ತುಚ್ಛ ಮನಸ್ಥಿತಿಯ ವಿಕೃತ ಕ್ರೌರ್ಯ

ದಮನಿತರಲ್ಲಿ ನೂರಾರು ನಾಯಕರು, ವಿದ್ವಾಂಸರು, ಹೋರಾಟಗಾರರು, ಚಿಂತಕರು ಬಂದು ಹೋದರು. ಆದರೂ ಇಂತಹ ಕೃತ್ಯಗಳು 70 ವರ್ಷಗಳಿಂದಲೂ ನಡೆಯುತ್ತಾ ಬಂದಿವೆ, ಹಾಗೆಯೇ ಮುಂದೆಯೂ ಕೂಡ ನಡೆಯುತ್ತವೆ. ಇಂತಹ ಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನವೇಕೆ ನಡೆಯುತ್ತಿಲ್ಲ?
ಬಿಹಾರದ ಬುದ್ಧಗಯಾದ ಅರಳಿಮರದಿಂದ ತಂದ ಕೊಂಬೆಯೊಂದು ಚಾಮರಾಜನಗರದ ಜ್ಯೋತಿಗೌಡನಪುರದಲ್ಲಿ ಹೆಮ್ಮರವಾಗಿ ಬೌದ್ಧ ಸಂಸ್ಕೃತಿಯನ್ನು ಸಾರುತ್ತಾ ನಿಂತಿದೆ. ಹಾಗೆಯೇ ಗಯಾದ ವಿಹಾರದ ಮಾದರಿ ಈ ಗ್ರಾಮದಲ್ಲಿ ತಲೆ ಎತ್ತಿ, ಒಂದು ರೋಚಕ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
ಜ್ಯೋತಿಗೌಡನಪುರದ ಈ ಅರಳಿ ಮರ ಹಾಗೂ ಈ ವಿಹಾರದ ಇತಿಹಾಸವನ್ನು ಕೇಳಿ ಒಂದು ಕ್ಷಣ ಮೈ ರೋಮಾಂಚನವಾಗಿ ಹೋಯಿತು. ಇಂಥದೊಂದು ಪವಿತ್ರವಾದ ಇತಿಹಾಸವನ್ನು ಅಲ್ಲಿನ ಜನರು 40 ವರ್ಷಗಳ ಹಿಂದೆಯೇ ಆ ಗ್ರಾಮದಲ್ಲಿ ಸೃಷ್ಟಿಸಿದ್ದಾರೆ ಎಂದರೆ ಅವರ ಪ್ರಜ್ಞೆಗೆ ನಾವು ಶರಣಾಗಲೇ ಬೇಕು.
ಇಲ್ಲಿ ಕಾಣುವ ಅರಳಿ ಮರ ಬುದ್ಧಗಯಾದಲ್ಲಿ ಬುದ್ಧನಿಗೆ ಜ್ಞಾನೋದಯವಾದ ಸ್ಥಳ ಎನ್ನಲಾದ ಅರಳಿ ಮರದ ಒಂದು ಕೊಂಬೆಯಿಂದ ಜೀವ ಪಡೆದದ್ದು. ಜ್ಯೋತಿಗೌಡನ ಪುರದ ಮಹದೇವಯ್ಯನವರು ಸ್ವತಃ ಊರಿನಿಂದ ಗಾರೆ ಕೆಲಸದವರನ್ನು ಬುದ್ಧಗಯಾಕ್ಕೆ ಕರೆದುಕೊಂಡು ಹೋಗಿ ಅದರ ಮಾದರಿಯನ್ನು ವೀಕ್ಷಿಸಿ, ಅಲ್ಲಿಂದ ಒಂದು ಭಾವಚಿತ್ರವನ್ನು ತಂದು ಈ ವಿಹಾರವನ್ನು ನಿರ್ಮಿಸಿದರು. ಚಾಮರಾಜನಗರ ಹಾಗೂ ಮೈಸೂರು ಪ್ರಾಂತದ ವಿಹಾರಗಳು ತಲೆ ಎತ್ತುವ ಮೊದಲೇ ಈ ವಿಹಾರ ಬುದ್ಧಗಯಾದ ಮಾದರಿಯಲ್ಲಿ ಈ ಕಾಡಂಚಿನ ಗ್ರಾಮದಲ್ಲಿ ತಲೆ ಎತ್ತಿ ನಿಂತಿತು. ಇದಕ್ಕೆ ಮಹದೇವಯ್ಯನವರು ಸ್ವತಃ ಭೂಮಿಯನ್ನು ನೀಡಿ ವಿಹಾರವನ್ನೂ ಸ್ವಂತ ಹಣದಲ್ಲಿ ನಿರ್ಮಿಸಿದ್ದು, ಸತತವಾಗಿ 40 ವರ್ಷಗಳಿಂದ ಧ್ಯಾನ ಜ್ಞಾನವನ್ನು ಆ ನೆಲದಲ್ಲಿ ಆರಂಭಿಸಲಾಗಿತ್ತು.
