Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

ನಾ. ದಿವಾಕರನಾ. ದಿವಾಕರ3 Oct 2025 8:57 AM IST
share
ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

ಚಾರಿತ್ರಿಕವಾಗಿ ನೋಡಿದರೂ, ವರ್ತಮಾನದ ರಾಜಕಾರಣದ ನೆಲೆಯಲ್ಲಿಟ್ಟು ನೋಡಿದರೂ, ಮಹಾತ್ಮಾ ಗಾಂಧಿ ಭಾರತದ ಸಮಕಾಲೀನ ಇತಿಹಾಸದಲ್ಲಿ ಕುತೂಹಲಕಾರಿ ವ್ಯಕ್ತಿಯಾಗಿ ಕಾಣುತ್ತಾರೆ. ದ್ವೇಷ ರಾಜಕಾರಣದ ವಿಶಾಲ ಸಂತೆಯಲ್ಲಿ ತಮ್ಮ ಬೌದ್ಧಿಕ ಅರಿವನ್ನು ಮೂಡಿಸಿಕೊಂಡಿರುವ ಮಿಲೆನಿಯಂ ಯುವ ಸಮೂಹದ ಒಂದು ದೊಡ್ಡ ವರ್ಗದ ದೃಷ್ಟಿಯಲ್ಲಿ ಗಾಂಧಿ ನಿರಾಕರಿಸಬಹುದಾದ ಅಥವಾ ಒಂದು ರೀತಿಯಲ್ಲಿ ದ್ವೇಷಿಸಬಹುದಾದ ವ್ಯಕ್ತಿಯಾಗಿ ಕಾಣುತ್ತಾರೆ. ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಈ ಅಹಿಂಸಾ ತತ್ವ ಪ್ರತಿಪಾದಕನನ್ನು ಸಾಕಷ್ಟು ವಿಕೃತಗೊಳಿಸಿ ಜನರ ನಡುವೆ ನಿಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸಕ್ರಿಯವಾಗಿರುವ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ ಚಿಂತನಾ ವಲಯವು ಮಹಾತ್ಮ ಎಂಬ ಅತ್ಯುನ್ನತ ಬಿರುದನ್ನು, ಗಾಂಧಿ ಹಂತಕ ಗೋಡ್ಸೆಗೂ ರವಾನಿಸಿದೆ.

ಈ ಗೊಂದಲಗಳ ನಡುವೆಯೇ ಗಾಂಧಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಪಾದಿಸಿದ್ದ ಜನಮನ್ನಣೆಯನ್ನು ವರ್ತಮಾನದಲ್ಲಿ ನಿಂತು ಅಲ್ಲಗಳೆಯುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. 1947ರ ಪೂರ್ವದಲ್ಲೂ ಸೈದ್ಧಾಂತಿಕ ನೆಲೆಯಲ್ಲಿ ಗಾಂಧಿ ವಿರೋಧಿಗಳಿದ್ದರು, 2025ರಲ್ಲೂ ಇದ್ದಾರೆ. ವ್ಯತ್ಯಾಸವೆಂದರೆ ಅಂದು ಗಾಂಧಿಯನ್ನು ಅನುಮಾನದಿಂದ ನೋಡುತ್ತಿದ್ದ ಕಣ್ಣು-ಮನಸ್ಸುಗಳ ವರ್ತಮಾನದ ವಾರಸುದಾರರು, 75 ವರ್ಷಗಳ ನಂತರದ ಡಿಜಿಟಲ್ ಭಾರತದ ವಾತಾವರಣದಲ್ಲಿ ಮಹಾತ್ಮನನ್ನು ದ್ವೇಷದಿಂದ ನೋಡುವ ಅಥವಾ ಚರಿತ್ರೆಯ ಪುಟಗಳಿಂದಲೇ ಅಳಿಸಿಹಾಕಬಹುದಾದ ವ್ಯಕ್ತಿಯನ್ನಾಗಿ ನೋಡುತ್ತಿದ್ದಾರೆ. ಇದು ಸಹಜ ಸಾಮಾಜಿಕ ಬೆಳವಣಿಗೆಯಲ್ಲಿ ಆಗಿರುವುದಲ್ಲ, ಬದಲಾಗಿ, ವ್ಯವಸ್ಥಿತವಾಗಿ ಪೋಷಿಸಲ್ಪಟ್ಟಿರುವ ಒಂದು ತಿಳುವಳಿಕೆಯ ಮಾದರಿ.

