ಬುಡಕಟ್ಟು ಮಕ್ಕಳ ಶಿಕ್ಷಣ ಮುಂದುವರಿಕೆಗೆ ಪೋಷಕರ ಉದ್ಯೋಗ ಮುಖ್ಯ

ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರಿಗೆ ಉದ್ಯೋಗಾವಕಾಶ ಸೃಷ್ಟಿಯೇ ಕೇಂದ್ರಬಿಂದುವಾಗಬೇಕು. ಶಿಕ್ಷಣ-ಉದ್ಯೋಗ-ಸಾಮಾಜಿಕ ಭದ್ರತೆ ಈ ಮೂರನ್ನು ಒಟ್ಟಾಗಿ ನೋಡಿದಾಗ ಹಾಗೂ ಮಕ್ಕಳ ಶಿಕ್ಷಣವನ್ನು ಕಾಪಾಡುವ ಪ್ರಯತ್ನವನ್ನು ಕುಟುಂಬದ ಆರ್ಥಿಕ ಸಬಲೀಕರಣದೊಂದಿಗೆ ಜೋಡಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ.
ಭಾರತದ ಅಭಿವೃದ್ಧಿ ಚರ್ಚೆಗಳಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆದರೆ ಈ ಶಿಕ್ಷಣದ ಫಲಗಳು ಎಲ್ಲ ಸಮುದಾಯಗಳಿಗೆ ಸಮಾನವಾಗಿ ತಲುಪುತ್ತಿವೆಯೇ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ. ವಿಶೇಷವಾಗಿ ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣ ಆತಂಕಕಾರಿ ಮಟ್ಟದಲ್ಲಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ಈ ಸಮಸ್ಯೆಯನ್ನು ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಾಗಿ ನೋಡಿದರೆ ಪರಿಹಾರ ಅಪೂರ್ಣವಾಗುತ್ತದೆ. ವಾಸ್ತವದಲ್ಲಿ ಇದು ಬಡತನ, ಉದ್ಯೋಗಾಭಾವ, ಸಾಮಾಜಿಕ ಅಸಮಾನತೆ ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ಸಮಗ್ರ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ಈ ಸಂಕೀರ್ಣ ಸಮಸ್ಯೆಯ ಕೇಂದ್ರಬಿಂದುವಿನಲ್ಲಿ ಇರುವುದೇ ಬುಡಕಟ್ಟು ಮಕ್ಕಳ ಪೋಷಕರಿಗೆ ಸ್ಥಿರ ಮತ್ತು ಗೌರವಯುತ ಉದ್ಯೋಗಾವಕಾಶಗಳ ಕೊರತೆ.
ಬುಡಕಟ್ಟು ಪ್ರದೇಶಗಳಲ್ಲಿ ಪೋಷಕರ ಜೀವನೋಪಾಯ ಬಹುತೇಕ ಅರಣ್ಯ ಆಧಾರಿತ, ಋತುಮಾನಾಧಾರಿತ ಅಥವಾ ಅನೌಪಚಾರಿಕ ಕ್ಷೇತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಂತಹ ಅಸ್ಥಿರ ಆದಾಯ ವ್ಯವಸ್ಥೆಗಳು ಕುಟುಂಬಗಳ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಇದರ ಪರಿಣಾಮವಾಗಿ, ಕುಟುಂಬದ ಆರ್ಥಿಕ ಒತ್ತಡವನ್ನು ತಗ್ಗಿಸಲು ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಕೃಷಿ ಕೆಲಸ, ಕಟ್ಟಡ ನಿರ್ಮಾಣ, ಸಣ್ಣ ವ್ಯಾಪಾರ ಹಾಗೂ ಅರಣ್ಯ ಉತ್ಪನ್ನ ಸಂಗ್ರಹಣೆ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಪೋಷಕರ ಉದ್ಯೋಗದ ಅಸ್ಥಿರತೆಯಿಂದ ಉಂಟಾಗುವ ವಲಸೆ ಮತ್ತೊಂದು ಪ್ರಮುಖ ಕಾರಣ. ಪೋಷಕರು ಕೆಲಸಕ್ಕಾಗಿ ಸ್ಥಳಾಂತರವಾದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ವಲಸೆ ಶಾಲೆಗಳ ನಿರಂತರತೆಯನ್ನು ಕಿತ್ತುಹಾಕುತ್ತದೆ; ಹೊಸ ಸ್ಥಳದಲ್ಲಿ ಭಾಷಾ ಅಡೆತಡೆ, ಶಾಲಾ ದಾಖಲಾತಿ ಸಮಸ್ಯೆ, ಸಾಮಾಜಿಕ ಒತ್ತಡಗಳು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತವೆ. ಇದು ಮಕ್ಕಳ ಶಿಕ್ಷಣವನ್ನು ಮಾತ್ರವಲ್ಲ, ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ.
