ಸಾಧಕರ ಬದುಕಿಗೆ ಮೆಟ್ಟಿಲಾದವರು...

ಇಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನ, ನಾವೆಲ್ಲರೂ ಒಕ್ಕೊರಲಿನಿಂದ ಈ ನೆಲದ ಅಸ್ಮಿತೆಯಾದ ಹೆಣ್ಣನ್ನು ಗುಣಗಾನ ಮಾಡಬೇಕಾದ ದಿನ. ನಮ್ಮನ್ನು ಹಡೆದ, ಪೊರೆದ, ಒಡಹುಟ್ಟಿದ, ಬಾಳನ್ನು ಬೆಳಗಿದ ಪ್ರತಿಯೊಂದು ಹೆಂಗರುಳನ್ನು ಕಾಪಿಟ್ಟುಕೊಳ್ಳಬೇಕಾದ್ದು ನಮ್ಮ ಆದ್ಯ ಕರ್ತವ್ಯವೇ ಸರಿ. ವಿಶ್ವ ಸಂಸ್ಥೆಯು ಹೇಳುವಂತೆ ‘‘ಮಹಿಳೆಯು ಅರ್ಧ ಆಕಾಶವನ್ನೇ ಎತ್ತಿ ಹಿಡಿದಿದ್ದಾಳೆ’’ ಎಂಬ ಧ್ಯೇಯ ವಾಕ್ಯವು ಮಹಿಳೆಯ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ, ‘ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ’ ಎಂಬ ನಾಣ್ನುಡಿ ಮಹಿಳೆಯ ಪ್ರಾಮುಖ್ಯತೆಯನ್ನು ಸಾರುತ್ತದೆ. ಬುದ್ಧರಿಂದ ಅಂಬೇಡ್ಕರ್‌ವರೆಗೆ ಈ ದೇಶದ ಮಹನೀಯರ ಹಿಂದೆ ಒಬ್ಬ ಆದರ್ಶ ಮಹಿಳೆಯ ತ್ಯಾಗವಿದೆ.
ವಿಶ್ವವು ಯುದ್ಧೋನ್ಮಾದದಲ್ಲಿ ಮುಳುಗಿದೆ, ಕರುಣೆ, ಪ್ರೀತಿ, ವಾತ್ಸಲ್ಯಗಳು ಕಣ್ಮರೆಯಾಗಿವೆ. ಒಬ್ಬರನ್ನೊಬ್ಬರು ಹತ್ತಿಕ್ಕಲು ಹವಣಿಸುತ್ತಿರುವ ಕಲಿಗಾಲವಿದು. ಯದ್ಧೋನ್ಮಾದ ಮನಸ್ಥಿತಿಯು ದೇಶಗಳ ಗಡಿ ದಾಟಿ ಮನೆ ಹಾಗೂ ಮನಗಳನ್ನು ಪ್ರವೇಶಿಸಿದೆ. ಅಂದಿನ ಸಾಮ್ರಾಟರು ಸಮರಗಳನ್ನು ಮಾಡಿ ಸಾಮ್ರಾಜ್ಯಗಳನ್ನು ಸ್ಥಾಪಿಸುತ್ತಿದ್ದರು. ಆದರೆ, ಯುದ್ಧದ ಪ್ರಖರತೆಯನ್ನು ಅವರು ಅರಿತಿರಲಿಲ್ಲವೆಂದಲ್ಲ. ಇಡೀ ಭೂಮಂಡಲವನ್ನೇ ಜಯಿಸಿದ ಭರತನು ತನ್ನ ಸಹೋದರನನ್ನು ಗೆಲ್ಲಬೇಕೆಂಬ ಉನ್ಮಾದದಲ್ಲಿದ್ದಾಗ ಭರತನನ್ನು ಸೋಲಿಸಿ ಎಲ್ಲವನ್ನು ತ್ಯಜಿಸಿ ನಿರ್ಲಿಪ್ತ ಬದುಕಿನತ್ತ ಜಾರಿದ ಬಾಹುಬಲಿಯ ಬಗ್ಗೆ ಕೇಳಿದ್ದೇವೆ. ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ಅಶೋಕನು ತನ್ನ ಸಹೋದರರು, ಸಂಬಂಧಿಕರು, ಸಾಮಂತರು ಎಂಬುದನ್ನು ನೋಡದೆ ಎಲ್ಲರನ್ನು ಜಯಿಸಿ ಕಳಿಂಗ ಯುದ್ಧದ ತೀವ್ರತೆಯಿಂದ ಮನನೊಂದು ಅಹಿಂಸಾ ಮಾರ್ಗವನ್ನು ಪಾಲಿಸಿದ್ದನ್ನು ಓದಿದ್ದೇವೆ. ಇವೆಲ್ಲಾ ಇತಿಹಾಸದ ಅಧ್ಯಯಗಳು ನಮಗೆ ತಿಳಿಸುವುದೇನೆಂದರೆ ಕರುಣೆ, ಪ್ರೀತಿ ಹಾಗೂ ಮೈತ್ರಿಗೆ ಮಿಗಿಲಾದುದೆಲ್ಲವೂ ಗೌಣವೆಂದು. ನಮ್ಮ ಮನಸ್ಸಿನಲ್ಲಿ ಇವುಗಳನ್ನು ಬಿತ್ತುವ, ಪೊರೆಯುವ ಹಾಗೂ ನಮ್ಮ ಮನಗಳನ್ನು ಹಸನಾಗಿಸುವ ಕೈಂಕರ್ಯವನ್ನು ಯಶಸ್ವಿಯಾಗಿ ಮಾಡಬಲ್ಲ ಏಕೈಕ ವ್ಯಕ್ತಿಯೆಂದರೆ ಅದು ಒಬ್ಬ ಮಹಿಳೆ.
ಮೊದಲಿಗೆ ನಾವು ಸ್ಮರಿಸಬೇಕಿರುವವರು ಗೌತಮರ ಎಲ್ಲಾ ಸಾಧನೆಗೆ ಬೆನ್ನಿಗೆ ನಿಂತ ಅವರ ಮಡದಿ ಯಶೋಧರೆಯನ್ನು. ಈ ನೆಲದ ಮಹಾ ಜ್ಞಾನಿ ಗೌತಮ ಬುದ್ಧರು ಅಪಾರ ಜ್ಞಾನವನ್ನು ಗಳಿಸಲು ಕಠಿಣ ಧ್ಯಾನದಿಂದ ಮಾತ್ರ ಸಾಧ್ಯವಾಯಿತು. ಅವರು ಜ್ಞಾನದ ತುತ್ತ ತುದಿಗೇರಲು ಸರ್ವ ಸಂಘಗಳನ್ನು ತ್ಯಜಿಸಬೇಕಾಯಿತು. ಅಂದು ಗೌತಮರು ನಿರ್ಲಿಪ್ತ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ನುಡಿದಾಗ ಯಶೋಧರೆಯು ‘‘ನಿಮ್ಮ ನಿರ್ಧಾರ ಸರಿಯಾಗಿದೆ. ನಿಮ್ಮ ಆಯ್ಕೆಗೆ ನನ್ನ ಒಪ್ಪಿಗೆ ಹಾಗೂ ಬೆಂಬಲವಿದೆ. ಜಗದ ಒಳಿತಿಗಾಗಿ ಪರಿವ್ರಜವನ್ನು ಹೊಂದುವುದು ಅನಿವಾರ್ಯವಿದೆ. ನಿಮ್ಮ ಹೆತ್ತವರ ಹಾಗೂ ನಿಮ್ಮ ಮಗನ ಬಗ್ಗೆ ಚಿಂತಿಸದಿರಿ, ನನ್ನಲ್ಲಿ ಪ್ರಾಣವಿರುವವರೆಗೂ ಅವರನ್ನು ನಾನು ನೋಡಿಕೊಳ್ಳುತ್ತೇನೆ’’ ಎಂದು ನುಡಿಯುತ್ತಾರೆ. ಎಂತಹ ಉದಾತ್ತ ಮನಸ್ಥಿತಿ!.
