ಈಗ ಯುವ ಸಮೂಹ ಜಾಗೃತಗೊಂಡಿದೆ ಎಚ್ಚರ!

ಹೋರಾಟಗಳು ಗೆಲ್ಲುವುದು ಕೇವಲ ಒಂದು ಬೇಡಿಕೆ ಈಡೇರಿದಾಗ ಮಾತ್ರವಲ್ಲ, ಅವು ಗೆಲ್ಲುವುದು ಜನರ ಧ್ವನಿಯನ್ನು ಯಾರಿಂದಲೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅಧಿಕಾರದ ಮುಂದೆ ಪ್ರತಿಷ್ಠಾಪಿಸಿದಾಗ. ಜೆನ್ ಝಿಯ ಈ ಹೋರಾಟ ಅಂತಹ ಒಂದು ಐತಿಹಾಸಿಕ ಘಟ್ಟ. ಇದು ಕೇವಲ ಒಂದು ರಾಜೀನಾಮೆಗಾಗಿ ನಡೆದ ಹೋರಾಟವಲ್ಲ, ಒಂದು ಪೀಳಿಗೆಯ ಅಸಮಾಧಾನ, ಆಕ್ರೋಶ ಮತ್ತು ಪ್ರಶ್ನಿಸುವ ಮನೋಭಾವ ಒಂದಾಗಿ ಸ್ಫೋಟಗೊಂಡ ಕ್ಷಣ. ಲಕ್ಷಾಂತರ ವಿದ್ಯಾರ್ಥಿಗಳು ಬೆಂಬಲವಾಗಿ ನಿಂತ ಈ ಚಳವಳಿ, ಯುವಜನತೆಯನ್ನು ಸುಲಭವಾಗಿ ಮೌನಗೊಳಿಸಬಹುದು, ಅವರ ಪ್ರಶ್ನೆಗಳನ್ನು ರಾಜಕೀಯ ಹಣೆಪಟ್ಟಿಗಳಿಂದ ಮುಚ್ಚಿಹಾಕಬಹುದು ಎಂಬ ಭ್ರಮೆಯನ್ನು ಅಧಿಕಾರದ ಮುಂದೆ ನುಚ್ಚುನೂರು ಮಾಡಿ ಬಿಸಾಕಿದೆ.
ಜೆನ್ ಝಿ ನಡೆಸಿದ ಹೋರಾಟವು ಇತಿಹಾಸದ ಪುಟ ಸೇರುತ್ತದೆ. ಏಕೆಂದರೆ ಲಕ್ಷಾಂತರ ವಿದ್ಯಾರ್ಥಿಗಳು ಈ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಕಳೆದ ಅನೇಕ ವರ್ಷಗಳಲ್ಲಿ ಯುವಜನತೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಒಂದೇ ಪ್ರಶ್ನೆಯ ಸುತ್ತ ಒಗ್ಗೂಡಿಸಿದ ಹೋರಾಟಗಳು ವಿರಳ. ಈ ಹೋರಾಟದ ಅತ್ಯಂತ ದೊಡ್ಡ ವಿಶೇಷತೆ ಎಂದರೆ, ಅದು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಆರಂಭದಲ್ಲಿ ಯಾರಿಗೂ ಊಹಿಸಲು ಸಾಧ್ಯವಾಗಲಿಲ್ಲ. ಇದು ಯಾವುದೋ ಒಂದು ರಾಜಕೀಯ ಪಕ್ಷದ ಕಚೇರಿಯಲ್ಲಿ ಕುಳಿತು ರೂಪಿಸಿದ ಚಳವಳಿಯಾಗಿರಲಿಲ್ಲ. ಯಾವುದೋ ಒಬ್ಬ ನಾಯಕನ ಆದೇಶಕ್ಕೆ ಕಾಯುತ್ತಿದ್ದ ಚಳವಳಿಯೂ ಅಲ್ಲ. ಜನರೊಳಗೆ, ವಿಶೇಷವಾಗಿ ಯುವಜನತೆಯೊಳಗೆ ಬೇರುಬಿಟ್ಟಿದ್ದ ಅಸಮಾಧಾನ, ಪ್ರಶ್ನೆಗಳು ಮತ್ತು ಆಕ್ರೋಶ ಒಂದು ಹಂತದಲ್ಲಿ ಸ್ಫೋಟಗೊಂಡು ಚಳವಳಿಯಾಗಿ ರೂಪುಗೊಂಡಿತು.
