ಟಿಪ್ಪು ಕಾಲದಲ್ಲಿ ಹಿಂದೂಗಳು ಮತ್ತು ಕ್ರೈಸ್ತರು

ಟಿಪ್ಪು ಸುಲ್ತಾನ್ ಮತದ್ವೇಷಿಯಾಗಿರದೆ, ಪ್ರಜ್ಞಾವಂತ ರಾಜನಾಗಿ ಕಾರ್ಯನಿರ್ವಹಿಸಿರುವುದನ್ನು ಹಲವು ಪುರಾವೆಗಳಿಂದ ನಾವು ತಿಳಿಯ ಬಹುದು. ಇದನ್ನು ಅರಿಯಲು ಟಿಪ್ಪು ತನ್ನ ರಾಜ್ಯದ ಸರಕಾರದಲ್ಲಿ ಹಿಂದೂಗಳನ್ನೂ ಉನ್ನತ ಹುದ್ದೆಗೆ ನೇಮಕ ಮಾಡಿರುವ ಸಂದರ್ಭಗಳನ್ನು, ದೇವಸ್ಥಾನ ಮತ್ತು ಬ್ರಾಹ್ಮಣರಿಗೆ ನೀಡಿರುವ ದತ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ವಿಗ್ರಹ ಪ್ರತಿಷ್ಠಾಪನೆಗೆ ಖಜಾನೆಯ ಸಂಪತ್ತನ್ನು ನೀಡಿರುವ ವಿಚಾರವನ್ನು ಮತ್ತು ಕೆಲವು ಸಂದರ್ಭಗಳಲ್ಲಿ ದೇವಾಲಯಗಳನ್ನು ಕಟ್ಟಿಸಿರುವ ಘಟನೆಗಳನ್ನೂ ನಾವು ಅವಲೋಕಿಸಬೇಕು. ಕೆಲವು ಸಂದರ್ಭಗಳಲ್ಲಿ ಟಿಪ್ಪು ಮುಸ್ಲಿಮೇತರರನ್ನು ಹಿಂಸೆಗೊಳಪಡಿಸಿರುವುದರಲ್ಲಿ ಸಂದೇಹವಿಲ್ಲ. ಆದರೆ, ಇದು ಧರ್ಮಾಂಧತೆಯ ಮನೋಭಾವದಿಂದ ಮಾಡಿರುವುದಿಲ್ಲ. ಬದಲಾಗಿ, ಅವರು ಅವನ ಮತ್ತು ಅವನ ಸರಕಾರಕ್ಕೆ ವಿಧೇಯರಾಗಿರದ, ನಿಷ್ಠೆಯಿಂದಿರದ ಅಪರಾಧಕ್ಕಾಗಿ ಹಾಗೆ ಮಾಡಿದನು. ತನ್ನ ತಂದೆಯಂತೆಯೇ ಟಿಪ್ಪು ಕೂಡ ಧರ್ಮ ಮತ್ತು ರಾಜಕೀಯಗಳೆರಡನ್ನೂ ಪ್ರತ್ಯೇಕವಾಗಿರಿಸಿದ್ದನು. ತನ್ನ ಸ್ವಂತ ನಂಬಿಕೆಗಳು ಆಡಳಿತದ ನೀತಿಯ ಮೇಲೆ ಪ್ರಭಾವ ಬೀರುವುದಕ್ಕೆ ಅಪರೂಪವಾಗಿ ಅವಕಾಶವನ್ನು ಕೊಟ್ಟಿರಬಹುದು. ಕೆಲವೊಮ್ಮೆ, ತನ್ನ ಮುಸ್ಲಿಮ್ ಪ್ರಜೆಗಳನ್ನು ಕೂಡ ನಿಷ್ಠೆಯಿಂದಿರದ ಅಪರಾಧಕ್ಕಾಗಿ ಅಥವಾ ನೀಚತನಕ್ಕಾಗಿ, ಅಷ್ಟೇ ಕ್ರೂರತರವಾಗಿ ನಡೆಸಿಕೊಂಡಿದ್ದನು.