ಊರಿನ ಜನರ ಸಹಕಾರದೊಂದಿಗೆ ಇಂತಹ ಪವಿತ್ರ ಕೆಲಸವನ್ನು ಆರಂಭಿಸಿದ ವಕೀಲರಾದ ಮಹದೇವಯ್ಯನವರು ಈ ನೆಲದಲ್ಲಿ ಬೌದ್ಧ ಪರಂಪರೆಯನ್ನು ಮರು ನಿರ್ಮಿಸಿದರು. ಇಂತಹ ಮೂಲ ಪರಂಪರೆಯ ವಿಹಾರ ಹಾಗೂ ಚೆನ್ನೈನಿಂದ ತಂದು ಪ್ರತಿಷ್ಠಾಪಿಸಿದ್ದ ಬುದ್ಧರ ಮೂಲ ವಿಗ್ರಹದ ಮೇಲೆ ಈಗ ದಾಳಿಯಾಗಿದೆ. ವಿಚಿತ್ರವಾಗಿ ವಿಕಾರಗೊಳಿಸಲಾಗಿದೆ. ಅತ್ಯಂತ ತುಚ್ಛವಾದ ಮನಸ್ಥಿತಿಯಿಂದ ವಿರೂಪಗೊಳಿಸಿ, ಬೌದ್ಧರ ಭಾವನೆಗಳಿಗೆ ಧಕ್ಕೆ ತರಲಾಗಿದೆ.
ಬುದ್ಧನ ಶಿರವು ಬಲಭಾಗಕ್ಕೆ ಬಿದ್ದ ‘ತಂಗಲಾನ್’ ಎಂಬ ತಮಿಳು ಚಿತ್ರದ ಪೋಸ್ಟರ್ ಒಂದು ಈ ನೆಲದಲ್ಲಿ ಬೌದ್ಧರ ಅಸ್ಮಿತೆಯ ವಿನಾಶವನ್ನು ಸಾರುತ್ತಿತ್ತು. ಆ ಸಿನೆಮಾದ ಮಾದರಿಯಲ್ಲಿಯೇ ಇಂದು ಜ್ಯೋತಿಗೌಡನಪುರದ ಬುದ್ಧನ ವಿಗ್ರಹ ತನ್ನ ಶಿರವನ್ನು ಎಡಭಾಗಕ್ಕೆ ಚಾಚಿ ನೆಲಕ್ಕೆ ಉರುಳಿದೆ. ಅದನ್ನು ಅತ್ಯಂತ ವಿಕೃತ ರೂಪದಲ್ಲಿ ವಿರೂಪ ಗೊಳಿಸಲಾಗಿದೆ. ಇಂತಹ ಕೃತ್ಯವನ್ನು ವಿಕೃತ ಮನಸ್ಸಿಗರು ಎಸಗಿರುವುದಂತೂ ನಿಜ. ಇದು ಪೂರ್ವ ನಿಯೋಜಿತ ಎಂಬುದಂತೂ ಖರೆ.
