ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ

ಈಗಿನ ಎಸ್‌ಐಅರ್ ಅನ್ನು ಪ್ರತ್ಯೇಕವಾಗಿ ನೋಡದೆ ಒಟ್ಟಾರೆಯಾಗಿ ಈ ದೇಶದಲ್ಲಿ ಸಿಎಎ, ಎನ್‌ಪಿಆರ್, ರೈತ ಕಾಯ್ದೆಗಳು, ಎನ್‌ಐಎ, ಯುಎಪಿಎ, ಕಾರ್ಮಿಕ ಕಾಯ್ದೆಗಳು ಮತ್ತವುಗಳ ತಿದ್ದುಪಡಿಗಳು, ಎಂಟು ಗಂಟೆ ಅವಧಿಯ ಕೆಲಸದ ನಿಯಮದ ಬದಲಾವಣೆ, ಭೂ ಸ್ವಾಧೀನಗಳು, ಒಕ್ಕಲೆಬ್ಬಿಸುವಿಕೆ, ಆಧಾರ್ ಜಾರಿಗೊಳಿಸಲೆಂದೇ ರೂಪಿಸಿದ ಪ್ರತ್ಯೇಕ ಸಚಿವಾಲಯ, ಆಧಾರ್ ಹೇರಿಕೆ ಮತ್ತು ಕಡ್ಡಾಯಗೊಳಿಸಿದ್ದು, ಕೊರೋನ ಚುಚ್ಚುಮದ್ದುಗಳನ್ನು ಬಲವಂತವಾಗಿ ಜನರ ಮೇಲೆ ಚುಚ್ಚಿದ್ದು, ಪ್ರಜಾತಂತ್ರವಾದಿಗಳ ಮಾನವ ಹಕ್ಕು ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ಜನಪರ ಪತ್ರಕರ್ತರು, ವಕೀಲರ ಬಂಧನಗಳು, ಜಾಮೀನು ನೀಡದೇ ಜೈಲಿನಲ್ಲಿ ಹಲವಾರು ವರ್ಷಗಳ ಕಾಲ ವಿಚಾರಣೆ ನಡೆಸದೇ ಕೂಡಿಹಾಕಿರುವುದು, ಜಿಎಸ್‌ಟಿ ಹೇರಿಕೆ, ವಿಪರೀತವಾಗುತ್ತಾ ಸಾಗುತ್ತಿರುವ ಕೇಂದ್ರೀಕರಣಗಳು, ಬರಲಿರುವ ಡಿಲಿಮಿಟೇಶನ್ ಕಾಯ್ದೆಯ ಅನುಷ್ಠಾನ.... ಹೀಗೆ ಹಲವಾರು ಹೇರಿಕೆಗಳು, ಬಲವಂತಗಳು ದೇಶವನ್ನು ಸಂಪೂರ್ಣವಾಗಿ ಫ್ಯಾಶಿಸ್ಟ್ ಆಡಳಿತದಡಿಯಲ್ಲಿ ಹಿಡಿದಿಡಲು ಮಾಡುತ್ತಾ ಬಂದಿರುವ ಇಂಡಿಯಾದ ಆಳುತ್ತಿರುವ ಭಾರೀ ಕಾರ್ಪೊರೇಟು, ಭಾರೀ ಆಸ್ತಿವಂತ ವರ್ಗಗಳ ಕಾರ್ಯಸೂಚಿಗಳಾಗಿವೆ. ಇವನ್ನೆಲ್ಲಾ ಬಿಡಿಬಿಡಿಯಾಗಿ ನೋಡದೆ ಒಟ್ಟಾರೆಯಾಗಿ ನೋಡಿ ಗ್ರಹಿಸಿಕೊಳ್ಳಬೇಕಾದ ಅಗತ್ಯವಿದೆಯೆನಿಸುತ್ತದೆ. ಜನರ ಮಧ್ಯೆಯೂ ಈ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕಿದೆ.