ಬಾಲ ಕಾರ್ಮಿಕ ಪದ್ಧತಿ ಮತ್ತು ಶಾಲೆ ಬಿಡುವಿಕೆ ಪರಸ್ಪರ ಸಂಬಂಧ ಹೊಂದಿವೆ ಎಂಬುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಪೋಷಕರಿಗೆ ಸ್ಥಿರ ಆದಾಯ ಲಭ್ಯವಿದ್ದರೆ, ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ ಕಡಿಮೆಯಾಗುತ್ತದೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ಮನೋಭಾವ ಬಲಗೊಳ್ಳುತ್ತದೆ. ಆದ್ದರಿಂದ, ಬುಡಕಟ್ಟು ಮಕ್ಕಳ ಶಿಕ್ಷಣವನ್ನು ನೀಡುವ ಪ್ರಯತ್ನಗಳು ಕೇವಲ ಶಾಲಾ ಮೂಲಸೌಕರ್ಯ, ಪಠ್ಯಕ್ರಮ ಸುಧಾರಣೆ ಅಥವಾ ವಿದ್ಯಾರ್ಥಿವೇತನಗಳಿಗೆ ಸೀಮಿತವಾಗದೆ, ಪೋಷಕರ ಉದ್ಯೋಗ ಸೃಷ್ಟಿಯನ್ನು ಕೇಂದ್ರಬಿಂದುವಾಗಿಸಿಕೊಂಡಿರಬೇಕು.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯು 9ರಿಂದ 12 ವರ್ಷ ವಯಸ್ಸಿನ ಮಕ್ಕಳ ಪುನರ್ವಸತಿಗೆ ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1988ರಲ್ಲಿ ಪ್ರಾರಂಭಿಸಿತು. ಪ್ರಸ್ತುತ ಈ ಯೋಜನೆಯು ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದಡಿಯಲ್ಲಿ 2021ರಿಂದ ಸಮಗ್ರ ಶಿಕ್ಷಾ ಅಭಿಯಾನ ಎಂಬುದಾಗಿ ಮರುನಾಮಕಾರಣವಾಗಿ ಜಾರಿಯಲ್ಲಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಮುಕ್ತಗೊಳಿಸಿ, ಅವರಿಗೆ ಪುನರ್ವಸತಿ ಮತ್ತು ಶಿಕ್ಷಣ ಒದಗಿಸುವುದಾಗಿದೆ. ಈ ಯೋಜನೆಯಡಿ ವಿಶೇಷ ತರಬೇತಿ ಶಾಲೆಗಳು, ಮಧ್ಯಾಹ್ನದ ಊಟ, ಆರೋಗ್ಯ ಸೇವೆಗಳು ಹಾಗೂ ಮಕ್ಕಳನ್ನು ಶಿಕ್ಷಣಕ್ಕೆ ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪೋಷಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶವೂ ಹೊಂದಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಯೋಜನೆ ಮಕ್ಕಳ ಮೇಲಷ್ಟೇ ಹೆಚ್ಚು ಕೇಂದ್ರೀಕರಿಸಿಕೊಂಡಿದ್ದು, ಪೋಷಕರ ದೀರ್ಘಕಾಲೀನ ಉದ್ಯೋಗ ಭದ್ರತೆಯನ್ನು ಸಮರ್ಪಕವಾಗಿ ಸಾಧಿಸಿಲ್ಲ ಎಂಬುದು ಹಲವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರ ದೀರ್ಘಕಾಲೀನ ಉದ್ಯೋಗ ಭದ್ರತೆಯನ್ನು ಕಾಪಾಡುವ ಯೋಜನೆಗಳ ಅವಶ್ಯಕತೆಯಿದೆ.
