ಯುಎಪಿಎ ಮತ್ತು ಜಾಮೀನು ಎನ್ನುವ ಮರೀಚಿಕೆ

ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಕಾಯ್ದೆಯ ಸೆಕ್ಷನ್‌ಗಳು ಮಾತ್ರ ಮುಖ್ಯವಾಗಿ ಪರಿಗಣಿಸಲ್ಪಡುವಾಗ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಇದರ ಬಗ್ಗೆ ನಾವು ಎತ್ತುವ ನ್ಯಾಯಪರ ಪ್ರಶ್ನೆಗಳು ವಾದ ಪ್ರತಿವಾದಕ್ಕೆ ಸೀಮಿತವಾಗಿ ಉಳಿದುಬಿಡುತ್ತವೆ. ಈ ಬಗೆಯ ವಾದವನ್ನು ನ್ಯಾಯಾಂಗದ ಮುಂದೆ ಒಪ್ಪಿಸುವುದು ಕಷ್ಟ, ಕಾನೂನಿನ ಪರಿಧಿಯಡಿ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಖ್ಯವಾಗಿ ನ್ಯಾಯಾಲಯಗಳಲ್ಲಿ ಯುಎಪಿಎ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಕರಣಗಳಿಗೆ ಹಿನ್ನಡೆಯಾಗಿರುವ ಉದಾಹರಣೆಗಳೇ ಹೆಚ್ಚಾಗಿವೆ. ‘ಪ್ರಜಾಸತ್ತಾತ್ಮಕ ಆಶಯಗಳು ಹಾಗೂ ಜನಜೀವನಕ್ಕೆ ಭಂಗ ತರುವ ಚಟುವಟಿಕೆಗಳು’ ನಡುವಿನ ಆಳವಾದ ಗೆರೆ ಅಳಿಸಿಹೋದರೆ ಆಗುವ ಅನಾಹುತಕ್ಕೆ ಉಮರ್ ಖಾಲಿದ್ ಮತ್ತು ಇತರರು ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳೇ ಸಾಕ್ಷಿ.
"this is political trail, that already decided on us' & ‘ದ ಟ್ರಯಲ್ ಆಫ್ ಚಿಕಾಗೊ 7’ ಸಿನೆಮಾದಲ್ಲಿ ಆ್ಯಕ್ಟಿವಿಸ್ಟ್ ಹಾಫ್‌ಮನ್ ಮಾತು.
5 ಜನವರಿ 2026ರಂದು ಸುಪ್ರೀಂಕೋರ್ಟ್ ಪೀಠವು 2020ರ ದಿಲ್ಲಿ ಗಲಭೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾಗಿದ್ದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರಿಗೆ ಮತ್ತೊಮ್ಮೆ ಜಾಮೀನು ನಿರಾಕರಿಸಿದೆ. ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರಹಮಾನ್, ಮುಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಶರತ್ತುಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಪೀಠವು ವಿಚಾರಣೆ ನಡೆಸುವಾಗ ಸಿಎಎ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿನ ದಿಲ್ಲಿ ಗಲಭೆಗಳಲ್ಲಿ ಬಂಧಿತರನ್ನು ‘ಮುಖ್ಯ ಪಿತೂರಿಗಾರರು’ ಮತ್ತು ‘ಸಹಕರಿಸಿದವರು’ ಎಂದು ಕೆಟಗರಿ ಮಾಡಿದ್ದಾರೆ. ಮೊದಲಿನವರು ಸೈದ್ಧಾಂತಿಕ ಮಾರ್ಗದರ್ಶಿಗಳಾಗಿ ಪಾತ್ರವಹಿಸಿದ್ದಾರೆ ಅದಕ್ಕೆ ಜಾಮೀನು ಸಿಕ್ಕಿಲ್ಲ, ಎರಡನೆಯವರು ಅಂಚಿನಲ್ಲಿದ್ದು ಕೆಲಸ ಮಾಡಿದ್ದಾರೆ ಅದಕ್ಕೆ ಸಿಕ್ಕಿದೆ. ಇಡೀ ತೀರ್ಪು ಆರೋಪಿಗಳ ಪಾತ್ರಗಳು ಮತ್ತು ಅದರ ವ್ಯಾಪ್ತಿಯನ್ನು ಆಧರಿಸಿದೆ.
