ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಸಮಸ್ಯೆ

ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದ್ದು, ಪರಿಹಾರವನ್ನು ಕಂಡುಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದೆ. ಇದರಿಂದಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಗಂಟೆಗಟ್ಟಲೇ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರು ಸೇರಿ ವಾಹನ ಸವಾರರು ಪ್ರತಿನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ.
ಟಿನ್‌ಫ್ಯಾಕ್ಟರಿ, ಹೆಬ್ಬಾಳ, ಇಬ್ಬಲೂರು, ಗೊರಗುಂಟೆಪಾಳ್ಯ, ಕಾಡುಬೀಸನಹಳ್ಳಿ, ಸಾರಕ್ಕಿ ಸಿಗ್ನಲ್, ಡೈರಿ ಸರ್ಕಲ್ ಜಂಕ್ಷನ್‌ಗಳಲ್ಲಿ ಅತೀಹೆಚ್ಚು ವಾಹನ ದಟ್ಟನೆ ಕಂಡು ಬರುತ್ತಿದೆ. ನಗರದ ವಿವಿಧ ಭಾಗಗಳನ್ನು ಸಂಪರ್ಕಿಸಲು ಈ ಜಂಕ್ಷನ್‌ಗಳು ನಿರ್ಣಾಯಕವಾಗಿದ್ದು, ಪ್ರತಿನಿತ್ಯ ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ವಾಹನ ದಟ್ಟನೆ ಸಮಸ್ಯೆಯನ್ನು ಎದುರಿಸುತ್ತಿವೆ.
ಟಿನ್‌ಫ್ಯಾಕ್ಟರಿಯಿಂದ ಮಾರತಹಳ್ಳಿ ಮತ್ತು ಸಿಲ್ಕ್ ಬೋರ್ಡ್ ಸಿಗ್ನಲ್‌ವರೆಗೂ ಹೆಚ್ಚಿನ ಐಟಿ-ಬಿಟಿ ಕಂಪೆನಿಗಳಿದ್ದು, ಹೆಚ್ಚಿನ ವಾಣಿಜ್ಯ ವಹಿವಾಟುಗಳು ನಡೆಯುತ್ತಿವೆ. ದ್ವಿಚಕ್ರ ವಾಹನಗಳು, ಕ್ಯಾಬ್‌ಗಳು ಸೇರಿ ಖಾಸಗಿ ವಾಹನಗಳೇ ಈ ಮಾರ್ಗದಲ್ಲಿ ಹೆಚ್ಚಾಗಿ ಓಡಾಡುತ್ತವೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಮೆಟ್ರೋ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ. ಸುಮಾರು ಮೂರು ವರ್ಷಗಳಿಂದ ಈ ಮಾರ್ಗದಲ್ಲಿ ಮೆಟ್ರೊ ಕಾಮಾಗಾರಿ ನಡೆಯುತ್ತಿದ್ದು, ಕಾಮಗಾರಿಯಿಂದಲೇ ಹೆಚ್ಚಿನ ವಾಹನ ದಟ್ಟನೆಯಾಗುತ್ತಿದೆ.
ಈ ಮಾರ್ಗದಲ್ಲಿ ಕಚೇರಿಗಳಿಗೆ ತೆರಳುವ ಸಮಯವಾದ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಕಚೇರಿಯಿಂದ ಮನೆಗೆ ತೆರಳುವ ಸಮಯವಾದ ಸಂಜೆ 5 ಗಂಟೆಯಿಂದ ರಾತ್ರಿ 11 ಗಂ-ಟೆಯವರೆಗೆ(ಪೀಕ್ ಅವರ್) ಸಿಗ್ನಲ್‌ಗಳ ಬಳಿ ಎರಡು ಗಂಟೆಗಳವರೆಗೆ ವಾಹನ ದಟ್ಟನೆ ಉಂಟಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ಮಳೆ ಬಿದ್ದಾಗ ಈ ಮಾರ್ಗದಲ್ಲಿರುವ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತು ವಾರಗಟ್ಟಲೇ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.