ಈ ನಿಟ್ಟಿನಲ್ಲಿ ತಳಪಾಯದ ಸಮುದಾಯಗಳ ಸಂಘಟನೆಗಳು, ವ್ಯಕ್ತಿಗಳು, ಎಡ ಪಕ್ಷಗಳು, ಜನಪರ ಹಾಗೂ ಪ್ರಜಾತಂತ್ರಪರ ಸಾಹಿತಿ ಕಲಾವಿದರುಗಳು, ಜನಪರ ಪತ್ರಕರ್ತರುಗಳು, ಜನಪರ ಹಾಗೂ ಮಾನವ ಹಕ್ಕುಪರ ವಕೀಲರ ಸಂಘಟನೆಗಳು, ವಕೀಲರು...ಹೀಗೆ ಎಲ್ಲರನ್ನೂ ಒಗ್ಗೂಡಿಸಬಹುದಾದ ಸಾಮಾನ್ಯ ಕಾರ್ಯಸೂಚಿಗಳನ್ನು ರೂಪಿಸುವ ಕೆಲಸವಾಗಬೇಕು.
ಇದಕ್ಕೆ ದೇಶದ ಇಂದಿನ ಇಂತಹ ಪರಿಸ್ಥಿತಿಗಳಿಗೆ ನೇರ ಕಾರಣವಾಗಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ರಾಜಕೀಯ ಪಕ್ಷಗಳನ್ನು, ಸಂಘಪರಿವಾರದಂತಹ ಮತ್ತು ಈ ವಲಯಗಳಲ್ಲಿ ಗುರುತಿಸಿಕೊಳ್ಳುತ್ತಾ ಕಾರ್ಯ ನಿರ್ವಹಿಸುತ್ತಿರುವ ಸಕ್ರಿಯ ಶಕ್ತಿಗಳನ್ನು ಹಾಗೂ ಸಂಘಟನೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸುವಂತಹ ರೀತಿಯಲ್ಲಿ ಮುಂಚೂಣಿ ತಂಡವೊಂದು ರೂಪುಗೊಳಿಸಿ ಅದು ಕಾರ್ಯ ನಿರ್ವಹಿಸುವಂತಾಗಬೇಕಿದೆ.
ಬಿಡಿಬಿಡಿಯಾದ ವಿಚಾರಗಳನ್ನು ಎತ್ತಿಕೊಳ್ಳುತ್ತಾ ಬಿಡಿಬಿಡಿಯಾಗಿ ತಮ್ಮ ತಮ್ಮ ಕೇಂದ್ರೀಕೃತ ನೆಲೆಗಳಲ್ಲಿ ಮಾತ್ರ ಪ್ರತಿಭಟನೆ, ಜಾಗೃತಿ ಮೂಡಿಸುವಲ್ಲಿ ಮಾತ್ರ ಗಮನ ನೀಡಲು ಹೋದರೆ ಫ್ಯಾಶಿಸ್ಟೀಕರಣಗಳಿಗೆ ಸಾರಾಂಶದಲ್ಲಿ ಅನುಕೂಲವನ್ನೇ ಕಲ್ಪಿಸಿಕೊಡುತ್ತದೆ. ಜೊತೆಗೆ ಫ್ಯಾಶಿಸ್ಟ್ ವಿರೋಧಿ ಚಟುವಟಿಕೆಗಳು ಬಲಗೊಂಡು ಬೆಳೆಯದೇ ಹೋಗುತ್ತವೆ. ಏಕತೆಯತ್ತ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಹೊರಳಲು ಕೂಡ ತಡೆಗಳನ್ನೊಡ್ಡುತ್ತದೆ.....ಇವೆಲ್ಲದರಿಂದಾಗಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುತ್ತದೆ.
ಈ ನಿಟ್ಟಿನಲ್ಲಿ ಚರ್ಚೆಗಳು ನಡೆದು ಮುಂಚೂಣಿ ತಂಡವೊಂದು ರೂಪುಗೊಳ್ಳುವಂತೆ ಆಗಬೇಕು. ಆ ತಂಡ ಇಂತಹ ಎಲ್ಲಾ ಜನ ವಿರೋಧಿ ಹಾಗೂ ಪ್ರಜಾತಂತ್ರವಿರೋಧಿ ಶಕ್ತಿಗಳ ವಿರುದ್ಧ ದನಿಯೆತ್ತುವ ಎಲ್ಲಾ ಶಕ್ತಿಗಳನ್ನು ಒಂದೇ ವೇದಿಕೆಯಡಿ ಒಕ್ಕೂಟ ತತ್ವದಡಿಯಲ್ಲಿ ಸೇರಿ ಕಾರ್ಯ ನಿರ್ವಹಿಸುವಂತಹ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು.