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂಗೆ ಜಾಮೀನು ಸಿಗದೆ ಇರುವುದು, ವಿಚಾರಣಾ ಪೂರ್ವದಲ್ಲಿಯೇ ಐದು ವರ್ಷಗಳ ಸುದೀರ್ಘ ಅವಧಿಗೆ ಬಂಧನದಲ್ಲಿರಿಸಿರುವುದು ಕಳವಳವನ್ನುಂಟು ಮಾಡುವ ವಿಚಾರ. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರ ಮೇಲಿನ ಯುಎಪಿಎ ಪ್ರಕರಣದಲ್ಲಿ ಇರುವ ಮುಖ್ಯ ಪ್ರಶ್ನೆಗಳು: ಭಯೋತ್ಪಾದಕ ಕೃತ್ಯ ಎಂದು ನಿರ್ಧರಿಸಲು ಇರುವ ಮಾನದಂಡಗಳೇನು? ಯಾರು ನಿರ್ಧರಿಸುತ್ತಾರೆ? ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಯಾಕೆ ಆರಂಭವಾಗಿಲ್ಲ? ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ? ಇದನ್ನು ನ್ಯಾಯಾಂಗ ಹೇಗೆ ಪರಿಗಣಿಸುತ್ತದೆ?
ಉಮರ್ ಖಾಲಿದ್ ಮತ್ತು ಇತರ ಆರೋಪಿಗಳ ಪ್ರಕರಣದ ವಿಚಾರಣೆ ಮತ್ತು ನ್ಯಾಯ ಪ್ರಕ್ರಿಯೆಯಲ್ಲಿನ ವಿಳಂಬವು ಶಾಸಕಾಂಗ ಮತ್ತು ನ್ಯಾಯಾಂಗ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆಯಾಗಿದೆ. ಇಲ್ಲಿ ಯುಎಪಿಎ ಸೆಕ್ಷನ್‌ಗಳು ಸಹ ತೀರಾ ಜಟಿಲವಾಗಿದೆ. ಇದೂ ಸಹ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ.
ಯುಎಪಿಎ ಸೆಕ್ಷನ್ 15ರಲ್ಲಿ ಭಯೋತ್ಪಾದಕ ಕೃತ್ಯವನ್ನು ‘ಭಾರತದ ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಸಾರ್ವಭೌಮತ್ವವನ್ನು ಬೆದರಿಕೆಗೊಳಿಸುವ ಅಥವಾ ಬೆದರಿಕೆಗೊಳಿಸುವ ಸಾಧ್ಯತೆಯಿರುವ ಉದ್ದೇಶದಿಂದ ಅಥವಾ ಭಾರತದ ಜನರಲ್ಲಿ ಅಥವಾ ಯಾವುದೇ ವಲಯದ ಜನರಲ್ಲಿ ಭಯ ಹುಟ್ಟಿಸುವ ಅಥವಾ ಭಯ ಹುಟ್ಟಿಸುವ ಸಾಧ್ಯತೆಯಿರುವ ಉದ್ದೇಶದಿಂದ ಮಾಡಿದ ಯಾವುದೇ ಕೃತ್ಯ’ ಎಂದು ವಿವರಿಸುತ್ತದೆ. ಜೊತೆಗೆ ಭಯ ಹುಟ್ಟಿಸುವುದನ್ನು ‘ಬಾಂಬ್‌ಗಳು, ಡೈನಮೈಟ್ ಅಥವಾ ಇತರ ಸ್ಫೋಟಕ ವಸ್ತುಗಳು ಅಥವಾ ಉರಿಯುವ ವಸ್ತುಗಳು ಅಥವಾ ಇತರ ಮಾರಕ ಶಸ್ತ್ರಾಸ್ತ್ರಗಳು... ಅಥವಾ ಯಾವುದೇ ಇತರ ವಿಧಾನಗಳ ಮೂಲಕ’ ಎಂದು ವ್ಯಾಖ್ಯಾನ ಮಾಡಲಾಗಿದೆ. ಇದನ್ನೇ ಉಲ್ಲೇಖಿಸಿ ನ್ಯಾಯಾಲಯವು ‘ಭಯೋತ್ಪಾದಕ ಕೃತ್ಯ’ವು ಕೇವಲ ಸಾಂಪ್ರದಾಯಿಕ ಹಿಂಸೆ ಅಥವಾ ನಿರ್ದಿಷ್ಟ ಶಸ್ತ್ರಾಸ್ತ್ರಗಳಿಗೆ ಮಾತ್ರ ಸೀಮಿತವಲ್ಲದೆ, ಉದ್ದೇಶ, ಯೋಜನೆ ಮತ್ತು ಪರಿಣಾಮಗಳನ್ನು ಆಧರಿಸಿ ‘ಯಾವುದೇ ಇತರ ವಿಧಾನಗಳ ಮೂಲಕ’ ಎಂಬ ಭಾಗವನ್ನು ಉಲ್ಲೇಖಿಸಿ ಉಮರ್ ಮತ್ತು ಶರ್ಜೀಲ್ ಅವರಿಗೆ ಜಾಮೀನು ನಿರಾಕರಿಸುತ್ತಿದೆ.