ಎರಡನೆಯದಾಗಿ ಮತ್ತೊಬ್ಬ ಸಾಧ್ವಿಯಾದ ಸಾವಿತ್ರಿಬಾ ಫುಲೆಯವರನ್ನು ಈ ನೆಲದ ಶೋಷಿತ ಸಮುದಾಯಗಳು ಎಂದಿಗೂ ಮರೆಯಬಾರದು. ಜ್ಯೋತಿಬಾ ಫುಲೆಯವರ ಸಾಧನೆಯ ಹಿಂದೆ ಅವರ ಪತ್ನಿಯಾದ ಮಾತೆ ಸಾವಿತ್ರಿಬಾಯಿ ಫುಲೆಯವರ ತ್ಯಾಗವನ್ನು ನಾವಿಂದು ಸ್ಮರಿಸಲೇಬೇಕಿದೆ. ಸಮಾಜದ ಅಂಚಿನ ಸಮುದಾಯಗಳಿಗೆ ವಿದ್ಯಾದಾನವನ್ನು ಮಾಡಬೇಕೆಂಬ ಜ್ಯೋತಿಬಾ ಫುಲೆಯವರ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆಯೆಂದರೆ ಸಾವಿತ್ರಿಬಾ ಫುಲೆಯವರು. ಜ್ಯೋತಿಬಾ ಫುಲೆಯವರು ಕೈಗೊಂಡ ಸಮಾಜ ಸುಧಾರಣೆಯ ಕೆಲಸದಲ್ಲಿ ಸಾವಿತ್ರಿಬಾ ಫುಲೆಯವರ ಸಹಭಾಗಿತ್ವವನ್ನು ಅವರ ಸಹೋದರ ವಿರೋಧಿಸಿದಾಗ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ಸಾವಿತ್ರಿಬಾಯಿ ಫುಲೆಯವರು 1856ರಲ್ಲಿ ತಮ್ಮ ಪತಿಗೆ ಬರೆದ ಪತ್ರದಲ್ಲಿ ನಮೂದಿಸಿದ್ದಾರೆ.
‘‘ಸಮಾಜದ ಅಂಚಿನ ಸಮುದಾಯಗಳಿಗೆ ನೀವು ಮಾಡುತ್ತಿರುವ ಕೆಲಸದಿಂದ ನಮಗೆ ಹಾಗೂ ನಮ್ಮ ಮನೆತನಕ್ಕೆ ಕೆಟ್ಟ ಹೆಸರು ಬರುತ್ತಿದೆ. ನೀವುಗಳು ಏಕೆ ಸಮಾಜದ ರೂಢಿಗಳಿಗನುಗುಣವಾಗಿ ಬದುಕಬಾರದು?’’ ಎಂದು ಸಾವಿತ್ರಿಬಾಯಿ ಫುಲೆಯವರ ಸಹೋದರ ಪ್ರಶ್ನಿಸಿದಾಗ, ‘‘ನನ್ನ ಗಂಡ ದೇವರಂತಹವರು, ಅವರಿಗೆ ಹೋಲಿಕೆಯೇ ಇಲ್ಲ, ಅಂಚಿನ ಸಮುದಾಯಗಳು ಸಮಾಜದಲ್ಲಿ ಸಮಾನವಾಗಿ, ಹೆಮ್ಮೆಯಿಂದ ಬದುಕಲು ಅವರಿಗೆ ಸ್ವಾತಂತ್ರ್ಯ ಹಾಗೂ ಶಿಕ್ಷಣದ ಅಗತ್ಯವಿದೆ, ಅದನ್ನು ಒದಗಿಸಲು ನಾನು ಯಾರನ್ನಾದರೂ ಎದುರಿಸಲು ಸಿದ್ಧ’’ ಎಂದು ಹೇಳುತ್ತಾರೆ. ಅವರ ಕೆಲಸದಲ್ಲಿ ನಾನು ಸಹ ಭಾಗಿಯಾಗಲು