ವ್ಯವಸ್ಥೆ ಜನರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದಾಗ, ಅಧಿಕಾರದಲ್ಲಿರುವವರು ತಮ್ಮನ್ನು ಪ್ರಶ್ನಿಸುವ ಪ್ರತಿಯೊಂದು ಧ್ವನಿಯನ್ನೂ ಶತ್ರುವಿನಂತೆ ನೋಡಲು ಆರಂಭಿಸಿದಾಗ, ಪ್ರಜಾಪ್ರಭುತ್ವದ ಬದಲಿಗೆ ಅಧಿಕಾರದ ಅಹಂಕಾರ ಮಾತನಾಡಲು ಆರಂಭಿಸಿದಾಗ ಚಳವಳಿಗಳನ್ನು ಯಾರೂ ಪೂರ್ವಯೋಜಿತವಾಗಿ ಸೃಷ್ಟಿಸಬೇಕಾಗಿಲ್ಲ. ಅವು ತಾನಾಗಿಯೇ ಹುಟ್ಟಿಕೊಳ್ಳುತ್ತವೆ. ಜೆನ್ ಝಿಯ ಈ ಹೋರಾಟ ಅದಕ್ಕೆ ಒಂದು ದೊಡ್ಡ ಉದಾಹರಣೆ.
ಭಾರತದಲ್ಲಿ ಅಂಧಾನುಕರಣೆ ಮಾಡುವವರು ಇದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಅದೇ ಭಾರತದಲ್ಲಿ ಪ್ರಶ್ನಿಸುವ, ಯೋಚಿಸುವ, ಸಂವಿಧಾನವನ್ನು ಓದುವ, ಅನ್ಯಾಯವನ್ನು ಗುರುತಿಸುವ ಮತ್ತು ಅಧಿಕಾರವನ್ನು ಪ್ರಶ್ನಿಸುವ ಕೋಟ್ಯಂತರ ಧೈರ್ಯಶಾಲಿ ಯುವಕ-ಯುವತಿಯರಿದ್ದಾರೆ ಎನ್ನುವುದನ್ನು ಈ ಹೋರಾಟ ಮತ್ತೊಮ್ಮೆ ಸಾಬೀತುಪಡಿಸಿದೆ. ಯುವಜನತೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ಪೀಳಿಗೆ ಎಂದು ಭಾವಿಸಿದ್ದವರಿಗೆ ಇದು ಒಂದು ಗಂಭೀರ ಎಚ್ಚರಿಕೆ. ಈ ಪೀಳಿಗೆಯವರಲ್ಲಿ ಪ್ರಶ್ನೆಗಳಿವೆ. ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿಯಿದೆ. ಅವರಿಗೆ ಉದ್ಯೋಗ ಬೇಕು, ಪಾರದರ್ಶಕ ಶಿಕ್ಷಣ ವ್ಯವಸ್ಥೆ ಬೇಕು, ನ್ಯಾಯಬದ್ಧವಾಗಿ ನಡೆಯುವ ಪರೀಕ್ಷೆಗಳು ಬೇಕು, ಸಾಮಾಜಿಕ ನ್ಯಾಯ ಬೇಕು ಮತ್ತು ತಮ್ಮನ್ನು ಆಳುವವರು ತಮ್ಮ ಮುಂದೆ ಉತ್ತರದಾಯಿತ್ವವನ್ನು ಹೊಂದಿರಬೇಕು ಎಂಬ ನಿರೀಕ್ಷೆಯಿದೆ.