ಯಾವುದೇ ಇತರ ವಿಧಾನಗಳು(ಚಿಟಿಥಿ oಣheಡಿ meಚಿಟಿs) ಎನ್ನುವ ಅಮೂರ್ತವಾದ, ಮುಖ್ಯವಲ್ಲದ ತೀರಾ ಸಾಧಾರಣ(ಣಡಿiviಚಿಟ) ವಿಚಾರವೇ ಉಮರ್ ಮತ್ತು ಶರ್ಜೀಲ್ ಅವರ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ ಎನ್ನುವುದಾದರೆ ಇಲ್ಲಿ ಜನಸಾಮಾನ್ಯರ ಪಾಲಿಗೆ ನ್ಯಾಯದ ಬಾಗಿಲು ಮುಚ್ಚಿದಂತೆಯೇ? ಯಾಕೆಂದರೆ ಪ್ರಭುತ್ವ ದ್ವೇಷ ಸಾಧಿಸಲು ಇಂತಹ ಆರೋಪಗಳನ್ನು ದಾಖಲಿಸುತ್ತದೆ, ನ್ಯಾಯಾಂಗ ಪುರಸ್ಕರಿಸುತ್ತದೆ ಅಂದರೆ ನ್ಯಾಯಪ್ರಜ್ಞೆಯ ವ್ಯಾಖ್ಯಾನವೇನು ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ.
ಪ್ರಾಸಿಕ್ಯೂಷನ್ ಖಾಲಿದ್ ಮತ್ತು ಇತರ ಆರೋಪಿಗಳು ಆಯೋಜಿಸಿದ್ದ ‘ಚಕ್ಕಾ ಜಾಮ್’ (ರಸ್ತೆ ತಡೆಗಟ್ಟುವಿಕೆ ಅಥವಾ ಟ್ರಾಫಿಕ್ ಜಾಮ್ ಮಾಡುವ ಪ್ರತಿಭಟನೆ) ಸಹ ಯುಎಪಿಎ ಸೆಕ್ಷನ್ 15ರಲ್ಲಿ ಹೇಳಿರುವ ‘ಯಾವುದೇ ಇತರ ವಿಧಾನಗಳ, ದಾರಿಗಳ ಮೂಲಕ’ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ವಾದಿಸಿದ್ದಾರೆ. ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ‘‘ಪ್ರಜಾಪ್ರಭುತ್ವದಲ್ಲಿ ಚಕ್ಕಾ ಜಾಮ್ ಅಥವಾ ರಸ್ತೆ ತಡೆಗಟ್ಟುವಿಕೆಗಳಂತ ಮಾರ್ಗಗಳನ್ನು ಪ್ರತಿಭಟನೆಯ ಕಾನೂನುಬದ್ಧ ರೂಪವೆಂದು ಪರಿಗಣಿಸಬೇಕು. ಇದು ಭಾರತದಲ್ಲಿ ರೈತ ಪ್ರತಿಭಟನೆಗಳು, ಇತರ ಸಾಮಾಜಿಕ ಚಳವಳಿಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಅಹಿಂಸಾತ್ಮಕ ವಿಧಾನವಾಗಿದೆ’’ ಎಂದು ಹೇಳಿದರು.
