ಟ್ರಿಲಿಯನ್ ಕನಸುಗಳೂ; ತ್ಯಾಜ್ಯ ತುಂಬಿದ ಬಾಹ್ಯಾಕಾಶವೂ

ಬಾಹ್ಯಾಕಾಶವನ್ನು ಸ್ವಚ್ಛವಾಗಿಡುವುದು ಕೇವಲ ಒಂದು ತಾಂತ್ರಿಕ ಕಾರ್ಯ ಮಾತ್ರವಲ್ಲ. ಇದು ಎಲ್ಲ ತಲೆಮಾರುಗಳೂ ನಡೆಸಬೇಕಾದ ಕರ್ತವ್ಯ. ಬಾಹ್ಯಾಕಾಶ ಸ್ಪರ್ಧೆ ಈಗ ಹೆಚ್ಚು ವೇಗ ಪಡೆದುಕೊಳ್ಳುತ್ತಿದ್ದು, ಇದರೊಡನೆ ಬಾಹ್ಯಾಕಾಶ ತ್ಯಾಜ್ಯದ ಅಪಾಯವೂ ಹೆಚ್ಚುತ್ತಿದೆ. ಮುಂದಿನ ಹಾದಿ ಸ್ಪಷ್ಟವಾಗಿದೆ. ಎಲ್ಲ ದೇಶಗಳೂ ಜೊತೆಯಾಗಿ, ವೇಗವಾಗಿ ಕಾರ್ಯಾಚರಿಸಿ, ನಕ್ಷತ್ರಗಳತ್ತ ಸಾಗುವ ಮಾರ್ಗ ಎಲ್ಲರಿಗೂ ಮುಕ್ತ ಮತ್ತು ಸುರಕ್ಷಿತವಾಗಿರುವಂತೆ ಖಾತರಿಪಡಿಸಬೇಕು.
ಉದ್ಯಮ ಮತ್ತು ಬಾಹ್ಯಾಕಾಶಗಳು ಸೇರುವಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಎಲಾನ್ ಮಸ್ಕ್ ಅವರ ಕಂಪೆನಿಯಾದ ಸ್ಪೇಸ್ ಎಕ್ಸ್ ಇತಿಹಾಸದಲ್ಲೇ ಅತಿದೊಡ್ಡ ಷೇರು ಮಾರಾಟ ಅಥವಾ ಐಪಿಒ ಅನ್ನು ಪೂರ್ಣಗೊಳಿಸಿದೆ. ಕೇವಲ ಶೇ. 5 ಮಾರಾಟ ಮಾಡುವ ಮೂಲಕ ಕಂಪೆನಿ ಬಹುತೇಕ 75 ಬಿಲಿಯನ್ ಡಾಲರ್ ಸಂಪಾದಿಸಿದೆ. ಇದರಿಂದ ಸ್ಪೇಸ್ ಎಕ್ಸ್ ಸಂಸ್ಥೆಯ ಮೌಲ್ಯ ಬಹುತೇಕ 1.8 ಟ್ರಿಲಿಯನ್ ಡಾಲರ್ ತಲುಪಿದ್ದು, ಇದು ಜಗತ್ತಿನ 13ನೇ ಅತಿದೊಡ್ಡ ಆರ್ಥಿಕತೆಯಾದ ದಕ್ಷಿಣ ಕೊರಿಯಾದ ಸಂಪೂರ್ಣ ಆರ್ಥಿಕತೆಗೆ ಸಮನಾಗಿದೆ. ಸರಳವಾಗಿ ಹೇಳುವುದಾದರೆ, ಮಸ್ಕ್ ಜಗತ್ತಿನ ಮೊದಲ ಟ್ರಿಲಿಯನೇರ್ ಆಗಿದ್ದಾರೆ.
