ಹಳ್ಳಿ ಬಿಟ್ಟು ನಗರ ಕಟ್ಟುವವರು

ನಮ್ಮ ಕಣ್ಣೆದುರು ತಲೆಎತ್ತಿ ನಿಲ್ಲುವ ಭವ್ಯ ಕಟ್ಟಡಗಳು, ವಿಶಾಲವಾದ ಮೆಟ್ರೋ ಮಾರ್ಗಗಳು ಮತ್ತು ದೊಡ್ಡದಾದ ರಸ್ತೆಗಳು, ಎಲ್ಲಿ ನೋಡಿದರೂ ಜನಜಂಗುಳಿ-ಇದುವೇ ನಗರ. ತಾವು ಹುಟ್ಟಿ ಬೆಳೆದ ಊರು, ಹೊಲ ಮತ್ತು ಮನೆಗಳನ್ನು ತೊರೆದು ಹೊಟ್ಟೆಪಾಡಿಗಾಗಿ ಅನ್ಯ ನಗರಗಳಿಗೆ ವಲಸೆ ಹೋದ ಲಕ್ಷಾಂತರ ಜನರ ಬೆವರು ನಗರಗಳಲ್ಲಿದೆ. 2011ರ ಜನಗಣತಿಯ ಪ್ರಕಾರ, ಭಾರತದಲ್ಲಿ ಸುಮಾರು 45.6 ಕೋಟಿ ವಲಸಿಗರಿದ್ದರು. ಅಂದರೆ ಒಟ್ಟು ಜನಸಂಖ್ಯೆಯ ಶೇ.38ರಷ್ಟು ಮಂದಿ, ಅಂದರೆ ಪ್ರತೀ ಮೂವರಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಹುಟ್ಟಿದ ಜಾಗ ಬಿಟ್ಟು ಬೇರೆಡೆ ಬದುಕುತ್ತಿದ್ದಾರೆ. ಬರಗಾಲ, ಸಾಲದ ಹೊರೆ, ಭೂಹೀನತೆ ಮತ್ತು ಉದ್ಯೋಗದ ಹುಡುಕಾಟವೇ ಈ ವಲಸೆಗೆ ಪ್ರಮುಖ ಕಾರಣಗಳಾಗಿವೆ.
ನಗರದತ್ತ ಮುಖಮಾಡಿದವರ ಅಸಲು ಚಿತ್ರಣವನ್ನು ನೋಡಿದರೆ, ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವವರೇ ಹೆಚ್ಚು ಎಂಬ ಸಾಮಾನ್ಯ ಗ್ರಹಿಕೆಯನ್ನು ಅಧಿಕೃತ ದಾಖಲೆಗಳು ಸುಳ್ಳು ಮಾಡುತ್ತವೆ. 2011ರ ಜನಗಣತಿಯ ಪ್ರಕಾರ, ಶೇ.54ರಷ್ಟು ಅಂದರೆ ಸುಮಾರು 21 ಕೋಟಿ ಜನರು ಹಳ್ಳಿಯಿಂದ ಹಳ್ಳಿಗೆ ವಲಸೆ ಹೋಗಿದ್ದರು. ಆದರೆ ಹಳ್ಳಿಯಿಂದ ನಗರಕ್ಕೆ ಹೋದವರು ಕೇವಲ 8 ಕೋಟಿ ಮಾತ್ರ. 2020-21ರ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಕೂಡ ಇದನ್ನೇ ದೃಢಪಡಿಸಿದ್ದು, ಶೇ.55ರಷ್ಟು ವಲಸಿಗರು ಗ್ರಾಮೀಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೇ ತೆರಳಿದ್ದರೆ, ಗ್ರಾಮ-ನಗರ ವಲಸೆ ಪ್ರಮಾಣ ಶೇ.18.9ರಷ್ಟಿತ್ತು. ಆ ಸಮೀಕ್ಷೆಯ ಪ್ರಕಾರ ದೇಶದ ಒಟ್ಟು ವಲಸೆ ದರ ಶೇ.28.9 ಆಗಿದ್ದು, ಗ್ರಾಮೀಣ ಭಾಗದಲ್ಲಿ ಶೇ.26.5 ಹಾಗೂ ನಗರದಲ್ಲಿ ಶೇ.34.9ರಷ್ಟಿತ್ತು.