ಟಿಪ್ಪು ತನ್ನ ತಂದೆಯ ನೀತಿಯನ್ನೇ ಅನುಸರಿಸಿ ಮುಸ್ಲಿಮೇತರರನ್ನು ಜವಾಬ್ದಾರಿಯುತವಾದ ಸ್ಥಾನಗಳಿಗೆ ನೇಮಿಸಿದನು. ದಿವಾನ್ ಪೂರ್ಣಯ್ಯನು ಮೀರ್ ಅಸೌಫ್ ಎಂಬ ಮುಖ್ಯ ಹುದ್ದೆಯಲ್ಲಿದ್ದನು. ಕೃಷ್ಣರಾಯನು ಖಜಾನೆಯನ್ನು ನೋಡಿಕೊಳ್ಳುತ್ತಿದ್ದನು. ಚಾಮಯ್ಯ ಅಯ್ಯಂಗಾರನು ಅಂಚೆ ಮತ್ತು ಪೊಲೀಸ್ ಮಂತ್ರಿಯಾಗಿದ್ದನು. ಅವನ ತಮ್ಮ ರಂಗ ಅಯ್ಯಂಗಾರನು ಅಂಚೆ ಮತ್ತು ನರಸಿಂಹರಾಯನು ಶ್ರೀರಂಗಪಟ್ಟಣದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಶ್ರೀನಿವಾಸರಾಯನೂ ಮತ್ತು ಅಪ್ಪಾಜಿ ರಾಮನೂ ಟಿಪ್ಪುವಿನ ನಂಬಿಗಸ್ಥರಾಗಿದ್ದು, ಅವರು ಪ್ರಾಮುಖ್ಯವಾದ ರಾಯಭಾರಗಳನ್ನೂ ವಹಿಸುತ್ತಿದ್ದರು. ಮೂಲಚಂದ್ ಮತ್ತು ಸುಜನರಾಯ್ ಅವರುಗಳು ಮೊಗಲ್ ಆಸ್ಥಾನದಲ್ಲಿ ಟಿಪ್ಪುವಿನ ಮುಖ್ಯ ನಿಯೋಗಿಗಳಾಗಿದ್ದರು. ಹಾಗೆಯೇ, ಸುಲ್ತಾನನು ನಾಯಕರಾಯ ಮತ್ತು ನಾಯಕ ಸಂಗಣ್ಣವನರುಗಳಲ್ಲಿ ಅಪಾರವಾದ ನಂಬಿಕೆಯನ್ನಿಟ್ಟಿದ್ದನು. ಸುಬ್ಬರಾಯನು ಟಿಪ್ಪುವಿನ ಪ್ರಧಾನ ಪೇಷ್ಕರ್ ಆಗಿದ್ದನು. ನರಸಿಂಹಯ್ಯನು ಅವನ ಒಬ್ಬ ಮುನ್ಸಿಯಾಗಿದ್ದ. ನಾಗಪ್ಪಯ್ಯನು ಕೊಡಗಿಗೆ ಫೌಜುದಾರನಾಗಿ ನೇಮಕಗೊಂಡಿದ್ದನು.ಇನ್ನೊಬ್ಬ ಬ್ರಾಹ್ಮಣ ಅಧಿಕಾರಿ ಕೊಯಮುತ್ತೂರಿನ, ನಂತರ ಪಾಲಘಾಟಿನ ಅಸೌಫನಾಗಿದ್ದನು. ಮಲಬಾರಿನ ಕಾಡುಗಳಲ್ಲಿ ಮರವನ್ನು ಕುಯ್ಯುವ ಸಂಪೂರ್ಣ ಸೌಲಭ್ಯವನ್ನೊಬ್ಬ ಬ್ರಾಹ್ಮಣನಿಗೆ ವಹಿಸಿಕೊಟ್ಟಿದ್ದನು. ಟಿಪ್ಪುವಿನ ಅನೇಕ ಅಮೀಲರು ಮತ್ತು ಕಂದಾಯ ಅಧಿಕಾರಿಗಳು ಹಿಂದೂಗಳಾಗಿದ್ದರು ಮತ್ತು ಹೆಚ್ಚಾಗಿ ಅವರು ಬ್ರಾಹ್ಮಣರು. ಸೈನ್ಯದಲ್ಲಿಯೂ ಕೂಡ ಹಿಂದೂಗಳು ದೊಡ್ಡ ಹುದ್ದೆಗಳಲ್ಲಿದ್ದರು. ಶ್ರೀಪತಿರಾಯನು ರೋಷನ್ ಖಾನ್ ನೊಡನೆ ದಂಗೆಕೋರ ನಾಯಕರುಗಳನ್ನಡಗಿಸಲೆಂದು ನೇಮಿತನಾಗಿದ್ದನು. ಮರಾಠರವನಾದ ಶಿವಾಜಿರಾಯನು 3,000 ಕುದುರೆಗಳ ನಾಯಕನಾಗಿದ್ದು, 1791ರಲ್ಲಿ ಕಾರ್ನವಾಲೀಸನು ಬೆಂಗಳೂರನ್ನು ಮುತ್ತಿದಾಗ ಧೈರ್ಯದಿಂದ ಹೋರಾಡಿದ್ದನು. ಹಾಗೆಯೇ, ಬ್ರಾಹ್ಮಣನಾದ ರಾಮರಾಯನೂ ಅಶ್ವದಳದ ದಳಪತಿಯಾಗಿದ್ದನು.