ಜ್ಯೋತಿಗೌಡನಪುರದ ಜನರ ನೋವು ಸಂಕಟ ದುಃಖಗಳಿಗೆ ಯಾರೂ ಬೆಲೆ ಕಟ್ಟಲಾಗದು. ಇಡೀ ಸಮುದಾಯ ಶೋಕದ ವಾತಾವರಣದಲ್ಲಿ ಜೀವಿಸುತ್ತಿದೆ. ಸ್ವತಃ ಮನೆಯಲ್ಲಿ ಹೆಣ ಬಿದ್ದ ಸಂಕಟಕ್ಕಿಂತ ನೂರು ಪಟ್ಟು ಅವರು ಸಂಕಟಪಡುತ್ತಿದ್ದಾರೆ. ಆದರೆ ಅವರನ್ನು ಬುದ್ಧನ ದಯೆ, ಕರುಣೆ ಅಂಬೇಡ್ಕರ್‌ರವರ ಸಹಾನುಭೂತಿ ಮಾತ್ರ ಸಂತೈಸಿ, ಈ ಕೃತ್ಯದ ಸಾರಾಂಶವನ್ನು ಕಾನೂನಿನ ಕೈಗೆ ನೀಡಿದ್ದಾರೆ. ಆ ಮೂಲಕ ತಮ್ಮ ಪ್ರಜ್ಞೆ ಮೆರೆದಿದ್ದಾರೆ. ಈ ಜಾಗದಲ್ಲಿ ಇನ್ಯಾರಿದ್ದರೂ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಿದ್ದರು. ಆ ಗ್ರಾಮದ ಹಿರಿಯರು ಮತ್ತು ಯುವಕರ ತಾಳ್ಮೆಯನ್ನು ನಾನು ಅತ್ಯಂತ ಆತ್ಮೀಯವಾಗಿ ಗೌರವಿಸುವೆ.
ಇದು ನಾಡಿನ ಬೌದ್ಧರಿಗಲ್ಲ; ಇಡೀ ದೇಶದ ದಮನಿತರಿಗಾದ ಅಪಮಾನವಾಗಿದೆ. ಈಗ ಜ್ಯೋತಿಗೌಡನಪುರದ ಜನ ಮಾತ್ರವಲ್ಲ, ಇಡೀ ನೆಲದ ಜನ ಸಮೂಹ ಮಾತನಾಡಬೇಕಾಗಿದೆ. ದುರಂತವೆಂದರೆ ಭಾರತದಲ್ಲಿ ಇಂತಹ ಘಟನೆಗಳನ್ನು ಸಾಮಾನ್ಯ ಎಂಬಂತೆ ಭಾವಿಸಲಾಗುತ್ತದೆ. ಕೋಮು ಸೌಹಾರ್ದ, ಶಾಂತಿಗಳ ನೆಪದಲ್ಲಿ ಕ್ಷಮಾಪಣೆಯ ಅಸ್ತ್ರವನ್ನು ಬಳಸಲಾಗುತ್ತದೆ ಅಥವಾ ನೊಂದ ಸಮುದಾಯಗಳ ತಲೆಗೆ ಕಟ್ಟಿ ಮತ್ತೆ ಅವರನ್ನೇ ಅವಮಾನಿಸಲಾಗುತ್ತದೆ. ಇಂತಹ ಕೃತ್ಯಗಳಿಗೆ ಕೈ ಹಾಕಿದವರನ್ನು ಜಾತಿ ಕಾರಣಕ್ಕೆ ಸಂರಕ್ಷಿಸಿಕೊಳ್ಳುವ ಕಾಣದ ಕೈಗಳು ನಿಗೂಢವಾಗಿ ಕೆಲಸ ಮಾಡುತ್ತವೆ ಅಥವಾ ವೋಟಿನ ಕಾರಣಕ್ಕಾಗಿ ಸಹಿಸಿಕೊಂಡು ಮೃದು ಧೋರಣೆ ತೋರುವ ರಾಜಕಾರಣ ನಮ್ಮನ್ನು ಮತ್ತೆ ಮತ್ತೆ ಇಂತಹ ಕೃತ್ಯಗಳಿಂದ ಕೊಲ್ಲುತ್ತದೆ.