ಮಹಿಳೆಯರ ವಲಸೆ ದರ ಶೇ.47.9 ಇದ್ದು ಪುರುಷರಿಗಿಂತ ಹೆಚ್ಚಾಗಿದ್ದರೂ, ಅವರ ವಲಸೆಗೆ ಬಹುಪಾಲು ಮದುವೆಯೇ ಕಾರಣ. ಆದರೆ ಪುರುಷರ ವಲಸೆಗೆ ಪ್ರಮುಖ ಕಾರಣ ಉದ್ಯೋಗವಾಗಿದ್ದು, ಶೇ.50ಕ್ಕೂ ಹೆಚ್ಚು ಪುರುಷರು ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಗ್ರಾಮದಿಂದ ನಗರಕ್ಕೆ ಹೋಗುವರಲ್ಲಿ ಶೇ.33.5 ಪುರುಷ ವಲಸಿಗರು ಹಾಗೂ ಶೇ.15.6 ಮಹಿಳೆಯರಿದ್ದಾರೆ. ನಗರ ನಿರ್ಮಾಣ ಕೂಲಿಯಲ್ಲಿ ಗಂಡಸರ ಮುಖವೇ ಹೆಚ್ಚಾಗಿ ಕಂಡರೂ, ಅವರ ಮನೆಯಲ್ಲಿ ಊರಿನ ಹೊಲ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಹೆಣ್ಣಿನ ದಣಿವರಿಯದ ಶ್ರಮ ಮಾತ್ರ ಅಧಿಕೃತ ದಾಖಲೆಗಳ ಕಣ್ಣಿಗೆ ಬೀಳುವುದೇ ಇಲ್ಲ.
ಕರ್ನಾಟಕದ ಕಥೆ ಮತ್ತು ಕಲ್ಯಾಣ ಕರ್ನಾಟಕದ ಬಿಕ್ಕಟ್ಟನ್ನು ಗಮನಿಸಿದಾಗ, ಕಲ್ಯಾಣ ಕರ್ನಾಟಕದಂತಹ ಉತ್ತರದ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿದಿರುವುದರಿಂದ ದಕ್ಷಿಣದ ಜಿಲ್ಲೆಗಳು ಮತ್ತು ಬೆಂಗಳೂರಿನಂತಹ ಮಹಾನಗರಗಳತ್ತ ದೊಡ್ಡ ಪ್ರಮಾಣದ ವಲಸೆ ನಡೆಯುತ್ತಿದೆ. ಬೆಂಗಳೂರಿಗೆ ವಲಸೆ ಬರುವರಲ್ಲಿ, ರಾಜ್ಯದೊಳಗಿನ ವಲಸಿಗರಲ್ಲಿ ಸಿಂಹಪಾಲು ಹೈದರಾಬಾದ್ ಕರ್ನಾಟಕ ಭಾಗದವರದ್ದೇ ಆಗಿದೆ. ರಾಯಚೂರು ಜಿಲ್ಲೆಯ ಹಳ್ಳಿಗಳ ಅಧ್ಯಯನದ ಪ್ರಕಾರ ಶೇ.62 ಕುಟುಂಬಗಳು ವಲಸೆಯಿಂದ ಲಾಭ ಪಡೆದಿವೆ. ಆರೋಗ್ಯದಂತಹ ಕಾರ್ಮಿಕ ಕಲ್ಯಾಣ ಯೋಜನೆಗಳು ಉತ್ತಮವಾಗಿ ಜಾರಿಯಾದರೆ ಈ ಲಾಭ ಮತ್ತಷ್ಟು ಹೆಚ್ಚಲಿದೆ. 2023ರ ಸಮೀಕ್ಷೆಯಂತೆ, ರಾಜ್ಯದೊಳಗಿನ ವಲಸಿಗರಲ್ಲಿ ಶೇ.43 ಕಲಬುರಗಿಯವರು, ಶೇ.8 ಯಾದಗಿರಿ, ರಾಯಚೂರು ಮತ್ತು ಬಳ್ಳಾರಿಯಿಂದ ತಲಾ ಶೇ.6ರಷ್ಟಿದ್ದು, ಇವರಲ್ಲಿ ಶೇ.91ರಷ್ಟು ಮಂದಿ ಗ್ರಾಮೀಣ ಹಿನ್ನೆಲೆಯವರು. ಬೆಂಗಳೂರಿನ ಮಡಿವಾಳ, ಜಯನಗರ, ಬೊಮ್ಮನಹಳ್ಳಿಗಳಲ್ಲಿ ಇವರ ವಸತಿಗಳನ್ನು ಗುಲ್ಬರ್ಗಾ ಕಾಲನಿ ಎಂದೇ ಕರೆಯಲಾಗುತ್ತದೆ.