ಇಚ್ಛಿಸುತ್ತೇನೆ. ಸಮಾಜದ ಹೆಣ್ಣು ಮಕ್ಕಳು, ಮಹಿಳೆಯರು, ದೀನ ದುರ್ಬಲರಿಗೆ ವಿದ್ಯಾದಾನ ಮಾಡುವುದು ನನ್ನ ಧ್ಯೇಯವಾಗಿದೆ’’ ಎಂದು ನುಡಿಯುತ್ತಾರೆ. ನಮ್ಮ ಈ ಕೆಲಸವು ಖಂಡಿತವಾಗಿ ಸಮಾಜದ ಪಟ್ಟಭದ್ರ ಸಮುದಾಯಗಳಿಗೆ ತಲೆನೋವಾಗಿದೆ, ಇದಕ್ಕಾಗಿ ಅವರು ನಮ್ಮನ್ನು ಶಪಿಸುತ್ತಾರೆ, ಮಂತ್ರಗಳನ್ನು ಜಪಿಸುತ್ತಾರೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯವು ಹಾಳಾಗುವುದಲ್ಲದೆ ನಿನ್ನಂತಹ ಒಳ್ಳೆಯ ಮನುಷ್ಯರ ಮನಸ್ಸುಗಳೂ ಕಲುಷಿತವಾಗುತ್ತಿವೆ ಎಂದು ಪ್ರತಿಕ್ರಿಯಿಸಿದೆ’’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂದುವರಿದು ಪೂನಾಲ್ಲಿ ಬ್ರಾಹ್ಮಣ ಯುವಕ ಮತ್ತು ದಲಿತ ಯುವತಿಯ ನಡುವೆ ಅಂತರ್ಜಾತಿ ವಿವಾಹವನ್ನು ಸಾವಿತ್ರಿಬಾಯಿ ಫುಲೆಯವರು ನಡೆಸಿದ್ದಾಗಿಯೂ ಅವರಿಗೆ ಪಟ್ಟಭದ್ರ ಸಮುದಾಯಗಳಿಂದ ಬಂದಿದ್ದ ಜೀವ ಬೆದರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದ ವಿಚಾರವನ್ನು ತಮ್ಮ ಪತಿಗೆ ಪತ್ರದ ಮೂಲಕ ತಿಳಿಸಿರುವುದನ್ನು ನಾವು ಕಾಣಬಹುದು. ಈ ರೀತಿ ಸಾವಿತ್ರಿಬಾರವರು ಸಮಾಜದಲ್ಲಿ ಮಹಿಳೆಯ ಅಸ್ಮಿತೆಗಾಗಿ ತ್ಯಾಗಮಯಿಯಾಗಿ ತಮ್ಮನ್ನು ತಾವು ಸಮಾಜ ಸುಧಾರಣೆಗಾಗಿ ಅರ್ಪಿಸಿಕೊಂಡ ಪರಿಣಾಮ ಇಂದು ಪ್ರತಿಯೊಬ್ಬ ಹೆಣ್ಣು ಮಗು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಸಾವಿತ್ರಿಬಾಯಿಯವರ ಕೆಲಸದಲ್ಲಿ ಅವರೊಟ್ಟಿಗೆ ಶ್ರಮಿಸಿದ ಫಾತಿಮಾ ಶೇಕ್‌ರವರ ಪಾತ್ರವನ್ನೂ ನಾವಿಂದು ನೆನೆಯುವುದು ಬಹುಮುಖ್ಯವಾಗಿದೆ.