ಆದರೆ ದುರದೃಷ್ಟವೆಂದರೆ, ಈ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಪ್ರಶ್ನಿಸುವವರನ್ನೇ ದೇಶದ್ರೋಹಿಗಳೆಂದು ಕರೆಯುವ ಒಂದು ಅಪಾಯಕಾರಿ ರಾಜಕೀಯ ಸಂಸ್ಕೃತಿ ಬೆಳೆದುಬರುತ್ತಿದೆ. ಸರಕಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ, ತಪ್ಪಿನ ವಿರುದ್ಧ ಪ್ರತಿಭಟಿಸಿದರೆ ಜಿಹಾದಿ, ಅಧಿಕಾರದ ಹೊಣೆಗಾರಿಕೆಯನ್ನು ಕೇಳಿದರೆ ಚೈನೀಸ್ ಏಜೆಂಟ್, ಇಂತಹ ಹಣೆಪಟ್ಟಿಗಳನ್ನು ಅಂಟಿಸುವ ಮೂಲಕ ಜನರ ಪ್ರಶ್ನೆಗಳನ್ನು ಮೌನಗೊಳಿಸಬಹುದು ಎಂದು ಯಾರಾದರೂ ಭಾವಿಸಿದರೆ, ಅದು ಅವರ ದೊಡ್ಡ ಭ್ರಮೆ.
ಸೋನಂ ವಾಂಗ್ಚುಕ್, ನೇಹಾ ಬೋರಾ, ಅಭಿಜೀತ್ ದೀಪ್ಕೆ ಅವರಂತಹ ಪ್ರಜಾಪ್ರಭುತ್ವವಾದಿಗಳನ್ನು ಯಾರಾದರೂ ದೇಶದ್ರೋಹಿಗಳೆಂದು ಕರೆಯುವ ಮೊದಲು ಒಂದು ಸರಳ ಪ್ರಶ್ನೆಗೆ ಉತ್ತರಿಸಬೇಕು. ಸರಕಾರವನ್ನು ಪ್ರಶ್ನಿಸುವುದು ಯಾವಾಗಿನಿಂದ ದೇಶದ್ರೋಹವಾಯಿತು? ತಪ್ಪು ನಡೆದಾಗ ಅದರ ವಿರುದ್ಧ ಧ್ವನಿ ಎತ್ತುವುದು ಯಾವಾಗಿನಿಂದ ರಾಷ್ಟ್ರವಿರೋಧವಾಯಿತು? ಯುವಕರು ಉದ್ಯೋಗ ಕೇಳುವುದು, ವಿದ್ಯಾರ್ಥಿಗಳು ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಲಿ ಎಂದು ಕೇಳುವುದು, ಜನರು ತಮ್ಮ ಹಕ್ಕುಗಳನ್ನು ಕೇಳುವುದು, ಅಧಿಕಾರದಲ್ಲಿರುವವರು ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸುವುದು ಯಾವ ಕಾನೂನಿನ ಪ್ರಕಾರ ದೇಶದ್ರೋಹವಾಗುತ್ತದೆ?
ಒಂದು ವೇಳೆ ಸರಕಾರವನ್ನು ಪ್ರಶ್ನಿಸುವ ಪ್ರತಿಯೊಬ್ಬರೂ ದೇಶದ್ರೋಹಿಗಳಾಗಿದ್ದರೆ, ಪ್ರಜಾಪ್ರಭುತ್ವದಲ್ಲಿ ಸರಕಾರವನ್ನು ಪ್ರಶ್ನಿಸುವ ಹಕ್ಕು ಯಾರಿಗಿದೆ? ಸರಕಾರವನ್ನು ಪ್ರಶ್ನಿಸುವ ಲಕ್ಷಾಂತರ ಯುವಕರು ಜಿಹಾದಿ ಅಥವಾ ಚೀನಾ ಏಜೆಂಟ್‌ಗಳಾಗಿಬಿಟ್ಟರೆ, ಇಷ್ಟೊಂದು ‘ದೇಶದ್ರೋಹಿಗಳನ್ನು’ ಒಳಗಿಟ್ಟುಕೊಂಡು ಈ ದೇಶ ಇಷ್ಟು ವರ್ಷಗಳ ಕಾಲ ಹೇಗೆ ಉಳಿದಿದೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ.