ಅಂತರ್‌ರಾಷ್ಟ್ರೀಯ ಅನುಭವಗಳನ್ನು ಪರಿಶೀಲಿಸಿದರೆ, ಇಟಲಿ ದೇಶದ ಮಾದರಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇಟಲಿಯಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸುವುದನ್ನು ಕಠಿಣ ಕಾನೂನುಗಳ ಮೂಲಕ ನಿಷೇಧಿಸಲಾಗಿದೆ. ಆದರೆ ಇಟಲಿ ಕೇವಲ ಕಾನೂನು ನಿಷೇಧಕ್ಕಷ್ಟೇ ಸೀಮಿತವಾಗಿಲ್ಲ. ಅಲ್ಲಿ ಮಕ್ಕಳ ಸಮಸ್ಯೆಯನ್ನು ಕುಟುಂಬದ ಆರ್ಥಿಕ ಸಮಸ್ಯೆಯಾಗಿ ಪರಿಗಣಿಸಿ, ಪೋಷಕರಿಗೆ ಉದ್ಯೋಗಾವಕಾಶ, ಸಾಮಾಜಿಕ ಭದ್ರತೆ ಮತ್ತು ಕುಟುಂಬ ಸಹಾಯ ಒದಗಿಸುವ ಸಮಗ್ರ ನೀತಿಯನ್ನು ಅನುಸರಿಸಲಾಗಿದೆ. ಇಟಲಿಯ ಕಾರ್ಮಿಕ ಸಚಿವಾಲಯ, ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್‌ನ್ಯಾಷನಲ್ (ಡಿಸಿಐ-ಇಟಲಿ), ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತವೆ. Minori.it ಎಂಬ ಡಿಜಿಟಲ್ ವ್ಯವಸ್ಥೆಯ ಮೂಲಕ ಮಕ್ಕಳ ಮತ್ತು ಕುಟುಂಬಗಳ ಸ್ಥಿತಿಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಕುಟುಂಬ ಕೇಂದ್ರಿತ ಮತ್ತು ಸಮಗ್ರ ದೃಷ್ಟಿಕೋನವೇ ಇಟಲಿಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯವಾಗಿದೆ.
ಇಂತಹ ಪ್ರಯತ್ನಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾದರಿಯನ್ನಾಗಿ ಪರಿಗಣಿಸಿ ಬುಡಕಟ್ಟು ಮಕ್ಕಳ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಮುಂದುವರಿಕೆಗೆ ಪೋಷಕರಿಗೆ ಸ್ಥಿರ, ಗೌರವಯುತ ಮತ್ತು ಸ್ಥಳೀಯ ಉದ್ಯೋಗ ಒದಗಿಸುವುದು ಅತ್ಯಗತ್ಯ. ಉದ್ಯೋಗ ಭದ್ರತೆ ಬಂದಾಗ ಕುಟುಂಬದ ಆದಾಯ ಸ್ಥಿರವಾಗುತ್ತದೆ; ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಸಾಧ್ಯವಾಗುತ್ತದೆ. ಪೋಷಕರಲ್ಲಿ ಶಿಕ್ಷಣದ ಮೌಲ್ಯ ಕುರಿತು ವಿಶ್ವಾಸ ಬೆಳೆದು, ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಪ್ರೇರಣೆ ಹೆಚ್ಚುತ್ತದೆ. ವಿಶೇಷವಾಗಿ ಬುಡಕಟ್ಟು ಸಮುದಾಯಗಳಲ್ಲಿ ಪೋಷಕರಿಗೆ ಸ್ಥಳೀಯವಾಗಿ ಲಭ್ಯವಿರುವ, ಸ್ಥಿರ ಮತ್ತು ಗೌರವಯುತ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಮನರೇಗಾದಂತಹ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಬುಡಕಟ್ಟು ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಪೋಷಕರಿಗೆ ಕನಿಷ್ಠ ಆದಾಯ ಭದ್ರತೆ ಸಿಗಬಹುದು. ಅದೇ ರೀತಿ, ಅರಣ್ಯ ಆಧಾರಿತ ಜೀವನೋಪಾಯಗಳಾದ ಜೇನು ಸಂಗ್ರಹ, ಲಘು ಅರಣ್ಯ ಉತ್ಪನ್ನಗಳ ಸಂಸ್ಕರಣೆ ಮತ್ತು ಔಷಧೀಯ ಸಸ್ಯಗಳ ಬೆಳವಣಿಗೆಯನ್ನು ಮೌಲ್ಯಸಂಯೋಜನೆಯೊಂದಿಗೆ ಅಭಿವೃದ್ಧಿಪಡಿಸಿದರೆ ಆದಾಯವನ್ನು ಹೆಚ್ಚಿಸಬಹುದು.
ಇದಲ್ಲದೆ, ಸ್ವಸಹಾಯ ಗುಂಪುಗಳು, ಸಣ್ಣ ಉದ್ಯಮಗಳು ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಬುಡಕಟ್ಟು ಪೋಷಕರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೊಲಿಗೆ ತರಬೇತಿ, ಕೈತೋಟ, ಆಹಾರ ಸಂಸ್ಕರಣೆ ಹಾಗೂ ಅರಣ್ಯ ಉತ್ಪನ್ನ ಆಧಾರಿತ ಉದ್ಯಮಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಬಹುದು. ಪೋಷಕರು ಆರ್ಥಿಕವಾಗಿ ಬಲಿಷ್ಠರಾಗುವಂತೆ ಮಾಡಿದಾಗ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅವರಿಗೆ ಹೊರೆಯಾಗುವುದಿಲ್ಲ; ಬದಲಾಗಿ ಅದು ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿ ಕಾಣಿಸುತ್ತದೆ.