ಗಾಂಧಿ ರಾಜಕೀಯ ಅಂಗಳದಲ್ಲಿ

ಅಂಬೇಡ್ಕರ್ ಅವರಂತೆಯೇ, ಭಾರತದ ಸಂವಿಧಾನ ದಂತೆಯೇ, ಗಾಂಧಿ ಸಹ ಆಳುವ ಪಕ್ಷಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ರೂಪಕವಾಗಿ ಕಾಣತೊಡಗಿರುವುದು ವರ್ತಮಾನದ ದುರಂತ ವಾಸ್ತವ. ಆಳುವ ಕೇಂದ್ರಗಳಲ್ಲಿ ಕುಳಿತು ಅಲ್ಲಗಳೆಯಲಾಗದ ಗಾಂಧಿಯನ್ನು ಸಾರ್ವಜನಿಕ ಸಭೆಗಳಲ್ಲಿ ನಿರಾಕರಿಸುವ ಒಂದು ಮಾದರಿಯನ್ನು ರಾಜಕೀಯ ನಾಯಕರು ಅಳವಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಾಲಿಗೆ ಗಾಂಧಿ ಸಾರ್ವಕಾಲಿಕ ಅನುಕರಣೀಯ ಆದರ್ಶವಾಗಿ ಕಾಣುವುದಾದರೂ, ಆಡಳಿತದ ನೆಲೆಯಲ್ಲಿ ನಿಂತು ನೋಡಿದಾಗ, ಗಾಂಧಿ ಅನುಸರಿಸಿದ ಅಥವಾ ಬೋಧಿಸಿದ ತತ್ವಗಳು, ಅನುಕೂಲಕ್ಕೆ ತಕ್ಕಂತೆ ಬಳಸಬಹುದಾದ ಗ್ರಾಂಥಿಕ ಸಂಹಿತೆಗಳಾಗಿ ಮಾತ್ರವೇ ಕಾಣುತ್ತದೆ.

ಕಳೆದ 11 ವರ್ಷದಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಸಂಘಪರಿವಾರದ ದೃಷ್ಟಿಯಲ್ಲಿ ಗಾಂಧಿ ಬಿಟ್ಟೂ ಬಿಡಲಾಗದ ವ್ಯಕ್ತಿಯಾಗಿ ಕಾಣುತ್ತಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅನುಸರಿಸುತ್ತಿರುವ ಆರ್ಥಿಕ ಮಾದರಿ, ಜಾಗತೀಕರಣದ ಎಲ್ಲ ಕಲ್ಪನೆಗಳನ್ನೂ ಛಿದ್ರಗೊಳಿಸಿದ್ದು, ಪ್ರತಿಯೊಂದು ದೇಶವೂ ತನ್ನ ಹಳೆಯ ಆರ್ಥಿಕ ಮಾರ್ಗಕ್ಕೇ ಮರಳುತ್ತಿವೆ. ಭಾರತದಲ್ಲೂ 1998ರಲ್ಲಿ ಕೇಳಿಬರುತ್ತಿದ್ದ, ಆನಂತರ ಸದ್ದಿಲ್ಲದೆ ಮರೆಯಾಗಿದ್ದ, ಸ್ವದೇಶಿ ಆಂದೋಲನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ‘ಸ್ವದೇಶಿ ವಸ್ತುಗಳನ್ನೇ ಬಳಸಿ’ ಎಂಬ ಘೋಷಣೆ ರಾಜಕೀಯವಾಗಿ ಮೊಳಗುತ್ತಿದೆ. ಖಾದಿ ನೂಲುವ ಚರಕ ಮತ್ತೊಮ್ಮೆ ಪ್ರದರ್ಶನ ವಸ್ತುವಾಗಿದೆ. ಈ ಹಾದಿಯಲ್ಲಿ ಗಾಂಧಿ ಆಡಳಿತಾತ್ಮಕವಾಗಿ ಬಳಕೆಯಾಗುತ್ತಾರೆಯೇ ಹೊರತು, ಅವರ ಮೂಲ ಕಲ್ಪನೆಯ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉನ್ನತೀಕರಣ ಮತ್ತು ಗ್ರಾಮೀಣ ಭಾರತದ ಸಾಮಾಜಿಕ ಬದುಕಿನ ಉದಾತ್ತತೆಗಳ ನೆಲೆಯಲ್ಲಿ ಗಾಂಧಿ ತತ್ವಗಳು ಭಾಷಣಗಳಿಗೆ ಸೀಮಿತವಾಗಿಬಿಡುತ್ತವೆ.

