ಉತ್ತರ ಕನ್ನಡದಲ್ಲಿ ‘ಅಣಬೆ’ಗೆ ಎಲ್ಲಿಲ್ಲದ ಬೇಡಿಕೆ

ಅಂಕೋಲಾ: ಮಳೆಗಾಲದಲ್ಲಿ ಭೂಮಿ ಹಚ್ಚಹಸಿರಾಗಿ ಕಾಣುವುದರ ಜತೆಗೆ ಹಲವು ಪ್ರಭೇದಗಳು ಜನ್ಮ ತಾಳುತ್ತವೆ. ಅಂತಹ ವಿಶಿಷ್ಟ ಪ್ರಭೇದಗಳಲ್ಲಿ ಶಿಲೀಂದ್ರ ಜಾತಿಗೆ ಸೇರಿಗೆ ಅಣಬೆ ಕೂಡ ಒಂದು. ಬಣ್ಣ ಬಣ್ಣದ ಅಣಬೆಗಳು ಈಗ ಉತ್ತರ ಕನ್ನಡ ಜಿಲ್ಲೆ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ಗೋಚರಿಸುತ್ತವೆ.
ಹೆಚ್ಚಾಗಿ ಬಿಳಿ ಬಣ್ಣದ ಅಣಬೆಗಳೇ ಕಂಡುಬರುತ್ತಿದ್ದರೂ, ಅಲ್ಲಲ್ಲಿ ಅಪರೂಪಕ್ಕೆ ಕೇಸರಿ, ನಸುಗೆಂಪು, ಹಳದಿ ಹೀಗೆ ವಿವಿಧ ಬಣ್ಣದ ಅಣಬೆಗಳನ್ನು ಕಾಣಬಹುದಾಗಿದೆ. ಹೆಚ್ಚಾಗಿ ದಟ್ಟಾರಣ್ಯಗಳಲ್ಲಿ ಮಾತ್ರ ಬಣ್ಣ ಬಣ್ಣದ ಅಣಬೆಗಳನ್ನು ಕಾಣಲು ಸಾಧ್ಯವಾಗಲಿದ್ದು, ಕುರುಚಲು ಕಾಡುಗಳಲ್ಲಿ ಮತ್ತು ಮನೆಯ ಹಿತ್ತಲಿನಲ್ಲಿ ಕಂಡುಬರುವ ಅಣಬೆಗಳು ಬಿಳಿ ಬಣ್ಣದ್ದಾಗಿದೆ.
ಈ ಅಣಬೆಯು ಮೃದುವಾಗಿದ್ದು, ಇದು ‘ಸಸ್ಯಲೋಕದ ಮಾಂಸ’ ಎಂದೇ ಪ್ರಸಿದ್ಧಿಯಾಗಿದೆ. ಅಣಬೆಯಲ್ಲಿ ವಿಟಮಿನ್ ಬಿ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಹುತ್ತ ಹಾಗೂ ಮೃದು ಮಣ್ಣಿನಲ್ಲಿ ಜನ್ಮತಾಳುತ್ತದೆ. ಮಳೆಗಾಲದಲ್ಲಿ ಮಾತ್ರ ಕಂಡುಬರುವ ಅಣಬೆಯು ರಾತ್ರಿ ಜನ್ಮತಾಳಿ ಮಧ್ಯಾಹ್ನದ ವೇಳೆ ಬಾಡಿಹೋಗುತ್ತದೆ. ಇವುಗಳಲ್ಲಿ ಹಲವು ಪ್ರಭೇದಗಳಿದ್ದು, ಕೆಲವೇ ಪ್ರಭೇದಗಳು ಮಾತ್ರ ಸೇವನೆಗೆ ಯೋಗ್ಯವಾಗಿದೆ. ಇನ್ನುಳಿದ ಅಣಬೆಗಳಲ್ಲಿ ವಿಷಕಾರಕ ಅಂಶಗಳಿರುವುದರಿಂದ ಅವುಗಳನ್ನು ತಿನ್ನುವುದಿಲ್ಲ.