ಮಕ್ಕಳ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲ ಮತ್ತು ಪೋಷಕರ ಉದ್ಯೋಗ ಸೃಷ್ಟಿ-ಈ ಮೂರು ಅಂಶಗಳನ್ನು ಪ್ರತ್ಯೇಕ ಯೋಜನೆಗಳಾಗಿ ನೋಡದೆ, ಸಂಯೋಜಿತ ನೀತಿಯಾಗಿ ಜಾರಿಗೆ ತರಬೇಕಾಗಿದೆ. ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯಂತಹ ಯೋಜನೆಗಳನ್ನು ಕೇವಲ ಪುನರ್ವಸತಿ ಕಾರ್ಯಕ್ರಮಗಳಾಗಿ ಅಲ್ಲ, ಕುಟುಂಬ ಆಧಾರಿತ ಅಭಿವೃದ್ಧಿ ಯೋಜನೆಗಳಾಗಿ ಪರಿವರ್ತಿಸುವ ಅಗತ್ಯವಿದೆ. ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಮಾತ್ರ ದೀರ್ಘಕಾಲೀನ ಮತ್ತು ಶಾಶ್ವತ ಫಲಿತಾಂಶ ಸಾಧ್ಯವಾಗಬಹುದು.
ಬಡತನದ ಕಾರಣದಿಂದ ಶಾಲೆ ಬಿಟ್ಟು ಕೆಲಸಕ್ಕೆ ಹೋಗಿದ್ದ ಮಗು, ಪೋಷಕರಿಗೆ ಉದ್ಯೋಗ ಸಿಕ್ಕ ನಂತರ ಮತ್ತೆ ಶಾಲೆಗೆ ಮರಳಿದರೆ, ಅದು ಕೇವಲ ಒಂದು ಕುಟುಂಬದ ಯಶಸ್ಸಲ್ಲ; ಅದು ಸಮಾಜದ ಪ್ರಗತಿಯ ಸಂಕೇತವಾಗಿದ್ದು ಸಾಮಾಜಿಕ ಚಲನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಪ್ರಮುಖ ಆಯಾಮವಾಗಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ಪರಿಣಾಮಕಾರಿ ಮಾರ್ಗವಾಗಿದೆ.
ಪ್ರಸ್ತುತ, ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರಿಗೆ ಉದ್ಯೋಗಾವಕಾಶ ಸೃಷ್ಟಿಯೇ ಕೇಂದ್ರಬಿಂದುವಾಗಬೇಕು. ಶಿಕ್ಷಣ-ಉದ್ಯೋಗ-ಸಾಮಾಜಿಕ ಭದ್ರತೆ ಈ ಮೂರನ್ನು ಒಟ್ಟಾಗಿ ನೋಡಿದಾಗ ಹಾಗೂ ಮಕ್ಕಳ ಶಿಕ್ಷಣವನ್ನು ಕಾಪಾಡುವ ಪ್ರಯತ್ನವನ್ನು ಕುಟುಂಬದ ಆರ್ಥಿಕ ಸಬಲೀಕರಣದೊಂದಿಗೆ ಜೋಡಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ. ಭಾರತದಲ್ಲಿ ಸಮಗ್ರ ಶಿಕ್ಷಾ ಅಭಿಯಾನದಂತಹ ಯೋಜನೆಗಳನ್ನು ಬಲಪಡಿಸುವುದರ ಜೊತೆಗೆ, ಇಟಲಿಯಂತಹ ದೇಶಗಳ ಕುಟುಂಬ ಕೇಂದ್ರಿತ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಾನದಂಡಗಳಿಗೆ ಹೊಂದಿಕೆಯಾಗಿರುವ ಅನುಭವಗಳಿಂದ ಪಾಠ ಕಲಿಯಬೇಕಾಗಿದೆ. ಆಗ ಮಾತ್ರ ಬುಡಕಟ್ಟು ಮಕ್ಕಳಿಗೆ ಶಿಕ್ಷಣದ ಹಕ್ಕು ನಿಜಾರ್ಥದಲ್ಲಿ ಸಾಕಾರಗೊಳ್ಳುತ್ತದೆ ಮತ್ತು ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಕನಸು ವಾಸ್ತವವಾಗುತ್ತದೆ.