ಮೂರನೆಯದಾಗಿ ಬುದ್ಧ ಹಾಗೂ ಫುಲೆಯವರ ಸಾಮಾಜಿಕ ಕ್ರಾಂತಿಯನ್ನು ಮುನ್ನಡೆಸಲು ಬಂದ ಮತ್ತೊಬ್ಬ ಮಹಾನ್ ಪುರುಷ ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಾಧನೆಗೆ ಕಾರಣೀಭೂತರಾದ ಮಾತೆ ರಮಾಬಾಯಿಯವರು. ಜೀವಿತದುದ್ದಕ್ಕೂ ಬರೀ ನೋವನ್ನೇ ಕಂಡು ನೋವಲ್ಲೇ ಕೊನೆಯುಸಿರೆಳೆದ ಮಹಾನ್ ತ್ಯಾಗಮಯಿಯಾದ ರಮಾಬಾಯಿಯವರ ತ್ಯಾಗದಿಂದ ಬಾಬಾಸಾಹೇಬರು ವಿಶ್ವದ ಜ್ಞಾನಿಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನಕ್ಕೇರಲು ಅನುವಾಯಿತೆನ್ನಬಹುದು. ಮಾತೆ ರಮಾಬಾಯಿಯವರ ಪರಿಶ್ರಮದ ಬಗ್ಗೆ ಅಂಬೇಡ್ಕರ್‌ರವರು 1930ರಲ್ಲಿ ಬರೆದ ಪತ್ರದಿಂದ ತಿಳಿಯಬಹುದು.
‘‘ರಮಾ, ನೀನು ಇತರ ಮಹಿಳೆಯರಂತೆ ಬರೀ ಸುಖ-ಸಂತೋಷ, ಐಷಾರಾಮಿ ಬದುಕು, ಒಡವೆ, ವಸ್ತ್ರಗಳನ್ನೇ ಅರಸಿದ್ದರೆ ನನ್ನ ಬದುಕು ಏನಾಗುತ್ತಿತ್ತೋ. ನನ್ನ ಬದುಕಿನಲ್ಲಿ ನಿನೊಂದು ವೃಕ್ಷದಂತೆ, ಎಲೆಗಳು, ರೆಂಬೆ-ಕೊಂಬೆಗಳು ಉದುರಿದರೂ ನೀನು ಗಟ್ಟಿಯಾಗಿ ನಿಂತು ನಮ್ಮನ್ನು ಪೊರೆದೆ, ನಾಲ್ಕು ಮಕ್ಕಳ ಮರಣದ ನಂತರವೂ ನೀನು ನಮಗಾಗಿ ಶ್ರಮಿಸುತ್ತಿರುವೆ. ಅರೆಹೊಟ್ಟೆಯಲ್ಲಿ ಯಾರು ಬದುಕಲು ಇಚ್ಛಿಸುತ್ತಾರೆ? ನೀನು ಸಗಣಿಯನ್ನು ಅರಸಿ ಅಲೆದಾಡಿ ಬೆರಣಿಯನ್ನು ತಯಾರಿಸಿ ಜೀವನ ಸಾಗಿಸುತ್ತಿರುವುದು ನನಗೆ ಅರಿವಿದೆ, ಹರಿದ ಬಟ್ಟೆಗಳಲ್ಲಿ ಉಳಿಯಲು ಯಾರು ಇಷ್ಟಪಡುತ್ತಾರೆ, ಒಂದು ಬೆಂಕಿ ಪೊಟ್ಟಣದಲ್ಲಿ ತಿಂಗಳುಗಳನ್ನು ಸಾಗಿಸುತ್ತಿರುವುದು ನನಗೆ ತಿಳಿದಿದೆ. ಇವೆಲ್ಲವನ್ನು ಕಂಡು ನನ್ನ ಮನಸ್ಸು ಮಮ್ಮಲವಾಗಿ ಮರುಗುತ್ತಿದೆ. ನಮಗೆ ಬಡತನ, ಅವಮಾನ, ಮೋಸಕ್ಕೊಳಗಾಗುವುದನ್ನು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ. ಇವೆಲ್ಲವನ್ನೂ ಮೀರಿ ನನ್ನ ಜನರ ಏಳಿಗೆಗಾಗಿ ದುಡಿಯುವ ನಿರ್ಧಾರವನ್ನು ಮಾಡಿದ್ದೇನೆ. ಇದರಲ್ಲಿ ನಿನ್ನ ಪಾತ್ರ ಹಿರಿದಾದದ್ದು’’ ಎಂಬ ಮಾತುಗಳನ್ನು ಅಂಬೇಡ್ಕರ್‌ರವರು ತಮ್ಮ ಪತ್ರದಲ್ಲಿ ದಾಖಲಿಸಿದ್ದಾರೆ.