ಹಾಗೆಂದು ಇದು ಕೇವಲ ಓರ್ವ ವ್ಯಕ್ತಿಯ ಕಥೆಯಲ್ಲ. ಸ್ಪೇಸ್‌ಎಕ್ಸ್, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್, ಬ್ರಾನ್ಸನ್ ಅವರ ವರ್ಜಿನ್ ಗ್ಯಾಲಾಕ್ಟಿಕ್, ಬೆರೆಝ್ ಅವರ ಬ್ಲೂ ಒರಿಜಿನ್, ಅಮೆರಿಕದ ನಾಸಾ, ರಶ್ಯದ ರಾಸ್‌ಕಾಸ್ಮೋಸ್, ಚೀನಾದ ಬಾಹ್ಯಾಕಾಶ ಸಂಸ್ಥೆ, ಭಾರತದ ಇಸ್ರೋ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಎಲ್ಲವೂ ಈಗ ಮುಂದಕ್ಕೆ ಚಲಿಸುತ್ತಿವೆ. ಬಿಲಿಯನ್‌ಗಟ್ಟಲೆ ಡಾಲರ್ ಹರಿದುಬರುತ್ತಿದ್ದು, ಸದ್ಯದಲ್ಲೇ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್‌ಗಳು, ಉಪಗ್ರಹಗಳು ಮತ್ತು ಬಾಹ್ಯಾಕಾಶ ನಿಲ್ದಾಣಗಳನ್ನು ನಾವು ಕಾಣಲಿದ್ದೇವೆ. ಇದರೊಡನೆ, ಒಂದು ಹೊಸ ಬಾಹ್ಯಾಕಾಶ ಯುಗ ಆರಂಭಗೊಂಡಿದೆ.
ಇವೆಲ್ಲ ರೋಚಕತೆಯ ಹಿಂದೆ ಒಂದು ಮೌನವಾದ ಅಪಾಯವೂ ನಮ್ಮ ತಲೆಗಳ ಮೇಲೆ ನಿರ್ಮಾಣವಾಗುತ್ತಿದೆ. ಅದುವೇ ಬಾಹ್ಯಾಕಾಶ ತ್ಯಾಜ್ಯ. ಬಾಹ್ಯಾಕಾಶದಲ್ಲಿ ತೇಲುತ್ತಿರುವ ತ್ಯಾಜ್ಯಗಳಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಉಪಗ್ರಹಗಳು ತಮ್ಮ ಪಥ ಬದಲಾವಣೆ ಮಾಡಬೇಕಿದೆ. ನಾವು ಸಂಭ್ರಮಿಸುತ್ತಿರುವ ಪ್ರಗತಿ ಕಕ್ಷೆಯಲ್ಲಿ ಹೆಚ್ಚುತ್ತಿರುವ ಸಮಸ್ಯೆಯನ್ನೂ ಸೃಷ್ಟಿಸುತ್ತಿದೆ.
ಹಾಗೆಂದು ಇದೇನು ಹೊಸದಾದ ಸಮಸ್ಯೆಯಲ್ಲ. ಇದು ಅಕ್ಟೋಬರ್ 4, 1957ರಂದು ಜಗತ್ತಿನ ಮೊದಲ ಮಾನವ ನಿರ್ಮಿತ ಉಪಗ್ರಹವಾದ ಸ್ಪುಟ್ನಿಕ್-1 ಉಡಾವಣೆಗೊಂಡಾಗ ಆರಂಭಗೊಂಡಿತು. ಈ ಉಪಗ್ರಹ ವೇಗವಾಗಿ ಭೂಮಿಗೆ ಪ್ರದಕ್ಷಿಣೆ ನಡೆಸಿತಾದರೂ, ಅದರ ಬ್ಯಾಟರಿಗಳು ಕೇವಲ 22 ದಿನಗಳಲ್ಲಿ ಖಾಲಿಯಾದವು. ಬಳಿಕ ಅದು ನಿರ್ಜೀವವಾಗಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸಿ, 1958ರ ಜನವರಿ ತಿಂಗಳಲ್ಲಿ ಉರಿದುಹೋಯಿತು. ಲೈಕಾ ಹೆಸರಿನ ನಾಯಿಯನ್ನು ಬಾಹ್ಯಾಕಾಶಕ್ಕೆ ಒಯ್ದ ಸ್ಪುಟ್ನಿಕ್ 2 ಸಹ ಇದೇ ರೀತಿಯಾಗಿ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತು.