2024-25ರಲ್ಲಿ ಮೈಸೂರಿನ ಸಿಂಧುವಳ್ಳಿ, ವಾಜಮಂಗಲ, ನಂಜನಗೂಡಿನ ಹಲ್ಲರೆ, ಹಾಸನದ ಭುವನಹಳ್ಳಿ, ಚಾಮರಾಜನಗರದ ಬದನಗುಪ್ಪೆ, ಈಗ ಜ್ಯೋತಿಗೌಡನ ಪುರ, ಈ ಸಾಲುಗಟ್ಟಿದ ದೌರ್ಜನ್ಯಗಳನ್ನು ಗಮನಿಸಿದಾಗ ಇಂತಹ ಕೃತ್ಯಗಳನ್ನು ಮಾಡುವ ಜಾಲವೊಂದು ನಿರ್ಮಾಣವಾಗಿದೆ ಎಂಬ ಶಂಕೆ ಮೂಡುತ್ತದೆ. ಈ ಜಾಲವನ್ನು ಪೋಷಿಸುವ ‘ಪಟಾಲಂ’ ಕೂಡಾ ಕ್ರಿಯಾಶೀಲಗೊಂಡಿದೆ. ಇದನ್ನು ಯಾಕೆ ಭೇದಿಸಲಾಗುತ್ತಿಲ್ಲ..?
ಸಾಮಾನ್ಯವಾಗಿ ಇಂತಹ ಹೀನ ಕೃತ್ಯಗಳು ಜರುಗುವುದು ದುರ್ಬಲ ಸಮುದಾಯಗಳ ಮೇಲೆ. ಆದರೆ ಅಂಬೇಡ್ಕರ್ ಅನುಯಾಯಿಗಳು ದುರ್ಬಲರೇ? ಖಂಡಿತಾ ಇಲ್ಲ. ಆದರೆ ದುರ್ಬಲರೆಂದು ಬಿಂಬಿಸಲಾಗುತ್ತಿದೆ. ಕಾರಣ ಸಮುದಾಯದಲ್ಲಿನ ‘ಆಂತರಿಕ ವಿಘಟನೆ’, ‘ಮೈಕ್ರೋ ಐಡೆಂಟಿಟಿ ಕ್ರೈಸಸ್’, ಕ್ರಿಯಾ ಯೋಜನೆಗಳು ಇಲ್ಲದ ಹೋರಾಟ, ಭಾಷಣ, ಮಾತು.. ಮಾತು....ಮಾತು... ಇವು ನಮ್ಮನ್ನು ಮತ್ತೆ ಮತ್ತೆ ಕೊಂದು ದುರ್ಬಲಗೊಳಿಸುತ್ತಿವೆ.
ಭಾರತದ ಇತಿಹಾಸದ ತುಂಬಾ ಅತ್ಯಂತ ಘೋರ ದಾಳಿಗೆ ಒಳಗಾದ ಪ್ರತಿಮೆಯೆಂದರೆ ಗೌತಮ ಬುದ್ಧನದು. ಹಾಗೆಯೇ ಅತ್ಯಂತ ಅಪಮಾನಕ್ಕೆ ಒಳಗಾದ ವ್ಯಕ್ತಿತ್ವ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರದು. ಭಾರತೀಯರ ನಾಚಿಕೆಗೇಡು ಅಂದರೆ, ಆಧುನಿಕ ಭಾರತದ ನಾಗರಿಕ ಜಗತ್ತಿನಲ್ಲಿಯೂ ಅದು ಮುಂದುವರಿಯುತ್ತಿರುವುದು. ಇದು ಈ ನೆಲದ ಅನಾಗರಿಕ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಅರಿವಿನ ಕೊರತೆ ಎನ್ನಲಾಗದು. ಇದು ಪ್ರತೀಕಾರವಾಗಿದೆ.