ಸರಕಾರ ಎಂದರೆ ದೇಶವಲ್ಲ ಅಥವಾ ಅಧಿಕಾರದಲ್ಲಿರುವ ವ್ಯಕ್ತಿಯೇ ದೇಶವಲ್ಲ. ಯಾವುದೇ ರಾಜಕೀಯ ಪಕ್ಷ ಕೂಡ ದೇಶವಲ್ಲ. ದೇಶ ಎಂದರೆ ಅದರಲ್ಲಿ ಬದುಕುತ್ತಿರುವ ಜನರು, ಅದರ ಸಂವಿಧಾನ, ಅದರ ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ದೊರೆಯಬೇಕಾದ ಸ್ವಾತಂತ್ರ್ಯ ಹಾಗೂ ಹಕ್ಕುಗಳು. ಆದ್ದರಿಂದ ಸರಕಾರವನ್ನು ಪ್ರಶ್ನಿಸುವುದು ಎಂದರೆ ದೇಶವನ್ನು ವಿರೋಧಿಸಿದಂತಲ್ಲ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಎಂದರೆ ದೇಶವನ್ನು ದುರ್ಬಲಗೊಳಿಸಿದಂತಲ್ಲ. ಬದಲಾಗಿ, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮೂಲಕವೇ ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವುದು ಎಂದರ್ಥ.
ಇಲ್ಲಿ ಜೆನ್ ಝಿ ಹೋರಾಟದ ನಿಜವಾದ ರಾಜಕೀಯ ಮತ್ತು ಸಾಮಾಜಿಕ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಈ ಪೀಳಿಗೆಗೆ ರಾಜಕೀಯ ಎಂದರೆ ಕೇವಲ ಚುನಾವಣೆ, ಪಕ್ಷದ ಚಿಹ್ನೆ ಅಥವಾ ನಾಯಕರ ಭಾಷಣಗಳಲ್ಲ. ತಮ್ಮ ಶಿಕ್ಷಣ, ಉದ್ಯೋಗ, ಭವಿಷ್ಯ, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕಿನ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ನೀತಿಯೂ ರಾಜಕೀಯವೇ ಎಂಬ ಅರಿವು ಈ ಪೀಳಿಗೆಯಲ್ಲಿ ಮೂಡುತ್ತಿದೆ. ಈ ಅರಿವು ಪ್ರಜಾಪ್ರಭುತ್ವಕ್ಕೆ ಅಪಾಯವಲ್ಲ, ಬದಲಾಗಿ ಪ್ರಜಾಪ್ರಭುತ್ವವು ಗಟ್ಟಿಗೊಳ್ಳುತ್ತಿದೆ ಅನ್ನುವುದರ ಸೂಚನೆ.
ಯುವಜನತೆ ಪ್ರಶ್ನಿಸುವುದು ವ್ಯವಸ್ಥೆಯ ವಿರುದ್ಧದ ದ್ವೇಷದಿಂದಲ್ಲ. ತಮ್ಮ ಭವಿಷ್ಯದ ಮೇಲೆ ತಮಗಿರುವ ಹಕ್ಕಿನ ಅರಿವಿನಿಂದ. ಪರೀಕ್ಷೆಯಲ್ಲಿನ ಒಂದು ಅಕ್ರಮ ಅವರ ಒಂದು ವರ್ಷದ ಬದುಕನ್ನು ಹಾಳುಮಾಡಬಹುದು. ನಿರುದ್ಯೋಗಗಳ ಕನಸುಗಳನ್ನು ಮಸುಕಾಗಿಸಬಹುದು. ಶಿಕ್ಷಣದಲ್ಲಿನ ಅಸಮಾನತೆ ಅವರ ಪೀಳಿಗೆಯ ಭವಿಷ್ಯವನ್ನೇ ನುಂಗಿಹಾಕಬಹುದು. ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ವ್ಯವಸ್ಥೆ ಅವರ ಅವಕಾಶಗಳನ್ನು ಕಸಿದುಕೊಳ್ಳಬಹುದು. ಹೀಗಾಗಿ ಯುವಜನರು ತಮ್ಮ ಬದುಕಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಪ್ರಶ್ನಿಸುವುದು ಸಹಜ.