ತಾತ್ವಿಕ ನೆಲೆಯಲ್ಲಿ ಗಾಂಧಿ

ಗಾಂಧಿ ಇಂದು ಚುನಾವಣೆಯಲ್ಲಿ ಮತ ಗಳಿಸುವ ಸೇತುವೆಯಾಗಿ ಉಳಿದಿಲ್ಲ. ಭಾವನಾತ್ಮಕವಾಗಿ ಇದನ್ನು ಆಗುಮಾಡುವ ಪ್ರಯತ್ನಗಳು ಅಕ್ಟೋಬರ್ 2 ಮತ್ತು ಜನವರಿ 30ರಂದು ನಡೆಯುತ್ತವೆ. ಇದಕ್ಕೆ ಕಾರಣಗಳು ಹಲವು. ಗಾಂಧಿ ಪ್ರತಿಪಾದಿಸಿದ ಸರಳತೆ, ಸಂಯಮ, ಸಭ್ಯತೆ, ವ್ಯಕ್ತಿಗತ ನೈತಿಕತೆ, ಪ್ರಾಮಾಣಿಕತೆ ಇನ್ನೂ ಮೊದಲಾದ ಉದಾತ್ತ ಗುಣಗಳು ವರ್ತಮಾನದ ರಾಜಕಾರಣಿ ಗಳಿಗೆ ಆಲಂಕಾರಿಕ ಶೃಂಗಾರ ಸಾಧನಗಳಾಗಿ ಮಾತ್ರ ಕಾಣಲು ಸಾಧ್ಯ. ಸಮಾಜದ ಅತ್ಯಂತ ಕೆಳಸ್ತರದಿಂದ ಗ್ರಾಮ ಪಂಚಾಯತ್ ವ್ಯವಸ್ಥೆಯ ಮೂಲಕ ರಾಜಕೀಯ ಮೆಟ್ಟಿಲುಗಳನ್ನೇರುತ್ತಾ, ರಾಜ್ಯ-ರಾಷ್ಟ್ರಮಟ್ಟದ ರಾಜಕೀಯ ಪ್ರವೇಶ ಮಾಡುವ ಒಂದು ಚಿಂತನೆಯನ್ನು ಇಂದಿನ ಸಿನೆಮಾಗಳಲ್ಲೂ ಕಾಣಲು ಸಾಧ್ಯವಿಲ್ಲ. ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬಳಸಿ ನುಚ್ಚು ನೂರು ಮಾಡುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ.

ಇದಕ್ಕೆ ಕಾರಣ ಸಮಾಜದಲ್ಲಿ ಬಲಗೊಳ್ಳುತ್ತಿರುವ ಬಂಡವಾಳ-ಸಂಪತ್ತು ಮತ್ತು ಐಸಿರಿಗಳು ಹಾಗೂ ಔದ್ಯಮಿಕ ವಲಯದಲ್ಲಿ ಸೃಷ್ಟಿಯಾಗಿರುವ ಸಂಪತ್ತು ಕ್ರೋಡೀಕರಣದ ಹೊಸ ಮಾದರಿಗಳು. ಶ್ರೀಮಂತಿಕೆ ಇಂದು ಪ್ರದರ್ಶನದ ಜೀವನ ಶೈಲಿಯಾಗಿ ಉಳಿದಿಲ್ಲ. ಗ್ರಾಮೀಣ ಪ್ರದೇಶಗಳಲ್ಲೂ ಸಹಜ ಜೀವನ ಶೈಲಿಯಾಗಿ ಪರಿಣಮಿಸಿದೆ. ದುಡಿಯುವ ಜನರನ್ನು ಶೋಷಣೆಗೊಳಪಡಿಸಿ, ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಾ, ನವ ಉದಾರವಾದಿ ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ಹಳ್ಳಿಗಳ ಮೂಲ ಸ್ವರೂಪವನ್ನೇ ಬದಲಾಯಿಸುವ ಹಾದಿಯಲ್ಲಿ ಔದ್ಯಮಿಕ ಬಂಡವಾಳ ಕ್ರಿಯಾಶೀಲವಾಗಿದೆ. ಈ ಔದ್ಯಮಿಕ ಜಗತ್ತಿನಿಂದ ಉಗಮಿಸುವ ನಾಯಕತ್ವಗಳೇ ಇಂದಿನ ಅಧಿಕಾರ ರಾಜಕಾರಣದ ವಾರಸುದಾರಿಕೆಯನ್ನೂ ವಹಿಸಿಕೊಂಡಿರುವುದು ವಾಸ್ತವ.

ಪ್ರಸ್ತುತತೆಯ ವಿವಿಧ ಆಯಾಮಗಳು ಇಲ್ಲಿ ಗಾಂಧಿ ಏಕೆ ನೆನಪಾಗುತ್ತಾರೆ?