ಹಾಗಾದರೆ, ಬಾಹ್ಯಾಕಾಶ ಎನ್ನುವುದು ವಾಸ್ತವವಾಗಿ ಎಲ್ಲಿ ಆರಂಭವಾಗುತ್ತದೆ? 1967ರ ಔಟರ್ ಸ್ಪೇಸ್ ಟ್ರೀಟಿಯ ಪ್ರಕಾರ, ಬಾಹ್ಯಾಕಾಶ ಎಲ್ಲ ದೇಶಗಳ ಅನ್ವೇಷಣೆಗೆ ಮುಕ್ತವಾಗಿದೆ. ಇದಕ್ಕಾಗಿ ಕಾರ್ಮಾನ್ ಲೈನ್ ಎನ್ನುವ, ಸಮುದ್ರ ಮಟ್ಟದಿಂದ 100 ಕಿಲೋಮೀಟರ್ ಎತ್ತರದಲ್ಲಿರುವ ಕಲ್ಪನಾ ರೇಖೆಯನ್ನು ಬಾಹ್ಯಾಕಾಶದ ಗಡಿ ಎಂದು ಒಪ್ಪಿಕೊಳ್ಳಲಾಯಿತು. ಇದರಿಂದ ಮೇಲಿರುವ ಎಲ್ಲವನ್ನೂ ಬಾಹ್ಯಾಕಾಶ ಎಂದು ಪರಿಗಣಿಸಲಾಯಿತು.
ಬಾಹ್ಯಾಕಾಶ ತ್ಯಾಜ್ಯ ಎಂದರೇನು?
ಬಾಹ್ಯಾಕಾಶದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಯಾವುದೇ ವಸ್ತು ಬಾಹ್ಯಾಕಾಶ ತ್ಯಾಜ್ಯ ಎನಿಸಿಕೊಳ್ಳುತ್ತದೆ. ಕಳೆದ 68 ವರ್ಷಗಳಲ್ಲಿ, ಮಾನವರು ಬಹುತೇಕ 14,900 ಉಪಗ್ರಹಗಳನ್ನು ಉಡಾವಣೆಗೊಳಿಸಿದ್ದು, ಅವುಗಳ ಪೈಕಿ ಕೇವಲ 8,000 ಉಪಗ್ರಹಗಳು ಇಂದಿಗೂ ಕಾರ್ಯಾಚರಿಸುತ್ತಿವೆ. ಉಳಿದವು, ಅಂದರೆ ಮೃತ ಉಪಗ್ರಹಗಳು, ಹಾಳಾದ ಥ್ರಸ್ಟರ್‌ಗಳು, ಸೌರ ಫಲಕಗಳು ಮತ್ತು ತ್ಯಜಿಸಲ್ಪಟ್ಟ ರಾಕೆಟ್ ಬಿಡಿಭಾಗಗಳು ಇಂದಿಗೂ ಬಾಹ್ಯಾಕಾಶದಲ್ಲೇ ಚಲಿಸುತ್ತಿವೆ. ಅತ್ಯಂತ ಕೆಟ್ಟ ಪರಿಣಾಮ ಎಂದರೆ, ಅವುಗಳು ಅಸಂಖ್ಯಾತ ಸಣ್ಣ, ಇನ್ನಷ್ಟು ವಿಭಜನೆಗೊಳ್ಳದಂತಹ ಸಣ್ಣ ತುಣುಕುಗಳಾಗುತ್ತವೆ.
ಅಂಕಿಸಂಖ್ಯೆಗಳಂತೂ ನಿಜಕ್ಕೂ ಆತಂಕಕಾರಿಯಾಗಿವೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರಕಾರ, 10 ಸೆಂಟಿಮೀಟರ್‌ಗಿಂತ ದೊಡ್ಡದಾದ ಅಂದಾಜು 34,000 ತುಣುಕುಗಳು ಭೂಮಿಯ ಪರಿಭ್ರಮಣೆ ನಡೆಸುತ್ತವೆ. ಇನ್ನು 1ರಿಂದ 10 ಸೆಂಟಿಮೀಟರ್ ನಡುವಿನ 9,00,000 ತುಣುಕುಗಳಿವೆ. 1 ಮಿಲಿಮೀಟರ್‌ನಿಂದ 1 ಸೆಂಟಿಮೀಟರ್ ನಡುವಿನ 128 ಮಿಲಿಯನ್ ತುಣುಕುಗಳು ಬಾಹ್ಯಾಕಾಶದಲ್ಲಿವೆ! ಒಟ್ಟಾರೆಯಾಗಿ, ಅಂದಾಜು 4,300 ಟನ್‌ಗಳಷ್ಟು ಮಾನವ ನಿರ್ಮಿತ ತ್ಯಾಜ್ಯಗಳು ಭೂಮಿಯ ಸುತ್ತಲೂ ಅನಿಯಂತ್ರಿತವಾಗಿ ಪರಿಭ್ರಮಣೆ ನಡೆಸುತ್ತಿದ್ದು, ಪ್ರತೀ ಗಂಟೆಗೆ ಅಂದಾಜು 28,000 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿವೆ. ಈ ವೇಗದಲ್ಲಿ ಒಂದು ಸಣ್ಣ ಪೈಂಟಿನ ತುಣುಕೂ ಸಹ ಗುಂಡಿನಂತೆ ಗಂಭೀರ ಘಾಸಿಗೊಳಿಸಬಲ್ಲದು.