ಟಿನ್‌ಫ್ಯಾಕ್ಟರಿಯಿಂದ ವೈಟ್‌ಫೀಲ್ಡ್‌ವರೆಗೆ ಈಗಾಗಲೇ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿದ್ದರೂ, ಪೀಕ್ ಅವರ್‌ನಲ್ಲಿ ಹೂಡಿ ಮುಖ್ಯರಸ್ತೆಯಲ್ಲಿ ಹಾಗೂ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಗಂಟೆಗಟ್ಟಲೇ ವಾಹನ ದಟ್ಟನೆಯಾಗುತ್ತಿದೆ. ಹೀಗಾಗಿ ಇವನ್ನು ಟ್ರಾಫಿಕ್ ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
ಬೈಯಪ್ಪನಹಳ್ಳಿ ಮತ್ತು ಹಲಸೂರು ರಸ್ತೆಗಳಲ್ಲಿಯೂ ಪೀಕ್ ಅವರ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ದಟ್ಟನೆ ಉಂಟಾಗುತ್ತಿದೆ. ವಾರಾಂತ್ಯದ ದಿನಗಳ ರಾತ್ರಿಯ ವೇಳೆ ಈ ಮಾರ್ಗಗಳಲ್ಲಿ ಸಂಚರಿಸುವಾಗ ವಾಹನ ಸವಾರರು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.
ಇನ್ನು ರಿಚ್‌ಮಂಡ್ ಸರ್ಕಲ್, ಶಾಂತಿನಗರದ ಬಳಿ ಇರುವ ಡಬಲ್ ರೋಡ್‌ನಲ್ಲಿಯೂ ವಾಹನ ದಟ್ಟನೆ ಸಾಮಾನ್ಯವಾಗಿದೆ. ವಾಹನ ದಟ್ಟನೆ ಸಮಸ್ಯೆಯಿಂದಾಗಿ ಇಲ್ಲಿಂದ ಕೇವಲ ಐದು ಕಿ.ಮೀ. ದೂರ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಬಿಎಂಟಿಸಿ ಬಸ್‌ಗಳಲ್ಲಿ ತಲುಪಲು ಕನಿಷ್ಟ 30 ನಿಮಿಷಗಳು ಬೇಕಾಗುತ್ತದೆ. ಇನ್ನು ಪೀಕ್ ಅವರ್‌ನಲ್ಲಿ 2 ತಾಸು ಬೇಕಾಗುತ್ತಿದೆ.
ಏರಿಕೆಯಾಗುತ್ತಿರುವ ಶಬ್ದ ಮಾಲಿನ್ಯ
ನಗರದಲ್ಲಿ 88 ಲಕ್ಷಕ್ಕೂ ಅಧಿಕ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಶಬ್ಧಮಾಲಿನ್ಯದಲ್ಲಿ ಏರಿಕೆ ಕಂಡಿದೆ. ನಗರದ ಶೇ.40ರಷ್ಟು ವಾಯುಮಾಲಿನ್ಯಕ್ಕೆ ಸಂಚಾರ ದಟ್ಟಣೆಯೇ ಕಾರಣವಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಂದ 100 ಮೀಟರ್ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳನ್ನು ನಿಶ್ಯಬ್ಧ ವಲಯಗಳು ಎಂದು ಕರೆಯಲಾಗಿದ್ದರೂ, ನಿಮ್ಹಾನ್ಸ್ ಸುತ್ತಮುತ್ತಲಿನ ಮೇಲ್ವಿಚಾರಣಾ ಕೇಂದ್ರದಲ್ಲಿ ಸರಾಸರಿ ಶಬ್ದದ ಮಟ್ಟವು 114.3ಡಿಬಿ ಗೆ ಏರಿಕೆಯಾಗಿದೆ. ಇನ್ನು ಟಿನ್‌ಫ್ಯಾಕ್ಟರಿ, ಹೆಬ್ಬಾಳ, ಗೊರಗುಂಟೆಪಾಳ್ಯ ಸೇರಿ ನಗರ ಜಂಕ್ಷನ್‌ಗಳಲ್ಲಿ ವಾಹನ ದಟ್ಟನೆ ಹೆಚ್ಚಾಗಿರುವ ಕಾರಣ, ವಾಹನಗಳ ಹಾರ್ನ್‌ಂದಾಗಿ ಶಬ್ದ ಮಾಲಿನ್ಯವಾಗುತ್ತಿದೆ.
ನಗರದಲ್ಲಿ ವಾಹನ ದಟ್ಟನೆ ಕಡಿಮೆ ಮಾಡಲು ಸುಮಾರು 70 ಕಿ.ಮೀ.ಕ್ಕೂ ಅಧಿಕ ದೂರ ಮೆಟ್ರೊ ರೈಲುಗಳು ಕಾರ್ಯಾಚರಣೆ ಮಾಡುತ್ತಿದೆ. ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ 6,835 ಬಿಎಂಟಿಸ್ ಬಸ್‌ಗಳು ದಿನಕ್ಕೆ 61,435 ಟ್ರಿಪ್‌ಗಳಲ್ಲಿ ಸಂಚರಿಸುತ್ತಿದ್ದರೂ, ವಾಹನ ದಟ್ಟನೆ ಹೆಚ್ಚುತ್ತಿದೆ.