ಇದನ್ನು ಪೀಠ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ರಸ್ತೆ ತಡೆ ಎನ್ನುವ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪ್ರಜಾತಾಂತ್ರಿಕ ಹೋರಾಟ ಭಯೋತ್ಪಾದನೆಗೆ ಸಮ ಎಂದು ಉಮರ್ ಮತ್ತು ಇತರರ ಪ್ರಕರಣದಲ್ಲಿ ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಪ್ರಾಸಿಕ್ಯೂಷನ್‌ನ ಈ ದುರ್ಬಲ ವ್ಯಾಖ್ಯಾನವನ್ನು ಒಪ್ಪಿಕೊಂಡು ‘ಅಂತಹ ಕೃತ್ಯಗಳನ್ನು ಎಸಗುವ ಸಾಧನಗಳು ಬಾಂಬ್‌ಗಳು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಅಥವಾ ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಎಂದು ಹೇಳಬೇಕಿಲ್ಲ. ದೋಷಾರೋಪಣೆಯಲ್ಲಿ ಉದ್ದೇಶಪೂರ್ವಕವಾಗಿ ‘ಯಾವುದೇ ಇತರ ಸಾಧನಗಳ ಮೂಲಕ, ಯಾವುದೇ ಸ್ವರೂಪದಲ್ಲಿ’ ಎಂಬ ಪದಪ್ರಯೋಗವನ್ನು ಬಳಸಿದೆ. ಇದನ್ನು ನಿರ್ಲಕ್ಷಿಸಲಾಗದು. ಆದ್ದರಿಂದ ಕಾನೂನಿನ ಅಡಿಯಲ್ಲಿ ಕೇವಲ ಬಳಸಿದ ಸಾಧನ ಅಥವಾ ಉಪಕರಣದ ಮೇಲೆ ಮಾತ್ರವಲ್ಲದೆ, ಕೃತ್ಯದ ‘ಉದ್ದೇಶ (ಜesigಟಿ/iಟಿಣeಟಿಣ), ಯೋಜನೆ ಮತ್ತು ಪರಿಣಾಮದ (eಜಿಜಿeಛಿಣ)’ ಮೇಲಿನ ವ್ಯಾಖ್ಯಾನವನ್ನು ಪರಿಗಣಿಸಲಾಗುತ್ತದೆ ’ ಎಂದು ತೀರ್ಪಿನಲ್ಲಿ ಹೇಳಿದೆ. ಕಡೆಗೂ ಪ್ರಭುತ್ವ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡುವುದು ಸರಕಾರವನ್ನು ಬುಡಮೇಲುಗೊಳಿಸುವ ಕೃತ್ಯ, ಇದು ಭಯೋತ್ಪಾದನೆಗೆ ಸಮ ಎಂದು ವಾದಿಸುವ ಮೋದಿ ನೇತೃತ್ವದ ಸರಕಾರವನ್ನು ನ್ಯಾಯಾಂಗವು ಬೆಂಬಲಿಸುತ್ತದೆ...
‘ಬಾರ್ ಆಂಡ್ ಬೆಂಚ್’ನ ಲೇಖನದಲ್ಲಿ ಈ ವಿಚಾರದ ಕುರಿತು ಇನ್ನೊಂದು ಆಯಾಮದಲ್ಲಿ ವಿಶ್ಲೇಷಿಸಲಾಗಿದೆ. ಈ ವರದಿಯ ಪ್ರಕಾರ ಕಾಯ್ದೆಯ ಪ್ರಸಕ್ತ ಸ್ವರೂಪದಡಿ ಜನಜೀವನಕ್ಕೆ ಭಂಗ ತರುವಂತಹ ಯಾವುದೇ ಬಗೆಯ ಕಾನೂನುಭಂಗ ಚಳವಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು, ವಿಸ್ತರಿಸುವುದು, ಅವುಗಳ ಸ್ವರೂಪವನ್ನು ಯೋಜಿಸುವುದು, ಯೋಜಿತವಾಗಿ ಅದನ್ನು ಕಾರ್ಯಗತಗೊಳಿಸುವುದು ಇದೆಲ್ಲವೂ ಸುಲಭವಾಗಿ ಸಾರ್ವಜನಿಕ ಜನಜೀವನಕ್ಕೆ ಭಂಗ ತರುವಂತಹ ಬುಡಮೇಲು ಕೃತ್ಯಗಳು ಎಂದು ತೀರ್ಮಾನಿಸಲ್ಪಡುತ್ತವೆ. ಹಾಗಾಗಿ ಅದು ಶರ್ಜೀಲ್, ಉಮರ್ ಮಾತ್ರವೇ ಅಲ್ಲ ಪ್ರಭುತ್ವದ ನೀತಿಗಳ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಮುಂದಾಗುವಂತಹ ಯಾವುದೇ ಬಗೆಯ ಪ್ರಜಾತಾಂತ್ರಿಕ ಹೋರಾಟಗಳನ್ನೂ ಯುಎಪಿಎ ಅಡಿ ಬುಡಮೇಲು ಕೃತ್ಯದ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಕೆಲವು ಕಾನೂನು ತಜ್ಞರು ‘ಭೀಮಾ ಕೋರೆಗಾಂವ್ ಸೇರಿದಂತೆ ವಿವಿಧ ಹೋರಾಟಗಳಲ್ಲಿನ ಮುಂಚೂಣಿ ಹೋರಾಟಗಾರರು, ಚಿಂತಕರು, ನ್ಯಾಯವಾದಿಗಳು ಬಂಧನಕ್ಕೆ ಒಳಗಾಗಿರುವುದು ಇದೇ ಕಾರಣಕ್ಕೆ. ಇಲ್ಲಿ ನ್ಯಾಯಾಂಗದ ಕೈ ಕಟ್ಟಿ ಹಾಕಲಾಗಿದೆ’ ಎಂದು ಹೇಳುತ್ತಾರೆ.