ಅದಕ್ಕಾಗಿಯೇ ಯುವಜನರ ಪ್ರಶ್ನೆಗಳನ್ನು, ಹೋರಾಟಗಳನ್ನು ‘ರಾಜಕೀಯ ಪ್ರೇರಿತ’ ಎಂದು ತಳ್ಳಿಹಾಕಿದರೆ ಅದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಯಾವುದೇ ಹೋರಾಟದಲ್ಲಾದರೂ ರಾಜಕೀಯ ಆಯಾಮ ಇರಬಹುದು, ಆದರೆ ರಾಜಕೀಯ ಪ್ರಶ್ನೆ ಕೇಳುವುದು ಪ್ರಜಾಪ್ರಭುತ್ವದಲ್ಲಿ ಅಪರಾಧವಲ್ಲ. ಬದಲಾಗಿ, ಜನರ ಬದುಕನ್ನು ನಿರ್ಧರಿಸುವ ಆಡಳಿತದ ಮೇಲೆ ರಾಜಕೀಯ ಹೊಣೆಗಾರಿಕೆಯನ್ನು ಕೇಳುವ ಹಕ್ಕು ಪ್ರಜಾಪ್ರಭುತ್ವದಲ್ಲಿದೆ.
ಮತ್ತೊಂದು ಮುಖ್ಯ ಸಂಗತಿಯನ್ನು ಇಲ್ಲಿ ಸ್ಪಷ್ಟಪಡಿಸಬೇಕು. ಧರ್ಮವು ವ್ಯಕ್ತಿಯ ನಂಬಿಕೆಗೆ ಸಂಬಂಧಿಸಿದ್ದಿರಬಹುದು, ಆದರೆ ರಾಜ್ಯದ ಆಡಳಿತ ಮತ್ತು ನಾಗರಿಕರ ಹಕ್ಕುಗಳ ಮಾನದಂಡ ಸಂವಿಧಾನವಾಗಿರಬೇಕು. ಧರ್ಮದ ಹೆಸರಿನಲ್ಲಿ ಪ್ರಶ್ನೆಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸಲೇಬೇಕು, ಆದರೆ ಧರ್ಮವನ್ನು ಅಧಿಕಾರದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಗುರಾಣಿಯನ್ನಾಗಿ ಬಳಸಬಾರದು.
ಸಂವಿಧಾನವು ಯಾವುದೇ ಒಂದು ಧರ್ಮದ ಪರ ಅಥವಾ ವಿರೋಧ ಮಾಡುವುದಿಲ್ಲ. ಅದು ವಿವಿಧ ನಂಬಿಕೆಗಳು, ಭಾಷೆಗಳು, ಜಾತಿಗಳು, ಸಮುದಾಯಗಳು ಮತ್ತು ವಿಚಾರಧಾರೆಗಳ ನಡುವೆ ಸಮಾನ ನಾಗರಿಕತ್ವದ ಭರವಸೆ ನೀಡುವ ಸಾಮಾಜಿಕ ಒಪ್ಪಂದ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಪ್ರಶ್ನಿಸುವ ಯಾವುದೇ ರಾಜಕೀಯ ಪ್ರಯತ್ನವನ್ನು ಧರ್ಮದ ಭಾವನೆಗಳ ಹೆಸರಿನಲ್ಲಿ ಸಮರ್ಥಿಸಲು ಸಾಧ್ಯವಿಲ್ಲ.
ಸಂವಿಧಾನಬದ್ಧವಾಗಿ ಸರಕಾರವನ್ನು ಪ್ರಶ್ನಿಸಿದವರ ಮೇಲೆ ದಾಳಿ ನಡೆಸುವುದು, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸುವುದು ಅಥವಾ ಅವರ ವಿಚಾರಗಳಿಗೆ ಬದಲಾಗಿ ವೈಯಕ್ತಿಕ ನಿಂದನೆಗೆ ಇಳಿಯುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣವಲ್ಲ. ಭಿನ್ನಾಭಿಪ್ರಾಯಕ್ಕೆ ಪ್ರತಿಯಾಗಿ ತರ್ಕಬದ್ಧವಾದ ಪ್ರತಿವಾದ ಬರಬೇಕು. ಪ್ರಶ್ನೆಗೆ ಉತ್ತರ ಬರಬೇಕು. ಆರೋಪಗಳಿಗೆ ಸಾಕ್ಷಿಗಳು ಬರಬೇಕು. ದೈಹಿಕ ಅಥವಾ ಮಾನಸಿಕ ದಾಳಿ ಮಾಡಿದ ತಕ್ಷಣ ಸುಳ್ಳು ಸತ್ಯವಾಗುವುದಿಲ್ಲ.