ಏಕೆಂದರೆ ರಿಯಲ್ ಎಸ್ಟೇಟ್, ಗಣಿಗಾರಿಕೆ ಮತ್ತಿತರ ಲಾಭದಾಯಕ ಮಾರುಕಟ್ಟೆಯ ಜಗತ್ತಿನಿಂದ ಉಗಮಿಸುವ ವ್ಯಕ್ತಿಗಳೇ ಶಾಸನ ಸಭೆಗಳನ್ನೂ ಅಲಂಕರಿಸುತ್ತಿದ್ದಾರೆ. ಹಣ, ಶ್ರೀಮಂತಿಕೆ ಮತ್ತು ಪ್ರಭಾವಗಳ ಚೌಕಟ್ಟಿನಲ್ಲಿ ಉದ್ದೀಪನಗೊಳ್ಳುವ ಶೋಷಕ ಮನಸ್ಥಿತಿಯೇ ಸ್ವಾಭಾವಿಕವಾಗಿ ಅಪರಾಧಿಕ ಮನಸ್ಥಿತಿಯನ್ನೂ ಸೃಷ್ಟಿಸುತ್ತದೆ. ಹಾಗಾಗಿಯೇ ಸ್ವತಂತ್ರ ಭಾರತದಲ್ಲಿ ಎಂದೂ ಕಾಣದಷ್ಟು ಸಂಖ್ಯೆಯಲ್ಲಿ ಅಪರಾಧ ಹಿನ್ನೆಲೆಯಿರುವ ಜನಪ್ರತಿನಿಧಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಣಬಹುದು. ನಾವೇ ಚುನಾಯಿಸುತ್ತಿದ್ದೇವೆ. ಗಾಂಧಿ ಇಲ್ಲಿ ಏಕೆ ಮುಖ್ಯವಾಗುತ್ತಾರೆ ಎಂದರೆ, ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ, ತಮ್ಮ ಕಾರ್ಯಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು, ಸಂಭವಿಸಬಹುದಾದ ಪ್ರಮಾದಗಳಿಗೆ ಉತ್ತರದಾಯಿತ್ವವನ್ನು ಹೊರುವ ನೈತಿಕತೆ ಇಂದಿನ ರಾಜಕಾರಣದಲ್ಲಿ ವಸ್ತು ಸಂಗ್ರಹಾಲಯದ ವಸ್ತುವಾಗಿಯೂ ಕಾಣಲಾಗುವುದಿಲ್ಲ. ಭಾರತ ಉತ್ತರದಾಯಿತ್ವ ಇಲ್ಲದ ಹಾದಿಯಲ್ಲಿ ಸಾಗುತ್ತಿದೆ.

ಹಾಗಾಗಿ ಗಾಂಧಿ ಪ್ರತಿಪಾದಿಸಿದ ಪ್ರಾಮಾಣಿಕತೆ ಮತ್ತು ವಿರೋಧಿಸಿದ ಭ್ರಷ್ಟಾಚಾರ ಇಂದು ಸಾಂದರ್ಭಿಕವಾಗಿರುವುದೇ ಅಲ್ಲದೆ, ರಾಜಕೀಯ ಅನುಕೂಲತೆಗಳಿಗೆ ಅನುಸಾರವಾಗಿ ಸ್ವೀಕೃತವಾಗುವ ಅಥವಾ ಸಮ್ಮತಿಸಬಹುದಾದ ವಿದ್ಯಮಾನಗಳಾಗಿವೆ. ಭ್ರಷ್ಟಾಚಾರವನ್ನು ತುಲನಾತ್ಮಕವಾಗಿ ನೋಡುವ ಹೊಸ ಮಾದರಿಯಲ್ಲಿ ಹೆಚ್ಚು ಅಥವಾ ಕಡಿಮೆ ಭ್ರಷ್ಟರನ್ನು ಗುರುತಿಸಬಹುದೇ ಹೊರತು, ಭ್ರಷ್ಟರಲ್ಲದವರನ್ನು ಗುರುತಿಸಲು ಸೂಕ್ಷ್ಮ ದರ್ಶಕ ಯಂತ್ರವೂ ನೆರವಾಗುವುದಿಲ್ಲ. ಪಕ್ಷ ನಿಷ್ಠೆ, ನಾಯಕ ನಿಷ್ಠೆ, ಪಕ್ಷಗಳು ಅನುಸರಿಸುವ ತಾತ್ವಿಕತೆಯ ನೆಲೆಗಳು ಮತ್ತು ಜಾತಿ-ಧರ್ಮಗಳ ಅಸ್ಮಿತೆಗಳು ಭ್ರಷ್ಟಾಚಾರವನ್ನು ಮರೆಮಾಚುವ, ಭ್ರಷ್ಟರನ್ನು ಶುದ್ಧೀಕರಿಸುವ ಸಾಧನಗಳಾಗಿ ಪರಿಣಮಿಸಿವೆ. ತತ್ಪರಿಣಾಮವಾಗಿ ಗಾಂಧಿ ಪ್ರತಿಪಾದಿಸಿದ ಸತ್ಯಸಂಧತೆ ಮತ್ತು ಕರ್ತವ್ಯ ನಿಷ್ಠೆ ಮೌಲಿಕವಾಗಿ ಕಣ್ಮರೆಯಾಗಿವೆ.