ನಗರದಲ್ಲಿ ಕಾರ್ಮಿಕರ ನೈಜ ಪರಿಸ್ಥಿತಿ ಅಷ್ಟು ನುಣ್ಣಗಿಲ್ಲ. ಸಮೀಕ್ಷೆಯೊಂದರ ಪ್ರಕಾರ ಶೇ.25 ಕಾರ್ಮಿಕರು ಮಾತಿನ ನಿಂದನೆ ಮತ್ತು ಶೇ.24 ದೈಹಿಕ ಹಿಂಸೆ ಅನುಭವಿಸಿದ್ದಾರೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಿಗೂ ಸೌಲಭ್ಯ ಸಿಗಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕು. ಅನೇಕರಿಗೆ ಮಂಡಳಿಯ ಬಗ್ಗೆಯೇ ಮಾಹಿತಿಯಿಲ್ಲದ ಕಾರಣ ನೋಂದಾಯಿತರ ಸಂಖ್ಯೆ ಕಡಿಮೆ. ಬೆಂಗಳೂರಿನ ಕಟ್ಟಡ ಕಾರ್ಮಿಕರ ಜೀವನ ಗುಣಮಟ್ಟದ ಅಧ್ಯಯನದಲ್ಲಿ ಇವರು ಸಾಮಾಜಿಕವಾಗಿ ತುಂಬಾ ದೂರ ಉಳಿದಿದ್ದಾರೆ, ಕುಟುಂಬ ಹಾಗೂ ಗೆಳೆಯರಿಂದ ದೂರವಿರುವ ಒಂಟಿತನವೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಊರಿನೊಂದಿಗಿನ ನಂಟು ಮತ್ತು ಬದುಕಿನ ಅನಿವಾರ್ಯತೆ ವಲಸೆಯ ಮತ್ತೊಂದು ಮುಖವನ್ನು ತೋರಿಸುತ್ತದೆ. ಈ ವಲಸೆ ಒಂದು ಬಾರಿ ಊರು ಬಿಟ್ಟು ನಗರದಲ್ಲಿ ಶಾಶ್ವತವಾಗಿ ನೆಲೆಸುವ ರೀತಿಯದ್ದಲ್ಲ. ಕೆಲಸ ಸಿಕ್ಕಾಗ ನಗರಕ್ಕೆ ಹೋಗುವುದು, ಕೃಷಿ ಕೆಲಸದ ಸಮಯದಲ್ಲಿ ಅಥವಾ ಮಳೆ ಬಂದಾಗ ಊರಿಗೆ ಮರಳುವುದು, ಮತ್ತೆ ಕೆಲಸದ ಕೊರತೆಯಾದಾಗ ನಗರಕ್ಕೆ ತೆರಳುವುದು-ಹೀಗೆ ಇದು ನಿರಂತರವಾಗಿ ನಡೆಯುವ ವಲಸೆಯಾಗಿದೆ.
ಕಳೆದ ಮುಂಗಾರಿನಲ್ಲಿ ಮಳೆ ಬೇಗ ಬಂದಾಗ ಬೆಂಗಳೂರು, ಮುಂಬೈ, ಪುಣೆ ಸೇರಿದಂತೆ ಹಲವು ನಗರಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಬಿತ್ತನೆ ಕೆಲಸಕ್ಕಾಗಿ ಕಲ್ಯಾಣ ಕರ್ನಾಟಕದ ತಮ್ಮ ಊರುಗಳಿಗೆ ಹಿಂದಿರುಗಿದ್ದರು. ಹಿಂದಿನ ವರ್ಷ ಮಳೆ ವಿಳಂಬವಾದಾಗ, ಕೃಷಿ ಕೆಲಸ ಸಿಗದೆ ಅಥವಾ ನರೇಗಾ ಕೂಲಿ ಪಾವತಿ ತಡವಾದಾಗ ಇದೇ ಕಾರ್ಮಿಕರು ಬದುಕಿಗಾಗಿ ನಗರಗಳತ್ತ ವಲಸೆ ಹೋಗಬೇಕಾಗಿತ್ತು. ಹೀಗಾಗಿ ಅವರ ಜೀವನದಲ್ಲಿ ಊರಿನ ಮಳೆ ಮತ್ತು ಸರಕಾರದ ಪಾವತಿ, ನಗರದ ಕಟ್ಟಡ ಕಾಮಗಾರಿಯಷ್ಟೇ ಮುಖ್ಯವಾಗುತ್ತವೆ. ಯಾವಾಗ ಊರಿನಲ್ಲಿ ಕೆಲಸ ಸಿಗುತ್ತದೆ ಎಂಬುದನ್ನು ಮಳೆ ನಿರ್ಧರಿಸುತ್ತದೆ. ಯಾವಾಗ ನಗರಕ್ಕೆ ಹೋಗಬೇಕು ಎಂಬುದನ್ನು ಕೆಲಸದ ಕೊರತೆ ನಿರ್ಧರಿಸುತ್ತದೆ.