ಇಲ್ಲಿ ಒಂದು ದೊಡ್ಡ ಪಾಠವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಮಗೆ ಇಷ್ಟವಾದ ಅಭಿಪ್ರಾಯವನ್ನು ಮಾತ್ರ ಕೇಳುವ ಹಕ್ಕಲ್ಲ. ನಮಗೆ ಅಸಹ್ಯ ಎನ್ನಿಸುವ, ಕಿರಿಕಿರಿ ಉಂಟುಮಾಡುವ ಅಥವಾ ನಮ್ಮ ರಾಜಕೀಯ ನಿಲುವಿಗೆ ವಿರುದ್ಧವಾಗಿರುವ ಅಭಿಪ್ರಾಯವನ್ನೂ ಕಾನೂನಿನ ಮಿತಿಯೊಳಗೆ ಕೇಳುವ ಸಾಮರ್ಥ್ಯವೇ ಪ್ರಜಾಪ್ರಭುತ್ವದ ಪರೀಕ್ಷೆ. ಭಿನ್ನಮತವನ್ನು ಸಹಿಸುವ ಶಕ್ತಿ ಇಲ್ಲದ ಸಮಾಜದಲ್ಲಿ ಬಹುಮತದ ಆಡಳಿತವೂ ನಿಧಾನವಾಗಿ ಅಸಹಿಷ್ಣುತೆಯ ಆಡಳಿತವಾಗಿ ಬದಲಾಗಬಹುದು.
ಇಂದಿನ ಯುವಜನರ ಜಾಗೃತಿ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಅವರು ಕೇವಲ ನಾಯಕರನ್ನು ಅನುಸರಿಸುವ ಪೀಳಿಗೆಯಾಗಿರದೆ, ನಾಯಕರನ್ನೇ ಪ್ರಶ್ನಿಸುವ ಪೀಳಿಗೆಯಾಗುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆಯುತ್ತಾರೆ, ಪರ್ಯಾಯ ಅಭಿಪ್ರಾಯಗಳನ್ನು ಹುಡುಕುತ್ತಾರೆ, ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ತಮ್ಮ ಅನುಭವದ ಆಧಾರದ ಮೇಲೆ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಈ ಪೀಳಿಗೆಯನ್ನು ಕೇವಲ ವಿರೋಧಿಸುವುದರಿಂದ ಅಥವಾ ಸುಳ್ಳು ಹಣೆಪಟ್ಟಿಗಳಿಂದ ನಿಯಂತ್ರಿಸಬಹುದು ಎನ್ನುವ ಕುತಂತ್ರ ಈಗ ನಡೆಯುವುದಿಲ್ಲ.
ಒಂದು ಪ್ರಶ್ನೆಯನ್ನು ಹತ್ತಿಕ್ಕಬಹುದು. ಹತ್ತು ಪ್ರಶ್ನೆಗಳನ್ನು ತಡೆಯಬಹುದು. ನೂರು ಧ್ವನಿಗಳನ್ನು ಬೇಕಾದರೂ ಬೆದರಿಸಬಹುದು. ಆದರೆ ಲಕ್ಷಾಂತರ ಯುವಕರು ಒಂದೇ ಪ್ರಶ್ನೆಯನ್ನು ಕೇಳಲು ಆರಂಭಿಸಿದಾಗ ಅವರನ್ನು ಮೌನಗೊಳಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಚಳವಳಿಗಳು ಯಾವಾಗಲೂ ಘೋಷಣೆಯಿಂದ ಹುಟ್ಟುವುದಿಲ್ಲ. ಅವು ಜನರೊಳಗಿನ ಅಸಮಾಧಾನದಿಂದ ಹುಟ್ಟುತ್ತವೆ. ಒಂದು ಹಂತದ ನಂತರ ಆ ಅಸಮಾಧಾನಕ್ಕೆ ಮುಖವೂ ಬೇಕಾಗುವುದಿಲ್ಲ, ನಾಯಕತ್ವವೂ ಬೇಕಾಗುವುದಿಲ್ಲ. ಅದು ತನ್ನದೇ ದಾರಿಯನ್ನು ಕಂಡುಕೊಳ್ಳುತ್ತದೆ.