ಗಾಂಧಿ ಕ್ರಾಂತಿಕಾರಿ ಚಿಂತನೆಗಳನ್ನು ಹುಟ್ಟುಹಾಕಲಿಲ್ಲ. ಆದರೆ ಸಮಾಜ ಸುಧಾರಣೆಯ ಮಾರ್ಗಗಳನ್ನು ರೂಪಿಸಿದರು. ಭಾರತದ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ಅವರಂತೆ ವಿಮರ್ಶಾತ್ಮಕವಾಗಿ ನೋಡದೆ, ವರ್ಣಾಶ್ರಮ ಧರ್ಮವನ್ನು ಸಮರ್ಥಿಸಿದ್ದ, ಗಾಂಧಿ ಸನಾನತವಾದಿಯೂ ಆಗಿದ್ದುದು ವಾಸ್ತವ. ಆದರೆ ಈ ತಾತ್ವಿಕ ಚೌಕಟ್ಟುಗಳ ಒಳಗೇ ಸಮಾಜದಲ್ಲಿ ಜಾತಿ ದ್ವೇಷ, ಮಹಿಳಾ ದ್ವೇಷ, ಮಹಿಳೆಯನ್ನು ಅಧೀನಳಾಗಿ ನೋಡುವ ಪಿತೃಪ್ರಧಾನತೆ, ಜನರನ್ನು ಪಶುಗಳ ಹಾಗೆ ಕಾಣುವ ಊಳಿಗಮಾನ್ಯ ಅಹಮಿಕೆ ಮತ್ತು ಅಸ್ಪೃಶ್ಯತೆಯಂತಹ ಹೀನ ಪದ್ಧತಿಗಳನ್ನು ಸರಿಪಡಿಸುವ ಸುಧಾರಣಾ ಮಾರ್ಗಗಳನ್ನು ರೂಪಿಸಿದ್ದರು. ಆದರೆ ಇಂದು ಭಾರತದ ಗ್ರಾಮೀಣ ಬದುಕು ಆಧುನಿಕೀಕರಣಕ್ಕೆ ತೆರೆದುಕೊಂಡಿದ್ದು, ತಂತ್ರಜ್ಞಾನದ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಿದ್ದರೂ, ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿದೆ.

ಸಮಾಜದ ಸುಧಾರಕರಾಗಿ ಗಾಂಧಿ

ವಸುಧೈವ ಕುಟುಂಬಕಂ ಎಂಬ ಪುರಾತನ ಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದ ಗಾಂಧಿ ಬಯಸಿದ್ದ ಕೌಟುಂಬಿಕ ಕೂಡು ಬಾಳ್ವೆ ಇಂದು ಭಗ್ನವಾಗಿದೆ. ಮಹಿಳೆಯನ್ನು ಗೌರವಿಸುವ ಗಾಂಧಿಯವರ ಕಲ್ಪನೆಯನ್ನೂ ದಾಟಿ ನೋಡಿದಾಗ, ಮಹಿಳೆಯ ಘನತೆ ಮತ್ತು ಅಸ್ತಿತ್ವವನ್ನೇ ಇಲ್ಲವಾಗಿಸುವ ಜಾತಿ ದೌರ್ಜನ್ಯ ಮತ್ತು ಪುರುಷಾಧಿಪತ್ಯ ಭಾರತೀಯ ಸಮಾಜವನ್ನು ಆಳುತ್ತಿವೆ. ಜಾತಿ ಮತ್ತು ಧರ್ಮದ ಅಸ್ಮಿತೆಗಳು, ಸಾಮಾಜಿಕ ಅಂತಸ್ತು ಮತ್ತು ಆರ್ಥಿಕ ಪ್ರಾಬಲ್ಯದ ನೆಲೆಯಲ್ಲಿ, ಮಹಿಳಾ ಸ್ವಾತಂತ್ರ್ಯ ಎನ್ನುವುದು ಸಮಾಜದ ಬಲಾಢ್ಯ ವರ್ಗಗಳ ಹಂಗಿಗೆ ಒಳಗಾಗುತ್ತಿದೆ. ಇದರ ಪ್ರಾತ್ಯಕ್ಷಿಕೆಯನ್ನು ಕರ್ನಾಟಕದಲ್ಲಿ ವರದಿಯಾಗಿರುವ ಬಾಲವಿಧವೆಯರು, ಬಾಲ್ಯ ವಿವಾಹಗಳು, ಅಪ್ರಾಪ್ತ ವಯಸ್ಕರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ-ಅತ್ಯಾಚಾರಗಳು ಇವೇ ಮುಂತಾದ ಪಾತಕ ಕೃತ್ಯಗಳಲ್ಲಿ ಕಾಣಬಹುದು.