ಸುಪ್ರೀಂಕೋರ್ಟ್ ಪೀಠದ ಮುಂದೆ ಉಮರ್ ಖಾಲಿದ್ ಮತ್ತು ಇತರರು ಪರ ವಾದ ಮಂಡಿಸಿದ ವಕೀಲರು ‘ವಿಚಾರಣೆಯ ಶೀಘ್ರ ಮುಕ್ತಾಯವಿಲ್ಲದೆ ದೀರ್ಘಕಾಲದವರೆಗೆ ಅವರನ್ನು ವಶದಲ್ಲಿಟ್ಟಿರುವುದು ಸಂವಿಧಾನದ ವಿಧಿ 21ರ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಪಾದಿಸಿ ‘ನ್ಯಾಯಾಲಯದಿಂದ ಆರೋಪಪತ್ರದ ಪ್ರಕರಣದ ಯೋಗ್ಯತೆಯನ್ನು (meಡಿiಣ) ಪರಿಶೀಲಿಸಲು ಕೇಳುತ್ತಿಲ್ಲ, ಆದರೆ ವಿಚಾರಣೆಯಲ್ಲಿ ಏಕೆ ತಡವಾಗುತ್ತಿದೆ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಹೇಳಿದರು.
ಆದರೆ ಸುಪ್ರೀಂ ಕೋರ್ಟ್ ‘ವಿಚಾರಣೆಯಲ್ಲಿ ತಡವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗದು ಮತ್ತು ಅದು ಮಾತ್ರ ಸ್ವಯಂಚಾಲಿತವಾಗಿ ಜಾಮೀನು ನೀಡಲು ಸಾಕಾಗದು’ ಎಂದು ಹೇಳಿದೆ. ಮುಂದುವರಿದು ‘ಶೀಘ್ರ ವಿಚಾರಣೆಯ ಹಕ್ಕು ವಿಧಿ 21ರ ಮುಖ್ಯ ಭಾಗವಾಗಿದ್ದರೂ, ಈ ಹಕ್ಕನ್ನು ರಾಷ್ಟ್ರೀಯ ಭದ್ರತೆಯೊಂದಿಗೆ ಸಮತೋಲನಗೊಳಿಸಬೇಕು. ಯುಎಪಿಎ ಅಡಿಯಲ್ಲಿ ಜಾಮೀನಿನ ಹಕ್ಕನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ. ನ್ಯಾಯಾಲಯಗಳು ಮೊದಲು ಆರೋಪಿಗಳ ವಿರುದ್ಧ ಆಕ್ಟ್ ನ ಸೆಕ್ಷನ್ 43ಡಿ(5) ಅಡಿಯಲ್ಲಿ ‘ಪ್ರಾಥಮಿಕವಾಗಿ ಪ್ರಕರಣ ವಿದೆಯೇ’ (ಠಿಡಿimಚಿ ಜಿಚಿಛಿie ಛಿಚಿse) ಎಂದು ನೋಡಬೇಕು ಎಂದು ಅಭಿಪ್ರಾಯಪಟ್ಟಿತು. ಈ ಸೆಕ್ಷನ್ ಪ್ರಕಾರ ಗಂಭೀರ ಅಪರಾಧಗಳಿಗೆ ಆರೋಪಿತ ವ್ಯಕ್ತಿಯನ್ನು ಸಾಮಾನ್ಯ ಸಂದರ್ಭಗಳ ರೀತಿ ಜಾಮೀನು ನೀಡಲಾಗುವುದಿಲ್ಲ. ಯಾವುದೇ ಜಾಮೀನು ಅರ್ಜಿಯನ್ನು ಪರಿಗಣಿಸುವ ಮೊದಲು ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಕೇಳಬೇಕು. ಅಲ್ಲದೆ ನ್ಯಾಯಾಲಯವು ಪ್ರಾಥಮಿಕವಾಗಿ ಕೇಸ್ ಡೈರಿ ಅಥವಾ ಚಾರ್ಜ್‌ಶೀಟ್ ನೋಡಿದ ನಂತರ, ಆರೋಪಗಳು ನಿಜವೆಂದು ತೋರಿದರೆ ವಿಚಾರಣೆಯಲ್ಲಿ ಪರೀಕ್ಷಿಸಲ್ಪಡುವ ಕೇಸ್‌ನ ಮೆರಿಟ್‌ನ್ನು ಲೆಕ್ಕಿಸದೆ ಕಾನೂನುಬದ್ಧವಾಗಿ ಜಾಮೀನು ನೀಡಲು ನಿಷೇಧಿಸಲಾಗಿದೆ.