ಈ ಪ್ರತೀಕಾರ ಅಂಬೇಡ್ಕರ್ ಅವರು ನೀಡಿದ ಎನ್‌ಲೈಟ್‌ಮೆಂಟ್ (enlightment) ಕಾರಣಕ್ಕಾಗಿ. ಅಂಬೇಡ್ಕರ್ ಅವರ ಈ ಎನ್‌ಲೈಟ್‌ಮೆಂಟನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಂದು ಸಮೂಹದ ಘನತೆಯ ನಡವಳಿಕೆ ಕಾರಣಕ್ಕಾಗಿ. ಅವರು ಶರವೇಗದಲ್ಲಿ ಗಳಿಸಿಕೊಳ್ಳುತ್ತಿರುವ ಪ್ರಜ್ಞೆ, ಪ್ರಶ್ನೆ, ಬೌದ್ಧಿಕ ಪ್ರಕಟಣೆಗಾಗಿ. ಇದನ್ನು ಸಮುದಾಯ ಸೂಕ್ಷ್ಮವಾಗಿ ಗ್ರಹಿಸಬೇಕು. ಇಂತಹ ಕೃತ್ಯಗಳಿಗೆ ಕಂಪಿಸುವಷ್ಟು ದುರ್ಬಲರಾಗಬಾರದು. ಬಾಬಾ ಸಾಹೇಬರ ಹಾಗೆಯೇ ಇಂತಹ ಅವಮಾನಗಳನ್ನು ಮೆಟ್ಟಿ ನಿಲ್ಲಬೇಕು. ಹಾಗೆಯೆ ಬಾಬಾ ಸಾಹೇಬರ ಮಾರ್ಗದಲ್ಲಿ ಮಾತ್ರ ನಡೆಯಬೇಕು.
ಹಳ್ಳಿಗಳಲ್ಲಿರುವ ಧಾರ್ಮಿಕ ಗುಲಾಮಗಿರಿಯಿಂದ ಈ ತಲೆಮಾರು ಹೊರಬರುವುದಕ್ಕೆ ಶ್ರಮಿಸಬೇಕು. ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದೇ ನಮ್ಮ ಬಹುದೊಡ್ಡ ದೌರ್ಬಲ್ಯವಾಗಿದೆ. ಸೌಹಾರ್ದದ ಹೆಸರಿನಲ್ಲಿ ನಡೆಯುವ ಎಲ್ಲಾ ಗುಲಾಮಗಿರಿಯಿಂದ ಹೊರಬರುವುದನ್ನು ಯೋಚಿಸಬೇಕು. ಧಾರ್ಮಿಕ ಗುಲಾಮಗಿರಿಯಿಂದ ಬಿಡುಗಡೆ ಆಗದ ಹೊರತು ಅಂಬೇಡ್ಕರ್ ಅವರ ವಿಮೋಚನ ಮಾರ್ಗದಲ್ಲಿ ಚಲಿಸಲು ಸಾಧ್ಯವಿಲ್ಲ.
ವೇದಿಕೆಯ ಮೇಲೆ ಅಂಬೇಡ್ಕರ್ ಅವರನ್ನು ನಿರರ್ಗಳವಾಗಿ ನುಡಿಯುವ ಪ್ರಗತಿಪರ ಚಿಂತಕರು ಇಂತಹ ದೌರ್ಜನ್ಯಗಳ ಬಗ್ಗೆ ಮಾತನಾಡುವುದಿಲ್ಲ. ಅಂಬೇಡ್ಕರ್ ಅವರನ್ನು ಸ್ತುತಿಸುವ ಮೇಲ್ವರ್ಗದ ರಾಜಕಾರಣಿಗಳು ಇಂತಹ ದೌರ್ಜನ್ಯವಾದಾಗ ಬಹಿರಂಗವಾಗಿ ಖಂಡಿಸುವುದಿಲ್ಲ. ಅಂಬೇಡ್ಕರ್ ಅವರ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಮೇಲ್ವರ್ಗದ ಚಿಂತಕರೂ ಇಂತಹ ಸಂದರ್ಭದಲ್ಲಿ ಬರೆಯುವುದಿಲ್ಲ. ಇದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಅಂಬೇಡ್ಕರ್ ಅವರನ್ನು ಸರಕಿನಂತೆ ಬಳಸಿಕೊಳ್ಳುವ ಸಾಂದರ್ಭಿಕ ಪರ್ಸನಾಲಿಟಿಗಳ ಬಗ್ಗೆ ಎಚ್ಚರಿಕೆ ಇರಬೇಕು.