ಟಿಪ್ಪು ತನ್ನ ರಾಜ್ಯದ ದೇವದಾಯ ಮತ್ತು ಬ್ರಹ್ಮದಾಯಗಳನ್ನು ಸಾಮೂಹಿಕವಾಗಿ ಕಸಿದುಕೊಂಡನೆಂಬ ಆಪಾದನೆಗೂ ಗುರಿಯಾಗಿದ್ದಾನೆ. ವಾಸ್ತವವಾಗಿಯೂ ಅವನು ಅಂಥ ಅನಧಿಕೃತ ಕೊಡುಗೆಗಳನ್ನು ಸರಕಾರದ ಆಸ್ತಿಯಾಗಿ ತೆಗೆದುಕೊಂಡು, ಹಿಂದಿನ ರಾಜರುಗಳಿಂದ ಸರಿಯಾದ ಸನ್ನದುಗಳನ್ನು ಪಡೆದಿದ್ದವರನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದನು. ಅನೇಕ ಸಂದರ್ಭಗಳಲ್ಲಿ ತಾನೇ ಭೂಮಿಯನ್ನು ಮತ್ತು ಸಂಪತ್ತನ್ನು ಬ್ರಾಹ್ಮಣರಿಗೂ ಹಾಗೂ ದೇವಾಲಯಗಳಿಗೂ ಕೊಡುಗೆಯಾಗಿತ್ತ ಸಂದರ್ಭಗಳಿವೆ. ಇಂಥ ಒಂದು ಸಂದರ್ಭದಲ್ಲಿ ಪುಷ್ಪಗಿರಿಯ ಮಠದ ಸ್ವಾಮಿಯಾಗಿದ್ದ ಕೋನಪ್ಪನು ತೊಂಗದಲ್ಲಿ ಮತ್ತು ಗೊಲ್ಲಪಲ್ಲಿಗಳ ಕಂದಾಯವನ್ನು ಅನುಭವಿಸಲು ನೀಡಿದ ಅನುಮತಿ, ತನ್ನ ಅಮಿಲ್ದಾರನಿಗೆ ಕಳುಹಿಸಿದ ಮರಾಠಿ ಸನ್ನದಿನಲ್ಲಿ ತಿಳಿಸಲಾಗಿದೆ. ಕಡಪ ಜಿಲ್ಲೆಯ ಕೋತನತಲವೆಂಬ ಹಳ್ಳಿಯನ್ನು ಗಂಜಿಕೋಟೆಯ ಆಂಜನೇಯ ಸ್ವಾಮಿ ದೇವಸ್ಥಾನದ ಪೂಜಾ ಕೈಂಕರ್ಯಗಳಿಗಾಗಿ ದೇವದಾಯವನ್ನು ನೀಡಿದನು. ಕಮಲಾಪುರ ತಾಲೂಕಿನ ಅನೇಕ ಬ್ರಾಹ್ಮಣರಿಗೆ ಭೂಮಿಯನ್ನು ದತ್ತಿಯಾಗಿ ಬಿಟ್ಟನು. 1794ರಲ್ಲಿ ಮಹಾರಾಜ್ ಹರಿಪನೆಂಬ ಬ್ರಾಹ್ಮಣನೊಬ್ಬನಿಗೆ ಮಂಜರಾಬಾದ ತಾಲೂಕಿನಲ್ಲಿ ಇನಾಮನ್ನು ಅನುಗ್ರಹಿಸಿದನು. ತುಂಗಭದ್ರಾ ನದಿಯ ದಂಡೆಯ ಮೇಲಿನ ದೇವಾಲಯಗಳಿಗೆ ಮತ್ತು ಅಲ್ಲಿನ ಬ್ರಾಹ್ಮಣರಿಗೆ ಟಿಪ್ಪು ಭೂಮಿಯನ್ನು ದಾನವಾಗಿ ನೀಡಿರುವುದನ್ನು ಕನ್ನಡ ಲಿಪಿಯಲ್ಲಿರುವ ಸಂಸ್ಕೃತ ಶ್ಲೋಕವೊಂದು ತಿಳಿಸುತ್ತದೆ. 