ಇಂದು ಸಮಾಜ ಹಲವು ಬದಲಾವಣೆಗಳನ್ನು ಕಂಡಿದೆ. ಜಾಗತೀಕರಣದ ದಿಸೆಯಿಂದ ಹಲವು ಸಂಸ್ಕೃತಿಗಳು ನಮ್ಮನ್ನು ಆಕರ್ಷಿಸಿದೆ. ಜ್ಞಾನ, ತಂತ್ರಜ್ಞಾನದ ಸ್ಫೋಟದಿಂದ ಜಗತ್ತಿನ ಎಲ್ಲಾ ವಿದ್ಯಮಾನಗಳು ಕ್ಷಣಮಾತ್ರದಲ್ಲೇ ನಮ್ಮನ್ನು ತಲುಪುತ್ತಿವೆ. ಇವೆಲ್ಲದರ ಕಾರಣದಿಂದ ಇವತ್ತಿನ ಪೀಳಿಗೆ ಹಿಂದಿನ ಇತಿಹಾಸವು ನಮಗೆ ನೀಡಿದ ಆದರ್ಶ ಹಾಗೂ ನೀತಿಗಳನ್ನು ಬದಿಗಿರಿಸಿ ಏನನ್ನೋ ಸಾಧಿಸುವ ತವಕದಲ್ಲಿ ತನ್ನನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಏಕೆಂದರೆ, ಇಂದಿನ ಪೀಳಿಗೆಗಳ ಮನಸ್ಥಿತಿಗಳು ಎಲ್ಲರನ್ನು ನಿಬ್ಬೆರಗಾಗಿಸುವ ಮಟ್ಟಕ್ಕೆ ಬಂದು ತಲುಪುತ್ತಿದೆ. ವೇಗದ ಬದುಕಿಗೆ ಜೋತುಬಿದ್ದು ವೈಮನಸ್ಸಿನ ಜೀವನವನ್ನು ಆಯ್ದುಕೊಳ್ಳುತ್ತಿದೆಯೇನೋ ಎಂಬ ಮಾತುಗಳನ್ನು ನಮ್ಮ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ತೀರ್ಪಿನ ಸಂದರ್ಭಗಳಲ್ಲಿ ನುಡಿದಿರುವುದುಂಟು.
ಏನೇ ಇರಲಿ, ಇವೆಲ್ಲಾ ವೈರುಧ್ಯಗಳ ನಡುವೆ ಯಶೋಧರಾ, ಮಾತೆ ಸಾವಿತ್ರಿಬಾ ಫುಲೆ ಹಾಗೂ ತಾಯಿ ರಮಾಬಾಯಿಯವರ ಆದರ್ಶನೀಯ ಬದುಕು ನಮಗೆ ಮಾದರಿಯಾಗಲಿ. ಅವರ ತ್ಯಾಗಗಳ ಫಲವಾಗಿ ನಮಗೆ ಗೌತಮ ಬುದ್ಧ, ಜ್ಯೋತಿಬಾ ಫುಲೆ ಹಾಗೂ ಅಂಬೇಡ್ಕರ್‌ರಂತಹ ಮಹನೀಯರು ಸಮಾಜದಲ್ಲಿ ಕ್ರಾಂತಿಯನ್ನು ಮಾಡುವ ಮೂಲಕ ತಮ್ಮದೇ ಕೊಡುಗೆಗಳನ್ನು ನೀಡಲು ಕಾರಣವಾಗಿದೆ. ಹೀಗೆಯೇ ಇಂದಿಗೂ ಎಷ್ಟೋ ಮಹಿಳೆಯರು ಸಾಧಕ ಪುರುಷರ ಸಾಧನೆಗೆ ಬೆಂಬಲವಾಗಿ ನಿಲ್ಲುವ ನಿದರ್ಶನಗಳಿವೆ. ಇಂತಹ ಶುಭದಿನದಂದು ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.