ಇಂತಹ ಕೃತ್ಯಗಳನ್ನು ಎಸಗಿದಾಗ ಅಮಾಯಕ, ಮುಗ್ಧ, ಅನಕ್ಷರಸ್ಥ ಜನರು ತಮ್ಮ ಬದುಕನ್ನು ಲೆಕ್ಕಿಸದೆ ಅಂಬೇಡ್ಕರ್ ಅವರ ಭಾವನೆಗಳ ಜೊತೆ ನಿಲ್ಲುತ್ತಾರೆ. ಯುವಕರು ತಮ್ಮ ಪ್ರಾಣ ತ್ಯಾಗಕ್ಕೆ ನಿಲ್ಲುತ್ತಾರೆ. ಬಡವರ ಮಕ್ಕಳು ಬೀದಿಯಲ್ಲಿ ನಿಲ್ಲುತ್ತಾರೆ. ಅಂದರೆ ಅಂಬೇಡ್ಕರ್ ಅವರ ನಿಲುವುಗಳು ಬದುಕಿರುವುದೇ ಈ ಜನರ ಎದೆಯಲ್ಲಿ ಮಾತ್ರ. ಆದರೆ ಇಂತಹ ಭಾವನೆಗಳನ್ನು ಅಧಿಕಾರ, ಸ್ವಾರ್ಥಕ್ಕಾಗಿ, ಬಳಸಿಕೊಳ್ಳಲು ಪ್ರವೇಶಿಸುವವರನ್ನು ನಾವು ತಿರಸ್ಕರಿಸಬೇಕು.
ಇಂತಹ ಘಟನೆಗಳು ನಡೆದಾಗ ಅಂಬೇಡ್ಕರ್ ಅವರ ನೇರ ಫಲಾನುಭವಿಗಳು ಎಂದೂ ತಮ್ಮ ಅಧಿಕಾರ, ಅಸ್ಮಿತೆಯನ್ನು ಕಳೆದುಕೊಂಡ ಉದಾಹರಣೆಗಳಿಲ್ಲ.
ಅಂಬೇಡ್ಕರ್ ಕುರಿತು ಹೇಳುವಾಗ ಅಂಬೇಡ್ಕರ್ ಅವರನ್ನೇ ನಾಯಕರನ್ನಾಗಿಸಬೇಕೇ ಹೊರತು, ಅಂಬೇಡ್ಕರ್‌ಬಗ್ಗೆ ನುಡಿಯುವವರು ನಾಯಕರಾಗಕೂಡದು.ಅಂತಹವರನ್ನು ವೈಭವೀಕರಿಸಕೂಡದು. ಅವರನ್ನು ದಮನಿತರ ಪರಮೋಚ್ಚರೆಂದು ಭಾವಿಸಕೂಡದು. ಏಕೆಂದರೆ ನಮ್ಮೆಲ್ಲರ ಪರಮೋಚ್ಚ ಡಾ. ಅಂಬೇಡ್ಕರ್ ಮಾತ್ರ. ಇಂತಹ ಅಪಾಯಗಳಿಂದ ತಪ್ಪಿಸಿಕೊಳ್ಳುವುದನ್ನು ಕೂಡ ನಾವು ಗ್ರಹಿಸಬೇಕು.