ಸಮಾಜ ಸುಧಾರಣೆಯ ಚೌಕಟ್ಟಿನಲ್ಲಿ ಮಹಿಳಾ ಸಬಲೀಕರಣ ಮತ್ತು ಹೆಣ್ಣಿನ ಘನತೆಯ ರಕ್ಷಣೆ, ಮಹಿಳಾ ಪ್ರಾತಿನಿಧ್ಯದ ಕಲ್ಪನೆಗಳನ್ನು ಹೊಂದಿದ್ದ ಗಾಂಧಿ, ಆಧುನಿಕ ಸ್ತ್ರೀವಾದಿ ತಾತ್ವಿಕತೆಯಿಂದ ಭಿನ್ನವಾಗಿ ಕಂಡರೂ, ಮಹಿಳೆಯನ್ನು ಸಮಾನವಾಗಿ ಕಾಣುವ, ಆರ್ಥಿಕ ಸದೃಢತೆ ನೆಲೆಯಲ್ಲಿ ಸಬಲೀಕರಣಗೊಳಿಸುವ ಚಿಂತನೆಗಳನ್ನು ಪ್ರತಿಪಾದಿಸಿದ್ದರು. ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನತೆಯನ್ನು ಆಳಕ್ಕಿಳಿದು ನೋಡದ ಗಾಂಧಿ, ಸಮಾಜದ ಮನಸ್ಥಿತಿಯನ್ನು ಪರಿವರ್ತಿಸುವ ಮೂಲಕ ಮಹಿಳಾ ಸಮಾನತೆಯನ್ನು ಸಾಧಿಸಲು ಬಯಸಿದ್ದವರು. ಈ ತಾತ್ವಿಕತೆಯ ಬಗ್ಗೆ ಎಷ್ಟೇ ಭಿನ್ನಮತ ಇದ್ದರೂ, ವರ್ತಮಾನದ ಭಾರತವನ್ನು ಗಮನಿಸಿದಾಗ, ಗಾಂಧಿ ಬಯಸಿದ ಈ ಸಾಮಾಜಿಕ ಪರಿವರ್ತನೆ ಮತ್ತು ಔದಾತ್ಯವನ್ನು ಸಾಧಿಸುವಲ್ಲಿ ಭಾರತ ವಿಫಲವಾಗಿರುವುದು ಸ್ಪಷ್ಟ, ಈ ಹಿನ್ನೆಲೆಯಲ್ಲಿ ಗಾಂಧಿ ಪ್ರಸ್ತುತವಾಗಿ ಕಾಣುತ್ತಾರೆ.

ವ್ಯಕ್ತಿಗತ ಧಾರ್ಮಿಕ ನಂಬಿಕೆಗಳು ಎಂದಿಗೂ ಅಪಾಯಕಾರಿಯಾಗುವುದಿಲ್ಲ. ಈ ನಂಬಿಕೆಗಳನ್ನು ಸಾಂಘಿಕ ನೆಲೆಯಲ್ಲಿ ಸಮಾಜದ ನಡುವೆ ಪಸರಿಸಲು ಮುಂದಾದಾಗ, ಧರ್ಮ ಮತ್ತು ಧಾರ್ಮಿಕ ಆಚರಣಾ ವಿಧಾನಗಳನ್ನು ಸಾಂಸ್ಥೀಕರಣಕ್ಕೊಳಪಡಿಸಿ, ಸಮಾಜದ ಒಂದು ವರ್ಗ ಯಜಮಾನಿಕೆಯನ್ನು ಸ್ಥಾಪಿಸಿದಾಗ, ಧರ್ಮ ರೂಪಾಂತರಗೊಂಡು, ರಾಜಕೀಯ ಅಧಿಕಾರವಾಗಿ, ಸಾಂಸ್ಕೃತಿಕ ಆಯುಧವಾಗಿ, ಸಾಮಾಜಿಕ ಭದ್ರಕೋಟೆಯಾಗಿ, ಆರ್ಥಿಕ ಅಸ್ತ್ರವಾಗಿ ಪರಿಣಮಿಸುತ್ತದೆ. ಭಾರತ ಇಂತಹ ಒಂದು ಅಪಾಯವನ್ನು ಎದುರಿಸುತ್ತಿದೆ. ಗಾಂಧಿ ಎದೆಯೊಳಗಿದ್ದ ರಾಮನಿಗೂ ೨೧ನೇ ಶತಮಾನದ ರಾಜಕೀಯ ಪರಿಸರದ ರಾಮನಿಗೂ ಇರುವ ಅಂತರವನ್ನು ಇಲ್ಲಿ ಗುರುತಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ, ಗಾಂಧಿಯ ಧಾರ್ಮಿಕತೆ ಅಂಧಾನುಕರಣೆಯ ಮಾರ್ಗವಾಗಿರಲಿಲ್ಲ ಎನ್ನುವುದು ಮುಖ್ಯ.