ಸುಪ್ರೀಂಕೋರ್ಟ್‌ನ ಹಿಂದಿನ ‘ಯೂನಿಯನ್ ಆಫ್ ಇಂಡಿಯಾ ವಿರುದ್ಧ ಕೆ.ಎ. ನಜೀಬ್ (2021)’ ತೀರ್ಪುನ್ನು ಉಲ್ಲೇಖಿಸಿದ ಪೀಠವು ‘‘ಅಸಾಧಾರಣ ಸಂದರ್ಭಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಬಹುದು, ಇಲ್ಲಿ ದೀರ್ಘಕಾಲದ ವಿಚಾರಣೆ ಅನ್ಯಾಯವಾಗುತ್ತದೆ. ಆದರೆ ಆರೋಪಿಯು ದೀರ್ಘಕಾಲ ಜೈಲಿನಲ್ಲಿದ್ದರೆ ಮಾತ್ರ ಜಾಮೀನು ನೀಡಬೇಕು ಎಂಬ ನಜೀಬ್ ತೀರ್ಪಿನ ಸ್ವಯಂಚಾಲಿತ ನಿಯಮವನ್ನು ಇತರ ಪ್ರಕರಣಗಳಿಗೆ ಅನ್ವಯಿಸಲು ಬರುವುದಿಲ್ಲ’’ ಎಂದೂ ಹೇಳಿದೆ. ಮುಂದುವರಿದು ‘‘ಉಮರ್ ಖಾಲಿದ್ ಮತ್ತು ಇತರರು ಪ್ರಕರಣದಲ್ಲಿನ ದೀರ್ಘಕಾಲದ ವಿಳಂಬಕ್ಕೆ ಪ್ರಾಸಿಕ್ಯೂಶನ್ ಅಥವಾ ನ್ಯಾಯಾಲಯಗಳನ್ನು ದೂಷಿಸುವುದು ಸರಿಯಲ್ಲ’’ ಎಂದು ಹೇಳುತ್ತಾ ‘ದೀರ್ಘಕಾಲದವರೆಗೆ ಬಂಧನದಲ್ಲಿಡುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.. ಆದರೆ ಈ ಬಂಧನವು ಅಸಾಂವಿಧಾನಿಕ ಎನ್ನುವ ಹಂತಕ್ಕೆ ತಲುಪಿಲ್ಲ.. ಜಾಮೀನು ಕೊಡುವುದರ ಬದಲು ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು’ ಎಂದೂ ಅಭಿಪ್ರಾಯಪಟ್ಟಿದೆ. ಹೀಗೆ ಹೇಳಿದ ನ್ಯಾಯಾಂಗವು ತನ್ನ ತೀರ್ಪಿನಲ್ಲಿ ‘ಒಂದು ವರ್ಷದ ನಂತರ ಅಥವಾ ಸಂರಕ್ಷಿತ ಸಾಕ್ಷಿಗಳ ಮರು ವಿಚಾರಣೆ ಆಧರಿಸಿ ಜಾಮೀನು ಸಲ್ಲಿಸಬಹುದು’ ಎಂದೂ ಹೇಳಿದೆ. ಇಂತಹ ವೈರುಧ್ಯಗಳು ಈ ತೀರ್ಪಿನಲ್ಲಿ ಹೇರಳವಾಗಿದೆ.
