ತು. ಶಿವಕುಮಾರ್ ಹಾಗಲ್ಲ. ದೇವರು, ಧರ್ಮದ ವಿಷಯದಲ್ಲಿ ಬಿಜೆಪಿ ನಾಯಕರನ್ನು ಮೀರಿಸುತ್ತಾರೆ. ಆರೆಸ್ಸೆಸ್‌ನ ‘ಸದಾ ವತ್ಸಲೆ ಮಾತೃಭೂಮಿ’ ಹಾಡುತ್ತಾರೆ. ಮಹಾ ಕುಂಭಮೇಳಕ್ಕೆ ಹೋಗಿ ನೀರಿನಲ್ಲಿ ಮುಳುಗು ಹಾಕುತ್ತಾರೆ.ಮಠಾಧಿಪತಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಬಿಜೆಪಿ ದಾರಿಯನ್ನೇ ಮುಖ್ಯಮಂತ್ರಿ ಅನುಸರಿಸುತ್ತಾರೆ. ಏನೇ ಮಾಡಿದರೂ ಅವರ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ. ಹರಿಪ್ರಸಾದ್ ವೈಚಾರಿಕವಾಗಿ ಇದಕ್ಕೆ ತದ್ವಿರುದ್ಧ. ಇವರಿಬ್ಬರ ಕೆಲಸ ಹೇಗಿದೆ ಎಂದು ನೋಡಲು ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ’(ಎಸ್‌ಐಆರ್) ಪ್ರಕ್ರಿಯೆಯೇ ಸಾಕು. ಇದರಿಂದ ರಾಜ್ಯ ಬಿಜೆಪಿ ನಾಯಕರೇ ಬೆಚ್ಚಿ ಬಿದ್ದಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ರಕ್ಷಣೆಗೆ ಬರುವಂತೆ ದಿಲ್ಲಿ ವರಿಷ್ಠರಿಗೂ ಮೊರೆ ಹೋಗಿದ್ದಾರೆ.

ಬಿಜೆಪಿ ದುಃಸ್ಥಿತಿಗೆ ವಿಜಯೇಂದ್ರ ಒಬ್ಬರೇ ಕಾರಣರಲ್ಲ, ಎಲ್ಲರ ಪಾಲೂ ಇದೆ. ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೇ ಸಮಸ್ಯೆಯನ್ನು ಸದನದ ಒಳಗಾಗಲೀ ಅಥವಾ ಹೊರಗಾಗಲೀ ಪ್ರಬಲವಾಗಿ ಪ್ರಸ್ತಾಪಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಲು ಇದೂ ಒಂದು ಕಾರಣ. ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಅಕ್ರಮ ಆರೋಪ ಬಂದಾಗ ಬೆಂಗಳೂರಿನಿಂದ ಮೈಸೂರಿಗೆ ನಡೆಸಿದ ಪಾದಯಾತ್ರೆ ಬಿಟ್ಟರೆ ಮತ್ಯಾವ ದೊಡ್ಡ ಹೋರಾಟ ನಡೆದಿಲ್ಲ. ಈ ಹಗರಣವೂ ತಾರ್ಕಿಕ ಅಂತ್ಯ ಕಾಣಲಿಲ್ಲ.

ಬಿಜೆಪಿ ವೈಫಲ್ಯಗಳನ್ನು ಅದರ ಮಿತ್ರ ಪಕ್ಷ ಜನತಾದಳ (ಜಾತ್ಯತೀತ)ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ‘ಬಿಡದಿ ಟೌನ್‌ಶಿಪ್’ ಯೋಜನೆ ಇಟ್ಟುಕೊಂಡು ಹೋರಾಟ ರೂಪಿಸಲು ಬಿಜೆಪಿ ಮುಂದೆ ಬರುತ್ತಿಲ್ಲ. ರೈತ ಹೋರಾಟವನ್ನು ‘ಹೈಜಾಕ್’ ಮಾಡಲು ಜೆಡಿಎಸ್ ಸಜ್ಜಾಗಿದೆ. ರಾಜ್ಯ ಸರಕಾರವನ್ನು ಬಗ್ಗು ಬಡಿಯಲು ಬಿಜೆಪಿಗೆ ಇದಕ್ಕಿಂತ ಪ್ರಮುಖ ವಿಷಯ ಯಾವುದಿದೆ?

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದರೂ, ರಾಜ್ಯದ ವಿಷಯಗಳನ್ನು ಮುಂದಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಬಿಡದಿ ರೈತರ ಪರ ದನಿ ಎತ್ತಿರುವ ದೇವೇಗೌಡರು ಹೋರಾಟಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಶಕ್ತಿ ಕಳೆದುಕೊಂಡು ದುರ್ಬಲವಾಗಿರುವ ಗೌಡರ ಕುಟುಂಬಕ್ಕೆ ಬಿಡದಿ ವಿವಾದ ಬೇಕು.

ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ, ಹಾಸನ, ಮೈಸೂರು, ತುಮಕೂರು ಮತ್ತಿತರ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಮೈ ಕೊಡವಿ ಏಳಲು ಯತ್ನಿಸುತ್ತಿದೆ. ಈ ಭಾಗದಲ್ಲಿ ಒಕ್ಕಲಿಗರ ನಾಯಕರೆಂದರೆ ದೇವೇಗೌಡರು ಮಾತ್ರ. ಅವರಿಗೀಗ ವಯಸ್ಸಾಗಿರುವುದರಿಂದ ಉತ್ತರಾಧಿಕಾರಿಯಾಗಲು ಕುಮಾರಸ್ವಾಮಿ ಹಾಗೂ ಶಿವಕುಮಾರ್ ಮಧ್ಯೆ ಪೈಪೋಟಿ ಆರಂಭವಾಗಿದೆ. ಇವರಿಬ್ಬರಿಗೆ ಸರಿಸಾಟಿಯಾಗಬಲ್ಲ ಒಕ್ಕಲಿಗ ನಾಯಕರು ಬಿಜೆಪಿಯಲ್ಲಿ ಇಲ್ಲ. ಲಿಂಗಾಯತ ಅಥವಾ ಹಿಂದುಳಿದ ವರ್ಗಗಳ ನಾಯಕರೂ ಇಲ್ಲ.

ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗುವ ಮೊದಲೂ ಪ್ರಬಲ ನಾಯಕರಿರಲಿಲ್ಲ. ಅವರು ಸಕ್ರಿಯ ರಾಜಕಾರಣದಿಂದ ದೂರವಾದ ಬಳಿಕವೂ ಪ್ರಬಲ ನಾಯಕರಿಲ್ಲ. ಇದೇ ಆ ಪಕ್ಷಕ್ಕೆ ಮೈನಸ್ ಪಾಯಿಂಟ್.

ವಿಜಯೇಂದ್ರ ಅವರನ್ನು ಯಡಿಯೂರಪ್ಪ ಅವರ ಮಗನೆಂಬ ಕಾರಣಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಿಸಿದ್ದು. ಅಪ್ಪ ಕೂಡಾ ಮಗನಿಗೆ ಒತ್ತಾಸೆಯಾಗಿ ನಿಂತಿದ್ದರು. 2023ರ ನವೆಂಬರ್ ತಿಂಗಳಲ್ಲಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ದಾವಣಗೆರೆ, ಬಾಗಲಕೋಟೆ, ಶಿಗ್ಗಾವಿ, ಚನ್ನಪಟ್ಟಣ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಒಂದರಲ್ಲೂ ಬಿಜೆಪಿ ಗೆದ್ದಿಲ್ಲ. ಕಾಂಗ್ರೆಸ್ ಎಲ್ಲವನ್ನೂ ಬಾಚಿಕೊಂಡಿದೆ. ಅಧಿಕಾರದಲ್ಲಿರುವ ಪಕ್ಷ ಉಪಚುನಾವಣೆ ಗೆಲ್ಲುವುದು ಸಾಮಾನ್ಯ. ಆದರೆ, ಒಂದಾದರೂ ಬಿಜೆಪಿಗೆ ಸಿಗಬೇಕಿತ್ತಲ್ಲವೇ?

ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾಗ ನಡೆದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಮತ್ತು ತುಮಕೂರು ಜಿಲ್ಲೆ ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ‘ಕ್ರೆಡಿಟ್’ ಕೊಡಲಾಗಿತ್ತು. ಅಧ್ಯಕ್ಷರಾದ ಮೇಲೆ ನಡೆದಿರುವ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಏಕೆ ಗೆಲ್ಲಿಸಿಕೊಳ್ಳಲಿಲ್ಲ ಎಂದು ಪಕ್ಷದ ಅತೃಪ್ತರೂ ಕೇಳುತ್ತಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ಕಿತ್ತಾಟ ಈಗ ಬಟಾ ಬಯಲಾಗಿದೆ. ನಾಯಕರ ಭಿನ್ನಾಭಿಪ್ರಾಯ ಸರಿಪಡಿಸಲು ರಾಜ್ಯದ ಉಸ್ತುವಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಮೋಹನ್‌ದಾಸ್ ಅಗರ್ವಾಲ್ ಈಚೆಗೆ ಬೆಂಗಳೂರಿಗೆ ಬಂದಿದ್ದರು. ಆದರೂ ಬಿಕ್ಕಟ್ಟು ಬಗೆಹರಿದಂತಿಲ್ಲ.