ಆಹಾರಕ್ಕಾಗಿ ಉಪಯೋಗಿಸುವ ಅಣಬೆಗಳಿಗೆ ಭಾರೀ ಬೇಡಿಕೆಯಿರುವುದರಿಂದ ಹೆಚ್ಚು ಹಣವನ್ನು ನೀಡಿ ಖರೀದಿಸುತ್ತಾರೆ. ಮಳೆಗಾಲದಲ್ಲಿ ಮಾತ್ರ ನೈಸರ್ಗಿಕವಾಗಿ ಅಣಬೆ ದೊರೆಯುವುದರಿಂದ ಅರಣ್ಯವಾಸಿಗಳು ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಪಶ್ಚಿಮಘಟ್ಟದ ಅಣಶಿಯ ದಟ್ಟಾರಣ್ಯದಲ್ಲಿ ಕೇಸರಿ ಬಣ್ಣದ ಅಣಬೆ ಕಾಣಸಿಗುತ್ತದೆ. ಸಾಮಾನ್ಯವಾಗಿ ಅಣಬೆಯು ಬಳಿ ಬಣ್ಣದ್ದಿರುವುದರಿಂದ ಈ ಕೇಸರಿ ಬಣ್ಣದ ಅಣಬೆಯು ವಿಶಿಷ್ಟವಾಗಿ ಗೋಚರಿಸುತ್ತದೆ. ಇಂತಹ ಅಣಬೆಯ ಕೇಸರಿ ಬಣ್ಣದ ಪದರನ್ನು ತೆಗೆದು ಆಹಾರಕ್ಕಾಗಿ ಬಳಸುತ್ತಾರೆ. ಅಣಬೆಗೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಅದನ್ನು ಕೃತಕವಾಗಿ ಬೆಳೆಯಲು ಪ್ರಾರಂಭಿಸಲಾಯಿತು. ಆದರೆ ಕೃತಕ ಅಣಬೆಗಳು ನೈಸರ್ಗಿಕ ಅಣಬೆಗಳಷ್ಟು ರುಚಿ ಹೊಂದಿರುವುದಿಲ್ಲ. ಜಗತ್ತಿನಲ್ಲಿಯೇ ಚೀನಾದವರು ಅತಿಹೆಚ್ಚು ಕೃತಕ ಅಣಬೆಯನ್ನು ಬೆಳೆಯುತ್ತಾರೆ. ಒಟ್ಟಿನಲ್ಲಿ ಮಳೆಗಾಲದಲ್ಲಷ್ಟೇ ಕಾಣಸಿಗುವ ಅಣಬೆಯು ಸೇವನೆಯ ಜೊತೆಗೆ ನೋಡಲೂ ಆಕರ್ಷಕವಾಗಿರುತ್ತದೆ. ಕಾಡಂಚಿನಲ್ಲಿರುವ ಸಿದ್ದಿ ಸಮುದಾಯದವರು ಹಾಗೂ ಇತರರು ಅಲ್ಲಲ್ಲಿ ಸಿಗುವ ಅಣಬೆಗಳನ್ನು ಸಂಗ್ರಹಿಸಿ ತಂದು ಅಂಕೋಲಾ-ಯಲ್ಲಾಪುರ ಮಾರ್ಗದಲ್ಲಿ ಮಾರಾಟ ಮಾಡುತ್ತಾರೆ. ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ.
ಅಂಕೋಲಾ ಮಾರುಕಟ್ಟೆಯಲ್ಲಿಯೂ ಅಣಬೆಗಳ ಮಾರಾಟ ಕಂಡುಬರುತ್ತಿದ್ದು, 100 ಅಣಬೆಗೆ 600 ರಿಂದ 1,000 ರೂ. ಬೆಲೆಯಿದೆ. ಆದರೂ ಜನರು ಅಣಬೆಯ ರುಚಿಗೆ ಹೆಚ್ಚಿನ ಹಣಕೊಟ್ಟು ಖರೀದಿ ಮಾಡುತ್ತಾರೆ.