ಮುಗಿಯದ ಟಿಪ್ಪಣಿಗಳು
‘ಬೇಲ್ ನಿಯಮವಾಗಿದೆ, ಜೈಲು ಅಪವಾದವಾಗಿದೆ’ (bಚಿiಟ is ಣhe ಡಿuಟe, ಎಚಿiಟ is ಣhe exಛಿeಠಿಣioಟಿ) ಎಂಬ ನೀತಿಯು ಭಾರತೀಯ ದಂಡ ಶಾಸನಗಳನ್ನು ಅನ್ವಯಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಮೂಲಭೂತ ತತ್ವವಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯ (ಸಂವಿಧಾನದ ವಿಧಿ 21ರ ಅಡಿಯಲ್ಲಿ ರಕ್ಷಿತವಾದದ್ದು) ಸಾಮಾನ್ಯವಾಗಿ ಮೇಲುಗೈ ಸಾಧಿಸಬೇಕು ಎಂದು ಒತ್ತಿ ಹೇಳುತ್ತದೆ ಮತ್ತು ವಿಚಾರಣೆಗೆ ಮುಂಚಿನ ಬಂಧನವನ್ನು ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅನುಸರಿಸಬೇಕು. ಉದಾಹರಣೆಗೆ ಆರೋಪಿಯು ತಪ್ಪಿಸಿಕೊಳ್ಳುವ ನಿಜವಾದ ಅಪಾಯವಿದ್ದಾಗ, ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಅಥವಾ ಮುಂದಿನ ಅಪರಾಧಗಳನ್ನು ಮಾಡುವ ಸಾಧ್ಯತೆ ಇದ್ದಾಗ. ಈ ತತ್ವವನ್ನು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ರಾಜಸ್ಥಾನ್ ರಾಜ್ಯ ವರ್ಸಸ್ ಬಲಚಂದ್ ಅಲಿಯಾಸ್ ಬಲಿಯಾ (1977) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳುತ್ತಾರೆ. ಅದರ ನಂತರ ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ಅವರು ನಿರಪರಾಧಿ ಎನ್ನುವ ಈ ನೀತಿಯನ್ನು ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ಪುನಃ ದೃಢೀಕರಿಸಿದೆ. ಈ ಮೂಲಕ ಅನಗತ್ಯವಾಗಿ ಸ್ವಾತಂತ್ರ್ಯದಿಂದ ವಂಚಿಸುವುದನ್ನು ತಪ್ಪಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆದರೆ ಉಮರ್ ಖಾಲಿದ್ ಮತ್ತು ಇತರರು ಪ್ರಕರಣದಲ್ಲಿ ಈ ನ್ಯಾಯವನ್ನು ನಿರಾಕರಿಸಲಾಗಿದೆ. ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿಯಂತಹ ನ್ಯಾಯವಾದಿಗಳು ವಾದ ಮಂಡಿಸಿದರೂ ಜಾಮೀನು ದೊರಕಲಿಲ್ಲ ಎಂದರೆ ಜನಸಾಮಾನ್ಯರ ಪಾಡೇನು? ಯುಎಪಿಎ ಕಾಯ್ದೆಯೊಳಗಿನ ಕರಾಳ ಸೆಕ್ಷನ್‌ಗಳು ಇದಕ್ಕೆ ಮುಖ್ಯ ಕಾರಣಗಳಲ್ಲೊಂದು.
ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಕಾಯ್ದೆಯ ಸೆಕ್ಷನ್‌ಗಳು ಮಾತ್ರ ಮುಖ್ಯವಾಗಿ ಪರಿಗಣಿಸಲ್ಪಡುವಾಗ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಇದರ ಬಗ್ಗೆ ನಾವು ಎತ್ತುವ ನ್ಯಾಯಪರ ಪ್ರಶ್ನೆಗಳು ವಾದ ಪ್ರತಿವಾದಕ್ಕೆ ಸೀಮಿತವಾಗಿ ಉಳಿದುಬಿಡುತ್ತವೆ. ಈ ಬಗೆಯ ವಾದವನ್ನು ನ್ಯಾಯಾಂಗದ ಮುಂದೆ ಒಪ್ಪಿಸುವುದು ಕಷ್ಟ, ಕಾನೂನಿನ ಪರಿಧಿಯಡಿ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಖ್ಯವಾಗಿ ನ್ಯಾಯಾಲಯಗಳಲ್ಲಿ ಯುಎಪಿಎ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಕರಣಗಳಿಗೆ ಹಿನ್ನಡೆಯಾಗಿರುವ ಉದಾಹರಣೆಗಳೇ ಹೆಚ್ಚಾಗಿವೆ. ‘ಪ್ರಜಾಸತ್ತಾತ್ಮಕ ಆಶಯಗಳು ಹಾಗೂ ಜನಜೀವನಕ್ಕೆ ಭಂಗ ತರುವ ಚಟುವಟಿಕೆಗಳು’ ನಡುವಿನ ಆಳವಾದ ಗೆರೆ ಅಳಿಸಿಹೋದರೆ ಆಗುವ ಅನಾಹುತಕ್ಕೆ ಉಮರ್ ಖಾಲಿದ್ ಮತ್ತು ಇತರರು ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳೇ ಸಾಕ್ಷಿ.