ಬಿಜೆಪಿಯೊಳಗೆ ವಿಜಯೇಂದ್ರ ಬದಲಾವಣೆಗೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಅಧ್ಯಕ್ಷರಾಗಲು ಲಾಬಿ ಆರಂಭವಾಗಿದೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಪ್ರಯತ್ನ ನಡೆಸುತ್ತಿದ್ದಾರೆ. ವಿಜಯೇಂದ್ರ ಲಿಂಗಾಯತ ಜಾತಿಯವರಾದ್ದರಿಂದ ಅವರನ್ನು ಬದಲಾಯಿಸಿದರೆ ಲಿಂಗಾಯತರನ್ನೇ ನೇಮಿಸುತ್ತಾರೆ ಎಂದು ಪಕ್ಷದೊಳಗೆ ಚರ್ಚೆ ಆಗುತ್ತಿದೆ. ಏಕೆಂದರೆ, ಅಶೋಕ್ ಒಕ್ಕಲಿಗರು, ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಪರಿಶಿಷ್ಟರು. ಜಾತಿ ಲೆಕ್ಕಾಚಾರದಲ್ಲಿ ಅಧ್ಯಕ್ಷ ಸ್ಥಾನ ಲಿಂಗಾಯತರಿಗೇ ಸಿಗಬೇಕು ಎನ್ನುವುದು ಕೆಲವು ನಾಯಕರ ವಾದ. ಈ ಮಧ್ಯೆ, ಎರಡನೇ ಅವಧಿಗೆ ಮುಂದುವರಿಯಲು ವಿಜಯೇಂದ್ರ ಅವರೂ ತಂತ್ರ ರೂಪಿಸುತ್ತಿದ್ದಾರೆ.

ಕೇಂದ್ರದಲ್ಲಿ ಸಚಿವರಾಗಿರುವ ಸೋಮಣ್ಣ ಅವರಿಗೆ ಯಾರ ಬೆಂಬಲದ ಅಗತ್ಯವಿಲ್ಲ. ವಿಜಯೇಂದ್ರ ವಿರೋಧಿ ಬಣದಲ್ಲಿ ಪ್ರಮುಖರಾಗಿರುವ ಕೇಂದ್ರ ಸಚಿವರಿಗೆ ಸಹಜವಾಗಿಯೇ ವಿರೋಧಿ ಕ್ಯಾಂಪಿನ ಬೆಂಬಲ ಸಿಗಲಿದೆ. ವಿಜಯೇಂದ್ರ ಅವರಿಗೆ ಅವರ ತಂದೆ ಬೆಂಬಲವೇ ಸಾಕು. ಇನ್ನು ಅರವಿಂದ್ ಬೆಲ್ಲದ್ ಅವರಿಗೆ ಪಕ್ಷದ ಒಳಗೆ ಮತ್ತು ಹೊರಗೆ ಒಳ್ಳೆಯ ಹೆಸರಿದೆ.ಅವರ ತಂದೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಕೂಡಾ ಒಳ್ಳೆಯ ಹೆಸರು ಮಾಡಿದ್ದಾರೆ. ಪ್ರಭಾವದಲ್ಲಿ ನಿರಾಣಿ ಅವರೇನೂ ಹಿಂದಿಲ್ಲ. ಆದರೆ, ನಾಲ್ವರೂ ಜನ ನಾಯಕರಲ್ಲ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. 2028ರ ಚುನಾವಣೆಯಲ್ಲೂ ಸೋತರೆ ಚೇತರಿಸಿಕೊಳ್ಳುವುದು ಕಷ್ಟ. ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ತಲೆ ಎತ್ತಲಾಗದೆ ಸೊರಗಿದೆ. ಕರ್ನಾಟಕವೂ ಕೈಬಿಟ್ಟರೆ ದಕ್ಷಿಣ ಭಾರತವೇ ದೂರವಾಗಲಿದೆ. ಹೀಗಾಗಿ, ವರಿಷ್ಠರು ಎಚ್ಚರಿಕೆ ನಿರ್ಧಾರ ಮಾಡಬಹುದು.

Tags

BJP
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X