1782ರಲ್ಲಿ ಬರಮಹಲಿನ ಅಮೀಲ್ದಾರ ಹರಿದಾಸಿಮಯ್ಯನಿಗೆ ನಿರೂಪವೊಂದನ್ನು ಕಳುಹಿಸಿ, ದೇವದಾಯ ಮತ್ತು ಬ್ರಹ್ಮದಾಯಗಳನ್ನುಳಿದು ಮಿಕ್ಕೆಲ್ಲವನ್ನೂ ಹಿಂದೆಗೆದುಕೊಳ್ಳಬೇಕೆಂದು ಹೇಳಿದ್ದಾನೆ 1794ರಲ್ಲಿ ಧರ್ಮಪುರಿಯ ಬ್ರಾಹ್ಮಣ ನರಸಿಂಹ ಜೋಷಿಗೆ ವಂಶಪಾರಂಪರ್ಯವಾಗಿ ವರ್ಷಕ್ಕೆ ಹತ್ತು ಪಗೋಡಗಳ ವೇತನವನ್ನು ಕೊಟ್ಟಿದ್ದಾನೆ.’ 1784ರಲ್ಲಿ ಬಾಬಾ ಬುಡಾನ್ ಗಿರಿಯ ದತ್ತಾತ್ರೇಯ ಪೀಠಕ್ಕೆ ಹಿಂದಿನ ಆನೆಗುಂದಿ ರಾಜನು ಬಿಟ್ಟು ಕೊಟ್ಟ 25 ಗ್ರಾಮಗಳನ್ನು ಟಿಪ್ಪು ಪುನಃ ನೀಡಿದನು. ನಗರದ ವೆಂಕಟರಮಣ ದೇವಾಲಯಕ್ಕೆ ಮಲಬಾರಿನ ಕ್ರೈಸ್ತ ಚರ್ಚ್ ನಿಂದ ಡಚ್ಚ ಮಾದರಿಯ ಗಂಟೆಯನ್ನು ದಾನವಾಗಿ ನೀಡಿದನು. ಊರತೂರು ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಮೂರ್ತಿ ಸ್ಥಾಪನೆ ಮಾಡಿ, ಅಲ್ಲಿನ ದೈನಂದಿನ ಪೂಜೆಗೆ, ಅರ್ಚಕರಿಗೆ ಮತ್ತು ಇತರ ಸೇವಕರಿಗೆ ಇನಾಮ್ ಭೂಮಿಯುನ್ನು ದಾನವಾಗಿ ಟಿಪ್ಪು ನೀಡಿದನು. ಮೇಲುಕೋಟೆಯಲ್ಲಿ ಬ್ರಾಹ್ಮಣರ ಅನುಮತಿ ಪಡೆದು ಹಿಂದೂ ದೇವಾಲಯದ ಪಕ್ಕದಲ್ಲಿ ಮಸೀದಿಯನ್ನು 1787 ರಲ್ಲಿ ಕಟ್ಟಿಸಿದನು. ಇದೇ ರೀತಿಯಾಗಿ ಮಲಬಾರ್ ಮತ್ತು ಕೊಚ್ಚಿನ್ ಪ್ರದೇಶಗಳಲ್ಲೂ ಟಿಪ್ಪು ಸರಕಾರ ಅಲ್ಲಿನ ಬ್ರಾಹ್ಮಣರಿಗೂ, ದೇವಾಲಯಗಳಿಗೂ ದತ್ತಿ ನೀಡುವ ನೀತಿಯನ್ನು ಪಾಲಿಸಿದ್ದನು. ಇಲ್ಲಿ ಭೂಮಿಯನ್ನು ಉಂಬಳಿಯಾಗಿ ಕೊಟ್ಟಿರುವ ಪಟ್ಟಿಯನ್ನು ಸಿ.ಕೆ.ಕರೀಂರವರು ವಿಮರ್ಶಾತ್ಮಕವಾಗಿ ಚಿತ್ರಿಸಿರುತ್ತಾರೆ. ಕೆಲವು ನಿದರ್ಶನಗಳನ್ನು ಇಲ್ಲಿ ಅವಲೋಕಿಸಬಹುದು.