ಜೆನ್ ಝಿಯ ಈ ಹೋರಾಟ ಅದನ್ನೇ ತೋರಿಸಿಕೊಟ್ಟಿದೆ. ಇದು ಕೇವಲ ಒಬ್ಬರ ರಾಜೀನಾಮೆಗಾಗಿ ನಡೆದ ಹೋರಾಟವೆಂದು ಭಾವಿಸಬೇಕಿಲ್ಲ. ಅಧಿಕಾರದಲ್ಲಿರುವವರು ಅಕೌಂಟೇಬಲ್ ಆಗಿರಬೇಕು ಎಂಬ ಬೇಡಿಕೆಯ ಹೋರಾಟ. ಸರಕಾರಗಳು ಜನರ ಮುಂದೆ ಜವಾಬ್ದಾರರಾಗಿರಬೇಕು ಎಂಬ ಸಂದೇಶದ ಹೋರಾಟ.
ಆದರೆ ಈ ಹೋರಾಟದ ಮುಂದಿನ ಹಂತ ಇನ್ನೂ ಮುಖ್ಯ. ಬೀದಿಯಲ್ಲಿ ಕೇಳಿದ ಪ್ರಶ್ನೆಗಳು ವ್ಯವಸ್ಥೆಯೊಳಗೆ ಉತ್ತರಗಳಾಗಿ ಪರಿವರ್ತನೆಯಾಗಬೇಕು. ಪ್ರತಿಭಟನೆ ಒಂದು ಆರಂಭ. ಅದರ ನಂತರ ಪಾರದರ್ಶಕ ತನಿಖೆ, ಕಾನೂನಿನ ಪ್ರಕ್ರಿಯೆ, ಹೊಣೆಗಾರಿಕೆ ಮತ್ತು ಸಂಸ್ಥೆಗಳ ಸುಧಾರಣೆ ಆಗಬೇಕು. ಇಲ್ಲದಿದ್ದರೆ ಯಾವುದೇ ಹೋರಾಟದ ತಾತ್ಕಾಲಿಕ ಗೆಲುವು ಶಾಶ್ವತ ಬದಲಾವಣೆಯಾಗುವುದಿಲ್ಲ.
ಯುವಜನರ ಆಕ್ರೋಶವನ್ನು ಕೇವಲ ರಾಜಕೀಯ ಅವಕಾಶವಾಗಿ ಬಳಸಿಕೊಳ್ಳುವ ಬದಲು, ಅದನ್ನು ವ್ಯವಸ್ಥೆಯ ಸುಧಾರಣೆಯ ಶಕ್ತಿಯನ್ನಾಗಿ ಪರಿವರ್ತಿಸುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಪ್ರಶ್ನಿಸುವುದರ ಜೊತೆಗೆ ದಾಖಲೆಗಳನ್ನು ಓದಬೇಕು, ವಾಸ್ತವಾಂಶಗಳನ್ನು ಪರಿಶೀಲಿಸಬೇಕು, ಸುಳ್ಳು ಸುದ್ದಿಗಳಿಂದ ದೂರವಿರಬೇಕು, ಶಾಂತಿಯುತ ಮತ್ತು ಸಂವಿಧಾನಬದ್ಧ ಮಾರ್ಗಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಅದೇ ಈ ಚಳವಳಿಗೆ ದೀರ್ಘಕಾಲದ ಶಕ್ತಿ ನೀಡುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಪ್ರಜಾಪ್ರಭುತ್ವ ಎಂದರೆ ಕೇವಲ ಸರಕಾರವನ್ನು ಬದಲಾಯಿಸುವ ವ್ಯವಸ್ಥೆಯಲ್ಲ. ಅದು ಅಧಿಕಾರವನ್ನು ನಿರಂತರವಾಗಿ ಪ್ರಶ್ನಿಸುವ, ಪರಿಶೀಲಿಸುವ ಮತ್ತು ಉತ್ತರದಾಯಿತ್ವಕ್ಕೆ ಒಳಪಡಿಸುವ ವ್ಯವಸ್ಥೆ. ಚುನಾವಣೆಯಲ್ಲಿ ಮತ ಹಾಕಿದ ನಂತರ ನಾಗರಿಕನ ಜವಾಬ್ದಾರಿ ಮುಗಿಯುವುದಿಲ್ಲ. ಅಲ್ಲಿಂದಲೇ ಪ್ರಶ್ನಿಸುವ ನಾಗರಿಕತ್ವದ ನಿಜವಾದ ಆರಂಭವಾಗುತ್ತದೆ.