ಅಧಿಕಾರ, ಆಸ್ತಿ, ಬದುಕಿನ ಸಮನ್ವೆಯತೆಗಾಗಿ ತಮ್ಮ ಸಾಂಸ್ಕೃತಿಕ, ಧಾರ್ಮಿಕ ಭಾವಗಳಿಗೆ ಆಗುವ ಧಕ್ಕೆಗಳನ್ನು ಸಹಿಸಿಕೊಳ್ಳುವವರು ಎಂದೂ ತಮ್ಮ ತಾಜಾ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲಾರರು.
ದಮನಿತರಲ್ಲಿ ನೂರಾರು ನಾಯಕರು, ವಿದ್ವಾಂಸರು, ಹೋರಾಟಗಾರರು, ಚಿಂತಕರು ಬಂದು ಹೋದರು. ಆದರೂ ಇಂತಹ ಕೃತ್ಯಗಳು 70 ವರ್ಷಗಳಿಂದಲೂ ನಡೆಯುತ್ತಾ ಬಂದಿವೆ, ಹಾಗೆಯೇ ಮುಂದೆಯೂ ಕೂಡ ನಡೆಯುತ್ತವೆ. ಇಂತಹ ಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನವೇಕೆ ನಡೆಯುತ್ತಿಲ್ಲ?.
ಇಂತಹ ಕೃತ್ಯ ಎಸಗಿದವರಿಗೆ, ಸಾರ್ವಜನಿಕವಾಗಿ ಕಠಿಣ ಶಿಕ್ಷೆಗೆ ನೀಡಿರುವ ಒಂದೇ ಒಂದು ಉದಾಹರಣೆಯನ್ನೂ ಕೂಡಾ ಯಾಕೆ ಮುಂದಿಡಲಾಗುತ್ತಿಲ್ಲ?
ಯಾವುದೇ ರಾಷ್ಟ್ರ ನಾಯಕರ, ದಾರ್ಶನಿಕರ ಮೇಲೆ ಪ್ರತೀಕಾರಕ್ಕಾಗಿ ನಡೆಯುವ ಕೃತ್ಯಗಳನ್ನು ಕಾನೂನಿನ ಮೂಲಕ ಶಮನಗೊಳಿಸದ ಹೊರತು, ಒಳಗೊಳಗೆ ಕುದಿಯುವ ಕೋಮು ವಾದವನ್ನು ಎಂದೂ ತಡೆಯಲಾಗದು.
ಇಂಥ ಕೃತ್ಯಗಳನ್ನು ಎಸಗುವವನು ಯಾರೇ ಆದರೂ, ಅವನನ್ನು ಜಾತಿಯ ಹಿತದೃಷ್ಟಿಯಿಂದ ಸಂರಕ್ಷಿಸಿಕೊಳ್ಳುವ ನಿಗೂಢ ಪ್ರಯತ್ನಗಳು ನಿಲ್ಲುವವರೆಗೂ ಜಾತಿಗಳೊಳಗಿನ ಸೌಹಾರ್ದ ಬೆಳೆಯಲಾರದು.
ಇಂತಹ ಕೃತ್ಯಗಳು ನಡೆದ ಜಾಗ ನಮಗೆ ಕೇವಲ ವಿಸಿಟ್ ಮಾದರಿಯಾಗದಿರಲಿ ವಿಷನ್ ಮಾದರಿಯಾಗಲಿ.
ಅಂಬೇಡ್ಕರ್ ಅನುಯಾಯಿಗಳು ಎಂದೂ ಇಂತಹ ಹೀನ ಕೃತ್ಯಗಳಿಂದ ವಿಚಲಿತರಾಗಬಾರದು. ಇಂತಹ ಸಾವಿರ ಕ್ರೌರ್ಯ ಮತ್ತು ಹೀನ ಕೃತ್ಯಗಳನ್ನು ಮೆಟ್ಟಿ ನಿಂತು ಹೊಸ ಬದುಕಿನ ಉದಯದತ್ತ ಸಾಗಬೇಕಾಗಿದೆ.