1) ಅರ್ನಾಡು ತಾಲೂಕಿನ ಚೇಲಾಂಬರ ಅಮಸೋಮಿನ ಪುಣ್ಣೂರು ದೇವಾಲಯಕ್ಕೆ 70.42 ಎಕರೆ ಗದ್ದೆ ಮತ್ತು 3.29 ಎಕರೆ ತೋಟದ ಭೂಮಿ.
2) ಪೊನ್ನವಿ ತಾಲೂಕಿನ ಪೈಲತ್ತೂರು ಅಮಸೋಮಿನ ತಿರುವಂಚಿಕುಳದ ಶಿವದೇವಾಲಯಕ್ಕೆ 208.82 ಎಕರೆ ಜಮೀನು ಮತ್ತು 3.29 ಎಕರೆ ತೋಟದ ಭೂಮಿ.
3) ಪೊನ್ನಾನಿ ತಾಲೂಕಿನ ಗುರುವಾಯೂರು ಅಮಸೋಮಿನ ಗುರುವಾಯೂರು ದೇವಾಲಯಕ್ಕೆ 46.02 ಎಕರೆ ಗದ್ದೆ ಮತ್ತು 458.32 ಎಕರೆ ತೋಟದ ಭೂಮಿ.
4) ಕಲ್ಲಿಕೋಟೆ ತಾಲೂಕಿನ ಕಸಬಾ ಅಮಸೋಮಿನ ತ್ರಿಕ್ಕಂಡಿಯೂರು ವೆಟ್ಟಕ್ಕೋರು ಮಂಕವು ದೇವಾಲಯಕ್ಕೆ 122.70 ಎಕರೆ ಗದ್ದೆ ಮತ್ತು 73.36 ಎಕರೆ ತೋಟದ ಭೂಮಿ.
5) ಪೊನ್ನಾನಿ ತಾಲೂಕಿನ ಕಡಿಕಾಡು ಅಮಸೋಮಿ ಕಟ್ಟುಮಡತ್ತಿಲ್ ಶ್ರೀ ಕುಮಾರನ್ ನಂಬೂದಿರಿಪಾಡ್ ಗೆ 27.97 ಎಕರೆ ಗದ್ದೆ ಮತ್ತು 6.91 ಎಕರೆ ತೋಟದ ಭೂಮಿ.
6) ಪೊನ್ನಾನಿ ತಾಲೂಕಿನ ತ್ರಿಕ್ಕಂಡಿಯೂರ್ ಅಮಸೋಮಿನ ತ್ರಿಕ್ಕಂಡಿಯೂರ್ ಸಮೂಹಂ ದೇವಸ್ಥಾನಕ್ಕೆ 20.63 ಎಕರೆ ಗದ್ದೆ ಮತ್ತು 0.41 ಎಕರೆ ತೋಟದ ಭೂಮಿ.
7) ತಿರುಚೂರಿನ ನಡುವಿಲ್ ಮಡತ್ತಿಲ್ ತಿರುಮುಂಬುಗೆ 40.26 ಎಕರೆ ಜಮೀನು, 2.13 ಎಕರೆ ತೋಟದ ಭೂಮಿ ಮತ್ತು 4.17 ಎಕರೆ ಗದ್ದೆ.
ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ದೇವಾಲಯಗಳು ಮತ್ತು ಬ್ರಾಹ್ಮಣರು ಅನುಭವಿಸುತ್ತಿದ್ದ ಭೂಮಿಯನ್ನು ಟಿಪ್ಪು ಯಥಾವತ್ತಾಗಿ ಮುಂದುವರಿಸಿದ್ದನು. ಅಲ್ಲದೆ, ಹೊಸತಾಗಿ ದತ್ತಿಗಳನ್ನು ನೀಡಿದ್ದನು ಎಂಬುದು ಸ್ಪಷ್ಟವಾಗುತ್ತದೆ. ಬಹುಶಃ
ಯುದ್ಧ ಕಾಲದಲ್ಲಿ ಹಣದ ಕೊರತೆಯನ್ನು ನೀಗಿಸಲೋಸುಗ ಅಕ್ರಮವಾಗಿ ಹೊಂದಿದ್ದ ಭೂಮಿಯನ್ನು ಮತ್ತು ಸಂಪತ್ತನ್ನು ದೋಚಿರಬಹುದು.
ಟಿಪ್ಪು ಹಿಂದೂ ಪ್ರಜೆಗಳಿಗೆ ಸಂಪೂರ್ಣ ಪೂಜಾ ಸ್ವಾತಂತ್ರ್ಯವನ್ನಿತ್ತಿದ್ದನು. ಶ್ರೀರಂಗಪಟ್ಟಣದ ಕೋಟೆಯೊಳಗೆ ಇರುವ ಭವ್ಯವಾದ ಶ್ರೀರಂಗನಾಥ ದೇವಾಲಯವು, ಸುಲ್ತಾನನ ಅರಮನೆಯ ಪಶ್ಚಿಮಕ್ಕೆ ಕೆಲವೇ ಗಜಗಳ ದೂರದಲ್ಲಿದ್ದುದರಿಂದ, ದೇವಸ್ಥಾನದ ಘಂಟೆಗಳ ನಾದವನ್ನೂ, ಬ್ರಾಹ್ಮಣ ಅರ್ಚಕರ ಮಂತ್ರಗಳನ್ನೂ ಪ್ರತಿನಿತ್ಯವೂ ಕೇಳುತ್ತಿದ್ದನು. ಆದಾಗ್ಯೂ, ಅವನು ದೇವಾಲಯದ ಧಾರ್ಮಿಕ ಆಚರಣೆಗಳಿಗೆ ಅಡಚಣೆ ಉಂಟು ಮಾಡಿರಲಿಲ್ಲ. ಕೋಟೆಯೊಳಗಡೆ ಅರಮನೆಗೆ ಹತ್ತಿರವಿದ್ದ ಇನ್ನೆರಡು ದೇವಾಲಯಗಳು ನರಸಿಂಹ ಮತ್ತು ಗಂಗಾಧರೇಶ್ವರನದು. ಇವುಗಳಲ್ಲಿಯಾಗಲಿ ಅಥವಾ ರಾಜ್ಯದ ಇನ್ನುಳಿದ ಭಾಗಗಳಲ್ಲಿ ಹರಡಿರುವ ಸಹಸ್ರಾರು ದೇವಸ್ಥಾನಗಳಾವುದರಲ್ಲಿಯೇ ಆಗಲಿ, ಹಿಂದೂ ಪ್ರಜೆಗಳು ಪೂಜೆ ಪುರಸ್ಕಾರಗಳನ್ನು ನಿಲ್ಲಿಸಲಿಲ್ಲ (ಟಿಪ್ಪು ಆಡಳಿತಾವಧಿಯಲ್ಲಿ). ಇದಲ್ಲದೇ, ಬ್ರಾಹ್ಮಣರಿಗೆ ತಮ್ಮ ಧಾರ್ಮಿಕ ಉತ್ಸವಾಚರಣೆಗಳಿಗಾಗಿ ಅನೇಕ ಸಂದರ್ಭಗಳಲ್ಲಿ ಹಣವನ್ನೂ ನೀಡಿದ್ದನು. ಉದಾಃ ಸಹಸ್ರ ಚಂಡಿ ಜಪದ ಆಚರಣೆಗಾಗಿ ಶೃಂಗೇರಿ ಮಠದ ಸ್ವಾಮಿಗಳಿಗೆ ಅಗತ್ಯವಾದ ಎಲ್ಲಾ ವಸ್ತುಗಳನ್ನೂ ಒದಗಿಸಬೇಕೆಂದು ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಅದೇ ರೀತಿಯಾಗಿ ಅವನು ರಾಯಕೋಟೆಯ ಎರಡು ದೇವಸ್ಥಾನಗಳಿಗೆ ಉಂಬಳಿಯನ್ನು ಬಿಟ್ಟುಕೊಟ್ಟನು. ಅವನಿಂದ ಸನ್ನದುಗಳನ್ನು ಪಡೆದಿದ್ದ ಅರ್ಚಕರು ಅವುಗಳನ್ನು 1793ರಲ್ಲಿ ಮನೋವಿನ ಮುಂದೆ ಇಟ್ಟು, ಉಂಬಳಿಗಳನ್ನು ಮುಂದುವರಿಸಿಕೊಡಬೇಕೆಂದೂ, ಇಲ್ಲವಾದರೆ, ಧರ್ಮಕಾರ್ಯಾಚರಣೆಗೆ ಅಡ್ಡಿಯಾಗುವುದೆಂದೂ ಹೇಳಿದರು. ಒಂದು ಸನ್ನದಿನ ಪ್ರಕಾರವಾಗಿ, ವೆಂಕಟಾಚಲಪತಿ ದೇವಸ್ಥಾನದಲ್ಲಿ ಪೂಜೆಯನ್ನು ಮುಂದುವರಿಸಲು ಮತ್ತು ಆ ಕಡಪ ಜಿಲ್ಲೆಯ ಪುಲ್ಲಿವೆಂಡ್ಲದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿಂತು
ಹೋಗಿದ್ದ ಪೂಜೆಯನ್ನು ಮತ್ತೆ ಎತ್ತಿಕೊಳ್ಳಬೇಕೆಂದೂ ಟಿಪ್ಪು ಆಜ್ಞಾಪಿಸಿದನು. ಒಂದು ಸಂದರ್ಭದಲ್ಲಿ ದೇವಸ್ಥಾನವನ್ನೇ ಕಟ್ಟಲಪ್ಪಣೆಯನ್ನು ಕೂಡ ಕೊಟ್ಟಿದ್ದಾನೆ. ಹೈದರಲಿಯು ಕರ್ನಾಟಕವನ್ನು 1780ರಲ್ಲಿ ಮುತ್ತಿದಾಗ ಕಾಂಚೀಪುರದ ದೇವಸ್ಥಾನವೊಂದರ ಗೋಪುರಕ್ಕೆ ಆಸ್ತಿಭಾರವನ್ನು ಹಾಕಿದ್ದನಾದರೂ, ಅದನ್ನು ಅವನಿಗೆ ಮುಗಿಸಲು ಸಾಧ್ಯವಾಗಿರಲಿಲ್ಲ. ಮೂರನೆಯ ಆಂಗ್ಲ-ಮೈಸೂರು ಕದನದ ಸಂದರ್ಭದಲ್ಲಿ ಟಿಪ್ಪು ಅಲ್ಲಿಗೆ ಹೋಗಿದ್ದಾಗ, ಆ ದೇವಸ್ಥಾನದ ಕಟ್ಟಡಕ್ಕಾಗಿ 10,000 ಹೊನ್ನುಗಳನ್ನು ಕೊಟ್ಟನು. ಅಲ್ಲದೆ, ಅವನು ಅಲ್ಲಿದ್ದ ಸಂದರ್ಭದಲ್ಲಿ ರಥೋತ್ಸವದಲ್ಲಿ ಭಾಗವಹಿಸಿ, ಆ ಸಂದರ್ಭದ ಬಾಣಬಿರುಸುಗಳ ವೆಚ್ಚವನ್ನು ತಾನೇ ವಹಿಸಿಕೊಂಡನು.