ಧರ್ಮ-ಸಂಸ್ಕೃತಿಯ ತಾಕಲಾಟದಲ್ಲಿ ಗಾಂಧಿ

ಆದರೆ ಇಂದಿನ ಭಾರತೀಯ ಸಮಾಜದ ಒಂದು ವರ್ಗ, ಧರ್ಮ ಮತ್ತು ಸಂಸ್ಕೃತಿಯನ್ನು ಸಮಾನಾಂತರವಾಗಿ ನೋಡದೆ, ಸಮೀಕರಿಸಿ ನೋಡುತ್ತಿರುವುದರಿಂದ, ಸಾಂಸ್ಕೃತಿಕ ಜಗತ್ತು ಎಂದರೆ ಧಾರ್ಮಿಕ ಅಂಧ ಶ್ರದ್ಧೆ, ಅಂಧಾನುಕರಣೆ ಮತ್ತು ಅದರ ಸುತ್ತಲಿನ ಮೌಢ್ಯಾಚರಣೆಗಳ ಸಂಕೋಲೆಗಳಲ್ಲಿ ಸಮಾಜ ಸಿಲುಕಿದೆ. ಗಾಂಧಿ ಪ್ರತಿಪಾದಿಸಿದ, ಮಾನವೀಯ ನೆಲೆಯಲ್ಲಿ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಕಾಣುವ ಔದಾತ್ಯದಿಂದ ಭಾರತ ಬಹಳ ದೂರ ಸಾಗಿಬಂದಿದೆ. ಹಾಗೆಯೇ ಧರ್ಮದ ಹೆಸರಿನಲ್ಲಿ, ಧಾರ್ಮಿಕ ಸಂಸ್ಥೆಗಳ ಮುಸುಕಿನಲ್ಲಿ, ಧರ್ಮರಕ್ಷಣೆಯ ಸೋಗಿನಲ್ಲಿ ನಡೆಯುವ ಅತ್ಯಾಚಾರ, ಅನ್ಯಾಯ, ಅಸ್ಪೃಶ್ಯತೆಯಂತಹ ಅಮಾನುಷ ಕ್ರೌರ್ಯ ಮತ್ತು ತಾರತಮ್ಯಗಳೆಲ್ಲವನ್ನೂ ಸಮ್ಮತಿಸುವ, ಸನ್ಮಾನಿಸುವ ಒಂದು ದುಷ್ಟ ಪ್ರವೃತ್ತಿಗೂ ಸಮಾಜ ತುತ್ತಾಗಿದೆ.

ಇಲ್ಲಿ ನಮಗೆ ಗಾಂಧಿ ಒಂದು ಹಂತದವರೆಗೆ ಪ್ರಸ್ತುತ ಎನಿಸುತ್ತಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಒಂದು ಪ್ರಖರ ಶಕ್ತಿಯಾಗಿ ಗಾಂಧಿ ವರ್ತಮಾನದ ಭಾರತಕ್ಕೆ ನಿದರ್ಶನಪ್ರಾಯರಾಗುತ್ತಾರೆ. ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಡೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ ಇಂದಿಗೂ ಸಾಕ್ಷಿಯಾಗುತ್ತಾರೆ. ಈ ಅನ್ಯಾಯಗಳನ್ನು, ಚುನಾವಣಾ ಲಾಭ ನಷ್ಟಗಳ ಸಲುವಾಗಿ ರಕ್ಷಿಸುವ ಅಧಿಕಾರ ರಾಜಕಾರಣವನ್ನು ನಡುರಸ್ತೆಯಲ್ಲಿ ಬೆತ್ತಲೆಗೊಳಿಸಬೇಕಾದರೆ ಗಾಂಧಿ ಮಾರ್ಗವೂ ಅನುಕರಣೀಯ ಎನ್ನುವುದನ್ನು ಅಲ್ಲಗಳೆಯುವ ಹಾಗಿಲ್ಲ. ಆ ಮಾರ್ಗದ ವಿರೋಧಾಭಾಸಗಳು ಏನೇ ಇದ್ದರೂ, ಮೂಲ ಗುರಿ ಮತ್ತು ಗುರಿ ಸಾಧಿಸಲು ನಡೆಯುವ ಹಾದಿಯ ಸ್ಪಷ್ಟತೆಗೆ ಗಾಂಧಿ ನಿದರ್ಶನಪ್ರಾಯರಾಗುತ್ತಾರೆ.