ಈ ಬಾಹ್ಯಾಕಾಶ ತ್ಯಾಜ್ಯ ಎಷ್ಟು ಕಾಲ ಉಳಿಯಬಲ್ಲದು ಎನ್ನುವುದನ್ನು ಒಂದು ವಿಚಿತ್ರವಾದ ಕಥೆ ವಿವರಿಸುತ್ತದೆ. ಹಿಂದೆ, 1966ರಲ್ಲಿ, ಸರ್ವೇಯರ್ 2 ಎನ್ನುವ ಒಂದು ಬಾಹ್ಯಾಕಾಶ ನೌಕೆಯನ್ನು ಅಟ್ಲಾಸ್ ಸೆಂಟಾರ್ ರಾಕೆಟ್ ಮೂಲಕ ಚಂದ್ರನತ್ತ ಕಳುಹಿಸಲಾಯಿತು. ಆದರೆ, ಅದು ವೈಫಲ್ಯ ಕಂಡು, ಚಂದ್ರನ ಮೇಲಕ್ಕೆ ಅಪ್ಪಳಿಸಿತು. ಆದರೆ, ರಾಕೆಟ್‌ನ ಮೇಲಿನ ಹಂತ ಮಾತ್ರ ಸೂರ್ಯನ ಸುತ್ತಲಿನ ಒಂದು ಕಕ್ಷೆಗೆ ಹೊರಳಿ, ದಶಕಗಳ ಕಾಲ ಪತ್ತೆಯಿಲ್ಲದಂತಾಯಿತು. ಆದರೆ, 2020ರಲ್ಲಿ, ನಾಸಾ ಭೂಮಿಗೆ ಸನಿಹದಲ್ಲಿ ಒಂದು ಪ್ರಕಾಶಮಾನವಾದ ವಸ್ತುವನ್ನು ಗುರುತಿಸಿತು. ಇದನ್ನು ಮೊದಲಿಗೆ ಒಂದು ಕ್ಷುದ್ರಗ್ರಹ ಎಂದು ಭಾವಿಸಲಾಗಿತ್ತು. ಆದರೆ, ಸೂಕ್ಷ್ಮವಾಗಿ ಅಧ್ಯಯನ ನಡೆಸಿದಾಗ, ಅದು ಉತ್ತಮ ಗುಣಮಟ್ಟದ ಉಕ್ಕಾಗಿದ್ದು, ಮಾನವ ನಿರ್ಮಿತ ವಸ್ತು ಎಂದು ಸ್ಪಷ್ಟವಾಯಿತು. ಇದು 54 ವರ್ಷಗಳ ಹಿಂದೆ ಕಳೆದುಹೋಗಿದ್ದ ಸೆಂಟಾರ್ ರಾಕೆಟ್‌ನ ಭಾಗ ಮರಳಿದ್ದಾಗಿತ್ತು.
ಚಂದ್ರನ ಅನ್ವೇಷಣೆ ಎಂದರೆ ಅದು ಕೇವಲ ಚಂದ್ರನ ಮೇಲಿಳಿಯುವ ಅಥವಾ ಚಂದ್ರನ ಅಧ್ಯಯನ ನಡೆಸುವ ಯೋಜನೆಗಳು ಮಾತ್ರ ಎಂದರ್ಥವಲ್ಲ. ಇದು ಭೂಮಿ ಮತ್ತು ಚಂದ್ರನ ನಡುವಿನ ವಿಶಾಲ ಪ್ರದೇಶವನ್ನು ತಲುಪುವ ಸಲುವಾಗಿ ನಿರ್ಮಿಸಿರುವ ತಂತ್ರಜ್ಞಾನಗಳನ್ನೂ ಒಳಗೊಂಡಿದೆ. ಇದಕ್ಕೆ ಸೆಂಟಾರ್ ರಾಕೆಟ್ ಒಂದು ಉದಾಹರಣೆಯಾಗಿದ್ದು, ಇದು ಚಂದ್ರಾನ್ವೇಷಣೆಯ ಭಾಗವಾಗಿದ್ದರೂ, ಇದು ಸೂರ್ಯನ ಸುತ್ತ ಪರಿಭ್ರಮಣೆ ನಡೆಸಿತ್ತು!
