ಟಿಎಲ್‌ಬಿಸಿ : ಒಂದೂವರೆ ತಿಂಗಳಾದರೂ ಕೊನೆ ಭಾಗಕ್ಕೆ ತಲುಪದ ನೀರು
ಮೇಲ್ಭಾಗದ ಅಕ್ರಮ ನೀರಾವರಿಯಿಂದ ಕೆಳಭಾಗದ ರೈತರಿಗೆ ಅನ್ಯಾಯ ಆರೋಪ

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ)ಗೆ ನೀರು ಹರಿಸಿ ಒಂದೂವರೆ ತಿಂಗಳು ಕಳೆದರೂ ರಾಯಚೂರು ಜಿಲ್ಲೆಯ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪಿಲ್ಲ . ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿಯಿಂದಾಗಿ ಕೆಳಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಟಿಎಲ್‌ಬಿಸಿ ಕೊನೆ ಭಾಗದ ರೈತರಿಗೆ ನೀರಿನ ಸಮಸ್ಯೆ ಪ್ರತಿವರ್ಷವೂ ಎದುರಾಗುತ್ತಿದೆ. ಈ ಬಾರಿ ಮಳೆಯ ಕೊರತೆ ಹಾಗೂ ನೀರಿನ ಅಭಾವದ ಹಿನ್ನೆಲೆಯಲ್ಲಿ ರೈತರು ಕಾಲುವೆ ನೀರಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಆದರೆ, ಕಾಲುವೆ ನೀರಿನ ನಿರ್ವಹಣೆಯಲ್ಲಿನ ಸಮಸ್ಯೆಯಿಂದಾಗಿ ಕೊನೆ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ.
ನೀರಿನ ಸಮಸ್ಯೆ ಖಂಡಿಸಿ ಟಿಎಲ್‌ಬಿಸಿ ಕೊನೆ ಭಾಗದ ಸಿರವಾರ ಹಾಗೂ ಮಾನ್ವಿ ಪಟ್ಟಣ ಬಂದ್ ಮಾಡಿ ರೈತರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ರೈತ ಮುಖಂಡರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.
ಮುನಿರಾಬಾದ್‌ನಿಂದ ಆರಂಭವಾಗುವ ಟಿಎಲ್‌ಬಿಸಿ ರಾಯಚೂರು ತಾಲೂಕಿನ ಕೊನೆ ಭಾಗದವರೆಗೆ ವ್ಯಾಪಿಸಿದೆ. ನೀರಾವರಿ ಇಲಾಖೆಯ ಪ್ರಕಾರ ಸುಮಾರು 6 ಲಕ್ಷ ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಮೇಲ್ಭಾಗದಲ್ಲಿ 2 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನೀರಾವರಿ ಮಾಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಟಿಎಲ್‌ಬಿಸಿ 42ನೇ ಮೈಲ್‌ನಿಂದ ಆರಂಭವಾಗುತ್ತದೆ. ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಪಡೆಯುತ್ತಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬುದು ರೈತರ ಪ್ರಮುಖ ಆರೋಪವಾಗಿದೆ.
ಈ ಸಮಸ್ಯೆ ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳುತ್ತಿದ್ದು, ರೈತರು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಾರಿ ಜುಲೈ-ಆಗಸ್ಟ್ ನಿಂದಲೇ ನೀರಿನ ಸಮಸ್ಯೆ ಎದುರಾಗಿದೆ. ಆಗಸ್ಟ್ ನಲ್ಲೇ ಟಿಎಲ್‌ಬಿಸಿಗೆ ನೀರು ಹರಿಸಲಾಗಿದ್ದರೂ, ಸಾಮಾನ್ಯವಾಗಿ 15ರಿಂದ 20 ದಿನಗಳೊಳಗೆ ಕೆಳಭಾಗಕ್ಕೆ ನೀರು ತಲುಪಬೇಕಾಗಿದ್ದರೂ ಇನ್ನೂ ಸಮರ್ಪಕವಾಗಿ ನೀರು ಬಂದಿಲ್ಲ ಎಂದು ರೈತರು ದೂರಿದ್ದಾರೆ.