ಕೊನೆಯ ಹನಿ, ನಮನಗಳೊಂದಿಗೆ,,,,,

ಅಕ್ಟೋಬರ್ ೨ರಂದು ವೈಷ್ಣವ ಜನತೋ ಹಾಡುವುದರಿಂದಾಗಲೀ, ಗಾಂಧಿ ಸಮಾಧಿಯ ಮುಂದೆ ಕುಳಿತು ಭಜಿಸುವುದಾಗಲೀ, ದೇಶಾದ್ಯಂತ ಗಾಂಧಿ ಪ್ರತಿಮೆಗಳಿಗೆ ಹೂ ಹಾರ ಹಾಕಿ ವಿನಮ್ರತೆಯಿಂದ ವಂದಿಸುವುದಾಗಲೀ, ಸಾಂಕೇತಿಕ ಆಚರಣೆಗಳಷ್ಟೇ ಆಗುತ್ತವೆ. ಹಾಗೆಯೇ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸುವ ದುಷ್ಟ ಪ್ರವೃತ್ತಿ, ಹೆಜ್ಜೆ ಹೆಜ್ಜೆಗೂ ಗಾಂಧಿಯನ್ನು ಅಪಮಾನಿಸುತ್ತಾ, ೨೦೨೫ರ ಅನಿಷ್ಟಗಳಿಗೆಲ್ಲ ೧೯೪೮ರ ಪೂರ್ವದ ಗಾಂಧಿಯನ್ನು ಕಾರಣೀಭೂತರನ್ನಾಗಿ ಮಾಡುವ ದುರುಳತನ ನಮ್ಮ ಸಮಾಜ ಹೊರಳು ಹಾದಿಯಲ್ಲಿರುವುದನ್ನು, ದಿಕ್ಕು ತಪ್ಪುತ್ತಿರುವುದನ್ನು ಸೂಚಿಸುವ ಮಾಪಕಗಳಾಗಿ ಕಾಣುತ್ತವೆ. ವರ್ತಮಾನದ ನಮ್ಮ ಸೈದ್ಧಾಂತಿಕ ನಿಲುಮೆಗಳಿಗೆ ಸಲ್ಲದ ಚಾರಿತ್ರಿಕ ವ್ಯಕ್ತಿ ಮತ್ತು ಚರಿತ್ರೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುವ ಅಥವಾ ಚರಿತ್ರೆಯ ಪುಟಗಳಿಂದಲೇ ಅವರನ್ನು, ಅಂತಹ ಘಟನೆಗಳನ್ನು ಅಳಿಸಿಹಾಕುವ ಚಿಂತನಾ ಧಾರೆಗೆ ಗಾಂಧಿಯೂ ಸಿಲುಕಿರುವುದು ವಾಸ್ತವ.

ಈ ಎಲ್ಲ ವೈರುಧ್ಯಗಳ ನಡುವೆಯೂ ಎಲ್ಲಿಯೂ ಸಲ್ಲದಂತೆ ಕಾಣುವ ಗಾಂಧಿ ಎಲ್ಲ ಕಡೆಯೂ ಸಲ್ಲುತ್ತಾರೆ. ಅವರ ಚಿಂತನೆಗಳು ಎಷ್ಟೇ ವೈರುಧ್ಯಗಳಿಂದ ಕೂಡಿದ್ದರೂ, ತಳಸಮಾಜದ ತಲ್ಲಣಗಳ ನಡುವೆ ನಿಂತಾಗ, ಗಾಂಧಿ ಕೇವಲ ಪ್ರತಿಮೆಯಾಗಿ, ರೂಪಕವಾಗಿ ಉಳಿದುಬಿಡುವುದಿಲ್ಲ. ಅನ್ಯಾಯಕ್ಕೊಳಗಾದ, ನೊಂದ ಜನರು, ವಿಶೇಷವಾಗಿ ಅಸ್ಪಶ್ಯರು, ಅಲೆಮಾರಿಗಳು, ಮಹಿಳೆಯರು ಆಕಾಶದತ್ತ ಮುಖಮಾಡಿ ನ್ಯಾಯಕ್ಕಾಗಿ ಆಗ್ರಹಿಸುವಾಗ, ಎಲ್ಲೋ ಒಂದು ಕಡೆ ಗಾಂಧಿ ನಮ್ಮ ಚಿಂತನೆಗಳಲ್ಲಿ ಹಾದು ಹೋಗುತ್ತಾರೆ. ಅವರನ್ನು ಅನುಕರಿಸುವುದು ಬಿಡುವುದು ವ್ಯಕ್ತಿನಿಷ್ಠ ಪ್ರಶ್ನೆ. ಆದರೆ ಅವರನ್ನು ನಿರಾಕರಿಸುವುದು ವಸ್ತುನಿಷ್ಠವಾಗಿ ಪ್ರಮಾದವೇ ಆಗುತ್ತದೆ. ಹಾಗಾಗಿಯೇ ಗಾಂಧಿ ನಮ್ಮ ನಡುವೆ ಉಳಿದಿದ್ದಾರೆ, ಶತಮಾನಗಳು ಕಳೆದರೂ ಉಳಿದಿರುತ್ತಾರೆ.

share
ನಾ. ದಿವಾಕರ
ನಾ. ದಿವಾಕರ
Next Story
X