ಈಗ ನಡೆಯುತ್ತಿರುವ ಎಸ್‌ಐಆರ್ ವಿರೋಧಿ ಹೋರಾಟಗಳಲ್ಲಿ ತೊಡಗುತ್ತಲೇ ಇವುಗಳನ್ನು ಕಾರ್ಯಗತಗೊಳಿಸುವತ್ತ ಸಾಗಬೇಕೆನಿಸುತ್ತದೆ.
ಈಗ ಎಸ್‌ಐಆರ್ ರದ್ದಾಗಬೇಕು ಎಂದು ಒಂದು ಕಡೆ ಆಗ್ರಹಿಸುತ್ತಾ ಮತ್ತೊಂದು ಕಡೆ ಎಸ್‌ಐಆರ್ ಅನ್ನು ಜನರಿಗೆ ತೊಂದರೆಯಾಗದಂತೆ ಜಾರಿಗೊಳಿಸಲು ಸರಕಾರದ ಮುಂದೆ ಕಾರ್ಯಸೂಚಿಗಳನ್ನು ಮುಂದಿಡುವಂತಹ ಗೊಂದಲ ಹಾಗೂ ದ್ವಂದ್ವಾತ್ಮಕ ನಿಲುವುಗಳಿಂದ ಹೊರಬರಬೇಕು. ಈ ನಿಲುವು ಅಂತಿಮವಾಗಿ ಎಸ್‌ಐಆರ್ ಪರವಾದ ನಿಲುವೇ ಆಗುತ್ತದೆ ಎಂಬ ಸ್ಪಷ್ಟ ತೀರ್ಮಾನ ಮಾಡಬೇಕು.
ಎಸ್‌ಐಆರ್ ಮೊದಲಿಗೆ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ಒಕ್ಕೂಟ ವಿರೋಧಿಯೂ ಆಗಿದೆಯೆಂಬುದನ್ನು ಸ್ಪಷ್ಟವಾಗಿ ಸಾರಬೇಕು. ಜನರ ಮತಾಧಿಕಾರವನ್ನು ಕಸಿಯುತ್ತಾ ಹೋಗುವುದೇ ಇದರ ಪ್ರಧಾನ ಉದ್ದೇಶವಾಗಿದೆ. ನಂತರ ಈ ದೇಶದ ಜನರ ಪೌರತ್ವವನ್ನೇ ನಿರಾಕರಿಸಲು ಬಳಸುವ ಸಾಧನವನ್ನಾಗಿ ಇದು ಬಳಸಲ್ಪಡುತ್ತದೆ. ನಾಗರಿಕ ಸವಲತ್ತುಗಳು ನಿರಾಕರಿಸಲ್ಪಡುತ್ತವೆ. ದೇಶದೊಳಗೆ ನಿರಾಶ್ರಿತ ಜನಸಂಖ್ಯೆಗಳನ್ನು ಹೆಚ್ಚಿಸುತ್ತದೆ. (ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ‘ಎಲ್ಲಾ ಸವಲತ್ತು ದಾಖಲೆಗಳು ರದ್ದುಮಾಡಲಾಗುತ್ತದೆ’ ಎಂಬ ಹೇಳಿಕೆಗಳೇ ಇದನ್ನು ಸಾರುತ್ತಿದೆಯಲ್ಲವೇ) ಎನ್ನುವ ಸ್ಪಷ್ಟ ನಿಲುವನ್ನು ಹೊಂದಿ ಅದನ್ನೇ ಜನರ ಮಧ್ಯೆ ಜಾಗೃತಿ ಮೂಡಿಸಬೇಕಿದೆ.