ಆಡಳಿತ-ವಿರೋಧ ಪಕ್ಷದ ನಾಯಕರ ವಿರುದ್ಧ ಆರೋಪ :
ಮೇಲ್ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಅನಧಿಕೃತ ನೀರಾವರಿ ನಡೆಯುತ್ತಿದ್ದರೂ ಅಧಿಕಾರಿಗಳಿಂದ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಮೇಲ್ಭಾಗದ ಪ್ರಭಾವಿ ರೈತರಿಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಲವು ಜನಪ್ರತಿನಿಧಿಗಳ ಬೆಂಬಲವಿದೆ ಎಂಬ ಆರೋಪವೂ ಕೇಳಿಬಂದಿದೆ. ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ಅಕ್ರಮ ನೀರಾವರಿ ತಡೆಯುವಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದಿಂದ ಕೆಳಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಅಕ್ರಮ ನೀರಾವರಿ ತಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಹಲವು ಬಾರಿ ಹೋರಾಟ ನಡೆಸಿದ್ದು, ಮೇಲ್ಭಾಗದಲ್ಲಿನ ಪಂಪ್ಸೆಟ್ ಗಳನ್ನು ತೆರವುಗೊಳಿಸಿದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂದು ಅವರು ಹೇಳಿದ್ದಾರೆ.
ಆಯುಕ್ತರ ಆದೇಶವೂ ಅನುಷ್ಠಾನವಾಗಿಲ್ಲ? :
ಟಿಎಲ್‌ಬಿಸಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಲು ಅಕ್ರಮವಾಗಿ ನೀರು ಪಡೆಯುವುದನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಇತ್ತೀಚೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಅವರು ಆದೇಶ ನೀಡಿದ್ದರು.
ಆದರೆ, ಪ್ರಾದೇಶಿಕ ಆಯುಕ್ತರ ಆದೇಶವನ್ನು ನೀರಾವರಿ, ಕಂದಾಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕೆಳಭಾಗದ ಶಾಸಕರು ತಮ್ಮ ಕ್ಷೇತ್ರಗಳ ರೈತರ ಸಮಸ್ಯೆ ಕುರಿತು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ. ಸರಕಾರಗಳು ಬದಲಾದರೂ ಟಿಎಲ್‌ಬಿಸಿ ಕೊನೆ ಭಾಗದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟಿಎಲ್‌ಬಿಸಿ ವ್ಯಾಪ್ತಿಯಲ್ಲಿನ ಅಕ್ರಮ ನೀರಾವರಿ ತೆರವಿಗೆ ಆದೇಶಿಸಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೀರಾವರಿ ಖಾತೆ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರ ಅವಧಿಯಲ್ಲಿ ಅನಧಿಕೃತ ನೀರಾವರಿ ಮಾಡುವವರ ವಿರುದ್ಧ 2 ಲಕ್ಷ ರೂ. ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸುವ ಕಾನೂನು ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ನಿಯಮಗಳ ಸಮರ್ಪಕ ಅನುಷ್ಠಾನವಾಗಿಲ್ಲ ಎಂಬುದು ರೈತ ಮುಖಂಡರ ಆರೋಪ. ಬಿಜೆಪಿ ಸರಕಾರ ಬಂದರೆ ಧಡೇಸುಗೂರು ಬಸವರಾಜ, ಕಾಂಗ್ರೆಸ್ ಸರಕಾರವಿದ್ದರೆ ಶಿವರಾಜ ತಂಗಡಗಿ, ಬಸನಗೌಡ ತುರ್ವಿಹಾಳ ಪ್ರಭಾವಿಗಳಿಗೆ, ರಕ್ಷಣೆ ಮಾಡುತ್ತಾರೆ. ಆಡಳಿತ,ವಿರೋಧ ಪಕ್ಷದವರ ಹೊಂದಾಣಿಕೆ ರಾಜಕಾರಣದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 95 ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಕೊರತೆ ಇದೆ. ಇದರಿಂದ ನೀರು ನಿರ್ವಹಣೆಗೆ ತೊಂದರೆಯಾಗುತ್ತಿದೆ. ಕೆಳಭಾಗದ ಶಾಸಕರ ನಡುವೆ ಒಗ್ಗಟ್ಟಿನ ಕೊರತೆಯಿದ್ದು, ಮೇಲ್ಭಾಗದ ರೈತರು ಹಾಗೂ ಅನಧಿಕೃತವಾಗಿ ನೀರಾವರಿ ಮಾಡುತ್ತಿರುವವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ನಾವು ಹೋರಾಟ ಮಾಡಿ ಸಾಕಾಗಿದೆ. ಟಿಎಲ್‌ಬಿಸಿ ಕೊನೆ ಭಾಗದ ರೈತರಿಗೆ ನ್ಯಾಯ ಸಿಗುವವರೆಗೆ ಮುಂದೆಯೂ ಹೋರಾಟ ಮಾಡುತ್ತೇವೆ.
-ಚಾಮರಸ ಮಾಲಿಪಾಟೀಲ್, ರಾಜ್ಯ ಗೌರವಾಧ್ಯಕ್ಷ, ಕರ್ನಾಟಕ ರೈತ ಸಂಘ, ರಾಯಚೂರು