ಮುಂದೇನು?
ಈ ಹೋರಾಟಗಳ ಮುಂಚೂಣಿಯಲ್ಲಿದ್ದವರಿಗೆ ಕಾನೂನಾತ್ಮಕವಾಗಿ ಯಾವ ಅಂಶಗಳಲ್ಲಿ ಹಿನ್ನಡೆ ಉಂಟಾಗುತ್ತಿದೆ, ನ್ಯಾಯಾಲಯದಲ್ಲಿ ಇವುಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ಕಾನೂನು ತಜ್ಞರ ಜೊತೆಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಬೇಕಿದೆ. ಎಲ್ಲದಕ್ಕೂ ಒಂದು ಪರಿಹಾರ ಕಂಡುಕೊಳ್ಳಲೇಬೇಕಿದೆ. ಯುಎಪಿಎಯ ದುರ್ಬಳಕೆಯ ಬಗ್ಗೆ, ಸಾಂವಿಧಾನಿಕ, ಜನಪರ ಆಶಯಗಳನ್ನು ರಕ್ಷಿಸಬೇಕಾದ ಸರಕಾರಗಳು ಹೇಗೆ ಇದನ್ನು ಉಲ್ಲಂಘಿಸುತ್ತದೆ, ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯ ಹಕ್ಕನ್ನು ಹೇಗೆ ಹತ್ತಿಕ್ಕುತ್ತದೆ ಎನ್ನುವುದರ ಕುರಿತು ವ್ಯಾಪಕವಾಗಿ ಸಾರ್ವಜನಿಕ ಚರ್ಚೆ, ಸಂವಾದ, ಅಭಿಯಾನ ನಡೆಸಬೇಕಿದೆ. ಸಾಮಾಜಿಕ ಸಂಘಟನೆಗಳು ಪರಸ್ಪರ ಚರ್ಚಿಸಬೇಕಿದೆ. ಸಾಮಾಜಿಕ ಜನಾಂದೋಲನ ಮತ್ತು ರಾಜಕೀಯ ಹೋರಾಟ ರೂಪಿಸಬೇಕಾಗಿದೆ. ಇದು ನಮ್ಮ ಮುಂದಿರುವ ಆಯ್ಕೆ. ಇದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕಿದೆ. ಇದಕ್ಕೆ ಪೂರಕವಾಗಿ ಕಾನೂನಿನಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಯುಎಪಿಎ ಕಾಯ್ದೆಯ ಸಿಂಧುತ್ವದ ಬಗ್ಗೆ, ಅದರಲ್ಲಿರುವ ಪ್ರಜಾಪ್ರಭುತ್ವ ವಿರೋಧಿ ವ್ಯಾಖ್ಯಾನಗಳ ಬಗ್ಗೆ ಕಾನೂನಾತ್ಮಕ ಹೋರಾಟವನ್ನು ರೂಪಿಸಬೇಕು. ಇಲ್ಲಿ ಸಕಾರಾತ್ಮಕ ಫಲಿತಾಂಶ ದೊರಕುವ ಸಾಧ್ಯತೆ ಇದೆ. ಉದಾಹರಣೆಗೆ ಐಪಿಸಿಯ ದೇಶದ್ರೋಹದ ಸೆಕ್ಷನ್ / ಸೆಡಿಷನ್ ಲಾವನ್ನು (ಸೆಕ್ಷನ್ 124ಎ) ಪ್ರಭುತ್ವವು ದುರ್ಬಳಕೆ ಮಾಡತೊಡಗಿದ ನಂತರ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿದ್ದು ನಮ್ಮ ಮುಂದಿದೆ. (ಆದರೆ ಮೋದಿ ನೇತೃತ್ವದ ಸರಕಾರ ಹೊಸ ಕಾಯ್ದೆ (ಬಿಎನ್‌ಎಸ್ ಸೆಕ್ಷನ್ 150) ತಂದಿದೆ. ಇದು ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವ ಕೃತ್ಯಗಳನ್ನು ಅಪರಾಧವೆಂದು ಪರಿಗಣಿಸುತ್ತದೆ, ಹೊಸ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೀಗೆ ಒಂದಾದ ನಂತರ ಮತ್ತೊಂದು)