ಕೋವಿಡ್-19 ಲಾಕ್‌ಡೌನ್ ಈ ವಲಸೆಯ ಅಸ್ಥಿರತೆಯನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಿತು. ನಗರಗಳಲ್ಲಿ ಕೆಲಸ ಕಳೆದುಕೊಂಡ ಸಾವಿರಾರು ಕಾರ್ಮಿಕರು ಸಾರಿಗೆ ವ್ಯವಸ್ಥೆಯಿಲ್ಲದ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿಯೇ ತಮ್ಮ ಊರುಗಳತ್ತ ಮರಳಬೇಕಾಯಿತು. ಊರು ತಲುಪಿದ ನಂತರವೂ ಬದುಕಿನ ಭದ್ರತೆ ಸಿಗದೆ, ಮತ್ತೆ ನಗರಕ್ಕೆ ತೆರಳುವ ಅನಿವಾರ್ಯತೆ ಎದುರಾಯಿತು. PLFS ದತ್ತಾಂಶವು ವಲಸೆ ಮತ್ತು ಉದ್ಯೋಗದ ಕೆಲವು ಚಿತ್ರಣವನ್ನು ನೀಡಿದರೂ, ಈ ಕಾರ್ಮಿಕರ ಸಂಪೂರ್ಣ ಬದುಕನ್ನು ಅದು ಹಿಡಿದಿಡುವುದಿಲ್ಲ.
ಇಲ್ಲಿಯೇ ಈ ಅಂಕಿ-ಅಂಶಗಳ ಮಿತಿಯೂ ಇದೆ. PLFS ವಲಸೆಯನ್ನು ದಾಖಲಿಸುವುದೇ ಮುಖ್ಯ ಉದ್ದೇಶವಾಗಿರುವ ಸಮೀಕ್ಷೆಯಲ್ಲ. ವಿಶೇಷವಾಗಿ ಆರು ತಿಂಗಳಿಗಿಂತ ಕಡಿಮೆ ಅವಧಿಗೆ ನಗರಗಳಿಗೆ ಹೋಗಿ ಕೆಲಸ ಮಾಡಿ ಮತ್ತೆ ಊರಿಗೆ ಮರಳುವ ಕಾಲೋಚಿತ ಕೂಲಿಕಾರ್ಮಿಕರು ಇಂತಹ ಸಮೀಕ್ಷೆಗಳಲ್ಲಿ ಸಂಪೂರ್ಣವಾಗಿ ದಾಖಲಾಗದೆ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ವಲಸೆ ಕಾರ್ಮಿಕರ ಸರಿಯಾದ ಸಮೀಕ್ಷೆ ಮತ್ತು ಕಾನೂನು, ಯೋಜನೆಯ ಅಗತ್ಯವಿದೆ.
ನಗರಗಳ ಎತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳು ಮತ್ತು ಬೃಹತ್ ಕಾಮಗಾರಿಗಳ ಹಿಂದೆ ಇಂತಹ ವಲಸೆ ಬಂದ ಸಾವಿರಾರು ಕಾರ್ಮಿಕರ ಶ್ರಮವಿದೆ. ಆದರೆ ಅವರ ಬದುಕು ಮಾತ್ರ ಸ್ಥಿರವಾಗಿಲ್ಲ. ಒಂದು ಕೈಯಲ್ಲಿ ಊರಿನ ಮಣ್ಣು, ಮತ್ತೊಂದು ಕೈಯಲ್ಲಿ ನಗರದ ಕೂಲಿ, ಈ ಎರಡರ ನಡುವೆ ಸಿಲುಕಿರುವ ಕಾರ್ಮಿಕರು ಇಂದಿಗೂ ಯಾವುದೇ ಅಧಿಕೃತ ದಾಖಲೆಗಳಲ್ಲಿ ಸಂಪೂರ್ಣವಾಗಿ ಕಾಣಿಸದೆ ಬದುಕುತ್ತಿದ್ದಾರೆ.