ಈ ತ್ಯಾಜ್ಯದ ಬಹುತೇಕ ಭಾಗ ನಮ್ಮಿಂದ ಮೇಲೆ 300ರಿಂದ 2,000 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಯಲ್ಲಿ ಸಂಗ್ರಹಿತವಾಗಿರುತ್ತದೆ. ಅಮೆರಿಕದ ಅಧ್ಯಯನದ ಪ್ರಕಾರ, ಶೇ. 59 ಎಲ್ಲ ಬಾಹ್ಯಾಕಾಶ ತ್ಯಾಜ್ಯಗಳು ಹಿಂದಿನ ಢಿಕ್ಕಿ ಮತ್ತು ಸ್ಫೋಟಗಳ ಉಳಿಕೆಗಳಾಗಿದ್ದವು. ಇನ್ನೂ ಶೇ. 16 ತ್ಯಾಜ್ಯಗಳು ಉಳಿದ ರಾಕೆಟ್ ಭಾಗಗಳಾಗಿವೆ. ಅಚ್ಚರಿಯ ಸಂಗತಿಯೆಂದರೆ, ಬಾಹ್ಯಾಕಾಶದಲ್ಲಿರುವ ವಸ್ತುಗಳ ಪೈಕಿ ಕೇವಲ ಶೇ. 6 ಮಾತ್ರ ಕಾರ್ಯಾಚರಿಸುತ್ತಿರುವ ಉಪಗ್ರಹಗಳಾಗಿವೆ. ಇನ್ನುಳಿದ ಶೇ. 94 ಸಂಪೂರ್ಣ ಅನವಶ್ಯಕ, ಅಪಾಯಕಾರಿ ತ್ಯಾಜ್ಯಗಳ ಸಂಗ್ರಹವೇ ಆಗಿದೆ.
ಇಲ್ಲೊಂದು ಭೀತಿದಾಯಕ ಅಂಶವಿದೆ. 1978ರಲ್ಲಿ, ನಾಸಾ ವಿಜ್ಞಾನಿ ಡೊನಾಲ್ಡ್ ಕೆಸ್ಲರ್ ಅವರು ಒಂದು ಸರಣಿ ಪ್ರತಿಕ್ರಿಯೆಯ ಕುರಿತು ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಬಾಹ್ಯಾಕಾಶದ ಕಕ್ಷೆಯಲ್ಲಿ ತುಂಬಾ ತ್ಯಾಜ್ಯಗಳು ಸಂಗ್ರಹಗೊಂಡರೆ, ಕೇವಲ ಒಂದು ಅಪಘಾತದಿಂದಲೂ ಹೆಚ್ಚಿನ ತ್ಯಾಜ್ಯ ಸೃಷ್ಟಿಯಾಗಿ, ತಡೆಯಲು ಸಾಧ್ಯವಿಲ್ಲದ ಅಪಘಾತಗಳಾಗಬಹುದು ಎಂದು ಎಚ್ಚರಿಸಿದ್ದರು. ಇದರ ಪರಿಣಾಮವಾಗಿ, ಕೆಲವು ಕಕ್ಷೆಗಳು ಸಂಪೂರ್ಣವಾಗಿ ಸ್ಥಗಿತಗೊಂಡು, ವರ್ಷಗಳ ಕಾಲ ಬಾಹ್ಯಾಕಾಶ ಯಾತ್ರೆಯ ಬಾಗಿಲು ಮುಚ್ಚಬಹುದು.