ಮೈಸೂರಿನ ಪರಕಾಲ ಮಠದಲ್ಲಿರುವ ಒಂದು ಸನ್ನದಿನ ಪ್ರಕಾರ, ಮೇಲುಕೋಟೆ ದೇವಸ್ಥಾನದಲ್ಲಿ ಪ್ರಾರ್ಥನಾಮಂತ್ರದ ಪಠಣದ ವಿಷಯವಾಗಿ ಎರಡು ಹಿಂದೂ ಪಂಗಡಗಳಲ್ಲಿ ಕಚ್ಚಾಟವಾದಾಗ, ಟಿಪ್ಪು ಮಧ್ಯಸ್ಥಿಕೆಗಾರನಾಗಿದ್ದು ಅವರಲ್ಲಿರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿದ್ದನು.
ಟಿಪ್ಪು ಪ್ರಜ್ಞಾವಂತನೂ ಮತ್ತು ಸಹಿಷ್ಣುವೂ ಆದ ರಾಜನಾಗಿದ್ದಿದ್ದರೆ, ಕೊಡಗು ಮತ್ತು ಮಲಬಾರುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಮ್ ಮತಕ್ಕೆ ಪರಿವರ್ತನೆ ಮಾಡಬೇಕೆಂದೇಕೆ ಅಪ್ಪಣೆಯಿತ್ತನು? ಎಂಬ ಪ್ರಶ್ನೆಯನ್ನು ಆಗಾಗ ಕೇಳಲಾಗುತ್ತಿದೆ. ಇದಕ್ಕೆ ನಿಜವಾದ ವಿವರಣೆಯೆಂದರೆ, ಅದು ಧಾರ್ಮಿಕ ಕಾರಣದಿಂದಾದುದಲ್ಲ. ಅದರ ಉದ್ದೇಶ ರಾಜಕೀಯವಾದುದಾಗಿತ್ತು. ಮುಸ್ಲಿಮೇತರ ಪ್ರಜೆಗಳು ಆಗಾಗ ದಂಗೆಯೆದ್ದು ಸಾಮ್ರಾಜ್ಯದ ಶಾಂತಿಗೆ ಧಕ್ಕೆ ಉಂಟು ಮಾಡುತ್ತಿದ್ದರು. ಮತ್ತು ಅವನ ಪ್ರಭುತ್ವಕ್ಕೆ ಬೆದರಿಕೆ ಉಂಟು ಮಾಡುತ್ತಿದ್ದರು. ಅವರು ತಪ್ಪಿತಸ್ಥರಾಗಿದ್ದುದರಿಂದ, ಈ ಮತಾಂಧತೆಯು ಒಂದು ವಿಧವಾದ ಶಿಕ್ಷೆಯೆಂದವನು ಭಾವಿಸಿದನು. ಅದೇ ರೀತಿ ಕೊಡಗು ಮತ್ತು ಮಲಬಾರಿನ ಜನರು ತಮ್ಮ ದಂಗೆಕೋರ ಪ್ರವೃತ್ತಿಯನ್ನು ಕೈ ಬಿಡದ ಕಾರಣ, ಟಿಪ್ಪು ಅವರನ್ನು ಮತಾಂತರಗೊಳಿಸಬೇಕೆಂದು ಅಪ್ಪಣೆ ಕೊಟ್ಟನು. ಇದಕ್ಕೆ ಸಂಬಂಧಿಸಿ ಖಾಜಿಗೆ ಬರೆದ ಒಂದು ಪತ್ರದಲ್ಲಿ ನಾಯರುಗಳನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲು ಅವನ ವಿರುದ್ಧ ದಂಗೆ ಎದ್ದ ಶಿಕ್ಷೆಯಾಗಿ ಎಂದು ಒಪ್ಪಿಕೊಂಡಿದ್ದಾನೆ. ಈ ವಿಧವಾದ ಭಯದಿಂದ ಮತ್ತು ಉದಾಹರಣೆಗಳಿಂದ, ಟಿಪ್ಪು ಕೊಡವರನ್ನು ಮತ್ತು ನಾಯರುಗಳನ್ನು ವಿಧೇಯರನ್ನಾಗಿ ಮಾಡುವೆನೆಂದು ನಿರೀಕ್ಷಿಸಿದನು.