ಈ ಹೋರಾಟದ ನಿಜವಾದ ಗೆಲುವು ಒಂದು ರಾಜೀನಾಮೆಯಲ್ಲಿ ಮುಗಿಯುವುದಿಲ್ಲ. ನಿಜವಾದ ಗೆಲುವು ಎಂದರೆ ಲಕ್ಷಾಂತರ ಯುವಕರಲ್ಲಿ ‘‘ನಾವು ಪ್ರಶ್ನಿಸಬಹುದು’’ ಎಂಬ ಧೈರ್ಯ ಮೂಡಿರುವುದು. ‘‘ಅಧಿಕಾರದಲ್ಲಿರುವವರೂ ಉತ್ತರಿಸಬೇಕು’’ ಎಂಬ ಅರಿವು ಜಾಗೃತಗೊಂಡಿರುವುದು. ‘‘ನಮ್ಮ ಧ್ವನಿಗೆ ದೇಶದ್ರೋಹದ ಹಣೆಪಟ್ಟಿ ಅಂಟಿಸಿ ಶಾಶ್ವತವಾಗಿ ಮೌನಗೊಳಿಸಲು ಸಾಧ್ಯವಿಲ್ಲ’’ ಎಂಬ ಆತ್ಮವಿಶ್ವಾಸ ಬೆಳೆದಿರುವುದು.
ಇದನ್ನು ಅಧಿಕಾರದಲ್ಲಿರುವವರು ಅರ್ಥಮಾಡಿಕೊಳ್ಳಬೇಕು. ಯುವಜನತೆಯ ಪ್ರಶ್ನೆಗಳನ್ನು ಶತ್ರುತ್ವದಿಂದ ನೋಡುವ ಬದಲು ಅವುಗಳ ಹಿಂದೆ ಇರುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಿಂತ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಪ್ರಶ್ನಿಸುವವರನ್ನು ನಿಂದಿಸುವುದಕ್ಕಿಂತ ಅವರ ಪ್ರಶ್ನೆಗಳಿಗೆ ತರ್ಕಬದ್ಧವಾಗಿ ಉತ್ತರಿಸಬೇಕು. ಧರ್ಮ ಮತ್ತು ರಾಷ್ಟ್ರವನ್ನು ರಾಜಕೀಯ ಗುರಾಣಿಯನ್ನಾಗಿ ಬಳಸುವುದಕ್ಕಿಂತ ಸಂವಿಧಾನದ ಮೌಲ್ಯಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು.
ಏಕೆಂದರೆ ಇತಿಹಾಸದಲ್ಲಿ ಅಧಿಕಾರದ ಕುರ್ಚಿಗಳು ಬದಲಾಗುತ್ತವೆ. ಸರಕಾರಗಳು ಬದಲಾಗುತ್ತವೆ. ನಾಯಕರು ಬದಲಾಗುತ್ತಾರೆ. ಆದರೆ ಒಮ್ಮೆ ಜಾಗೃತಗೊಂಡ ಜನರ ಪ್ರಶ್ನಿಸುವ ಮನಸ್ಸನ್ನು ಮತ್ತೆ ಸುಲಭವಾಗಿ ದಮನಗೊಳಿಸಲು ಸಾಧ್ಯವಿಲ್ಲ.