ಈ ಅಪಾಯಗಳು ಅತ್ಯಂತ ನೈಜವೇ ಆಗಿವೆ. ಬಾಹ್ಯಾಕಾಶ ತ್ಯಾಜ್ಯಗಳು ಕಾರ್ಯಾಚರಿಸುತ್ತಿರುವ ಉಪಗ್ರಹಗಳಿಗೆ ಢಿಕ್ಕಿಯಾಗಿ, ಸಂವಹನಕ್ಕೆ ತೊಂದರೆ ಉಂಟುಮಾಡಿ, ಬಾಹ್ಯಾಕಾಶದ ಅಧ್ಯಯನವನ್ನು ಇನ್ನಷ್ಟು ಕಷ್ಟಕರವಾಗಿಸಬಹುದು. ಇದೇ ಸಮಯದಲ್ಲಿ, ಕೆಲವೊಂದು ತುಣುಕುಗಳು ಸಂಪೂರ್ಣವಾಗಿ ಉರಿಯದೆ, ಭೂಮಿಯತ್ತ ಬಿದ್ದು, ಕೆಲವೊಂದು ಭಾಗಗಳಂತೂ ಜನರು ವಾಸಿಸುವ ಪ್ರದೇಶಗಳ ಮೇಲೂ ಪತನಗೊಳ್ಳಬಹುದು.
ಇಲ್ಲೊಂದು ಧನಾತ್ಮಕ ಸುದ್ದಿಯೂ ಇದೆ. ಬಾಹ್ಯಾಕಾಶವನ್ನು ಸ್ವಚ್ಛವಾಗಿಡುವಲ್ಲಿ ಭಾರತ ನಾಯಕತ್ವ ವಹಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2030ರ ವೇಳೆಗೆ ಭಾರತದ ಎಲ್ಲ ಬಾಹ್ಯಾಕಾಶ ಚಟುವಟಿಕೆಗಳು ಬಾಹ್ಯಾಕಾಶ ತ್ಯಾಜ್ಯ ಮುಕ್ತವಾಗಲಿವೆ ಎಂದು ಭರವಸೆ ನೀಡಿದ್ದಾರೆ. ಇಸ್ರೋ ಈಗಾಗಲೇ ಈ ಹಾದಿಯಲ್ಲಿ ನಡೆಯುತ್ತಿದೆ. ಡಿಸೆಂಬರ್ 2024ರಲ್ಲಿ, ಪಿಒಇಎಂ-4 ಕಾರ್ಯಕ್ರಮದಡಿ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನ ಮೇಲಿನ ಹಂತವನ್ನು ಬಳಸಿದ ಬಳಿಕ, ಅದನ್ನು ಕೆಳಗಿನ ಕಕ್ಷೆಗೆ ಇಳಿಸಲಾಯಿತು. ಅಲ್ಲಿಂದ ಅದು ಸುರಕ್ಷಿತವಾಗಿ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸಿ, ಹಿಂದೂ ಮಹಾಸಾಗರದಲ್ಲಿ ಪತನಗೊಂಡಿತು.
ಬಾಹ್ಯಾಕಾಶವನ್ನು ಸ್ವಚ್ಛವಾಗಿಡುವುದು ಕೇವಲ ಒಂದು ತಾಂತ್ರಿಕ ಕಾರ್ಯ ಮಾತ್ರವಲ್ಲ. ಇದು ಎಲ್ಲ ತಲೆಮಾರುಗಳೂ ನಡೆಸಬೇಕಾದ ಕರ್ತವ್ಯ. ಬಾಹ್ಯಾಕಾಶ ಸ್ಪರ್ಧೆ ಈಗ ಹೆಚ್ಚು ವೇಗ ಪಡೆದುಕೊಳ್ಳುತ್ತಿದ್ದು, ಇದರೊಡನೆ ಬಾಹ್ಯಾಕಾಶ ತ್ಯಾಜ್ಯದ ಅಪಾಯವೂ ಹೆಚ್ಚುತ್ತಿದೆ. ಮುಂದಿನ ಹಾದಿ ಸ್ಪಷ್ಟವಾಗಿದೆ. ಎಲ್ಲ ದೇಶಗಳೂ ಜೊತೆಯಾಗಿ, ವೇಗವಾಗಿ ಕಾರ್ಯಾಚರಿಸಿ, ನಕ್ಷತ್ರಗಳತ್ತ ಸಾಗುವ ಮಾರ್ಗ ಎಲ್ಲರಿಗೂ ಮುಕ್ತ ಮತ್ತು ಸುರಕ್ಷಿತವಾಗಿರುವಂತೆ ಖಾತ್ರಿಪಡಿಸಬೇಕು.






